ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ–ವಿನಯದ ವಾಮನಮೂರ್ತಿ

Last Updated 14 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಸಾಹಿತ್ಯ ವಿಮರ್ಶೆಯಲ್ಲಿ ವಿವೇಕ ಮತ್ತು ವಿನಯವನ್ನು ಒಟ್ಟಿಗೆ ಕಾಣುವುದು ಎಲ್ಲ ಕಾಲದಲ್ಲೂ ಕಷ್ಟ. ಇಂಥ ಅಪರೂಪದ ವಿಮರ್ಶೆಯ ಮಾದರಿ ಪ್ರೊ. ಎಲ್‌.ಎಸ್‌. ಶೇಷಗಿರಿರಾವ್‌. ಸೌಜನ್ಯದ ಸಾಕಾರಮೂರ್ತಿಯಂತೆ ಕಾಣಿಸುವ ಈ ಹಿರಿಯ ಸಾಹಿತಿಗೆ
ನಾಳೆ (ಫೆ. 16) ತೊಂಬತ್ತು ತುಂಬುತ್ತಿದೆ. ಅವರನ್ನು ಅಭಿನಂದಿಸಲು ಹಾಗೂ ಅವರು ಸಾಗಿಬಂದ ದಾರಿಯನ್ನು ಅವಲೋಕಿಸಲು ತೊಂಬತ್ತರ ವಿಶೇಷಣ ಒಂದು ನೆಪ.

ಯಾವುದೇ ಸಿದ್ಧಾಂತವನ್ನು ಬೆನ್ನಿಗೆ ಕಟ್ಟಿಕೊಂಡಿದ್ದರೂ ಬರವಣಿಗೆಯು ‘ಸಾಹಿತ್ಯ’ ಎನ್ನಿಸಿಕೊಳ್ಳುವುದು ಯಾವ ಸತ್ವದಿಂದ ಎಂದು ಗುರುತಿಸಬಲ್ಲವನೇ ನಿಜವಾದ ಸಾಹಿತ್ಯ ವಿಮರ್ಶಕ ಎಂಬುದು ನನ್ನ ಅಭಿಪ್ರಾಯ. ಹಾಗೆಂದು ವಿಮರ್ಶಕನಿಗೆ ತನ್ನದೇ ಸೈದ್ಧಾಂತಿಕ ನಿಲುವು ಇರಬಾರದೆಂದು ಇದರ ಅರ್ಥವಲ್ಲ. ಆದರೆ ಸಾಹಿತ್ಯವಾಗುವುದು ಸಿದ್ಧಾಂತದ ಬೆಂಬಲದಿಂದ ಅಲ್ಲ ಎಂದಷ್ಟೇ ನಾನು ಹೇಳುತ್ತಿರುವುದು. ಸಾಹಿತ್ಯಕೃತಿಯೊಂದರ ವಿಮರ್ಶೆಗೆ ತೊಡಗಿದವನು ತನ್ನ ನಿಲುವನ್ನು ಬದಿಗಿರಿಸಿ ಬರವಣಿಗೆ ಸಾಹಿತ್ಯವಾಗಿರುವುದನ್ನು ಗುರುತಿಸಬೇಕು. ಅಂತಹ ವಿಮರ್ಶೆಯ ಕೆಲಸದಲ್ಲಿ ಕಳೆದ ಐದು ದಶಕಗಳಿಗೂ ಮಿಕ್ಕ ಅವಧಿಯಲ್ಲಿ ಕಾರ್ಯಶೀಲರಾಗಿರುವವರು ಪ್ರೊ. ಎಲ್.ಎಸ್. ಶೇಷಗಿರಿರಾವ್‌. ಇಪ್ಪತ್ತನೆಯ ಶತಮಾನದ ಎಲ್ಲ ಸಾಹಿತ್ಯ ಚಳವಳಿಗಳಿಗೂ ಸಾಕ್ಷಿಯಾಗಿದ್ದೂ ಎಲ್ಲ ಚಳವಳಿಗಳ ಸಾಹಿತ್ಯವನ್ನು ನಿಷ್ಪಕ್ಷಪಾತವಾಗಿ ಕೃತಿವಿವೇಚನೆ ಮಾಡಿದವರು ಅವರು.

ಹಾಗೆ ನೋಡಿದರೆ ಎಲ್.ಎಸ್.ಎಸ್ ಬರವಣಿಗೆಗೆ ತೊಡಗಿದ್ದು ಕತೆಗಾರರಾಗಿ, ಅದೂ ಪ್ರಗತಿಶೀಲ ಮನೋಭಾವದವರಾಗಿ. ಆಗ ಪ್ರಕಟವಾಗುತ್ತಿದ್ದ ‘ಕತೆಗಾರ’ ಮಾಸಪತ್ರಿಕೆಯಿಂದ ತೊಡಗಿ ಅನೇಕ ನಿಯತಕಾಲಿಕೆಗಳಿಗೆ ಕತೆ ಬರೆಯುತ್ತಿದ್ದವರು ಮುಂದೆ ಆ ಪತ್ರಿಕೆಯ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಕತೆಗಳನ್ನು ವಿಮರ್ಶೆ ಮಾಡಲು ಕೇಳಿಕೊಂಡಂದಿನಿಂದ, ಮುಖ್ಯವಾಗಿ ಅವರು ವಿಮರ್ಶಕರೆಂದೇ ಗುರುತಿಸಿಕೊಂಡರು. ಆದರೆ ಅವರೆಂದೂ ಒದು ಪಂಥದ ಬೆನ್ನಿಗೆ ನಿಂತು ವಿಮರ್ಶೆಯನ್ನು ಮಾಡಲಿಲ್ಲ. ಎಲ್ಲ ಸಾಹಿತ್ಯ ಚಳವಳಿಗಳ ಒಳಗನ್ನು ಅರ್ಥಮಾಡಿಕೊಂಡೂ ಅವುಗಳಿಂದ ದೂರವನ್ನು ಕಾಯ್ದುಕೊಳ್ಳುವ ಎಚ್ಚರವನ್ನು ವಹಿಸಿದ್ದರಿಂದ ಅವರ ವಿಮರ್ಶೆ ಎಲ್ಲರ ಗೌರವಕ್ಕೆ ಪಾತ್ರವಾಗುವಂತಾಯಿತು. ಯಾವುದೇ ಚಳವಳಿಯೂ ಚಾರಿತ್ರಿಕ ಜರೂರಿನಿಂದ ಬರುವಂಥದ್ದು; ಅದರ ಹಿನ್ನೆಲೆಯಲ್ಲಿ ರಚಿತವಾಗುವ ಸಾಹಿತ್ಯ ಅಭಿವ್ಯಕ್ತಿಯಲ್ಲಿ ಬದಲಾದ ಮಾರ್ಗವನ್ನು ತುಳಿಯಬಹುದೇ ಹೊರತು, ಶ್ರೇಷ್ಠ ಸಾಹಿತ್ಯವೆನ್ನುವುದು ಚಳವಳಿಯನ್ನು ಮೀರುವಂಥದ್ದು ಎಂಬುದನ್ನವರು ಬಲ್ಲರು. ಪ್ರಗತಿಶೀಲವು ‘‘ನವೋದಯ ಸಾಹಿತ್ಯದಿಂದ ತೀರ ಭಿನ್ನವಾಗಿರಲಿಲ್ಲ.
ಜರತಾರಿ ರುಮಾಲು – ರೇಷ್ಮೆಯ ಕೋಟುಗಳನ್ನು ತೆಗೆದುಹಾಕಿ ಜುಬ್ಬ, ಕ್ರಾಪುಗಳನ್ನು ಮೆರೆಯಿತೆಂಬುದು ನಿಜ’’; ನವ್ಯವು ‘‘ಸೊಫೆಸ್ಟಿಕೇಟೆಡ್ ವರ್ಗದ ಸಾಹಿತ್ಯವಾಯಿತು’’; ‘‘ದಲಿತ ಸಾಹಿತ್ಯ ಇವರನ್ನು (ಶೋಷಣೆ, ಕ್ರಾಂತಿ ಮುಂತಾದವನ್ನು ಅರ್ಥಮಾಡಿಕೊಳ್ಳಲಾರದ ಬಹುಸಂಖ್ಯಾತ ಅನಕ್ಷರಸ್ಥರನ್ನು) ಮುಟ್ಟಲಾರದು’’ ಮುಂತಾದ ಎಲ್.ಎಸ್.ಎಸ್. ಅವರ ಮಾತುಗಳನ್ನು ಗಮನಿಸಿದರೆ ಅವರ ತೂಗುವ ಕ್ರಮ ಎಂಥದೆಂಬುದು ಸ್ಪಷ್ಟವಾಗುತ್ತದೆ.

1925ನೇ ಇಸವಿ ಫೆಬ್ರುವರಿ 16ರಂದು ಸ್ವಾಮಿರಾವ್–ಕಮಲಾಬಾಯಿ ಅವರ ಒಬ್ಬನೇ ಮಗನಾಗಿ ಹುಟ್ಟಿದ ಶೇಷಗಿರಿರಾಯರು ಬಿಎಂಶ್ರೀ ಪಾಠ ಮಾಡಿದ ಕೊನೆಯ ಇಂಗ್ಲಿಷ್‌ ಆನರ್ಸ್‌ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ; ಇಂಗ್ಲಿಷ್ ಸಾಹಿತ್ಯವನ್ನು ಓದಿದರೂ ಪಾಠ ಹೇಳಿದರೂ ಬಿಎಂಶ್ರೀ ಅವರಿಂದ ಪಡೆದ ಕನ್ನಡ ದೀಕ್ಷೆಯ ಕಾರಣದಿಂದ ಬದುಕಿನುದ್ದಕ್ಕೂ ಕನ್ನಡ ಸಾಹಿತ್ಯದ ಕೆಲಸ ಮಾಡಿದವರು.  

ಆನರ್ಸ್‌ ಓದುತ್ತಿದ್ದಾಗ ‘ಕ್ವಿಟ್‌ ಇಂಡಿಯ’ ಚಳವಳಿಯಲ್ಲೂ ಭಾಗವಹಿಸಿದ ಇವರು– ಬಿಎಂಶ್ರೀ, ಎಸ್.ವಿ.ರಂಗಣ್ಣ, ಎ.ಎನ್. ಮೂರ್ತಿರಾವ್, ಎಸ್. ತ್ಯಾಗರಾಜನ್, ಕೆ. ಅನಂತರಾಮಯ್ಯ ಅವರುಗಳ ಶಿಷ್ಯರಾಗಿ ಅವರೆಲ್ಲರಿಂದ ಸ್ಫೂರ್ತಿ ಪಡೆದರು. ಬಡತನದ ಕಾರಣ ಎಂ.ಎ. ಮಾಡಲಾಗದೆ ಆನರ್ಸ್ ನಂತರ ಕಾಲೇಜಿನಲ್ಲಿ ಉಪಾಧ್ಯಾಯರಾಗಿ ಸೇರಿದ ರಾಯರು ನಾಗಪುರ ವಿಶ್ವವಿದ್ಯಾಲಯದ ಹೊರವಿದ್ಯಾರ್ಥಿಯಾಗಿ ಮೊದಲ ದರ್ಜೆಯಲ್ಲಿ ಮೊದಲಿಗರಾಗಿ ಎಂ.ಎ. ಪದವಿ ಪಡೆದರು. ಆ ಮುಂದೆ ಹೈದರಾಬಾದ್‌ನ ‘ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌ ಅಂಡ್ ಫಾರಿನ್ ಲಾಂಗ್ವೇಜಸ್’ ಸಂಸ್ಥೆಯಲ್ಲಿ ಭಾಷಾಶಾಸ್ತ್ರದಲ್ಲಿ ಹೆಚ್ಚಿನ ನೈಪುಣ್ಯ ಸಂಪಾದಿಸಿದರು. ನಾನಾ ಸರ್ಕಾರಿ ಕಾಲೇಜುಗಳಲ್ಲಿ ಹಾಗೂ 1968ರಿಂದ 1985ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಮುಂದೆ ಅಂದಿನ ಮುಖ್ಯಮಂತ್ರಿ ಗುಂಡೂರಾವ್‌ ಅವರ ಪತ್ರಿಕಾ ಕಾರ್ಯದರ್ಶಿಯಾಗಿ, ಆಮೇಲೆ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಎಲ್.ಎಸ್.ಎಸ್. ಅವರು ಇಂಗ್ಲಿಷ್ ಮತ್ತು ಆಧುನಿಕ ಕನ್ನಡ ಸಾಹಿತ್ಯಗಳ ಆಳವಾದ ಮತ್ತು ಸೂಕ್ಷ್ಮವಾದ ಓದಿನಿಂದ ಅಪಾರ ಕೃತಿರಚನೆ ಮಾಡಿದವರು; ಬಹುಪಾಲು ಕನ್ನಡದಲ್ಲಿ, ಹಲವನ್ನು ಇಂಗ್ಲಿಷಿನಲ್ಲಿ. ಸುಮಾರು ಒಂದು ನೂರರಷ್ಟಿರುವ ಅವರ ಬರಹಸಮೂಹದಲ್ಲಿ ಹಲವಾರು ಕಥಾಸಂಕಲನಗಳು ಹಾಗೂ ನಾಟಕಗಳಲ್ಲದೆ, ಅನುವಾದಿತ ಹಾಗೂ ಸಂಪಾದಿತ ಕೃತಿಗಳೂ, ದ್ವಿಭಾಷಿಕ ನಿಘಂಟುಗಳೂ ಸೇರಿವೆ. ಅವರ ‘ಹೊಸಗನ್ನಡ ಸಾಹಿತ್ಯಚರಿತ್ರೆ’ ಮೊದಲು ಸಾಮಾನ್ಯನಿಗೆ ಸಾಹಿತ್ಯಚರಿತ್ರೆ ಮಾಲೆಯಲ್ಲಿ ಪ್ರಕಟವಾಗಿ ಈವರೆಗೆ ಒಂಬತ್ತು ಮುದ್ರಣಗಳನ್ನು ಕಂಡ ಬಹು ಉಪಯುಕ್ತ ಕೃತಿ. ಹೊಸಗನ್ನಡದ ಸ್ವರೂಪವನ್ನು ಗುರುತಿಸಿ ಸುಮಾರು 1870ರಲ್ಲಿ ಹೊಸಗನ್ನಡ ಸಾಹಿತ್ಯವು ಆರಂಭಗೊಂಡಿತೆಂದು ತೀರ್ಮಾನಿಸಿ, ಆನಂತರದ ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಐದು ಘಟ್ಟಗಳಲ್ಲಿ ವಿಮರ್ಶಾತ್ಮಕವಾಗಿ ಪರಿಚಯ ಮಾಡಿಕೊಡುತ್ತಾರೆ: ನವೋದಯಪೂರ್ವ, ನವೋದಯ, ಪ್ರಗತಿಶೀಲ, ನವ್ಯ ಹಾಗೂ ದಲಿತ-ಬಂಡಾಯ.

ಈ ಹಂತಗಳಲ್ಲಿನ ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಮೂರು ನೆಲೆಗಳಲ್ಲಿ ರಾಯರು ನಿರೂಪಿಸುತ್ತಾರೆ: ಸಾಹಿತ್ಯ ಚಳವಳಿಗಳು, ಸಾಹಿತ್ಯ ಪ್ರಕಾರಗಳು ಹಾಗೂ ಪ್ರಮುಖ ಲೇಖಕರು. ಕೃತಿಯ ಸ್ವರೂಪದ ಕಾರಣದಿಂದಾದ ಮಿತಿಯಲ್ಲಿಯೂ ಪ್ರಮುಖ ಕೃತಿಗಳು ಮತ್ತು ಕೃತಿಕಾರರ ಬಗ್ಗೆ ಆಳವಾದ ವಿವೇಚನೆಯನ್ನೇ ಲೇಖಕರು ಮಾಡುತ್ತಾರೆ. ಎಷ್ಟೋ ಕಡೆಗಳಲ್ಲಿನ ಅವರ ತೀರ್ಮಾನಗಳು ತೂಕದ ಮಾತುಗಳಾಗಿವೆ. ‘‘ಕೈಲಾಸಂ ಕ್ರಾಂತಿಕಾರರಲ್ಲ. ಸಾಮಾಜಿಕ ಸಮಸ್ಯೆಗಳಿಗೆ ಅವರು ವೈಚಾರಿಕವಾಗಿ ಸಹ ಕ್ರಾಂತಿಕಾರಕ ಪರಿಹಾರಗಳನ್ನು ಹೇಳಲಿಲ್ಲ’’, ‘‘ಶ್ರೀರಂಗರು ಬರೆಯುವ ಮುನ್ನ ನಾಟಕವನ್ನು ಕುರಿತು ಕೆಲವು ತತ್ವಗಳಿದ್ದವು .... ಇವೆಲ್ಲ ಶ್ರೀರಂಗರಿಂದ ಗಾಳಿಗೆ ತೂರಿಹೋದುವು’’, ‘‘ಕಳೆದ ಮೂವತ್ತು ವರ್ಷಗಳಲ್ಲಿ ಅಲ್ಲಿನ ಪಂಥಗಳು ಪಶ್ಚಿಮ ದೇಶದಲ್ಲಿ ಸತ್ವ ಕುಗ್ಗುವ ಹೊತ್ತಿಗೆ ಇಲ್ಲಿ ಅವತರಿಸುವುದನ್ನುಕಾಣುತ್ತಿದ್ದೇವೆ’’, ‘‘ಕನ್ನಡರಂಗಭೂಮಿ ಎಂದು ನಾವು ಗುರುತಿಸಬಹುದಾದ ವೈಶಿಷ್ಟ್ಯಪೂರ್ಣ ರಂಗಭೂಮಿಯೊಂದು ಇನ್ನೂ ಸೃಷ್ಟಿಯಾಗಿಲ್ಲ’’– ಎಂಬಂತಹ ಮಾತುಗಳನ್ನು ನಿದರ್ಶನಗಳಾಗಿ ನೀಡಬಹುದು. ಈ ಕೃತಿ ಮೊದಲು ಪ್ರಕಟವಾದದ್ದು 1975ರಲ್ಲಿ. ಆ ಹೊತ್ತಿಗೆ ಇನ್ನೂ ದಲಿತ–ಬಂಡಾಯ ಉದಿಸಿರಲಿಲ್ಲ. ಹೀಗಾಗಿ ಕೆಲವು ಮುದ್ರಣಗಳಾದ ಬಳಿಕ ‘ಈ ಶತಮಾನದ ಮುಕ್ತಾಯದತ್ತ’ ಎಂಬ ಒಂದು ಹೊಸ ಅಧ್ಯಾಯವನ್ನು ಸೇರಿಸಿ ಅದನ್ನು ಅಪ್‌ಡೇಟ್ ಮಾಡಿದರು.

ಕನ್ನಡ ಸಾಹಿತ್ಯದ ಮುಖ್ಯರಾದ ಕೆಲವರ ಬಗ್ಗೆ ಎಲ್.ಎಸ್.ಎಸ್. ಬಿಡಿಕೃತಿಗಳನ್ನೂ ರಚಿಸಿದ್ದಾರೆ. ‘ಮಾಸ್ತಿ’, ‘ಟಿ.ಪಿ.ಕೈಲಾಸಂ’ ಬಗ್ಗೆ ಕೃತಿಗಳಲ್ಲದೆ ಅವರು ತರಾಸು ಕುರಿತು ಬರೆದ ಲೇಖನಗಳ ಸಂಕಲನ ‘ಎಲ್.ಎಸ್.ಎಸ್. ಕಂಡ ತ.ರಾ.ಸು.’ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಅದಲ್ಲದೆ, ‘ಕಾದಂಬರಿ– ಸಾಮಾನ್ಯ ಮನುಷ್ಯ’, ‘ಸಾಹಿತ್ಯ ವಿಶ್ಲೇಷಣೆ’, ‘ಸಾಹಿತ್ಯ ಬದುಕು’, ಪಾಶ್ಚಾತ್ಯ ಮತ್ತುಭಾರತೀಯ ಮಹಾಕಾವ್ಯ ಪರಂಪರೆಗಳ ಮನೋಧರ್ಮ’ ಮುಂತಾದ ಹಲವಾರು ವಿಮರ್ಶಾ ಕೃತಿಗಳನ್ನೂ ಕನ್ನಡದಲ್ಲಿ ರಾಯರು ರಚಿಸಿದ್ದಾರೆ.

ಎಲ್.ಎಸ್.ಎಸ್. ಹಲವಾರು ಇಂಗ್ಲಿಷ್ ಲೇಖಕರ ಬಗ್ಗೆ ತಲಸ್ಪರ್ಶಿ ಅಧ್ಯಯನಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಹನ್ನೆರಡು ಅಧ್ಯಾಯಗಳಲ್ಲಿ ಹರಿಯುವ ‘ಷೇಕ್ಸ್‌ಪಿಯರ್’ ಅನನ್ಯಕೃತಿ. ಕ್ರಮಬದ್ಧವೂ ಅಚ್ಚುಕಟ್ಟಿನದೂ ಆದ ಬಗೆಯಲ್ಲಿ ರಚಿತವಾದ ಈ ಕೃತಿಯು ಆ ಕವಿ-ನಾಟಕಕಾರನ ವೈಯಕ್ತಿಕ ಬದುಕಿನ ವಿವರಗಳು ಮತ್ತು ಐತಿಹ್ಯಗಳನ್ನೂ, ಅವನ ಸೃಜನಶೀಲತೆಯ ಕಾಲದ ಹಿನ್ನೆಲೆಯನ್ನೂ, ಅವನ ಮೇಲೆ ಪ್ರಭಾವ ಬೀರಿರಬಹುದಾದ ಸಾಹಿತ್ಯವನ್ನೂ ಪರಿಚಯಿಸಿ ಆ ಮುಂದೆ ಅವನ ಕವನಗಳ ಸಮೀಕ್ಷೆ ಮಾಡಲಾಗಿದೆ. ಷೇಕ್ಸ್‌ಪಿಯರ್ ಸಾನೆಟ್‌ಗಳಲ್ಲಿ ಬರುವ ತಾನು, ಗೆಳೆಯ ಸೌಥಾಂಪ್ಟನ್ ಮತ್ತು ಕಪ್ಪು ಚೆಲುವೆ, ಈ ಮೂರು ಪಾತ್ರಗಳ ವಿವೇಚನೆ ಇಲ್ಲಿದೆ. ‘ಇವುಗಳಲ್ಲಿ ಇಪ್ಪತ್ತು ಜಗತ್ತಿನ ಅತ್ಯಂತ ಶ್ರೇಷ್ಠ ಸಾನೆಟ್‌ಗಳಲ್ಲಿ ಸೇರುತ್ತವೆ’ ಎಂದು ಎಲ್.ಎಸ್.ಎಸ್. ತೀರ್ಮಾನಿಸುತ್ತಾರೆ. ಆ ಮುಂದೆ ಷೇಕ್ಸ್‌ಪಿಯರ್‌ನ ಚಾರಿತ್ರಿಕ ನಾಟಕಗಳು, ಕಾಮಿಡಿಗಳು, ರುದ್ರ ನಾಟಕಗಳು ಹಾಗೂ ಸುಖಾಂತ ನಾಟಕಗಳನ್ನು ಕುರಿತು ವಿವರವಾಗಿ ಚರ್ಚಿಸಿದ್ದಾರೆ. ತಮ್ಮ ನಲವತ್ತೊಂದು ವರ್ಷಗಳ ಅಧ್ಯಯನ–ಅಧ್ಯಾಪನಗಳ ಮೂಲಕ ಗಳಿಸಿದ ಜ್ಞಾನವನ್ನು ಕ್ರೋಡೀಕರಿಸಿ ಷೇಕ್ಸ್‌ಪಿಯರ್‌ನ ಬಗ್ಗೆ ಅಧಿಕಾರಯುತವಾದ ಹೊತ್ತಗೆಯನ್ನು ರಾಯರು ಪ್ರಕಟಿಸಿದ್ದಾರೆ. ಈ ಗ್ರಂಥದ ಎರಡನೆಯ ಮುದ್ರಣದಲ್ಲಿ ಮೂರು ಹೊಸ ಅಧ್ಯಾಯಗಳು ಸೇರ್ಪಡೆಗೊಂಡು ಒಟ್ಟಾರೆ ಷೇಕ್ಸ್‌ಪಿಯರ್‌ನ ನಾಟಕಗಳಲ್ಲಿನ ವಿಶಿಷ್ಟ ಅಂಶಗಳ ಬಗೆಗಿನ ಚರ್ಚೆಯನ್ನೊಳಗೊಂಡಿವೆ. ಇದೇರೀತಿ ‘ಆಲಿವರ್ ಗೊಲ್ಡ್‌ಸ್ಮಿತ್’ ಹಾಗೂ ‘ಫ್ರಾನ್ಜ್‌ ಕಾಫ್ಕ’ರ ಬಗ್ಗೆಯೂ ಅವರ ಬಿಡಿ ಕಿರುಕೃತಿಗಳು ಪ್ರಕಟವಾಗಿವೆ.

ಎಲ್.ಎಸ್.ಎಸ್. ಸಾಹಿತ್ಯತತ್ವದ ಬಗ್ಗೆಯೂ ಕೆಲವು ಮಹತ್ವದ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯಚರಿತ್ರೆ’ಯೂ ಒಂದು. ಓ.ಎಸ್‌. ಎಲಿಯಟ್‌ನ ‘ಟ್ರೆಡಿಷನ್‌ ಅಂಡ್‌ ಇಂಡಿವಿಷುವಲ್‌ ಟ್ಯಾಲೆಂಟ್’ ಪ್ರಕಟವಾದ 1917ರಿಂದ ಈಚಿನದನ್ನು ‘ಆಧುನಿಕ’ ಎಂದು ಪರಿಗಣಿಸಿದ್ದರೂ, ಪುಸ್ತಕವು ಅಲ್ಲಿಂದಲೇ ಆರಂಭಗೊಳ್ಳದೆ, ಮೊದಲ ಎರಡು ಅಧ್ಯಾಯಗಳಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಆರಂಭದಿಂದ ನಡೆದ ವಿಮರ್ಶನ ಪ್ರಕ್ರಿಯೆಯ ಬೆವಣಿಗೆಯನ್ನು ಗುರುತಿಸುತ್ತದೆ. ಆ ಮುಂದೆ ಎಲಿಯಟ್, ಐ.ಎ. ರಿಚರ್ಡ್ಸ್‌ರು ವಿಮರ್ಶೆಗೆ ನೀಡಿದ ಕೊಡುಗೆ, ಅದರ ವಿರುದ್ಧದ ಷಿಕಾಗೋ ಪಂಥ, ವಿಮರ್ಶೆಯಲ್ಲಿ ಚಾರಿತ್ರಿಕ ದೃಷ್ಟಿ, ಮನೋವೈಜ್ಞಾನಿಕತೆ, ಸಮಾಜಶಾಸ್ತ್ರೀಯ ದೃಷ್ಟಿಕೋನ, ಮಾರ್ಕ್ಸಿಸ್ಟ್‌ ದೃಷ್ಟಿಕೋನ– ಮುಂತಾದ ಎಲ್ಲ ವಿಮರ್ಶಾ ಪಂಥಗಳನ್ನೂ ವಿವೇಚಿಸುವ ಈ ಕೃತಿಯು ವಿಮರ್ಶಾ ತಾತ್ವಿಕತೆಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ.

ಕೆಲವು ಸಾಹಿತ್ಯ ಪ್ರಕಾರಗಳನ್ನು ಕುರಿತ ವಿವೇಚನೆಯನ್ನೂ ಎಲ್.ಎಸ್.ಎಸ್. ಅನೇಕ ಕೃತಿಗಳ ಮೂಲಕ ಮಾಡಿದ್ದಾರೆ. ‘ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ’ ಅಂಥದೊಂದು ಪುಸ್ತಕ. ಕಾದಂಬರಿಯ ಕಥೆ-ವಸ್ತು-ತಂತ್ರ-ಸಂಭಾಷಣೆ-ಪಾತ್ರ ಇವೆಲ್ಲದರ ಸ್ವರೂಪ ವಿವೇಚನೆ ಇದರಲ್ಲಿದೆ. ಇಲ್ಲಿನ ವಿವೇಚನೆಯು ಕನ್ನಡ ಮತ್ತು ಇಂಗ್ಲಿಷ್ ಕಾದಂಬರಿಗಳ ನಿದರ್ಶನಗಳೊಂದಿಗೆ ನಡೆದಿದೆ. ‘ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯ ಪರಂಪರೆಗಳ ಮನೋಧರ್ಮ’ ಇನ್ನೊಂದು ಮುಖ್ಯಕೃತಿ. ಇದೊಂದು ಉಪನ್ಯಾಸದ ಬರಹರೂಪ. ಎರಡೂ ಪರಂಪರೆಗಳ ಮಹಾಕಾವ್ಯಗಳ ಮನೋಧರ್ಮಕ್ಕೆ ಇಲ್ಲಿನ ವಿವೇಚನೆ ಸೀಮಿತಗೊಂಡಿದೆ. ಹೋಮರ್, ವರ್ಜಿಲ್, ಮಿಲ್ಟನ್, ಗಯಟೆ, ವ್ಯಾಸ ಮತ್ತು ವಾಲ್ಮೀಕಿಗಳ ಕಾವ್ಯಗಳ ಸೂಕ್ಷ್ಮ ಅವಲೋಕನದ ಮೂಲಕ ಎರಡೂ ಪರಂಪರೆಗಳ ಸಾಮ್ಯ ವೈದೃಶ್ಯಗಳನ್ನು ಎತ್ತಿತೋರಿಸುವ ಈ ಬರಹವು ಮುಂದಿನ ಅಧ್ಯಯನಗಳಿಗೆ ಪ್ರೇರಣೆಯನ್ನೂ ಒದಗಿಸುವಂಥದು.

ಪ್ರೊ. ಶೇಷಗಿರಿರಾಯರ ಆಳವಾದ ಮತ್ತು ವ್ಯಾಪಕ ಅಧ್ಯಯನದ ಎರಡು ಪಕ್ವ ಫಲಗಳೆಂದರೆ ‘ಗ್ರೀಕ್‌ರಂಗಭೂಮಿ ಮತ್ತು ನಾಟಕ’ ಹಾಗೂ ‘ಇಂಗ್ಲಿಷ್ ಸಾಹಿತ್ಯಚರಿತ್ರೆ’. ಆನರ್ಸ್ ಮುಗಿಸಿದ ತಕ್ಷಣವೇ ಅವರು ಆನರ್ಸ್ ವಿದ್ಯಾರ್ಥಿಗಳಿಗೇ ಗ್ರೀಕ್‌ಟ್ರ್ಯಾಜಿಡಿಯನ್ನು ಪಾಠ ಮಾಡಬೇಕಾದ ಪ್ರಮೇಯವೊದಗಿತು. ಅಲ್ಲಿಂದ ಆರಂಭಗೊಂಡ ಈ ವಿಷಯದ ಅಧ್ಯಯನವು 1986ರಲ್ಲಿ ನಾಲ್ಕೂನೂರು ಪುಟಗಳ ಗ್ರಂಥವಾಗಿ ರೂಪುವಡೆಯಿತು. ಬಿಎಂಶ್ರೀ ಅವರು ಗ್ರೀಕ್‌ ರುದ್ರ ನಾಟಕಗಳ ಬಗ್ಗೆ ಗ್ರಂಥ ರಚಿಸುವ ಉದ್ದೇಶವಿಟ್ಟುಕೊಂಡಿದ್ದ ಸೂಚನೆಗಳಿವೆ; ಆದರೆ ಅದನ್ನವರು ಕಾರ್ಯಗತಗೊಳಿಸಲಾಗಲಿಲ್ಲ. ಆ ಕಾರ್ಯವನ್ನು ಎಲ್.ಎಸ್.ಎಸ್. ಮಾಡಿ ಪೂರೈಸಿದರು. ಹನ್ನೊಂದು ಅಧ್ಯಾಯಗಳಲ್ಲಿ ಗ್ರೀಕ್ ಸಂಸ್ಕೃತಿ, ಡಯೋನಿಸಸ್, ಗ್ರೀಕ್‌ರಂಗಮಂದಿರದ ಸ್ವರೂಪ, ಈಸ್ಕಿಲಸ್-ಸಾಫೊಕ್ಲೀಸ್-ಯೂರಿಪಿಡೀಸ್‌ ಅವರುಗಳ ಗಂಭೀರ ನಾಟಕಗಳು, ಅರಿಸ್ಟೋಪೆನೀಸ್ ಮುಂತಾದವರ ವೈನೋದಿಕಗಳು– ಇವುಗಳ ವಿಸ್ತೃತ ವಿವೇಚನೆಯನ್ನಲ್ಲದೆ, ಗ್ರೀಕ್‌ರಂಗಭೂಮಿ ತಾಳಿದ ವಿವಿಧ ಬದಲಾವಣೆಗಳು, ಮೇಳವು ಮಾರ್ಪಾಟುಗೊಂಡ ಬಗೆ, ಮುಖವಾಡಗಳ ಸ್ವರೂಪಚರ್ಚೆ ಇವುಗಳನ್ನು ಕಟ್ಟಿಕೊಡುವ ಈ ಕೃತಿಯು ಈ ವಿಷಯದ ಮಟ್ಟಿಗೆ ‘ಆಚಾರ್ಯಕೃತಿ’ಯೇ ಸರಿ.

ಇಂತಹುದೇ ಇನ್ನೊಂದು ‘ಇಂಗ್ಲಿಷ್ ಸಾಹಿತ್ಯಚರಿತ್ರೆ’; ರಾಯರಿಗೆ ೨೦೦೧ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ.ಇಂಗ್ಲಿಷ್ ಸಾಹಿತ್ಯಚರಿತ್ರೆಯನ್ನು ಆಮೂಲಾಗ್ರವಾಗಿ ಐನೂರು ಪುಟಗಳ ವ್ಯಾಪ್ತಿಯಲ್ಲಿ ಹದಿಮೂರು ಅಧ್ಯಾಯಗಳು ಹಾಗೂ ಅನುಬಂಧಗಳು ಮತ್ತು ಎರಡು ವಿಷಯಸೂಚಿಗಳಲ್ಲಿ ನಮ್ಮ ಮುಂದಿಡುವ ಈ ಕೃತಿ ಒಂದು ಸ್ವತಂತ್ರ ನಿರ್ಮಿತಿ. ಇಂಗ್ಲಿಷ್‌ನಲ್ಲಿ ರಚಿತವಾಗಿದ್ದರೆ ಮಿಕ್ಕೆಲ್ಲ ಸಾಹಿತ್ಯ ಚರಿತ್ರೆಗಳ ನಡುವೆಯೂ ಇದಕ್ಕೊಂದು ವಿಶಿಷ್ಟ ಸ್ಥಾನವಿರುತ್ತಿತ್ತು ಎಂಬುದು ಬಲ್ಲವರ ಅಭಿಪ್ರಾಯ. ಕೇವಲ ಐದು ಶತಮಾನಗಳಲ್ಲಿ ಅತ್ಯಂತ ವೈವಿಧ್ಯಪೂರ್ಣವಾದ ಸಾಹಿತ್ಯವು ಬೆಳೆದು, ವಿಶ್ವವ್ಯಾಪಿಯಾದ ಪ್ರಭಾವವನ್ನು ಬೀರುವ ಇಂಗ್ಲಿಷ್ ಸಾಹಿತ್ಯದ ರೋಚಕ ಬೆಳವಣಿಗೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಈ ಕೃತಿ ನಮ್ಮ ಮುಂದಿರಿಸುತ್ತದೆ. ಯೂರೋಪ್‌ನ ಇತರ ಭಾಗಗಳಿಂದ ಕ್ರಿ.ಶ. 5ನೇ ಶತಮಾನದಲ್ಲಿ ವಲಸೆ ಬಂದ ಆಂಗ್ಲೋ-ಸ್ಯಾಕ್ಸನ್‌ ಜನಾಂಗವು ಇಲ್ಲಿ ನೆಲಸಿತು; ಮೊದಲು ಮೌಖಿಕರೂಪದಲ್ಲಿ ಅವರ ಸಾಹಿತ್ಯ ರೂಪುಗೊಂಡರೂ, ಫ್ರೆಂಚ್ ಪ್ರಾಧಾನ್ಯವಿದ್ದ ಜಾಗದಲ್ಲಿ ಜೆಫ್ರಿ ಛಾಸೆರ್‌ನ ‘ಕ್ಯಾಂಟರ್‌ಬರಿಟೇಲ್ಸ್’ನ ಮೂಲಕ ಇಂಗ್ಲಿಷ್‌ ತನ್ನತನವನ್ನು ಸ್ಥಾಪಿಸಿಕೊಂಡು, ಆ ಮುಂದೆ ವಿಕಾಸಗೊಂಡದ್ದು ಒಂದು ಪವಾಡ ಸದೃಶ ಬೆಳವಣಿಗೆ. ಈ ಕೃತಿಯು ಕ್ರಮಬದ್ಧ ಯೋಜನೆಯ ಪರಿಣಾಮ.

ಪ್ರತಿ ಅಧ್ಯಾಯವೂ ಒಂದು ನಿರ್ದಿಷ್ಟ ಕಾಲಮಾನಕ್ಕೆ ಸಂಬಂಧಿಸಿದಂತೆ, ಆ ಕಾಲದ ಸಾಮಾಜಿಕ-ಆರ್ಥಿಕ-ರಾಜಕೀಯ ಹಿನ್ನೆಲೆಯನ್ನೂ, ಆ ಅವಧಿಯ ಕಾವ್ಯ, ನಾಟಕ, ಕಾದಂಬರಿ-ಸಣ್ಣಕತೆ, ಗದ್ಯ ಹಾಗೂ ವಿಮರ್ಶೆಗಳನ್ನು ಆ ಕ್ರಮದಲ್ಲಿಯೇ ವಿವೇಚಿಸುತ್ತದೆ. ಪ್ರತಿಕಾಲದ ಮಹತ್ವದ ಕೃತಿಗಳ ವಿವರವಾದ ವಿಶ್ಲೇಷಣೆಯ ಜೊತೆಗೆ, ಆ ಕಾಲದ ಸಾಹಿತ್ಯದ ಪ್ರಮುಖ ಲಕ್ಷಣಗಳನ್ನು ಕೃತಿಯು ನಿರೂಪಿಸುತ್ತದೆ. ಪ್ರತಿ ಅಧ್ಯಾಯದ ಕೊನೆಗೆ ಆಯಾ ಕಾಲದ ಇತಿಹಾಸ ಮತ್ತು ಸಾಹಿತ್ಯ ಕ್ಷೇತ್ರಗಳ ಮುಖ್ಯ ಸಂಗತಿಗಳನ್ನು ಕೋಷ್ಟಕ ರೂಪದಲ್ಲಿ ನೀಡಲಾಗಿದೆ. ಮುಖ್ಯ ಸಂದರ್ಭಗಳಲ್ಲೆಲ್ಲ ಇತರರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಕೊನೆಗೆ ಲೇಖಕರ ಸ್ವಂತ ಅಭಿಪ್ರಾಯಗಳನ್ನು ಮಂಡಿಸುವ ರೀತಿಯನ್ನು ಇಲ್ಲಿ ಅನುಸರಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆಯೂ ವಿಷಯ ಮಂಡನೆಯಿದೆ. ಕನ್ನಡವನ್ನು ಎದೆಯಲ್ಲಿಟ್ಟುಕೊಂಡು ಇಂಗ್ಲಿಷ್ ಸಾಹಿತ್ಯದ ಬೆಳವಣಿಗೆಯನ್ನು ಅಭಿಮಾನದಿಂದ ನೋಡುವ ದೃಷ್ಟಿ ಇಲ್ಲಿನದು. ಹೀಗಾಗಿ ಇದೊಂದು ಸ್ವತಂತ್ರ ಕೃತಿಯಾಗಿದ್ದು ನಲವತ್ತು ವರ್ಷಗಳ ವಿಮರ್ಶಾನುಭವವು ಇಲ್ಲಿ ಹೆಪ್ಪುಗಟ್ಟಿದೆ. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ದೊರಕಿರುವುದು ಸಮಂಜಸವೇ ಆಗಿದೆ.

ರಾಯರು ಶ್ರದ್ಧೆಯ ಪ್ರತೀಕ; ಯಾವ ಕೆಲಸವನ್ನೂ ಕ್ರಮಬದ್ಧವಾಗಿಯೂ ಸುಸಂಯೋಜಿತ ರೀತಿಯಲ್ಲಿಯೂ ನಡೆಸುವವರು. ದೀರ್ಘಕಾಲದ ಬೋಧನೆ, ಪುಸ್ತಕ ಪ್ರಾಧಿಕಾರದಂತಹ ಸಂಸ್ಥೆಯ ಮುಖ್ಯಸ್ಥರಾಗಿ ರೂಪಿಸಿದ ಕಾರ್ಯಗಳು, ತಮ್ಮ ದ್ವಿಭಾಷಾ ಪರಿಣತಿಯಿಂದ ಕನ್ನಡಕ್ಕೆ ದೊರಕಿಸಿಕೊಟ್ಟರುವ ಅನೇಕ ಉತ್ಕೃಷ್ಟ ದ್ವಿಭಾಷಿಕ ನಿಘಂಟುಗಳು, ಅನುವಾದಗಳು, ‘ಭಾರತ–ಭಾರತಿ’ ಪುಸ್ತಕ ಸಂಪದ, ಭಾರತೀಯ ಸಾಹಿತ್ಯ ಸಮೀಕ್ಷೆ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಮುಂತಾದ ಅವರ ಸಂಪಾದಕತ್ವದ ಮಾಲೆಗಳು ಅವರ ಕರ್ತೃತ್ವಕ್ಕೆ ಸಾಕ್ಷಿ. ಇದಲ್ಲದೆ ಅವರು ಅನೇಕ ಇಂಗ್ಲಿಷ್ ಕೃತಿಗಳ ಲೇಖಕರು ಕೂಡ; ಅವುಗಳಲ್ಲಿ ಅನೇಕವು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದವುಗಳು ಎಂಬುದೂ ಗಮನಾರ್ಹ. ಇಷ್ಟಲ್ಲದೆ ರಾಯರು ಕನ್ನಡವನ್ನು ತೀವ್ರವಾಗಿ ಪ್ರೀತಿಸುತ್ತ, ಕನ್ನಡ ಚಳವಳಿಯಲ್ಲಿಯೂ ತಮ್ಮದೇ ರೀತಿಯಲ್ಲಿ ಭಾಗಿಗಳಾದವರು. ವೈಯಕ್ತಿಕ ಜೀವನದ ಏಳುಬೀಳುಗಳ ನಡುವೆ ಅವರು ಉಳಿಸಿಕೊಂಡು ಬಂದಿರುವ ಸಜ್ಜನಿಕೆ ಮತ್ತು ಮಾರ್ದವತೆಗಳು ಇತರರನ್ನು ಹತ್ತಿರಕ್ಕೆ ಬರಮಾಡಿಕೊಳ್ಳುವ ಅವರ ಚುಂಬಕ ಗುಣಗಳು. ಅವರು ತಮ್ಮ ಉತ್ತೇಜಕ ಮಾತುಗಳ ಮುನ್ನುಡಿಗಳಿಂದಲೂ ಬೆನ್ನುಡಿಗಳಿಂದಲೂ ಅಪಾರ ಸಂಖ್ಯೆಯ ಕಿರಿಯ ಲೇಖಕರಿಗೆ ಮಾರ್ಗದರ್ಶಕರಾಗಿರುವವರು. ಅಂಥ ಸೌಜನ್ಯಮೂರ್ತಿಗೆ ಇದೇ ಫೆಬ್ರುವರಿ 16 ತೊಂಬತ್ತು ತುಂಬುತ್ತದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಒಳ್ಳೆಯ ಆರೋಗ್ಯ ಹಾಗೂ ಉಲ್ಲಾಸದಾಯಕ ದಿನಗಳು ಅವರದಾಗಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT