ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡಗಳು

ಚಂದ ಕಥೆ
Last Updated 3 ಜನವರಿ 2015, 19:30 IST
ಅಕ್ಷರ ಗಾತ್ರ

ಅವತ್ತು ಯಾಕೊ ಮೇಸ್ಟ್ರು ಬಹಳ ಖುಷಿಯಾಗಿದ್ದರು. ಹಾಗಿದ್ದಾಗಲೆಲ್ಲಾ ಅವರು ಪಾಠದ ಕಡೆಗೆ ಗಮನ ಕೊಡುತ್ತಿರಲಿಲ್ಲ. ಚಮತ್ಕಾರದ ಕತೆನೋ ಜಾನಪದ ಒಗಟೋ ಹೀಗೇ ಅದೂ ಇದೂ ಹೇಳಿ ನಗುತ್ತಾ ಇದ್ರು. ಆಗೆಲ್ಲ ಅವರಿಗೆ ಉತ್ಸಾಹ ಜೋರು. ಇವತ್ತೂ ಹಾಗೇ ನಮಗೆ ಯವುದೋ ಮಜ ಕಾದಿದೆ ಅಂತ ವಿದ್ಯಾರ್ಥಿಗಳಿಗೆಲ್ಲ ಖುಷಿ ಪಡ್ತಾ ಇದ್ರು! ಅಷ್ಟರಲ್ಲಿ ಅವರ ಕಣ್ಣು ದಕ್ಲ ಬಾಬು ಮೇಲೆ ಬಿತ್ತು.

‘ದಕ್ಲ ಬಾಬೂ, ಏಳೋ ಮೇಲಕ್ಕೆ’ ಅಂದ್ರು.
ಅವನು ನಗುನಗುತ್ತಾನೇ ಎದ್ದು ನಿಂತ.
‘ನೋಡ್ರೋ ನೋಡ್ರೋ ಅವನೆಷ್ಟು ಖುಷಿಯಾಗಿದಾನೆ... ಹುಡುಗ್ರು ಹಾಗಿರಬೇಕು. ಬಾಬೂ ಈಗ ಪಾಠ ಮಾಡ್ಲೋ ಇಲ್ಲ ಏನಾದರೂ ಹೇಳ್ಲೋ’  ಅಂತ ಕೇಳಿದರು.
ಅವನು ‘ಸಾರ್‌, ದಿನಾ ಪಾಠ ಮಾಡ್ತೀರಿ, ಇವತ್ತೊಂದು ಕತೆ ಹೇಳಿದ್ರೆ ಚೆನ್ನಾಗಿರುತ್ತೆ ಸಾರ್‌’ ಅಂದ.

‘ಬೆಳಿಗ್ಗೆ ನಾನು ಜಾನಪದ ಕತೆಗಳನ್ನು ಓದ್ತಾ ಇದ್ದೆ ಕಣ್ರೋ. ಅದರಲ್ಲಿ ಒಬ್ಬ ಮನುಷ್ಯನ ತಲೆ ಮಾತ್ರ ಕುದುರೆಯದಾಗಿ ಬಿಡುತ್ತೆ. ‘ಹಯವದನ’ ಅಂತ ಅವನ ಹೆಸರು. ಇನ್ನೊಂದು ಕತೇಲಿ ಒಬ್ಬ  ಬ್ರಾಹ್ಮಣ ಹುಲಿಯ ಅಸ್ತಿಪಂಜರಕ್ಕೆ ಮಂತ್ರ ಹಾಕಿ ಪ್ರಾಣ ತುಂಬ್ತಾನೆ. ಅದು ನಿಜವಾದ ಹುಲೀನೆ ಆಗಿ ಬಿಡುತ್ತೆ.  ಇವನ್ನೆಲ್ಲಾ ಓದ್ತಾ ಇದ್ದಾಗ ಒಂದು ವಿಷಯ ನನ್ನ ಮನಸ್ಸಿಗೆ ಹೊಳೀತು. ಅದನ್ನು ಹೇಳೋಕೇ ಬಂದೆ’ ಅಂದರು ಗುರುಗಳು.

‘ಹೇಳಿ ಸಾರ್‌... ಹೇಳಿ ಸಾರ್‌’ ಅಂತ ಹುಡುಗರೆಲ್ಲ ದುಂಬಾಲು ಬಿದ್ದರು.
‘ನಾಡಿದ್ದು ಸೋಮವಾರ ಒಂದು ತಮಾಷೆ ಮಾಡೋಣ. ನಿಮ್ಮಲ್ಲಿ ಐದು ಜನ ಮನೇಲಿ ಪ್ರಾಣಿಗಳ ಮುಖವಾಡಗಳನ್ನು ನಾಳೆ ಭಾನುವಾರ ತಯಾರು ಮಾಡಿಕೋಬೇಕು. ಸೋಮವಾರ ತರಬೇಕು. ಕೊನೇ ತರಗತೀಲಿ ಅವುಗಳ ವೇಷ ಹಾಕ್ಕೊಂಡು ಕುಣೀಬೇಕು. ಯಾರು ಯಾರು ರೆಡಿಯಾಗಿದೀರಾ? ಯಾವ ಯಾವ ಪ್ರಾಣಿ ಆಗ್ತೀರಾ?’

ಬಾಬು ಕೂಡಲೆ ‘ನಾನು ಹುಲಿ’ ಅಂದ. ಗೋವಿನ ಹಾಡು ಓದಿದ್ದು ಗೋಪಾಲ ‘ನಾನು ಹಸು’ ಅಂದ. ಗಣೇಶನ ಭಕ್ತ ನಾಗರಾಜ ‘ನಾನು ಆನೆ’ ಅಂದ.
‘ನೀನೋ ಅಬ್ದುಲ್ಲಾ, ಒಳ್ಳೇ ಪೈಲ್ವಾನ್‌ ಥರ ಇದ್ದೀಯ. ಯಾವ ಮುಖವಾಡ ತರ್‍್ತೀಯಪ್ಪ?’ ಕೇಳಿದರು ಮೇಷ್ಟ್ರು.

ಅವನು ‘ಸಿಂಹ ಆಗ್ತೀನಿ ಸರ್‌’ ಅಂದ. ಯಾವಾಗಲೂ ಚೇಷ್ಟೆ ಮಾಡ್ತಿದ್ದ ತರ್ಲೆ ಹುಡುಗ ಫ್ರಾನ್ಸಿಸ್‌ ಮಾತ್ರ ಸುಮ್ಮನೆ ಕೂತಿದ್ದ. ಮೇಷ್ಟ್ರು, ‘ಫ್ರಾನ್ಸಿಸ್‌, ನೀನು ಮಂಗನ ವೇಷ ಹಾಕ್ಕೊಳ್ಳೊ. ಚೆನ್ನಾಗಿ ಹಾಸ್ಯ ಮಾಡ್ತಿರ್ತೀಯ’ ಅಂದರು. ಎಲ್ಲರೂ ಪಕಪಕ ನಕ್ಕರು. ಫ್ರಾನ್ಸಿಸ್‌ ಸಪ್ಪಗಾದ. ಮೇಷ್ಟ್ರು ಅವನ ಹತ್ತಿರ ಬಂದು ಬೆನ್ನು ತಟ್ಟುತ್ತ, ‘ಹುಡುಗರನ್ನು ನಗಿಸೋದ್ರಲ್ಲಿ ಹಾವಭಾವ ತೋರಿಸೋದ್ರಲ್ಲಿ ನಿನ್ನದು ಎತ್ತಿದ ಕೈ. ಕೋತಿ ವೇಷಾನೇ ಹಾಕ್ಕೊಳ್ಳೊ ಚೆನ್ನಾಗಿರುತ್ತೆ’ ಎಂದು ಹುರಿದುಂಬಿಸಿದರು. ಅವನು ಯೋಚನೆ ಮಾಡಿದ. ಈಗ ಗೇಲಿ ಮಾಡಿದ ಹುಡುಗರಿಗೆಲ್ಲ ತನ್ನ ಪ್ರತಿಭೆ ಏನೂಂತ ತೋರಿಸಬೇಕು ಅನ್ನಿಸಿತು.

‘ಸರಿ ಸರ್‌’ ಅಂದ. ಗುರುಗಳು ಮತ್ತೊಂದು ಕತೆ ಹೇಳುವಷ್ಟರಲ್ಲಿ ಶಾಲೆಯ ಗಂಟೆ ಹೊಡೀತು. ‘ಹೋ’ ಎನ್ನುತ್ತ ಎಲ್ಲರೂ ಒಟ್ಟಿಗೆ ಆಚೆಗೆ ಓಡಿದರು. ಮನೆ ಸೇರುವ ಆತುರ ಅವರ ನಡಿಗೆಯಲ್ಲಿ, ಓಟದಲ್ಲಿ ಎದ್ದು ಕಾಣುತ್ತಿತ್ತು. ಈ ಐದು ಮಂದಿ ಹುಡುಗರು ಮಾತ್ರ ಮುಖವಾಡ ತಯಾರಿಸುವ ಬಗ್ಗೆಯೇ ಯೋಚಿಸುತ್ತಾ ನಡೆದಿದ್ದರು.
* * *
ಸೋಮವಾರ ಮಧ್ಯಾಹ್ನಕ್ಕಾಗಿ ಹುಡುಗರು ಕಾಯ್ತಾ ಇದ್ರು. ಐವರೂ ತಯಾರಿಸಿ ತಂದಿದ್ದ ಮುಖವಾಡಗಳನ್ನು ಗುರುಗಳು ಬೀರುವಿನಲ್ಲಿಟ್ಟು ಬೀಗ ಹಾಕಿಬಿಟ್ಟಿದ್ದರು! ಮಧ್ಯಾಹ್ನ ತೆಗೆದುಕೊಟ್ಟರು. ಐದೂ ಜನ ಅವುಗಳನ್ನು ಧರಿಸಿದರು.  ಯೂನಿಫಾರಂ ಬಿಚ್ಚಿಟ್ಟು ಆಯಾ ಪ್ರಾಣಿಗೆ ತಕ್ಕ ಹಾಗೆ ತಕ್ಕಮಟ್ಟಿಗೆ ಸಿದ್ಧಪಡಿಸಿಕೊಂಡು ತಂದಿದ್ದ ಬಟ್ಟೆಗಳನನೂ ತೊಟ್ಟರು. ಇದಕ್ಕಾಗಿ ಭಾನುವಾರವಿಡೀ ಅವರ ಸ್ನೇಹಿತರು, ಅಪ್ಪ ಅಮ್ಮಂದಿರೂ ಸಹಾಯ ಮಾಡಿದ್ದರು. ತಮಾಷೆಯೆಂದರೆ ಆಯಾ ಪ್ರಾಣಿಯ  ಬಾಲಗಳನ್ನೂ ಅಳತೆ ಮಾಡಿಕೊಂಡು ರೆಡಿ ಮಾಡಿಸಿಕೊಂಡು ತಂದಿದ್ದು, ಅವುಗಳನ್ನು ಹಿಂಬದಿಯಲ್ಲಿ ಸಿಕ್ಕಿಸಿಕೊಂಡರು!

ಬಾಲ ಬಂದ ಮೇಲೆ ಅವರ ಆಟ ಕೇಳಬೇಕೆ? ತರಗತಿಯಲ್ಲಿ ಅತ್ತ ಇತ್ತ ಆಯಾ ಪ್ರಾಣಿಗಳ ಹಾಗೆಯೇ ನಡೆಯುತ್ತ, ಜಿಗಿಯುತ್ತ, ನಟಿಸುತ್ತ ಕುಣಿಯತೊಡಗಿದರು. ಬಾಬು ಹುಲಿಯ ಹಾಗೆಯೇ ಗರ್ಜಿಸಿದ. ಅಬ್ದುಲ್ಲಾನಂತೂ ಸಿಂಹದ  ಹಾಗೆಯೇ ಆರ್ಭಟಿಸಿದ. ನಾಗರಾಜ ಸೊಂಡಿಲನ್ನು ಆಡಿಸಿದ್ದೇ ಆಡಿಸಿದ್ದು! ಅವರೆಲ್ಲರನ್ನೂ ಮೀರಿಸಿ ಫ್ರಾನ್ಸಿಸ್‌ ಕೋತಿಯ ಹಾಗೆಯೇ ಮೈ ಕೈ ತಲೆಗಳನ್ನೆಲ್ಲ ತುರಿಸಿಕೊಳ್ಳೋದೇನು, ಗುರ್‌ ಗುರ್‌ ಅಂತ ಹಲ್ಲು ಕಿರಿಯುತ್ತ ಸದ್ದು ಮಾಡೋದೇನು? ಕ್ಲಾಸು ರೂಮಲ್ಲೇ ಲಾಗಾ ಹಾಕೋದೇನು? ಸಾಕಷ್ಟು ಹೊತ್ತು ಹೀಗೇ ಎಲ್ಲರೂ ಖುಷಿ ಪಟ್ಟರು. ಬಹಳ ಮಜವಾಗಿತ್ತು ಸರ್‌ ಎಂದು ಹುಡುಗರು ಮೆಚ್ಚುಗೆ ತಿಳಿಸಿದರು.

‘ಇದು ಇಲ್ಲಿಗೇ ಮುಗೀಲಿಲ್ಲ ಕಣ್ರೋ. ಈಗ ಮುಂದಿದೆ ನಿಜವಾದ ಆಟ’ ಅಂದರು.
‘ಅದೇನು ಸರ್‌... ಅದೇನು ಸರ್‌’ ಅಂತ ವಿದ್ಯಾರ್ಥಿಗಳೆಲ್ಲ ಅವರ ಸುತ್ತ ಮುತ್ತಿಕೊಂಡರು.
‘ಈಗ ಶುರುವಾಗುತ್ತೆ ಮುಖ್ಯವಾದ ಆಟ. ವೇಷಧಾರಿಗಳಾಗಿದ್ದ ಇವರು ಐವರನ್ನು ನಾನೇ ಬೇರೆ ಬೇರೆ ಕಡೆ ಕಳಿಸಿ ಅಲ್ಲೇ ಒಂದೊಂದು ಮುಖವಾಡ ಕೊಡ್ತೇನೆ. ಹಾಕಿಕೋಬೇಕು. ಅವು ಅದಲು ಬದಲು ಆಗಿರುತ್ತವೆ. ಅವರು ಆಯಾ ಪ್ರಾಣಿಯ ಉಳಿದ ಉಡುಪನ್ನು ಬಿಚ್ಚಿಟ್ಟು ಷರ್ಟು, ಪ್ಯಾಂಟುಗಳ ಯೂನಿಫಾರಂ ತೊಟ್ಟುಕೋಬೇಕು. ಐವರಲ್ಲಿ ಯಾರೂ ಮಾತನಾಡಬಾರದು. ಇಲ್ಲೇ ಐದು ನಿಮಿಷಗಳ ಕಾಲ ಸುತ್ತಾಡ್ತಾ ಇರಬೇಕು. ಅವಧಿ ಮುಗಿದ ಮೇಲೆ ಯಾವ ಯಾವ ಮುಖವಾಡ ಧರಿಸಿದವರು ಯಾರು ಯಾರು ಎಂದು ಎಲ್ಲರನ್ನೂ ಇವರಲ್ಲಿ ಯಾರು ಗುರುತಿಸುತ್ತಾರೋ ಅವರಿಗೆ ವಾರ್ಷಿಕೋತ್ಸವದಲ್ಲಿ ಬಹುಮಾನ ಕೊಡಿಸ್ತೇನೆ’ ಅಂದರು.

ಇದಕ್ಕೆ ಎಲ್ಲರೂ ಒಪ್ಪಿಕೊಂಡರು. ಗುರುಗಳು ಹೇಳಿದ ಹಾಗೇ ನಡೆಯಿತು. ಐದೂ ಜನ ಮಾತಿಲ್ಲದೆ ಸುತ್ತಾಡಿದರು. ಹುಡುಗರೆಲ್ಲರಿಗೂ ಕುತೂಹಲ. ಮೇಷ್ಟ್ರು ಅವಧಿ ಮುಗಿದ ಸೂಚನೆ ನೀಡಿದರು. ಐವರನ್ನೂ ಒಂದೆಡೆ ನಿಲ್ಲಿಸಿದರು.
‘ನಿಮ್ಮಲ್ಲಿ ಯಾರು ಉಳಿದ ನಾಲ್ವರನ್ನು ಗುರುತಿಸಿದ್ದೀರಿ? ಕೈ ಎತ್ತಿ’ ಅಂದರು. ದಕ್ಲಬಾಬು ಒಬ್ಬನೇ ಕೈಯೆತ್ತಿದ್ದು! ಉಳಿದ ನಾಲ್ವರಿಗೂ ಸಾಧ್ಯವಾಗಿರಲಿಲ್ಲ. ಯಾವ ಮುಖವಾಡ ಧರಿಸಿರುವವರು ಯಾರು ಅಂತ ಗುರುತಿಸು ಎಂದು ಮೇಷ್ಟ್ರು ಹೇಳಿದ ಕೂಡಲೇ ಅವರು ಸರಿಯಾಗಿ ಹೆಸರಗಳನ್ನು ಹೇಳಿಬಿಟ್ಟ. ಯಾರೂ ಮಾತನ್ನೇ ಆಡದಿದ್ದಾಗ ಇವನು ಹೇಗೆ ಗುರುತು ಹಿಡಿದ  ಅಂತ ಎಲ್ಲರಿಗೂ ಆಶ್ಚರ್ಯ. ಗುರುಗಳು ಅದು ಹೇಗೆ ಗುರುತಿಸಿದೆ ಅಂತ ಪ್ರಶ್ನಿಸಿದರು.
ಆಗ ಬಾಬು ಹೇಳಿದ.

‘ಮೊನ್ನೆ ಆಟ ಆಡುವಾಗ ಗೋಪಾಲನ ಕಾಲು ಬೆರಳಿಗೆ ಗಾಯವಾಗಿತ್ತು.  ಅವನನ್ನು ಸುಲಭವಾಗಿ ಗುರುತಿಸಿದೆ. ಉಳಿದವರು ಅವರವರ ಮ್ಯಾನರಿಸಂಗಳಿಂದ ಸಿಕ್ಕಿಬಿದ್ದರು. ನಾಗರಾಜ ಆಗಾಗ ಭುಜ ಹಾರಿಸ್ತಿರ್ತಾನೆ. ಅದನ್ನು ಗಮನಿಸಿದೆ. ಫ್ರಾನ್ಸಿಸ್‌ ತಲೆ ಆಡಿಸ್ತಿರ್ತಾನೆ. ಅವನನ್ನೂ ಗುರುತಿಸಿದೆ. ಇನ್ನು ಅಬ್ದುಲ್ಲಾ ಮತ್ತೆ ಮತ್ತೆ ಕಾಲು ಕುಣಿಸ್ತಾನೆ. ಹೀಗಾಗಿ ಸುಲಭವಾಗಿ ಗುರುತಿಸಿದೆ’ ಅಂದ. ಹುಡುಗರೆಲ್ಲ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಮೇಷ್ಟ್ರು ಕೂಡ ಖುಷಿಪಟ್ಟು ನಗುತ್ತ ‘ವಾರ್ಷಿಕೋತ್ಸವದಲ್ಲಿ ನಿನಗೇ ಬಹುಮಾನ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT