ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನ ಆದಿ ಉರಗೋದ್ಯಾನ!

Last Updated 23 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಂಶಪಾರಂಪರ್ಯದಲ್ಲಿ ನೆಲ್ಯಾಡಿಯ ಹಳ್ಳಿಮೂಲೆಯಲ್ಲಿರಬೇಕಾದವ ನಾನು. ಆದರೆ ನನ್ನಪ್ಪ ವಕೀಲರಾಗಿ ಮಂಗಳೂರಿನಲ್ಲಿ ನೆಲೆಸಿದ್ದುದರಿಂದ ನಾನು (1960-70ರ ದಶಕಗಳು) ಅಲ್ಲೇ ಹಳ್ಳಿಮನೆ ಕಂಡುಕೊಂಡೆ. ದನ, ನಾಯಿ, ಬೆಕ್ಕು - ಮನೆಯಲ್ಲಿ ಜನಕ್ಕಿಂತ ಜಾನುವಾರು ಸಂಖ್ಯೆ ದೊಡ್ಡದು! ನಿಯತ ಶಾಲೆಯ ಭೇಟಿ, ಪಾಠ, ಆಟದೊಡನೆ ಹಟ್ಟಿಯ ಸೆಗಣಿ ಬಾಚು, ಹುಲ್ಲು ಹಾಕು ಸೇರಿಕೊಳ್ಳುತ್ತಿತ್ತು.

ಹಿಂಡಿ ಪಾತ್ರೆ ಇಟ್ಟು, ಹಾಲು ಕರೆಯಲು ಸಿಂಧು ಬಾರೇ, ಗಂಗೆ ಬಾರೇ ಹಾಡಬೇಕಿತ್ತು. ಭೀಮ, ಬಸವರ (ಹೋರಿಗಳು) `ವಾಕಿಂಗ್'ಗೆ ಸಾಥಿ ನಾನು. ನಾಯಿ ಕಟ್ಟು, ಬೆಕ್ಕಿಗೆ ಹಾಲಿಡು, ಗೋಡಾಕ್ಟ್ರನ್ನ ನೋಡು'- ತಾಪತ್ರಯಗಳು ಮುಗಿದದ್ದಿಲ್ಲ! ಅಪ್ಪ ವೃತ್ತಿ ಗಾಂಭೀರ್ಯದೊಡನೆ ಹೃದ್ರೋಗಿ; ಇವಕ್ಕೆಲ್ಲ ಕೈ ಮುಟ್ಟಿಸುತ್ತಿರಲಿಲ್ಲ.

 ಇವುಗಳಲ್ಲಿ ಕೆಲವನ್ನು ಒಂದು ಹಂತದವರೆಗೆ ಅಮ್ಮ ನಡೆಸಿದವಳೇ. ಆದರೆ ನಾನು ಪ್ರೌಢಶಾಲೆಯಲ್ಲಿದ್ದಾಗಲೇ ಅವಳಿ ತಮ್ಮಂದಿರ ಅವತರಣದೊಡನೆ ನಾನು ಹೆಚ್ಚು ವಹಿಸಿಕೊಳ್ಳುವುದು ಅನಿವಾರ್ಯವೇ ಆಯ್ತು. ಇದು ಮಂಗಳೂರಿನ ಮೊದಲ ಉರಗೋದ್ಯಾನದ ಮುಖ್ಯ ರೂವಾರಿಗಳಲ್ಲೊಬ್ಬರಾದ (ಇಂದು ಡಾ. ಬಿ.ಕೆ.) ಶರತ್ ಕತೆ.
|
ಆದರೆ ಇಲ್ಲಿ ಗಮನಿಸಬೇಕಾದದ್ದು, ಶರತ್‌ಗೆ ಜೀವವೈವಿಧ್ಯದ ಪ್ರೀತಿ ಮನೆಯಲ್ಲಿ ಸಹಜವಾಗಿಯೇ ಒದಗಿತ್ತು. ಆತ ಮೇಲಿನಿಂದ ಬಯಸಿ ಹತ್ತಿಸಿಕೊಂಡ ಗೀಳು ಮೀನು ಸಾಕಣೆ. ಈ ಎಲ್ಲ `ಪಠ್ಯೇತರ ಚಟುವಟಿಕೆಗಳು' ತಲೆಗೇರಿದ್ದಕ್ಕೇ ಇರಬೇಕು ಆತ ಪಿಯುಸಿಯಲ್ಲಿ ವರ್ಷಕಾಲ ವಿಶ್ರಾಂತಿ ತೆಗೆದುಕೊಳ್ಳುವುದು ಕಡ್ಡಾಯವಾಯ್ತು!

ಅಲೋಶಿಯಸ್ಸಿನಲ್ಲಿ ಅದೇ ಕಾಲದಲ್ಲಿ ಇನ್ನೊಂದೇ ಸೆಕ್ಷನ್ನಿನಲ್ಲಿದ್ದ ಚಾರ್ಲ್ಸ್ ಪಾಲ್ ಆದಿ ಉರಗೋದ್ಯಾನದ ಇನ್ನೋರ್ವ ರೂವಾರಿ. ಇವರಿಗೂ ಪರಿಸರದ ಜೀವವೈವಿಧ್ಯದ ಮೇಲಿನ ಕುತೂಹಲ, ಮೀನ್ಮನೆಯ ಕನಸು ಅಷ್ಟೇ ದಟ್ಟವಿತ್ತು.

ಹಾಗೇ ಈತನೂ ಪಿಯುಸಿಯಲ್ಲಿ ವಿಶ್ರಾಂತಿ ಪಡೆದು, ಮುಂದುವರಿದವರೇ. ಆದರೂ ತಮಾಷೆ ಎಂದರೆ ಇವರಿಬ್ಬರಿಗೆ ಪರಿಚಯ ಬೆಳೆದದ್ದು ಡಿಗ್ರಿಯಲ್ಲಿ ಅಷ್ಟೇ. ಪ್ರಥಮ ಬಿಎಸ್ಸಿಯಲ್ಲಿದ್ದಾಗ ಒಂದು ದಿನ ಯಾರೋ ಎಲ್ಲೋ ಹೇಳಿದ್ದರ ನೆನಪಿನಲ್ಲಿ ಚಾರ್ಲಿ ಗ್ರಂಥಾಲಯದಲ್ಲಿ `ಶರತ್ ಎಂದರೆ ನೀನೇನಾ? ನೀನೂ ಮೀನು ಸಾಕ್ತಿಯಾ?' ಎಂದು ಗೆಳೆತನಕ್ಕೆ ಪೀಠಿಕೆ ಹಾಕಿದ್ದು ಈಗಲೂ ಶರತ್‌ಗೆ ನಿಚ್ಚಳ ನೆನಪು. ಅಂದು ಇವರ ನಡುವೆ ಬಿದ್ದ ಅವಳಿತನದ ಬೆಸುಗೆ ಇಂದಿಗೂ ಉಳಿದಿದೆ!

ಕಾಲೇಜು ಮ್ಯೂಸಿಯಮ್ಮಿನಲ್ಲಿ ಚಿಪ್ಪು, ಶಂಖಗಳ ಅಪಾರ ಸಂಗ್ರಹವಿತ್ತು. ಅವುಗಳ ಪರಿಚಯ, ಲಕ್ಷಣ ತಿಳಿಯಲು ಈ ತರುಣರು ಅಲ್ಲಿ ಮೂಗು ತೂರಿದರು. ಹಾಗೇ ಇತರ ಪ್ರಾಣಿ ಪಕ್ಷಿಗಳ ಬಗ್ಗೆಯೂ ತಮ್ಮ ಕುತೂಹಲದ ಕಡಲಿನಲ್ಲಿ ಏಳುತ್ತಿದ್ದ ಸಂಶಯದ ಅಲೆಗಳಿಗೆ ನೆಚ್ಚಬಹುದಾದ ದಂಡೆಯಾಗಿಯೂ ಈ ಮ್ಯೂಸಿಯಂ ಅವರಿಗೆ ಒದಗುತ್ತಿತ್ತು.

ಆಗ ಅಲ್ಲೊಬ್ಬ `ಮಾಂತ್ರಿಕ'- ಫಾದರ್ ಅಲ್ಫಾನ್ಸೋ, ಆತ್ಮೀಯತೆ ಲಭಿಸಿದ್ದು ಇವರಿಗೆ ಹೆಚ್ಚಿನ ಲಾಭ. ಕಾಲೇಜಿನ ಉಪಪ್ರಾಂಶುಪಾಲ ಅಲ್ಫಾನ್ಸೋ ಲೆಕ್ಕಕ್ಕೆ ಸಮಾಜಶಾಸ್ತ್ರದ ಅಧ್ಯಾಪಕ. ಆದರೆ ವಿದ್ಯಾರ್ಥಿ ಪ್ರೀತಿ, ತಿಳಿವಳಿಕೆಯ ಹರಹು ಇವರನ್ನು ಸದಾ ಚಟುವಟಿಕೆಗಳ ಉತ್ತುಂಗದಲ್ಲಿಟ್ಟಿತ್ತು, ಮ್ಯೂಸಿಯಮ್ಮಿನ ನಿರ್ದೇಶಕನನ್ನಾಗಿಯೂ ಕೂರಿಸಿತ್ತು.

ಅಲ್ಫಾನ್ಸೋ ಒಂದು ದಿನ (1978-79) ಮ್ಯೂಸಿಯಮ್ಮಿನಲ್ಲಿ, ರಾಸಾಯನಿಕ ದ್ರವಗಳಲ್ಲಿ ಮುಳುಗಿಸಿಟ್ಟ ಅಸಂಖ್ಯ ಉರಗ ಮಾದರಿಗಳನ್ನು ಈ ಜೋಡಿಗೆ ತೋರಿಸಿದರು. ಹಿಂದಿನ ಓರ್ವ ಪಾದ್ರಿ, ಹಗಲು ಬೆವರು ಹರಿಸಿ, ರಾತ್ರಿ ನಿದ್ದೆಗೆಟ್ಟು ನಡೆಸಿದ್ದ ಅಪೂರ್ವ ಸಂಗ್ರಹ.

ಆದರೆ ಉತ್ತರಾಧಿಕಾರಿಗಳ ಉಪೇಕ್ಷೆಯಲ್ಲಿ ಆ ಗಾಜಿನ ಬಾಟಲಿಗಳ ಮೇಲೆ ಆತ ಶ್ರದ್ಧೆಯಿಂದ ಬರೆದು ಅಂಟಿಸಿದ್ದಿರಬಹುದಾದ ಗುರುತು ಚೀಟಿ, ಟಿಪ್ಪಣಿಗಳೆಲ್ಲ ಮಾಸಿಯೋ ಕಳೆದೋ ಹೋಗಿ, ದೂಳು ಬಲೆ ಸೇರಿ ಒಂದು ಲೆಕ್ಕದಲ್ಲಿ ಅನಾಥವೇ ಆಗಿದ್ದವು. ತರುಣರಿಬ್ಬರು ಕೂಡಲೇ ಸಹಜ ಪ್ರೀತಿಯಿಂದ `ಕ್ಲೀನರ್ಸ್' ಮತ್ತು ಕುತೂಹಲದಿಂದ `ಸಂಶೋಧಕರೂ' ಆದರು.

ಆ ಹಾವು ಮಾದರಿಗಳ ಸಂಗ್ರಹ ಸಾಕಷ್ಟು ದೊಡ್ಡದೇ ಇತ್ತು. ಬಣ್ಣಗುಂದಿ, ಕೊರಡುಗಟ್ಟಿದ ಮಾದರಿಗಳನ್ನು ನಿಖರವಾಗಿ ಗುರುತಿಸುವುದು ಇವರು ಯೋಚಿಸಿದಷ್ಟು ಸರಳವಾಗಲಿಲ್ಲ. ಪಠ್ಯ ಪುಸ್ತಕದ ಬದನೆಕಾಯಿ ಮಾತ್ರ ಕೊಚ್ಚುತ್ತಿದ್ದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕರು ಉಪಯೋಗಕ್ಕೆ ಒದಗಲಿಲ್ಲ.

ನೆನಪಿರಲಿ, ಅವು ವರ್ಣಮಯ ಭಾರೀ ಆಕರ ಗ್ರಂಥಗಳು, ಏನು ಕೇಳಿದರೂ ಪುಟಗಟ್ಟಳೆ ಮಾಹಿತಿ, ಚಿತ್ರ, ವಿಡಿಯೊದಲ್ಲಿ ಚಲನೆಯನ್ನೂ ಕೊಡುವ ಅಂತರಜಾಲದ ದಿನಗಳಲ್ಲ. ಆದರೆ ಇವರು ಸವಾಲಿನ ಕೈಚೆಲ್ಲಲಿಲ್ಲ. ಉಚ್ಚಿನ (ತುಳುವಿನಲ್ಲಿ ಹಾವು) ಹುಚ್ಚು ತಮ್ಮ ಸಂಪರ್ಕದಲ್ಲೆಲ್ಲಾ ಹೆಚ್ಚಿಸಿದರು. ಆಗ ಪ್ರಯೋಗಾಲಯ ಸಲಕರಣೆ ಮಾರುವ ಒಂದು ಖಾಸಗಿ ಮಳಿಗೆಯಲ್ಲಿ ಆಶಾದೀಪ ಕಾಣಿಸಿತು.

ಅಲ್ಲಿಗೆ ಆಗಾಗ ಹಾವುಗಳ ಮಾದರಿ ಕೆಡದಂತುಳಿಸಿಕೊಳ್ಳಲು ಬೇಕಾಗುವ ರಾಸಾಯನಿಕ, ಗಾಜಿನ ಬಾಟಲು ಖರೀದಿಸುವವರೊಬ್ಬರು ಬರುತ್ತಿದ್ದ ಸಮಾಚಾರದ ಎಳೆ ಹಿಡಿದು ಮುಂದುವರಿದರು. ಇವರಿಗೆ ಸಿಕ್ಕವರು ಫರಂಗಿಪೇಟೆಯ ಕ್ರಿಸ್ತ ಸೋದರ ಓಡ್ರಿಕ್ ದೇವಾನಂದ. ಊರಿನ ಧರ್ಮಭೀರುಗಳ ಪಾದ್ರಿ ಓಡ್ರಿಕ್ ದೇವಾನಂದ, ಶರತ್, ಚಾರ್ಲಿಯರಿಗೆ `ಉರಗ ಗುರು!'. 

ಓಡ್ರಿಕ್ ಸಾಮಾಜಿಕ ಅಗತ್ಯವಾಗಿ ಮತ್ತೆ ಶುದ್ಧ ಹವ್ಯಾಸವಾಗಿ ಸ್ವಂತ ಓದು ಮತ್ತು ಪ್ರಯೋಗಗಳಿಂದ ಹಾವುಗಳನ್ನು ಗುರುತಿಸಲು, ಹಿಡಿಯಲು ಕಲಿತಿದ್ದರು. ಮುಂದುವರಿದು ಗುರುತು ಹಚ್ಚಲು ಮಾಹಿತಿ (ಜಿಛ್ಞಿಠಿಜ್ಛಿಜ್ಚಿಠಿಜಿಟ್ಞ ಛಿ) ಪಟ್ಟಿ, ಅಧ್ಯಯನಕ್ಕೆ ಜೀವಂತ ಹಾವುಗಳ ಸಂಗ್ರಹ, ಸ್ವಾಭಾವಿಕವಾಗಿ ಸತ್ತವುಗಳನ್ನೂ ವೈಜ್ಞಾನಿಕವಾಗಿ ಬಾಟಲಿಗಳಲ್ಲಿ ಕಾಪಿಟ್ಟುಕೊಳ್ಳುವುದು ನಡೆಸಿದ್ದರು.

ಸನ್ಯಾಸಿ ಉರಗ ಸಂಸಾರವನ್ನೇ ಕಟ್ಟಿಕೊಂಡಿದ್ದರು! ಅವರ ಪ್ರೀತಿ ಮತ್ತು ನಿರ್ಮಮ ಜ್ಞಾನದ ಹೊಳೆಯಲ್ಲಿ ಮುಳುಗಿದ ಶರತ್ ಮತ್ತು ಚಾರ್ಲಿಯರಿಗೆ ಜೀವವೈವಿಧ್ಯದ ಹತ್ತೆಂಟು ಶಾಖೆಗಳಲ್ಲಿ ಹಂಚಿಹೋಗಿದ್ದ ಕುತೂಹಲವೆಲ್ಲಾ ಹಾವುಗಳ ಮೇಲೆ ಕೇಂದ್ರೀಕರಿಸಿತು.

ಓಡ್ರಿಕ್ ಮೊದಮೊದಲು ವಿಷದ ಹಾವುಗಳನ್ನು ಹುಡುಗರ ಕೈಗೆ ಕೊಡಲೇ ಇಲ್ಲ. “ವಿಷದ ಹಾವು ಅಂದ್ರೇ ಸಜೀವ ವಿದ್ಯುತ್ ತಂತಿಯ ಹಾಗೆ. ಸರಿಯಾದ ಹೊದಿಕೆ ಇದ್ರೆ ಸರಿ. ಆದರೂ ಒಳಗೆ ಯಾವತ್ತೂ ಮಾರಣಾಂತಿಕ!” ಅವರು ನಾಗರ ಹಾವಿನ ಪಂಜರ ಚೊಕ್ಕಟ ಮಾಡುವಾಗ ಇವರನ್ನು ದೂರದಲ್ಲಿ ನಿಲ್ಲಿಸಿ ಬಿಡುತ್ತಿದ್ದರು.

 ಒತ್ತಾಯ ಮಾಡಿದರೆ, ಇವರಿಗೆ ವಿಷರಹಿತ ಹಾವುಗಳ ಗೂಡುಗಳನ್ನು ಚೊಕ್ಕಟಮಾಡಲು ಮಾತ್ರ ಅವಕಾಶ. ಕೆಲವು ವಾರಗಳ ಮೇಲೊಂದು ದಿನ ಇವರಿದ್ದಾಗಲೇ ಇಗರ್ಜಿಯ ತೋಟದೊಳಗಿಂದ ಬೊಬ್ಬೆ ಕೇಳಿಸಿತು “ಹಾವು ಹಾವೂ”. ಓಡ್ರಿಕ್ ಜೊತೆಯಲ್ಲಿ ಇವರೂ ಓಡಿದರು.

ಆದರೆ ಕೆಲಸದವರು ಕಂಡದ್ದೊಂದು ಪಗಲೆ - ವಿಷರಹಿತ ಹಾವು (ಸ್ಟ್ರೈಪ್ಡ್ ಕೀಲ್ ಬ್ಯಾಕ್). ಓಡ್ರಿಕ್ ಅದನ್ನು ಬರಿಗೈಯಲ್ಲೇ ಹಿಡಿದು, ಎಡ ಅಂಗೈ ಮೇಲಿಟ್ಟು ಬಲ ಹಸ್ತವನ್ನು ಅರಳಿಸಿ, ಮೋಡಿ ಮಾಡುವವರಂತೆ ಆಡಿಸತೊಡಗಿದರು (ಪರಿಚಯ ಇಲ್ಲದವರು ಪಾದ್ರಿ `ಶಪಿತ ಗಂಧರ್ವ'ನನ್ನು ಹರಸುತ್ತಿದ್ದಾರೋ ಎಂದು ಭಾವಿಸಬೇಕು!). ಹಾವು ಬೇಗನೆ ಶಾಂತವಾಯ್ತು. ಮತ್ತೆ ಅದನ್ನು ಹುಡುಗರ ಕೈಗೊಪ್ಪಿಸಿದಾಗ ಇಬ್ಬರಿಗೂ ಧನ್ಯತೆ - ಶುದ್ಧ ವನ್ಯದಿಂದ ಮೊದಲ ಹಾವನ್ನು ಜೀವಂತ ಕೈಯಲ್ಲಿ ಹಿಡಿದಿದ್ದರು.

ಹಾಗೇ ಮತ್ತೊಂದು ದಿನ ಬಂದ ಕರೆಯನ್ನನುಸರಿಸಿ ಓಡ್ರಿಕ್ ಎಕ್ಕೂರು ಬಳಿಯ ಪುಟ್ಟ ಮನೆಯೊಂದಕ್ಕೆ ಹೋಗುವಾಗ ಶರತ್‌ರನ್ನೂ ಕರೆದೊಯ್ದರಂತೆ. ಆ ಮನೆಯಲ್ಲಿ ಯಾರೂ ಬಯಸದ ಅತಿಥಿ - ಒಂದು ನಾಗರಹಾವು, ಅಡುಗೆಮನೆ ಆಕ್ರಮಿಸಿತ್ತು. ಮನೆಯವರೆಲ್ಲಾ ಅಂಗಳದಲ್ಲಿದ್ದರು.

ಓಡ್ರಿಕ್ ಶರತ್‌ರನ್ನು ದೂರ ನಿಲ್ಲಿಸಿ, ಸಿಮೆಂಟ್ ಹಾಕಿ ಗಟ್ಟಿ ಮಾಡದ ಸ್ಲ್ಯಾಬನ್ನು ಮೆಲ್ಲಗೆ ಸರಿಸಿದರು. ಕೆಳಗಿನ ಸಂದಿನಲ್ಲಿದ್ದ ನಾಗರಾಜ ಬುಸ್ಸೆಂದು ತಲೆ ಎತ್ತಿ ಹೆಡೆಯರಳಿಸಿದ. ಆದರೆ ಇವರು ಸಮಾಧಾನದಲ್ಲಿ ಅದರೊಡನೆ ಮಾತಾಡುತ್ತಾ ತಾವು ತಂದಿದ್ದ ತುದಿ ಡೊಂಕಿನ ಕೋಲಿನಲ್ಲಿ ಮೆಲ್ಲನೆ ಅದರ ತಲೆಯನ್ನು ನೆಲಕ್ಕೆ ಒತ್ತಿಟ್ಟು, ಜಾಣ್ಮೆಯಲ್ಲಿ ಕೈಗೆ ತಂದುಕೊಂಡರು. ಕೆಲವೇ ಮಿನಿಟುಗಳಲ್ಲಿ ಅವರು ಅದಕ್ಕಾಗಿಯೇ ಒಯ್ದಿದ್ದ ಚೀಲದೊಳಕ್ಕೂ ಸೇರಿಸಿದರು.

ಮುಂದಿನ ದಿನಗಳಲ್ಲಿ ತರುಣ ಶಿಷ್ಯರಿಗೆ ಹಾವು ಹಿಡಿಯುವ ಕೊಕ್ಕೆ ಮತ್ತು ಚೀಲ ಮಾಡುವುದು ಒಂದು ಗಿರವೇ ಆಗಿತ್ತಂತೆ. ಇನ್ನೂ ತಮಾಷೆ ಎಂದರೆ ಚಾರ್ಲಿಗೆ ತೀರಾ ಈಚಿನವರೆಗೂ ಹಾವು ಹಿಡಿಯುವ ಕೊಕ್ಕೆ ಮಾಡುವುದು ಕಳಚಲಾಗದ ಹವ್ಯಾಸವೇ ಆಗಿತ್ತಂತೆ!

ಓಡ್ರಿಕ್ ವರ್ಗಾವಣೆ, ಬಯಸದೇ ಬಂದ ಭಾಗ್ಯ! ಇದ್ದಕ್ಕಿದ್ದಂತೆ ಒಂದು ದಿನ ಓಡ್ರಿಕ್ ಅವರಿಗೆ ಮುಂಬೈಗೆ ವರ್ಗಾವಣೆ ಎಂಬ ಬಲು ಬೇಸರದ ಸಮಾಚಾರ ಬಂತು. ಪಾದ್ರಿಗೆಲ್ಲಿಯ ಬಂಧನ - ತಿಂಗಳೊಳಗಾಗಿ ತಮ್ಮೆಲ್ಲ ಉರಗ ಸಂಗ್ರಹ, ಗೂಡುಗಳನ್ನು ವಿಲೇವಾರಿ ಮಾಡಿಯೇ ಹೊರಡಲು ಯೋಚಿಸಿದ್ದರು.

ಶರತ್ ಮತ್ತು ಚಾರ್ಲಿಗೆ ಯೋಚನೆಯೂ ಮಾಡದ ಸಾಹಸದ ದ್ವಾರ ತೆರೆದಿತ್ತು. ಓಡ್ರಿಕ್‌ರ ಉರಗ ಸಂಗ್ರಹವನ್ನೆಲ್ಲಾ ಯಾವ ಪೂರ್ವಾನುಭವ, ಸಾಂಪತ್ತಿಕ ಬಲ (ಜನ, ಸ್ಥಳ ಮತ್ತು ಹಣ) ಇಲ್ಲದೆಯೂ ವಹಿಸಿಕೊಳ್ಳುವ, ಮುಂದುವರಿಸುವ ಭರವಸೆ ಕೊಟ್ಟರು! ಒಮ್ಮೆ ಫರಂಗಿಪೇಟೆಗೆ ಹೋಗಿಬರಲು ಬಸ್ ವೆಚ್ಚಕ್ಕೂ ಲೆಕ್ಕ ಹಾಕುವ ಸ್ಥಿತಿಯವರು ಜೀವಂತ ಉರಗ ಸಂಗ್ರಹವನ್ನು ಮಂಗಳೂರಿಗೆ ಸಾಗಿಸಿ, ನೋಡಿಕೊಳ್ಳುವ ಮಾತು ಕೊಟ್ಟಾಗಿತ್ತು; ಹಾರಿ, ಆಳ ನೋಡುವ ಕ್ರಮ! ವಿಷಯ ಸಣ್ಣದಲ್ಲ- ಕೆಲವು ಹೆಬ್ಬಾವು, ಏಳು ನಾಗರಹಾವು, ಮೂರು ರಸೆಲ್ಸ್ ವೈಪರ್, ಐದು ಮರಳು ಹಾವು, ಒಂದು ಹಸುರು ಹಾವು, ಒಂದು ಸಾಸ್ಕೇಲ್ ವೈಪರ್, ಎರಡು ಕೇರೇ ಹಾವು ಇತ್ಯಾದಿ. ಇಗರ್ಜಿಯ ಕೊಟ್ಟಿಗೆಯೊಂದರಲ್ಲಿ ತುಂಬಿಕೊಂಡಿದ್ದ ಅಷ್ಟೂ ಪಂಜರ, ಗೂಡುಗಳನ್ನು ಹುಡುಗರಿಬ್ಬರು ತಿಂಗಳೊಳಗಾಗಿ ಮಂಗಳೂರಿನ ಹೊಸದೇ ಆಶ್ರಯಕ್ಕೆ ಸಾಗಿಸಲೇಬೇಕಿತ್ತು.

ತರುಣರಿಬ್ಬರ ಮನೆಗಳಲ್ಲಿ ಹಾಗೇ ಭಾರೀ ಪ್ರತಿರೋಧವಿತ್ತು. `ಈ ವಿಷ ಜಂತುಗಳನ್ನೆಲ್ಲಾ ಮಕ್ಕಳಿಗೆ ಯಾಕೆ ಬಿಡುದು? ನಾವೆಲ್ಲಾ ಶಾಲೆ ಕಾಲೇಜು ಮಾಡಿಲ್ಲವಾ?' (ಅಷ್ಟರ ಮಟ್ಟಿಗೆ ಇವರಿಗೆ ಅಲ್ಫಾನ್ಸೋ ರಕ್ಷೆ ಸಿಗುತ್ತಿತ್ತು.) ವಿಷವಿಲ್ಲದ ಹಾವುಗಳನ್ನೇ ಒಮ್ಮಮ್ಮೆ ಕದ್ದು, ಮುಚ್ಚಿ ಒಯ್ದದ್ದು ಮನೆಗಳಲ್ಲಿ ಪ್ರಕಟವಾದರೆ ರಾಮಾಯಣವಾಗುತ್ತಿತ್ತು. ಈಗ ಎಲ್ಲ ಬಿಟ್ಟು ಬಹುಸಂಖ್ಯೆಯಲ್ಲಿ ನಾಗಲೋಕವನ್ನೇ ಹಿತ್ತಿಲಿನಲ್ಲಿ ಬಿಡಾರ ಹೂಡಿಸುವ ಮಾತು ಎತ್ತುವಂತೇ ಇರಲಿಲ್ಲ.

ಹುಡುಗರಿಗೆ ಮೊದಲು ಹೊಳೆದ ಸ್ಥಳ ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿವಿಜ್ಞಾನ ವಿಭಾಗ. ಅಲ್ಲಿ ಅನಿವಾರ್ಯವಾಗಿ ನಾಮಕಾವಸ್ಥೆ ಕೆಲವು ಜೀವಿಗಳೇನೋ (ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಇಲಿ, ಜಿರಳೆ, ಹಲ್ಲಿಗಳಲ್ಲದೆ) ಇದ್ದವು. ಆದರೆ ವಿಭಾಗ ಮುಖ್ಯಸ್ಥರಿಗೆ ಹೆಚ್ಚಿನ ಜವಾಬ್ದಾರಿ ಬೇಕಿರಲಿಲ್ಲ. ಅಲ್ಫಾನ್ಸೋ ಕೂಡಾ ಏನೂ ಮಾಡಲಾಗಲಿಲ್ಲ. ಶರತ್ ಅಲೋಶಿಯಸ್ ಪ್ರೌಢಶಾಲೆಯಲ್ಲಿದ್ದಾಗ ಆತನ ಆಸಕ್ತಿಗಳನ್ನು ಗಮನಿಸಿ, ಬೆಂಬಲಿಸಿದವರು ವಿಜ್ಞಾನ ಅಧ್ಯಾಪಕ ಫಾ ಎಲ್. ಪಿಂಟೋ. ಅದೇ ಹುಡುಗ ಬೆಳೆದು, ಕಲಿಕೆಯಲ್ಲಿ ದೊಡ್ಡ ಕೆಲಸ ಮಾಡುತ್ತಾನೆಂದರೆ? ಪಿಂಟೋ ಈ ಹೊತ್ತಿಗೆ ಅದೇ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.

ಶಾಲಾ ವಠಾರದೊಳಗೆ ಒಂದು ಹಳೆಯ ಕೆಂಪು ಕಟ್ಟಡ `ರೆಡ್ ಬಿಲ್ಡಿಂಗ್' ಅಂತಲೇ ಖ್ಯಾತ, ಶಿಥಿಲಾವಸ್ಥೆಗೆ ತಲಪಿದ್ದರಿಂದ ಹೆಚ್ಚು ಬಳಕೆಯಲ್ಲಿರಲಿಲ್ಲ. ಶರತ್ ಅದನ್ನು ತತ್ಕಾಲೀನ ನೆಲೆಯಾಗಿ ಬಯಸಿದಾಗ ಸಹೃದಯಿ ಪಿಂಟೋ ಒಪ್ಪಿದರು. ಒಂದೇ ನಿಬಂಧನೆ -ಕನಿಷ್ಠ ಒಂದು ವರ್ಷದೊಳಗೆ ಜಾಗ ಖಾಲಿ ಮಾಡಬೇಕು. (ಇಲ್ಲವಾದರೆ ಕಟ್ಟಡವನ್ನೇ ತೆಗೆಸುವವರಿದ್ದರು.)

ಹಾವುಗಳನ್ನು ರೆಡ್ ಬಿಲ್ಡಿಂಗಿಗೆ ಸಾಗಿಸಿದ ಸಾಹಸವನ್ನು ಶರತ್‌ನ ಮಾತಿನಲ್ಲೇ ಕೇಳಿ. `ಓಡ್ರಿಕ್ಕರಿಗೊಬ್ಬ ಬಾಡಿಗೆ ಕಾರಿನ ಗೆಳೆಯನಿದ್ದ - ಜೋಸೆಫ್. ಇಲ್ಲದೇ ಹೋದರೆ, ಬರಿಯ ಬಾಡಿಗೆ ಮುಖ ನೋಡುವ ಯಾವ ಕಾರಿನವನೂ ಜುಜುಬಿ ಇಪ್ಪತ್ತು ಕಿ.ಮೀ.ಯ ಒಂದು ಓಟಕ್ಕೆ ಸ್ವಂತ ಕಾರನ್ನು ಹಾಳು ಮಾಡಿಕೊಂಡು, ಇಡೀ ದಿನ ಇಬ್ಬರು ಹುಡುಗರೊಡನೆ ಖಂಡಿತಾ ಒದ್ದಾಡುತ್ತಿರಲಿಲ್ಲ. ಮಳೆಗಾಲದ ದಿನ ಬೇರೆ. ಓಡ್ರಿಕ್ ಹೆಚ್ಚಿನ ಭದ್ರತೆಗಾಗಿ ಪ್ರತಿ ಹಾವನ್ನು ಗೂಡುಗಳೊಳಗೇ ಪ್ರತ್ಯೇಕ ಚೀಲಗಳಲ್ಲಿ ತುಂಬಿಸಿಟ್ಟಿದ್ದರು.

ಇನ್ನು ಗೂಡುಗಳೋ ವಿಚಿತ್ರ ಆಕಾರಗಳವೂ ಭಾರದವೂ ಇದ್ದವು. ಅವನ್ನು ಎತ್ತಿ, ನೂಕಿ ಕಾರಿಗೆ ತುಂಬಲು ಮಠದಲ್ಲಿ ಕೈಗಳು ಧಾರಾಳವೇ ಇತ್ತು. ಟಾಪಿನಲ್ಲಿ, ಡಿಕ್ಕಿಯಲ್ಲಿ, ಹಿಂದಿನ ಸೀಟು ತೆಗೆದ ಜಾಗದಲ್ಲಿ, ಮುಂದಿನ ಮುಕ್ಕಾಲಾಸನದ ಮೇಲೆ, ಕೊನೆಗೆ ಸಣ್ಣ ಒಂದೆರಡನ್ನು ಬಾನೆಟ್ ಮೇಲಕ್ಕೂ ಹೇರಿದ್ದಾಯ್ತು. ಈ ಭರದಲ್ಲಿ ಜೋಸೆಫ್ ಕಾರೊಳಗೆ ತಮ್ಮ ಮತ್ತು ನಮ್ಮಿಬ್ಬರ ಸ್ಥಾನ ಮರೆತೇ ಬಿಟ್ಟಿದ್ದರು.

ಆದರೆ ಆ ದಿನಗಳ `ಸರ್ವಿಸ್ ಕಾರು'ಗಳ ಚಾಲಾಕಿ ಎಲ್ಲವನ್ನು ಮೈಗೂಡಿಸಿಕೊಂಡ ಜೋಸೆಫ್, ಚಾರ್ಲಿಯನ್ನು ಎದುರು ಸೀಟಿನ ಕಾಲಿಡುವ ಜಾಗಕ್ಕೆ ನುಗ್ಗಿಸಿ, ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳಲು ಸೂಚಿಸಿ, ಬಾಗಿಲು ಜಡಿದ. ಮತ್ತೆ ಸ್ವಂತದ ವ್ಯವಸ್ಥೆ. ಒಂದು ಟವೆಲ್ ಗಂಟು ಹಾಕಿ ಅರ್ಧ ತೆರೆದ ಚಾಲಕನ ಬಾಗಿಲಿಗೂ ನಡುದಂಡೆಗೂ ಸಡಿಲ ಬಳೆ ಕಟ್ಟಿದ.

ಆ ಸಂದಿನಲ್ಲಿ ತೂರಿ, ಅರ್ಧ ಅಂಡು ಸೀಟಿನ ಅಂಚಿಗೆ ಮುಟ್ಟಿದಂತೆ ಇಟ್ಟು, ಉಳಿದಷ್ಟೂ ಭಾರವನ್ನು ಬಾಗಿಲ ಮೇಲೆ ಹಾಕಿ ಕಾರು ಹೊರಡಿಸಿಯೇ ಬಿಟ್ಟ. ಹೊರಗುಳಿದ ನಾನು ಹೆದ್ದಾರಿ ತಲಪುವವರೆಗೆ ಕಾರು ಹಿಂದೆ ಜಾರಿದರೆ `ಕಟ್ಟೆ ಮಾಸ್ಟರ್'. ಗೊಸರಿನಲ್ಲಿ ಹೂಳಿದರೆ `ಒರ ಕೈಸೇರಲೇ ಅಣ್ಣ' ತಂಡಕ್ಕೆ ನಾಯಕ.

ಅಸಾಮಾನ್ಯ ಭಾರ, ನಿಧಾನಿಸಿದರೆ ಚಕ್ರ ಹೂತು ಹೋಗುವ ಭಯ ಎಲ್ಲ ಪರಿಗಣಿಸಿ ಕೊನೆಯ ದಿಣ್ಣೆಯನ್ನಂತೂ ಜೋಸೆಫ್ ಬಹಳ ಚಾಕಚಕ್ಯತೆಯಲ್ಲೇ ಏರಿಸಿಬಿಟ್ಟರು.

ದಡಕ್ಕೆಂದು ಅದು ದಾರಿ ತಲಪಿದ ರಭಸಕ್ಕೆ ಒಂದು ಬಾಗಿಲೇ ಕಳಚಿಬಿದ್ದಿತ್ತು! ಬಾಗಿಲನ್ನು ಸ್ವಸ್ಥಾನಕ್ಕೆ ಸೇರಿಸಿ ಹಗ್ಗದಲ್ಲಿ ಕಟ್ಟಿ, `ರೈಟ್, ಕುಡ್ಲಗ್ ಪೋಯ್' ಎನ್ನುವಾಗ ಕುಂಭದ್ರೋಣ ಮಳೆ, ಸಂಜೆಗತ್ತಲು ಜೊತೆಕೊಟ್ಟವು! (ನಾನು ಇನ್ನೊಂದೇ ಸರ್ವೀಸ್ ಕಾರ್ ಹಿಡಿದು ಬೆನ್ನು ಹತ್ತಿದೆ). ಜೋಸೆಫ್ ಗಾಡಿಗೆ ವೈಪರ್ ಇಲ್ಲ, ಹೆದ್ದೀಪವೂ ಇಲ್ಲ. ಸಾಲದ್ದಕ್ಕೆ ಅರ್ಧ ಬಾಗಿಲು ತೆರೆದದ್ದಕ್ಕೆ ಮಳೆಯಲ್ಲಿ ಸಚೇಲ ಸ್ನಾನ.

ಅದರಲ್ಲೂ ಲಾಭವಿತ್ತು! ಬಾಗಿಲ ಸಂದಿನಿಂದ ದಾರಿಯ ಸ್ಪಷ್ಟ ಚಿತ್ರ ಪಡೆದು ಜೋಸೆಫ್ ಕಾರು ನನಗೂ ಮೊದಲೇ ಅಲೋಶಿಯಸ್ಸ್ ತಲುಪಿತ್ತು. ಸಾಕಷ್ಟು ಕುಲುಕಿ ಹೋಗಿದ್ದರೂ ಚಂಡಿಯಾಗಿದ್ದರೂ ಚಾರ್ಲಿಯೂ ಗೂಡುಗಳೊಳಗಿನ ನಮ್ಮ ಗೆಳೆಯರು ಸುರಕ್ಷಿತವಾಗಿದ್ದರು. ಈಗ ಎಲ್ಲಕ್ಕೂ ನಾವು ಮೂರೇ ಜನ.

ಅವನ್ನೆಲ್ಲ ಬರಿದೇ ಕಾರಿನಿಂದ ಇಳಿಸುವುದಕ್ಕೆ ಎರಡು ಗಂಟೆ. ರೆಡ್ ಬಿಲ್ಡಿಂಗಿನ ಮೊದಲ ಮಹಡಿಗೆ ಕುತ್ತ ಏಣಿಯಲ್ಲಿ ಏರಿಸಿದ ಕೆಲಸ ನೆನೆಸುವಾಗ ಇಂದೂ ಸೊಂಟ ನೋವು ಬರುತ್ತದೆ. ಅನುಭವ ಇಲ್ಲ, ಯೋಜನೆ ಇಲ್ಲ ಆದರೂ ಕನಸದ ನಿಧಿ ನಮ್ಮಲ್ಲಿತ್ತು ಎಂಬ ಸಂಭ್ರಮ ಯೋಚಿಸುವಾಗ ಇಂದೂ ಎದೆ ತುಂಬಿ ಬರುತ್ತದೆ.

ಈಗ ತಿಂಗಳ ಗಡುವಿನ ಫರಂಗಿಪೇಟೆ ಗೆದ್ದವರಿಗೆ, ವರ್ಷದ ನೆಲೆ - ರೆಡ್ ಬಿಲ್ಡಿಂಗ್, ಮೀರುವ ಚಿಂತೆ. ಶರತ್ ಪೂರ್ವಪರಿಚಯದ ಬಲದಲ್ಲಿ ಮಂಗಳೂರು ಮೇಯರ್ ಭೇಟಿ ನಡೆಸಿದರು. ಅವರು ಹಾವುಗಳ ಬಗ್ಗೆ ಉದ್ದುದ್ದ ಮಾತುಗಳನ್ನು ಕೇಳಿಸಿಕೊಂಡದ್ದಷ್ಟೇ ಲಾಭ. ಶರತ್ ಭಾರೀ ನಿರಾಶೆಯಲ್ಲಿ `ಜಂಗಲ್' ಸೇರಿದ್ದರಂತೆ! (ಕ್ಷಮಿಸಿ, ಈತನ ಜಂಗಲ್ಲು ಅಲೋಶಿಯಸ್ ವಠಾರದ ಅಂಚಿನಲ್ಲಿದ್ದ, ಕಾರ್ನಾಡ್ ಗ್ರಂಥಾಲಯದ ಹಿಂದೆ, ಇಂಗ್ಲಿಷಿನ `ಎಲ್' ಆಕಾರದಲ್ಲಿರುವ ನಾಲ್ಕು ಮರ, ಎಂಟು ಪೊದರಿನ ಪುಟ್ಟ ವಠಾರ ಮಾತ್ರ) ಅಲ್ಲಿ ಸಹಪಾಠಿ ಗೆಳೆಯರಾದ ಅಡಪ್ಪ ಮತ್ತು ಉಮಾಶಂಕರ ಸಿಕ್ಕಿದರು.

ಅವರು ತಮ್ಮ ಇಂಗ್ಲಿಷ್ ಮೇಷ್ಟ್ರು- ಸನ್ನಿ ತರಪ್ಪನ್ ಹೆಸರು ನೆನಪಿಸಿದರು. ಸನ್ನಿ ತರಪ್ಪನ್ ಒಳ್ಳೆಯ ಅಧ್ಯಾಪಕ ಮಾತ್ರವಲ್ಲ, ಹತ್ತೆಂಟು ಹವ್ಯಾಸಗಳ ಚಟುವಟಿಕೆಯ ವ್ಯಕ್ತಿ. ಅಪಾರ ಪಶುಪಕ್ಷಿಗಳ ಬಗ್ಗೆ ಒಲವಿನ ಮನುಷ್ಯ. ಸಹಜವಾಗಿ ಶರತ್ ಚಾರ್ಲಿಯ ಮಾತುಗಳನ್ನು ಧಾರಾಳ ಕೇಳಿದರು. `ಆದರೂ ಹಾವುಗಳು ಬೇಕೇ' ಎನ್ನುವುದು ಅವರಲ್ಲಿ ಪಲ್ಲವಿಯಾಗುವ ಹಂತದಲ್ಲಿ ಶರತ್ ಕಿಸೆಯಲ್ಲಿ ಬಲು ಎಚ್ಚರದಿಂದ ಇಟ್ಟುಕೊಂಡಿದ್ದ ಮರಳು ಹಾವೊಂದನ್ನು (ಸ್ಯಾಂಡ್ ಬೋವಾ - ನಿರ್ವಿಷ) ತೆಗೆದರಂತೆ. ಅದುವರೆಗೆ ಹಾವುಗಳ ಪರಿಚಯವಾಗಲೀ ಮುಟ್ಟುವುದಾಗಲೀ ಮಾಡದ ಸನ್ನಿ, ಬಲು ಬೇಗನೆ ಹುಡುಗರ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಒಪ್ಪಿಯೇ ಬಿಟ್ಟರಂತೆ. ಅಲ್ಲಿಗೆ ಕಾಯಂ `ಹಾವಿನಮನೆ' ಹುಡುಕುವ ಕೆಲಸಕ್ಕೆ ಹೊಸ ಬಲ ಬಂತು.

ಉರಗ ಸಂಗ್ರಹಕ್ಕೊಂದು ಔಪಚಾರಿಕ ಸ್ವರೂಪ ಮತ್ತು ಸಾರ್ವಜನಿಕ ಉಪಯುಕ್ತತೆಯ ಸಮರ್ಥನೆ ಕೊಡುವಲ್ಲಿ ಸನ್ನಿಯವರ ಸಂಘಟನಾ ಚಾತುರ್ಯ ತುಂಬ ಕೆಲಸಮಾಡಿತು. ಹಿರಿಯ ವಕೀಲ ನಾರಾಯಣಾಚಾರ್ಯರ ಸೇವೆಯಲ್ಲಿ `ಮ್ಯೋಂಗಲೂರ್ ವೈಲ್ಡ್ ಲೈಫ್ ಟ್ರಸ್ಟ್' ಘೋಷಣೆಯಾಯ್ತು. ಅದಕ್ಕೊಂದು ಸಂಕೇತ ಚಿಹ್ನೆ ಕೊಟ್ಟವರು ದಯಾ ಆರ್ಟ್ಸ್. ಸನ್ನಿ ಸ್ವಂತ ದುಡ್ಡು ಹಾಕಿ ಲೆಟರ್ ಹೆಡ್, ರಸೀದಿ ಮಾಡಿಸಿ ತಮ್ಮ ಬರವಣಿಗೆಯ ಜಾಣ್ಮೆಯನ್ನೆಲ್ಲಾ ತೊಡಗಿಸಿದರು. ಸಾರ್ವಜನಿಕರಿಂದ ಬರಿದೇ ಸಹಾಯ ಕೋರುವುದಲ್ಲ, ಉರಗಪ್ರದರ್ಶನ ಮಾಡಿ `ಪ್ರಚಾರದ ಲಾಭ'ಗಳನ್ನೂ ಗಳಿಸಲು (ನೆಲೆ, ಆಹಾರ, ಆರೈಕೆಗೆಲ್ಲಾ ಹಣ ಬೇಕಲ್ಲ) ಯೋಜನೆ ಹಾಕಿದರು. ಅರಣ್ಯ ಇಲಾಖೆಯ ಮಂಗಳೂರು ವಲಯದ ಡಿ.ಎಫ್.ಓ ಸಂಪಂಗಿಯವರೂ ಇವರಿಗೆ ಅಪಾರ ಮಾನಸಿಕ ಬಲ ಊಡಿದರು.

ಇವರೆಲ್ಲ ಪ್ರಯೋಗಗಳಿಗೆ ಅಕ್ಷರಶಃ ಭುಜ ಜೋಡಿಸಿದವರು ಮದ್ರಾಸಿನ ಗಿಂಡಿ ಉರಗೋದ್ಯಾನವನ್ನು ಅಪೂರ್ವವಾಗಿ ಸಂಘಟಿಸಿ, ನಡೆಸುತ್ತಿದ್ದ, ವಿಶ್ವಖ್ಯಾತ ರೊಮುಲಸ್ ವಿಟೇಕರ್. ಅವರೊಡನೆ ಪತ್ರ ವ್ಯವಾಹಾರವಷ್ಟೇ ಸಾಕಾಗದೆಂದು ಸನ್ನಿ ಒಮ್ಮೆ ಮದ್ರಾಸಿಗೆ ಚಾರ್ಲಿಯನ್ನು ಕರೆದುಕೊಂಡು ಹೋಗಿ ಬಂದು, ಹೆಚ್ಚಿನ ಆಶ್ವಾಸನೆಗಳನ್ನು ಗಳಿಸಿದರು.

ಉರಗಪ್ರದರ್ಶನಕ್ಕೆ ಸೂಕ್ತ ಜಾಗವಾಗಿ `ಜಂಗಲ್ಲ'ನ್ನೇ ಆಯ್ದು ಭರದಿಂದ ಸಿದ್ಧತೆಗಳು ನಡೆದವು. ಸನ್ನಿ ತರಪ್ಪನ್ ಉರಗಪ್ರದರ್ಶನದ ವಿವಿಧ ಸಿದ್ಧತೆಗಳನ್ನು ಹುಡುಗರೊಡನೆ ಧಾರಾಳ ಹಂಚಿಕೊಳ್ಳುತ್ತಿದ್ದರಂತೆ. ಆದರೆ ಅದರ ವಿಸ್ತೃತ ಆಯಾಮಗಳು ಹುಡುಗರ ಯೋಚನೆಗೆ ನಿಲುಕುತ್ತಿರಲಿಲ್ಲ ಅಷ್ಟೆ.

ಹಲವು ಮರದ ಮಿಲ್ಲು ಮಾಲೀಕರು ಉಚಿತವಾಗಿ ಮಾಡಿಸಿಕೊಟ್ಟ, ಪ್ರದರ್ಶನ ಯೋಗ್ಯವೂ ಆದ ಗೂಡುಗಳು ಧಾರಾಳ ಬಂದವು. ಇವು ರೆಡ್ ಬಿಲ್ಡಿಂಗ್ ತುಂಬಿ, ಅನಿವಾರ್ಯವಾಗಿ ಸನ್ನಿಯವರ ಮನೆಯ ಹಿತ್ತಿಲನ್ನೂ ತುಂಬಿದ್ದು ವಿವರಿಸುವಾಗ ಶರತ್‌ಗೆ ಎಲ್ಲ ನಿನ್ನೆ ಮೊನ್ನೆ ನಡೆಸಿದ ಉತ್ಸಾಹ ಉಕ್ಕುತ್ತದೆ. ಸನ್ನಿ ಎನ್‌ಎಸ್‌ಎಸ್‌ನಲ್ಲೂ ಭಾರೀ ಕೆಲಸ ಮಾಡುತ್ತಿದ್ದರು.

ಅದರ ವಿವಿಧ ಶಿಬಿರಗಳಲ್ಲಿ ಸಂಜೆ ಹುಡುಗರ ಜೊತೆಗೆ ಊರವರನ್ನೂ ಸೇರಿಸಿ ಹಾವುಗಳ ಬಗ್ಗೆ ಶರತ್ ಚಾರ್ಲಿಯಿಂದ ಪ್ರದರ್ಶನ, ಪಾಠ ಮಾಡಿಸುತ್ತಿದ್ದರು. ಪರೋಕ್ಷವಾಗಿ ಸಹಾಯ ಒದಗಿದ್ದೂ ಇತ್ತು, ದೊಡ್ಡ ಉರಗ ಪ್ರದರ್ಶನಕ್ಕೆ ದೊಡ್ಡ ಪ್ರಚಾರವೂ ಆಗುತ್ತಾ ಬಂತು. ಅಲೋಶಿಯಸ್ ಕಾಲೇಜಿನ ಶತಮಾನೋತ್ಸವವೂ ಇವರ ಪ್ರಥಮ ಉರಗಪ್ರದರ್ಶನದೊಂದಿಗೇ ಸೇರಿ ಬಂದದ್ದು ಸಣ್ಣಪುಟ್ಟ ಅನಾನುಕೂಲವಾದರೂ ಲಾಭ ಅಪಾರವೇ ಆಯ್ತು.

ತಟ್ಟಿಗಳ ಆವರಣ, ಪ್ರೇಕ್ಷಕರ ಅಂತರ ಉಳಿಸಲು ಬಿದಿರಗೂಟ ಹುಗಿದು ಕಟ್ಟಿದ ಬೇಲಿ, ಗೂಡುಗಳನ್ನು ಇಡಲು ಅಟ್ಟಳಿಗೆ, ಬಿಸಿಲ ಮರೆ, ನಡುವೆ ಕೆಲವು ಹಾವುಗಳನ್ನು ಮುಕ್ತವಾಗಿ ಬಿಡಲು ತಗಡು ಅಂಚುಕಟ್ಟಿ ಮಾಡಿದ ಬಾವಿ ಒಂದೇ ಎರಡೇ. ಪೊದರು, ಮುಳ್ಳನ್ನೆಲ್ಲ ಕಳೆದರೂ ಆಯ್ದ ಕಾಡು ಗಿಡ ಮರಗಳನ್ನು ಉಳಿಸಿಕೊಂಡ ವಠಾರ ಪ್ರದರ್ಶನಾಂಗಣಕ್ಕೆ ಪ್ರಾಕೃತಿಕ ಸ್ಪರ್ಶ ಕೊಟ್ಟಿತ್ತು. ಬೆಂಕಿ ಬಗ್ಗೆ ಜಾಗ್ರತೆ, ವಿದ್ಯುತ್ ಸಂಪರ್ಕ, ತತ್ಕಾಲೀನ ದೂರವಾಣಿ ಸಂಪರ್ಕದವರೆಗೂ (ಆ ದಿನಗಳಲ್ಲಿ ಚರವಾಣಿಯ ಕಲ್ಪನೆಯೂ ಇರಲಿಲ್ಲ. ದೂರವಾಣಿಯೂ ಒಂದು ವೈಭವವೇ) ವಠಾರ ಸಜ್ಜುಗೊಂಡಿತ್ತು.

ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸನ್ನಿಯ ಅಭಿಮಾನಿಗಳಾದ ರಾಜ ಮುಂತಾದ ಸ್ವಯಂಸೇವಕರು ಗಡಿಯಾರದ ಸುತ್ತು ಕೆಲಸ ಮಾಡಿ ಶರತ್ ಮತ್ತು ಚಾರ್ಲಿನ ಹೊಣೆಯನ್ನು ತುಂಬಾ ಹಗುರಗೊಳಿಸಿದ್ದರು. ವಿಟೇಕರ್ ಸ್ವತಃ ಬಂದು ಪ್ರದರ್ಶನವನ್ನು ಉದ್ಘಾಟಿಸಿದ್ದರು. ಅವರ ಪ್ರಧಾನ ಸಹಾಯಕ (ಇರುಳ - ಹಾವುಗಳ ಒಡನಾಟವಿರುವ ಒಂದು ಆದಿವಾಸಿ ಬಳಗದ ಸದಸ್ಯ) ಚೊಕ್ಕಲಿಂಗಂ ಪ್ರದರ್ಶನದುದ್ದಕ್ಕೆ ನಿಂತು ಸಹಕರಿಸಿದ್ದ. (ಶರತ್ ಮತ್ತು ಚಾರ್ಲಿ ಆಗಿನ್ನೂ ವಿಷದ ಹಾವುಗಳನ್ನು ನಿಭಾಯಿಸುವಲ್ಲಿ ಎಳೆಯರೇ ಆಗಿದ್ದರು ಎನ್ನುವುದನ್ನು ಮರೆಯಬಾರದು).

ತಲಾ ಐದು ರೂಪಾಯಿಯ ಟಿಕೆಟ್ ಇದ್ದರೂ ಸರದಿಯ ಸಾಲು ಬಾವುಟ ಗುಡ್ಡೆಯ ಮೇಲಿನಿಂದಿಳಿದು ಹಂಪನಕಟ್ಟೆಯವರೆಗೆ ಬೆಳೆದದ್ದು ಮಂಗಳೂರ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಘಟನೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಥಮ ಉರಗ ಪ್ರದರ್ಶನದ `ಅಮಲು' ಇಳಿಯಬೇಕಾದರೆ ಒಂದೆರಡು ವರ್ಷಗಳೇ ಬೇಕಾದವು ಎನ್ನುವುದನ್ನು ಶರತ್ ತುಸು ವಿಷಾದದಲ್ಲೇ ನೆನಪಿಸಿಕೊಳ್ಳುತ್ತಾರೆ. 

ಮರುವರ್ಷವೇ ಇನ್ನೊಂದು, ನೆಹರೂ ಮೈದಾನಲ್ಲಿ, ಕಂಕನಾಡಿ ಮೈದಾನದಲ್ಲಿ, ಉಡುಪಿ, ಧರ್ಮಸ್ಥಳದ ಜಾತ್ರೆಗಳಲ್ಲೆಲ್ಲಾ ನಮ್ಮ ಬಳಗ `ಗುಡಾರ' ಹಾಕಿತ್ತು. ಎಲ್ಲೋ ಸಿಕ್ಕ ಕಾಡುಪಾಪ, ಧರ್ಮಸ್ಥಳದ ಸಂಗ್ರಹದಲ್ಲಿದ್ದ ಚಿರತೆಗಳೂ ಉರಗ ಪ್ರದರ್ಶನಕ್ಕೆ ಹೆಚ್ಚಿನ ಆಕರ್ಷಣೆಗಳು! ಕೊನೆಗೆ ಶುದ್ಧ ಮತ್ಸ್ಯ ಸಂಗ್ರಹವನ್ನೂ (ಮೀನ್ಮನೆ) ಪ್ರದರ್ಶನಕ್ಕಿಟ್ಟು ನೋಡಿದ್ದಾಯ್ತು. ನನಗವೆಲ್ಲ ಸೇರುತ್ತಿರಲಿಲ್ಲ.

ನನಗೆ ಪ್ರದರ್ಶನ, ಸಾರ್ವಜನಿಕ ಶಿಕ್ಷಣಕ್ಕಿಂತ ಹೆಚ್ಚಿನ ಆಸಕ್ತಿಯಿದ್ದದ್ದು ಹಾವಿನ ಅಧ್ಯಯನ. ಚಾರ್ಲಿ ಮಾತ್ರ ಅಸಾಧಾರಣ ದುಡಿಮೆ ಕೊಡುತ್ತಲೇ ಇದ್ದರು. ಮತ್ತೆ ಆ ಸಮಯಕ್ಕೆ ಎನ್‌ಎಸ್‌ಎಸ್‌ನಲ್ಲಿ ಸನ್ನಿಯ ಖಾಸಾ ಶಿಷ್ಯನಾಗಿದ್ದ ಸೂರ್ಯನೂ (ಶರತ್, ಚಾರ್ಲಿಯರ ಸಹಪಾಠಿ -ಡಾ. ಅಡ್ಡೂರು ಸೂರ್ಯನಾರಾಯಣ ರಾವ್) ಹಾವುಗಳನ್ನು ನಿಭಾಯಿಸುವಲ್ಲಿ ಸಾಕಷ್ಟು ಪಳಗಿದ್ದ ಮತ್ತು ಒದಗುತ್ತಿದ್ದ. 

ಮೊದಲ ಉರಗಪ್ರದರ್ಶನದ ಬೆನ್ನಿಗೇ ಇವರ ರೆಡ್ ಬಿಲ್ಡಿಂಗ್ ವಾಸ್ತವ್ಯಕ್ಕೂ ಕೊನೆ ಬಂದಿತ್ತು. ಸನ್ನಿ ಯಾರನ್ನೋ ಹಿಡಿದು ಪಡೀಲಿನಲ್ಲಿ ಸಾಕಷ್ಟು ದೊಡ್ಡವೇ ಇದ್ದರೂ ಅಷ್ಟೇನೂ ಭದ್ರವಿಲ್ಲದ ಶೆಡ್ಡೊಂದನ್ನು ಬಾಡಿಗೆಗೆ ನಿಗದಿಸಿದ್ದರು. ಹಾವುಗಳನ್ನು ಅಲ್ಲಿಗೆ ವರ್ಗಾಯಿಸಿದ್ದೇನೋ ಸರಿ, ಆದರೆ ಅವುಗಳ ನಿತ್ಯದ ನಿರ್ವಹಣೆ ಮತ್ತು ಹೊಟ್ಟೆ ತುಂಬಿಸುವ ಕೆಲಸ ಶರತ್ ಮತ್ತು ಚಾರ್ಲಿಯದ್ದೇ ಆಗಬೇಕಿತ್ತು.

ಹೆಬ್ಬಾವಿಗೆ ವಾರಕ್ಕೊಂದಾದರೂ ಕೋಳಿ, ಕೇರೆ ನಾಗರಕ್ಕೆ ಕಪ್ಪೆ ಇಲಿ ಆಗಾಗ, ಪುಟ್ಟ ಗಾತ್ರದವಕ್ಕೆ ಅರಣೆ ಹಲ್ಲಿ, ಎಲ್ಲ ಸಜೀವ ಪೂರೈಕೆಯಾಗಬೇಕು. ಪರಿಚಿತ ಜಿನಸಿನ ಅಂಗಡಿ ಮತ್ತು ಮನೆಗಳಲ್ಲಿ ಸಂಜೆ ಇಲಿಬೋನು ಇಟ್ಟು ಬರುತ್ತಿದ್ದರು. ಬೆಳಿಗ್ಗೆ ಹೋಗಿ ಬೇಟೆಯಾಗಿದ್ದರೆ ಸಂಗ್ರಹಿಸಿ, ಉರಗಗಳ ಅಗತ್ಯ, ಯೋಗ್ಯತಾನುಸಾರ ಬೋನುಗಳ ಒಳಗೆ ಬಿಡಬೇಕಾಗುತ್ತಿತ್ತು.

ಹಾವುಗಳ ಉಚ್ಚಿಷ್ಟ ಮತ್ತು ಉಳಿಕೆಗಳನ್ನು ತೆಗೆದು ಗೂಡು ಶುದ್ಧಿ ಮಾಡುವುದೆಂದರೆ ಪ್ರತಿ ಬಾರಿಯೂ ಎಚ್ಚರದಿಂದ ಹಾವುಗಳನ್ನು ಅತ್ತಿತ್ತ ಮಾಡಲೇ ಬೇಕಾಗುತ್ತಿತ್ತು. ಇಲ್ಲವಾದರೆ ಅನಾರೋಗ್ಯಕರ ವಾತಾವರಣ, ಇನ್ನೂ ಅಪಾಯದ್ದು ಇರುವೆಗಳ ಆಕ್ರಮಣದ ಭಯ!
ಓಡ್ರಿಕ್ ಅವರಿಗಾದರೋ ಊರಲ್ಲಿ ಅಭಿಮಾನೀ ಎಳೆಯರ ಬಳಗ ಇತ್ತು, ಕಾಲಕಾಲಕ್ಕೆ ಇಲಿ ಪೂರೈಕೆ ಚೆನ್ನಾಗಿಯೇ ಮಾಡಿದ್ದರು.

ವಿವರಗಳನ್ನು ನೆನೆಸಿಕೊಳ್ಳುತ್ತಾ ಇಂದು ಶರತ್ ಅಮೆರಿಕದಿಂದ ಬರೆಯುತ್ತಾರೆ. `ಈಗ (2012) ನಾನಿರುವ ಅಮೆರಿಕನ್ ಪ್ರಯೋಗಶಾಲೆಗಳಲ್ಲಂತೂ ಎಲ್ಲೋ ಎಂದೋ ಹಿಡಿದ ಇಲಿಗಳನ್ನು ಸಾಯಿಸಿ, ಫ್ರಿಜ್ಜುಗಳೊಳಗೆ ಕೊರಡುಗಟ್ಟಿಸಿ, ಬೇಕೆಂದಾಗ ಹಾವುಗಳಿಗೆ ಕೊಟ್ಟು `ಪಳಗಿಸಿಬಿಟ್ಟಿದ್ದಾರೆ'. ಆದರೆ ಅಂದಿನ ನಮ್ಮ ಹಾವುಗಳು ಆತ್ಮಸಮ್ಮೋನ ಉಳಿಸಿಕೊಂಡಿದ್ದವು. ಸದಾ ಜೀವಂತ ಇಲಿಗಳೇ ಬೇಕು. ಮತ್ತೆ ನಮ್ಮ ಸಮಯಾನುಕೂಲ ಕಾಯದೇ ಅವಕ್ಕೆ ಹಸಿವಾದಾಗಲೇ ತಿನ್ನುತ್ತಿದ್ದವು.

ನಮಗೋ ಮನೆಯ ಮತ್ತು ವಿದ್ಯಾರ್ಥಿ ಜೀವನದ ಕಟ್ಟುಪಾಡು. ಹಾಗೆಂದು ಗೂಡುಗಳೊಳಗೆ ಇಲಿ ಬಿಟ್ಟು ಹೋಗುವಂತಿರಲಿಲ್ಲ. ಹಾವು ಉದಾಸೀನ ಮಾಡಿದರೆ ನಮ್ಮ ಬಡಪಾಯಿ ಗೂಡುಗಳ ಸಂದುಗಳಲ್ಲಿ ಇಲಿಗಳು ಕನ್ನ ಹೊಡೆದು ಪರಾರಿಯಾಗಲು ಪ್ರಯತ್ನಿಸುವುದು ಖಾತ್ರಿ. ಬದುಕಿಕೊಳ್ಳಲಿ, ಹೋದರೆ ಒಂದಿಲಿ ಅಲ್ವಾ ಎನ್ನುವಂತಿಲ್ಲ.

ಅದೇ ದಾರಿ `ಜೈಲು' ಹಾರಲು ಹಾವುಗಳಿಗೂ ಸಾಕಾಗುತ್ತಿತ್ತು! ಇದು ರೆಡ್ ಬಿಲ್ಡಿಂಗ್‌ನಲ್ಲಾಗಿದ್ದರಂತೂ ಶಾಲೆಗೇ ಪೋಷಕರಿಂದ `ರೆಡ್ ಸಿಗ್ನಲ್' ಬೀಳಬಹುದಿತ್ತು. ಮೊದಲೇ ಹೇಳಿದಂತೆ ನಮ್ಮ ಸಂಗ್ರಹ ಮಾಳಿಗೆಯಲ್ಲಿತ್ತು. ಅದರ ನೆಲವೆಲ್ಲ ಮರದ್ದು. ಹಲಗೆಗಳೇನೋ ಗಟ್ಟಿಯೇ ಇದ್ದವು ಆದರೆ ಅಲ್ಲಿ ಇಲ್ಲಿ ಬಿಟ್ಟ ಸೆರೆಗಳಲ್ಲಿ ಹಾವು ಇಲಿಗಳೇನು ಅಂದಾಜು ತಪ್ಪಿದರೆ ನಮ್ಮ ಕಾಲೂ ನುಸಿಯುವಷ್ಟು ದೊಡ್ಡದಿತ್ತು.

ಕೆಳಗಿನ ಕೋಣೆಯಲ್ಲಿ ಶಾಲೆ ಮಕ್ಕಳ ಬ್ಯಾಂಡ್ ಸಾಮಗ್ರಿಗಳ ದಾಸ್ತಾನು. ಮತ್ತಾಗೀಗ ಮಕ್ಕಳ ತರಬೇತೂ ಅಲ್ಲಿ ನಡೆಯುತ್ತಿತ್ತು. ಶಾಲಾ ದಿನಗಳಲ್ಲಿ ಕಟ್ಟಡದ ಸುತ್ತೂ ಮಕ್ಕಳ ಆಟ, ಓಡಾಟವೂ ಸಹಜವಾಗಿಯೇ ಇರುತ್ತಿದ್ದವು. ಈಗ ಯೋಚನೆ ಮಾಡಿ, ಹುಡುಗನೊಬ್ಬ ಕಹಳೆ ಬಾಯಿಗಿಡುವಾಗ ಪಗೆಲ ಇಣುಕಿದರೆ ಹೇಗಿರಬಹುದು? ಕಬಡ್ಡಿ ಆಡುವವರ ಎಡೆಯಲ್ಲಿ ಒಮ್ಮೆಗೇ ಗೂಡು ಬಿಟ್ಟೋಡುವ ಕಂದಡಿ, ನಾಗರದಂಥ ವಿಷಕಾರಿಗಳು ಬಿಡಿ, ಒಂದು ಸಾದಾ ಕೇರೆ ನುಸಿದರೂ ಹೇಗಾದೀತು.ಇ್ನ ಒಂದು ಸಮಸ್ಯೆ ಬಲಿಪಶುವನ್ನು ಹಾವಿನ ಗೂಡಿಗೆ ಸೇರಿಸುವುದು.

ಬಂಧನದಲ್ಲಿ ಹಾವುಗಳೇನೋ ಸೌಮ್ಯವಾಗಿರುತ್ತವೆ, ಇಲಿಗಳಲ್ಲ. ಪ್ರತಿಕ್ಷಣದಲ್ಲಿ ತಪ್ಪಿಸಿಕೊಳ್ಳುವ ಅವಕಾಶ ಹುಡುಕುತ್ತ, ಹಿಡಿಯಲು ಹೊರಟ ನಮ್ಮ ಕೈ ಕಚ್ಚುವುದು ನಿರೀಕ್ಷಿತವೇ ಇತ್ತು. ಇಲಿಯಲ್ಲಿ ವಿಷವಿಲ್ಲ. ಆದರೆ ಅನ್ಯ ನಂಜು (ರ್‍ಯಾಬೀಸ್ ಕೂಡಾ) ನಮ್ಮನ್ನು ಬಾಧಿಸುವ ಅಪಾಯ ಇದ್ದೇ ಇತ್ತು. ಇದಕ್ಕೆ ಗಿಂಡಿಯ ಇರುಳರು ಉದ್ದ ಕೈಯ ಇಕ್ಕುಳ ಇಟ್ಟುಕೊಂಡಿದ್ದರು.

ಅವರು ಸಾರ್ವತ್ರಿಕ ಆಹಾರ ಬಟವಾಡೆ ಪಟ್ಟಿ ನೋಡಿಕೊಂಡು ಇಲಿಗಳ ಮೂತಿಯನ್ನು ಒಮ್ಮೆ ಇಕ್ಕುಳದಲ್ಲಿ ಅಮರಿಸಿ, ಹಾವಿನ ಗೂಡಿನೊಳಗೆ ಇಟ್ಟುಬಿಡುತ್ತಿದ್ದರು. ಇಲಿಯ ದವಡೆ ಮುರಿದದ್ದಕ್ಕೆ ಕೆಲವೊಮ್ಮೆ ಸ್ವಲ್ಪ ರಕ್ತ ಜಿನುಗಿದರೂ ಇಲಿ ಒಂದೆರಡು ದಿನಕ್ಕಂತೂ ಸಾಯುವುದಿಲ್ಲ ಮತ್ತು ತಪ್ಪಿಸಿಕೊಳ್ಳುವ ಪ್ರಯತ್ನವಂತೂ ಮಾಡುವುದು ಸಾಧ್ಯವೇ ಇಲ್ಲ ಎನ್ನುವ ಅವರ ಮಾತು ನಮಗಂತೂ ಭಯಾನಕ.

ನಾವು ಕಾರ್ಖಾನೆಗಳಲ್ಲಿ ಬಳಸುವ ಉದ್ದ ತೋಳಿನ, ದಪ್ಪ ಕೈಗವುಸುಗಳನ್ನು ಬಳಸಿ ಕೆಲಸ ಸುಧಾರಿಸಿದೆವು. ಮಿತ್ರರ ಮನೆ, ಮಳಿಗೆಗಳಿಂದ ಹಾವಿನ ಸಂಗ್ರಹದವರೆಗೆ ಮಂಗಳೂರಿನ ಉದ್ದಗಲಕ್ಕೆ ನಮ್ಮ ಓಡಾಟ. ನಡೆದೋ ಸೈಕಲ್ಲಿನಲ್ಲಿ ಡಬ್ಬಲ್ ರೈಡ್ ಮಾಡಿಕೊಂಡೋ (ಅಂದಿನ ದಿನಗಳಲ್ಲಿ ಪೊಲೀಸರ ಕಣ್ಣು ಬೇರೇ ತಪ್ಪಿಸಬೇಕಾಗುತ್ತಿತ್ತು!) ಸಿಟಿ ಬಸ್ಸಿನಲ್ಲೋ ನಮ್ಮದು ಒಂದೇ ಜಪ. ಇಲಿ, ಇಲಿ, ಇಲಿ!'

ಪ್ರದರ್ಶನದ ನಂತರ ಬಹಳ ದೊಡ್ಡದಾಗಿ ಅಮರಿಕೊಂಡ ಜವಾಬ್ದಾರಿ ಹಾವು ಕಂಡ ಸಾರ್ವಜನಿಕರ ಭಯ ನಿವಾರಣೆ. ಓಡ್ರಿಕ್ ಕೊಟ್ಟ ಕೊಕ್ಕೆ, ಚೀಲ, ಪಾಠ ಹಾಗೂ ಉರಗ ಪ್ರದರ್ಶನದ ಸಮಯದಲ್ಲಿ ಇರುಳರನ್ನು ನೋಡಿ ಪಡೆದ ಅನುಭವಗಳೊಡನೆ ಎಂಥಾ ವಿಷದ ಹಾವನ್ನಾಡಿಸಿದರೂ ಒಂದು ಲೆಕ್ಕದಲ್ಲಿ ಅದು ಪ್ರಯೋಗಾಲಯದ ಸ್ಥಿತಿಯಂತೆ.

ಯಾರದ್ದೋ ಮನೆಯ ಕಪಾಟಿನ ಅಡಿಯಲ್ಲಿ ಬಲವಾದ ನಾಗರ ಹಾವು, ಇನ್ಯಾವುದೋ ಬಚ್ಚಲ ತೂಬಿನ ಬಳಿಯ ಕಂದಡಿ, ಮತ್ತೆಲ್ಲೋ ವರದಿಯಲ್ಲಿ (ವಾಸ್ತವದಲ್ಲಿ ಬರಿಯ ಕೇರೇ ಇದ್ದದ್ದೂ ಉಂಟು!) ಭರ್ಜರಿ ಕಾಳಿಂಗವೇ ಇದೆ ಎನ್ನುವಾಗ ಪರಿಸರ ಹುಡುಗರಿಗೆ ದೊಡ್ಡ ಅಡ್ಡಿಯಾಗುತ್ತಿತ್ತು.

ಜೊತೆಗೆ ಅದುವರೆಗೆ ಮನುಷ್ಯನ ಸಂಪರ್ಕಕ್ಕೆ ಬಾರದ ಆ ಉರಗಗಳ ಮನೋಸ್ಥಿತಿಯೂ ಸಂಗ್ರಹಾಲಯದ ಗೂಡುಗಳಲ್ಲಿದ್ದು ಬೇಸತ್ತ ಜೀವಿಗಳದ್ದಕ್ಕೆ ಬಹುತೇಕ ತಾಳೆಬೀಳುತ್ತಿರಲಿಲ್ಲ. ಕಾಲೇಜು, ಮನೆಯೆಂದಿಲ್ಲದೆ ಸನ್ನಿಗೆ ಕರೆಗಳು ಬರುತ್ತಿತ್ತು, ಹುಡುಗರು ಓಡಬೇಕಾಗುತ್ತಿತ್ತು. ಭಯಭೀತರ ಕಣ್ಣಿನಲ್ಲಿ ಕೇರೇ ಹಾವೂ ನಾಗರವಾಗಿ ಕಾಣುತ್ತಿತ್ತು, ಮರಳು ಹಾವು `ಅಪೂಟ್ ಕಂದಡಿ', ಹೆಬ್ಬಾವು ಸಾಕ್ಷಾತ್ `ಪಿಲಿಕಂದೋಡಿ' (ವಾಸ್ತವದಲ್ಲಿ ಈ ಹೆಸರಿಗೊಂದು ಪ್ರತ್ಯೇಕ ಹಾವೇ ಇಲ್ಲ)! ಇವೆಲ್ಲಕ್ಕೂ ಕಿರೀಟ ಪ್ರಾಯವಾಗಿ ಅವರ ಕಾಲೇಜು `ವಿದ್ಯಾಭ್ಯಾಸ' ಕುಂಟುತ್ತಿತ್ತು, ಮನೆಯವರ ಅಸಹನೆ ಮೇರೆ ಮೀರುತ್ತಿತ್ತು.

ಚಾರ್ಲಿ ಬಿಎಸ್ಸಿಗೆ ಓದು ಮುಗಿಸಿ ಔಷಧ ಕಂಪೆನಿಯ `ಮರ್ಯಾದಸ್ಥ' ಪ್ರತಿನಿಧಿಯಾಗಿ ಊರೂರು ಸುತ್ತಲು ಹೊರಟರು. ಶರತ್ ಹಾಗೂ ಹೀಗೂ ಎಂಎಸ್ಸಿಗೆ ನುಗ್ಗಿ, ಕೊಣಾಜೆಯ ದೂರಕ್ಕೆ ಹೊರಟಾಗ ಸನ್ನಿಯವರಿಗೆ ಮಂಗಳೂರು ವೈಲ್ಡ್ ಲೈಪ್ ಟ್ರಸ್ಟ್ ಬರ್ಖಾಸ್ತು ಮಾಡುವುದು ಅನಿವಾರ್ಯವೆನ್ನಿಸಿತು.

ಮಂಗಳೂರಿನ ಇತಿಹಾಸದಲ್ಲಿ ಸುಮಾರು ಮೂರು ವರ್ಷಗಳಲ್ಲಿ ಅಪೂರ್ವ ದಾಖಲೆಯಾಗಿ ನಡೆದ ಪ್ರಥಮ ಉರಗೋದ್ಯಾನವನ್ನು ಅರಣ್ಯ ಇಲಾಖೆ ವಹಿಸಿಕೊಳ್ಳಲು ಮುಂದಾಯ್ತು. ಕದ್ರಿ ಗುಡ್ಡೆಯ ಮೇಲೆ ಇಲಾಖೆ ನೆಲ ತೆರವುಗೊಳಿಸಿತು. ಅಲ್ಲಿನ ಪ್ರದರ್ಶನಾಂಗಣದ ವಿನ್ಯಾಸ, ಪ್ರಾಥಮಿಕ ಚಟುವಟಿಕೆಗಳು ಮತ್ತು ಉದ್ಘಾಟನಾ ಅಗತ್ಯಗಳಲ್ಲೂ ಸನ್ನಿ ಮತ್ತು ಚಾರ್ಲಿ ತುಂಬಾ ಕೆಲಸ ಮಾಡಿದ್ದರು.

ಆದರೆ ಸಹಜ ಅವಶ್ಯಕತೆ (ಬ್ರ ಓಡ್ರಿಕ್ ದೇವಾನಂದ ಮತ್ತು ಶರತ್, ಚಾರ್ಲಿ) ಮತ್ತು ಕುತೂಹಲದ ಫಲವಾಗಿ ಹುಟ್ಟಿ, ಜ್ಞಾನ ವಿಸ್ತರಣೆ ಮತ್ತು ಅಧ್ಯಯನದ ಪ್ರಧಾನ ಅಂಗವಾಗಿ ವಿಕಸಿಸಬೇಕಾಗಿದ್ದ ಬಹು ಮಹತ್ವದ ವಸ್ತು ಉರಗೋದ್ಯಾನ, ಮಂದೆಯ ರಜಾದಿನಗಳ ಬೆರಗಾಗಿ ಕದ್ರಿಯಲ್ಲಿ ಕೆಲಕಾಲ, ಸದ್ಯ ಪಿಲಿಕುಳದಲ್ಲಿ ಇಲಾಖೆಗೊಂದು ಖರ್ಚಿನ ಬಾಬಾಗಿ ವಿರಾಜಮಾನವಾಗಿದೆ.

 ಶರತ್ ಸ್ನಾತಕೋತ್ತರ ಪದವಿಯ ನಂತರ ಹಾವಿನ ವರ್ತನ ವಿಜ್ಞಾನದ ಮೇಲೆ ಸಂಶೋಧನೆ ನಡೆಸಿದರು. ಕೆಲವು ವರ್ಷ ಪುತ್ತೂರು, ಹಾಸನಗಳಲ್ಲಿ ಅಧ್ಯಾಪನವನ್ನು ನಡೆಸಿ ಸದ್ಯ ಅಮೆರಿಕದಲ್ಲಿ ಹಾವುಗಳ ಸಂಶೋಧನಾ ನೆಲೆಯಲ್ಲೇ ಅಧ್ಯಾಪನ ನಡೆಸುತ್ತಿದ್ದಾರೆ. ಚಾರ್ಲಿಯ ಜೀವ ಮಿಡಿತಕ್ಕೆ ಔಷಧ ವ್ಯಾಪಾರ ಅಲರ್ಜಿಯಾಗಿ ಕಳಚಿಕೊಂಡರು. ಮತ್ಸ್ಯ ಸಂಗ್ರಹ, ಮೀನ್ಮನೆ ರಚನೆಗಳ ಸ್ವೋದ್ಯೋಗದೊಡನೆ `ಹಾವು ಪೀಡಿತ'ರ ಆಪದ್ಭಾಂಧವ್ಯ ಮುಂದುವರಿಸಿದರು.

 ಜೀವರಾಶಿಯ ಮೇಲಿನ ಇವರ ಅಪಾರ ಪ್ರೀತಿ ವಿಸ್ತರಿಸಿದ್ದಕ್ಕೆ ಇಂದಿನ ದೊಡ್ಡ ಸಾಕ್ಷಿ - ಶಕ್ತಿನಗರದಲ್ಲಿರುವ ಅನಿಮಲ್ ಕೇರ್ ಟ್ರಸ್ಟ್. ಅನಾಥವಾದ ಎಲ್ಲಾ ಬಗೆಯ ಪಶುಪಕ್ಷಿಗಳಿಗೆ ವೈವಿಧ್ಯಮಯ ಶುಶ್ರೂಷೆ, ಆಶ್ರಯ ಇಲ್ಲಿದೆ.

ಇಂದು ಅನಿಮಲ್ ಕೇರ್ ಟ್ರಸ್ಟಿನಲ್ಲಿ ಹಣ, ಸಮಯ ತೊಡಗಿಸಿರುವ ಅನೇಕ ಮಂದಿ ಗಣ್ಯರು ನಿಸ್ಸಂದೇಹವಾಗಿ ಇದ್ದಾರೆ. ಆದರೆ ಏನೂ ಇಲ್ಲದೆ, ಬಯಸದೆ ಪ್ರೀತಿ, ಕಾರ್ಯಶ್ರದ್ಧೆಯನ್ನೇ ಬಂಡವಾಳವಾಗಿಟ್ಟುಕೊಂಡ ಚಾರ್ಲ್ಸ್ ಅದರ ಜೀವಾಳ ಎಂದರೆ ತಪ್ಪು ತಿಳಿಯುವವರು ಯಾರೂ ಇಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT