ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋಮೆಟ್ರಿಕ್ಸ್

ಕವಿರಾಜಮಾರ್ಗ
ಅಕ್ಷರ ಗಾತ್ರ

ಕಚೇರಿಯ ಅಧೀರ ಅಧೀಕ್ಷಕ ನೀರಲಗಿ ತನ್ನ ಕಚೇರಿಯ ಮುಂಭಾಗದಲ್ಲಿ ಇತ್ತೀಚೆಗಷ್ಟೇ ನೌಕರರ ಅನಿಯಂತ್ರಿತ ಚಲನವಲನಗಳನ್ನು ನಿಗ್ರಹಿಸಲೆಂದೇ ಪ್ರತಿಷ್ಠಾಪಿಸಿರುವ ಬಯೋಮೆಟ್ರಿಕ್ಸ್ ಯಂತ್ರದ ಮೇಲೆ ಮುಂಜಾನೆ ಮುಂಜಾನೆ ತನ್ನ ತೋರುಬೆರಳನ್ನು ಒತ್ತುತ್ತಿದ್ದಂತೆ...
ಅದು `ಟ್ರೈ ಒನ್ಸ್ ಎಗೇನ್... ಟ್ರೈ ಒನ್ಸ್ ಎಗೇನ್...' ಎಂದು ಉಗ್ರ ದನಿಯಲ್ಲಿ ರಚ್ಚೆ ಹಿಡಿದ ಮಗುವಿನಂತೆ ಒದರಾಡಿತು.
ನೀರಲಗಿಯವರಿಗೆ ಏನಾಯಿತೋ ಏನೋ ಧಡ್ಡನೆ ನೆಲಕ್ಕೆ ಉರುಳಿ ಬೇಹೂಷ್ ಆದರು. ಮಧ್ಯಾಹ್ನದ ಊಟಕ್ಕೆ ಅಂತ ತಮ್ಮ ಹೆಗಲ ಚೀಲದಲ್ಲಿ ಕಟ್ಟಿಕೊಂಡು ಬಂದಿದ್ದ ಅವರ ಊಟದ ಡಬ್ಬಿ, ನೀರಿನಬಾಟಲು, ನಾಲ್ಕಾರು ಕಾಗದದ ಪತ್ರಗಳು, ಗುಟ್ಕಾ, ಎಲಿ ಅಡಿಕೆ ತಂಬಾಕಿನ ಎಸಳುಗಳು ಅವರೊಟ್ಟಿಗೆ ಧರೆಗುರುಳಿ ದಿಕ್ಕಿಗೊಂದರಂತೆ ಅಂಗಾತ ಬಿದ್ದವು. ನೀರಲಗಿಯೊಟ್ಟಿಗೆ ಬಯೋಮೆಟ್ರಿಕ್ಸ್ ಬಾಯಿಗೆ ತಮ್ಮ ಬೆರಳೊಡ್ಡಲು ಪಾಳಿ ಹಚ್ಚಿದ ಉಳಿದ ನೌಕರರೆಲ್ಲ- `ಸರ್, ಏನಾತ್ರಿ', `ಎಲ್ಲ ದೂರ ಸರಕ್ಕಳ್ರಿ', `ಸ್ವಲ್ಪ ಗಾಳಿ ಹಾಕ್ರಿ, ನೀರ ತರ‌್ರಿ', `ಆಂಬುಲೆನ್ಸ್‌ಗೆ ಫೋನ್ ಮಾಡ್ರಿ' ಅಂತ ಗದ್ದಲ ಎಬ್ಬಿಸಿ ಯಾರೂ ಒಂದು ಹೆಜ್ಜೆ ಮುಂದಿಕ್ಕದೆ, ಅಂಗಾತ ಬಿದ್ದಿದ್ದ ನೀರಲಗಿಯವರನ್ನು ಹಂಗೆ ನೋಡುತ್ತಾ ತಾವು ಕೂಡ ಒಂದು ದಿನ ಹಿಂಗೆ ಕವುಚಿ ಬೀಳಬಹುದೇ ಎಂಬ ದೂರದ ಅಗ್ರಾಹ್ಯ ಭಯಕ್ಕೆ ಬಿದ್ದರು.

ನೀರಲಗಿಯವರ ಸೇವೆ ಮುಕ್ತಾಯಗೊಳ್ಳಲು ಇನ್ನೊಂದು ವರ್ಷವಷ್ಟೇ ಬಾಕಿಯಿದೆ. ಮೂವತ್ತಾರು ವರ್ಷಗಳ ಸುದೀರ್ಘ ಸೇವೆಯನ್ನು ಆರೋಗ್ಯ ಇಲಾಖೆಯಲ್ಲಿ ಸಲ್ಲಿಸಿದ್ದಕ್ಕೆ ಅವರ ಇಲಾಖೆ ಅವರಿಗೆ ಕೊಟ್ಟ ಕಾಣಿಕೆಯೋ ಎನ್ನುವಂತೆ ಅವರ ದೇಹ ಸಕಲ ರೋಗಗಳ ಆಡುಂಬೊಲವಾಗಿದೆ. ಅದರಲ್ಲೂ ಮಧುಮೇಹ, ರಕ್ತದೊತ್ತಡಗಳೆಂಬುವವು ಅವರೇ ಹೆತ್ತ ಅವಳಿ ಮಕ್ಕಳಂತೆ ಹಗಲಿರುಳು ಪ್ರಾಣ ಹಿಂಡುತ್ತಿವೆ. ತಾರುಣ್ಯದಲ್ಲಿ ಉಕ್ಕುಕ್ಕಿ ಹರಿದ ಜೀವನೋತ್ಸಾಹ ಈ ಇಳಿ ವಯಸ್ಸಿನಲ್ಲಿ ಇಳಿದಿಳಿದು ಅವರ ದೇಹದ ಸರ್ವಾಂಗಗಳು ರಿಪೇರಿಗೆ ಬಂದಿವೆ. ಹಾಗೆ ನೋಡಿದರೆ ಅವರ ಮುದಿದೇಹವೆಂಬ ಲಡಕಾಸು ಎಂಜಿನ್ ಚಲಿಸುವುದೇ ಅವರು ನಿತ್ಯ ನುಂಗುವ ಮಾತ್ರೆ-ಮದ್ದುಗಳೆಂಬ  ಪೆಟ್ರೋಲ್ ಡೀಸಲ್‌ಗಳಿಂದ.

ನೀರಲಗಿಯವರು ಪರಿಸ್ಥಿತಿಯ ನಿಷ್ಪಾಪಿ ಕೂಸು. ಈಗ ನೆನೆದರೆ ಅವರ ಬದುಕು ಕಾಲ ಪ್ರವಾಹದಲ್ಲಿ ಯಾವ ಪ್ರತಿರೋಧ -ಪ್ರತಿಭಟನೆ ತೋರದೆ ಸುಮ್ಮನೆ ತೇಲಿ ಹೋದ ಒಂದು ಸಣ್ಣ ಒಣ ಕಟ್ಟಿಗೆಯಂತೆ ಭಾಸವಾಗುತ್ತದೆ. ಅವರು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಾ  ಬಂದಿದ್ದರೂ ಅವರು ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿಯನ್ನು ತೋರುತ್ತಾ ಬಂದರೆಂದು ಧಾರಾಳವಾಗಿ ಹೇಳಬಹುದು. ಅವರ ಇಲಾಖೆ ಮಂದಿಗೆ ಒತ್ತೊತ್ತಿ ಹೇಳುವ ಕುಟುಂಬ ಯೋಜನೆಯ ಬಗ್ಗೆ ಅವರು ದಿವ್ಯ ನಿರ್ಲಕ್ಷ್ಯ ತಾಳಿದ್ದರಿಂದಲೋ-ಅಥವಾ ತಮ್ಮ ಇಲಾಖೆಯ ಮೇಲೆ ತಮಗಿರುವ ಗುಪ್ತ ದ್ವೇಷದಿಂದಲೋ ಅವರು ಮಕ್ಕಳ ಮೇಲೆ ಮಕ್ಕಳ ಹುಟ್ಟಿಸಿ ಐದು ಜನ ಪಂಚ ಪಾಂಡವರ ತಂದೆಯಾದರು. ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುತ್ತಾನೆಯೇ ಎಂದು  ತಿಂಗಳ-ತಿಂಗಳಾ ಬರುವ ಸಂಬಳವನ್ನು ನಾಳೆಗೆ ಉಳಿಸದೆ ಮೇಯ್ದಿದ್ದರಿಂದ ಅವರ ಮಕ್ಕಳಿಗೆ ಹುಲ್ಲು ಮೇಯುವ ಪರಿಸ್ಥಿತಿ ಬಂದೊದಗಿದೆ. ಆ ದ್ವಾಪರ ಯುಗದ ಪಾಂಡವರೋ ಅಲ್ಪಮಟ್ಟಿನ ರಾಜಸುಖವನ್ನು ಉಂಡ ಬಳಿಕ ವನವಾಸ-ಉಪವಾಸಗಳಿಗೆ ಪಕ್ಕಾದರೆ, ಈ ಕಲಿಗಾಲದ ಪಾಂಡವರಿಗೆ ಬಾಲಾರಭ್ಯವೇ ವನವಾಸದ ಉಪಟಳಗಳ ಕಾಟ ಶುರುವಾಯ್ತು. ಗತಿಯಿಲ್ಲದೆ ಅವರೀಗ ಊರೊಳಗೆ ದಕ್ಕುವ ನಾನಾ ಉಪವೃತ್ತಿಗಳ ಮಾಡುತ್ತಾ ಉದರಂಭರಣೆಗೆ ಮುಂದಾಗಿದ್ದಾರೆ. ಉಪವೃತ್ತಿಗಳು ಹುಟ್ಟಿಸುವ ಹಗಲ ಅಸಮಾಧಾನದ ಕಿಡಿಗಳಿಗೆ- ಸಂಜೆ ಹಲವು ಚಟಗಳ ನೀರು ಹುಯ್ದುಕೊಂಡೇ ಅಪರಾತ್ರಿ ಮನೆಯೊಳಕ್ಕೆ ಕಾಲಿಕ್ಕುತ್ತಾರೆ.

ನೀರಲಗಿಯವರು ಆರೋಗ್ಯ ಇಲಾಖೆಗೆ ದ್ವಿತೀಯ ದರ್ಜೆ ಕಾರಕೂನರಾಗಿ ಸೇವೆಗೆ ಸೇರಿದ್ದು. ಚಿಕ್ಕ ಪುಟ್ಟ ಹಳ್ಳಿ-ಗ್ರಾಮಗಳಲ್ಲಿ ಅವರ ಸೇವೆ ನಿರಾತಂಕವಾಗಿ ಸಾಗಿತ್ತು. ಆಗಾದರೂ ಆರೋಗ್ಯ ಇಲಾಖೆಯಲ್ಲಿ ಈಗಿನಂತೆ ನೂರೆಂಟು ಕಾರ್ಯಕ್ರಮಗಳು, ಗುರಿಗಳು, ಕಾಯಿಲೆಗಳು, ಮದ್ದುಗಳು, ಜಡ್ಡು ಜಾಪತ್ರೆಗಳೇನು ಇರಲಿಲ್ಲ. ಜನ ಕೂಡ ರೋಗ ರುಜಿನ ಹುಟ್ಟು-ಸಾವು ಬದುಕಿನ ಅವಿಭಾಜ್ಯ ಅಂಗವೆಂಬಂತೆ ಅವು ಬಂದಂತೆ ಸ್ವೀಕರಿಸಿ ಜೀವನ ಯಾತ್ರೆಯನ್ನು ಮುಗಿಸುತ್ತಿದ್ದರು. ನೀರಲಗಿಯವರಿಗೆ ಒಂದಾದರೊಂದರ ಮೇಲೆ ಬಡ್ತಿ ಸಿಗುತ್ತಿದ್ದಂತೆ, ಹೊಸ ಹೊಸ ನಮೂನೆಯ ಕಾಯಿಲೆಗಳು... ಅವುಗಳನ್ನು ನಿಯಂತ್ರಿಸಲು ನೂರೆಂಟು ಕ್ರಾರ್ಯಕ್ರಮಗಳು... ಅದಕ್ಕೆ ಬೇಕಾದ ಸಿಬ್ಬಂದಿ ವರ್ಗದ ನೇಮಕಾತಿಗಳು... ಹುಟ್ಟು-ಸಾವುಗಳಿಗೆ ಆಸ್ಪತ್ರೆಯೇ ತೊಟ್ಟಿಲಾಗುತ್ತ ಸರಳ ನೌಕರಿ ಬರು ಬರುತ್ತಾ ಸಂಕೀರ್ಣ ರೂಪ ತಾಳತೊಡಗಿತು. ಈಗ್ಗೆ ನಾಲ್ಕು ವರ್ಷಗಳ ಹಿಂದೆ ಅವರು ಕಚೇರಿಯ ಅಧೀಕ್ಷಕ ಅಂತ ಬಡ್ತಿ ಪಡೆದು ಈ ಮಹಾನಗರದ ಕಾರ್ಪೋರೇಷನ್ನಿನ ಆಸ್ಪತ್ರೆಗೆ ಬಂದ ಮೇಲೆ ಹೊಸ ಪಡಿಪಾಟಲುಗಳು ಅವರ ಬದುಕಲ್ಲಿ ಧುತ್ತನೆ  ಕಾಣಿಸಿಕೊಂಡವು.

ಗ್ರಾಮಾಂತರ ಪ್ರದೇಶಗಳಲ್ಲಿ ನೌಕರಿ ಮಾಡುವಾಗ ಇಲ್ಲದ ಒತ್ತಡ, ಉದ್ವೇಗಗಳು ಅವರು ನಗರಕ್ಕೆ ಬಂದ ಕೂಡಲೇ ಅವರನ್ನು ಆವರಿಸಿಕೊಂಡವು. ಮನೆ ಹುಡುಕುವುದರಿಂದ ಹಿಡಿದು ಗ್ಯಾಸ್ ಕನೆಕ್ಷನ್ ಪಡೆಯುವುದರೊಳಗೆ ಅವರ ಚಪ್ಪಲಿಗಳು ಹರಿದು ಹೋದವು.  ನಗರ ಅಂದರೇನೇ ನರಗಳನ್ನು ಹುರಿದು ಮುಕ್ಕುವ ತಾಣ ಅಂಬುದು ಅವರಿಗೆ ಬಹು ಬೇಗ ಅರ್ಥವಾಯಿತು. ಇನ್ನೊಬ್ಬರಿಂದ ಕೆಲಸ ತೆಗೆದುಕೊಳ್ಳುವ ಕಷ್ಟಕ್ಕಿಂತ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವುದು ಸುರಕ್ಷಿತ ಮತ್ತು ಕ್ಷೇಮ ಎಂಬ ಭಾವವೂ ಅವರಿಗೆ ಮನವರಿಕೆಯಾಯಿತು.

ಬಹುವರ್ಷ ಆ ಕಾರ್ಪೋರೇಷನ್ನಿನ ಆಯಕಟ್ಟಿನ ಜಾಗೆಯಲ್ಲಿ ಬೇರು ಬಿಟ್ಟು ಬಲಿತ ಅಧೀನ ನೌಕರರು ನೀರಲಗಿಯವರ ಯಾವ ಮಾತಿಗೂ ಕ್ಯಾರೇ ಅನ್ನುತ್ತಿರಲಿಲ್ಲ. ಅವರೊಬ್ಬ ಏನೂ ತಿಳಿಯದ ಗುಗ್ಗು, ಹಳ್ಳಿಯ ಗಮಾರ ಅನ್ನುವಂತೆ ನೋಡುತ್ತಿದ್ದರು. ಬಂದಾಗ ಬಂದಾರು, ಹೋದಾಗ ಹೋದಾರು, ಕೆಲಸ ಮಾಡಿದರೆ ಮಾಡಿದರು, ಇಲ್ಲವಾದರೆ ಊರೊಳಗಿನ ನಾನಾ ವ್ಯವಹಾರ ದಂಧೆಗಳಲ್ಲಿ ದಿನಗಳ ದೂಡುವರು. ಹೆಸರಿಗೊಂದು ಅಟೆಂಡನ್ಸು. ಮೂವ್‌ಮೆಂಟ್ ರಿಜಿಸ್ಟರ್. ಒಮ್ಮಮ್ಮೆ ವಾರಗಟ್ಟಲೆ ನಾಪತ್ತೆಯಾದವರು ನೀರಲಗಿಯವರ ಕಣ್ಣ ಮುಂದೆಯೇ ನೀಟಾಗಿ ಠಾಕು ಟೀಕಾಗಿ ಇಡೀ ವಾರದ ಸಹಿ ಒತ್ತುತ್ತಿದ್ದರು. ಇನ್ನು ಅಲ್ಲಿದ್ದ ಒಂದಿಬ್ಬರು ವೈದ್ಯರು ಸಾಕ್ಷಾತ್ ದೈವಾಂಶ ಸಂಭೂತರು. ಯಾವಾಗ ಪ್ರತ್ಯಕ್ಷವಾಗುತ್ತಾರೋ ಯಾವಾಗ ಅಂರ್ತಧಾನರಾಗುತ್ತಾರೋ! ಅವರು ನಿಯಮಾತೀತರು. ಅವರದ್ದು ಒಂದೇ ವಾದ. ಸಮಯಕ್ಕೆ ಸರಿಯಾಗಿ ನಾವು ಬರಲಾರೆವು- ಸಮಯ ಇದ್ದಾಗ ನಾವು ಬರುವೆವು. ಹಿಂಗೆ ಸಮಯ ಇದ್ದಾಗ ಬಂದರಾದರೂ ಅವರು ರೋಗಿಗಗಳನ್ನು ತಪಾಸಿಸುತ್ತಿದ್ದಕ್ಕಿಂತಲೂ `ತಮ್ಮ ಪಗಾರದ ಬಿಲ್ಲು ಆಯಿತಾ? ಟಿ.ಎ.-ಡಿ.ಎ ಬಂತಾ? ಬಜೆಟ್ ರಿಲೀಸ್ ಆಯ್ತೊ?'   ಮೊದಲಾದ ಕುಶಲೋಪರಿಯ ಮಾತುಗಳ ಗಾಳಿಯಲ್ಲಿ ತೇಲಿಸಿ ಗಾಯಬ್ ಆಗುವರು. ಯಾವಾಗ ಹೋದರೂ ಆ ದವಾಖಾನೆಯಲ್ಲಿ ವೈದ್ಯರಿರುವುದಿಲ್ಲ ಎಂಬ ಮಾತು ನಗರದಲ್ಲಿ ಲೋಕ ಪ್ರಸಿದ್ಧವಾಗಿ, ಮಂದಿ ದಿನೇ ದಿನೇ ಏನೇ ಬೇನೆ ಬಂದರೂ ಈ ದವಾಖಾನೆಯ ಕಡೆ ತಲೆ ಹಾಕುವುದನ್ನು ಬಿಟ್ಟುಬಿಟ್ಟರು. ಕಾಲಾಂತರದಲ್ಲಿ ಇಲ್ಲೊಂದು ದವಾಖಾನೆ ಇದೆ ಎಂಬುದು ಜನರ ಮನಸ್ಸಿನಿಂದ ಮರೆಯಾಗಿ ಹೋಯ್ತು.

2
ಒಮ್ಮಮ್ಮೆ ಮಂದ ಮಾರುತ ಇದ್ದಕ್ಕಿದ್ದಂತೆ ಝಂಝಾವಾತವಾಗಿ ರೂಪಾಂತರಗೊಳ್ಳುವಂತೆ ಆ ಮಹಾನಗರದ ಮಾಹಾಪಾಲಿಕೆಗೊಬ್ಬ ನವ ತರುಣ ಕಮೀಷನರ್ ಬಂದ. ಬಂದ ವಾರದಲ್ಲಿಯೇ ಕಂಪನಗಳ ಅಲೆಗಳನ್ನ ಎಬ್ಬಿಸಿದ. ಅವನನ್ನು ಆ ಗಬ್ಬು ಹಿಡಿದ ಊರಿಗೆ ಆ ಊರ ಸ್ಥಳೀಯ ರಾಜಕಾರಣಿಗಳೇ ಖುದ್ದು ಮುಖ್ಯಮಂತ್ರಿಗಳ ಬೆನ್ನು ಬಿದ್ದು ಹಿಡಕೊಂಡು ಬಂದಿದ್ದಾರೆಂಬ ಸುದ್ದಿಯೂ ಇದೆ. ಹತ್ತಿರ ಬರುತ್ತಿರುವ ಚುನಾವಣೆ, ಮತ ಕೇಳಲು ಮಾರಿ ಮುಂದೆ ಮಾಡಿ ಹೋದರೆ ಜನ ಉಗಿದಾರೆಂಬ ಭಯ, ಇರುವ ಅಲ್ಪ ಸಮಯದಲ್ಲಿ ಅಗಾಧ ಮಾಡಿದ್ದೇವೆಂದು ತೋರಿಸುವ ಚಪಲದಿಂದಾಗಿ ರಾಜಕಾರಣಿಗಳು ಹೈ ಡ್ರಾಮಾ ಸೃಷ್ಟಿಸಲೆಂದೇ ಆತನನ್ನು ಇಲ್ಲಿಗೆ ಕರೆತಂದಿದ್ದಾರೆಂದು ಪತ್ರಿಕೆಗಳು ಟೀಕಾಪ್ರಹಾರ ನಡೆಸಿದವು.

ಕಮೀಷನರ್ ದಿನಕ್ಕೊಂದು ಮೀಟಿಂಗ್ ನಡೆಸುವವ. ದಿನಕ್ಕೊಂದು ಸುತ್ತೋಲೆ ಹೊರಡಿಸುವವ. ಕಾರ್ಪೋರೇಟರ್‌ಗಳ ಸಭೆ ಕರೆಯುವವ. ಅವರಿಗೆ ಡೆವಲಪ್‌ಮೆಂಟ್ ಮತ್ತು ಟೈಂ ಮೇನೇಜಮೆಂಟ್ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮಾಡುವವ. ಜೀಪು ಹತ್ತಿ ಮಿಂಚಿನ ನಗರ ಸಂಚಾರ ಮಾಡುವವ.

ಈಗ ಬೇಕಿರುವುದು ಆಮೆಯ ನಡಿಗೆಯಲ್ಲ; ಜಿಂಕೆಯ ವೇಗ ಎಂದ. ಪೆನ್ನು-ಹಾಳೆ, ಕಡತಗಳ ಕಾಲ ಮುಗಿಯಿತು. ಈಗ ಎಲ್ಲಾ ಇಮೇಲ್‌ಗಳ ಮಿಂಚಿನೋಲೆ. ಯಾರಿಗೆ ಕಂಪ್ಯೂಟರ್ ಜ್ಞಾನವಿಲ್ಲವೋ ಅವನು ಇಲ್ಲಿಟರೇಟ್... ಅವರಿಗೆ ಗೇಟ್ ಪಾಸ್ ಅಂದ.
ವಾರದೊಪ್ಪತ್ತಿನಲ್ಲಿ ಹೊಸ ಕಮೀಷನರ್ ಕಣ್ಣು ನೀರಲಗಿಯವರ ಕಚೇರಿಯ ಮೇಲೆ ಬಿತ್ತು. ಕೆಳಗಿನದನ್ನು ಬಿಗಿ ಮಾಡಿದರೆ ಮೇಲಿನದು ತನ್ನಿಂದತಾನೆ ಸುಧಾರಿಸುತ್ತೆ ಎನ್ನುವ ನಂಬಿಗೆ ಅವರದು. ಆರೋಗ್ಯ ಇಲಾಖೆಯ ವರದಿ ಓದಿ ಅವರ ಕಣ್ಣು ಕೆಂಪಾದವು. `ಇದೇನು ಮುನ್ಸಿಪಾಲಿಟಿಯ ದವಾಖಾನೆಯೋ... ದನ ಕೂಡಿ ಹಾಕುವ ಪಿಂಜರಪೋಲೊ? ಕಾಲ್ ದಟ್ ಬ್ಲಡಿ ಸೂಪರಿಡೆಂಟ್'. ನೀರಲಗಿಯವರಿಗೆ ಬುಲಾವ್ ಮುಟ್ಟಿದಾಗ ಸಂಜೆಯಾಗಿತ್ತು

ನೀರಲಗಿ ಇದೇ ಪ್ರಪ್ರಥಮ ಬಾರಿಗೆ ಹೊಸ ಕಮೀಷನರ್ ಭೇಟಿಯಾಗಲು ಹೊರಟದ್ದರಿಂದ ಅವರ ಮನಸ್ಸು ಇನ್ನಿಲ್ಲದ ಭಯಗಳಿಂದ ತತ್ತರಿಸುತ್ತಿತ್ತು. ಇಲ್ಲದ ಘೋರ ಕಲ್ಪನೆಗಳಿಗೆ ಸಿಕ್ಕು ತತ್ತರ ನಡುಗತೊಡಗಿತು. ಕೊನೆಗಾಲದ ಸರ್ವೀಸ್ ಸಸೂತ್ರವಾಗಿ ಮುಗಿಯಲಾರದೇನೋ ಎಂಬ ಅಂಜಿಕೆ ಅವರನ್ನು ಅಲ್ಲಾಡಿಸತೊಡಗಿತು. ಅವರು ಗಾಬರಿಯಿಂದಲೇ ಕಮೀಷನರ್ ಚೇಂಬರ್ ಹೊಕ್ಕರು.
ಬಿಳಿಯ ಹಾಫ್ ಷರ್ಟ್, ಕಪ್ಪು ಟೈ, ಗೋಲ್ಡನ್ ಕಟ್ಟಿನ ಕನ್ನಡಕಧಾರಿ ಕಮೀಷನರ್ ತನ್ನ ಎದುರಿನ ಕಂಪ್ಯೂಟರಿನಲ್ಲಿ ಜಗತ್ತನ್ನು ಸುತ್ತುತ್ತಿದ್ದ. ಆ ಕೋಣೆಯ ಮೌನವೇ ಭಯ ಹುಟ್ಟಿಸುವಂತಿತ್ತು. ಅಧಿಕಾರ ಸೃಷ್ಟಿಸಿದ ಕಂಪನಗಳು ಅಲ್ಲಿಗೆ ಕಾಲಿಟ್ಟವರ ಕಾಲುಹಿಡಿದು ಅಲ್ಲಾಡಿಸುವಂತೆ ಅದೃಶ್ಯವಾಗಿ ಅಲ್ಲಿ ಅವಿತುಕೊಂಡಿವೆಯೇನೋ? ನೀರಲಗಿಯವರು ಅಂಥ ಹೆದರಿಕೆಗೆ ಪಕ್ಕಾಗಿ ಸುತ್ತೂ ನೋಡಿರು.

`ಹೂ ಆರ್ ಯೂ?'
ಕಮೀಷನರ್ ಕಂಪ್ಯೂಟರ್ ಲೋಕದಿಂದ ಈ ಲೋಕಕ್ಕೆ ಇಳಿದು ನೀರಲಗಿಯವರ ಕಡೆ ತಿರುಗಿ ಪ್ರಶ್ನೆಯನ್ನು ಬಾಣದಂತೆ ಬಿಟ್ಟರು.
ಆ ಬಾಣದ ತೀಕ್ಷ್ಣತೆಗೆ ತತ್ತರಿಸಿದವನಂತೆ ನೀರಲಗಿ ತಲೆ ಕರೆಯುತ್ತಾ- `ಸಾರ್... ನಾನು ನೀರಲಗಿ ಅಂತ. ಆಫೀಸ್ ಸೂಪರಿಡೆಂಟ್'  ಅಂದವ ತನಗೆ ತಾನೆ ಆತ್ವವಿಶ್ವಾಸ ತುಂಬಿಕೊಳ್ಳಲೋ ಎಂಬಂತೆ- ಮೂವತ್ತು ವರ್ಷ ಲಾಂಗ್ ಸರ್ವೀಸ್ ಆಗ್ಯೇದ. ನನಗೆ ಐದು ಜನ ಗಂಡು ಮಕ್ಕಳು ಸಾರ್' ಅಂದ.

`ಐ ಸಿ.. ಎಷ್ಟು ಹೆಂಡತಿಯರೂ ಅಂತ ಹೇಳಲಿಲ್ಲ' ಅಂದ ಕಮೀಷನರ್ ತನ್ನ ಎದುರಿನ ಫೈಲ್‌ಗಳಲ್ಲಿ ಅವಿತಿದ್ದ ಆಸ್ಪತ್ರೆಯ ಫೈಲ್‌ಗಳನ್ನು  ಹೊರಗೆಳೆದು, `ಮೂವತ್ತು ವರ್ಷ ಸರ್ವೀಸ್ ಅಗಿದೆ ಅಂತೀರಿ. ನಿಮ್ಮನ್ನ ನೋಡಿದರೆ ನೆಟ್ಟಗೆ ಲಾಂಗ್ ಹಾಕ್ಕೊಳಕೆ ಬರದೋರ ತರ ಕಾಣ್ತೀರಿ. ನೆಟ್ಟಗೆ ಕನ್ನಡನೂ ಬರಂಗ ಕಾಣಲ್ಲ, ಇಂಗ್ಲೀಷೂ ಬರಂಗ ಕಾಣಲ್ಲ. ನೋಡ್ರಿ ನಿಮ್ಮ ಫೈಲ್ಸ್... ಇನ್ನ ಮೇಲೆ ಎಲ್ಲಾ ಫೈಲ್ಸ್ ಬಂದ್. ನನ್ನತ್ರ ಯಾವ ಮ್ಯಾಟರ್ ಇದ್ದರು ಕಂಪ್ಯೂಟರ್‌ನಲ್ಲೇ ಡ್ರಾಫ್ಟ್ ಆಗಿ ಬರಬೇಕು. ನಿಮ್ಗೆ ಕಂಪ್ಯೂಟರ್ ಬರುತ್ತಾ?'
ನೀರಲಗಿಯವರ ಗಂಟಲಾರಿ ಉಸಿರು ನಿಂತಂತಾಯಿತು. ಕಣ್ಣಿಗೆ ಕತ್ತಲ ಇಳಿಯಿತು. ಏನಾದರೊಂದು ಹೇಳೋಣವೆಂದರು. ದನಿ ಹೊರಬರದೆ ಗೊರಗೊರ ಅಂದು ತಲೆ ತಗ್ಗಿಸಿದರು.

`ಕಲೀಲಿಲ್ವಾ? ಮೂರು ತಿಂಗಳ ಟೈಂ ಕೊಡ್ತಿನಿ, ಅಂಡರ್ ಸ್ಟಾಂಡ್. ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು. ಕಾಲ.. ಸಮಯ- ಟೈಂ ಇಂಪಾರ‌್ಟೆಂಟ್. ಕಚೇರಿ ಮುಂದ ಬಯೋಮೇಟ್ರಿಕ್ಸ ಮೆಶೀನ್ ಫಿಕ್ಸ್ ಮಾಡ್ಸತಿನಿ. ದಿನಕ್ಕೆ ನಾಲ್ಕು ಸಾರಿ ಫಿಂಗರ್ ಪ್ರಿಂಟ್ ಅಂಟೆಂಡನ್ಸ್ ಮಾಡಬೇಕು. ಎಲ್ಲ ಕಡೆ ಸಿ.ಸಿ.ಟಿ.ವಿ. ಕ್ಯಾಮರ ಫಿಕ್ಸ್ ಮಾಡ್ಸಿತಿನಿ. ನೀವೆಲ್ಲ ದಡ್ಡು ಬಿದ್ದಂಗ ಕಾಣುತ್ತೆ. ಈಗ ಹೋಗಿ. ಎಲ್ಲರಿಗೂ ಈ ಮೆಸೇಜ್ ಸರ್ಕ್ಯುಲೇಟ್ ಮಾಡಿ'. ನೀರಲಗಿ ಆಃ ಎನ್ನದೆ ಹೂಃ ಅನ್ನದೆ ಹೊರಬಂದರು.

ಕಚೇರಿಯ ಕಟಾಂಜನದ ಮುಂದೆ ಬಯೋಮೆಟ್ರಿಕ್ಸ್ ಬೆದರುಗೊಂಬೆಯಂತೆ ಬಂದು ಕೂತ ಕೂಡಲೆ ಎಲ್ಲರ ಬಿ.ಪಿ. ಒಮ್ಮೆಲೆ ಏರತೊಡಗಿತು. ಮುಂಜಾನೆ ಮುಂಜಾನೆ ದೇವರ ದರ್ಶನಕ್ಕೆ ದೇವಸ್ಥಾನದ ಮುಂದೆ ಪಾಳಿ ಹಚ್ಚಿ ನಿಲ್ಲುವ ಭಕ್ತರಂತೆ ಎಲ್ಲರೂ ಅದರ ಬಾಯಿಗೆ ತಮ್ಮ ಬೆರಳೊಡ್ಡಲು ಗಡಿಬಿಡಿಯಿಂದ ಹಾಜರಾಗತೊಡಗಿದರು. ಅವರಲ್ಲಿ ಉಶ್ಶ ಅನ್ನುವವರಷ್ಟೋ, ಬೆವರ ತೀಡಿಕೊಳ್ಳುವವರೆಷ್ಟೋ, ಹೊಸ ಕಮೀಷನರ್‌ಗೆ ಶಾಪ ಹಾಕುವವರೆಷ್ಟೋ, ನೀರಲಗಿಯವರ ಪಡಿಪಾಟಲಂತೂ ಹೇಳತೀರದು. ಅದರ ಜೊತಿಗೆ ಕುಸ್ತಿ ಬಿದ್ದಂತೆ ದಿನ ಅರ್ಧ ತಾಸು ಒದ್ದಾಡುವವರು. ಆ ಹೊಸ ಯಂತ್ರಕ್ಕೂ ಮುದುಕರನ್ನು ಕಂಡರೆ ಅಗುವುದಿಲ್ಲವೋ ಅನ್ನುವಂತೆ ಅವರ ಫಿಂಗರ್ ಪ್ರಿಂಟ್ ದಾಖಲಿಸಲು ನಿರಾಕರಿಸುತ್ತಾ ಅವರನ್ನು ಸತಾಯಿಸುತ್ತಿತ್ತು. ನೀರಲಗಿಯವರ ಒದ್ದಾಟ ಕಂಡು ಅವರ ಸಹೋದ್ಯೋಗಿಗಳು `ನೀರಲಗಿ ಸಾಹೇಬರೇ- ನಿಮ್ಮ ಬೆರಳ ಚರ್ಮ ಸವೆದು ಹೋಗಿರಬೇಕ್ರಪಾ. ವಯಸ್ಸಾತು ನೋಡ್ರಿ. ನೀವು ಲಗೂನರಾ ಬರ‌್ರೀ. ಇಲ್ಲ ತಡಗ್ಯಾರ ಬರ‌್ರಿ. ನಡುಕ ಬಂದು ಅಡ್ಡ ನಿಲ್ಲಬ್ಯಾಡ್ರಿ. ಉಳಿದ ಮಂದಿಗ ತ್ರಾಸ ಅಕ್ಕತಿ' ಅನ್ನುವರು.

ಬಯೋಮೆಟ್ರಿಕ್ಸ್ ಭಯ ನೀರಲಗಿಯ ಬದುಕಲ್ಲಿ ಎಬ್ಬಿಸಿದ ಬಿರುಗಾಳಿಯ ಭಯವನ್ನು ಅವರೇನು ಬಲ್ಲರು. ಮುಂಜಾನೆ ಎದ್ದ ಕೂಡಲೆ ಎದೆಯ ಮೇಲೆ ಅದರ ಭಾರ ಬಿದ್ದಂತಾಗುತ್ತದೆ. ಸ್ನಾನಕ್ಕೆ ಹೋಗಲಿ- ಸಂಡಾಸಿಗೆ ಹೋಗಲಿ ಅದು ಆಃ ಹೊರಡು ಹೊರಡು ಎಂದು ಹುಕುಂ ಹೊರಡಿಸಿದಂತಾಗುತ್ತದೆ. ಕಾಲದ ಅಡಕೊತ್ತಿನಲ್ಲಿ ಕೂಳು ಕೂಡ ಸರಿಯಾಗಿ ಗಂಟಲಲ್ಲಿ ಇಳಿಯುವುದಿಲ್ಲ. ಆರು ಕಿಲೋಮೀಟರ್ ದೂರದ ಅವರ ಬಾಡಿಗೆ ಮನಿಯಿಂದ ಲೂನಾ ಏರಿ ಅವರು ಕಚೇರಿ ಮುಟ್ಟಲು ಏನಿಲ್ಲವೆಂದರೂ ಅರ್ಧ ತಾಸೇ ಬೇಕು. ಒಮ್ಮಮ್ಮೆ ಅವರ ಹಳೆಗಾಲದ ಲೂನ ದಾರಿ ಮಧ್ಯೆ ಕೈಕೊಡುತ್ತಿತ್ತು. ಕೆಲಸದ ಭಾರಕ್ಕಿಂತ ವೇಳಿಯ ಪಾಳಿ ಅವರ ಮೇಲೆ ದಾಳಿ ಅವ್ಯಾಹತ ಆರಂಭಿಸಿತು.
ಈಗೀಗ ಕಮೀಷನರ್ ಪ್ರತಿ ಕೊಠಡಿಗೆ ಕೂಡಿಸಿರುವ ಸಿ.ಸಿ.ಟಿ.ವಿ. ಕ್ಯಾಮರಗಳಿಂದ ಕಚೇರಿಯಲ್ಲಿ ಯಾರೊಟ್ಟಿಗೂ ಮನಬಿಚ್ಚಿ ಮಾತಾಡದಂತಾಗಿ, ಗುಮಾನಿಯ ಯಾವುದೋ ಕಣ್ಣುಗಳು ತಮ್ಮ ಬೆನ್ನ ಹಿಂದೆ ನಿಂತು ಪ್ರತಿ ಕ್ಷಣಗಳನ್ನು ದಾಖಲಿಸುತ್ತಿರಬಹುದೇನೋ ಅನ್ನಿಸುತ್ತದೆ. ಚಟ ಮಹರಾಜರುಗಳಿಗಂತು ವಿಪರೀತ ಪೀಕಲಾಟ. ಚಟಕ್ಕೊಗಿದ ಮನಸ್ಸುಗಳು ಅವುಗಳ ಅಲಭ್ಯತೆಯಿಂದ ಮಂಕು  ತಬಾಕಿಕೊಂಡು ಕೂತಲ್ಲೇ ಮೂಕ ಶಿಲೆಗಳಾದವು.

`ಏನ್ರಪಾ ಹೊಸ ಕಮೀಷನರ್ ಬಂದ ಮ್ಯಾಗ ಒಂದಕ್ಕೂ ಎದ್ದು ಹೋಗೋದು ಕಷ್ಟ ಆಯ್ತು' ಅಂತ ಒಬ್ಬ ಉಗ್ಗಡಿಸಿದರೆ, `ಒಂದದ ಮನಿ ಹಾಳಾಯಿತು. ಬಾಯಿ ಚಟ ಹೆಂಗೊ ತಡಕಳ್ಳಾದು. ಅದಿಲ್ಲಂದರ ನನ ತಲಿನಾ ಓಡದು. ಹಿಂದಕ ನಾನಾರ ಗಂಟಿಗೊಮ್ಮಿ ಹೊರಗೋಗಿ ಮೆಲ್ಕಾಡಿ ಬಂದವ. ಈಗ ಕುಂತತ್ತಾಕ ಮೂರು ತಾಸು ಸುಮ್ಕ ಕುತ್ಗ ಅಂದರ ಹೆಂಗಾದೀತು', `ಹೇ ಮೆಲ್ಲಕ ಮಾತಾಡೋ.. ನಿನ್ನ ಮಾತೂ ರೆಕಾರ್ಡ ಅಕ್ಕತಿ.. ಈಗ ಎಲ್ಲಿ ನೋಡಿದ್ರೂ  ಸಿ.ಸಿ.ಟಿ.ವಿದ ದರ್ಬಾರು. ಅಂಗಡಿಗೋಗು.. ಲಾಡ್ಜಿಂಗೆಗೋಗು.. ಸಿನೇಮಾಕ್ಕೋಗು.. ಬೀದ್ಯಾಗಳ ಲೈಟಿನ ಕಂಬಕ್ಕೂ ಫಿಕ್ಸ್ ಮಾಡ್ಯಾರಾಂತೆ. ಇಂದಲ್ಲ ನಾಳಿ ನಮ್ಮ ಮನಿಗೂ ಕುಂಡ್ರಸಂಗ ಕಾಣತೈತಿ'.

ನೀರಲಗಿಯವರ ಟೇಬಲ್ ಎದುರು ನಿನ್ನೆ ಬಂದು ಕೂತ ಹೊಸ ಕಂಪ್ಯೂಟರ್ ಇಂದು ಅವರ ಚಿತ್ತವನ್ನು ಮತ್ತಷ್ಟು ಕಲಕಿತು. ಕಾಲ ಮತ್ತು ಬದಲಾವಣೆಗಳ ವೇಗಕ್ಕೆ ಹೊಂದಿಕೊಳ್ಳಲಾರದ ಅಸಹಾಯಕತೆ ಅವರ ಮನೋಸ್ಥೈರ್ಯವನ್ನು ಆಳವಾಗಿ ಕಲಕಿತು. ಕಾಲ ಸೃಷ್ಟಿಸಿದ ನವ ಆಹ್ವಾನಗಳು ಅವರ ಹದ್ದುಬಸ್ತಿನಲ್ಲಿದ್ದ ಹಳೆಯ ರೋಗಗಳಿಗೆ ರೆಕ್ಕೆಗಳ ಅಂಟಿಸಿ ಅವರನ್ನ ಮನಬಂದಂತೆ ಅಪರಿಚಿತ ಆಕಾಶದಲ್ಲಿ ಅಲೆದಾಡಿಸಿದವು.

ನೀರಲಗಿಯವರಿಗೆ ತಾವು ಹೊಸದಾಗಿ ಕೆಲಸಕ್ಕೆ ಸೇರಿದ್ದಾಗಿನ ದಿನಗಳು ನೆನಪಾದವು. ಸಮಯ ಮತ್ತು ಪರಿಸ್ಥಿತಿಗಳು ಅವರ ಅಂಕೆಯಲ್ಲಿದ್ದ ದಿನಗಳವು. ಕೆಲಸ ಯಾವುದೋ ಕ್ರೀಡೆ ಅನ್ನಿಸುತ್ತಿದ್ದ ಕಾಲ ಅದು. ಸಮಯಕ್ಕಿಂತ ಕೆಲಸ, ಕಾನೂನಿನ ಸಂಬಂಧಕ್ಕಿಂತ ಕರುಳ ಸಂಬಂಧಗಳಿಗೆ ಬೆಲೆ ಇದ್ದ ಕಾಲ. ಕಚೇರಿ ಒಂದು ರೀತಿ ಮನೆ ಅನ್ನಿಸುತ್ತಿತ್ತು. ಸಂಜೆ ಆರಾದರೇನು ಏಳಾದರೇನು. ಎಲ್ಲ ಕುಂತು ಅಂದಿನ ಕೆಲಸ ಮುಗಿಸಿಯೇ ಮನಿಗೆ ಹೋಗುತ್ತಿದ್ದದ್ದು. ಎಲ್ಲ ಕೂಡಿ ಉಣ್ಣುವುದೇನು, ಆಡುವುದೇನು, ಹಬ್ಬಗಳ ಆಚರಿಸುವುದೇನು, ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆಗುವುದೇನು... ಸಂಜಿ ಮನಸ್ಸು ಉಲ್ಲಾಸದ ಹಕ್ಕಿಯಂತೆ ಹಾರುತ್ತಿತ್ತು. ಕಣ್ಣ ತುಂಬ ನಿದ್ದೆ ಮಾಯಾಂಗನೆಯಂತೆ ಮುಸುಗು ಹೊದಿಸುತ್ತಿತ್ತು. ಈಗ ಕಣ್ಣ ತುಂಬ ನಿದ್ದಿ ಮಾಡಿ ಏಸು ದಿನಗಳಾದವೋ ಏನೋ...

ತಮ್ಮ ಸುತ್ತಾ-ಎದುರು ಕೂತ ಈಗಣ ನೌಕರ ಸಹೋದ್ಯೋಗಿಗಳು ಹಿಂದಣ ಜನ್ಮದ ರಾಗ ದ್ವೇಷಗಳನ್ನು ಈ ಜನ್ಮದಲ್ಲಿ  ತೀರಿಸಿಕೊಳ್ಳಲೆಂಬಂತೆ ಮಾತು ಮಾತಿಗೂ ಕೊಂಕಿನ ಕೊಕ್ಕೆ ಹಾಕಿ ಕಾಲೆಳೆಯಲು ನೋಡುತ್ತಾರೆ. ಕಂಪ್ಯೂಟರ್ ಕಲಿತ, ಇಂಟರ್ನೆಟ್, ಟ್ಯಾಲಿ-ಎಕ್ಸೆಲ್ ಬಲ್ಲ ಒಂದಿಬ್ಬರು ಹೊಸ ತರುಣ ಕಾರಕೂನರು ನೀರಲಗಿಯವರನ್ನು ಒಬ್ಬ ವೇಸ್ಟ್ ಬಾಡಿ, ಪಗಾರಕ್ಕೆ ದಂಡ ಅನ್ನುವಂತೆ  ಕಣ್ಣು ಬೀರುತ್ತಾರೆ. ಭುಜ ಕುಣಿಸಿಕೊಂಡು `ಕಮೀಷನರ್ ಹತ್ರ ಹೋಗಿದ್ದೆ, ಅವರ ಸ್ಪೀಚ್‌ನ ಪವರ ಪಾಯಿಂಟ್‌ನಲ್ಲಿ ಸ್ಲೈಡ್ ಮಾಡಿಕೊಟ್ಟು ಬಂದೆ' ಅನ್ನುತ್ತಾ ಆಫೀಸ್ ತುಂಬ ಕೊಂಬು ಕಹಳೆ ಊದಿಕೊಂಡು ಓಡಾಡುತ್ತಾರೆ.

`ಮಿಸ್ಟರ್ ನೀರಲಗಿ, ನೀವೆಲ್ಲ ಹೆಂಗ ಕೆಲ್ಸ ಮಾಡ್ತಿದ್ದೀರತ ನಿಮಗ ತೋರಿಸ್ತಿನಿ ಇಲ್ಲಿ ಕೂಡ್ರಿ'- ಬಯೋಮೆಟ್ರಿಕ್ಸ್ ಮೇಲೆ ಬೆರಳಿಟ್ಟು ಬೇಹೋಷ್ ಆದ ಹಿಂದಿನ ದಿನ ನೀರಲಗಿಯವರನ್ನು ಕಮೀಷನರ್ ತಮ್ಮ ಕಚೇರಿಗೆ ಕರಸಿಕೊಂಡಿದ್ದರು. ಕಳೆದ ಒಂದು ತಿಂಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮರದಲ್ಲಿ ಸೆರೆಹಿಡಿಯಲಾದ ಹಲವು ಕ್ಲಿಪಿಂಗ್‌ಗಳನ್ನು ಯಾವುದೋ ಹಾರರ್ ಸಿನಿಮಾ ತೋರಿಸುವವರಂತೆ ನೀರಲಗಿಯವರ ಮುಂದೆ ಪ್ಲೇ ಮಾಡಿದರು. ಅದಕ್ಕೆ ಅವರೇ ಕಾಮೆಂಟರಿಯನ್ನು ಕೊಡತೊಡಗಿದರು..

`ಸೀ ನೀರಲಗಿ...ಇದು  ತಾರೀಖು ಹತ್ತರ ಕ್ಲಿಪಿಂಗ್. ಹನ್ನೊಂದು ಗಂಟೆ. ನಿಮ್ಮ ಕಚೇರಿಯನ್ನು ನೋಡ್ರಿ. ಯಾರಾದ್ರು ಒಬ್ಬರು ಕಚೇರಿಯಲ್ಲಿ ಇದ್ದಾರಾ? ನೀವೇನು ಮಾಡ್ತಾ ಇದ್ದಿರಿ... ಆಫೀಸ್ ಸೂಪರಿಡೆಂಟ್ ಪೇಪರ್ ಹಿಡ್ಕಂಡು ಓದೋರಂಗೆ ನಾಟ್ಕ ಮಾಡ್ತ ತೂಗಡಿಸ್ತಾ ಇದ್ದೀರಿ.. ಇಸ್ ಇಟ್ ರೈಟ್... ಸೀ ದಿಸ್.. ತಾರೀಖು ಇಪ್ಪತ್ತು. ರಾಜಾರೋಷವಾಗಿ ಎಸ್ಟಾಬ್ಲಿಷ್‌ಮೆಂಟ್ ಕ್ಲರ್ಕ್ ಆಫೀಸಗ ಬಂದ ಮನುಷ್ಯನ ಹತ್ರ ಹೇಗೆ ಡೀಲ್ ನಡೆಸ್ತಿದಾನೆ. ನೀವೇನು ಮಾಡ್ತಾ ಇದ್ದೀರಿ. ನಾಲ್ಕು ಜನಾನ ಸುತ್ತಾ ಕೂರಿಸಿಕೊಂಡು ನಗಿಚಾಟಿಕೆ ಮಾಡ್ತ ಕೂತಿದಿರಿ...' 

ಇಂಥವೆ ಹತ್ತಾರು ಕ್ಲಿಪಿಂಗ್‌ಗಳು... ಕಚೇರಿಯ  ಪ್ರತಿಯೊಂದು ಚಲನವಲನಗಳನ್ನು -ಸೂಕ್ಷ್ಮಾತಿಸೂಕ್ಷ್ಮಗಳನ್ನು ಆ ಸಿ.ಸಿ.ಟಿ.ವಿ ಕಲೆಹಾಕಿತ್ತು.. ಕೆಮ್ಮಿದ, ಸೀನಿದ, ಆಕಳಿಸಿದ, ತೂಕಡಿಸಿದ, ಮೈ-ಕೈ ಮುರಿದ, ಯಾವುದನ್ನೋ ಬಾಯಿಗೆ ಹಾಕಿ ನುರಿದ, ಉಗಿದ, ಯಾರ ಜೊತೆಗೆ ಏನೋ ಮಾತಾಡಿದ, ನಕ್ಕ... ಚಿತ್ರ ವಿಚಿತ್ರ ದೃಶ್ಯಗಳು.

ಇದಕ್ಕೆಲ್ಲ ಏನು ಹೇಳುತ್ತೀರಿ ಅನ್ನುವಂತೆ ಕಮೀಷನರ್ ಕಂಪ್ಯೂಟರ್ ಬಂದು ಮಾಡಿ ನೀರಲಗಿಯವರ ಮುಖ ನೋಡಿದರು. ನಿಮ್ಮನ್ನೆಲ್ಲ ಒಂದು ಶಿಸ್ತಿಗೆ ತರದೆ ಬಿಡುವವನಲ್ಲ, ಕಾಲದ ಹಗ್ಗದಿಂದ ನಿಮ್ಮನ್ನು ಕಟ್ಟಿ ಹಾಕದೆ ವಿರಮಿಸಲಾರೆ ಎಂಬ ಠೀವಿಯಲ್ಲಿ ಅವರು ಅಗಲೇ ಟೈಪ್ ಆಗಿ ಸಿದ್ಧವಾದ ಒಂದು ಸುದೀರ್ಘ ಮೆಮೋವನ್ನು ನೀರಲಗಿಯವರ ಕೈಗೆ ಇಟ್ಟರು. ಈ ಕಮೀಷನರ್ ನಾವು ಕೆಲಸ ಮಾಡುವುದನ್ನು ರೆಕಾರ್ಡ್ ಮಾಡಲು ಸಿ.ಸಿ.ಟಿ.ವಿ. ಕೂರಿಸಿದ್ದಾನೋ ಅಥವ ಯಾವುದೋ ಗಳಿಗೆಯಲ್ಲಿ ನಾವು ಮಾಡಬಹುದಾದ ಅಸಹಜ-ಅಚಾತುರ್ಯದ  ಅನೈಸರ್ಗಿಕ ಚಹರೆಗಳನ್ನು ಕಲೆ ಹಾಕಿ ಅದರಿಂದ ತನ್ನ ಬೇಸರದ ಮನಸ್ಸಿಗೆ ಮನರಂಜನೆ ಪಡೆಯುಲು ಬಯಸುತ್ತಿದ್ದಾನೋ- ಒಂದೂ ತಿಳಿಯದೇ ದಿಗ್ಭ್ರಾಂತರಾಗಿ ನೀರಲಗಿಯವರು ತಮ್ಮ ಕಚೇರಿಗೆ ಕಾಲಿಟ್ಟಾಗ ಹೊಸ ಕಾರಕೂನರು ಅವರನ್ನು ನೋಡಿ ಮುಸು ಮುಸು ನಕ್ಕರು. `ನಾವೇ ಅ ಕ್ಲಿಪಿಂಗ್ಸ್‌ಗಳ ಸೆಲಕ್ಟ್ ಮಾಡಿ ಕಮಿಷನರ್‌ಗೆ ಕೊಟ್ಟಿದ್ದು' ಎಂಬ ಅವರುಗಳ ಪಿಸು ಮಾತು ಕಾದ ಸೀಸದಂತೆ ಅವರ ಕಿವಿ ಹೊಕ್ಕಿತು.

ಅಂದು ರಾತ್ರಿ ನೀರಲಗಿಯವರಿಗೆ ಹಲವು ದುಃಸ್ವಪ್ನಗಳು ಬಿದ್ದವು. ಅಸಂಖ್ಯ ಅಚ್ಛ ಬಿಳಿ ಕುದುರೆಗಳು ಹೇಷಾರವದಿಂದ ಓಡುತ್ತಿವೆ. ಆ  ಕುದುರೆಗಳ ಮೇಲೆ ಜಗದ ಜನರೆಲ್ಲ ಕೂತು ವಾಯುವೇಗದಲ್ಲಿ ಎತ್ತಲೋ ನಾಗಾಲೋಟದಿಂದ ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಕ್ಷಣ ಮಾತ್ರದಲ್ಲಿ ಮಾಯವಾಗುತ್ತಿದ್ದಾರೆ. ದೂಳು ಬಯಲ ತುಂಬುತ್ತಿದೆ. ಹಿಂದಿನಿಂದ ಕಮೀಷನರ್ ರೀತಿಯ ಮನುಷ್ಯರು ಕೈಯಲ್ಲಿ ಸ್ಟಾಪ್ ವಾಚ್‌ಗಳ ಹಿಡಕೊಂಡು `ಓಡಿ, ಇನ್ನೂ ಓಡಿ..' ಎಂದು ಚಾಟಿ ಬೀಸುತ್ತಿದ್ದಾರೆ. ಹಲವರು ಕುದುರೆಗಳಿಂದ ಕೆಳಕ್ಕೆ ಉರುಳುತ್ತಿದ್ದಾರೆ. ಹೀಗೆ ಬಿದ್ದವರ ಮೇಲೆ ಹಿಂದಿನಿಂದ ಬರುವ ಕುದುರೆಗಳು ಅವರ ಎದೆ ಮೇಲೆ ಕಾಲಿಟ್ಟು ಚಿಮ್ಮುತ್ತಿವೆ. ನೀರಲಗಿಯವರು ಒಂದು ಕುದುರೆ ಮೇಲಿದ್ದಾರೆ. ಅದು ಏಕೋ ಮುಂದೆ ಹೆಜ್ಜೆ ಇಡಲೊಲ್ಲದು. ಅವರ ಬೆನ್ನಿಗೆ ಫಟೀರ್ ಎಂಬ ಚಾಟಿ ಏಟು. ತಿರುಗಿ ನೋಡಿದರೆ ಕಮೀಷನರ್... `ಓಡು ಓಡು' ಅನ್ನುತ್ತಿದ್ದಾರೆ. `ಎಲ್ಲಿಗೆ ಸಾರ್' ಅನ್ನಲು- `ಎಲ್ಲಿಗೆ, ಯಾಕೆ ಅಂತ ಕೇಳಿ ಟೈಮ್ ವೇಸ್ಟ್ ಮಾಡಬೇಡ್ರಿ. ಎಲ್ಲರೂ ಓಡ್ತಾ ಇರೋದು ಕಾಣಲ್ಲವಾ? ಓಡಿ'- ಕಮೀಷನರ್ ಅರಚುತ್ತಿದ್ದಾರೆ. ನೀರಲಗಿ ಸಿಟ್ಟಿನಿಂದ ತಮ್ಮ ಕುದುರೆಯ ಪಕ್ಕೆಯನ್ನು ತಿವಿಯುತ್ತಿದ್ದಂತೆ ಒಮ್ಮೆಲೆ ಅದು ತನ್ನ ಎರಡು ಕಾಲ ಮೇಲೆ ನಿಂತು ಆಕಾಶ ಅದುರುವ ಹಾಗೆ ಭೂಮಿ ನಡುಗುವ ಹಾಗೆ ಘೀಳಿಟ್ಟು ನೀರಲಗಿಯವರನ್ನು ನೆಲಕ್ಕೆ ಕೆಡವಿ ಹಂಗೆ ಮಾಯವಾಯಿತು.

ಮುಂಜಾನೆ ಬಯೋಮೆಟ್ರಿಕ್ಸ್ ಮೇಲೆ ಅವರು ತಮ್ಮ ತೋರು ಬೆರಳ ಇಡುತ್ತಿದ್ದಂತೆ ಆ ಕಾಥೆವಾಡದ ಕುದುರೆಯ ಹೇಷಾರವ ಆ ಬಯೋಮೆಟ್ರಿಕ್ಸ್‌ನ ಎದೆಯಿಂದ ತೂರಿ ಬಂದಂತಾಗಿ ನೀರಲಗಿ ನೆಲಕ್ಕುರುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT