ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ : ಹವಿಗನ್ನಡದ ಹೊಸ ಬೆಳೆ

Last Updated 15 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹವ್ಯಕ ಬ್ರಾಹ್ಮಣರು ಮಾತನಾಡುವ ಭಾಷೆ ಹವಿಗನ್ನಡ ಅಥವಾ ಹವ್ಯಕ ಭಾಷೆ. ಹಳೆಗನ್ನಡವನ್ನು ಹೋಲುವ ಈ ಭಾಷೆ ಆಧುನಿಕ ಕನ್ನಡಕ್ಕಿಂತ ಭಿನ್ನ.

ಪ್ರದೇಶದಿಂದ ಪ್ರದೇಶಕ್ಕೆ ಶೈಲಿ ಬದಲಾಗುವುದು ಈ ಭಾಷೆಯ ವಿಶೇಷ. ಹವಿಗನ್ನಡ ತನ್ನದೇ ಆದ ಪುಟ್ಟ ಸಾರಸ್ವತಲೋಕವನ್ನು ಹೊಂದಿದೆಯಾದರೂ, ಈ ಭಾಷೆ  ನಿರ್ದಿಷ್ಟ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ. ಹವ್ಯಕ-ಇಂಗ್ಲಿಷ್ ನಿಘಂಟು, ಬೆರಳೆಣಿಕೆಯಷ್ಟು ಕಥಾಸಂಕಲನ, ನಾಟಕ, ಹವ್ಯಕಗಾದೆಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿರುವುದು ಬಿಟ್ಟರೆ ಈ ಭಾಷೆಯಲ್ಲಿ ಲಭ್ಯವಿರುವ ಕೃತಿಗಳು ಕಡಿಮೆ.

ಮಂಗಳೂರಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಪ್ರಕಟಿಸಿರುವ `ಒಪ್ಪಣ್ಣನ ಒಪ್ಪಂಗೊ-ಒಂದೆಲಗ~ ಹಾಗೂ `ಬೋಧಾಯನೀಯ ಹದಿನಾರು ಸಂಸ್ಕಾರಂಗೊ- ಯಾವದು? ಹೇಂಗೆ? ಎಂತಕೆ?~ ಪುಸ್ತಕಗಳು ಹವ್ಯಕ ಭಾಷೆಯಲ್ಲಿ ಹೊಸ ಪ್ರಯೋಗಗಳಾಗಿ ಮೂಡಿ ಬಂದಿವೆ. ಈ ಪುಸ್ತಕಗಳು ಹವ್ಯಕ ಭಾಷೆಯ ಕುರಿತು ಅಧ್ಯಯನ ನಡೆಸುವವರಿಗೆ ಉತ್ತಮ ಆಕರಗಳಾಗಿವೆ.

ನಾಲ್ಕು ವರ್ಷಗಳಿಂದ ಅಂತರಜಾಲದಲ್ಲಿ oppanna.com  ಎಂಬ ಹವ್ಯಕ ಭಾಷೆಯ ಪ್ರಪ್ರಥಮ ವೆಬ್‌ಸೈಟ್ ಕಾರ್ಯ ನಿರ್ವಹಿಸುತ್ತಿದೆ. ಈ ತಾಣದಲ್ಲಿ ಪ್ರಕಟಗೊಂಡಿರುವ ಆಯ್ದ ಲೇಖನಗಳನ್ನು ಸಂಕಲಿಸಿ ಈ ಎರಡು ಪುಸ್ತಕಗಳನ್ನು ಪ್ರತಿಷ್ಠಾನ ಹೊರತಂದಿದೆ.
ಹವ್ಯಕ ಭಾಷೆಯಲ್ಲಿ ಒಪ್ಪಣ್ಣ ಎಂಬ ಪದ ಒಬ್ಬ ಮನುಷ್ಯನ ಒಳ್ಳೆಯತನವನ್ನು ಸೂಚಿಸುತ್ತದೆ.

`ಒಪ್ಪ~ ಎಂಬ ಪದಕ್ಕೆ`ಮುತ್ತು~ ಎಂಬ ಅರ್ಥವೂ ಹವ್ಯಕ ಭಾಷೆಯಲ್ಲಿದೆ. ಮಹೇಶ್ ಎಳ್ಯಡ್ಕ ಅವರ 20 ಲೇಖನಗಳು ಈ ಪುಸ್ತಕದಲ್ಲಿ ಒಟ್ಟಾಗಿವೆ. ಆಧುನಿಕ ಸಂದರ್ಭದಲ್ಲಿ ಮರೆಯಾಗುತ್ತಿರುವ ಹವ್ಯಕ ಸಂಸ್ಕೃತಿ, ಜೀವನ ಶೈಲಿಯನ್ನು ಉಳಿಸಿ ಬೆಳೆಸುವ ಜರೂರಿನ ಕುರಿತು ಈ ಬರಹಗಳು ಚರ್ಚಿಸುತ್ತವೆ.

ಎರಡು ತಲೆಮಾರು ಹಿಂದಿನ ದಕ್ಷಿಣ ಕನ್ನಡ / ಕಾಸರಗೋಡು ಭಾಗದ ಹವ್ಯಕ ಸಮಾಜದ ಜೀವನ ಶೈಲಿ, ಸಂಪ್ರದಾಯ, ಜೀವನದ ಪದ್ಧತಿಯನ್ನು ಈಗಿನ ಕಾಲದೊಂದಿಗೆ ಹೋಲಿಸಿರುವುದನ್ನು ಲೇಖನಗಳಲ್ಲಿ ಕಾಣಬಹುದು. ಪುಸ್ತಕದಲ್ಲಿ ಉಲ್ಲೇಖವಾಗುವ ಕೆಲವು ಹೆಸರುಗಳು (ಶಂಬಜ್ಜ, ಕಾಂಬು ಅಜ್ಜಿ, ರಂಗಮಾವ, ಪಾತಿ ಅತ್ತೆ, ರೂಪತ್ತೆ ಇತ್ಯಾದಿ) ಹಿಂದಿನ ಮತ್ತು ಈಗಿನ ಹವ್ಯಕ ಸಮಾಜವನ್ನು ಪ್ರತಿನಿಧಿಸುತ್ತವೆ.
 
ಮಾನವ ಸಂಬಂಧಗಳಲ್ಲಿ ಆಗಿರುವ ಬದಲಾವಣೆಗಳನ್ನು ಓದುಗನಿಗೆ ನಗುಬರಿಸುವಂತೆ ಹೇಳುವ ಲೇಖಕರಿಗೆ, ಆಧುನಿಕತೆಗೆ ತೆರೆದುಕೊಂಡಿರುವ ಹವ್ಯಕ ಸಮಾಜದ ಬಗ್ಗೆ ಬೇಸರ ಇದೆ.

ಎಲ್ಲಾ ಬರಹಗಳು ಕಾಸರಗೋಡು ಸಮೀಪದ ಕುಂಬ್ಳೆ ಸೀಮೆಯ ಹವ್ಯಕರು ಮಾತನಾಡುವ ಭಾಷೆಯಲ್ಲಿದೆ. ಇಂದಿನ ಹವ್ಯಕ ತಲೆಮಾರಿಗೆ ತಿಳಿಯದೇ ಇರುವ ಪದ ಪ್ರಯೋಗಗಳು ಪುಸ್ತಕದ ತುಂಬಾ ಇವೆ. ಪ್ರತಿ ಲೇಖನದ ಕೊನೆಗೆ `ಒಂದೊಪ್ಪ~ ಶೀರ್ಷಿಕೆಯ ಅಡಿಯಲ್ಲಿ ಬರೆದಿರುವ ವಾಕ್ಯ, ಲೇಖನದ ಒಟ್ಟು ಆಶಯವನ್ನು ಸಂಕ್ಷಿಪ್ತವಾಗಿ ಹೇಳುತ್ತದೆ. ಜತೆಗೆ ಓದುಗನನ್ನು ಚಿಂತನೆಗೂ ಹಚ್ಚುತ್ತದೆ.

ಈಗಿನ ಹವ್ಯಕ ಸಮಾಜ ಮೊದಲಿನಂತೆ ಆಗಬೇಕು ಎಂಬ ಕಳಕಳಿ ಪುಸ್ತಕದ ಒಟ್ಟು ಹೂರಣ. ಆದರೆ ಬದಲಾಗಿರುವ ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವೇ ಎಂಬ ಪ್ರಶ್ನೆಯನ್ನು ಕೆಲವು ಲೇಖನಗಳು ಹುಟ್ಟು ಹಾಕುತ್ತವೆ.

ವ್ಯಕ್ತಿಯೊಬ್ಬ ತನ್ನ ಬದುಕಿನಲ್ಲಿ ಅನುಸರಿಸಬೇಕಾದ ಷೋಡಶ ಸಂಸ್ಕಾರಗಳನ್ನು ಕುರಿತ ವಿವರಗಳನ್ನೊಳಗೊಂಡ ಹಲವು ಪುಸ್ತಕಗಳು ನಮ್ಮಲ್ಲಿ ಲಭ್ಯವಿವೆ. ಚೆನ್ನೈ ರಾಮಕೃಷ್ಣ ಭಟ್ ಅವರು ಈ ಮಾಹಿತಿಗಳನ್ನು `ಬೋಧಾಯನೀಯ ಹದಿನಾರು ಸಂಸ್ಕಾರಂಗೊ-ಯಾವದು? ಹೇಂಗೆ? ಎಂತಕೆ?~ ಪುಸ್ತಕದಲ್ಲಿ, ಹವ್ಯಕ ಭಾಷೆಯಲ್ಲಿ ವಿವರವಾಗಿ ಬರೆದಿದ್ದಾರೆ.

ಪ್ರತಿ ಸಂಸ್ಕಾರವನ್ನು ಆರಂಭಿಸುವಾಗ ಮಾಡಬೇಕಾದ ಸಿದ್ಧತೆ, ಅನುಸರಿಸುವ ವೈದಿಕ ವಿಧಿವಿಧಾನಗಳನ್ನು ವಿಸ್ತೃತವಾಗಿ ಮಂತ್ರಗಳ ಸಮೇತ ನೀಡಲಾಗಿದೆ. ಸಂಸ್ಕಾರದ ಮೂಲ ಉದ್ದೇಶ, ಅದನ್ನು ಯಾವಾಗ, ಯಾಕೆ ಮಾಡಬೇಕು ಎಂಬ ಬಗ್ಗೆ ಸರಳ ಹಾಗೂ ಸಂಕ್ಷಿಪ್ತ ವಿವರಗಳಿವೆ. ಇಂಥ ಪುಸ್ತಕ ಹವ್ಯಕ ಸಾಹಿತ್ಯಕ್ಕೆ ಹೊಸದು.

ಒಪ್ಪಣ್ಣನ ಒಪ್ಪಂಗ- ಒಂದೆಲಗ
ಲೇ: ಮಹೇಶ ಎಳ್ಯಡ್ಕ
ಪು: 224; ಬೆ: ರೂ. 130

ಬೋಧಾಯನೀಯ ಹದಿನಾರು ಸಂಸ್ಕಾರಂಗೊ- ಯಾವದು? ಹೇಂಗೆ? ಎಂತಕೆ?
ಲೇ: ರಾಮಕೃಷ್ಣ ಭಟ್ ಚೆನ್ನೈ
ಪು: 88; ಬೆ: ರೂ 60
ಮೇಲಿನ ಎರಡು ಪುಸ್ತಕಗಳ ಪ್ರಕಾಶನ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ, `ಅನುಗ್ರಹ~, ಶಿವಗಿರಿನಗರ, ಕುಳಾಯಿ-ಹೊಸಬೆಟ್ಟು, ಮಂಗಳೂರು-575 019.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT