ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿಯ ಹಿಂದೆಯೇ ವಸಂತ ಬರದಿರನೇ...

ಅಕ್ಷರ ಗಾತ್ರ

‘ಸ್ಪ್ರಿಂಗ್ ಟೈಮ್’ ಎಂಬ ಶಬ್ದಕ್ಕೆ ಹೊಸತು, ಹೊಸ ಹುಟ್ಟು, ನವ ಯೌವನ, ಚೇತನ ಎಂಬೆಲ್ಲಾ ಅರ್ಥಗಳಿವೆ. ಈ ಕಾಲದಲ್ಲಿ ಇಡೀ ಭೂಮಿ ಮರುಹುಟ್ಟು ಪಡೆದಂತೆ ಶೋಭಿಸುತ್ತದೆ.

Wind, if winter comes can Spring be far behind?”ಪಿ.ಬಿ. ಶೆಲ್ಲಿಯ ‘ಓಡ್ ಟು ವೆಸ್ಟ್‌ವಿಂಡ್‌’ನಲ್ಲಿನ  ಪ್ರಸಿದ್ಧವಾದ ಈ ಸಾಲುಗಳನ್ನು ಕಾಲೇಜು ದಿನಗಳಲ್ಲಿ ಒಂದು ಒಳ್ಳೆಯ ಕವಿತೆಯಾಗಿ ಓದಿ ಖುಷಿಪಟ್ಟಿದ್ದೆ. ‘ವಸಂತ ಬಂದ, ಋತುಗಳ ರಾಜ ತಾ ಬಂದ’, ‘ವಸಂತ ಬಂದಿದೆ ಸಖಿಯೆ’ ಎನ್ನುವ ಸಾಲುಗಳು ನೀಡುವ ಸಂಭ್ರಮವನ್ನು ಈ ಇಂಗ್ಲಿಷ್ ಕವಿತೆಯಲ್ಲೂ ಕಾಣುವ ಪ್ರಯತ್ನಪಟ್ಟಿದ್ದೆ. ಆದರೆ, ವರ್ಡ್ಸ್‌ವರ್ತ್, ಶೇಕ್ಸ್‌ಪಿಯರ್, ಶೆಲ್ಲಿ, ಬ್ಲೇಕ್, ಹಾಪ್ಕಿನ್ಸ್ ಇವರೆಲ್ಲರು ವರ್ಣಿಸಿದ ವಸಂತ ಕಾಲದ ಚಂದ, ಹರುಷ ಅರ್ಥವಾದದ್ದು, ಅಮೆರಿಕದ ಸಾಲ್ಟ್ ಲೇಕ್ ಸಿಟಿಯ ಮೂರು ತಿಂಗಳ ಘೋರ ಚಳಿಗಾಲವನ್ನು ಅನುಭವಿಸಿದ ಮೇಲಷ್ಟೇ.

ವಸಂತ ಕಾಲದ ಬಗ್ಗೆ ಬರೆಯದ ಕವಿಗಳಿಲ್ಲ, ಹಾಡದ ಕೋಗಿಲೆಗಳಿಲ್ಲ. ನಾವು ಬಾಲ್ಯದಿಂದ ಹಾಡುತ್ತಾ ಬಂದ ಕವಿತೆಗಳಲ್ಲೆಲ್ಲ ವಸಂತನ ಸ್ವಾಗತ, ವರ್ಣನೆ, ಆತನ ಆಗಮನದಿಂದ ಪ್ರಕೃತಿಯಲ್ಲಿ ಉಂಟಾದ ನಲಿವು ಇವೆಲ್ಲವುಗಳು ಇದ್ದರೂ ನಾವು ಓದಿದ ಇಂಗ್ಲಿಷ್ ಕವಿತೆಗಳು ಇವುಗಳಿಗಿಂತ ಏನೋ ಭಿನ್ನವಾಗಿವೆ ಎಂದೆನಿಸುತ್ತಿತ್ತು.

ನಮ್ಮಲ್ಲಿನ ಸಂಸ್ಕೃತ ಹಾಗೂ ಹಳೆ–ನಡುಗನ್ನಡ ಕಾವ್ಯಗಳಲ್ಲಿ ವಸಂತನ ವರ್ಣನೆಗಳು ಇದ್ದರೂ, ಹೊಸಗನ್ನಡದ ನವ್ಯ ಕವಿಗಳ ವಸಂತನ ವರ್ಣನೆಯ ಮೇಲೆ ಇಂಗ್ಲಿಷ್ ಕವಿತೆಗಳ ಪ್ರಭಾವವಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇಂಗ್ಲಿಷ್ ಕವಿತೆಗಳಲ್ಲಿ ಕಾಣುವ, ಚಳಿಗಾಲದಲ್ಲಿ ಅನುಭವಿಸಿದ ಹತಾಶೆ, ವಸಂತ ಕಾಲವನ್ನು ಬರಮಾಡಿಕೊಳ್ಳುವ ಆತುರ- ಕಾತರ, ನಿರೀಕ್ಷೆ, ಸಂಭ್ರಮ ಇವುಗಳೆಲ್ಲಾ ಪ್ರತಿಕೂಲವಾದ ವಾತಾವರಣದಲ್ಲೇ ಮೈತಳೆದಿವೆ ಎನಿಸುತ್ತದೆ.

ಕರ್ನಾಟಕದಂತಹ ಸದಾ ಹಸಿರು ತುಂಬಿದ ಅನುಕೂಲಕರವಾದ ಹವಾಮಾನದಲ್ಲಿ ಹಕ್ಕಿಯಂತೆ ನಲಿಯುತ್ತಾ ಬೆಳೆದವರಿಗೆ, ಪಾಶ್ಚಾತ್ಯ ದೇಶಗಳ ಚಳಿಗಾಲ, ಹಾರಾಡುವ ಹಕ್ಕಿಗಳ ರೆಕ್ಕೆಪುಕ್ಕಗಳನ್ನು ಕತ್ತರಿಸಿದಂತೆ ಅನಿಸುತ್ತದೆ. ಹೊತ್ತುಗೊತ್ತಿಲ್ಲದೆ ಸುರಿಯುವ ಮಂಜು, ರಸ್ತೆ–ಮನೆ–ಕಾರು ಎಲ್ಲೆಡೆಯೂ ಬಿಳಿಯ ಸೆರಗು ಹೊದೆಸಿದಂತೆ ಬಿದ್ದು ಎಲ್ಲವನ್ನೂ ಒಂದಾಗಿಸಿಬಿಟ್ಟಿರುತ್ತದೆ.

ಯಾವಾಗಲೂ ಮೈನಸ್‌ನಲ್ಲಿರುವ, ಬಿಸಿಲನ್ನೇ ಕಾಣಿಸದ ತಾಪಮಾನ ಮಂಕು ಕವಿಸುತ್ತದೆ. ಹೊರಗೆ ಕಾಲಿಡಬೇಕೆಂದರೆ ಮೂರ್ನಾಲ್ಕು ಪದರಿನಲ್ಲಿ ಬಟ್ಟೆ ಮೇಲೆ ಬಟ್ಟೆ ತೊಟ್ಟು, ಸ್ನೊ ಶೂಸ್, ಟೋಪಿ, ಗ್ಲೌಸ್ ಧರಿಸಿ ಸಿದ್ಧರಾಗಬೇಕು. ಆಟಮ್ (ಫಾಲ್) ಕಾಲದಲ್ಲಿ ಎಲೆಯುದುರಿಸಿಕೊಂಡು ಬೋಳಾದ ಮರದ ಗೆಲ್ಲುಗಳ ಮೇಲೆಲ್ಲಾ ಮತ್ತೆ ಅದೇ ಬಿಳಿ ಬಿಳಿ ಮಂಜು. ಒಂದೆರಡು ಬಾರಿ ಮಂಜಿನಲ್ಲಿ ಆಡಿ ಬಂದರೆ ಸಾಕು, ಮುಂದೆ ಈ ಚಳಿಗಾಲ ಬೇಗ ಮುಗಿಯಬಾರದೇ ಎಂದು ಕಾಯುವುದೊಂದೇ ಕೆಲಸ.

ಕವಯಿತ್ರಿ ಸಾರಾ ಟೀಸ್‌ಡೆಲ್– ‘The hush is over everything, Silent as women wait for love; The world is waiting for the Spring’ ಎನ್ನುತ್ತಾಳೆ. ಈ ಕಾಯುವಿಕೆಯಲ್ಲೂ ಒಂದು ಸಂತೋಷವಿದೆ. ಅದು ಶೆಲ್ಲಿ ಹೇಳುವ, ಹಿಂದೆಯೇ ವಸಂತವಿರದೇ ಎನ್ನುವ ನಿರೀಕ್ಷೆ ತುಂಬಿದ ಖುಷಿ. ಅದಕ್ಕೇ ಇಲ್ಲಿನ ಮನೆ-ಮನೆಯಲ್ಲಿ, ಮನ–ಮನದಲ್ಲಿ ಚಳಿಯ ಆಲಸ್ಯವನ್ನು ಹೊಡೆದೋಡಿಸಿ ಚೈತನ್ಯದ ಚಿಲುಮೆಯನ್ನು ಚಿಮ್ಮಿಸುವ ವಸಂತನಿಗೆ ಸಂಭ್ರಮದ ಸ್ವಾಗತವಿರುತ್ತದೆ.

ಚಳಿಗಾಲ– ಬೇಸಿಗೆಗಾಲದ ಮಧ್ಯೆ ಬರುವ ವಸಂತಕಾಲದಲ್ಲಿ ತಾಪಮಾನ ನಿಧಾನವಾಗಿ ಏರುತ್ತದೆ. ಹೆಚ್ಚಾಗಿ ಮಾರ್ಚ್ 20, 21 ರಿಂದ ಜೂನ್ 20, 21ರ ತನಕದ ಕಾಲವನ್ನು ವಸಂತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ‘ಸ್ಪ್ರಿಂಗ್ ಟೈಮ್’ ಎಂಬ ಶಬ್ದಕ್ಕೆ ಹೊಸತು, ಹೊಸ ಹುಟ್ಟು, ನವ ಯೌವನ, ಚೇತನ ಎಂಬೆಲ್ಲಾ ಅರ್ಥಗಳಿವೆ. ಈ ಕಾಲದಲ್ಲಿ ಇಡೀ ಭೂಮಿ ಮರುಹುಟ್ಟು ಪಡೆದಂತೆ ಶೋಭಿಸುತ್ತದೆ. ಇದು ಹೊಸತಿನ ಆರಂಭದ ಕಾಲ.

ವಸಂತ, ಹೊಸ ಹರುಷದ ಹರಿಕಾರ, ಹಲವು ನಿರೀಕ್ಷೆಗಳ ಗುರಿಕಾರ, ಗಿಡಮರಗಳಿಗೆ ಹಸಿರು ತೊಡಿಸುವವನು, ಆನಂದದ ಚಿಲುಮೆ ಚಿಮ್ಮಿಸುವವನು, ಒಣಗಿದ ಕೊನರನ್ನು ಚಿಗುರಿಸುವವನು, ಹೀಗೆ ಇನ್ನೂ ಏನೇನೋ ಆಗಿ ಕನಸಿಗೆ ರೆಕ್ಕೆ ಕಟ್ಟುತ್ತಾನೆ... ಸಿಟ್ಟಿಂಗ್ ಬುಲ್ ಎಂಬ ಕವಿ, ವಸಂತ ಬಂದೊಡನೆ ಭೂಮಿ ಸೂರ್ಯನ ಬಿಸಿಲನ್ನು ಪಡೆದು ಸಂಭ್ರಮಿಸುತ್ತಾಳೆ.

ಮತ್ತೆ, ಇವರಿಬ್ಬರ ಪ್ರೀತಿಯ ಫಲವನ್ನು ನಾವು ಪಡೆಯಲಿದ್ದೇವೆ ಎನ್ನುತ್ತಾನೆ. ಭೂಮಿಯು ಬಿಸಿಲನ್ನು ಪಡೆದಂತೆ ಹಣ್ಣು–ತರಕಾರಿಗಳು ದಂಡಿಯಾಗಿ ಬೆಳೆಯುತ್ತದೆ. ವಲಸೆ ಹೋದ ಪ್ರಾಣಿ–ಪಕ್ಷಿಗಳು ವಾಪಾಸಾಗುತ್ತವೆ. ಬಣ್ಣ ಬಣ್ಣದ ಟೂಲಿಪ್ಸ್ ರೀತಿಯ ಕಣ್ಣನ್ನು ತಣಿಸುವ ಸುಂದರ ಹೂವುಗಳು ಬೆಳೆಯುತ್ತವೆ. ಈ ಕಾಲದಲ್ಲಿ ಗಾಳಿಯಲ್ಲಿನ ತೇವಾಂಶ ಹೆಚ್ಚಾಗುತ್ತದೆ. ಚಳಿ ಕಡಿಮೆಯಾಗಿ ಉಷ್ಣಾಂಶ ಹೆಚ್ಚಾದಂತೆ ಮಂಜು ಕರಗಿ ದೇಹ ಮತ್ತು ಮನಸು ಚೈತನ್ಯವನ್ನು ಪಡೆಯುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಬಿಸಿಲಿಗೆ ಹೋಗಿ ಮೈ ಕಾಸಿಕೊಳ್ಳುವ, ಬೆಳಿಗ್ಗೆ ಎದ್ದೊಡನೆ ಕಿಟಕಿ ತೆರೆದು ಮುಂಜಾವಿನ ತಾಜಾ ಗಾಳಿಯನ್ನು, ಬೆಳಕನ್ನು ಬರಮಾಡಿಕೊಳ್ಳುವ ಸುಖವನ್ನು ತರುವ ವಸಂತ, ವರ್ಡ್ಸ್‌ವರ್ತ್ ಮಾತಿನಲ್ಲಿ, ‘Nature’s holy plan’. ವಸಂತ ಕಾಲದಲ್ಲಿ ಭೂಮಿಯ ಅಕ್ಷರೇಖೆ, ಸೂರ್ಯನೆಡೆಗೆ ಜಾಸ್ತಿ ವಾಲುತ್ತದೆ. ಇದರಿಂದಾಗಿ ಈ ಕಾಲದಲ್ಲಿ ಭೂಮಿಯ ಮೇಲಿನ ಅರ್ಧಭಾಗದಲ್ಲಿ ದಿನದ ಅವಧಿ ಜಾಸ್ತಿಯಾಗುತ್ತಾ ಸಾಗುತ್ತದೆ. ದಿನದ ಅವಧಿ ಹೆಚ್ಚಾದಂತೆ ಚಟುವಟಿಕೆಗಳು ಜಾಸ್ತಿಯಾಗುತ್ತವೆ, ಲವಲವಿಕೆ ಹೆಚ್ಚುತ್ತದೆ.

ಕ್ರೀಡಾ ಚಟುವಟಿಕೆಯನ್ನು ಇಷ್ಟ ಪಡುವ ಇಲ್ಲಿನ ಜನರಂತೂ ಸ್ವಲ್ಪ ಚಳಿ ಕಡಿಮೆಯಾದರೆ ಸಾಕು, ಟ್ರಕ್ಕಿಂಗ್, ಹೈಕಿಂಗ್, ಸೈಕ್ಲಿಂಗ್‌ಗಳಿಗೆ ಹೊರಟು ಬಿಡುತ್ತಾರೆ. ಮಾರ್ಗರೇಟ್ ಆಟ್‌ವುಡ್, ‘ವಸಂತ ಕಾಲದಲ್ಲಿ, ದಿನದ ಕೊನೆಯಲ್ಲಿ ನಾವು ಕೊಚ್ಚೆಯಾಗಿ ಹೋಗಿರಬೇಕು’ ಎನ್ನುತ್ತಾಳೆ. ವರ್ಷವಿಡಿ ಸಂತೋಷದಿಂದ ಕಳೆಯಲು ಬೇಕಾದಷ್ಟು ಶಕ್ತಿಯನ್ನು, ಉತ್ಸಾಹವನ್ನು, ಮೂರೇ ತಿಂಗಳಿನಲ್ಲಿ ವಸಂತ ಕಾಲ ತುಂಬುತ್ತದೆ. ಮೊಗೆದಷ್ಟೂ ಮುಗಿಯದ ಸಂಭ್ರಮದ ಆಗರವಾದ ವಸಂತ ಮತ್ತೆ ನಮ್ಮ ಕಣ್ಣ ಮುಂದಿದೆ. ಹೊಸಹುಟ್ಟು ಪಡೆಯಲು ಸಿದ್ಧವಾಗಿ ಭೂಮಿ, ಬಾಯ್ತೆರೆದು ಕಾದಿದೆ. ನನ್ನ ಪ್ರೀತಿಯ ಕವಿ ರೈನರ್ ಮಾರಿಯಾ ರಿಲ್ಕ್‌ನ ಮಾತುಗಳಲ್ಲಿ, ‘It is spring again. The earth is like a child that knows poems by heart’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT