ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಿತ್ರ ಕಥೆಗಳ ವಿಚಿತ್ರ ಮನುಷ್ಯ

ಕಥೆ
Last Updated 27 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅವನು ನಮ್ಮ ಆಫೀಸಿಗೆ ಡ್ಯೂಟಿಗೆ ಜಾಯಿನ್ ಆಗಲು ಬಂದದ್ದು ಎಡವಟ್ಟು ದಿನ ಅನ್ನಬಹುದಾದ ಮಂಗಳವಾರದ ಮುಂಜಾನೆ. ನಮ್ಮಗಳ ಗ್ರಹಗತಿ ಸರಿಯಿರಲ್ಲವೇನೋ ? ಅಂದು ಸಿಕ್ಕಾಪಟ್ಟೆ ಮಳೆ ಹುಯ್ಯುತಿತ್ತು. ಅವನು ತನ್ನ  ತೊಯ್ದ ಮೈಯನ್ನು, ತಲೆಗೂದಲುಗಳನ್ನು ತನ್ನ ಕರ್ಚಿಫ್‌ನಿಂದ ಒರೆಸಿಕೊಳ್ಳುತ್ತಾ ಬಂದ.

ಬಹುದಿನ ಇಲ್ಲಿಯೇ ಠಿಕಾಣಿ ಹೊಡೆದಿರುವ ನಮಗೆ ಯಾರೇ ಹೊಸಬರು ನಮ್ಮ ಕಚೇರಿಗೆ ಬಂದರೆ ಮೊಟ್ಟ ಮೊದಲು ಅವರ ರೂಪಾವಲೋಕನ, ಅವರ ಸ್ವಭಾವಗಳ ಲೆಕ್ಕಾಚಾರಗಳನ್ನು ಆಶ್ಚರ್ಯ ಮತ್ತು ಕುತೂಹಲದಿಂದ ಗಮನಿಸುವುದು ರೂಢಿಯಾಗಿ ಬಿಟ್ಟಿದೆ. ಅವನು ಮಾನಸಿಕ ಆಸ್ಪತ್ರೆಯಿಂದ ಇಲ್ಲಿಗೆ ವರ್ಗವಾಗಿ ಬಂದಿದ್ದಾನೆಂದು ತಿಳಿದ ಮೇಲಂತೂ ನಮ್ಮ ಕುತೂಹಲದ ಮನಸ್ಸಿಗೆ ಭಯವೂ ಬೆರೆಯಿತು.

ಕಸ ಗುಡಿಸುವ, ಫೈಲುಗಳನ್ನು ಅತ್ತಿತ್ತ ಎತ್ತಾಡುವ ‘ಡ’ವರ್ಗದ ಕೆಲಸಕ್ಕೆ ಅವನು ವರ್ಗವಾಗಿ ಬಂದಿದ್ದ. ಅವನ ಬಟ್ಟೆ-ಬರೆಗಳೂ ಅದನ್ನೇ ಪ್ರತಿಫಲಿಸುವಂತೆ ಅವನ ಕೃಶ ಮೈಯನ್ನು ಆವರಿಸಿದ್ದವು. ಮಳೆಯಲ್ಲಿ ತೊಯ್ದುಕೊಂಡು ಬಂದವರು ಚಳಿಯಿಂದ ಗಡಗಡ ನಡುಗುವುದು ಸಹಜ. ಆದರೆ ಇವನೋ “ಮಳಿ ನೀರು ಏನು ಸುಡಕತ್ಯಾವರ್ರಿ, ಮೈಯೆಲ್ಲಾ ಉರಿಯಕತ್ಯಾದ” ಅಂದು ಮೊದಲ ದಿನವೇ ನಮ್ಮನ್ನು ತನ್ನ ಮಾತಿನಿಂದ ದಂಗು ಬಡಿಸಿದ್ದ.

ಅವನದು ರಾಮನಗರವಂತೆ. ಆದರೆ ಅವನೋ ನೋಡಲು ಅಂಜನೇಯನಂತಿದ್ದ. ಬಾಲ ಮಾತ್ರವಿರಲಿಲ್ಲ. ಆದರೆ ಅವನ ಮಾತುಗಳು ಮಾತ್ರ ಹನುಮಂತನ ಬಾಲದಂತೆ ಪ್ರಪಂಚ ಪರ್ಯಟನ ಮಾಡಿ ಎಲ್ಲೆಲ್ಲೋ ರೌಂಡು ಹೊಡಕೊಂಡು ಬರುತ್ತಿದ್ದವು. ಅವನ ಅಂತಹ ಮಾತುಗಳಲ್ಲಿ ದೇಶ-ಕಾಲಗಳ ಕಲಸುಮೇಲೋಗರವಾಗಿ ಕೇಳುವವರನ್ನು ದಿಗ್ಬ್ರಮೆಯ ಕಂದರಕ್ಕೆ ನೂಕುತ್ತಿದ್ದವು. ಯೌವನ ಕಾಲದಲ್ಲಿ ಅವನ ಮೊಗದ ಮೇಲೆ ಬಹು ಪ್ರತಾಪ ತೋರಿದ್ದ ಮೊಡವೆಗಳು ಈಗ ಹಣ್ಣಾಗಿ, ಅವನ ಹಳದಿ ಮುಖದಲ್ಲಿ ಕಪ್ಪು ಬಿಲ್ಲೆಗಳನ್ನು ಛಾಪಿಸಿದ್ದವು.

ಎಲಿ ಅಡಿಕೆ ತಂಬಾಕುಗಳನ್ನು ಕಾಲಾನುಕಾಲ ನುರಿಸಿ ನುರಿಸಿ ಸೋತು ಸುಣ್ಣಾಗಿ ಹೋಗಿದ್ದ ಅವನ ಕರಿಗಟ್ಟಿದ ಹಲ್ಲುಗಳು ನಾವು ಇನ್ನೂ ಈ ಕೆಲಸವನ್ನು ಮಾಡಲಾರೆವು ಎಂಬಂತೆ ಅವನು ಮಾತಾಡುವಾಗೆಲ್ಲ ಅಲ್ಲಾಡುತ್ತಿದ್ದವು. ಮುಂದಿನ ಒಂದೆರಡಂತೂ ಕೈಲಾಸ ಕಂಡು ತಾವಿದ್ದ ಜಾಗೆಗಳಲ್ಲಿ ಆಳ ಕಮರಿಗಳನ್ನು ಬಿಟ್ಟು ಹೋಗಿದ್ದವು. ಆಂಜನೇಯನಂತಿದ್ದ ಅವನ ಹೆಸರು ಹನುಮಂತ ನೀರಲಗಿ. ನಮ್ಮ ಕಚೇರಿಗೆ ಬಂದ ನಾಲ್ಕಾರು ದಿನಗಳಲ್ಲಿಯೇ ಅವನು ತನ್ನ ಮಾತುಗಳಲ್ಲಿ ವಿಚಿತ್ರ ಕಥೆಗಳನ್ನು ಬೆರೆಸುವುದನ್ನು ನಾವು ಕೇಳಿ ದಂಗಾದೆವು.
ಒಂದು ದಿನ ಅವನು ನಮ್ಮ ಸಾಹೇಬರ ಕೊಣೆ ಹೊಕ್ಕು ‘ಸರ್ ನನ್ನ ಮನಿಮ್ಯಾಗ ರಾತ್ರಿ ಯಾರೋ ಕಲ್ಲಗಳ ಎಸಿಯಕತ್ಯಾರ’ ಅಂದ.

ಕಚೇರಿಯ ಕೆಲಸಕ್ಕೂ ಅವನು ಹೇಳುವ ಸಮಸ್ಯೆಗೂ ಇರುವ ಸಂಬಂಧ ಹೊಳೆಯದೆ ನಮ್ಮ ಸಾಹೇಬರು ತಮಾಷೆಗೆ “ನಾನೇ ಕಣೋ ಕಲ್ಲು ಎಸೆಯೋದು, ಏನೀಗ?” ಅಂದು “ಲೇ ಹನುಮಂತ ನಿನ್ನ ಬುದ್ಧಿ ಸಮ ಐತಾ... ಹುಚ್ಚರ ದವಾಖಾನಿಯಾಗ ಕೆಲ್ಸ ಮಾಡಿ ಬಂದಿ... ನಿಂಗೂ ಎನಾರ ಆ ಹುಚ್ಚು ಬಡಕೊಂಡೈತೆನೋ, ನೋಡಿ ಮಾತಾಡು” ಅಂದು ಅವನನ್ನ ಕತ್ತು ಹಿಡಿದು ಹೊರ ತಳ್ಳುವವರಂತೆ ‘ಗೆಟ್ ಔಟ್’ ಅಂದರು.

ಹೊರಗೆ ಬಂದ ಹನುಮಂತ ‘ಏನೋ ನಮ್ಮ ಕಷ್ಟ ಸುಖ ಹೇಳಕೊಳ್ಳಣಾ ಅಂತ ಹೋದರ, ನನ್ನ ಹುಚ್ಚ ಅಂತಾನ  ಸಾಹೇಬ. ಹುಚ್ಚರ ಕತಿ ಇವರಿಗೇನೂ ಗೊತ್ತೈತಿ. ತೋರಿಸ್ತಿನಿ, ಎಂತೆಂತ ಹುಚ್ಚರನ ನಾ ಸಂಭಾಳಿಸಿ ಬಂದಿನಿ’ ಅಂದಕೋತ ಒಮ್ಮಗೆ ಅನ್ಯಮನಸ್ಕನಾದ. ಸುಮಾರು ಹತ್ತು ವರ್ಷಗಳ ಕಾಲ ಹುಚ್ಚಾಸ್ಪತ್ರೆಯಲ್ಲಿ ಕೆಲಸ ಮಾಡಿ ಬಂದವನು ಅವನಾಗಿದ್ದರಿಂದ ಅವನ ಮಾತು ಕೇಳಿ ನಮಗೆ ಗಾಬರಿಯೇ ಆಯಿತು.

ಒಂದು ದಿನ ಕಚೇರಿಯ ವರಾಂಡದಲ್ಲಿ ಕಸಗುಡಿಸುತ್ತಿದ್ದ ಅವ, ಕಸ ಗುಡಿಸುವ ಕೆಲಸ ಮುಗಿಸಿ ತಾನು ಈ ಹಿಂದೆ ಎಲ್ಲೆಲ್ಲಿ ಎತೆಂತಹ ಘನ ಕಾರ್ಯಗಳನ್ನು ಮಾಡಿರುವೆನೆಂದು ತನ್ನ ಗತ ಕಾಲದ, ನಂಬಲೂ ಅಸಾಧ್ಯವಾದ ಕೆಲ ಘಟನೆಗಳನ್ನು ನಮ್ಮೆದುರು ಬಿಚ್ಚಿದ. ಅವುಳಲ್ಲಿ ಒಂದು ಮನುಷ್ಯ ಮಾತ್ರರು ಎಂದೂ ಕಂಡರಿಯದ ಕೇಳರಿಯದ ಕಥೆಯಾಗಿತ್ತು. ಅವ ತನ್ನ ಮೊದಲ ನೌಕರಿಯನ್ನು ಕಲಘಟಗಿ ತಾಲೂಕಿನ ಒಂದು ಪ್ರಾಥಮಿಕ ಕೇಂದ್ರದಲ್ಲಿ ಶುರುಮಾಡಿದನಂತೆ. ಅಲ್ಲಿ ಇವನೇ ಪೋಸ್ಟ್‌ ಮಾರ್ಟಮ್ ಮಾಡುತ್ತಿದ್ದನಂತೆ.

ಒಂದು ಸಾರಿ ಒಬ್ಬಾಕೆ ಗರ್ಭಿಣಿ ಹೆಂಗಸು ಅತ್ತೆ, ಮಾವ, ಗಂಡನ ಕಾಟ ತಾಳಲಾರದೆ ಊರಾಚೆಯ  ಹೊಲವೊಂದರ ಹುಣಸೆ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಆಗಿನ ಕಾಲದಲ್ಲಿ ಪೋಸ್ಟ್‌ ಮಾರ್ಟಮ್ ಅನ್ನು ಆತ್ಮಹತ್ಯೆಯ ಜಾಗದಲ್ಲಿಯೇ ನಡೆಸುತ್ತಿದ್ದರಂತೆ. ಆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಇವನನ್ನು ಕರಕೊಂಡು ಪೋಸ್ಟ್‌ ಮಾರ್ಟಮ್ ಮಾಡಲು ಹೋದರಂತೆ. ಇವ ಮೊದಲು ಉಬ್ಬಿದ ಹೊಟ್ಟೆಯನ್ನು ಚಾಕುವಿನಿಂದ ಮೆಲ್ಲನೆ ಸೀಳಿದನಂತೆ... ಆಹಾ..ಏನಾಶ್ಚರ್ಯ... ಹೊಟ್ಟೆಯೊಳಗೆ ಕೂಸು ಇನ್ನೂ ಮಿಸುಗಾಡುತ್ತಿತ್ತಂತೆ.

ಇವನು ಬೆಚ್ಚಿ ಬೆರಗಾಗಿ ಬಳಿಕ ಹಂಗೆ ಸುಧಾರಿಸಿಕೊಂಡು ಗರ್ಭಚೀಲವನ್ನು ಅಗಲ ಮಾಡಿ ‘ಸಿದ್ಧಾರೂಢ... ನಿನ್ನ ಮಹಿಮೆ ಎಂತದಪ್ಪಾ’ ಅಂದ್ಕೋತ ಕೂಸನ್ನು ಹೊರತೆಗೆದನಂತೆ. ಆ ಕೂಸನ್ನು ನೋಡಿ ಸತ್ತವಳ ಸಂಬಂಧಿಕರು ಹೆದರಿ ದಿಕ್ಕಾಪಾಲಾಗಿ ಓಡಿ ಹೋದರಂತೆ. ಉಳಿದ ಒಂದಿಬ್ಬರು. “ಸತ್ತವಳ ಹೊಟ್ಟೆಯಲ್ಲಿ ಹುಟ್ಟಿದ ಕೂಸು ಅನಿಷ್ಟ್ರೀ ಅದನ್ನು ನಾವು ಒಲ್ಲೆವು”. ಅಂದರಂತೆ. ಈಗಲೂ ಆ ಕೂಸು ಅದ... ದೊಡ್ಡದಾಗಿ ಸ್ಕೂಲಿಗೆ ಹೊಂಟಾದ” ಅಂದ ಹನುಮಂತ.

ಈ ವಿಚಿತ್ರ ಕಥೆ ಕೇಳಿ ನಾವೆಲ್ಲ ಒಮ್ಮೆಗೆ ‘‘ಏನ ಹನುಮಂತ ಕಾಗವ್ವನ–ಗುಬ್ಬವ್ವನ ಕಥೆ ಹೇಳಕತ್ತಿಯಲ್ಲಾ... ಎಲ್ಲೈತೋ ಆ ಕೂಸು” ಅಂದೆವು. “ನನ್ನ ಮನಿಯಾಗ ಐತಿ... ನಾನೇ ಸಾಕಕತ್ತಿನಿ. ಬೇಕಾದರ ನಾಳೆ ಕಚೇರಿಗೆ ಕರ್ಕಂಡು ಬರ್ಲಾ ತೋರಿಸಾಕ” ಅಂದ.

ಈ ಅಸಂಗತ ಕಲ್ಪನಾತೀತ  ತಿಕ್ಕಲ ಕತೆಯನ್ನೇ ಕೇಳಿ ಸುಸ್ತು ಹೊಡೆದಿದ್ದ ನಾವು ಆ ಹುಡುಗನನ್ನು ಸಾಕ್ಷಾತ್ ನೋಡುವ ಹಟ ಮಾಡದೆ ಸುಮ್ಮನಾದೆವು. ಸುಮ್ಮನಾದ ನಮ್ಮ ಮನೋಸ್ಥಿತಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡ  ಹನುಮಂತ ತನ್ನ ಇಂಥ ಕತೆಗಳನ್ನು ಇವರು ನಂಬುತ್ತಾರೆಂದು ಭಾವಿಸಿ ಪ್ರತಿದಿನ ಒಂದೊಂದು ಅಘಟಿತ ಘಟನೆಗಳನ್ನು ನಮ್ಮ ಮುಂದೆ ಅರುಹ ತೊಡಗಿದ. ಅವ ತನ್ನ ಮನೆಯಲ್ಲಿ ಗುಬ್ಬಿಗಳನ್ನು ಸಾಕಿದ್ದಾನಂತೆ... ಅವು ಮಾತಾಡುತ್ತವಂತೆ... ಅವನ ಮನೆಯಲ್ಲಿರುವ ನಾಯಿಯ ಮೊಲೆ ಹಾಲನ್ನು ಬೆಕ್ಕಿನ ಮರಿಗಳು ಕುಡಿಯುತ್ತವಂತೆ.

ನಟ್ಟ ನಡು ರಾತ್ರಿ ಅವನ ಮನೆಯ ಮೇಲಿನ ಬೆಂಗಟಿಯ ಮ್ಯಾಲ ಎರಡು ದೆವ್ವಗಳು ಕುಂತು ತಮ್ಮ  ಹಿಂದಿನ ಬದುಕಿನ ಕಷ್ಟ-ಸುಖ ಹಂಚಿಕೊಳ್ಳುತ್ತವಂತೆ. ಅದರಲ್ಲಿ ಒಂದು ಹೆಣ್ಣು ದೆವ್ವವಂತೆ, ಇನ್ನೊಂದು ಗಂಡು ದೆವ್ವಂತೆ. ಎಷ್ಟೋ ಸಾರಿ ಇವನೇ ಅವುಗಳ ಕೂಡ ಮಾತಾಡಿದ್ದಾನಂತೆ. ಇವನ ದೆವ್ವದ ಕಥೆ, ಅದರ ವರ್ಣನೆ ಕೇಳಿಯೇ ಹಲವರು  ಬೆಚ್ಚಿದರು. ಕೆಲವರು ಇದೊಂದು ಕಟ್ಟು ಕಥೆ, ಬುಗಲ ಇವ ಅಂದರು. ಅದಕ್ಕೆ ಅವ ‘ಬೇಕಾದರೆ ಅಮವಾಸೆ ದಿನ ನನ್ನ ಮನಿಗೆ ಬನ್ನಿ’ ತೋರಿಸ್ತಿನಿ ಅಂದು ಜೋಬಿನಿಂದ ಒಂದು ವಿಚಿತ್ರವಾದ ಕಪ್ಪನೆಯ ಪಾಕೀಟನ್ನು ತೆಗೆದು, ಅದರಲ್ಲಿ ನಾವು ಎಂದೂ ಕಾಣದ ಕೆಲ ಸಾಮಗ್ರಿಗಳನ್ನು ಹೊರತೆಗೆದು ಪ್ರದರ್ಶನಕ್ಕಿಟ್ಟ. ಅವುಗಳನ್ನು ಅವನಿಗೆ ಯಾರೋ ಶಕುನ ಹೇಳುವವರು ಕೊಟ್ಟಿದ್ದಾರಂತೆ. ಅದರ ಜೊತೆ ಒಂದು ಮಂತ್ರವನ್ನು ಹೇಳಿಕೊಟ್ಟಿದ್ದಾರಂತೆ. ಇವನಿಗೆ ಆ ಮಂತ್ರ ಇನ್ನೂ ಸಿದ್ಧಿಸಿಲ್ಲವಂತೆ.

ಇಂಥವೇ ಅಲೌಕಿಕ, ನಂಬಲಸದಳ ಕಥೆಗಳನ್ನು ದಿನ ಬಿಟ್ಟು ದಿನ ನೇಯತೊಡಗಿದ. ಇನ್ನು ಅವನು ದಿನಾ ತರುವ ಊಟದ ತರಾವರಿ ಭಕ್ಷ್ಯಗಳನ್ನೇ ನೋಡಿ ಎಲ್ಲರೂ ದಿಕ್ಕೆಟ್ಟರು. ಅವುಗಳ ಬಣ್ಣ ಏನು? ಅವುಗಳ ಪರಿಮಳವೇನು? ತಾನೊಬ್ಬ ಅಪ್ರತಿಮ ಬಾಣಸಿಗ ಎಂಬುದು ಅವನ ಅಚಲ ನಂಬುಗೆ. ಈ ಲೋಕದಲ್ಲಿ ಯಾರು ಎಂದೂ ಮಾಡದ ನಳಪಾಕಗಳನ್ನು, ಅವುಗಳನ್ನು ಮಾಡುವ ವಿಧಾನಗಳನ್ನು ನಮ್ಮ ಮುಂದೆ ಬಣ್ಣಿಸತೊಡಗಿದ. ನವ ರಸಗಳು ಅವನ ಕೈಚಳಕಕ್ಕೆ ಸಿಕ್ಕು ಪಡಬಾರದ ಕಷ್ಟ ಪಟ್ಟಂತೆ ನಮಗೆ ಅನಿಸಿತು. ಇದನ್ನು ಕೇಳಿಯೆ ನಮ್ಮಲ್ಲಿ ಹಲವರು ತಮ್ಮ ನಾಲಗೆಯ ಸ್ವಾದ ಸಂವೇದನೆಗಳನ್ನು ಕಳಕೊಂಡರು.

ಒಂದು ದಿನ ಅವ ನಮ್ಮೆಲ್ಲರನ್ನೂ ಕರೆದು ಹಾಗಲಕಾಯಿ ಪಾಯಸ ತಂದಿದ್ದೇನೆ... ಇದು ಬಿ.ಪಿ.ಇರುವವರಿಗೂ ಮತ್ತು ಸಕ್ಕರೆ ರೋಗ ಇರುವವರಿಗೂ ತುಂಬಾ ಒಳ್ಳೆಯ ಊಟವೆಂದು- ಈ ರೋಗಗಳು ಇಲ್ಲದವರು ಈ ಪಾಯಸ ಕುಡಿದರೆ ಆ ರೋಗಗಳು ಬರುವುದಿಲ್ಲ... ಬನ್ನಿ ಬನ್ನಿ ರುಚಿ ನೋಡಿ ಎಂದು ಎಲ್ಲರನ್ನು ಪರಿಪರಿಯಾಗಿ ವಿನಂತಿಸಿಕೊಂಡ. ಎಲ್ಲರೂ ಅದರ ಹೆಸರ ಕೇಳಿಯೇ ಗೋಣು ಅಲ್ಲಾಡಿಸಿ ದೂರ ಓಡಿದರು. ಆದರೆ ಅವನ ವಿನಂತಿಯ ಕರೆಗೆ ಕೊರಳು ಕೊಟ್ಟ ನಮ್ಮ ಇಬ್ಬರು ನೌಕರ ಮಿತ್ರರು ಒಂದು ವಾರ ಭೇದಿ ಹತ್ತಿಸಿಕೊಂಡು ಆಫೀಸ್ ಕಡೆ ಹಾಯಲಿಲ್ಲ.

ಇದಕ್ಕೆ ಅವನು ಕೊಟ್ಟ ಸಮಜಾಯಿಷಿ ಅಂದರೆ– “ನೋಡ್ರಿ ನಾ ಹೇಳಿಲ್ಲ... ಅವರಿಗೆ ಖರೇನಾ ಆ ರೋಗ ಅದಾವ. ಉಂಡ ಮ್ಯಾಲ ಭೇದಿ ಹತ್ತಿದಂದರ ಪಾಯಸ ಚಲೋ ಕೆಲಸ ಮಾಡ್ಯಾದಂತ ತಿಳಕೋ ಬೇಕು, ಇನ್ನ ಚಿಂತಿಲ್ಲ, ಅವರು ಗುಣಾಕ್ಕರ” ಅಂದ. ಈ ಪ್ರಸಂಗ ಘಟಿಸಿದ ಮೇಲೆ ಮಧ್ಯಾಹ್ನದ ಊಟವನ್ನೇ ಹಲವರು ಬಂದ್ ಮಾಡಿದರು.

ಹನುಮಂತನ ಈ ಉಪಟಳಗಳು ತಮ್ಮ ಕೋಣೆಯನ್ನು ಪ್ರವೇಶಿಸದಂತೆ ಸಾಹೇಬರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಯಾವುದೇ ನೌಕರ ‘ಹನುಮಂತ ಹಂಗಂದ, ಹಿಂಗಂದ’ ಎಂದು ತಮ್ಮ ಮುಂದೆ ಯಾವುದೇ ಕಾರಣಕ್ಕೂ ಬಾಯಿ ತೆಗೆಯಬಾರದು ಎಂದು ಕಟ್ಟಪ್ಪಣೆ ಹೊರಡಿಸಿದರು. ಏನೇ ಕೆಲಸ ಇದ್ದರೂ ಹನುಮಂತನನ್ನು ಒಳಗೆ ಕಳಿಸದೆ ಉಳಿದವರು ಮಾತ್ರ ತಮ್ಮ ಕೋಣೆ ಪ್ರವೇಶಿಸಬೇಕೆಂದು ಫರ್ಮಾನು ಹೊರಡಿಸಿದರು.

ಹಾಗೆ ಅವರು ಅವನಿಗೆ ಬಹಿಷ್ಕಾರ ಹಾಕಿದ್ದರೂ ಮನಸ್ಸು ಮಾತ್ರ ಅವನನ್ನೇ ಕುರಿತು ಸದಾ ಧೇನಿಸುತ್ತಿತ್ತು... ಕೋಣೆ ಪ್ರವೇಶಿಸುವಾಗ, ಕೋಣೆಯಿಂದ ಹೊರ ಬರುವಾಗ ಅವರಿಗೆ ಗೊತ್ತಿಲ್ಲದೆ ಅವರ ಕಣ್ಣು ಮತ್ತು ಕಿವಿಗಳು ಹನುಮಂತನನ್ನು ಹುಡುಕುತ್ತಿದ್ದವು. ಹನುಮಂತನ ಹುಚ್ಚು ಕಥೆಗಳ ರುಚಿ ಇಡೀ ಕಚೇರಿಗೆ ಹಬ್ಬಿದಂತೆ, ಪ್ರತಿಯೊಂದು ಸಂಗತಿಯೂ ಏನೋ ವೈಚಿತ್ರ್ಯಕ್ಕೆ ಸಿಕ್ಕು ತುಯ್ದಾಡುತ್ತಿರುವಂತೆ ಭಾಸವಾಗತೊಡಗಿತು. ಸಾಹೇಬರು ತಮ್ಮ ಎದುರಿನ ಫೈಲುಗಳನ್ನ ಓದುತ್ತಿದ್ದರೆ ಯಾವುದೋ ಕೇಳರಿಯದ ಕಂಡರಿಯದ ಕತೆ ಓದುತ್ತಿರುವಂತೆ ಅನ್ನಿಸಿ ಅವರೂ ಅಸ್ವಸ್ಥತೆಗೆ ಸಿಕ್ಕು ಬಿದ್ದರು.

ಅವೊತ್ತು ಸೋಮವಾರ. ಹನುಮಂತ ಯಾಕೋ ಕೆಲಸಕ್ಕೆ ಬರಲಿಲ್ಲ. ಅವನ ವಿಚಿತ್ರ ಕತೆಗಳನ್ನು ಕೇಳಿ ಕೇಳಿ ರೂಢಿಗೊಂಡ ಮನಸ್ಸುಗಳಿಗೆ ಒಂದು ರೀತಿಯಲ್ಲಿ ಮಂಕು ಕವಿದಂತಾಗಿ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತ ಏನು ಮಾಡುವುದೆಂದು ತೋಚದೆ ಕಾಲಯಾಪನೆಗೆ ಕೆಲವರು ಹನುಮಂತ ಹೇಳುತ್ತಿದ್ದ ಕಥೆಗಳ ರೀತಿಯಲ್ಲಿ ತಾವು ಕಥೆಗಳ ಹೆಣೆದು ಇನ್ನೊಬ್ಬರನ್ನು ಬೆಚ್ಚಿ ಬೀಳಿಸಲಿಕ್ಕೆ ನೋಡುತ್ತಿದ್ದರು. ಅಷ್ಪೊತ್ತಿಗೆ ಸಾಹೇಬರಿಗೆ ಪೋನೊಂದು ಬಂತು. ಅದು ಹನುಮಂತನದೆಂದು ಅವರಿಗೆ ಮೊದಲೇ ಗೊತ್ತಾಗಿದ್ದರೆ ಅವರು ಅದನ್ನು ರಿಸೀವ್ ಮಾಡುತ್ತಿರಲ್ಲವೇನೋ... ಸಹಜವಾಗಿ ಪೋನ್ ಎತ್ತಿದ ಸಾಹೇಬರು ಗತ್ತಿನಿಂದ ‘ಹಲೋ’ ಅಂದರು.

ಆ ಕಡೆಯಿಂದ ಹನುಮಂತ ‘ನಮಸ್ಕಾರ ಸರ್... ನಾನು ಪ್ಯೂನ್ ಹನುಮಂತ’ ಅಂದ. ಅದಕ್ಕೆ ಸಾಹೇಬರು ತಮಾಷೆಯಿಂದ “ಓಹೋ... ಪ್ಯೂನ್ ಹನುಮಂತನೋ... ನಾನೆಲ್ಲೋ ಪ್ರಧಾನಿಯವರು ಅಂದುಕೊಂಡಿದ್ದೆ. ಏನು ಕತಿ” ಅಂದರು.
“ಸರ.. ಇವೊತ್ತಿಂದಿನ ಸೂಟಿ ಬೇಕಾಗಿತ್ತು” ಅಂದ ಹನುಮಂತ.

“ಯಾಕಪ್ಪ ಸೂಟಿ. ಏನು ಯಲ್ಲಮ್ಮನ ಗುಡ್ಡಕ್ಕೆ ಹೊಂಟಿಯಾ” ಅಂದರು ಸಾಹೇಬರು ಅದೇ ತಮಾಷೆಯಿಂದ. ಅವರ ತಮಾಷೆ ಮಂಜಿನ ಹಾಗೆ ಕರಗಿ ಹೋಗುವ ಹಾಗೆ ಹನುಮಂತ ಆ ಕಡೆಯಿಂದ– “ಸರ್ ನಾನು ಮುಟ್ಟಾಗಿನಿ... ಸೂತಕ” ಅಂದ.

ಸಾಹೇಬರಿಗೆ ತಲಿ ಗಿರ್ ಅಂತು. “ಏನಲೇ ಏನು ಮಾತಾಡಕತ್ತಿ. ಯಾರ ಕೂಡ ಮಾತಾಡಕತ್ತಿ. ಗಂಡಸರು ಯಾವನರ ಮುಟ್ಟಾಕನೇನಲೇ. ಇಡಿಯಟ್, ಇಡೋ ಪೋನು” ಅಂದರು. ಹನುಮಂತನೇನು ಪೋನು ಕೆಳಗಿಡಲಿಲ್ಲ. ಅದರ ಬದಲಾಗಿ ತಾನು ಹೇಳುತ್ತಿರುವುದನ್ನು ಮತ್ತಷ್ಟು ಸ್ಪಷ್ಟ ಪಡಿಸಲು ಅವ “ಸರ್, ಕಲಿಗಾಲದಾಗ ಗಂಡಸರೂ ಮುಟ್ಟಾಕರಂತ, ಗಂಡಸರು–ಗಂಡಸರು ಮದುವೆಯಾಕ್ಕರಂತಾ ಕಾಲಜ್ಞಾನದಾಗ ಬರದದ ಸರ್. ನಂಗೂ ಶುರುವಾಗ್ಯದ. ಬೇಕಾದರ ನಾಳಿ ಕಚೇರಿಗೆ ಬಂದಾಗ ತಾವು ಪರೀಕ್ಷಾ ಮಾಡವಂತ್ರಿ” ಅಂದು ಪೋನಿಟ್ಟ. ಸಾಹೇಬರು ಗರ ಬಡಿದಂತೆ ಸುಮ್ಮನೆ ಕೂತುಬಿಟ್ಟರು.

ಹನುಮಂತನ ವಿಚಿತ್ರ ಕಥೆಗಳು ಗಾಳಿಯಂತೆ ಕಚೇರಿಯಿಂದ ಕಚೇರಿಗೆ ಹರಿದವು. ಕಚೇರಿಯಲ್ಲಿ ಕೇಳಿದ ಕಥೆಗಳನ್ನು ಕಚೇರಿಯ ಜನ ಮನೆಗಳಲ್ಲಿ  ಹರಡಿದರು. ಪ್ರತಿ ಮನೆಯವರು ತಮ್ಮ ತಮ್ಮ ಸಂಬಂಧಿಕರಿಗೆ ದೂರವಾಣಿ ಮಾಡಿ ‘ಕೇಳಿದಿರಾ ಇದನ್ನ’ ಅಂದು ಇದಕ್ಕೆ ಅದನ್ನು ಸೇರಿಸಿ ಮತ್ತೇನನ್ನೋ ಸೃಷ್ಟಿಸಿದರು. ದೊಡ್ಡ ಮಂದಿ ಮೇಲ್ ಮಾಡಿದರು. ಮೇಲ್ ಇಲ್ಲದವರು ಪೋಸ್ಟ್‌  ಮಾಡಿದರು.

‘ಯಾರಪ್ಪ ಈ ಹನುಮಂತ... ಹೀಗೂ ಉಂಟೇ’ ಅಂತ ಜನ ಅವನನ್ನು ಹುಡುಕಿಕೊಂಡು ಬರತೊಡಗಿದರು. ದೂರದಿಂದಲೇ ಅವನೆಡೆಗೆ ಬೆರಳು ಮಾಡಿ ‘ಅವನೇ ಕಣೋ ಹನುಮಂತ’ ಅಂದರೆ, ‘ಅವನೇ ಕಣೋ ಗುಬ್ಬಿಗಳಿಗೆ ಮಾತು ಕಲಿಸಿದವನು.. ಅವನೇ ಕಣೋ ದೆವ್ವಗಳ ಜೊತೆ ಮಾತಾಡನೂ.. ಅವನೇ ಕಣೋ ಹೆಂಗಸರಂಗೆ ಮುಟ್ಟಾಗುವನು” ಅಂತ  ಅವನ ವಿಚಿತ್ರ ಕಥೆಗಳಿಗೆ ತಮ್ಮ ಮನದಲ್ಲಿ ಅಡಗಿದ್ದ ವಿಕ್ಷಿಪ್ತ, ಅಯೋಮಯ ಕಥೆಗಳನ್ನು ಸೇರಿಸಿ ಎಲ್ಲರ ಬಾಯಲ್ಲೂ ಕಥೆಗಳನ್ನು ಕುಣಿದಾಡಿಸಿದರು.

ಯಾಂತ್ರಿಕ ದಿನಗಳನ್ನು ಕೊಲ್ಲಲು ಜನ ಇಂತಹ ಕಥೆಗಳಿಗೆ ಕಿವಿ ತೆರೆದು ಕೂತರು. ಈ ವಿಚಿತ್ರ ಕಥೆಗಳ ಭರಾಟೆಯಲ್ಲಿ ಮನುಷ್ಯರು ಪ್ರಾಣಿಗಳಾದರು, ಪೊಲೀಸರು ಕಳ್ಳರಾದರು, ರಾಜಕಾರಣಿಗಳು ದರೋಡೆಕೋರರಾದರು. ಕರುಳ ಸಂಬಂಧಗಳು ಉಲ್ಟಾ ಪಲ್ಟಾ ಆದವು. .ಅಣ್ಣನಿಗೆ ತಂಗಿಯೆಂದರೇನೂ, ಅಪ್ಪನಿಗೆ ಮಗಳೆಂದರೇನೂ, ಗೆಳೆಯನಿಗೆ ಗೆಳತಿಯೆಂದರೇನೂ, ಗುರುವಿಗೆ ಶಿಷ್ಯರೆಂದರೇನೂ ಎಂಬುದು ಮರೆತೇ ಹೋಯಿತು. ಮಂದಿ ತಾವು ಓದುವ ಪತ್ರಿಕೆಗಳನ್ನು, ಕೇಳುವ ಆಕಾಶವಾಣಿ ಸುದ್ದಿಗಳನ್ನು, ದೂರದರ್ಶನಗಳಲ್ಲಿ ನೋಡುವ ಕಾರ್ಯಕ್ರಮಗಳನ್ನು ಕಪೋಲ ಕಲ್ಪಿತ ಕಥೆಗಳೆಂಬಂತೆ ಭಾವಿಸತೊಡಗಿದರು. ಯಾರು ಏನೇ ಹೇಳಿದರು ‘ಅದೇನ ಕತೆ ಬಿಡ್ರಿ ನಮ್ಮ ಹನುಮಂತನ ಕತೆ ಮುಂದೆ’ ಅನ್ನತೊಡಗಿದರು.

ಹಗಲು ಬೆಳಕು ಕೊಡುವನು ಚಂದ್ರ ಅಂದರು. ರಾತ್ರಿ ಮುಗಿಲಲ್ಲಿ ತೇಲುವನು ಸೂರ್ಯ ಅಂದರು. ನಮ್ಮನ್ನ ನಮ್ಮಪ್ಪ ಹಡೆದು ಹಾಲು ಕುಡಿಸಿ ಬೆಳಸ್ಯಾನ ಅಂದರು. ಈಗ ಪ್ರತಿ ಊರು, ನಗರಗಳಲ್ಲಿ ಹನುಮಂತನ ಖಾಸ ಶಿಷ್ಯರೇ ಹುಟ್ಟಿಕೊಂಡು ವಿಚಿತ್ರ ಕತೆಗಳನ್ನು ಹೆಣೆಯುತ್ತಿದ್ದಾರೆ. ಬೇಕಾದರೆ ಕಿವಿಗೊಟ್ಟು ಕೇಳಿ, ಪಕ್ಕದವರನ್ನು ಮಾತಾಡಿಸಿನೋಡಿ... ಎಂತೆಂತಹ ಕತೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT