ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಆದರೇನಂತೆ?

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ನಾವು ಕಾನೂನುಗಳಲ್ಲಿ ಹಲವು ಸುಧಾರಣೆಗಳನ್ನು ತಂದುಕೊಂಡಿದ್ದೇವೆ. ಹೀಗಿದ್ದರೂ, ವೈವಾಹಿಕ ಸಂಬಂಧದಲ್ಲಿ ನಡೆಯುವ ಅತ್ಯಾಚಾರ ತಡೆಯುವ ನಿಟ್ಟಿನಲ್ಲಿ ನಮ್ಮಲ್ಲಿ ಸುಧಾರಣೆ ಆಗೇ ಇಲ್ಲ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 375, ‘ಪುರುಷನೊಬ್ಬ, ಮಹಿಳೆಯ ಅನುಮತಿ ಇಲ್ಲದೆಯೇ ಆಕೆಯ ಜೊತೆ ದೈಹಿಕ ಸಂಬಂಧ ಹೊಂದುವುದು ಅತ್ಯಾಚಾರ’ ಎಂದು ಹೇಳುತ್ತದೆ.

ಪುರುಷ ತನ್ನ ಪತ್ನಿಯ ಜೊತೆ ಅನುಮತಿ ಇಲ್ಲದೆಯೂ ಲೈಂಗಿಕ ಸಂಬಂಧ ಹೊಂದುವುದಕ್ಕೆ ಈ ಸೆಕ್ಷನ್‌ನಲ್ಲಿ ವಿನಾಯಿತಿ ಇದೆ. ಪುರುಷ ತನ್ನ ಪತ್ನಿಯ ಜೊತೆ ಹೊಂದುವ ದೈಹಿಕ ಸಂಪರ್ಕ, ಆ ಪತ್ನಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿರದಿದ್ದರೆ, ಅತ್ಯಾಚಾರ ಅಲ್ಲ ಎಂದು ಇದು ಹೇಳುತ್ತದೆ.

ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು, ಕಾನೂನಿಗೆ ಆಗಬೇಕಿರುವ ತಿದ್ದುಪಡಿಗಳನ್ನು ಶಿಫಾರಸು ಮಾಡುವುದಕ್ಕಾಗಿ ನ್ಯಾಯಮೂರ್ತಿ ವರ್ಮಾ ಸಮಿತಿಯನ್ನು 2013ರಲ್ಲಿ ರಚಿಸಲಾಯಿತು. ಈ ಸಮಿತಿ ರಚನೆಯಾಗಿದ್ದು ದೆಹಲಿಯ ನಿರ್ಭಯಾ ಪ್ರಕರಣದ ನಂತರ. ಕಾನೂನುಗಳಲ್ಲಿ ಹಲವು ತಿದ್ದುಪಡಿಗಳು ಆಗಬೇಕು ಎಂಬ ಶಿಫಾರಸುಗಳನ್ನು ನ್ಯಾಯಮೂರ್ತಿ ವರ್ಮಾ ಸಮಿತಿ ನೀಡಿತು.

ವೈವಾಹಿಕ ಸಂಬಂಧದಲ್ಲಿ ನಡೆಯುವ ‘ಅತ್ಯಾಚಾರ’ಕ್ಕೆ ಐಪಿಸಿಯಲ್ಲಿ ಇರುವ ವಿನಾಯಿತಿಯನ್ನು ತೆಗೆಯುವುದು ಕೂಡ ಈ ಶಿಫಾರಸುಗಳಲ್ಲಿ ಒಂದಾಗಿತ್ತು. ಈ ಶಿಫಾರಸುಗಳನ್ನು ಆಧರಿಸಿ, ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ – 2013ರ ಮೂಲಕ ಐಪಿಸಿಯಲ್ಲಿ ಹಲವು ಬದಲಾವಣೆಗಳನ್ನು ತರಲಾಯಿತು. ಆಶ್ಚರ್ಯದ ಸಂಗತಿಯೆಂದರೆ, ಈ ಬದಲಾವಣೆಗಳು ವೈವಾಹಿಕ ಸಂಬಂಧದಲ್ಲಿ ನಡೆಯುವ ‘ಅತ್ಯಾಚಾರ’ವನ್ನು ಅಪರಾಧ ಎಂದು ಪರಿಗಣಿಸಲಿಲ್ಲ.

ವೈವಾಹಿಕ ಸಂಬಂಧದಲ್ಲಿ ನಡೆಯುವ ‘ಅತ್ಯಾಚಾರ’ವನ್ನು ಅಪರಾಧ ಎಂದು ಪರಿಗಣಿಸುವುದು ಏಕೆ ಮುಖ್ಯ? ಮದುವೆಯೆಂಬ ಬಂಧದ ನಡುವೆ ಮಹಿಳೆಯರು ಅನುಭವಿಸುವ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷಿಗಳು, ಅಂಕಿ– ಅಂಶಗಳು ಇವೆ. ನಗರವಾಸಿ ಮಹಿಳೆಯರ ಪೈಕಿ ಶೇಕಡ 23.6ರಷ್ಟು, ಗ್ರಾಮವಾಸಿ ಮಹಿಳೆಯರ ಪೈಕಿ ಶೇಕಡ 31.4ರಷ್ಟು ಜನ ಕುಟುಂಬದ ನಾಲ್ಕು ಗೋಡೆಗಳ ನಡುವೆ ದೌರ್ಜನ್ಯಕ್ಕೆ ಗುರಿಯಾಗುತ್ತಾರೆ ಎನ್ನುವುದನ್ನು 2015– 16ನೇ ಸಾಲಿನ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಹೇಳುತ್ತದೆ.

ಹಾಗೆಯೇ, ಶೇಕಡ 11.5ರಷ್ಟು ಮಹಿಳೆಯರು ವೈವಾಹಿಕ ಚೌಕಟ್ಟಿನೊಳಗೇ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗಿದ್ದಾರೆ ಎಂದು ಇದೇ ಸಮೀಕ್ಷೆ ಹೇಳಿದೆ. ಅತ್ಯಾಚಾರಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದು ಅಪರಿಚಿತ ವ್ಯಕ್ತಿಗಳಿಂದ ಅಲ್ಲ; ಪರಿಚಿತರೇ ಆ ಕೆಲಸ ಮಾಡಿರುತ್ತಾರೆ ಎಂಬುದು ಗೊತ್ತಿರದ ವಿಚಾರವೇನೂ ಅಲ್ಲ. ಹಾಗಾಗಿ, ಮಹಿಳೆಯರು ವೈವಾಹಿಕ ಸಂಬಂಧದಲ್ಲಿ ಅತ್ಯಾಚಾರಕ್ಕೆ ಗುರಿಯಾಗುವುದು, ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವುದು ತೀರಾ ಸಾಮಾನ್ಯ ಎನ್ನುವುದು ಆಶ್ಚರ್ಯದ ಸಂಗತಿಯೇನೂ ಅಲ್ಲ.

ವೈವಾಹಿಕ ಸಂಬಂಧದಲ್ಲಿ ಮಹಿಳೆಯರು ಹೆಚ್ಚು ಬಾರಿ ಅತ್ಯಾಚಾರಕ್ಕೆ ಗುರಿಯಾಗುವ ಸಾಧ್ಯತೆಗಳು ಇವೆ ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ. ವೈವಾಹಿಕ ಅತ್ಯಾಚಾರವೆಂಬುದು ಹೆಚ್ಚು ಗಂಭೀರವಾದದ್ದು, ಹೆಚ್ಚು ಹೀನವಾದದ್ದು.

ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ನೀಡುವ ನಮ್ಮ ಕ್ರಿಮಿನಲ್‌ ಕಾನೂನಿನ ಮೂಲ ಇರುವುದು ಬ್ರಿಟಿಷ್ ವಸಾಹತುಶಾಹಿ ಕಾಲದ ಕಾನೂನುಗಳಲ್ಲಿ. ಆ ಕಾನೂನುಗಳ ಪ್ರಕಾರ ಮದುವೆಯ ಚೌಕಟ್ಟಿನಲ್ಲಿ ಅತ್ಯಾಚಾರ ಎಂಬುದು ಇರಲು ಸಾಧ್ಯವೇ ಇಲ್ಲ. ಪತ್ನಿ ಅಂದರೆ ಪತಿಯ ಆಸ್ತಿ. ಶಿಕ್ಷೆಯ ಭಯವೇ ಇಲ್ಲದೆ ಪತಿಯು ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ಅಡ್ಡಿಯಿಲ್ಲ.

ಆದರೆ ಈಗ ಬ್ರಿಟನ್ನಿನಲ್ಲಿ ಕೂಡ ಮದುವೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಬಗೆ ಬದಲಾಗಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಬ್ರಿಟನ್‌ ಕೂಡ ಗುರುತಿಸಿದೆ. ವೈವಾಹಿಕ ಅತ್ಯಾಚಾರಕ್ಕಿದ್ದ ವಿನಾಯಿತಿಯನ್ನು ತೆಗೆದಿದೆ. ಇಷ್ಟೇ ಅಲ್ಲ, ವೈವಾಹಿಕ ಅತ್ಯಾಚಾರಕ್ಕೆ ನೀಡಿದ್ದ ವಿನಾಯಿತಿಯನ್ನು ಜಗತ್ತಿನ 52ಕ್ಕೂ ಹೆಚ್ಚು ದೇಶಗಳು ಈಗ ತೆಗೆದಿವೆ. ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದರ ವಿರುದ್ಧ ವಾದ ಮಂಡಿಸುವಾಗ ಸರ್ಕಾರ ಹಲವು ವಿಷಯಗಳನ್ನು ಉಲ್ಲೇಖಿಸಿದೆ.

‘ಜೊತೆಯಾಗಿ ಸಾಗುವ ಮದುವೆಯ ಬಂಧದಲ್ಲಿ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಾಗ, ಆ ಕೃತ್ಯವು ಹೆಣ್ಣಿನ ಅನುಮತಿ ಇಲ್ಲದೆಯೇ ಆಗಿತ್ತು ಎಂಬುದನ್ನು ಸಾಬೀತು ಮಾಡುವುದು ಸಾಧ್ಯವಿಲ್ಲದ ಮಾತು. ವಿವಾಹ ವಿಚ್ಛೇದನ, ಆಸ್ತಿ ಹಕ್ಕು ಮತ್ತು ಮಗು ಯಾರ ಜೊತೆ ಇರಬೇಕು ಎಂಬ ಪ್ರಕರಣಗಳಲ್ಲಿ ಲಾಭ ಪಡೆದುಕೊಳ್ಳಲು ಈ ಕಾನೂನನ್ನು ಮಹಿಳೆಯರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಮದುವೆ ಎನ್ನುವ ವ್ಯವಸ್ಥೆಯನ್ನು ರಕ್ಷಿಸಬೇಕಿದೆ. ವೈವಾಹಿಕ ಸಂಬಂಧದಲ್ಲಿ ಆಗುವ ಅತ್ಯಾಚಾರವು ಯಾವುದೋ ಅನ್ಯ ವ್ಯಕ್ತಿ ನಡೆಸುವ ಅತ್ಯಾಚಾರದಷ್ಟು ಗಂಭೀರ ಅಲ್ಲ. ಏಕೆಂದರೆ ಪತಿ– ಪತ್ನಿ ಮೊದಲೂ ಲೈಂಗಿಕ ಸಂಬಂಧ ಹೊಂದಿರುತ್ತಾರೆ. ಅತ್ಯಾಚಾರ ಎನ್ನುವ ಕಳಂಕದಿಂದ ಪತಿಯನ್ನು ಕೂಡ ರಕ್ಷಿಸುವ ಅಗತ್ಯವಿದೆ’ ಎಂಬ ವಾದಗಳನ್ನು ಕೇಂದ್ರ ಮುಂದಿಟ್ಟಿದೆ.

ಪತಿಯಿಂದ ಪತ್ನಿಯ ಮೇಲೆ ಅತ್ಯಾಚಾರ ನಡೆಯಲು ಸಾಧ್ಯವೇ ಇಲ್ಲ ಎನ್ನುವ ನಂಬಿಕೆಯು ಮುಂದುವರಿದಿರುವಲ್ಲಿ ಧಾರ್ಮಿಕ ಸಂಸ್ಥೆಗಳ ಪಾತ್ರ ಕೂಡ ಇದೆ.

ಕೌಟುಂಬಿಕ ದೌರ್ಜನ್ಯವನ್ನು ತಡೆಯಲು ಪ್ರಬಲ ಕಾನೂನು ಬೇಕು ಎಂದು ಸ್ತ್ರೀಪರ ಚಳವಳಿಗಳಲ್ಲಿ ಇದ್ದವರು ಬೇಡಿಕೆ ಇಟ್ಟಾಗ ಕೂಡ ಇದೇ ಬಗೆಯ ವಾದಗಳನ್ನು ಮುಂದಿಡಲಾಯಿತು. ಆದರೆ, ಇಂದು ನಮ್ಮ ದೇಶದಲ್ಲಿ ಕೌಟುಂಬಿಕ ದೌರ್ಜನ್ಯವನ್ನು ತಡೆಯುವ ಉದ್ದೇಶದ ಕಾನೂನುಗಳು ಇವೆ. ಇವುಗಳ ಅನುಷ್ಠಾನದಲ್ಲಿ ಯಾವ ಸಮಸ್ಯೆಯೂ ಇಲ್ಲ.

ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹ ಅಪರಾಧ ಎನ್ನುವ ಕಾನೂನು ತಂದರಷ್ಟೇ ಸಾಕಾಗುವುದಿಲ್ಲ. ಕಾನೂನಿಗೆ ತರುವ ತಿದ್ದುಪಡಿಯು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು ಎಂದಾದರೆ, ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವ ಪ್ರಕ್ರಿಯೆಯನ್ನು ವಿವರಿಸುವ ಕಾನೂನುಗಳಲ್ಲಿ, ಸಾಕ್ಷಿಗಳನ್ನು ಪರಿಗಣಿಸುವ ಬಗೆಯಲ್ಲಿ ಕೂಡ ಬದಲಾವಣೆ ತರಬೇಕಾಗುತ್ತದೆ. ಆಗ ಅಪರಾಧಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ವಿಚಾರಗಳೂ ಸ್ಪಷ್ಟವಾಗುತ್ತವೆ.

ನಮ್ಮ ಪೊಲೀಸರು, ವಕೀಲರು ಮತ್ತು ನ್ಯಾಯಾಧೀಶರಿಗೆ ಕೂಡ ತರಬೇತಿ ನೀಡಬೇಕಾಗುತ್ತದೆ– ಅವರು ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಉದ್ದೇಶಕ್ಕೆ. ವೈವಾಹಿಕ ಅತ್ಯಾಚಾರ ಎನ್ನುವುದು ಸಣ್ಣ ಪ್ರಮಾಣದ ಅಪರಾಧ ಅಲ್ಲ, ಅದು ತೀವ್ರ ಸ್ವರೂಪದ ಅಪರಾಧ, ಅದನ್ನು ಹಾಗೆಯೇ ಗ್ರಹಿಸಬೇಕು.

ಅಧಿಕಾರಿಗಳಿಗೆ ಇದರ ಬಗ್ಗೆ ತರಬೇತಿ ನೀಡಿ, ಈ ಅಪರಾಧ ಅದೆಷ್ಟು ಸೂಕ್ಷ್ಮ ಎಂಬುದನ್ನು ಅವರಿಗೆ ಮನವರಿಕೆ ಮಾಡದಿದ್ದರೆ ಇವುಗಳ ಬಗ್ಗೆ ಪೊಲೀಸರ ಬಳಿ ದೂರು ಕೊಂಡೊಯ್ಯುವುದು, ಆರೋಪಿಯ ವಿರುದ್ಧ ದೋಷಾರೋಪ ನಿಗದಿ ಮಾಡುವುದು, ಅವನ ವಿರುದ್ಧ ವಾದ ಮಂಡಿಸುವುದು ಮತ್ತು ಅವನನ್ನು ಶಿಕ್ಷೆಗೆ ಗುರಿಪಡಿಸುವುದು ಕಷ್ಟದ ಕೆಲಸವಾಗುತ್ತದೆ.

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಜೊತೆಯಲ್ಲೇ, ತಾವು ಅನುಭವಿಸಿದ ನೋವು ಮತ್ತು ಸಂಕಟಗಳಿಗೆ ಪತಿಯಿಂದ ಪರಿಹಾರ ಕೋರಿ ಸಿವಿಲ್ ಮೊಕದ್ದಮೆ ದಾಖಲಿಸುವ ಅವಕಾಶ ಕೂಡ ಮಹಿಳೆಯರಿಗೆ ಇರಬೇಕಾಗುತ್ತದೆ. ವೈವಾಹಿಕ ಅತ್ಯಾಚಾರದ ಪರಿಣಾಮವಾಗಿ ಎದುರಾಗುವ ವೈದ್ಯಕೀಯ ವೆಚ್ಚಗಳನ್ನು ಪತಿಯಿಂದ ಪಡೆಯುವ ಅವಕಾಶವೂ ಇರಬೇಕು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ವೈವಾಹಿಕ ಚೌಕಟ್ಟಿನೊಳಗೆ ಲೈಂಗಿಕ ಸಂಬಂಧ ಹೊಂದುವುದು ಕೂಡ ಅತ್ಯಾಚಾರ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮದುವೆಯಂತಹ ಅತ್ಯಂತ ನಿಕಟವಾದ ಸಂಬಂಧಗಳಲ್ಲಿ ಕೂಡ ಖಾಸಗಿತನ ಎನ್ನುವ ಸಾಂವಿಧಾನಿಕ ಹಕ್ಕು ಇರುತ್ತದೆ ಎಂದೂ ಕೋರ್ಟ್‌ ಹೇಳಿದೆ.

ಹೀಗಿರುವಾಗ, ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್‌ ಅಪರಾಧವೆಂದು ನಮ್ಮ ಕೋರ್ಟ್‌ಗಳು ಗುರುತಿಸುವ ದಿನ ದೂರವಿಲ್ಲ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನತೆ ದೊರೆಯಬೇಕು ಎಂದಾದರೆ, ಮಹಿಳೆಯರ ಮೇಲೆ ನಡೆಯುವ ಎಲ್ಲ ಬಗೆಯ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ.

ಈ ವಿಚಾರದಲ್ಲಿ ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ನೀಡಲು ಆಗದು. ಮದುವೆ ಆದ ಮಾತ್ರಕ್ಕೆ ಹೆಣ್ಣು ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ನೀಡುವ ತನ್ನ ಅಧಿಕಾರವನ್ನು ಕಳೆದುಕೊಳ್ಳುವುದಿಲ್ಲ, ನಮ್ಮ ಕಾನೂನುಗಳು ಇದನ್ನು ಗುರುತಿಸಲು ಇದು ಸಕಾಲ.

(ಲೇಖಕರು ಹೈಕೋರ್ಟ್‌ ವಕೀಲರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT