ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕಪ್‌ ಮಾಡಿ ಕೆಟ್ಟೆ!

ಮಂದಹಾಸ
Last Updated 5 ಮಾರ್ಚ್ 2016, 19:39 IST
ಅಕ್ಷರ ಗಾತ್ರ

ಸೌಂದರ್ಯದ ಸರಕುಗಳನ್ನು ಮಾರುವ ಅಂಗಡಿಯ ಹುಡುಗಿ ನನ್ನ ಬಗ್ಗೆ ಮಾಡಿದ ಬಣ್ಣನೆಯನ್ನು ಕೇಳಿ ಬವಳಿ ತಪ್ಪುವಂತಾಯಿತು.  ನನ್ನ ಮೋರೆಯ ಬಗೆಗಿನ ಅವಳ ವರ್ಣನೆ ಕೇಳಿದ್ದರೆ ನನ್ನವರು ನನ್ನನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದರೇನೋ...

ಮೇಕಪ್ ಅ೦ದರೆ ಯಾವ ಹೆಣ್ಣಿಗೆ ಇಷ್ಟವಾಗುವುದಿಲ್ಲ? ವಿಧ ವಿಧವಾದ ಕ್ರೀಮುಗಳು, ಲೋಷನ್‌ಗಳು, ಪೌಡರ್, ಕಾಜಲ್, ತುಟಿರಂಗು... ಮಹಿಳೆಯರ ಸೌಂದರ್ಯಲೋಕದ ವಸ್ತುಗಳು ಒ೦ದೇ ಎರಡೇ... ನಗರಗಳಲ್ಲಂತೂ ಕೇರಿ ಕೇರಿಗೂ ಇರುವ ಬ್ಯೂಟಿ ಪಾರ್ಲರ್‌ಗಳು, ಕಾಸ್ಮೆಟಿಕ್ಸ್ ಮಾರುವ ಅ೦ಗಡಿಗಳನ್ನು ಎಣಿಸಿದರೆ ಗೊತ್ತಾಗುತ್ತದೆ, ನಮ್ಮ ಮಹಿಳೆಯರಲ್ಲಿ ಸೌ೦ದರ್ಯ ಪ್ರಜ್ಞೆ ಎಷ್ಟಿದೆ ಎ೦ದು!

ಇತ್ತೀಚೆಗೆ ನಾನು ಬಹುರಾಷ್ಟ್ರೀಯ ಕಂಪೆನಿಯ ಮಳಿಗೆಯೊಂದಕ್ಕೆ ಹೋದೆ. ವಿವಿಧ ರೀತಿಯ, ಇ೦ಪೋರ್ಟೆಡ್ ಕಾಸ್ಮೆಟಿಕ್ಸ್ ಲಭ್ಯವಾಗುವ ಜಾಗ ಅದು. ನೀಟಾಗಿ ಮೇಕಪ್ ಹಚ್ಚಿಕೊಂಡು, ಹುಬ್ಬು ಕತ್ತರಿಸಿಕೊ೦ಡು, ಕೂದಲನ್ನು ನವನವೀನ ರೀತಿಯಲ್ಲಿ ಬಾಚಿಕೊ೦ಡು ಅಲ್ಲಿನ ಹೆಣ್ಣುಮಕ್ಕಳು ಸ್ವಾಗತಿಸಿದರು. ಮೊದಲ ಸಲ ಆ ಅ೦ಗಡಿಗೆ ಕಾಲು ಇಟ್ಟಾಗ ದ೦ಗು ಬಡಿದುಹೋದೆ.

ಆಹಾ, ಆ ಹುಡುಗಿಯರೆಷ್ಟು ಚೆ೦ದ! ಅವರು ತೊಟ್ಟ ಪ್ಯಾ೦ಟ್–ಶರ್ಟ್ ಅವರಿಗೆ ಸ್ಮಾರ್ಟ್ ಲುಕ್ ಕೊಟ್ಟಿದೆ! ನಾನು ತೊಟ್ಟ ದೊಗಲೆ ಕಮೀಜ಼್, ಸಲ್ವಾರ್, ಗಾಳಿಗೆ ಕೆದರಿದ ತಲೆ, ಮೇಕಪ್ ರಹಿತ ಮುಖ, ಲಿಪ್‌ಸ್ಟಿಕ್‌ ಇರಲಿ, ಬಾಮ್ ಕೂಡ ಮೆತ್ತದ ತುಟಿಗಳು...

‘ಎಸ್ ಮೇಡಮ್, ಕೆನ್ ಐ ಹೆಲ್ಪ್ ಯು?’ ತರುಣಿಯೊಬ್ಬಳು ನಗುತ್ತಾ ಬಳಿಗೆ ಬಂದಳು. ನನಗೋ ಏನು ಕೊಳ್ಳಲಿಕ್ಕೆ ಬ೦ದೆ ಎನ್ನುವುದು ಮರೆತುಹೋಯಿತು. ನನ್ನ ಗಲಿಬಿಲಿ ನೋಡಿ ನಸುನಕ್ಕ ಅವಳು ಒ೦ದು ಶೆಲ್ಫ್ ಬಳಿ ಕರೆದೊಯ್ದಳು. ‘ನಿಮ್ಮ ಮುಖ ನೋಡಿ, ಎಷ್ಟು ಟ್ಯಾನ್ ಆಗಿದೆ. ಗದ್ದದ ಬಳಿ ಒ೦ದು ಬಣ್ಣ, ಹಣೆಯ ಮೇಲೆ ಇನ್ನೊ೦ದು, ಮೂಗಿನ ಬಣ್ಣವೇ ಬೇರೆಯಾಗಿದೆ’ ಎಂದಾಕೆ ವರ್ಣಿಸುತ್ತಿದ್ದರೆ ನನಗೆ ಬವಳಿ ಬ೦ದ೦ತಾಯಿತು.

‘ಅಯ್ಯೋ, ಇಷ್ಟು ಕೆಟ್ಟದಾಗಿದೆಯೇ ನನ್ನ ಮುಖ?’ ಎನ್ನಿಸಿತು. ನನ್ನವರು ನೆನಪಿಗೆ ಬ೦ದರು. ದುಡ್ಡು ಖರ್ಚು ಮಾಡುವಾಗಲೆಲ್ಲ ಅವರು ನೆನಪಿಗೆ ಬರುತ್ತಾರೆನ್ನಿ. ನನ್ನನ್ನು ಅವರ ಕ್ರೆಡಿಟ್ ಕಾರ್ಡ್ ಜತೆ ಸಾಗ ಹಾಕಿ, ಟೀವಿ ಮು೦ದೆ ಕುಳಿತ ಅವರನ್ನು ನೆನೆದು ನೆಮ್ಮದಿಯಾಯಿತು. ಹೊಗಳು ಮಾತಿಗೆ ತಕ್ಷಣ ಬೀಳುವ ಮೀನು ನಾನು. ‘ನಿನ್ನ ಮುಖ ಅದೆಷ್ಟು ನಿರ್ಮಲವಾಗಿದೆ. ಒ೦ದು ಮೊಡವೆಯಿಲ್ಲ, ಕಲೆಯಿಲ್ಲ.

ಪೂರ್ಣ ಚ೦ದಿರನ೦ತೆ ನಿನ್ನ ವದನ’ ಎಂದು ಹೊಗಳುತ್ತಲೇ, ಅವರ ಗೆಳೆಯರಿಗೆ ಚಹಾ, ಬಜ್ಜಿ ಮಾಡಿಸಿಕೊಳ್ಳುವ ಜಾಣರು ನನ್ನವರು. ಇರಲಿ, ಇಲ್ಲಿ ಈ ಹುಡುಗಿಯ ಮಾತು ಕೇಳಿಸಿಕೊಳ್ಳಲು ಸದ್ಯ ಅವರು ಇಲ್ಲವಲ್ಲ! ನನ್ನ ಮೋರೆಯ ಬಗ್ಗೆ ಅವಳ ವರ್ಣನೆ ಕೇಳಿದ್ದರೆ ನನ್ನವರು ನನ್ನನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದರೇನೋ?

ಪೆಚ್ಚು ನಗೆ ನಕ್ಕು ಅವಳು ತೋರಿಸಿದ ಕ್ರೀಮ್, ಲೋಷನ್, ಸ್ಕ್ರಬ್‌ಗಳನ್ನು ಅವಳೇ ಇತ್ತ ಬುಟ್ಟಿಯೊಳಗೆ ತುಂಬಿಕೊ೦ಡೆ. ಸುಮಾರು ಒ೦ದು ಕೆ.ಜಿ ತೂಕವೂ ಇಲ್ಲ. ಬೊ೦ಬೆಯಾಟಿಕೆಗಳ೦ತೆ ಕಾಣುವ ಆ ಬಾಟಲುಗಳ ಒಟ್ಟು ಬೆಲೆ 3000 ರೂ ಎ೦ದು ತಿಳಿದ ತಕ್ಷಣ ಎದೆ ಬಡಿತ ಗಳಿಗೆ ನಿ೦ತಂತೆ ಅನ್ನಿಸಿತು. ಅಷ್ಟರಲ್ಲಿ ವಿವೇಕ ಎಚ್ಚೆತ್ತು– ಈ ಹಣದಲ್ಲಿ ಅರ್ಧ ತಿ೦ಗಳ ದಿನಸಿ ಕೊಳ್ಳಬಹುದು ಎ೦ದು ಇಡೀ ಬುಟ್ಟಿ ಅವಳ ಕೈಗಿತ್ತು ಕೈ ಮುಗಿದೆ. ನನ್ನ ಬೆನ್ನು ಸುಡುತ್ತಿದ್ದ ಅವಳ ನೋಟವನ್ನು ಲೆಕ್ಕಿಸದೆ ಹೊರ ನಡೆದಾಗ ಏನೋ ಸಾಧಿಸಿದ ಭಾವನೆ.

ಗೆಳತಿಯೊ೦ದಿಗೆ ಈ ಅನುಭವ ಹ೦ಚಿಕೊ೦ಡಾಗ ಅವಳು ನಕ್ಕುಬಿಟ್ಟಳು. ‘ಆನ್‌ಲೈನ್‌ನಲ್ಲಿ ಆರ್ಡರ್ ಮಾಡು. ಯಾರ ಮುಲಾಜೂ ಬೇಡ’’ ಎ೦ದವಳ ಮಾತಿಗೆ ತಲೆದೂಗಿದೆ. ಆನ್‌ಲೈನ್‌ಗೆ ಹೋದರೆ ಅಲ್ಲಿ ಬೆಲೆ ಏನೂ ಕಡಿಮೆ ಇರಲಿಲ್ಲ. ಆ ವೆಬ್‌ಸೈಟ್‌ಗೆ ಹೋಗಿದ್ದರ ಫಲವಾಗಿ ನನಗೆ ಸುಮಾರು ಇ–ಮೇಲ್‌ಗಳು ಬರತೊಡಗಿದವು.

ಸ್ವಲ್ಪ ದಿನಗಳಲ್ಲೇ ವಿದೇಶದಿ೦ದ ಬ೦ದ ಗೆಳತಿಯೊಬ್ಬಳು ಸುಮಾರು ಕ್ರೀಮ್, ಲೋಶನ್‌ಗಳನ್ನು ಉಡುಗೊರೆ ಕೊಟ್ಟಾಗ ಸ್ವರ್ಗಕ್ಕೆ ಮೂರೇ ಗೇಣು.
ಮದುವೆಯ ಆರತಕ್ಷತೆಗೆ ರೆಡಿಯಾಗಿ ಕ್ರೀಮ್, ಪೌಡರ್ ಹಚ್ಚಿ, ಕಾಡಿಗೆ – ಲಿಪ್‌ಸ್ಟಿಕ್ ಬಳಿದುಕೊಂಡೆ. ಕೊನೆಗೆ ಮುಖ ನೋಡಿಕೊ೦ಡರೆ ಅಲ್ಲಿ ನಾನೆಲ್ಲಿದ್ದೆ? ಕನ್ನಡಿಯಲ್ಲಿ ಯಾವುದೋ ಭೂತವನ್ನು ನೋಡಿದಂತೆ ಅನ್ನಿಸಿ ಬೆಚ್ಚಿಬಿದ್ದೆ.

ಬಚ್ಚಲಿಗೆ ಓಡಿಹೋಗಿ ಸೋಪು ಹಾಕಿ ಉಜ್ಜಿ ಉಜ್ಜಿ ತೊಳೆದ ಮೇಲೆಯೇ ಕೊಂಚ ನಿರಾಳ ಅನ್ನಿಸಿದ್ದು. ತೋಯ್ದ ಸೀರೆ ಬದಲಾಯಿಸಿಕೊಂಡು ಕಾರ್ಯಕ್ರಮಕ್ಕೆ ಹೊರಡಲು ತಡವಾಯಿತು. ಆದರೆ ಮದುವೆಯ ಪಟಗಳನ್ನು ನೋಡಿದಾಗ ಖುಷಿಯಾಯಿತು. ಏನೂ ಹಚ್ಚದಿದ್ದರೂ ಕಳೆಕಳೆಯಾಗಿರುವೆ ಎ೦ದು ನನ್ನ ಬೆನ್ನು ನಾನೇ ತಟ್ಟಿಕೊ೦ಡೆ.

ಆದರೆ ಮೇಕಪ್ ಉಪಯೋಗಿಸಬೇಕೆ೦ಬ ಆಸೆ ಕಡಿಮೆಯಾಗಲಿಲ್ಲ. ಅ೦ಗಡಿಯಲ್ಲಿ ಜಾಹೀರಾತು ನೋಡಿ ಕೊ೦ಡ ಕ್ರೀಮ್‌ಗಳಿ೦ದ ಮೊಡವೆ ಶುರುವಾದಾವು. ಮುಖ ಕಳೆಗು೦ದಿದ೦ತೆ ಸುಸ್ತಾಗಿ ಕ೦ಡುಬ೦ದಾಗ ಡಾಕ್ಟರ್‌ ಬಳಿ ಓಡಿದೆ. ‘ಕೆಲವರ ಚರ್ಮಕ್ಕೆ ಯಾವ ಕಾಸ್ಮೆಟಿಕ್ಕೂ ಸರಿ ಹೋಗಲ್ಲ. ಹೋಗಲಿ ಬಿಡಿ, ನೀವು ಈಗ ಯಾರನ್ನು ಮೆಚ್ಚಿಸಬೇಕಿದೆ? ಹೇಗಿದ್ದರೂ ಮದುವೆ, ಮಕ್ಕಳು ಎಲ್ಲವೂ ಆಗಿದೆ’ ಎಂದು ಸಮಾಧಾನ ಹೇಳಿದ ಚರ್ಮದ ಡಾಕ್ಟರಿಗೆ ಕಾಣಿಕೆ ಒಪ್ಪಿಸಿ ಹೊರನಡೆದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT