ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿಗಾರ್ತಿಯಾಗಿಯೂ ಮಹಿಳೆಯಾಗಿಯೂ...

Last Updated 18 ಮೇ 2013, 19:59 IST
ಅಕ್ಷರ ಗಾತ್ರ

ಪತ್ರಕರ್ತೆಯಾಗಿ ಇಪ್ಪತ್ತೈದು ವರ್ಷಗಳ ಅನುಭವ ನನ್ನದು. ಡೆಕ್ಕನ್ ಹೆರಾಲ್ಡ್‌ನ ವಾಷಿಂಗ್ಟನ್ ಡಿಸಿ (ಅಮೆರಿಕ) ಪ್ರತಿನಿಧಿಯ ಕರ್ತವ್ಯ ಸೇರಿದಂತೆ ವೃತ್ತಿ ನಿಮಿತ್ತ ವಿಶ್ವದ ವಿವಿಧ ಭಾಗಗಳನ್ನು ಸುತ್ತಿದ್ದೇನೆ. ಸವಾಲಿನ ಸಂದರ್ಭಗಳನ್ನೂ ಎದುರಿಸಿದ್ದೇನೆ. ಈ ಅನುಭವದಲ್ಲಿ, ಒಬ್ಬ ಪತ್ರಕರ್ತೆಯಾಗಿ ಒಳ್ಳೆಯದು, ಕೆಟ್ಟದ್ದು ಎರಡನ್ನೂ ಕಂಡಿದ್ದೇನೆ.

ಈಜಿಪ್ಟ್ ರಾಜಧಾನಿ ಕೈರೋದ ತಹ್ರೀರ್ ಚೌಕದಲ್ಲಿರುವ ಅಮೆರಿಕ ಸುದ್ದಿಜಾಲ `ಸಿಬಿಎಸ್'ನ ಮುಖ್ಯ ವಿದೇಶಿ ಪ್ರತಿನಿಧಿ ಲಾರಾ ಲೊಗಾನ್ ಅವರಿಗಾದ ಕರಾಳ ಅನುಭವ ನನಗೆ ನೆನಪಾಗುತ್ತಿದೆ. ಅಂದಿನ ಈಜಿಪ್ಟ್ ಅಧ್ಯಕ್ಷ, ನಿರಂಕುಶಾಧಿಕಾರಿ, ಹೊಸ್ನಿ ಮುಬಾರಕ್ ಅವರ ಪದಚ್ಯುತಿಯ ಘಟನೆಗಳನ್ನು ಲಾರಾ ವರದಿ ಮಾಡುತ್ತಿದ್ದರು. 2011ರ ಫೆಬ್ರುವರಿ 11ರ ದಿನವದು. ಘಟನೆಗಳನ್ನು ಚಿತ್ರೀಕರಿಸುತ್ತಿದ್ದ ಅವರ ಮೇಲೆ ದಾಳಿ ಮಾಡಿದ ಉದ್ರಿಕ್ತ ಗುಂಪೊಂದು ಆಕೆಯನ್ನು ತನ್ನ ತಂಡದಿಂದ ದೂರ ಮಾಡಿತು. ಸುಮಾರು ಅರ್ಧಗಂಟೆ ತರುವಾಯ ಈಜಿಪ್ಟ್ ಸೈನಿಕರು ಹಾಗೂ ಕೆಲ ಮಹಿಳೆಯರು ಗಾಯಗೊಂಡಿದ್ದ ಆಕೆಯನ್ನು ರಕ್ಷಿಸಿದರು. ವಿಚಿತ್ರ ಎಂದರೆ ಈ ಘಟನೆಯನ್ನು `ಸಿಬಿಎಸ್' ಗಂಭೀರವಾಗಿ ಪರಿಗಣಿಸಲಿಲ್ಲ. ಆಕೆಯಂತೆಯೇ ಈ ಹಿಂದೆ `ಸಿಎನ್‌ಎನ್'ನ ವರದಿಗಾರನೊಬ್ಬ ದಾಳಿಗೆ ತುತ್ತಾಗಿದ್ದರೂ ಸಾರ್ವಜನಿಕವಾಗಿ (ಟ್ವಿಟರ್‌ನಲ್ಲಿ) ಲಾರಾ ಬಗ್ಗೆ ಕಾಮಪ್ರಚೋದಕ ಹಾಗೂ ಸಂವೇದನಾರಹಿತ ಹೇಳಿಕೆಗಳನ್ನು ಪುರುಷ ವರದಿಗಾರರು ನೀಡುತ್ತಿದ್ದರು. (ವಿವರಗಳಿಗೆ ನೋಡಿ: www.popeater.com/2011/02/15/cbs-lara-logan-hospitalized-after-brutal-sexual-assault-in-eg).). ಪತ್ರಕತೆರ್ಯರ ಮೇಲೆ ಎಲ್ಲೆಡೆ ನಡೆಯುತ್ತಿರುವ ಶೋಷಣೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಸ್ತ್ರೀಪರ ಹೋರಾಟಗಾರರು ಒತ್ತಾಯಿಸಿದರು. ಭಯದಿಂದ ವಿಷಯವನ್ನು ಮುಚ್ಚಿಡದಂತೆ, ಅಲ್ಲದೆ ನಿಯೋಜಿತ ವರದಿಗಾರಿಕೆಯಿಂದ ಹಿಂದಕ್ಕೆ ಕರೆಸಿಕೊಂಡರೆ ಅಥವಾ ಸವಾಲಿನ ವರದಿಗಾರಿಕೆಗೆ ಅವಕಾಶ ನೀಡದಿದ್ದರೆ ಅದನ್ನೂ ತಿಳಿಸುವಂತೆ ಕೋರಿದರು.

ಲಾರಾಗಿಂತಲೂ ನನ್ನ ಅನುಭವಗಳು ತೀರಾ ಭಿನ್ನವೇನಲ್ಲ. ಆದರೆ ಅವು ಅಷ್ಟು ಕ್ರೂರವೂ ಅಲ್ಲ.

ವರದಿಗಾರ್ತಿಯರು ತಾವು ಕೆಲಸ ಮಾಡುವಾಗ ಅನುಭವಿಸುವ ಕಷ್ಟಗಳಲ್ಲಿ ಒಂದನ್ನು ಇಲ್ಲಿ ಹೇಳಬಯಸುತ್ತೇನೆ. ಕೆಲವು ಪುರುಷರು ನಮ್ಮನ್ನು ಅಧೀರರನ್ನಾಗಿ ಮಾಡಿದರೆ ಇನ್ನೂ ಕೆಲವರು ಬೆಂಬಲಕ್ಕೆ ನಿಲ್ಲುತ್ತಾರೆ. ಕೆಲವು ಪುರುಷರು ನಮ್ಮ ಸಾಧನೆಗಳನ್ನು ಅಲ್ಲಗಳೆದರೆ ಅವುಗಳನ್ನು ಗುರುತಿಸಲೆಂದೇ ಉಳಿದವರು ಇರುತ್ತಾರೆ. ಕೆಲವರು ಸಹಕರಿಸಲು ಹಿಂಜರಿದರೆ ಮತ್ತೆ ಕೆಲವರು ಸಹಾಯಕ್ಕೆ ಕಟಿಬದ್ಧರಾಗಿರುತ್ತಾರೆ.

1990ನೇ ಇಸವಿ. ನಾನಾಗ ಡೆಕ್ಕನ್ ಹೆರಾಲ್ಡ್‌ನ ಆಂಧ್ರಪ್ರದೇಶದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ನಮೀಬಿಯಾದ ಸ್ವಾತಂತ್ರೋತ್ಸವ ಮತ್ತು ನಂತರದ ಘಟನೆಗಳನ್ನು ವರದಿ ಮಾಡುವಂತೆ ಸಂಪಾದಕರು ತಿಳಿಸಿದರು. ದಕ್ಷಿಣ ಆಫ್ರಿಕಾ ಜನಾಂಗೀಯ ದ್ವೇಷದಿಂದ ದೂರವಾಗುತ್ತಿದ್ದ ಹಾಗೂ 20 ವರ್ಷಗಳ ಸೆರೆವಾಸದಿಂದ ನೆಲ್ಸನ್ ಮಂಡೇಲ ಮುಕ್ತರಾದ ಭಾವೋತ್ಕರ್ಷದ ಸಂಕ್ರಮಣ ಕಾಲವದು. ಎರಡು ವರ್ಷ ಹಾಗೂ ಏಳು ವರ್ಷದ ಇಬ್ಬರು ಮಕ್ಕಳನ್ನು ಪೋಷಿಸುವ ಹೊಣೆಗಾರಿಕೆಯಿದ್ದರೂ ಮರುಮಾತಿಲ್ಲದೆ ಅಲ್ಲಿಗೆ ತೆರಳಲು ಒಪ್ಪಿಕೊಂಡೆ.

ಆಗ ಬಹುತೇಕ ಭಾರತೀಯರಿಗೆ ದಕ್ಷಿಣ ಆಫ್ರಿಕಾದ ಬಗ್ಗೆ ಎರಡು ಸಂಗತಿಗಳು ತಿಳಿದಿದ್ದವು. ಅವು ಜನಾಂಗೀಯ ಭೇದ ಮತ್ತು ನೆಲ್ಸನ್ ಮಂಡೇಲ. ಕೆಲವೇ ಕೆಲವು ಮಂದಿಗೆ ಮಾತ್ರ ದಕ್ಷಿಣ ಆಫ್ರಿಕಾದಲ್ಲಿ ಕ್ಷೀಣಿಸುತ್ತಿರುವ ಭಾರತೀಯರ ಸಂಖ್ಯೆಯ ಬಗ್ಗೆ ಅರಿವಿತ್ತು.

ನಮೀಬಿಯಾ (ಮಾರ್ಚ್ 21ರ ಅದರ ಸ್ವಾತಂತ್ರ್ಯ ದಿನಾಚರಣೆಯನ್ನು ವರದಿ ಮಾಡಲು) ಹಾಗೂ ದಕ್ಷಿಣ ಆಫ್ರಿಕಾಕ್ಕೆ ನಾನು ತೆರಳುತ್ತಿರುವ ಬಗ್ಗೆ ತಿಳಿಸಿದಾಗ ಗೆಳೆಯರು ಹಾಗೂ ಸಂಬಂಧಿಕರು ಆತಂಕ ವ್ಯಕ್ತಪಡಿಸಿದರು. `ಆಫ್ರಿಕಾಗೆ ತೆರಳುತ್ತಿರುವುದು ದೇವರಿಗೇ ಪ್ರೀತಿ. ಅಮೆರಿಕಕ್ಕೋ, ಯೂರೋಪಿಗೋ ಕಳಿಸುವಂತೆ ನಿನ್ನ ಸಂಪಾದಕರನ್ನು ಕೇಳು' ಎಂದರು. ಹಿಂದುಳಿದ, ಬುಡಕಟ್ಟು ಆಫ್ರಿಕಾದ ಬದಲಾಗಿ `ಅಭಿವೃದ್ಧಿ ಹೊಂದಿದ' ಪ್ರತಿಷ್ಠಿತ ಅಮೆರಿಕಕ್ಕೋ ಯೂರೋಪಿಗೋ ನನ್ನನ್ನು ಕಳಿಸಿದ್ದರೆ ಅವರಿಗೆ ಅಷ್ಟು ಆತಂಕವಾಗುತ್ತಿರಲಿಲ್ಲ.

ಆದರೆ ಯಾವುದೇ ಪತ್ರಕರ್ತನ ಮನಸ್ಸು ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ಐತಿಹಾಸಿಕ ಘಟನೆಯನ್ನು ದಾಖಲಿಸದೇ ಇರಲು ಒಪ್ಪಿಕೊಳ್ಳುವುದಿಲ್ಲ ಎಂದು ನಾನು ವಾದಿಸಿದೆ. 75 ವರ್ಷಗಳ ಕಾಲ ದಕ್ಷಿಣ ಆಫ್ರಿಕಾದ ಬಿಳಿಯ ಸಂಭಾವಿತರ ಅಧೀನದಲ್ಲಿದ್ದ ನಮೀಬಿಯಾ ವಿಮೋಚನೆಯ ಮನ್ವಂತರದಲ್ಲಿತ್ತು. ಅಲ್ಲದೆ ದಕ್ಷಿಣ ಆಫ್ರಿಕಾ ಕೂಡ ಸಮತೆ, ನ್ಯಾಯ ಹಾಗೂ ಕಪ್ಪು ವಣೀರ್ಯರಿಗೆ ಉತ್ತಮ ಜೀವನ ಕಲ್ಪಿಸುವ ಹೊಸ್ತಿಲಿನಲ್ಲಿತ್ತು. ನೆಲ್ಸನ್ ಮಂಡೇಲರ ಬಿಡುಗಡೆ, ಕಪ್ಪು ವರ್ಣೀಯರಿಗೆ ಅಧಿಕಾರ ಹಂಚಿಕೆ ಹಾಗೂ ಜನಾಂಗೀಯ ಭೇದದಿಂದ ನಲುಗಿದವರಿಗೆ ನ್ಯಾಯ ಒದಗಿಸುವ ಕೆಲಸಕ್ಕೆ ಚಾಲನೆ ನೀಡಿತ್ತು.

ವಿಪರ್ಯಾಸ ಎಂದರೆ ಈ ಎರಡೂ ದೇಶಗಳ ಬಗ್ಗೆ ಎಲ್ಲರಿಗಿಂತ ಹೆಚ್ಚು ತಿಳಿದವರು ಕೂಡ ನನ್ನನ್ನು ಉತ್ತೇಜಿಸಲಿಲ್ಲ. ನಮೀಬಿಯಾದ ವರದಿಗಾರಿಕೆ ಮೇಲೆ ಹಿಡಿತ ಹೊಂದಿದ್ದ ಹಿರಿಯ ಪತ್ರಕರ್ತರೊಬ್ಬರು ದೆಹಲಿಯಲ್ಲಿದ್ದ ನನ್ನ ಸಹೋದ್ಯೋಗಿಗೆ, `ನಮೀಬಿಯಾದಲ್ಲಿ ಅರಾಜಕತೆ ಇದೆ. 147 ದೇಶಗಳ ಗಣ್ಯರು, ಅವರ ಪರಿವಾರ ಮತ್ತು 20 ರಾಜ್ಯಗಳ ಮುಖ್ಯಸ್ಥರು ಹಾಗೂ ಅವರ ಬೆಂಬಲಿಗರಿಗೆ ವಸತಿ ಕಲ್ಪಿಸಲು ಹೆಣಗಾಟ ನಡೆಯುತ್ತಿದೆ. ವಿವಿಧ ದೇಶಗಳ ಪತ್ರಕರ್ತರನ್ನು ವಸಾಹತುಶಾಹಿ ಹಿಡಿತದಿಂದ ಬಿಡಿಸಿಕೊಳ್ಳುತ್ತಿದ್ದ ದೇಶಕ್ಕೆ ಕರೆಸಿಕೊಳ್ಳುವುದು ಹರಸಾಹಸದ ಕೆಲಸವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಮಹಿಳೆಯನ್ನು ಕಳುಹಿಸುತ್ತಿದ್ದೀರಿ' ಎಂದು ಹಳಹಳಿಸಿದ್ದರು.
ಮುಂದೆ ಆ ತಜ್ಞರನ್ನು ನಾನು ಭೇಟಿಯಾದಾಗ ಅವರು ನನ್ನನ್ನು ಇನ್ನಷ್ಟು ಅಧೀರಳನ್ನಾಗಿಸುವ ಮಾತುಗಳನ್ನಾಡಿದರು. ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯಾಗಿದೆಯೇ ಎಂಬುದನ್ನರಿಯದೆ ಅಲ್ಲಿಗೆ ತೆರಳದಂತೆ ಹುಕುಂ ಮಾಡಿದರು. `ಮೊಂಡು ಧೈರ್ಯ ತೋರುವುದು ಬೇಡ. ವಾಪಸ್ಸಾಗು' ಎಂದೇ ಆ ಗುರು ತಿಳಿಸಿದ್ದರು. `ಪಂಚತಾರಾ ಹೋಟೆಲ್ ಬೇಡ. ಅಗತ್ಯವಿದ್ದರೆ ಐದಾರು ಜನ ಇರುವ ಕೋಣೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದರೂ ಸಾಕು' ಎಂದೆ.

`ಅದು ಸಿಕ್ಕರೂ ನಿನ್ನ ಅದೃಷ್ಟ' ಎಂದರು ಆ ತಜ್ಞ. ಕಡೆಗೆ ನಮ್ಮ ಮಾತಿನ ಯುದ್ಧಕ್ಕೆ ಮುಕ್ತಾಯ ಹಾಡುತ್ತ `ಸಾಮಗ್ರಿಗಳನ್ನು ಇಟ್ಟುಕೊಳ್ಳುವ ಬೆನ್ನಚೀಲ (ರಕ್‌ಸ್ಯಾಕ್) ಕೊಂಡೊಯ್ಯಿ. ನಿನಗೆ ಅದರ ಅಗತ್ಯ ಬರಬಹುದು' ಎಂದರು. ಸದಾ ಪ್ರಯಾಣಿಸುವ, ಅಪಾರ ಅನುಭವವುಳ್ಳ ತಜ್ಞರ ಮಾತು ಅದಾಗಿತ್ತು. ಕೆಲವು ಗಂಟೆಗಳ ಕಾಲ ಅವರ ಮನೆಯಲ್ಲಿದ್ದ ನಾನು ಅಲ್ಲಿಂದ ವಿಮಾನ ನಿಲ್ದಾಣದತ್ತ ಧಾವಿಸಿದೆ. ಅವರ ಆ ಮಾತು ನನ್ನ ಪಯಣದ ನಿರ್ಧಾರವನ್ನೇ ಕ್ಷಣಕಾಲ ಅಲುಗಾಡಿಸಿತ್ತು. ಅದೇ ಮೊದಲ ಬಾರಿ ವಿದೇಶಕ್ಕೆ ತೆರಳುತ್ತಿದ್ದ ನಾನು ಟ್ಯಾಕ್ಸಿಯಲ್ಲಿ ಕುಳಿತು ಸಹೋದ್ಯೋಗಿಯಲ್ಲಿ ಅಳಲು ತೋಡಿಕೊಂಡೆ. ಅವರು ಆ ತಜ್ಞರ ಪೂರ್ವಗ್ರಹಗಳನ್ನೆಲ್ಲಾ ಅಲ್ಲಗಳೆದರು. ನನ್ನ ದೃಢ ವ್ಯಕ್ತಿತ್ವವನ್ನು ನೆನಪಿಸಿದ ಅವರು, `ಆ ತಜ್ಞರಿಗೆ ನನ್ನ ಬಗ್ಗೆ ಹೆಚ್ಚು ತಿಳಿದಿಲ್ಲ' ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಭರವಸೆಯೇನೋ ಮೂಡಿತ್ತು, ಆದರೆ ಕೊಂಚ ಮಾತ್ರ. ಹೊಟ್ಟೆಯಲ್ಲಿ ಒಂದು ರೀತಿ ಚಿಟ್ಟೆ ಪಟಪಟನೆ ರೆಕ್ಕೆ ಬಡಿದಂತೆ ತಳಮಳ.

ಸಮಸ್ಯೆಯ ತುಣುಕುಗಳು ಒಂದೊಂದಾಗಿ ಬಿಚ್ಚಿಕೊಳ್ಳಲಾರಂಭಿಸಿದ್ದು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ. ವಿವಿಧ ಅಡೆತಡೆಗಳನ್ನು ದಾಟಿ ನಾನು ವಿಂಡ್‌ಹೂಕ್ ತಲುಪಬೇಕಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ನೇಮಿಸಿದ್ದ ಏರ್‌ಲೈನ್ ಸಿಬ್ಬಂದಿ ಅತ್ತಿಂದಿತ್ತ ಚಲಿಸುತ್ತಿದ್ದರು. ನನ್ನ ಟಿಕೆಟ್ ಪಡೆದ ಹುಡುಗಿಗೆ ವಿಂಡ್‌ಹೂಕ್ ಎಲ್ಲಿದೆ ಎಂಬುದು ತಿಳಿದಿರಲಿಲ್ಲ. ಆಕೆ ತನ್ನ ಸಹೋದ್ಯೋಗಿಯೊಬ್ಬರ ಬಳಿಗೆ ತೆರಳಿದರು. ಆತ ಕಂಪ್ಯೂಟರ್‌ನಲ್ಲಿ ಜಾಲಾಡಿದ ಬಳಿಕ `ವಿಂಡ್‌ಹೂಕ್ ಎಲ್ಲಿದೆ?' ಎಂದು ಪ್ರಶ್ನಿಸಿದ. `ನಮೀಬಿಯಾದಲ್ಲಿ' ನನ್ನ ಉತ್ತರ. `ಅದು ಇರುವುದು ದಕ್ಷಿಣ ಆಫ್ರಿಕಾದಲ್ಲಿ' ಎಂದು ಕಂಪ್ಯೂಟರ್ ಹೇಳುತ್ತಿದೆ. ನಾವು ನಿಮ್ಮನ್ನು ಬಿಡುವುದಿಲ್ಲ...'

ನಮೀಬಿಯಾ ದಕ್ಷಿಣ ಆಫ್ರಿಕಾದಿಂದ ಮುಕ್ತವಾಗುತ್ತಿರುವ ಬಗ್ಗೆ ಸಣ್ಣದೊಂದು ಪಾಠ ಮಾಡಬೇಕಾಯಿತು. ವಾಸ್ತವದಲ್ಲಿ ನಾನೊಬ್ಬ ವರದಿಗಾರ್ತಿಯಾಗಿದ್ದು ಅದರ ಸ್ವಾತಂತ್ರ್ಯ ದಿನೋತ್ಸವವನ್ನು ವರದಿ ಮಾಡಲು ತೆರಳುತ್ತಿರುವೆ ಎಂದವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ. ಆದರೆ ಅದನ್ನು ಒಪ್ಪದ ಆತ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಮೂಲಕ ಹಾದು ಹೋಗಲು ಕೂಡ ವೀಸಾ ಅಗತ್ಯವಿದೆಯೆಂದು ಹೇಳಿದ. ಅರ್ಧ ಗಂಟೆ ಮಾತ್ರ ಉಳಿಯುವ ಜೋಹಾನ್ಸ್‌ಬರ್ಗ್‌ಗೆ ವೀಸಾ ಅಗತ್ಯ ಇಲ್ಲವೆಂದು ನನ್ನ ಟ್ರಾವೆಲ್ ಏಜೆಂಟ್ ಹೇಳಿದ್ದನ್ನು ತಿಳಿಸಿದೆ. ಆತನಿಗದು ಒಪ್ಪಿಗೆಯಾಗಲಿಲ್ಲ. ಉಕ್ಕಿ ಬರುತ್ತಿದ್ದ ಕೋಪವನ್ನು ಅದುಮಿ ಹಿಡಿದೆ. `ನಿಮ್ಮ ಬಾಸ್ ಜೊತೆ ಮಾತಾಡಿ' ಎಂದು ಮೆದುವಾಗಿ ಹೇಳಿದೆ. ಆತ `ಕಂಪ್ಯೂಟರೇ ನನ್ನ ಬಾಸ್' ಎಂದ.

ನಾನಂದುಕೊಂಡಂತೆ ಅವರ ಮಾನವ ಬಾಸ್ ಕಠೋರ ಆಗಿರಲಿಲ್ಲ. ವೀಸಾ ಸರಿಹೊಂದದೆ ಜೋಹಾನ್ಸ್‌ಬರ್ಗ್‌ನಿಂದ ಮರಳುವ ಸ್ಥಿತಿ ಒದಗಿದರೆ, ಅಥವಾ ವಿಮಾನದಲ್ಲಿ ಅವಕಾಶ ನಿರಾಕರಿಸಿದರೆ ಎಲ್ಲಾ ಬಗೆಯ ಖರ್ಚು ವೆಚ್ಚುಗಳನ್ನು ಸ್ವತಃ ಭರಿಸಬೇಕು ಎಂದು ಬಾಂಡ್ ಬರೆಸಿಕೊಂಡ. ಸಹಿ ಹಾಕಿದೆ. ಮಾಹಿತಿ ಪೂರಣವಾಗದ ಕಂಪ್ಯೂಟರ್‌ನಿಂದಾಗಿ ಮತ್ತು ಏರ್‌ಲೈನ್ ಸಿಬ್ಬಂದಿಯಿಂದಾಗಿ ಆ ದಶಕದ ಮಹತ್ವದ ಘಟನೆಯೊಂದರಿಂದ ವಿಮುಖಳಾಗಲು ಇಷ್ಟವಿರಲಿಲ್ಲ.

ನಮೀಬಿಯಾದಲ್ಲಿ ಹತ್ತು ದಿನಗಳ ಕಾಲ ಉಳಿಯುವುದು ಸುಲಭದ ಮಾತಾಗಿರಲಿಲ್ಲ. ಪ್ರೀತಿಯಿಂದಾಗಲೀ ಹಣದಿಂದಾಗಲೀ ಅಲ್ಲಿ ವಸತಿ ವ್ಯವಸ್ಥೆ ದಕ್ಕುತ್ತಿರಲಿಲ್ಲ. ಆದರೆ ಎಲ್ಲರೂ ಅನುಕೂಲಕರವಾಗಿ ವರ್ತಿಸಿದರು, ಅದರಲ್ಲಿಯೂ ಭಾರತೀಯ ಅಧಿಕಾರಿಗಳು, ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಕೂಡ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದುದರಿಂದ ಭಾರತೀಯರ ದೊಡ್ಡ ದಂಡು ಅಲ್ಲಿ ನೆರೆದಿತ್ತು.

ವಿಂಡ್‌ಹೂಕ್‌ನಲ್ಲಿ ಇಳಿಯುತ್ತಿದ್ದಂತೆ ಗುಣಮಟ್ಟದ ಹೋಟೆಲ್‌ಗೆ ತೆರಳಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ಹುಡುಕಲಾರಂಭಿಸಿದೆ. ಅಲ್ಲಿ ಅವರ‌್ಯಾರೂ ಕಾಣಿಸಲಿಲ್ಲ. (ಜನಾಂಗೀಯ ಭೇದವನ್ನು ಬಹಿಷ್ಕರಿಸಿ ದಕ್ಷಿಣ ಆಫ್ರಿಕಾದೊಂದಿಗೆ ಭಾರತ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತ್ತು). ಜೊತೆಗಿದ್ದ ಭಾರತೀಯರನ್ನು ಸಂಪರ್ಕಿಸಿದಾಗ ಅವರು ಭಾರತೀಯ ಸಾಗರೋತ್ತರ ಸಂವಹನಕ್ಕೆ (ಐಒಸಿ) ಸಂಬಂಧಿಸಿದ ಅಧಿಕಾರಿಗಳಾಗಿದ್ದು ಪ್ರಧಾನಿ ನಿಯೋಗದಲ್ಲಿ ಸಂವಹನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವುದಾಗಿ ತಿಳಿದು ಬಂತು. ವಸತಿ ಸೌಕರ್ಯ ಇಲ್ಲದಿರುವುದನ್ನು ಅವರ ಬಳಿ ಹೇಳಿಕೊಂಡೆ. ಪ್ರಧಾನಿ ನಿಯೋಗದೊಂದಿಗೆ ತೆರಳುತ್ತಿದ್ದ ಪತ್ರಕರ್ತರಿಗೆ ಸಹಾಯ ಮಾಡುವ ಕರ್ತವ್ಯದಲ್ಲಿ ನಿರತರಾಗಿದ್ದ ಇಬ್ಬರು ಅಧಿಕಾರಿಗಳು ಕೆಲವು ಗಂಟೆಗಳವರೆಗೆ ತಮ್ಮ ಕೊಠಡಿಯನ್ನು ಬಿಟ್ಟುಕೊಟ್ಟದ್ದಲ್ಲದೆ ತಿನಿಸುಗಳನ್ನೂ ನೀಡಿದರು. ನಾನು ದಣಿವಾರಿಸಿಕೊಳ್ಳಲು ಹಾಗೂ ವಸತಿ ಸೌಕರ್ಯ ಹುಡುಕಿಕೊಳ್ಳಲು ಅದು ಸಹಾಯಕವಾಯಿತು. ಬಿಳಿ ನಮೀಬಿಯನ್ ಒಬ್ಬರು ತಮ್ಮ ಪತ್ನಿ ಹಾಗೂ ಪುತ್ರನ ಭಾರಿ ವಿರೋಧದ ನಡುವೆಯೂ ಅವರ ಪೇಯಿಂಗ್ ಗೆಸ್ಟ್ ಆಗಿರುವುದಕ್ಕೆ ಅನುವು ಮಾಡಿಕೊಟ್ಟರು. ನಾನು `ಕಪ್ಪು ವರ್ಣೀಯ'ಳಾಗಿದ್ದೆ. ಆದರೆ ಹಣಕ್ಕಾಗಿ ಆತ ವಸತಿ ಸೌಕರ್ಯ ಕಲ್ಪಿಸಿದ್ದರು. ಅಷ್ಟರಮಟ್ಟಿಗೆ ನನ್ನ ಕಪ್ಪು ಬಣ್ಣವನ್ನು ಹತ್ತಿಕ್ಕಿದ್ದರು.

ಈ ಗೆಲುವನ್ನು ಐಒಸಿ ಅಧಿಕಾರಿಗಳ ಬಳಿ ಹೇಳಿಕೊಂಡಾಗ (ಮೊದಲು ಅವರು ಪ್ರತ್ಯೇಕ ವಸತಿ ವ್ಯವಸ್ಥೆ ಸಾಧ್ಯವಿಲ್ಲ ಎಂದಿದ್ದರು) ನನ್ನ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಹೆದರಿಸಿದರು. ಅಲ್ಲದೆ ತಮ್ಮ ಕೋಣೆಯಲ್ಲಿಯೇ ಉಳಿದುಕೊಳ್ಳುವಂತೆ ಸೂಚಿಸಿದರು. ಇಬ್ಬರು ಪುರುಷರೊಂದಿಗೆ ಕೋಣೆ ಹಂಚಿಕೊಳ್ಳುವುದು ನನಗೆ ಸಮಸ್ಯೆಯಾಗಿ ತೋರಲಿಲ್ಲ. ಏನೂ ಇಲ್ಲದೇ ಇರುವುದಕ್ಕಿಂತ ಇದು ಮೇಲು ಅನ್ನಿಸಿತ್ತು. ಆದರೆ ಅಲ್ಲೊಂದು ತೊಡಕಿತ್ತು. ಪ್ರಧಾನಿಯೊಂದಿಗೆ ಬಂದವರು ಮಾತ್ರ ಅಲ್ಲಿ ಇರಬಹುದಿತ್ತು. ತಂಗಲು ಸೂಕ್ತ ವ್ಯವಸ್ಥೆ ಇಲ್ಲದಿದ್ದರೂ ಎರಡು ರಾತ್ರಿಗಳನ್ನು ಕಳೆಯಬೇಕಾದ ನನ್ನ ಸಮಸ್ಯೆಗೆ ಅವರ ಬಳಿ ಸೂಕ್ತ ಪರಿಹಾರ ಇರಲಿಲ್ಲ.

ಮತ್ತೊಬ್ಬ ಸಹೃದಯಿ ಅಧಿಕಾರಿ ನನ್ನ ವಾಸಸ್ಥಳವನ್ನು ಎರಡು ರಾತ್ರಿಗಳವರೆಗೆ ಕಲಹರಿ ಸ್ಯಾಂಡ್ಸ್ ಹೋಟೆಲ್‌ನಲ್ಲಿರುವ ಆತನ ಗೆಳೆಯನ ಕೋಣೆಗೆ ಬದಲಿಸುವಂತೆ ಹೇಳಿದರು. ಅಲ್ಲಿ ಎರಡು ನಿಯಮಗಳನ್ನು ಪಾಲಿಸಬೇಕಿತ್ತು. ಒಂದು- ಅಲ್ಲಿ ಅವರ ಗೆಳೆಯ ಒಂದು ರಾತ್ರಿ ಕಳೆಯಲು ಮಾತ್ರ ಅವಕಾಶ ನೀಡಿದ್ದರು. ಬೆಳಿಗ್ಗೆ ಜಾಗ ಖಾಲಿ ಮಾಡಬೇಕಿತ್ತು. ನಾನು ಒಪ್ಪಿದೆ. ಎರಡು- ನಾನು ಯಾವುದೇ ರೂಂ ಸೇವೆಯನ್ನು ಬಯಸುವಂತಿರಲಿಲ್ಲ. ಏಕೆಂದರೆ ತಾನು ಬಳಸದ ಸೇವೆಗೆ ಹಣ ಸಂದಾಯ ಮಾಡಲು ಆ ವ್ಯಕ್ತಿ ತಯಾರಿರಲಿಲ್ಲ.

ಒಂದು ದಿನ ಮಾತ್ರ ತಂಗಲು ಅವಕಾಶ ದೊರೆತಿದ್ದಕ್ಕಾಗಿ ಅಧಿಕಾರಿ ಮಿತ್ರ ನನ್ನಲ್ಲಿ ಕ್ಷಮೆ ಕೋರಿದರು. ಅವರು ಕೂಡ ತಮ್ಮದೇ ಕೋಣೆ ಹೊಂದಿರದೆ ಅಧಿಕಾರಿಗಳ ಸಂಗಡ ತಂಗಿದ್ದರು. ಮರುದಿನದಿಂದ ನನಗೆ ಮತ್ತೆ ವಸತಿ ಸಮಸ್ಯೆ ಎದುರಾಗುತ್ತಿತ್ತು. ಏಕೆಂದರೆ ನಮೀಬಿಯ ಸರ್ಕಾರ ತನ್ನ ಅತಿಥಿಗಳಿಗಾಗಿ ಎಲ್ಲ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಿತ್ತು. ಭಾರತೀಯ ನಿಯೋಗದ ಅಧಿಕಾರಿಗಳು ಕೂಡ ಅವರು ಹೇಳಿದಂತೆ ಕೇಳಬೇಕಿತ್ತು.

ಮರುದಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ನಾನು ವಿಂಡ್‌ಹೂಕ್ ಹಾಗೂ ಅಲ್ಲಿನ ಮಾಧ್ಯಮ ಕೇಂದ್ರಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತಿದ್ದೆ. ಆದರದು ತ್ರಾಸದಾಯಕವಾಗಿತ್ತು. ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ವರದಿಯನ್ನು ಹೇಗೋ ಯಶಸ್ವಿಯಾಗಿ ನಿಭಾಯಿಸಿ, ತೆಲುಗು ಬಲ್ಲ ವರದಿಗಾರರೊಬ್ಬರ ಬಳಿ ಓಡಿದೆ. ಅವರ ಜೊತೆ ಹೊಂದಾಣಿಕೆ ಕಷ್ಟದ ಸಂಗತಿಯಾಗಿತ್ತು! ನಮೀಬಿಯನ್ ಮಾಧ್ಯಮ ಕೇಂದ್ರದಲ್ಲಿ ದಕ್ಷಿಣ ಆಫ್ರಿಕಾದ ಮಾಧ್ಯಮ ಪ್ರತಿನಿಧಿಗಳು ಸಂತೋಷಕೂಟ ಏರ್ಪಡಿಸಿರುವರೆಂದೂ ನಮೀಬಿಯಾದ ಹಂಗಾಮಿ ಅಧ್ಯಕ್ಷರಾದ ಸ್ಯಾಂ ನುಯೋಮಾ ಸಂಜೆ ಪತ್ರಮುಖೇನ ಅಭಿನಂದನೆ ಸಲ್ಲಿಸುವರೆಂದು ತಿಳಿಯಿತು. ಸುದ್ದಿ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಆ ವರದಿಗಾರರು ಪ್ರತಿಸ್ಪರ್ಧಿಯಾದ ನನ್ನೊಂದಿಗೆ ಮುಕ್ತವಾಗಿ ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತಿರಲಿಲ್ಲ. ಆದರೆ ಗೊತ್ತಿಲ್ಲದ ಸ್ಥಳವೊಂದರಲ್ಲಿ ತಮ್ಮನ್ನು ತಾವೇ ಕಂಡುಕೊಳ್ಳುವಾಗ ವೃತ್ತಿಪರ ನಿಯಮಗಳೆಲ್ಲ ಗಾಳಿಯಲ್ಲಿ ತೂರಿ ಹೋಗುತ್ತವೆ.

ಆಫ್ರಿಕಾ ನಗರಗಳ ಬಗೆಗೆ ಇರಬಹುದಾದ ನನ್ನ ಪೂರ್ವಗ್ರಹಗಳಿಗೆಲ್ಲ ವಿಂಡ್‌ಹೂಕ್ ಆಘಾತವನ್ನೇ ನೀಡಿತು. ಜನಜಂಗುಳಿ, ದೊಂಬಿ, ಕೊಳಕು ನಗರಿ ಇದಾಗಿರಬಹುದು ಎಂಬ ನನ್ನ ಊಹೆ ಸುಳ್ಳಾಯಿತು. ವಿಂಡ್‌ಹೂಕ್‌ನಲ್ಲಿ ಹೆಚ್ಚೆಂದರೆ ಸುಮಾರು ಹತ್ತು ಲಕ್ಷ ಜನರು ವಾಸಿಸುತ್ತಿರಬಹುದು ಅಷ್ಟೇ. ಅದು ಪೂರ್ತಿ ಆಧುನಿಕವಾಗಿತ್ತು. ವೈಭವೋಪೇತ ಬೃಹತ್ ಕಟ್ಟಡಗಳು, ವಿಶಾಲ ಹಾಗೂ ಸಮತಟ್ಟಾದ ರಸ್ತೆಗಳು, ಬ್ಯಾಂಕ್‌ಗಳು, ಶಿಸ್ತುಬದ್ಧ ಸಂಚಾರ ವ್ಯವಸ್ಥೆ ಹೊಂದಿತ್ತು. ವಿಂಡ್‌ಹೂಕ್ ಕಾರುಗಳ ನಗರಿ. ಕಾರ್ ಅಲ್ಲಿ ಪ್ರತಿಷ್ಠೆಯ ಸಂಕೇತವಾಗಿದ್ದು ಪ್ರತಿ ಬಿಳಿಯರು ಒಂದು ಅಥವಾ ಎರಡು ಕಾರ್ ಹೊಂದಿರುತ್ತಿದ್ದರು. ಕೆಲವು ಕಪ್ಪುವರ್ಣೀಯರು ಕೂಡ ಕಾರ್‌ಗಳನ್ನು ಬಳಸುತ್ತಿದ್ದರು. ಆದರೆ ಬಹಳಷ್ಟು ಮಂದಿ ಕೊಳೆಗೇರಿಗಳಲ್ಲಿ ಬದುಕುತ್ತಿದ್ದರು. ಸವಾರರಿಗೆ ವಿಂಡ್‌ಹೂಕ್‌ನ ಅಗಲವಾದ ರಸ್ತೆ ಹಾಗೂ ತೆಳುವಾದ ಸಂಚಾರ ದಟ್ಟಣೆ ಹಿತಕರ. ಮಧ್ಯರಾತ್ರಿಯ ವೇಳೆಯೂ ಚಾಚೂತಪ್ಪದೆ ಕೆಂಪು ದೀಪ ಬೆಳಗುತ್ತಿದ್ದಂತೆ ತಮ್ಮ ವಾಹನವನ್ನು ನಿಲ್ಲಿಸುತ್ತಿದ್ದ ಚಾಲಕರನ್ನು ಕಂಡ ನನಗೆ ನಿಜಕ್ಕೂ ಸಾಂಸ್ಕೃತಿಕ ಆಘಾತವೇ ಆಯಿತು.

ಅಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಇಲ್ಲದಿರುವುದು ನಾನು ಅನುಭವಿಸಿದ ಮತ್ತೊಂದು ಸಾಂಸ್ಕೃತಿಕ ಆಘಾತ. ಜನಾಂಗೀಯ ಭೇದದಡಿ ನಗರದಿಂದ ತುಸುದೂರದಲ್ಲಿ ವಾಸಿಸುತ್ತಿರುವ ಕರಿಯರು ಕೂಡ (ಬಿಳಿಯರೇ ತುಂಬಿರುವ) ವಿಂಡ್‌ಹೂಕ್‌ಗೆ ಬರುತ್ತಿದ್ದುದು ಟ್ಯಾಕ್ಸಿಗಳಲ್ಲಿ. ಇವು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹತ್ತಿರವಾಗಿದ್ದವು. ಸಮಯಕ್ಕೆ ಸರಿಯಾಗಿ ಬರುವ ಅವುಗಳ ಪ್ರಯಾಣ ದರವೂ ಹೆಚ್ಚೇನಲ್ಲ.

ಬಡವರು ಹಾಗೂ ಸೌಲಭ್ಯ ವಂಚಿತರೆಲ್ಲಾ ಕರಿಯರೇ ಆಗಿದ್ದುದು ಸಾಮಾನ್ಯವಾಗಿ ಕಂಡುಬರುತ್ತಿತ್ತು. ಜನಾಂಗೀಯ ಭೇದ ಅನುಸರಿಸುತ್ತಿದ್ದ ವಸಾಹತುಶಾಹಿ ಸರ್ಕಾರದೊಂದಿಗೆ ಅವರೆಂದೂ ಗುರುತಿಸಿಕೊಂಡವರಲ್ಲ. ಆಡಳಿತಗಾರರ ಅನುಕೂಲಕ್ಕಾಗಿ ನಿಯಮಗಳನ್ನು ರೂಪಿಸಲಾಗಿತ್ತೇ ಹೊರತು ಅವುಗಳಿಂದ ಸಾಮಾನ್ಯರಿಗೆ ಉಪಯೋಗವಿರಲಿಲ್ಲ. ಬಂಡೆ ಪರ್ವತಗಳಿಂದಲೇ ಕೂಡಿದ್ದ ನಮೀಬಿಯಾದಲ್ಲಿ ರಸ್ತೆಗಳು ವಿಶಾಲವಾಗಿದ್ದುದು ಕೇವಲ ವಾಹನ ಸಂಚಾರಕ್ಕೆ ಮಾತ್ರವಲ್ಲ. ಅಲ್ಲಿ ಬಂಡುಕೋರ ಕರಿಯರು ಹಾಗೂ ನೆರೆಯ ಶತ್ರುಗಳಿಂದ ರಕ್ಷಿಸಿಕೊಳ್ಳಲು ಆಗಾಗ ಹೆಲಿಕಾಪ್ಟರ್‌ಗಳು, ಲಘು ವಿಮಾನಗಳು ಇಳಿಯುತ್ತಿದ್ದವು.

ಆರು ಗಂಟೆಯಾಗುತ್ತಿದ್ದಂತೆ ವ್ಯಾಪಾರ ವಹಿವಾಟು ಸ್ತಬ್ಧಗೊಂಡು ವಿಂಡ್‌ಹೂಕ್ ಸ್ಮಶಾನ ಸದೃಶವಾಗುತ್ತಿತ್ತು. ನಂತರ ಕರಿಯ ಕೆಲಸಗಾರರೆಲ್ಲ ಕಪ್ಪುವರ್ಣೀಯರಿಗೆ ಮೀಸಲಾದ ಬಡಾವಣೆಗಳಾದ ಕಟಾಟುರ ಹಾಗೂ ಖೋಮಸ್ಡಲ್‌ಗಳಿಗೆ ತೆರಳುತ್ತಿದ್ದರು. ಬಿಳಿಯರು ಬೇಲಿಗಳಿಂದ ಸುತ್ತುವರಿದ ತಮ್ಮ ಸುಸಜ್ಜಿತ ಮನೆಗಳಿಗೆ ಮರಳುತ್ತಿದ್ದರು. ಬಿಳಿಯರಿಗೆಂದೇ ವಿಶೇಷವಾಗಿ ಮೀಸಲಾದ ಕೆಲವು ರೆಸ್ಟೋರೆಂಟ್‌ಗಳು ಮಾತ್ರ ಭರ್ತಿಯಾಗಿರುತ್ತಿದ್ದವು. ಬಾರ್ ಹಾಗೂ ನಿಲ್ದಾಣಗಳು ಮಾತ್ರ ಆರರ ನಂತರ ತೆರೆದಿರುತ್ತಿದ್ದವು. 

ನಮೀಬಿಯಾ ಮಾಧ್ಯಮ ಕೇಂದ್ರದ ಸಂಜೆ ಅನುಕೂಲಕರವಾಗಿ ಪರಿಣಮಿಸಿತು. ಪತ್ರಿಕೆಗಳು, ಆಕಾಶವಾಣಿ ಹಾಗೂ ದೂರದರ್ಶನದ ಪ್ರತಿನಿಧಿಗಳನ್ನು ಒಳಗೊಂಡ ಭಾರತೀಯ ಮಾಧ್ಯಮ ತಂಡದ ಕುಶಲೋಪರಿಯನ್ನು ವಿಚಾರಿಸಲು ಭಾರತೀಯ ಅಧಿಕಾರಿಗಳ ತಂಡ ಬಂದಿತ್ತು. ವಸತಿ ಸೌಕರ್ಯ ಇಲ್ಲದಿರುವುದನ್ನು ತಿಳಿದ ದೊಡ್ಡ ಅಧಿಕಾರಿಗಳು ನಾನೂ ಕೂಡ ಸರ್ಕಾರ ಪ್ರಾಯೋಜಿಸಿದ್ದ ವಸತಿಯಲ್ಲಿ ಉಳಿದುಕೊಳ್ಳಲು ಅರ್ಹಳೆಂದು ಪರಿಗಣಿಸಿದರು. ಆದರೆ ಸಂತೋಷಕೂಟ ಮುಗಿಯುವ ಮರುದಿನದವರೆಗೆ ಭಾರತೀಯ ಮಾಧ್ಯಮ ಪ್ರತಿನಿಧಿಗಳಿಗೆಂದು ಮೀಸಲಾಗಿದ್ದ ಆ ಕಟ್ಟಡದ ಕೋಣೆಗಳಿಗೆ ತೆರಳುವಂತಿರಲಿಲ್ಲ. ಆ ಕಟ್ಟಡದಲ್ಲಿ ಕೆಲವೇ ಪುರುಷರಿದ್ದು ಅವರ ಕೋಣೆಯಲ್ಲಿ ಒಂದು ರಾತ್ರಿ ತಂಗುವ ಸ್ಥಿತಿ ಬಂತೇ ಎಂದು ಆತಂಕಗೊಂಡೆ. ಆದರೆ ಭಿಕ್ಷುಕರಿಗೆ ಆಯ್ಕೆಗಳಿರುವುದಿಲ್ಲ. ಒಪ್ಪಿದೆ. ರಾತ್ರಿ ಕಡೆಗೂ ಹೋಟೆಲ್ ಕೊಠಡಿಯನ್ನು ತೊರೆದು ಕೊಂಚವೂ ಆತಂಕವಿಲ್ಲದೆ, ನೆಮ್ಮದಿಯಿಂದ, ಮಾಧ್ಯಮದವರಿದ್ದ ಕಟ್ಟಡ ಪ್ರವೇಶಿಸಿದೆ. ಮತ್ತೊಬ್ಬ ಪತ್ರಕರ್ತರೊಂದಿಗೆ ಅಲ್ಲಿನ ಕೋಣೆಯಲ್ಲಿ ತಂಗಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು. `ಪರವಾಗಿಲ್ಲ' ಎಂದೆ. ಅವರು ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರವರು. ಈಗಷ್ಟೇ ವಿಮುಕ್ತಗೊಳ್ಳುತ್ತಿರುವ ದೇಶವೊಂದು, ಮಾರ್ಚ್ 21ರಂದು ಸ್ವತಂತ್ರ ದೇಶಗಳ ಸಾಲಿಗೆ ಸೇರುವುದನ್ನು ನೆನೆದು ಹಾಸಿಗೆಗೆ ಬಂದೆ. ಎರಡೂ ಹಾಸಿಗೆಗಳ ಬಳಿ ಸುಂದರ ಕಾಗದದಿಂದ ಸಿಂಗರಿಸಿದ್ದ ಪೊಟ್ಟಣಗಳು. ನಾನು ಅವುಗಳನ್ನು ನಿರಾಕರಿಸಿದೆ. ವಾಸಕ್ಕೆ ಉತ್ತಮ ಸ್ಥಳ ದೊರೆತಿದ್ದು, ಮಹತ್ವದ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ತಲೆ ತುಂಬಿಕೊಂಡಿತ್ತು. ಮಧ್ಯರಾತ್ರಿ ಎಚ್ಚರವಾದಾಗ ಆಕಾಶವಾಣಿಯ ಪ್ರತಿನಿಧಿ ಬಾಗಿಲು ಬಡಿದ ಸದ್ದು. `ಬೇರೊಂದು ಕೋಣೆಗೆ ತೆರಳಲಾ?' ಅವರ ಪ್ರಶ್ನೆ. `ಭೂಕಂಪವಾದರೂ ಎಚ್ಚರಗೊಳ್ಳುವುದಿಲ್ಲ' ನನ್ನ ಉತ್ತರ. ಮರುದಿನ ಅವರು ತಮ್ಮ ಸಹೋದ್ಯೋಗಿ ಇರುವ ಮತ್ತೊಂದು ಕೋಣೆಗೆ ಬದಲಾಗುವುದಾಗಿ ತಿಳಿಸಿದರು. ಹುರ‌್ರೆ...! ಕಡೆಗೂ ನಾನೊಬ್ಬಳೇ ಉಳಿಯುವಂಥ ಕೊಠಡಿ ದೊರೆಯಿತು. ಬಾತ್‌ರೂಮನ್ನೂ ಉಪಯೋಗಿಸದ ಅವರನ್ನು ಖುಷಿಯಿಂದ ಬೀಳ್ಕೊಟ್ಟೆ. ಆಮೇಲೆ ಅಲ್ಲಿ ಭಾರತೀಯ ಅಧಿಕಾರಿಗಳು ಇಟ್ಟಿದ್ದ ಉಡುಗೊರೆ ಪೊಟ್ಟಣ ಇಲ್ಲದಿರುವುದು ತಿಳಿಯಿತು. ಪತ್ರಕರ್ತೆಗೆ ಆ ಪೊಟ್ಟಣಗಳಲ್ಲಿದ್ದ ಸಿಗರೇಟು, ಸ್ಕಾಚ್ ಬಾಟಲಿ ಉಪಯೋಗಕ್ಕೆ ಬರುವುದಿಲ್ಲ ಎಂದು ಆ ಪುರುಷ ಪತ್ರಕರ್ತ ನಿರ್ಧರಿಸಿದ್ದರು!

ಆ ದಿನ ನಮೀಬಿಯಾ ಕುರಿತ ಇನ್ನೊಂದು ಸುದ್ದಿಯನ್ನು ವರದಿ ಮಾಡುವುದರಲ್ಲಿ ಕಳೆದುಹೋಯಿತು. ಇನ್ನೇನು ಮುಕ್ತಗೊಳ್ಳಲಿದ್ದ ನಮೀಬಿಯಾದ ಕ್ರೀಡಾಂಗಣಕ್ಕೆ ಕರೆದೊಯ್ಯಲು ಅಧಿಕಾರಿಗಳು ನಮ್ಮನ್ನು ಬಸ್ಸಿಗೆ ತುಂಬಿದರು. ಹಿರಿಯ ಪತ್ರಕರ್ತರು ಕೋಣೆಯಲ್ಲಿಯೇ ಕುಳಿತು ಟೀವಿಯಲ್ಲಿ ಘಟನೆಯ ಲೈವ್ ನೋಡಲು ಹವಣಿಸುತ್ತಿದ್ದರು. ಆದರೆ ನಾನು ನೇರವಾಗಿ ಆ ಮಹತ್ವದ ಘಟನೆ ನಡೆಯುವ ಸ್ಥಳಕ್ಕೆ ತೆರಳಲು ನಿರ್ಧರಿಸಿದೆ. ಅಲ್ಲಿನ ಪರಿಸರ ಮೈಯೊಳಗೆ ಮಿಂಚು ಹರಿದಂತೆ ರೋಚಕವಾಗಿತ್ತು ಹಾಗೂ 1947ರ ಆಗಸ್ಟ್ 15ರಂದು ಹುಟ್ಟದೆ ನಾನು ಏನೇನೆಲ್ಲ ಕಳೆದುಕೊಂಡೆ ಎನ್ನುವುದನ್ನು ನಾನು ಅನುಭವಿಸಿದೆ.

`ಡೆಕ್ಕನ್ ಹೆರಾಲ್ಡ್'ನ ವಿಶೇಷ ಪ್ರತಿನಿಧಿ ಆಗಿ ಸೇವೆ ಸಲ್ಲಿಸಿರುವ ಲೇಖಕಿ, ಪ್ರಸ್ತುತ ಸಿಕಂದರಾಬಾದ್‌ನ ಲೊಯೋಲಾ ಅಕಾಡೆಮಿಯಲ್ಲಿ ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT