ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮಲ್ಹಾರ, ಬದುಕಿನ ಶೃಂಗಾರ

ಎದೆಯ ಅಂಗಳದಲ್ಲಿ ಮಲ್ಹಾರದ ಮಪನಿದನಿಸ
ಅಕ್ಷರ ಗಾತ್ರ

ಏಗರಜತ ಆಯಿ ಬದರವಾ,
ಆತ ಹೀ ಸುಹಾವೆ,
ರುಮಝುಮ ಚಹೂ ಔರತೆ ಬರಸೆ...

ಓ, ಮತ್ತೆ ಮಳೆ... ನೆಲ–ಬಾನನ್ನು ಒಂದಾಗಿಸುವ ಛಲ ಹೊತ್ತಂತೆ ಕಪ್ಪು ಮೋಡ ಕಟ್ಟಿ, ಹಗಲೂ ರಾತ್ರಿ ಧೋ ಎಂದು ಸುರಿಯುತ್ತಿದೆ. ಹಾಡುವ ‘ಮಲ್ಹಾರ್’ ರಾಗಕ್ಕೆ ತಾನೇ ಶ್ರುತಿ ನೀಡುತ್ತಿದೆ. ಮೊದಲಿನಿಂದಲೂ ಸಂಗೀತವನ್ನು ಪ್ರಕೃತಿಯಲ್ಲಿ ಹುಡುಕಬೇಕು ಎಂದವರು ನಾವು. ಸಂಗೀತವು ಎಲ್ಲಾ ಋತುಗಳ ಜೊತೆಗೂ ನಿಕಟವಾದ ಸಂಬಂಧ ಹೊಂದಿದ್ದರೂ, ವರ್ಷ ಋತು ಸಂಗೀತಗಾರರಿಗೆ ಬಹಳ ಪ್ರಿಯವಾದದ್ದು.
ರೆರೆಪ, ಮಪನಿದನಿಸ, ದನಿಮಪ, ಗಮರೆಸ....

ಈ ಸ್ವರಗಳೊಂದಿಗೇ ಗುಡುಗು, ಮಳೆ ಬೆಸೆದುಕೊಂಡಿವೆಯೇನೋ ಎಂದೆನಿಸುತ್ತದೆ... ಸಂಗೀತದಲ್ಲಿ ಭಾವದ ಅಭಿವ್ಯಕ್ತಿ ಪ್ರಮುಖವಾಗಿದ್ದರೆ, ಈ ಭಾವನೆಗಳಿಗೂ ಮಳೆಗೂ ಬಿಡದ ನಂಟಿದೆ. ಮಳೆ– ಅದರೊಂದಿಗಿನ ಕಾಮನಬಿಲ್ಲು, ಶ್ರಾವಣದ ಮಳೆ, ಜೋಕಾಲಿಯ ಜೀಕು ಹಾಗೂ ಇವು ಮನದಲ್ಲಿ ಮೂಡಿಸುವ ಸಾವಿರ ರಂಗು, ಸಂಗೀತದಲ್ಲಿ ರೂಪು ಪಡೆದಿವೆ.

ಮಳೆಗಾಲದ ಆರಂಭದ ಅಬ್ಬರದ ಮಳೆ, ಹಿತವಾದ ನೆನಪನ್ನು ತರುವ ಸೋನೆ ಮಳೆ, ಎಲ್ಲೋ ಒಮ್ಮೆ ಬರುವ ಆಲಿಕಲ್ಲು ಮಳೆ, ಈಗ ನಾನಿರುವ ಅಮೆರಿಕ ದೇಶದಲ್ಲಿನ ಹಿಮದ ಮಳೆ– ಈ ಎಲ್ಲಾ ಮಳೆಯ ವಿವಿಧ ರೂಪಗಳು ‘ಮಲ್ಹಾರ್’ ರಾಗದ ವಿವಿಧ ಪ್ರಕಾರಗಳಾಗಿ ನನಗೆ ತೋರುತ್ತವೆ... ಎಲ್ಲಾ ಮಲ್ಹಾರ್ ರಾಗಗಳ ಮುಕುಟ ಮಣಿ, ಅಕ್ಬರನ ಆಸ್ಥಾನ ರತ್ನ ತಾನಸೇನನ ಸೃಷ್ಟಿ ‘ಮಿಯಾ ಕಿ ಮಲ್ಹಾರ್’. ತಾನು ಮಲ್ಹಾರ್ ರಾಗಗಳ ಹಿರಿಯಣ್ಣನೆಂಬ ಸೊಕ್ಕಿನೊಂದಿಗೆ ವೇದಿಕೆಯ ಮೇಲೇರುತ್ತದೆ, ಗುಡುಗು-ಮಿಂಚಿನ ಮಳೆಯಂತೆ ಈ ರಾಗ. ಭೀಮಸೇನರ ಮಿಂಚಿನಂತಹ ‘ತಾನ್’ ಬರಬೇಕಷ್ಟೇ ಈ ಮಳೆಯ ತೀವ್ರತೆ ತಿಳಿಸಲು. ‘ಕರೀಮ ನಾಮ ತೇರೋ.... ದುಃಖ ದರಿದ್ರ ಸಬ ದೂರ ಕೀಜಿಯೆ, ಸುಖ ದೇಹೊ ಸಬನಕೋ’ ಅಬ್ಬರದಲ್ಲೂ ಎಂಥಾ ಆರ್ತತೆ ತುಂಬಿದೆ... ನಿಜ, ಮಳೆಗೇ ತಾನೇ ‘ದುಃಖ ದರಿದ್ರ’ ದೂರ ಮಾಡುವ, ಜೀವ-ಭಾವವನ್ನು ತಂಪಾಗಿಸುವ ಶಕ್ತಿ ಇರುವುದು...

ಈ ರಾಗದೊಂದಿಗೆ ಬಹಳ ಪ್ರಸಿದ್ಧವಾದ ಒಂದು ಘಟನೆ ಸೇರಿಕೊಂಡಿದೆ. ತಾನಸೇನ್ ‘ದೀಪಕ’ ರಾಗ ಹಾಡಿದರೆ ಬೆಳಕು ಉರಿಯುತ್ತದೆ ಎಂದು ಕೇಳಿದ ಅಕ್ಬರ್ ಒಂದುಬಾರಿ, ಆ ರಾಗ ಹಾಡುವಂತೆ ತಾನಸೇನನನ್ನು ಒತ್ತಾಯಿಸುತ್ತಾನೆ. ತಾನಸೇನ್ ‘ದೀಪಕ‘ ರಾಗ ಹಾಡುತ್ತಿದ್ದಂತೆ, ದೀಪಗಳು ಉರಿದು, ರಾಜ ದರಬಾರಿನ ತುಂಬಾ ಬಿಸಿಯೇರಿ, ಜನ ಉರಿ ತಡೆಯಲಾರದೆ ಚೀರುವ ಪರಿಸ್ಥಿತಿ ಎದುರಾಗುತ್ತದೆ.

ಹೀಗಾಗಬಹುದೆಂಬ ಸೂಚನೆ ಹೊಂದಿದ್ದ ತಾನಸೇನ್, ತನ್ನ ಮಗಳು ಸರಸ್ವತಿಗೆ ಮಳೆಯ ರಾಗವಾದ ‘ಮಲ್ಹಾರ್’ ಹೇಳಿಕೊಟ್ಟಿರುತ್ತಾನೆ. ಆಕೆ ‘ಮಲ್ಹಾರ್’ ಹಾಡಿದ ಕೂಡಲೇ ಬಿಸಿ ನಿಧಾನವಾಗಿ ಕಡಿಮೆಯಾಗಿ, ಮಳೆ ಸುರಿದು, ತಂಪಾಗುತ್ತದೆ. 

ಮಳೆಯೆಂದರೇ ಅದೊಂದು ಬಗೆಯ ಸಂಭ್ರಮ... ಅದು ಗೌಡ್ ಮಲ್ಹಾರ್, ಮೇಘ್ ಮಲ್ಹಾರ್‌ಗಳಲ್ಲಿ ಕಾಣುವ ಸಂಭ್ರಮ. ಪುಲಕಿತರಾಗಿ ನೀರಲ್ಲಿ ನೆನೆಯುತ್ತಾ ಕುಣಿದಂತೆ... ಒಲ್ಮೆಯ ಸಖನನ್ನು ಕರೆದು, ‘ನೋಡು ನಾನೆಷ್ಟು ಸಂತೋಷದಿಂದಿದ್ದೇನೆ’ ಎಂದಂತೆ... ಭಾವನೆಯ ಆರ್ದ್ರತೆಯಲ್ಲಿ ತೋಯ್ದ ಮನದಿಂದ ಮಧುರ ಕಲ್ಪನೆಗಳು ಮಾಲೆಮಾಲೆಯಾಗಿ ಹೊರಹೊಮ್ಮುತ್ತವೆ, ಮೊದಲ ಮಳೆಗೆ ತೋಯ್ದ ಮಣ್ಣ ಕಂಪಿನಂತೆ... 

‘ಮಾನನ ಕರಿಯೆ ಗೋರಿ, ತುಮರೆ ಕಾರಣ ಆಯೋರೆ ಮೇಹಾ’– ಈ ಮಳೆ ಬಂದಿರುವುದೇ ನಿನಗಾಗಿ ಎಂಬ ಭಾವ, ಪ್ರಿಯಕರನ ಬಳಿ ಪ್ರೀತಿಯ ಹೊಳೆಯಾಗಿ ಸಾಗುತ್ತದೆ. ಸಂಗೀತ ಸರಸ್ವತಿ, ಕಿಶೋರಿ ಅಮೋನಕರ್ ಅವರ ದನಿಯಲ್ಲಿ ಮೂಡುವ ಈ ರಾಗ, ಮನದ ಮಧುರ ನೋವನ್ನು ಹೆಚ್ಚಿಸುತ್ತದೆ. ಕೇಳುತ್ತಿದ್ದಂತೆ ಈ ಸ್ವರಗಳ ಮೋಹಕತೆಯನ್ನು ಇನ್ನು ತಡೆಯಲಾರೆ, ಸಾಕು... ನನ್ನನ್ನು ನಾನೆ ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಾವ ಉಂಟುಮಾಡುತ್ತದೆ. ಮಲ್ಹಾರ್ ರಾಗಗಳ ಅಂತಸ್ಥ ರಸವೇ ಶೃಂಗಾರ ಮತ್ತು ವಿರಹ. ಮೋಡ ತುಂಬಿದ ಆಗಸದಲ್ಲಿ ಮಳೆಯನ್ನು ಎದುರು ನೋಡುತ್ತಾ, ಪ್ರಿಯಕರನ ಆಗಮನಕ್ಕಾಗಿ ಕಾಯುವ ವಿರಹಿಣಿಯ ನಿಟ್ಟುಸಿರು ಇಲ್ಲಿದೆ. 

‘ಘನ ಘೋರ ಛಾಯಿ ಘಟಾ, ಸನನ ಸನನ ಪವನ ಝಕ ಝೋರ,
ಉಮಂಡ ಘುಮಂಡ ಬರಸೇ ಸಾವನ ಮೇಹಾ
ದಾದುರ ಮೋರಾ ಪಪೀಹಾ ಬೋಲೆ, ಕೋಯಲ ಕರತ ಕಿಲೋಲ,
ಕಲಿಕಲಿ ಬನಬನ ತರು ಶೋಭಾ, ನಾದಪಿಯಾ ಬಿನ ಮನ ಲರಜೆ...


ಧಾರಾಕಾರ ಮಳೆ ಸುರಿದಿದೆ, ನವಿಲು ಕುಣಿಯುತ್ತಿದೆ, ಕೋಗಿಲೆ ಹಾಡುತ್ತಿದೆ, ಮನಸ್ಸು ಪ್ರಿಯನನ್ನು ಕಾಣಲು ಕಾತುರಗೊಂಡಿದೆ. ಈ ಕಾತರತೆಯೊಂದಿಗೆ ಮಳೆ ಸುರಿದು, ಮೂಡುವ ಹಸಿರಿನ ನಿರೀಕ್ಷೆ, ಇನಿಯ ಬರುವನೆಂಬ ಭರವಸೆಯನ್ನೂ ಈ ರಾಗಗಳಲ್ಲಿ ಕಾಣಬಹುದು.
ವಾಣಿ ಜಯರಾಮ್ ಹಾಡಿ ಪ್ರಸಿದ್ಧಗೊಳಿಸಿದ ಮಿಯಾ ಮಲ್ಹಾರ್ ರಾಗದ ‘ಬೋಲೆ ರೆ ಪಪಿಹರಾ’ ಹಾಡನ್ನು ಕೇಳದ ಸಂಗೀತಪ್ರಿಯರು ಇರಲಿಕ್ಕಿಲ್ಲ. ಈ ಹಾಡಿನಲ್ಲಿ ರಾಗ ಹಾಗೂ ಶಬ್ದಗಳ ಭಾವ, ಜಯಾ ಬಾಧುರಿ ಅಭಿನಯದಲ್ಲಿ ಮನಮುಟ್ಟುತ್ತದೆ.

ತಣ್ಣಗೆ ಸುರಿಯುವ ಮಳೆ, ಸಾವಿರ ನೆನಪುಗಳನ್ನು ತಂದು ಮೇಲೆ ಸುರಿದು ಬಿಡುತ್ತದೆ. ‘ಸಖಿ ಮೋರಿ, ರುಮಝುಮ ಬಾದಲ್ ಗರಜೆ ಬರಸೆ’– ಈ ಮಳೆಯೊಂದಿಗೆ ನನ್ನ ಜೀವವೇ ಬೆಸೆದುಕೊಂಡಿದೆ ಎಂದು ಹೇಗೆ ಹೇಳಲಿ... ಮನೆಯಂಗಳದಲ್ಲಿ ಹರಿಯುವ ನೀರಲ್ಲಿ ದೋಣಿ ಬಿಡುವ, ಬಣ್ಣದ ಕೊಡೆ ಹಿಡಿದು ಶಾಲೆಗೆ ಹೋಗುವ, ಜೋರಾದ ಮಳೆ ಸುರಿಯುತ್ತಿದ್ದಾಗ ಬೆಚ್ಚಗೆ ಕೂತು ಹಲಸಿನ ಹಪ್ಪಳ ತಿನ್ನುತ್ತಿದ್ದ ನೆನಪುಗಳೆಲ್ಲಾ ಬಿಟ್ಟರೂ ಬಿಡದವುಗಳು, ಅವು ಇಂದಿಗೂ ಜೀವನದ ಚಾಲಕ ಶಕ್ತಿಗಳು. ಆ ನೆನಪುಗಳೆಲ್ಲ ಮನದ ಮೂಲೆಯಲ್ಲಿ ಶಾಶ್ವತ ಸ್ಥಾನ ಪಡೆದು ಕೂತಿವೆ. ‘ನಟ್ ಮಲ್ಹಾರ್’, ‘ದೇಸ್ ಮಲ್ಹಾರ್’, ‘ಮೀರಾಕಿ ಮಲ್ಹಾರ್’, ‘ರಾಮ್ದಾಸಿ ಮಲ್ಹಾರ್’ ಮುಂತಾದ ರಾಗಗಳಂತೆ.

ಈ ರಾಗಗಳ ಗುಂಗಿನಿಂದ ಹೊರಬರುವುದು ಕಷ್ಟ. ಕೃಷ್ಣನ ಪರಮ ಭಕ್ತೆ ಮೀರಾ ಸೃಷ್ಟಿಸಿದ ‘ಮೀರಾ ಕಿ ಮಲ್ಹಾರ್’ ಅವಳ ಅಂತರಂಗದ ಕರೆಯಾಗಿ ಕೇಳಿಸುತ್ತದೆ. ಬಾಬಾ ರಾಮದಾಸರ ರಚನೆ ‘ರಾಮದಾಸಿ ಮಲ್ಹಾರ್’, ಸಂತಕವಿ ಸೂರದಾಸರ ‘ಸೂರ್ ಮಲ್ಹಾರ್’ ರಾಗಗಳು, ಮಳೆಯೊಂದಿಗೆ ಬೆಸೆದುಕೊಂಡ ಬೇರೆ ಏನನ್ನಾದರೂ ಹೇಳಹೊರಟಿವೆಯೇ ಎಂದು ಹುಡುಕುತ್ತೇನೆ. ‘ನಟ್ ಮಲ್ಹಾರ್’, ‘ದೇಸ್ ಮಲ್ಹಾರ್‌’ಗಳು ಲಾಸ್ಯವಾಡುವ ಲಲನೆಯರಂತೆ. ಒನಪು-ವಯ್ಯಾರಗಳಿಂದ ಕೇಳುಗರ ಮನಗೆಲ್ಲುತ್ತವೆ. ಈ ರಾಗಗಳಲ್ಲಿ ಸ್ವರಗಳ ಚಲನೆ ವಕ್ರವಾಗಿದ್ದು, ಸೆರಗು ಬೀಸುತ್ತಾ ಸಾಗುವ ಸ್ತ್ರೀಯಂತೆ ಭಾಸವಾಗುತ್ತವೆ. ಇವುಗಳು ಆಗಾಗ್ಗೆ ಸುಳಿದು ಮೊಗದಲ್ಲಿ ಸಣ್ಣ ನಗೆ ಮೂಡಿಸಿ ಸಾಗುವ ನೆನಪುಗಳಂತೆ. ಜಸ್‌ರಾಜ್ ಅವರ ಕಂಠದಲ್ಲಿ ಮೂಡಿ ಬರುವ ‘ರಾಮದಾಸಿ ಮಲ್ಹಾರ್’, ‘ನಟ್ ಮಲ್ಹಾರ್‌’ಳನ್ನು ಕೇಳುವುದೇ ಒಂದು ಸುಖ. ಅವರಿಗೆ ಲೀಲಾಜಾಲ ಆಗಿರುವ ದನಿಯಲ್ಲಿ, ಸ್ವರಗಳ ನೃತ್ಯ ಸೊಗಸಾಗಿ ಕೇಳುತ್ತದೆ.

‘ಸೂರ್ ಮಲ್ಹಾರ್’ ಬಹಳ ಜನಪ್ರಿಯವಾದ ಮಧುರ ರಾಗ. ಹೆಚ್ಚಿನ ಎಲ್ಲಾ ಸಂಚಾರ ‘ವೃಂದಾವನಿ ಸಾರಂಗ ರಾಗ’ದ ಹಾಗೆಯೇ ಇದ್ದು, ಅವರೋಹದಲ್ಲಿ ಬರುವ, ಮಪನಿಧಪ ಎಂಬಲ್ಲಿನ ‘ಧ’ ಸ್ವರದ ಬಳಕೆ ಈ ರಾಗಕ್ಕೆ ಹೊಸ ಹೊಳಪನ್ನು ನೀಡುತ್ತದೆ. ‘ಬಾದರವಾ ಬರಸನಕೊ ಆಯೋ..’ ಎಂಬ ಬಂದಿಶ್ ನಲ್ಲಿ, ತನ್ನ ಸಂಪೂರ್ಣ ಸೌಂದರ್ಯವನ್ನು ತೋರ್ಪಡಿಸುವ ಈ ರಾಗ ದೇಶದ ದಕ್ಷಿಣ ಭಾಗದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ನಮ್ಮ ನಡುವಿನ ಹಿರಿಯ ಗಾಯಕ, ಹಾಸಣಗಿ ಗಣಪತಿ ಭಟ್ಟರ ‘ಸೂರ್ ಮಲ್ಹಾರ್’ ಕುಳಿತಲ್ಲೇ ನಮ್ಮ ಮನಸ್ಸನ್ನು ಪುರುಸೊತ್ತಿಲ್ಲದಷ್ಟು ಮಳೆ ಬೀಳುವ ಮಲೆನಾಡಿಗೆ ಕರೆದೊಯ್ದು ಬಿಡುತ್ತದೆ.

ಮಲ್ಹಾರ್ ಪ್ರಕಾರದ ಬೇರೆಲ್ಲಾ ರಾಗಗಳು ಜನಪ್ರಿಯವಾಗಿದ್ದರೂ, ‘ಶುದ್ಧ ಮಲ್ಹಾರ್’ ಎಂಬುದು ಅಷ್ಟೇನು ಪ್ರಚಲಿತದಲ್ಲಿಲ್ಲದ ರಾಗ. ಹೆಚ್ಚಾಗಿ ಜೈಪುರ್ ಘರಾಣೆಯ ಗಾಯಕರು ಮಾತ್ರ ಈ ರಾಗವನ್ನು ಕೈಗೆತ್ತಿಕೊಳ್ಳುತ್ತಾರೆ. ಮೂಲದಲ್ಲಿ, ಯಾವ ರಾಗದ ಸ್ವರೂಪ ಭಾವಾಭಿವ್ಯಕ್ತಿಗೆ ಹೆಚ್ಚು ಪೂರಕವಾಗಿರುತ್ತದೋ, ಅಂತಹ ರಾಗಗಳು ಬಹು ಬೇಗ ಜನಾನುರಾಗಿಯಾಗಿ ಬಿಡುತ್ತವೆ. ಹೆಚ್ಚಿನ ಎಲ್ಲಾ ಮಲ್ಹಾರ್ ಪ್ರಕಾರಗಳು, ‘ಕಾಫ್ರಿ’ ಥಾಟ್‌ನಿಂದ ಜನಿಸಿದವುಗಳು. ಆದ್ದರಿಂದ ಈ ರಾಗಗಳು ಸಾರಂಗ ರಾಗವನ್ನು ಹೋಲುತ್ತವೆ. ‘ತಾನ್’ಗಳೆಲ್ಲಾ ಸಾರಂಗ ರಾಗವನ್ನೇ ಅನುಸರಿಸಿಕೊಂಡು ಬರುತ್ತವೆ.

ಈ ಎಲ್ಲಾ ಮಲ್ಹಾರ್ ರಾಗಗಳ ಪೈಕಿ ‘ಶುದ್ಧ ಮಲ್ಹಾರ್’, ‘ಗೌಡ್ ಮಲ್ಹಾರ್’, ‘ಮೇಘ್ ಮಲ್ಹಾರ್’ಗಳು  ಪ್ರಾಚೀನ ಮಲ್ಹಾರ್ ರಾಗಗಳೆಂದು ಹೆಸರಾಗಿವೆ. ಉಳಿದವುಗಳೆಲ್ಲಾ ಆ ನಂತರದ ಆವಿಷ್ಕಾರಗಳು. ಸಂಗೀತ ಶಾಸ್ತ್ರದಲ್ಲಿ ಪ್ರತಿಯೊಂದು ರಾಗಕ್ಕೂ, ಅದನ್ನು ಹಾಡುವ ವೇಳೆಯನ್ನು ನಿಗದಿಪಡಿಸಲಾಗಿದೆ. ‘ಮಿಯಾ ಮಲ್ಹಾರ್’, ‘ಗೌಡ್ ಮಲ್ಹಾರ್’ ಇತ್ಯಾದಿ ಹೆಚ್ಚಿನ ಎಲ್ಲಾ ಮಲ್ಹಾರ್ ರಾಗಗಳ ಗಾನ ಸಮಯ ರಾತ್ರಿ ಶುರುವಾಗುವ ಕಾಲವಾಗಿದ್ದರೆ, ‘ಸೂರ್ ಮಲ್ಹಾರ್’ ರಾಗದ ಸಮಯ ಮಾತ್ರ ಮಧ್ಯಾಹ್ನ. ಹಾಗಿದ್ದರೂ ಮಳೆಗಾಲದಲ್ಲಿ ಮಾತ್ರ ಈ ಎಲ್ಲಾ ‘ವರ್ಷ ರಾಗ’ಗಳನ್ನು ಯಾವ ಸಮಯದಲ್ಲೂ ಹಾಡಬಹುದು. ಇಡೀ ಮಳೆಗಾಲವೇ ಒಂದು ಸಂಭ್ರಮವಾಗಿದ್ದಾಗ, ಕುಣಿಯಲು-ಹಾಡಿ ನಲಿಯಲು ಸಮಯ ನಿಗದಿಪಡಿಸಲು ಸಾಧ್ಯವೇ... ತನ್ಮಯತೆಯ ಲೋಕಕ್ಕೆ ತೆರಳಲು ಹಾದಿ ತೆರೆದುಕೊಳ್ಳುತ್ತಿರುವಾಗ ಬೊಗಸೆಯಲ್ಲಿ ಹನಿ ಹನಿ ತುಂಬಿಕೊಳ್ಳುವುದಷ್ಟೇ ಬಾಕಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT