ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು – ಬೀಜ

ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ 2016
Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಆ ಒಂದು ರಾತ್ರಿ
ನಕ್ಷತ್ರಗಳ ಬೆಳಕಿನಲ್ಲಿ ಬೆತ್ತಲಾಗಿ
ಸುಖಿಸಿದ ಮರುಕ್ಷಣದಲ್ಲಿ
ಅವಳು ಕೇಳಿದ್ದಳು... ಹೆಣ್ಣೆಂದರೇನು ಎಂದು

ಅವಳ ಪ್ರಶ್ನೆ ತೀಕ್ಷ್ಣವಾಗಿತ್ತು
ನಕ್ಷತ್ರಗಳ ಬೆಳಕಿಗೆ ತೆರೆದುಕೊಂಡಿದ್ದ
ಅವಳ ಎದೆ ಘಾಸಿಗೊಂಡಿತ್ತು

ಅವಳು ಮತ್ತೆ ಅದೇ ಪ್ರಶ್ನೆ ಕೇಳಿದಳು,
ನಾನು ಹೆಣ್ಣೆಂದರೆ
ಮೊಲೆಗಳು ಎಂದೆ

ಆ ರಾತ್ರಿಯ ಮೃದು ಗಾಳಿಗೆ
ಅವಳ ಬೆತ್ತಲೆ ದೇಹ
ಹಿಮಗಟ್ಟಿದಂತಾಯಿತು


ಅವಳು ಮತ್ತೆ
ಮೊಲೆಗಳೆಂದರೇನು ಎಂದು ಕೇಳಿದಳು

ನಾನು ಪಾರಿವಾಳಗಳೆಂದೆ
ಅವು ಕತ್ತಲೊಳಗೆ ಹಾರಿಹೋದವು
ಚಕ್ಕೋತ ಹಣ್ಣು ಎಂದೆ
ಅವು ಕೊಳೆತು ದುರ್ನಾತ ಬೀರಿದವು

ಅವಳು ಮತ್ತೆ ಎಂದಿನ ಮೊಲೆಗಳನ್ನು
ಆವಾಹಿಸಿಕೊಂಡು ಎದೆ ಬಿಚ್ಚಿದಳು
ಅವು ಚಂದ್ರನಂತೆ ಹೊಳೆಯುತ್ತಿದ್ದವು

ನಾನು ಮೊಲೆಗಳೆಂದರೆ
ಮಿಲನದ ಮುನ್ನುಡಿ
ಕಾಮದ ಕನ್ನಡಿ ಎಂದೆ

ಅವಳ ಎದೆ ಕನ್ನಡಿಯನ್ನು
ಆವಾಹಿಸಿಕೊಂಡು ಸಮತಟ್ಟಾಯಿತು
ಅದರೊಳಗೆ ಕಂಡ
ನನ್ನ ಬೆತ್ತಲೆ ದೇಹದ ಕುರೂಪಕ್ಕೆ ಬೆಚ್ಚಿದೆ
ನಿಸ್ಸಾರಗೊಂಡು ಕುಸಿದ ನನ್ನ
ಕೆನ್ನೆ ಸವರಿ ಮೇಲೆತ್ತಿದ ಅವಳು
ಮತ್ತೆ
ಮೊಲೆಗಳೆಂದರೇನು ಎಂದು ಕೇಳಿದಳು

ಅವಳ ಎದೆಯನ್ನು ನೋಡಿದೆ
ತಡಬಡಿಸಿದೆ
ಮತ್ತೆ ಕಂಗಳನ್ನೆ ದಿಟ್ಟಿಸಿದೆ
ಮಾತಿಗೆ ರೂಪ ಸಿಕ್ಕಿ
ಮೊಲೆಯೆಂದರೆ ಎದೆ ಹಾಲು
ತಾಯಿ ಎಂದೆ

ಅವಳು ಬೀಜವಾಗಿ
ಮಣ್ಣಲ್ಲಿ ಹೂತು ಹೋದಳು

ನಾನು ನಾಳೆಗಾಗಿ ಕಾಯತೊಡಗಿದೆ.

** *** **

‘ಮುಕ್ತಛಂದ’ ಪುರವಣಿಯು ಸಹೃದಯಿ ಓದುಗರಿಂದ ಕಥೆ, ಕವಿತೆ, ಲೇಖನಗಳು ಹಾಗೂ ಆಕರ್ಷಕ ಪ್ರವಾಸ ಕಥನಗಳನ್ನೂ ಆಹ್ವಾನಿಸುತ್ತದೆ. ಇಮೇಲ್ ಮೂಲಕವೂ ಲೇಖನಗಳನ್ನು ಕಳುಹಿಸಬಹುದು. ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶವನ್ನು ಬಳಸಿ ಇ–ಮೇಲ್‌ಗಳನ್ನು ಕಳುಹಿಸಬೇಕಾದ ವಿಳಾಸ: mukthachanda@prajavani.co.in
ನಮ್ಮ ವಿಳಾಸ
ಸಂಪಾದಕರು, ‘ಮುಕ್ತಛಂದ’ ಪುರವಣಿ ವಿಭಾಗ,
ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ,
ಬೆಂಗಳೂರು– 560 001

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT