ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣ

ದೀಪಾವಳಿ ಕಥಾಸ್ಪರ್ಧೆ 2015 – ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 26 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಅಂದು ಮುಂಜಾನೆ ಕಾಗೆಗಳು ಹದ್ದುಗಳು ಊರ ಎದೆಯ ಮೇಲೆ ಹಾರಾಡುವ ಹೊತ್ತಿಗೆಲ್ಲ ಆ ಸುದ್ದಿ ಊರ ಎದೆಯೊಳಗೆ ಪಿಸುಗುಡತೊಡಗಿತ್ತು. ಸಂಕ್ರಾಂತಿ ತಿಂಗಳ ಚಳಿಯಾದರೂ ದಟ್ಟ ಮಂಜು ಕವಿಯದ ದಿನವಾಗಿತ್ತು. ಹೀಗಿದ್ದರೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದ ಚಳಿಗೆ ಆ ಸುದ್ದಿಯೇ ಬೆಂಕಿಯ ಶಾಖವಾಗಿ, ಆ ಶಾಖದಲ್ಲಿ ಊರು ಸುಖಿಸುತ್ತಿರುವ ಹೊತ್ತಿಗೆ ರಾಮದೇವರ ಗುಡಿಯ ಮುಂದಿರುವ ಪುಟ್ಟ ಮನೆಯಲ್ಲಿರುವ ಶಶಿಯ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯತೊಡಗಿತ್ತು.

ರಾತ್ರಿಯೆಲ್ಲ ಅತ್ತೂ ಅತ್ತು ಸುಸ್ತಾಗಿ ಬೆಳಗಿನ ಜಾವ ಒಂದಷ್ಟು ತೂಕಡಿಕೆ ಬಂದಿತ್ತಾದರೂ ಉಮ್ಮಳಿಸಿ ಬರುತ್ತಿದ್ದ ದುಃಖ ನಿದ್ದೆ ಎಂಬೋ ಅರವಳಿಕೆ ಮದ್ದನ್ನು ಅವಳ ದೇಹದಿಂದ ಅಕ್ಷರಶಃ ಹೀರಿ ಆಚೆಗೆಸೆದು ಬಿಟ್ಟಿತ್ತು. ಅವಳು ಏನು ಆಗಬಾರದೆಂದುಕೊಂಡಿದ್ದಳೋ ಅದು ಸಂಭವಿಸಿಯೇ ಬಿಟ್ಟಿತ್ತು. ಮೊದಲೇ ಹಲವು ವರ್ಷಗಳಿಂದ ತನ್ನ ಬಗ್ಗೆ ಊರಲ್ಲಿ ಹರಿದಾಡಿಕೊಂಡಿದ್ದ ಸುದ್ದಿಯ ಜೊತೆಗೆ ಈಗ ನಡೆದಿರುವ ಘಟನೆ ತನ್ನ ಕೊಂಡಿ ಬೆಸೆದು ಮತ್ತೇನು ರಾದ್ಧಾಂತವಾಗುವುದೋ ಎಂಬ ಆತಂಕ, ದುಃಖದ ಜೊತೆಗೆ ಸೇರಿಕೊಂಡು ಅವಳನ್ನು ಮತ್ತಷ್ಟು ಅಧೀರಳನ್ನಾಗಿಸಿತ್ತು.

ಲೋಕದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ತಾನು ಬದುಕುತ್ತಿರುವ ರೀತಿಯ ಬಗ್ಗೆ ಎಳ್ಳಷ್ಟೂ ಅಳುಕು ಸಂದೇಹಗಳಿಲ್ಲದೆ ಬದುಕುತ್ತಿದ್ದ ಅವಳಿಗೆ ಎಷ್ಟೇ ಪ್ರಯತ್ನಿಸಿದರೂ ಈಗ ನಡೆದಿರುವ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸದಾ ತನ್ನ ನಿರ್ಧಾರಗಳನ್ನು ಸಮರ್ಥಿಸುವಂತೆಯೇ ಬದುಕುತ್ತಿದ್ದ ಅವಳಿಗೆ ಈ ಅವಗಢವನ್ನು ಯಾವ ವಿಧದಲ್ಲೂ ಸಮರ್ಥಿಸಿಕೊಳ್ಳಲು ಅವಳ ನೈತಿಕ ಪ್ರಜ್ಞೆ ಬಿಡುತ್ತಿಲ್ಲ. ಇನ್ನು ದಿನ ಪೂರ್ತಿ ನಡೆಯಬಹುದಾದ ರಾದ್ಧಾಂತಗಳನ್ನು ಎದುರುಗೊಳ್ಳಲು ಅವಳಲ್ಲಿ ನೈತಿಕ ಸ್ಥೈರ್ಯವೂ ಉಳಿದಿರಲಿಲ್ಲ.
***
ಶಶಿರೇಖಾಳ ಮನೆಯ ಮುಂದಿರುವ ರಾಮಗುಡಿಯ ಮೇಲಿರುವ ಪುಟ್ಟ ಗೂಡಿನಲ್ಲಿ ವಾಸವಾಗಿರುವ ರಾಮನ ಪುಟ್ಟ ಅವಿಭಕ್ತ ಸುಖೀ ಕುಟುಂಬ ಸಂಭಾಷಣೆಯಲ್ಲಿ ನಿರತವಾಗಿದೆ. ಆ ಸಂಭಾಷಣೆಯ ನಕಲು ಇಲ್ಲಿ ಹೇಗೆ ಸಿಗುತ್ತದೆಂದರೆ... ರಾಮಗುಡಿಯ ಪೂಜಾರಿ ಪ್ರತಿದಿನ ಹೀಗೆ ನಡೆಯಬಹುದಾದ ಆ ಅವಿಭಕ್ತ ಸಂಸಾರದ ಸಂಭಾಷಣೆಯನ್ನು ತನ್ನ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಫೋನಿನಲ್ಲಿ ರೆಕಾರ್ಡ್‌ ಮಾಡಿಕೊಂಡು, ಗುಟ್ಟಾಗಿ ಕೇಳಿಸಿಕೊಂಡು, ನಂತರ ಅದನ್ನು ಪವಿತ್ರವಾದ ಗರ್ಭಗುಡಿಯೊಳಗೆ ಪಂಚಲೋಹಗಳಿಂದ ತಯಾರಿಸಲ್ಪಟ್ಟ ರಾಮನ ವಿಗ್ರಹದ ಹಿಂಬದಿಗೆ, ಮೂಲೆಯಲ್ಲಿರುವ ಇಲಿಯ ಸಣ್ಣ ಬಿಲದಲ್ಲಿ ಹರಿಯಬಿಡುತ್ತಾನೆ. ಹೀಗೆ ಅಲ್ಲಿ ಹರಿಯಬಿಟ್ಟ ಸಂಭಾಷಣೆಯನ್ನು ಕದ್ದು ತಂದು ಈಗ ಇಲ್ಲಿ ಹರಿಯಬಿಡಲಾಗುತ್ತಿದೆ. ಆ ಸಂಭಾಷಣೆ ಇಂತಿದೆ.

ಸೀತೆ: ಏನು ಸ್ವಾಮಿ, ಶಶಿರೇಖಾಳಿಗೆ ಇಷ್ಟೊಂದು ಕಷ್ಟ ಕೊಡುವುದೆ? ಇದು ನಿಮಗೆ ಸಮ್ಮತವೆ?
ಲಕ್ಷ್ಮಣ: ಯಾಕೆ ಅತ್ತಿಗೆ ಅಣ್ಣನನ್ನು ಹಾಗೆ ಕೇಳುತ್ತಿರುವಿರಿ! ಅದು ಅವರವರ ಕರ್ಮಫಲ; ಅನುಭವಿಸಬೇಕಷ್ಟೆ. ಇದು ಆ ಲೋಕದ ನೀತಿ, ನಿಮಗೆ ಅಷ್ಟೂ ತಿಳಿದಿಲ್ಲವೆ.

ಸೀತೆ: ಕರ್ಮಫಲವೆಂದರೆ!?

ಹನುಮ: ಕರ್ಮಫಲವೆಂದರೆ ಹಿಂದಿನ ಜನ್ಮಗಳಲ್ಲಿ ಮಾಡಿರಬಹುದಾದ ಕರ್ಮಗಳಿಗೆ ಅನುಸಾರವಾಗಿ ಈ ಜನ್ಮವನ್ನು ಅನುಭವಿಸುತ್ತಾರೆ.
ಯಾಕೆ ಮಾತೆ, ಇದು ನಿಮಗೆ ತಿಳಿದಿಲ್ಲವೆ?

ಸೀತೆ: ಸ್ವಾಮಿ ನಾನು ನಿಮಗೆ ಕೇಳುತ್ತಿರುವೆ. ನೀವೇನೂ ಮಾತನಾಡುವುದಿಲ್ಲವೆ?

ರಾಮ: ಸೀತೆ, ನನ್ನ ಹೃದಯಾಭಿಷಕ್ತೆ... ನನ್ನ ಮಾತು ಅವರ ಮಾತು ಎಂದಾದರು ಬೇರೆ ಆಗಿರುವುದುಂಟೆ!? ಅವರಿಬ್ಬರೂ ನನ್ನ ಆತ್ಮ ಮತ್ತು ಪ್ರಜ್ಞೆ ಎಂದು ನಿನಗೆ ತಿಳಿದಿಲ್ಲವೆ?

ಸೀತೆ: ಮತ್ತೆ ನಾನು!?

ರಾಮ: ನೀನು ನನ್ನ ಹೆಂಡತಿ, ಹೃದಯಾಭಿಷಕ್ತೆ.

ಸೀತೆ: ಹುಂ... ನೀವೆಲ್ಲರೂ ಒಂದೇ ಎಂದು ನನಗೆ ತಿಳಿದಿಲ್ಲವೆ!

ರಾಮ: ಏನಂದೆ ಮನದನ್ನೆ?

ಸೀತೆ: ಏನೂ ಇಲ್ಲ ಸ್ವಾಮಿ... ನೆನ್ನೆ ರಾತ್ರಿ ರಾಮೇಗೌಡ, ಅದೇ ಶಶಿರೇಖಾಳನ್ನು ಈ ಊರಿಗೆ ಕರೆತಂದ ವ್ಯಕ್ತಿ ದಿವ್ಯಳು ತನ್ನ ಮಗಳಲ್ಲವೆಂದು ಶಶಿರೇಖಾಳ ಮುಖದ ಮೇಲೆ ಅಷ್ಟೊಂದು ಸಲೀಸಾಗಿ ಹೇಳಿಬಿಟ್ಟ. ಅದು ನ್ಯಾಯವೆ?

ರಾಮ: ಅದು ಆ ಲೋಕದ ನ್ಯಾಯ. ನಮ್ಮ ನ್ಯಾಯ ಅವರ ನ್ಯಾಯ ಬೇರೆ ಬೇರೆಯೆಂದು ನಿನಗೂ ತಿಳಿದಿದೆ ತಾನೆ.

ಸೀತೆ: ಇಲ್ಲ ಸ್ವಾಮಿ, ನನಗೆ ಎರಡೂ ಒಂದೇ ಅಂತ ಅನಿಸುತ್ತಿದೆ.

ಲಕ್ಷ್ಮಣ: ಅಣ್ಣನ ಮುಂದೆ ಇಷ್ಟೊಂದು ಉದ್ಧಟತನವೆ ಅತ್ತಿಗೆ... ಬೇಡ ಸುಮ್ಮನಿದ್ದುಬಿಡಿ, ನನಗೆ ಕೋಪ ಬರುವ ಮೊದಲು ನಿಮ್ಮ ದಮ್ಮಯ್ಯ ಸುಮ್ಮನಿದ್ದುಬಿಡಿ.

ಹನುಮ: ಹೌದು ಮಾತೆ. ಲಕ್ಷ್ಮಣನ ಮಾತು ಸರಿಯಿದೆ. ನಾವೆಲ್ಲರು ಸದ್ಯಕ್ಕೆ ಮಾತು ನಿಲ್ಲಿಸೋಣ.

***
ಶಶಿರೇಖಾ ರಾಮಾಪುರಕ್ಕೆ ಬರುವ ಮೊದಲು ರಾಮೋಜಿಹಳ್ಳಿಯಲ್ಲಿದ್ದಳು. ಅದು ಅವಳ ಗಂಡನ ಮನೆ. ತವರು ಮನೆ ಇರೋದು ರಾಮಕೋಟೆಯಲ್ಲಿ. ಹದಿನೈದು ವರ್ಷ ತುಂಬುವ ಮೊದಲೇ ಶಶಿರೇಖಾಳ ತಂದೆ–ತಾಯಿ ರಾಮೋಜಿಹಳ್ಳಿಯ ಅಬ್ಬೇಪಾರಿ ಲಕ್ಷ್ಮಣಪ್ಪನಿಗೆ ಕೊಟ್ಟು ಮದುವೆ ಮಾಡಿದರು. ಮದುವೆಯಾಗಿ ಸರಿಯಾಗಿ ಒಂದು ವರ್ಷ ತುಂಬುವ ಮೊದಲೇ ಲಕ್ಷ್ಮಣಪ್ಪ ದೇಶಾಂತರ ಹೋದವನು ಮತ್ತೆ ತನ್ನೂರಿಗೆ ಹಿಂದಿರುಗಲೇ ಇಲ್ಲ. ಹೀಗೆ ದೇಶಾಂತರ ಹೋದ ಗಂಡನಿಗೋಸ್ಕರ ಕಾದು ಕಾದು ಸುಸ್ತಾದ ಅವಳು ಒಂದು ದಿನ ರಾಮೇಗೌಡನ ಹಿಂದೆ ನಡೆದು ರಾಮಾಪುರದಲ್ಲಿ ಸೆಟ್ಲಾದಳು.

ಶಶಿರೇಖಾಳೇನೂ ಏಕಾಏಕಿ ರಾಮೇಗೌಡನ ಹಿಂದೆ ಹೋಗಿರಲಿಲ್ಲ. ಅವನು ರಾಮಾಪುರದಿಂದ ಸರಿಸುಮಾರು ಹದಿನೈದು ಮೈಲಿ ದೂರದಲ್ಲಿರುವ ರಾಮೋಜಿಹಳ್ಳಿಗೆ ಆಗಾಗ ಕೂಲಿ ಆಳುಗಳನ್ನು ಕರೆತರಲು ತನ್ನ ಟ್ರ್ಯಾಕ್ಟರ್‌ ಓಡಿಸಿಕೊಂಡು ಹೋಗುತ್ತಿದ್ದ. ಹಾಗೆ ಒಂದೆರಡು ಸಾರಿ ಶಶಿರೇಖಾಳನ್ನು ತನ್ನ ತೋಟದ ಕೆಲಸಕ್ಕೂ ಕರೆದುಕೊಂಡು ಬಂದಿದ್ದ. ಆಗೇನೂ ಅಂತಹ ಸಂಬಂಧ ಸಂಭವಿಸಿರಲಿಲ್ಲ.

ಶಶಿರೇಖಾಳೂ ತನ್ನ ಪಾಡಿಗೆ ತಾನು ಸಿಕ್ಕ ಕೂಲಿ ಕೆಲಸ ಮಾಡಿಕೊಂಡು ಕಾಲ ತಳ್ಳುತ್ತಿದ್ದಳು. ಕಡೆಗೆ ಒಂದು ದಿನ ಮಾಯೆಯೆಂಬೋ ಮಾಯೆ ಆವರಿಸಿದ ಇಳಿ ಸಂಜೆಯಲ್ಲಿ ರಾಮೇಗೌಡನ ತೆಕ್ಕೆಗೆ ಹೇಗೆ ಜಾರಿದಳೋ ಅವಳಿಗೆ ಇಂದಿಗೂ ತಿಳಿದಿಲ್ಲ. ಹಾಗೆ ಮಾಯೆಯೆಂಬೋ ಮಾಯೆ ಆವರಿಸಿ ರಾಮೇಗೌಡನ ಜಾಲಕ್ಕೆ ಜಾರಿದ ಒಂದು ತಿಂಗಳಿಗೆ ಸರಿಯಾಗಿ ಅವಳು ತನ್ನ ಗಂಟು ಮೂಟೆ ಕಟ್ಟಿಕೊಂಡು ಇದ್ದ ಅಂಗೈ ಅಗಲದ ಗುಡಿಸಲನ್ನು ರಾಮೋಜಿಹಳ್ಳಿಗೆ ಬಿಟ್ಟು, ರಾಮೇಗೌಡನ ಟ್ರ್ಯಾಕ್ಟರನ್ನೇರಿ ರಾಮಾಪುರದ ಗುಡಿಯೆದುರು ಇಳಿದಿದ್ದಳು. ಹಾಗೆ ರಾಮಾಪುರದಲ್ಲಿ ಇಳಿದ ತಕ್ಕಮಟ್ಟಿಗೆ ಸುಂದರಿಯೂ ಆಗಿದ್ದ ಅವಳನ್ನು ಊರ ಜನ ಆಗ ಬೆರಗುಗಣ್ಣಿನಿಂದ ನೋಡಿದ್ದುಂಟು. ಅಂತಹ ಬೆರಗುಗಣ್ಣುಗಳಿಗೆ ಉತ್ತರವೆಂಬಂತೆ ರಾಮೇಗೌಡ ‘ಈ ಕಾಲ್ದಾಕ ಕೂಲ್ಯೋರು ಸಿಕೋದು ಕಸ್ಟ, ಪರ್ಮೆಂಟು ಗಿರಾಕಿ ಇರ್‍ಲಿ ಅಂತ ಕರ್‍ಕಂಬಂದೆ’ ಎಂದು ನುಡಿದು, ನಂತರ ‘ಪಾಪ ಗಂಡೆಂಬೋ ಬೋಳಿಮಗ ಬಿಟ್ಟೋಬಿಟ್ಟವ್ನೆ...

ಇಂದಿಲ್ಲ ಮುಂದಿಲ್ಲ. ಅದ್ಕೆ ಒಂದಸ್ಟು ಸಾಯ ಮಾಡೋನಾಂತ ಕರ್‍ಕಬಂದೆ. ನಿಮ್‌ ಸೇನುಗ್ಳಾಕ ತೋಟ್ದಾಕ ಏನಾರ ಕೆಲ್ಸ ಇದ್ರೆ ಕೂಲಿಕೆ ಕರ್‍ದು ನೀವೂಯ ಒಂದಸ್ಟು ಸಾಯ ಮಾಡ್ರಪ್ಪ... ಒಂದಸ್ಟು ಪುಣ್ಯ ಬತ್ತದೆ’ ಎಂದು ಕನಿಕರದ ಮಾಯೆಯನ್ನು ತೇಲಿಬಿಟ್ಟಿದ್ದ. ಊರಿನ ಯಾವ ಬಡಪಾಯಿ ಮನೆಯಲ್ಲೂ ನಿಲ್ಲದ ಮಾಯ್ಕಾರ್‍ತಿ ಲಕ್ಷ್ಮೀದೇವಿ ರಾಮೇಗೌಡನ ಮನೆಯ ಕಲರ್‌ ಕಲರ್‌ ಕೋಣೆಯಲ್ಲಿ ಟೆಂಟು ಹಾಕಿದ್ದುದರಿಂದಲೋ ಅಥವಾ ಊರು ಬಹುತೇಕ ರಾಮೇಗೌಡನ ಹಿಡಿತದಲ್ಲಿ ಇದ್ದುದರಿಂದಲೋ ಏನೋ ಹಾಗೆ ಅವನು ತೇಲಿಬಿಟ್ಟ ಕನಿಕರದ ಮಾಯೆಗೆ ಅರ್ಧ ಮರುಳಾಗಿ ಉಳಿದರ್ಧ ಗುಸುಗುಸು ಸದ್ದು ಮಾಡಿ ಊರೆಂಬೊ ಊರು ಆ ರಾತ್ರಿ ತಡವಾಗಿ ಕಂಬಳಿ ಹೊದ್ದು ಮಲಗಿತ್ತು.

ಹಾಗೆ ಊರ ಹೆಬ್ಬಾಗಿಲಲ್ಲಿ ಇಳಿದ ಶಶಿರೇಖಾಳಿಗೆ ರಾಮೇಗೌಡ ರಾಮಗುಡಿಯ ಎದುರಿಗಿದ್ದ ತನ್ನ ಒಡೆತನದಲ್ಲೇ ಇರುವ ಹರಕುಮುರುಕು ಹಳೇ ಮನೆಗೆ ಒಂದಷ್ಟು ತೇಪೆ ಹಾಕಿಸಿ, ಸುಣ್ಣಬಣ್ಣ ಬಳಿದು ಪ್ರತಿಷ್ಠಾಪನೆ ಕೆಲಸ ಮುಗಿಸಿದ್ದ. ಅದಾದ ನಂತರ ಅವಳು ಊರಿನ ಹರಕು ಮಾತುಗಳಿಗೆ ದಿಟ್ಟ ಉತ್ತರ ನೀಡುತ್ತಾ ಕೊಂಕು ನೋಟಗಳಿಗೆ ಮುಗುಳ್ನಗುತ್ತಾ ಕಾಮದ ಕಂಗಳಿಗೆ ಚೌಡಿಯನ್ನು ತೋರಿಸುತ್ತಾ ಎದುರಾಗುವ ದಿನಗಳನ್ನು ಖುಷಿಯಾಗಿ ದಿಟ್ಟತನದಿಂದಲೇ ಸ್ವೀಕರಿಸತೊಡಗಿದಳು. ಹೀಗೆ ಇಂಥಾ ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿ, ತಿಂಗಳುಗಳು ಕಳೆದು ಎರಡು ವರ್ಷಗಳಾಗುವಷ್ಟರಲ್ಲಿ ದಿವ್ಯ ಎಂಬ ಹೆಸರಿನ ಮುದ್ದಾದ ಹೆಣ್ಣು ಮಗುವಿಗೆ ತಾಯಿಯೂ ಆಗಿಬಿಟ್ಟಳು.

ದಿವ್ಯಳ ತಂದೆ ಯಾರೆಂಬುದು ಊರಿಗೆ ಗೊತ್ತಿರುವ ವಿಷಯವೇ ಆಗಿದ್ದರೂ ಹಗಲಿಡೀ ಸುಮ್ಮನಿರುತ್ತಿದ್ದ ಉರು ರಾತ್ರಿಯಾದೊಡನೆ ಒಲೆಯ ಮುಂದೆ ಮುಸಿನಗುತ್ತಾ ಬೆಚ್ಚಗೆ ಮೈಕಾಯಿಸಿಕೊಂಡು ಪರಮ ಸುಖವನ್ನು ಅನುಭವಿಸುತ್ತಿತ್ತು. ಅತ್ತ ರಾಮೇಗೌಡನ ಮನೆಯಲ್ಲಿ ಮಾತ್ರ ರಾದ್ಧಾಂತವಾಗಿ, ಅದು ಬೀದಿಗೆ ಬಂದು, ಬೀದಿಯ ನಡುವಿನಲ್ಲಿ ರಾಮೇಗೌಡ ತನ್ನ ಹೆಂಡತಿಗೆ ದನಕ್ಕೆ ಬಡಿದ ಹಾಗೆ ಬಡಿಯುತ್ತಿರಲು ಶಶಿರೇಖಾ ಮಧ್ಯೆ ಪ್ರವೇಶಿಸಿ ರಾಮೇಗೌಡನ ರಟ್ಟೆ ಹಿಡಿದು ಪಕ್ಕಕ್ಕೆಳೆದು– ‘ಈ ನಡು ರೋಡಾಕ ಎಣ್ತೀಗೆ ಈಗೆಲ್ಲಾ ವಡೆಯೋಕೆ ನಾಚ್ಕೆ ಆಗಾಕಿಲ ನಿಂಕೆ... ಒಂಚೂರು ಬ್ಯಮೆ ಇಲ್ವ ನಿಂಕೆ ಎಣ್ತಿ ಮೇಕೆ’ ಎಂದು ಗದರಿಸಿದಳು.

ನಂತರ ಇಡೀ ಊರಿಗೆ ಕೇಳಿಸುವ ಹಾಗೆ ‘ನಾಯೇನೂ ಈ ಊರಾಕ ಆದರ ಮಾಡ್ತಾ ಇಲ್ಲ. ನಾ ರಾಮೇಗೌಡ್ರ ಎಲ್ಡನೆ ಹೆಣ್ತಿ ನೆಪ್ಪಿರಲಿ’ ಎಂದು ನುಡಿದು ಇಡೀ ಊರನ್ನು ಬೆಚ್ಚಿಬೀಳಿಸಿದ್ದಳು. ನಂತರ ರಾಮೇಗೌಡನ ಹೆಂಡತಿಯನ್ನು ಒಳಗೆ ಕರೆದುಕೊಂಡು ಹೋಗಿ– ‘ಯಕ್ಕೋ ಸಿವ ಬರೆದಂಗ್‌ ನಡೀತಾ ಐತಿ. ಈಗ ಅದ್ನೆಲ್ಲಾ ಮೈಮ್ಯಾಕ ಎಳಕೊಂಡ್ರೆ ಲುಕ್ಸಾನ್‌ ಯಾರ್‍ಗೇಳು... ಮುಂದೆ ಜೀವ್ನ ನಡೀತದ ಯೇಳು. ದೊಡ್ಡ ಮನ್ತನದ ಹೆಣ್ಣಿದೀ, ನನ್ನೂ ವೊಟ್ಟೇಗೆ ಹಾಕ್ಕೊಂಬುಡು ಯಕ್ಕಾ’ ಎಂಬ ಸಮಾಧಾನದ ಮಾತನ್ನಾಡಿದ್ದಳು. ರಾಮೇಗೌಡನ ಹೆಂಡತಿ ‘ಏನು ಮಾಡಾಕೈತಿ, ನನ್ನ ನಸೀಬಾಗ ಎಂಗೆ ಬರ್‍ದೈತೊ ಅಂಗೆ ಬಾಳಾಟ ಮಾಡ್ತೀನವ್ವ... ಇಲ್ಲಾಂದ್ರೆ ಈ ಮುಂಡೇದು ಸುಮ್ಕೆ ಬಿಡುತ್ತ ನನ್ನ’ ಎಂದು ನುಡಿದು ಲೊಳಕ್ಕೆಂದು ಲೋಳೆ ಸಿಂಬಳವನ್ನು ಎಳೆದುಕೊಂಡು ಹೊಟ್ಟೆಗಿಳಿಸಿ ಸುಮ್ಮನಾಗಿದ್ದಳು.

ಇದಾದ ನಂತರ ರಾಮೇಗೌಡನಿಗೆ ಶಶಿರೇಖಾಳ ಮೇಲಿನ ವ್ಯಾಮೋಹ ಜಾಸ್ತಿಯಾಗಿಯೊ... ಮಗುವನ್ನು ನೋಡಿಕೊಳ್ಳಲಿ ಎಂತಲೋ ಅಥವ ಅವಳು ಬಿಸಿಲಿನಲ್ಲಿ ಕಷ್ಟಪಡದಿರಲಿ ಎಂತಲೋ... ಒಂದು ಸರಿಹೊತ್ತಿನಲ್ಲಿ– ‘ಈ ಕೂಲಿನಾಲಿ ನಿನ್ಕೈಲಿ ಆಗಾಕಿಲ್ಲ. ಒಂದು ಚಿಲ್ರಂಗ್ಡಿ ಹಾಕ್ಕಡ್ತೀನಿ ಆರಾಮ್ಕಿರು... ಎಂಗಿದ್ರು ಮನೆ ಎದುರ್‍ಕೆ ರಾಮ್ಗುಡಿ ಐತಿ. ಸಂಜಿ ವೊತ್ನಾಗ ಪೂಜೆಗೀಜೆ ಅಂತ ಬತ್ತಾರೆ.

ಮನೆ ಮುಂದ್ಕ ಒಂದ್‌ ಮಕ್ಕರ್‍ಯಾಗೆ ಒಂದೀಟಿ ಟೆಂಕಾಯ್ಗಳ್ನ ಅಂಗೆ ಸಾಮ್ರಾಣ್ಕಡ್ಡಿಗಳ ಮಡಿಕ್ಕಂಡ್ರೆ ಒಳ್ಳೆ ಯಾಪರ ಆಗ್ತೈತಿ’ ಎಂದು ನುಡಿದು ತನ್ನನ್ನು ತಾನು ಮರೆತಿದ್ದ. ಹೀಗೆ ಶಶಿರೇಖಾಳ ಮನೆಯಲ್ಲಿಯೇ ಅಂಗಡಿ ಶುರುವಾಗಿ ಮನೆಯ ಮುಂದುಗಡೆ ಮಂಕರಿಯಲ್ಲಿ ತೆಂಗಿನಕಾಯಿಗಳು ಅಗರಬತ್ತಿಗಳು ಪವಡಿಸುವ ಹೊತ್ತಿಗೆ ಊರ ಪುಂಡರ ಗ್ಯಾಂಗುಗಳು ಶಶಿರೇಖಾಳ ಮನೆಯ ಹೊಸ್ತಿಲ ಮುಂದೆ ಟೆಂಟು ಹಾಕಲು ಶುರು ಮಾಡಿದವು. ಹಾಗೆ ಟೆಂಟು ಹಾಕಿದ ಗ್ಯಾಂಗಿನ ಕಣ್ಣುಗಳು ಅವಳ ಮೈಮೇಲೆ ಎಲ್ಲೆಂದರಲ್ಲಿ ಹರಿದಾಡಿ, ನಾಲಗೆಗಳು ಏನೇನೋ ಒದರಾಡಿ, ಮನಸಿನ ಕಣ್ಣುಗಳು ಮಿಟುಕಾಡಿ, ಹಿಟ್ಟುಕೋಲಿನ ಹೊಡೆತಗಳಿಗೆ ಈಡಾಗಿ ಇನ್ನೂ ಏನೇನೋ ಆಗಿ, ಈ ಅಂಗಡಿ ಸಹವಾಸವೆ ಸಾಕೆನಸಿ ಒಂದಿನ ಸರಿಹೊತ್ತಿನಲ್ಲಿ ಅವಳು ರಾಮೇಗೌಡನಿಗೆ– ‘ಈ ಯಾಪಾರ ಎಲ್ಲ ನಂಕೆ ಸರಿ ಬರಾಕಿಲ್ಲ. ಪುಂಡೈಕ್ಳ ಕಿರ್‍ಕಿರಿ ನೋಡಾಕೆ ಆಯ್ತಿಲ್ಲ.

ಇದೆಲ್ಲ ಯೆತ್ತಿಸ್ಬುಡು, ನಾ ಮೊದಲ್ನಂಗೆ ಕೂಲಿನಾಲಿ ಮಾಡ್ಕಂಡಿರ್ತೀನಿ’ ಎಂದಿದ್ದಳು. ಅದಕ್ಕೆ ರಾಮೇಗೌಡ ‘ಏ ನೀ ಕೂಲಿನಾಲಿ ಮಾಡೋದೆ... ನೀ ಸುಮ್ಕೆ ಮನೇಲಿರು. ನಾ ಅವ್ನಿ ತಂದಾಕ್ತೀನಿ. ಆರಾಮಾಗಿ ಜೀವ್ನ ನಡ್ಸೀಯಂತೆ’ ಎಂದು ನುಡಿದಿದ್ದ. ನಂತರ ಒಂದಷ್ಟು ದಿನ ಕಳೆದ ಮೇಲೆ ‘ಸುಮ್ಕೆ ಮನೇಕಿದ್ರೆ ಬೋರಲ್ವೆ’ ಎಂದುಕೊಂಡು ಒಂದು ಎಲ್‌ಜಿ ಗೋಲ್ಡನ್‌ ಐ ಟೀವಿಯನ್ನೂ ತಂದು ಕೊಟ್ಟಿದ್ದ.

ಹೀಗೆ ಶಶಿರೇಖಾ ಊರ ಕೊಂಕು ನುಡಿಗಳನ್ನು ಲೆಕ್ಕಿಸದೆ ರಾಮೇಗೌಡನ ದೆಸೆಯಿಂದ ಸುಖವಾಗಿ ಬಾಳುತ್ತಿರಲು ವರ್ಷಗಳು ಉರುಳುತ್ತಿದ್ದುದು ಅವಳ ಅರಿವಿಗೇ ಬರುವಂತಿರಲಿಲ್ಲ. ಹೀಗೆ ಸುಖಕರವಾಗಿ ವರ್ಷಗಳು ಉರುಳಿ ಮಗಳು ಬೆಳೆದುನಿಂತು ಹದಿನಾಲ್ಕು ವರ್ಷಗಳಾಗಿವೆ. ಶಶಿರೇಖಾಳು ರಾಮಾಪುರಕ್ಕೆ ಬಂದು ಹದಿನಾರು ವರ್ಷಗಳು ಕಳೆದಿವೆ.

ಈ ಹದಿನಾರು ವರ್ಷಗಳಲ್ಲಿ ಕಾಡದ ದುಃಖ, ಆತಂಕ, ಒಳಗಿನ ಸಂಘರ್ಷ ಅವಳನ್ನು ಇಂದು ಏಕಾಏಕಿ ಹದಿನಾರು ವರ್ಷಗಳ ಸೇಡೋ ಎಂಬಂತೆ ಹರಿದು ಮುಕ್ಕತೊಡಗಿವೆ. ಇಂತಹ ಕೇಡಿನ ವಾಸನೆಯನ್ನು ಒಂದೆರಡು ತಿಂಗಳ ಹಿಂದೆಯೇ ಗ್ರಹಿಸಿ ಮಗಳಿಗೆ ಬುದ್ಧಿ ಹೇಳಿದಳು. ಅವಳ ಬುದ್ಧಿವಾದಕ್ಕೆ ಮಗಳು ತಲೆದೂಗಿ, ತದನಂತರದ ದಿನಗಳಲ್ಲಿ ಅವಳಲ್ಲಿ ಒಂದಷ್ಟು ಬದಲಾವಣೆಗಳೂ ಆಗಿ ಸಮಾಧಾನಗೊಂಡಿದ್ದಳು. ಆದರೆ ಮಗಳು ಈಗ ಆರಿಸಿಕೊಂಡ ನಡೆ ಅವಳು ದಿಕ್ಕೆಡುವಂತೆ ಮಾಡಿತ್ತು. ಅವೆಲ್ಲಕ್ಕಿಂತ ಹೆಚ್ಚಾಗಿ ಸರಿಹೊತ್ತಿನಲ್ಲಿ ಬಂದಿದ್ದ ರಾಮೇಗೌಡ ಆಡಿದ ಮಾತುಗಳು ಅವಳನ್ನು ಕಂಗೆಡಿಸಿದ್ದವು. ಇಷ್ಟು ವರ್ಷಗಳು ಜೊತೆಗಿದ್ದ ಅವನು ಈಗ ತಪ್ಪೆಲ್ಲವನ್ನೂ ಅವಳ ಮೇಲೆ ಹಾಕಿ ಎದುರಾಗಿರುವ ಇಕ್ಕಟ್ಟಿನಿಂದ ಪಾರಾಗಲು ಯೋಜನೆಯೊಂದನ್ನು ರೂಪಿಸಿ ಹೊಂಚು ಹಾಕಿಕೊಂಡು ಕುಳಿತಿರುವಂತೆ ಕಾಣತೊಡಗಿತ್ತು.

ಅಂದು ರಾತ್ರಿ ಶಶಿರೇಖ ಮತ್ತು ರಾಮೇಗೌಡನ ನಡುವೆ ನಡೆದಿತ್ತೆನ್ನಲಾದ ಸಂಭಾಷಣೆ (ಈ ಸಂಭಾಷಣೆ ಹೇಗೆ ಸಿಕ್ಕಿತೆಂದರೆ, ರಾತ್ರಿ ನಡೆಯುವುದೆಲ್ಲವನ್ನು ಕತ್ತಲು ತನ್ನ ಹಾರ್ಡ್‌ ಡಿಸ್ಕಿನಲ್ಲಿ ಸೇವ್‌ ಮಾಡಿಕೊಳ್ಳುತ್ತದೆ. ಹೀಗೆ ಸೇವ್‌ ಆಗಿದ್ದನ್ನು ಒಂದು ಪೆನ್‌ಡ್ರೈವ್‌ಗೆ ಹಾಕಿ ಶ್ರೀರಾಮಚಂದ್ರನ ಸಂಸಾರದ ಸುಪರ್ದಿಗೆ ಒಪ್ಪಿಸುತ್ತದೆ. ಆಗ ಶ್ರೀರಾಮಚಂದ್ರನು ಅದನ್ನು ತನ್ನ ಲ್ಯಾಪ್‌ಟ್ಯಾಪಿಗೆ ಸಿಕ್ಕಿಸಿ, ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡು ಕೇಳಿಸಿಕೊಳ್ಳುತ್ತಾನೆ. ಹೀಗೆ ಕೇಳಿಸಿಕೊಂಡ ನಂತರ ತನ್ನ ಫ್ಯಾಮಿಲಿ ಮೆಂಬರ್‍ಸಿಗೆಲ್ಲ ಹೇಳುತ್ತಾನೆ. ಹಾಗೆ ಶ್ರೀರಾಮಚಂದ್ರನ ಸಂಸಾರವೆಲ್ಲ ಕೇಳಿಸಿಕೊಂಡ ನಂತರ ಅವನು ಅದನ್ನು ಡಿಲೀಟ್‌ ಮಾಡುತ್ತಾನೆ. ಹಾಗೆ ಡಿಲೀಟ್‌ ಆದ ಸಂಬಾಷಣೆಯೇ ಇದು.)

ರಾಮೇಗೌಡ: ಯಂತಾ ಯಡವಟ್‌ ಮಾಡ್ಕಂಬಿಟ್ರು ಬಡ್ಡೀಮಕ್ಳು. ಇನ್ನಾ ಸುತ್ತಮುತ್ಯಾಕ ಯಂಗ್‌ ವೋಡಾಡ್ಲಿ. ಎಲ್ಲಾ ನಿನ್ನಿಂದ್ಲೆ ಆಗಿರೋದು. ನಿನ್ಬುದ್ದೀನ ಅವುಳ್ಗೂ ಅಂಟಿಸ್ಬುಟ್ಟೆ.

ಶಶಿರೇಖಾ: ಇದರಾಕ ನನ್‌ ಮಿಸ್ಟೇಕೇನೈತಿ. ಎಲ್ಲಾ ನನ್ಮೇಕೆ ಹಾಕಕ್ನೋಡ್ತಿದೀರಲ್ಲ.

ರಾಮೇಗೌಡ: ಇನ್ನೇನ್‌ ನಿಂದಲ್ದೆ ನಿಮ್ಮಪ್ಪಂದ ತೆಪ್ಪು... ಅಲ್ವೆ ನಿನ್ಮಗಳ್ಕೆ ಮೊಬೈಲು ಬೇಡ ಅಂತ ಬಡಿಕ್ಕಂಡೆ ಕೇಳಿದ್ಯ ನೀನು. ಅವ್ಳು ಕುಣಿದಂಗೆ ನೀನು ಕುಣೀತಿದ್ದೆ...

ಶಶಿರೇಖಾ: ಅದರಾಕೇನೈತಿ. ಎಲ್ಲ ಮೊಕ್ಳು ಆಸೆ ಪಡೋಂಗೆ ನಮ್ಮಗ್ಳೂ ಆಸೆ ಪಟ್ಳು. ಬೇಕು ಅಂದೆ.

ರಾಮೇಗೌಡ: ಅದ್ಕೆ ಯೇಳ್ತೀರೋದು... ಇವ್ಳ ಕೈಯಾಗು ಮೊಬೈಲು – ಅವ್ನ ಕೈಯಾಗು ಮೊಬೈಲು. ಅದೇನೇನ್‌ ನೋಡ್ಕಂಡು ಏನೇನ್‌ ಆಟ ಕಟ್ಕಂಡ್ರೋ... ಲೇ ಬೋಸುಡಿ ನೀಯಾದ್ರು ಯೇಳಾಕಿಲ್ವೆ... ನಿನ್ಮಗಳ್ಕೆ ನನ್ಮಗ ಅಣ್ಣ ಆಗ್ಬೇಕೂಂತಾ.

ಶಶಿರೇಖಾ: ಯಾಕ ಆ ವಿಸ್ಯಾನ ನಿಮ್ಮಗನ್ಕೆ ನೀವೆ ಯೇಳಬೋದಿತ್ತಲ್ಲ.

ರಾಮೇಗೌಡ: ನಂಗೆ ಎದುರಾಡ್ತೀಯಂದ್ರ ಇದೆಲ್ಲ ನಿಂದೆ ಪುಸಲೊತ್ತಿರ್‍ಬೇಕು... ಲೌಡಿಮುಂಡೆ...


ಶಶಿರೇಖಾ: .......

ರಾಮೇಗೌಡ: ಇಸ್ಟೆಲ್ಲ ಬಡೀತಿದ್ರು... ಆ ಪಾಟಿ ಬೆನ್ಗೆ ಗುದ್ದಿದ್ರೂ ನೀ ಸುಮ್ಕಿದೀಯಂದ್ರ ನಿಜ್ಕೂ ನಿಂದೆ ಮಸಲತ್ತಿರ್‍ಬೇಕು.

ಶಶಿರೇಖಾ: ಕೈವಾರ್‍ದ ತಾತಪ್ನಾಣೇಗು ನಾನಂತೋಳಲ್ಲ. ನಮ್ಮಗಳ್ಕೆ ಎಲ್ಲಾನು ಯೇಳಿದ್ದೆ. ಹಾಗೆ ನಿಮ್ಮಗನ್ಕೂ ಸೂಕ್ಸ್ಮಾಗಿ ತಿಳಿಸಿದ್ದೆ...

ರಾಮೇಗೌಡ: ಓಹೋ ಇದೆಲ್ಲಾ ನೀನ್ ಪ್ಲಾನ್‌ ಮಾಡಿದ್ದೊ. ನಿನ್ಮಗಳ್ಕೂ ಆದರದ್ ಬುದ್ದೀನೆ ಕಲಿಸ್ಬುಟ್ಟೆ ಅನ್ನು.

ಶಶಿರೇಖ: ಕೈವಾರ್‍ದ ತಾತಪ್ನಾಣೆ ಅಂಗೆಲ ಮಾತಾಡ್ಬೇಡಿ... ಅವ್ಳು ನಿಮ್ಮಗಳಲ್ವೆ.

ರಾಮೇಗೌಡ: ಯಾವ್ಳೆ ನನ್ಮಗ್ಳು... ನಿಂಗ ಕೈವಾರ್‍ದ ತಾತಪ್ನೆ ಬೇಕಿತ್ತ... ಊರಿನ ಯಾರ್‍ಯಾರ ಜತೆ ಯವಾಗ ಯೇನೇನ್ಮಾಡಿಸ್ಕಂಡಿದ್ದೊ ಯಾವನ್ಗೊತ್ತು. ಆದರಕ್ಕುಟ್ಟಿದವಳ್ನ ನನ್ಮಗ್ಳು ಅಂತೀಯ ಬೋಸುಡಿ...

ಶಶಿರೇಖಾ: ..........

***
ಹೀಗೆ ಇಷ್ಟೆಲ್ಲವನ್ನೂ ಅನುಭವಿಸಿದ ಶಶಿರೇಖಾ ತನ್ನ ಮನೆಯ ಒಳಗೆ ಇನ್ನೂ ಬಿಕ್ಕುತ್ತಲೇ ಇದ್ದಾಳೆ. ಅತ್ತೂ ಅತ್ತೂ ಅವಳ ಕಂಗಳು ಒಣಗಿವೆ. ರಾಮೇಗೌಡ ರಾತ್ರಿ ಬಂದು ತನ್ನನ್ನು ಬೈದು ಹುಚ್ಚನಂತೆ ಬಡಿದು ಮೊಣಕಾಲಿನಲ್ಲಿ ಬೆನ್ನಿಗೆ ಗುದ್ದಿ ಹೊರಟಿದ್ದಷ್ಟೆ ಅವಳಿಗೆ ಗೊತ್ತು. ಆಗ ಅವನು ತೆಗೆದಿದ್ದ ಬಾಗಿಲು ಇನ್ನು ತೆಗೆದೇ ಇದೆ. ಅಂತಹ ತೆರದ ಬಾಗಿಲಿನಿಂದ ಎದುರಿಗೆ ಕಾಣುತ್ತಿರುವ ರಾಮಗುಡಿಯ ಮೇಲಿನ ಮುಖವನ್ನೊಮ್ಮೆ ನೋಡಿದಳು. ರಾಮನ ಮುಖ ನಗುವನ್ನು ಹೊದ್ದು ಮಲಗಿತ್ತು. ಅಂತಹ ಗುಡಿಯೆಂಬೋ ಗುಡಿಯ ಮೇಲಿನ ಸೀತೆಯ ಮುಖವನ್ನು ಅವಳಿಗೆ ನೋಡಬೇಕೆನಿಸಲಿಲ್ಲ. ಸುಮ್ಮನೆ ತಲೆ ತಗ್ಗಿಸಿದಳು. ತನ್ನ ಅಳುವನ್ನು ಮುಂದುವರಿಸಿದಳು.

ಹೀಗೆ ರಾಮಗುಡಿಯ ಮುಂದಿರುವ ಹೆಣ್ಣುಮಗಳ ಅಳು ಮುಂದುವರೆಯುತ್ತಿರುವ ಹೊತ್ತಿಗೆ ರಾಮಗುಡಿಯದೇ ಮುಂದಿರುವ ಅರಳೀಕಟ್ಟೆಯ ಮೇಲೆ ರಾಮಾಪುರದ ಗಂಡು ಸಂತಾನ ನಿಧಾನಕ್ಕೆ ಪವಡಿಸತೊಡಗಿತು. ಅದರಲ್ಲಿ ಬಹುತೇಕ ಸಂತಾನ ಬಹಳ ವರ್ಷಗಳಿಂದ ಶಶಿರೇಖಾಳನ್ನು ಅನುಭವಿಸುವ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಂತಹ ಅತೃಪ್ತ ಸಂತಾನವೇ ಆಗಿದೆಯೆಂಬುದು ಅದರ ವಿಶೇಷವಾಗಿದೆ. ಹಾಗೆ ಸೇರುತ್ತಿರುವ ಸಂತಾನ ಅಲ್ಲಿ ಗದ್ದಲವೆಬ್ಬಿಸತೊಡಗಿದೆ. ಅಂತಹ ಆ ಗದ್ದಲವನ್ನು ಶ್ರೀರಾಮಚಂದ್ರನ ಪುಟ್ಟ ಸಂಸಾರ ಮತ್ತು ಶಶಿರೇಖಾಳೆಂಬ ರಾಮಾಪುರದ ಹೆಣ್ಣುಮಗಳು ಕೇಳಿಸಿಕೊಳ್ಳತೊಡಗಿದರು.

ಗದ್ದಲ ಒಂದು: ನಮ್‌ ರಾಮ್ಪುರಕ್ಕೆ ಯಂತಾ ದುರಂತ ವಕ್ಕರಿಸ್ತು. ಅಲ್ಲ ಅಣ್ಣ–ತಂಗಿ ಲವ್‌ ಮಾಡ್ಕೊಂಡು ಓಡಿ ಹೋಗೋದೆ? ಥೂ... ನಮ್ಮೂರ್‍ಕೆ ಇಂತಾ ಗತಿ ಬರಬಾರ್‍ದಾಗಿತ್ತು.

ಗದ್ದಲ ಎರಡು: ಅಲ್ಲ, ಯಾರಾದ್ರು ಇಂಥಾ ಕೆಲ್ಸ ಮಾಡ್ಬೋದ? ಲೋಕ ಒಪ್ತೈತ? ನಡೀರಿ ಪೊಲೀಸ್‌ ಕಂಪ್ಲೇಂಟು ಕೊಡೂವ. ಅವರಿಬ್ಬರ್‍ನೂ ಎಲ್ಲಿದ್ರು ಹುಡಿಕ್ಕೊಂಬಂದು ನಾಲ್ಕೇಟು ಬಿಗೀಲಿ.

ಗದ್ದಲ ಮೂರು: ಹೇ ಅಂಗೆಲ್ಲಾರು ಮಾಡ್ಗೀಡೀಯ. ಹುಡುಗಿ ಇನ್ನೂ ಮೈನರ್ರು... ಆಮೇಕೆ ನಮ್‌ ರಾಮೇಗೌಡ್ರ ಮಗಾನೆ ಜೈಲಿಗೆ ಹೋಗ್ಬೇಕಾಗುತ್ತೆ. ಅದಿರ್‍ಲಿ ಕಣ್ಲ... ಆದ್ರೆ ನಮ್ಮ್‌ ರಾಮೇಗೌಡ್ರು ದಿವ್ಯಳ್ನ ನನ್ಮಗಳಲ್ಲ ಅಂತಿದಾರಲ್ಲ.

ಗದ್ದಲ ನಾಲಕ್ಕು: ರಾಮೇಗೌಡ್ರು ಅಂಗೇಳವ್ರಂದ್ರೆ ಅವರ್‍ಮಾತೆ ಸರಿ. ಆದ್ರೂ... ನಮ್ಮ ಗೌಡ್ರ ಮಗ್ನನ್ನೆ ಆರಿಸ್ಕೊಂಡ್‌ ಹೋಗೋಂತ ಮಸಲತ್ತ್‌ ಮಾಡ್ಬುಟ್ಟವಲ್ಲ ಈ ಮುಂಡೇವು. ಎಲ್ಲಾ ಆ ಮುಂಡೇಯಿಂದ್ಲೆ ಆಗಿದ್ದು. ಒಳಕ್ಕೂತು ಯಂಗೆ ಮುಸಡಿ ಊದಿಸ್ಕೊಂಡ್‌ ಕೂತಿದ್ದಾಳ್ನೋಡಿ... ರಾಮ್ಗುಡಿಯ ಮುಂದಿದ್ಕೊಂಡೆ ಎಂತಾ ಕೆಲ್ಸ ಮಾಡ್ಬಿಟ್ಳು... ನಡೀರಿ ಎಳ್ಕಂಬಂದು ಈ ಬೇವಿನ ಮರ್‍ಕೆ ಕಟ್ಟಿ ನಾಲ್ಕು ಬಿಗಿಯೋಣ. ಇಲ್ಲಾಂದ್ರೆ ನಾಳೇಕೆ ನಮ್ಮಕ್ಳು ಇದ್ನೆ ಕಲ್ತುಕೊಂಡ್ರೆ ಏನ್‌ ಗತಿ.

ಗದ್ದಲ ಐದು: ಹೌದೌದು... ನಡೀರಿ ಎಳ್ಕಂಬರೂವ.

ಗದ್ದಲ ಆರು: ಹೇ ಬೇಡ್ರೊ.... ಮಾನಭಂಗ, ಅಟೆಂಮ್ಟೀವ್‌ ಮರ್‍ಡರ್‌ ಹೀಗೆ ಏನಾರು ಕೇಸ್ಗೀಸ್‌ ಆಕಿದ್ರೆ ಊರೋರೆಲ್ಲ ಜೇಲು ಸೇರ್‍ಬೇಕಸ್ಟೆ.

ಗದ್ದಲ ಏಳು: ಅಂಗಂತ ಸುಮ್ಕಿದ್ರೆ ದೇವ್ರು ಮೆಚ್ತಾನ... ಲೋಕ ಮೆಚ್ತೈತ. ಕೇಸ್ಗೀಸ್ಗಿಂತ ನಮ್ಕೆ ಊರ್‍ನ ಮಾನಾನೆ ಮುಕ್ಯ... ನಡೀರಿ ಎಳ್ಕಂಬರುವ.

ಹೀಗೆ ಏಳು ಗದ್ದಲಗಳು ಏಳು ತರನಾಗಿ ಮಾತ್ನಾಡಿ ಎದ್ದು ನಿಲ್ಲುವ ಹೊತ್ತಿಗೆ ಮನೆಯ ಒಳಗಿದ್ದ ಶಶಿರೇಖಾಳಿಗೆ ನಡುಕ ಶುರುವಾಗಿ, ಈ ರಾಮಾಪುರದ ಸಹವಾಸವೆ ಸಾಕೆಂದು ತೀರ್ಮಾನಿಸಿ. ಊರುಗಳೇ ಇಲ್ಲದ ಜಾಗಕ್ಕೆ ಓಡಿ ಹೋಗಲು ಎದ್ದು ನಿಂತಳು. ಅವಳು ಎದ್ದುನಿಂತ ಬಿರುಸಿಗೆ ಮನೆಯ ತಾರಸಿಯ ಚಪ್ಪಡಿಗಳು ಮುರಿದುಬಿದ್ದೆವೇನೋ ಎಂಬಂತೆ ಚಡಪಡಿಸತೊಡಗಿದವು. ಅವಳು ಹಾಗೆ ಎದ್ದು ನಿಂತು ಹೊರಗೆ ಅಡಿ ಇಡುವ ಹೊತ್ತಿಗೆ ಏಳು ಗದ್ದಲಗಳು ಹಾವಿನಂತೆ ಚಲಿಸಿ, ಅವಳೆದಿರು ಹೆಡೆಬಿಚ್ಚಿ ಏಳು ತಲೆಯ ಹಾವಾಗಿ ಅವಳನ್ನು ಬಂಧಿಸಿಬಿಟ್ಟವು. ಹೀಗೆ ಅವಳನ್ನು ಏಳು ತಲೆಯ ಹಾವು ಬಂಧಿಸುವ ಹೊತ್ತಿಗೆ ರಾಮಗುಡಿಯ ಮೇಲಿರುವ ಪುಟ್ಟ ಗೂಡಿನಲ್ಲಿರುವ ಶ್ರೀರಾಮಚಂದ್ರನ ಸಂಸಾರ ಮತ್ತೆ ಸಂಭಾಷಣೆಯಲ್ಲಿ ನಿರತವಾಯಿತು.

ಸೀತೆ: ಮಹಾಸ್ವಾಮಿ ಏನಿದು ಅವಾಂತರ? ಇಂತಹ ಅತಿರೇಕ ನಿಮಗೆ ಸಮಂಜಸವೆ!?

ಲಕ್ಷ್ಮಣ: ಇದರಲ್ಲಿ ಅತಿರೇಕವೇನು ಬಂತು ಅತ್ತಿಗೆ... ಇದು ಊರಿನ ಗದ್ದಲವಷ್ಟೆ.

ಸೀತೆ: ಪಾಪ, ಆ ಹೆಣ್ಣುಮಗಳ ಪರಿಸ್ಥಿತಿ... ಅವರು ಅವಳನ್ನು ಏನು ಮಾಡುವರೋ... ಆತಂಕದಲ್ಲಿದ್ದೇನೆ.

ಲಕ್ಷ್ಮಣ: ಆಗಲೇ ಹೇಳಿದ್ದೆನಲ್ಲ ಪೂರ್ವ ಜನ್ಮದ ಕರ್ಮಫಲ ಎಂದು.

ಸೀತೆ: ಹಾಗಾದರೆ ಈ ಜನ್ಮದಲ್ಲಿ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದವ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುವನೊ!?

ಲಕ್ಷ್ಮಣ: ......

ಹನುಮ: ಎಂದೂ ಇಲ್ಲದ ಕೊಂಕು ನುಡಿಗಳು ನಮ್ಮ ಕುಟುಂಬದಲ್ಲಿ ಇಂದೇಕೆ ಮಾತೆ?

ರಾಮ: ಸೀತೆ, ಆ ಲೋಕದ ನೀತಿಯೇ ಬೇರೆ, ನಮ್ಮ ನೀತಿಯೇ ಬೇರೆ ಎಂದು ನಿನಗೆ ತಿಳಿದಿಲ್ಲವೆ... ಮೊದಲು ಮನುಷ್ಯಳಾಗಿ ಯೋಚನೆ ಮಾಡುವುದನ್ನು ಬಿಟ್ಟುಬಿಡು.

ಸೀತೆ: ಹಾಗಾದರೆ ಶಶಿರೇಖಾಳ ಗತಿ.

ರಾಮ: ಊರು ನೋಡಿಕೊಳ್ಳುತ್ತದೆ.

ಸೀತೆ: ಅಂದರೆ?

ಲಕ್ಷ್ಮಣ: ಊರಿನ ನೀತಿಯನ್ನು ಪಾಲಿಸದವರಿಗೆ ಊರಿನಲ್ಲಿ ಉಳಿಗಾಲವಿರುವುದಿಲ್ಲ.

ಸೀತೆ: ಪ್ರಭು, ಹೇಗಾದರು ಮಾಡಿ ಅವಳನ್ನು ಕಾಪಾಡಿ... ಆ ಏಳು ಜನ ಅವರನ್ನು ಎಳೆದೊಯ್ಯುತ್ತಿದ್ದಾರೆ.

ರಾಮ: ಊರಿನ ನೀತಿಯನ್ನು ಪಾಲಿಸದಿದ್ದರೆ ಇಲ್ಲಿ ನಮಗೂ ಉಳಿಗಾಲವಿಲ್ಲ ಎಂಬುದನ್ನು ನಿನಗೆ ಪ್ರತ್ಯೇಕವಾಗಿ ಹೇಳಬೇಕೆ ಸೀತೆ.

ಸೀತೆ: ಲಕ್ಷ್ಮಣ?

ಲಕ್ಷ್ಮಣ: .....

ಸೀತೆ: ಹನುಮ ನೀನಾದ್ರು ಕಾಪಾಡೋ...

ಹನುಮ: ರಾಮ ರಾಮ ರಾಮ, ರಾಮ ರಾಮ ರಾಮ... ರಾಮ ನಾಮವೆ ಲೋಕದಲಿ ಅತಿ ಮಧುರ... ರಾಮ ರಾಮ ರಾಮ ರಾಮ...

ಲಕ್ಷ್ಮಣ: ಅಣ್ಣಾ... ಅತ್ತಿಗೆ ಕಾಣುತ್ತಿಲ್ಲ!

ರಾಮ : ಅಯ್ಯೊ ಸೀತೆ, ಎಲ್ಲಿ ಹೋದೆ... ಲಕ್ಷ್ಮಣಾ, ಹನುಮಾ. ಸೀತೆಯನ್ನು ಹುಡುಕಿ ತನ್ನಿರೊ... ಅವಳಿಲ್ಲವೆಂದರೆ ಈ ಊರಲ್ಲಿ ನನಗೂ ಉಳಿಗಾಲವಿಲ್ಲ.

ಹೀಗೆ ಶ್ರೀರಾಮಚಂದ್ರನ ಸಂಸಾರದ ಸಂಭಾಷಣೆಯು ಆ ರೀತಿ ಮುಗಿಯುತ್ತಿರಲು, ಇತ್ತ ರಾಮಗುಡಿಯ ಎದುರಿಗಿರುವ ಅರಳೀಕಟ್ಟೆಯ ಮೇಲೆ ಗದ್ದಲದ ಗೊಡವೆಯನ್ನು ತಲೆಗೆ ಹಾಕಿಕೊಳ್ಳದೆ ಯುವಕನೊಬ್ಬ ಕುಳಿತಿದ್ದಾನೆ. ಹಾಗೆ ಕುಳಿತವನು ಹೊಸದಾಗಿ ಲಾಂಚ್‌ ಆಗಿರುವ ಮೊಬೈಲ್‌ನ ಗೊರಿಲ್ಲಾ ಗ್ಲಾಸ್‌ ಪರದೆಯ ಮೇಲೆ ಅಶ್ಲೀಲ ವೀಡಿಯೊ ಚಿತ್ರವೊಂದನ್ನು ನೋಡುವುದರಲ್ಲಿ ಮಗ್ನನಾಗಿದ್ದಾನೆ. ಅರಳೀಕಟ್ಟೆಯ ಮೇಲೆ ಮಲಗಿಕೊಂಡು ಮೊಬೈಲ್‌ನಲ್ಲಿ ಹಾಗೆ ಮಗ್ನನಾಗಿರುವ ಯುವಕನನ್ನೇ ತದೇಕಚಿತ್ತದಿಂದ ನೋಡುತ್ತಲಿದ್ದ ರಾಮೇಗೌಡರ ನಾಯಿಗೆ ಏನೋ ವಾಸನೆ ಬಡಿದ ಹಾಗಾಗಿ, ಗಾಬರಿಯಲ್ಲಿ ಎದ್ದು ನಿಂತು ರಾಮಗುಡಿಯ ಮೇಲೆ ದಿಟ್ಟಿಸಿತು. ಹಾಗೆ ದಿಟ್ಟಿಸುತ್ತ ಹೊತ್ತಿಗೆ ಅದಕ್ಕೆ ರಾಮನ ಪಕ್ಕದಲ್ಲಿ ಸೀತೆಯು ಕಾಣದಾಗಿ, ತನ್ನದೇ ಭಾಷೆಯಲ್ಲಿ– ‘ಸೀತವ್ವ ಕಾಣ್ತಿಲ್ಲ... ಸೀತವ್ವ ಕಾಣ್ತಿಲ್ಲ.... ಊರ್‍ಗೇನೋ ಗ್ರಾಚಾರ ಕಾದೈತಿ... ಸೀತವ್ವ ಕಾಣ್ತಿಲ್ಲ... ಸೀತವ್ವ ಕಾಣ್ತಿಲ್ಲ...’ ಎನ್ನುತ್ತಾ ಊರೊಳಗೆ ಓಡತೊಡಗಿತು.

ಊರಿನ ಮಾತು: ಅನಿಸ್ಟ ಮುಂಡೇದು... ಏನ್‌ ಇಂಗ್‌ ಬೊಗಳ್ತಿದೆ. ಎಲ್ಲೋ ಉಚ್ಚು ಇಡ್ಕಂಡಿರ್‍ಬೇಕು... ತಲ್‌ಮ್ಯಾಕ ಒಂದ್ಕಲ್ಲು ಎತ್ತಾಕಿ... ಇಲ್ಲಾಂದ್ರೆ ಯಾರ್‍ನಾನ ಕಚ್ಚಿಬಿಟ್ಟೀತು...

ಮರುದಿನದ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದ ಸುದ್ದಿ– ರಾಮಾಪುರದ ನಾಯಿಗಳಿಗೆ ವೇಗವಾಗಿ ಹಬ್ಬುತ್ತಿರುವ ಮಾರಣಾಂತಿಕ ಹುಚ್ಚು ರೋಗ. ನಾಯಿಗಳನ್ನೆಲ್ಲಾ ಕೊಲ್ಲಲು ಊರ ಪಂಚಾಯತಿ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT