ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಪಜ್ಜಿಯ ವಿಲ್ಲು

Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಯಾಕತ್ತೆ ಇತ್ತಿತ್ಲಗೆ ಮಾತೇ ಕಡಿಮೆ ಮಾಡಿದಿಯಲ್ಲವ್ವ?’ 
ಊರಬಾಗಿಲಿನ ಕಡೆಯಿಂದ ಪಿಂಜಾರಹಟ್ಟಿಯಲ್ಲಿದ್ದ ತನ್ನ ಮನೆಗೆ ತಲೆತಗ್ಗಿಸಿಕೊಂಡು ಹೊರಟಿದ್ದ ಶರ್ಪಜ್ಜಿಗೆ ಮಹದೇವ ಪ್ರಶ್ನೆ ಎಸೆದ. ಲಿಂಗಾಯತರ ಮಹದೇವನಿಗೆ ಶರ್ಪಜ್ಜಿ ಅದ್ಹೇಗೆ ಅತ್ತೆ ಆಗಬೇಕೋ ಗೊತ್ತಿಲ್ಲ. ಆದರೆ ಈ ಸಂಬೋಧನೆ ಲಾಗಾಯ್ತಿನಿಂದ ನಡೆದುಕೊಂಡು ಬಂದಿತ್ತು.

‘ಇಲ್ಲಪ್ಪ ಮಾದೇವ ಅಂಗೇನಿಲ್ಲ. ಸುಳ್ಳೆಲೆ ಯಾತ್ರವು ಮಾತಾಡನೊ ನನ್ನಳಿಯ’ ಎಂದು ಶರ್ಪಜ್ಜಿ ಮೊಮ್ಮಗ ಖಾಜಾನ ಕೈಹಿಡಿದುಕೊಂಡು ಮನೆಕಡೆ ಮುಂದುವರೆದಳು. ಇತ್ತೀಚೆಗೆ ನವಿಲೆಹಾಳಿನ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಬಂದಿದ್ದ ಮಹಲಿಂಗಪ್ಪ ಮಾಸ್ಟ್ರು ಮಕ್ಕಳನ್ನು ಹೊಡೆಯುವುದರಲ್ಲಿ ನಿಸ್ಸೀಮನಾಗಿದ್ದು, ಸುತ್ತೂ ಹತ್ತು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದರು. ಎಂದೂ ಮಕ್ಕಳನ್ನು ಹೊಡೆಯದಂತೆ ತಿಳಿಹೇಳಲು ಶರ್ಪಜ್ಜಿ ಶಾಲೆಗೆ ಬಂದಿದ್ದಳು.

ಶಾಲೆಯ ಕಟ್ಟೆಯ ಮೇಲೆ ಒಂದೆರಡು ಗಂಟೆ ಸಾವಧಾನವಾಗಿ ಕೂತಿದ್ದು ಶಾಲೆ ಬಿಟ್ಟಾಗ ಮೇಷ್ಟ್ರನ್ನು ಕಂಡು ಹೇಳಬೇಕಾದದ್ದನ್ನು ಹೇಳಿ ಮೊಮ್ಮಗನ ಜೊತೆ ಮನೆ ಕಡೆ ಹೊರಟಿದ್ದಳು. ಯಾಕೋ ಇತ್ತೀಚಿನ ಆರೇಳು ವರ್ಷದಲ್ಲಿ, ಅಂದರೆ ಮಗ ನಬಿಯ ಮದುವೆ ಆದ ನಂತರದಿಂದ ತನಗೆ ವಿಪರೀತ ವಯಸ್ಸಾದಂತೆನಿಸಿತು. ಇದ್ದಕ್ಕಿದ್ದಂತೆ ಮುಪ್ಪಡರಿದಂತೆ ಕಣ್ಣು ಮಂಜಾದವು, ಕಿವಿ ಮಂದವಾದವು.

ನಡೆಯುತ್ತ ಅಲ್ಲಲ್ಲಿ ತಡವರಿಸುತ್ತೇನೆಯೇ? ಇತ್ತೀಚೆಗೆ ಖಾಜಾನನ್ನು ಎತ್ತಿಕೊಳ್ಳಲೂ ಸಹ ತನಗೆಲ್ಲಾಗುತ್ತಿದೆ? ಎಂದಾದರೊಂದು ದಿನ ಕನ್ನಡಿಯಲ್ಲಿ ಮುಖ ಕಂಡರೆ ಇದು ನಾನೇ? ಎಂದು ಪ್ರಶ್ನಿಸಿಕೊಳ್ಳುವಂತೆ ಚರ್ಮ ಸುಕ್ಕುಗಟ್ಟಿದೆ. ಊರಲ್ಲಿ ನನಗಿಂತ ಹಿರಿಯರನೇಕರು ರೋಸಜ್ಜಿ, ಬೀಬಜ್ಜಿ, ರಾಜಜ್ಜಿ, ಪಾತಜ್ಜಿ ನನಗಿಂತ ಚೆನ್ನಾಗಿದ್ದಾರೆ?

ಮೊಮ್ಮಗ ಬಾಯ್ತುಂಬ ‘ಅಜ್ಜಿ’ ಎಂದಾಗ ಹೃದಯ ತುಂಬಿಬಂದರೂ ಇಲ್ಲಿ ನನ್ನ ದಿನಗಳು ಕೊನೆಯಾಗುತ್ತ ಬಂದವೋ ಏನೋ ಎಂದು ದಿಗಿಲಾಗುತ್ತಿತ್ತು. ಎಂಥ ಧೈರ್ಯದ, ಎಂಥ ಆತ್ಮವಿಶ್ವಾಸದ ನಾನೇಕೆ ಎಲ್ಲದಕ್ಕೂ ಹಿಂದೇಟು ಹಾಕುತ್ತಿದ್ದೇನೆ ಎಂದು ಶರ್ಪಜ್ಜಿ ಒಂದು ಕ್ಷಣ ಹೆಜ್ಜೆ ಮುಂದಿಡಲಾಗದೆ ನಿಂತಲ್ಲೇ ನಿಂತಳು. ಖಾಜ “ಯಾಕಜ್ಜಿ ಸುಮ್ನೆ ನಿಂತೆ?’ ಎಂದಾಗ ಶರ್ಪಜ್ಜಿಗೆ ಎಚ್ಚರವಾಗಿ ಮುಂದಡಿಯಿಟ್ಟಳು. ಇಬ್ಬರೂ ಬರಿಗಾಲಲ್ಲಿದ್ದರು. 

ಎತ್ತೆತ್ತಿ ಕಾಲಾಕುತ್ತಿದ್ದ ಖಾಜಾನ ಕಾಲುಗಳು ಮೊಣಕಾಲಿನವರೆಗೆ ಧೂಳು ಧೂಳಾಗಿದ್ದವು. “ಯಾಕೆ ಹರಕಲು ಸೀರೆ ಉಟ್ಕಂಡು ಓಡಾಡ್ತೀಯ? ಕಲ್ಲು ಗುದ್ದಿ ನೀರು ತೆಗೆಯುವಂತಿರುವ ನಿನ್ನ ಮಗನ್ನ ಕೇಳು. ಒಂದಲ್ಲ ನಾಕು ಸೀರೆ ತಂದುಕೊಡ್ತಾನೆ, ವಯಸ್ಸಾಯ್ತೇ ಹೊರ್ತು ಬುದ್ಧಿ ಬರ್ಲುಲ್ಲ’ ಕಣತ್ತೆ ನಿನಿಗೆ ಎನ್ನುತ್ತ ಮಾದೇವ ಬರಬರನೆ ಮುಂದೆ ಸಾಗಿದ.

ಅಜ್ಜಿ ಮೊಮ್ಮಗ ಮನೆ ಸೇರಿದ್ದೇ ರಂಪಾಟ ಶುರುವಾಯಿತು. ಖಾಜಾನ ತಾಯಿ ಆಶಮ್ಮ ಮಗನನ್ನು ಹಿಡಿದುಕೊಂಡು ಬಾರಿಸತೊಡಗಿದಳು. ಅಕ್ಕಪಕ್ಕದವರು ‘ಇದು ದಿನಾ ಇದ್ದದ್ದೇ, ದಿನಾ ಸಾಯರಿಗೆ ಅಳೋರು ಯಾರು’ ಎಂದು ತಮ್ಮ ಪಾಡಿಗೆ ತಾವಿದ್ದರು. ಖಾಜಾ ಎಂಬ ಎರಡನೇ ತರಗತಿಯ ಹುಡುಗ ಬರಿಗಾಲಲ್ಲಿ ಶಾಲೆಗೆ ಹೋಗಿ ಬಂದದ್ದು ಆಶಮ್ಮನಿಗೆ ಸುತರಾಂ ಇಷ್ಟವಿರಲಿಲ್ಲ. ಅದು ತನ್ನ ಮರ್ಯಾದೆಗೆ ಕುಂದು ಎಂದು ಭಾವಿಸಿದ್ದಳು.

ಏಳನೇ ತರಗತಿ ಪಾಸಾದ ನಂತರ ವಿದ್ಯಾಭ್ಯಾಸವನ್ನು ಅಲ್ಲಿಗೇ ನಿಲ್ಲಿಸಿದ್ದ ಆಶಮ್ಮ ತನ್ನನ್ನು ಇದ್ಯಾವಂತೆ ಎಂದು ಪರಿಗಣಿಸಿದ್ದಳು. ಆಕೆ ತಡವರಿಸಿಕೊಂಡು ಇಂಗ್ಲಿಷ್ ಓದುವುದಲ್ಲದೆ ಸರಾಗವಾಗಿ ಕನ್ನಡ ಓದುತ್ತಿದ್ದಳು. ಅಂಕಿಸಂಖ್ಯೆಗಳನ್ನು ಅರಿತವಳೂ, ಕೂಡಿ ಕಳೆಯುವ, ಗುಣಿಸಿ ಭಾಗಿಸುವ ಲೆಕ್ಕಗಳನ್ನು ನೀರು ಕುಡಿದಷ್ಟು ಸುಲಭವಾಗಿ ಮಾಡುವ ಜಾಣೆಯೂ ಆಗಿದ್ದಳು.

ಒಂದರಿಂದ ಇಪ್ಪತ್ತರವರೆಗಿನ ಮಗ್ಗಿಯನ್ನು ಕನಸು ಕನವರಿಕೆಯಲ್ಲೂ ತಪ್ಪದ ಆಶಮ್ಮ ಇದೆಲ್ಲದರ ಬಗ್ಗೆ ಅಗಾಧ ಪ್ರಮಾಣದ ಧಿಮಾಕನ್ನು ಹೊಂದಿದ್ದಳು. ತವರಿನಲ್ಲಿ ತಂದೆ ತಾಯಿಯರು ಬಡವರಾಗಿದ್ದರೂ ಅವರೆಲ್ಲರೂ ದೌಳರು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಳು.

ಸೊಸೆಯ ಹೊಡೆತಗಳಿಂದ ಖಾಜಾನನ್ನು ಕಷ್ಟಪಟ್ಟು ಬಿಡಿಸಿಕೊಂಡ ಶರ್ಪಜ್ಜಿ ಅಲಿಯಾಸ್ ಶರೀಫಜ್ಜಿ ಅನಕ್ಷರಸ್ಥೆಯಾಗಿದ್ದಳು. ನವಿಲೇಹಾಳಿಗೆ ಮದುವೆಯಾಗಿ ಬಂದಂದಿನಿಂದ ಅಂದರೆ ಸುಮಾರು 50 ವರ್ಷಗಳಿಂದ ಘನತೆ–ಗೌರವದಿಂದ ಬಾಳಿದ್ದ ಶರ್ಪಜ್ಜಿ ಮರ್ಯಾದೆಯಿಂದ ಬಾಳಲು ಅಕ್ಷರಗಳು ಅನವಶ್ಯಕವೆಂದು ಅನುಭವದಿಂದ ಬಲ್ಲವಳಾಗಿದ್ದಳು.

ತನ್ನ ಗಂಡನಿಗೆ ಊರಲ್ಲಿ ಮನೆ ಬಿಟ್ಟು ಮತ್ತಿನ್ನೇನೂ ಇರಲಿಲ್ಲ. ಗಂಡ ಹೆಂಡಿರು ಕೂಲಿನಾಲಿ ಮಾಡಿ ಜೀವನ ಸಾಗಿಸಿದ್ದರು. ಮದುವೆಯಾಗಿ 20 ವರ್ಷಗಳ ನಂತರ ನಬಿ ಹುಟ್ಟಿದ. ಹುಟ್ಟಿದ ಎರಡು ವರ್ಷದಲ್ಲಿ ನಬಿ ತಂದೆಯನ್ನು ಕಳೆದುಕೊಂಡ. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ಉಳಿದರು.

ನಬಿಯನ್ನು ಶರ್ಪಜ್ಜಿ ಕಣ್ಣಿನಗೊಂಬೆಯಂತೆ ಸಾಕಿದ್ದಳು. ಅವನೂ ಅಷ್ಟೇ. ತಾಯಿಯೆಂದರೆ ಪ್ರಾಣ. ತಂದೆ, ಹೊನ್ನೂರಜ್ಜನನ್ನು ಎಳೆಯದರಲ್ಲಿಯೇ ಕಳೆದುಕೊಂಡಿದ್ದ ನಬಿಯ ಪ್ರಪಂಚ ಬರೀ ತಾಯಿಯಿಂದಲೇ ತುಂಬಿಹೋಗಿತ್ತು. ಬಡತನದಿಂದಲೇ ಗಿಟಿಗಿರಿದು ಹೋಗಿದ್ದ ಅವರ ಬದುಕು ತಾಯಿ–ಮಗನ ಪ್ರೀತಿಯಿಂದ ಶ್ರೀಮಂತವಾಗಿತ್ತು.

ದೊಡ್ಡವನಾದಂತೆ ನಬಿ ಸಾಹುಕಾರ್ ನಜೀರಣ್ಣನ ಹೊಲ ಮನೆ ಅಂಗಡಿಯಲ್ಲಿ ಕೆಲಸ ಮಾಡುತ್ತ ವ್ಯವಸಾಯ–ವ್ಯಾಪಾರದಲ್ಲಿ ನುರಿತವನೂ ನಂಬಿಗಸ್ಥನೂ ಆದನು.
ಸಾಹುಕಾರರ ಮನೆಯಲ್ಲಿ ಸಂಬಳಕ್ಕಿದ್ದ ನಬಿಯ ಮದುವೆ ಸಣ್ಣ ವಯಸ್ಸಿಗೇ ಆಯಿತು.

ಶರ್ಪಜ್ಜಿ ಸೊಸೆಯನ್ನು ಸಂಭ್ರಮದಿಂದ ಮನೆಗೆ ಬರಮಾಡಿಕೊಂಡಳು. ಶರ್ಪಜ್ಜಿಯ ದುರದೃಷ್ಟವೆಂದರೆ ಆಶಮ್ಮ ಬಹಳ ಸಣ್ಣ ಬುದ್ಧಿಯವಳೂ ಯಾರನ್ನೂ ನಂಬದವಳೂ, ಹೊಟ್ಟೆಕಿಚ್ಚಿನವಳೂ ಆಗಿದ್ದಳು. ಅತ್ತೆಯನ್ನು ಪ್ರತಿಯೊಬ್ಬ ಸೊಸೆಯೂ ದ್ವೇಷಿಸಬೇಕೆಂದು ಬಗೆದಿದ್ದಳು. ಅತ್ತೆಯರನ್ನು ದ್ವೇಷಿಸುವುದು ಸೊಸೆಯರ ಪರಮ ಕರ್ತವ್ಯವೆಂದು ನಂಬಿದ್ದಳು. ಆಶಮ್ಮನ ಅಮ್ಮ ತನ್ನ ಅತ್ತೆಯನ್ನು ದ್ವೇಷಿಸುತ್ತಲೇ ಕಾಲ ಕಳೆದಿದ್ದಳು.

ಅದನ್ನೇ ಮಾದರಿಯಾಗಿಟ್ಟುಕೊಂಡಿದ್ದ ಆಶಮ್ಮನಿಗೆ ಶರ್ಪಜ್ಜಿಯನ್ನು ಕಂಡರೆ ಒಂಚೂರೂ ಆಗುತ್ತಿರಲಿಲ್ಲ. ಆಶಮ್ಮ ಶರ್ಪಜ್ಜಿಗೆ ಸರ್ಪ ಎಂತಲೂ ಮುದುಡಿ ಎಂತಲೂ ಅಡ್ಡ ಹೆಸರುಗಳನ್ನಿಟ್ಟಿದ್ದಳು. ಬೇರೆ ಎಲ್ಲರ ಜೊತೆ ಮಾತಾಡುವಾಗ ಅತ್ತೆಯ ಬಗ್ಗೆ ಇದೇ ಅಡ್ಡ ಹೆಸರುಗಳನ್ನು ಬಳಸಿ ಬೈಯ್ಯುತ್ತಿದ್ದಳು.

ನವಿಲೆಹಾಳು ಗ್ರಾಮದ ಸಜ್ಜನರಲ್ಲಿ ಒಬ್ಬಳಾಗಿದ್ದ ಶರ್ಪಜ್ಜಿಗೆ ಈ ಬೈಗುಳ ಸಮಾನವಾಗಿದ್ದ ಅಡ್ಡ ಹೆಸರುಗಳು ಜನಪ್ರಿಯವಾಗಿದ್ದು ಅತ್ಯಂತ ಸಂಕಟಮಯವಾದ ಸಂಗತಿಯಾಗಿತ್ತು. ಆದರೆ ಶರ್ಪಜ್ಜಿ ಅಸಹಾಯಕಳಾಗಿದ್ದಳು. ಆಶಮ್ಮನನ್ನು ಎದುರು ಹಾಕಿಕೊಂಡು ಏಗಲು ಅವಳಲ್ಲಿ ದೈಹಿಕ ಬಲವಾಗಲೀ, ಆಸ್ತಿ ಹಣದ ಧೈರ್ಯವಾಗಲೀ ಅಥವಾ ವಯಸ್ಸು ಮತ್ತು ಆರೋಗ್ಯದ ಬೆಂಬಲವಾಗಲೀ ಇರಲಿಲ್ಲ.

ಬಡವ ನೀನು ಮಡಗಿದಂಗಿರು ಎನ್ನುವಂತೆ ಇದ್ದ ಶರ್ಪಜ್ಜಿಗೆ ಮಗ ಮತ್ತು ಮೊಮ್ಮಗರ ನೆನಪಾಗಿ ಒಳಗೆ ದುಃಖ ಉಮ್ಮಳಿಸಿತು. ಆಶಮ್ಮ ಅತ್ತೆಯನ್ನು ಬೈಯುವ ಒಂದೇ ಒಂದು ಅವಕಾಶವನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಸೊಸೆ ಎಷ್ಟೇ ಕೂಗಾಡಿ, ಕೆಟ್ಟ ಕೊಳಕ ಬೈದರೂ ಶರ್ಪಜ್ಜಿ ಹಿಂತಿರುಗಿಸಿ ಸೊಸೆಯನ್ನು ಬೈದವಳಲ್ಲ. ಮನೆಯ ಮಾನ ಮರ್ಯಾದೆಗೆ ಅಂಜಿ ಮಾತನಾಡದೆ ಸಾಹುಕಾರ್ ನಜೀರಣ್ಣರ ಮನೆಗೋ ಗೌಸಣ್ಣರ ಮನೆಗೋ ಹೋಗಿ ಕುಳಿತುಬಿಡುತ್ತಿದ್ದಳು.

ಬಹಿರಂಗದಲ್ಲಿ ಶರ್ಪಜ್ಜಿ ಒರಟಾಗಿ ಕಾಣಿಸಿದರೂ ಅಂತರಂಗದಲ್ಲಿ ಮೃದುವೂ ಸೂಕ್ಷ್ಮವೂ ಸಂಕೋಚ ಪ್ರವೃತ್ತಿಯವಳೂ ಆಗಿದ್ದಳು. ಇದು ಮದುವೆಯಾದಂದಿನಿಂದ ಹೀಗೆಯೇ ನಡೆದುಕೊಂಡು ಬಂದಿತ್ತು.

ನಬಿ–ಆಶಮ್ಮ ಪ್ರೀತಿಯಿಂದಿದ್ದರೇನೋ ಸರಿ. ಆದರೆ ಆಶಮ್ಮನ ದೊಡ್ಡ ಬಾಯಿಗೆ ನಬಿ ಹೆದರಿದವನಂತೆ ಕಾಣುತ್ತಿದ್ದ. ಸಣ್ಣವನಿದ್ದಾಗಿನಿಂದಲೂ ಶರ್ಪಜ್ಜಿಯ ಜೊತೆ ಒಡನಾಡಿದ್ದ ನಬಿ ಯಾರೊಂದಿಗೂ ವಾದ, ಜಟಾಪಟಿಗಿಳಿದವನೇ ಅಲ್ಲ. ಆಶಮ್ಮನ ಸೌಂದರ್ಯ ಅಸಾಧಾರಣವಾಗಿತ್ತು.

ಅವಳ ಮೈ ಬಣ್ಣ, ಕೆನ್ನೆ ಮೇಲಿನ ಗುಳಿ, ಉದ್ದನೆಯ ಜಡೆ, ಬಟ್ಟಲು ಕಣ್ಣುಗಳು ಮತ್ತು ಮಿಂಚುವ ಚರ್ಮದ ಕಾಂತಿಗೆ ನಬಿ ಸೋತುಹೋಗಿದ್ದ. ಅವಳ ಬೆಕ್ಕಿನ ಕಣ್ಣುಗಳಂತೂ ಒಂದು ತರಹದ ರುದ್ರಸೌಂದರ್ಯವನ್ನಿತ್ತಿದ್ದವು.

ತಾಯಿಯ ಪರವಾಗಿ ಮಾತಾಡೋಣವೆಂದು ಮನಸ್ಸಿನಲ್ಲಿ ಗಟ್ಟಿ ಮಾಡಿಕೊಳ್ಳುತ್ತಿದ್ದ ನಬಿ, ಆಶಮ್ಮ ಎದುರು ಬಂದ ಕೂಡಲೆ, ಅವನ ನಿರ್ಧಾರ ಕರಗಿಹೋಗುತ್ತಿತ್ತು. ಹೆಂಡತಿ ವಿರುದ್ಧವಾಗಲೀ ತಾಯಿಯ ಪರವಾಗಲೀ ಮಾತನಾಡದೇ ನಿಂತುಬಿಡುತ್ತಿದ್ದ. ಯಾರೋ ಅವನ ಬಾಯನ್ನು ಕಟ್ಟಿಹಾಕಿದಂತೆ ಮೌನವಾಗಿಬಿಡುತ್ತಿದ್ದ.

ತಾಯಿ–ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗುವ ಲಕ್ಷಣ ಕಂಡಕೂಡಲೆ ನಬಿ ಆ ಜಾಗದಿಂದ ನಾಪತ್ತೆಯಾಗುವ ಕಲೆಯನ್ನು ರೂಢಿಸಿಕೊಂಡಿದ್ದ. ಸಾರಾಂಶದಲ್ಲಿ ಹೇಳುವುದಾದರೆ ಆಶಮ್ಮನಿಗೆ ಕೊಟ್ಟ ವಾಗ್ದಾನಗಳು ಸುಲಭವಾಗಿ ಈಡೇರುತ್ತಿದ್ದವೇ ವಿನಾ ಶರ್ಪಜ್ಜಿಗೆ ಕೊಟ್ಟ ಭರವಸೆಗಳು ಈಡೇರದ ಆಸೆಗಳಾಗಿಯೇ ಉಳಿದುಬಿಡುತ್ತಿದ್ದವು. ಆಶಮ್ಮ ತನಗಿಂತ ಬಲಿಷ್ಠ ವ್ಯಕ್ತಿತ್ವದವಳೆಂಬ ಅಂತಿಮ ತೀರ್ಮಾನಕ್ಕೆ ನಬಿ ಎಂದೋ ಬಂದುಬಿಟ್ಟಿದ್ದ.

ಹರಿದ ಸೀರೆಯನ್ನು ಹೊಲಿದುಕೊಂಡು ಅಥವಾ ತೇಪೆ ಹಾಕಿಕೊಂಡು ಒಂದಷ್ಟು ದಿನ ಶರ್ಪಜ್ಜಿ ಕಾಲ ಕಳೆದಳು. ಆದರೆ ಈ ಎಲ್ಲ ಹಂತಗಳನ್ನೂ ದಾಟಿ ಸೀರೆ ರಿಪೇರಿ ಮಾಡಲಾಗದಷ್ಟು ಹಳತಾಯಿತು. ಅವಳ ಬಳಿ ಇದ್ದ ಎರಡೂ ಸೀರೆಗಳು ಈ ಗತಿ ತಲುಪಿದ ಮೇಲೆ ಹೊಸ ಸೀರೆಗಾಗಿ ಶರ್ಪಜ್ಜಿ ಮಗನನ್ನು ಕೇಳಲೇಬೇಕಾಯಿತು.

ಶರ್ಪಜ್ಜಿ ಸ್ವಾಭಿಮಾನಿಯಾಗಿದ್ದಳು. ಎಷ್ಟು ಪ್ರಯತ್ನಿಸಿದರೂ ಮಗನೆದುರು ಸೀರೆಗಾಗಿ ಬೇಡಿಕೆಯನ್ನಿಡದಾದಳು. ಮನಸ್ಸನ್ನು ದೃಢ ಮಾಡಿಕೊಂಡು ಮಗನೆದುರು ಎಷ್ಟೋ ಸಲ ಹೋದವಳು ಮನಸ್ಸು ಬದಲಿಸಿ ಹಿಂತಿರುಗಿದಳು. ಗಂಡ ಹೊನ್ನೂರಜ್ಜ ಇದ್ದಿದ್ದರೆ ಹೀಗಾಗುತ್ತಿತ್ತೇ ಎಂದು ಮನಸ್ಸು ಆರ್ದ್ರವಾಯಿತು.

ಹಿರಿಯರ ಹಬ್ಬ, ರಂಜಾನ್ ಹಬ್ಬಕ್ಕೆ ತರುತ್ತಿದ್ದ ಎರಡೆರಡು ಸೀರೆಗಳು ತನ್ನ ಪಾಲಾಗುತ್ತಿದ್ದುದ್ದು ನೆನಪಾಯಿತು. ಬೇಡವೆಂದರೂ ಸೀರೆ ತಂದುಕೊಡುತ್ತಿದ್ದ ತನ್ನ ಪ್ರೀತಿಯ ಗಂಡ. ಒಂದು ವರ್ಷ ಹಿರಿಯರ ಹಬ್ಬದಲ್ಲಿ ಸೀರೆ ತರಲು ಮನೆಯಲ್ಲಿ ದುಡ್ಡಿಲ್ಲದೆ ಸಾಲ ಮಾಡಿ ತಂದುಕೊಟ್ಟ ಸೀರೆ ಕಂಡವರ ಕಣ್ಣುರಿಯುವಂತಹ ಗುಣಮಟ್ಟದ್ದಾಗಿತ್ತು.

ಸಾಹುಕಾರ್ ನಜೀರಣ್ಣರ ಹೆಂಡತಿ ಮಾಬಕ್ಕರು ಸಹ ‘ಹೊನ್ನೂರಪ್ಪ ಎಂತಹ ಸೀರೆ ತಂದಿದ್ದಾನೆ, ನಮ್ಮನೆಯವರಿಗೆ ಅಂಥ ಸೀರೆ ಸಿಗುವುದೇ ಇಲ್ಲ’ ಎಂದು ಗಂಡನ ಸೋಟೆ ತಿವಿದದ್ದು ನೆನಪಾಯಿತು. ಗುಲಗಂಜಿ ಗಾತ್ರದ ಕಣ್ಣೀರ ಹನಿಯೊಂದು ಶರ್ಪಜ್ಜಿಯ ಕಣ್ಣಿಂದ ಹೊರಟು ಕೆಳ ರೆಪ್ಪೆಯ ಮೇಲೆ ಜೋಕಾಲಿಯಾಡಿ, ಕೆನ್ನೆಯ ಸುಕ್ಕು ಚರ್ಮದ ಮೇಲೆ ಉರುಳಿ ಬಿತ್ತು.

ಸಾಹುಕಾರ್ ನಜೀರಣ್ಣರ ಮಗ ಬಾಬು ಎಂದರೆ ಶರ್ಪಜ್ಜಿಗೆ ಪ್ರಾಣ. ಅವನೂ ನಬಿ ಇಬ್ಬರೂ ಒಂದೇ ವಾರಗೆಯವರಾಗಿದ್ದರು. ತನ್ನ ಸುಖದುಃಖಗಳನ್ನು ಶರ್ಪಜ್ಜಿ ಬಾಬು ಬಳಿ ಹೇಳಿಕೊಳ್ಳುತ್ತಿದ್ದಳು. ‘ಮೊಮ್ಮಗ್ನೆ, ಬಾಬು, ನನ್ನ ಸೀರೆಯೆಲ್ಲ ಹರ್ದೋಗಿದವೆ. ನಿನ್ನ ಜೊತೆಗಾರ ನಬಿಗೇಳೋ ಒಂದು ಸೀರೆ ತಂದುಕೊಡ್ಲಿ’ ಎಂದು ಹೇಳಿದ್ದಳು.

ಬಾಬು ಸ್ನೇಹಜೀವಿಯೂ ಒಳ್ಳೆ ಮಾತುಗಾರನೂ ಕಿಲಾಡಿಯೂ ಆಗಿದ್ದು ನಬಿಯ ಮನಸ್ಸಿಗೆ ನಾಟುವಂತೆ ಹೇಳಿದ. ಇನ್ನು ತಂದುಕೊಡದೆ ಹೋದರೆ ಬಾಬು ತನ್ನ ಮರ್ಯಾದೆ ಕಳೆಯುವುದರಲ್ಲಿ ಅನುಮಾನವಿಲ್ಲವೆಂದು ನಬಿ ಕೂಡಲೆ ಬಾಬಣ್ಣ, ಈ ಹಿರೇರಬ್ಬಕ್ಕೆ ತರ್ತೀನಿ, ಇಷ್ಟೊತ್ತಿಗೆ ತಂದ್ಕೊಡ್ತಿದ್ದೆ.

ಆಶಮ್ಮನಿಗೆ ಹೆದರಿ ತಂದುಲ್ಲ ಅಷ್ಟೇಯ. ದೇವರಾಣೆ ಎಂದು ಮಾತು ಕೊಟ್ಟ. ಈ ವಿಷಯವನ್ನು ನಬಿ ಆಶಮ್ಮನಿಗೆ ಹೇಳದೆ ಬಾಬುಗೆ ಮಾತ್ರ ಹೇಳಿದ್ದ. ತಾಯಿಗೇನಾದರೂ ಸೀರೆ ತಂದರೆ ಆಶಮ್ಮ ತೆಕ್ಮುಂದೆ ಬೀಳುವುದು ಖಾತ್ರಿ ಇತ್ತು.

ಹಿರಿಯರ ಹಬ್ಬಕ್ಕೆ ದುಡ್ಡು ಹೊಂದಿಸಿಕೊಂಡ ನಬಿ ಸಾಹುಕಾರರ ಅಂಗಡಿಗೆ ಸಾಮಾನು ತರಲು ದಾವಣಗೆರೆಗೆ ಹೋದಾಗ ಸಮಯ ಮಾಡಿಕೊಂಡು ಎರಡು ಸೀರೆ, ಪಂಚೆ, ಶರ್ಟಿನ ಬಟ್ಟೆ ಮತ್ತು ಖಾಜಾನ ಅಳತೆಗೆ ಒಂದು ಶರ್ಟು, ನಿಕ್ಕರಿನ ಬಟ್ಟೆ ಖರೀದಿಸಿ ತಂದ. ಎರಡು ಸೀರೆಗಳಲ್ಲಿ ಒಂದು ದೊಡ್ಡ ಹೂವಿನ ಪ್ರಿಂಟಿರುವ ವಾಯಲ್ ಸೀರೆ ಮತ್ತೊಂದು ನೀಲಿ ಬಣ್ಣದ ಕಡ್ಡಿ ಸೀರೆ ಖರೀದಿಸಿದ್ದ.

ವಾಯಲ್ ಸೀರೆ ಹೆಂಡತಿಗೂ ಕಡ್ಡಿ ಸೀರೆ ತಾಯಿಗೂ ಆಗುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿತ್ತು. ಕಡ್ಡಿ ಸೀರೆಗಿಂತಲೂ ವಾಯಲ್ ಸೀರೆಗೆ ಹೆಚ್ಚು ದುಡ್ಡು ಕೊಡಬೇಕಾಯಿತು. ಆದರೆ ಯಾಕೋ ಏನೋ ಕಡ್ಡಿಸೀರೆಯೇ ಆಕರ್ಷಕವಾಗಿದ್ದು ಮುಂದೆ ಒದಗಬಹುದಾದ ಯಾವುದೋ ಆಘಾತಕ್ಕೆ ಮುನ್ನುಡಿಯಂತೆ ನಬಿಗೆ ಕಾಣಿಸತೊಡಗಿತು.

ಹಿರಿಯರ ಹಬ್ಬ ಬಂತು. ಕುರಿಕಣ್ಣಿನ ಟೀಪಣ್ಣ ಕುರಿ ಕೊಯ್ದು ಪಾಲಾಕಿದ್ದ. ಮನೆಗೆ ಒಂದು ಪಾಲು ತಂದು ಕೊಟ್ಟ ನಬಿ. ಶರ್ಪಜ್ಜಿ ನಿಧಾನಕ್ಕೆ ಅಲೆದಾಡಿಕೊಂಡು ಊರ್ಮಂಜನ್ನು ತಂದಳು. ಆಶಮ್ಮ ಶರ್ಪಜ್ಜಿಯನ್ನು ಅಡಿಗೆ ಮಾಡಲು ಬಿಡುತ್ತಿರಲಿಲ್ಲ. ಮಗನ ಮದುವೆಯಾದಂದಿನಿಂದ ಶರ್ಪಜ್ಜಿ ಅಡಿಗೆಮನೆಯ ಒಳಗೇ ಬಂದಿರಲಿಲ್ಲ. ಶರ್ಪಜ್ಜಿಯ ಅಡಿಗೆ ರುಚಿಹೀನವೆಂದು ಆಶಮ್ಮ ಊರಲ್ಲೆಲ್ಲ ಸಾರಿದ್ದಳು.

ಅಡಿಗೆ ಮನೆಯಲ್ಲಿ ಶರ್ಪಜ್ಜಿ ಊರ್ಮಂಜು ಬಳಿದ ಒಂದು ಮೂಲೆಯಲ್ಲಿ ಸಣ್ಣ ಜಮಖಾನವನ್ನು ಹಾಸಿ, ಆಶಮ್ಮ ಓದಿಕೆಗಾಗಿ ಒಂದೊಂದೇ ತಟ್ಟೆಗಳನ್ನು ತಂದಿಟ್ಟಳು. ಒಂದು ತಟ್ಟೆಯಲ್ಲಿ ಅನ್ನ ಹಾಕಿ ಮೇಲೆ ಮಾಂಸದ ಸಾರನ್ನು ಬಿಟ್ಟಿದ್ದಳು. ಅನ್ನದಲ್ಲಿ ಸಾರೆಲ್ಲ ಇಳಿದುಹೋಗಿ ಬರೀ ನಾಲ್ಕಾರು ಮಾಂಸದ ತುಂಡುಗಳು ಅನ್ನದ ಮೇಲೆ ಕಾಣುತ್ತಿದ್ದವು. ಮತ್ತೊಂದು ತಟ್ಟೆಯಲ್ಲಿ ಅಪರೂಪಕ್ಕೆ ಮಾಡುತ್ತಿದ್ದ ಚಪಾತಿಗಳು, ಮಲೀದ ಇಟ್ಟಿದ್ದಳು.

ಮಗದೊಂದು ತಟ್ಟೆಯಲ್ಲಿ ಬೀಡಿ, ಬೆಂಕಿಪಟ್ಟಣ, ತಂಬಾಕು, ಕಡ್ಡಿಪುಡಿ ಇಡಲಾಗಿತ್ತು. ಒಂದು ಸಿಲವಾರದ ಕಪ್ಪಿನಲ್ಲಿ ಅಕ್ಕಿ ಹಾಕಿ ಅದರಲ್ಲಿ ಒಂದು ಕಟ್ಟು ಊದುಬತ್ತಿ ಹಚ್ಚಿ ಇಟ್ಟಿದ್ದಳು. ಒಂದು ಮಣ್ಣಿನ ತಟ್ಟೆಯಲ್ಲಿ ಕೆಂಡ ಮತ್ತು ಇದ್ದಿಲುಗಳನ್ನು ಹಾಕಿ ಲೋಬಾನದ ಪುಡಿಯನ್ನು ಉದುರಿಸಲಾಗಿತ್ತು. ಊದಿನ ಕಡ್ಡಿ ಮತ್ತು ಲೋಬಾನದ ಹೊಗೆ ಮನೆಯಲ್ಲೆಲ್ಲ ಹಬ್ಬಿ ಘಮಘಮಿಸುತ್ತಿತ್ತು. ಈ ಘಮಲು ಹಬ್ಬದ ಸಂಭ್ರಮಕ್ಕೆ ಭಕ್ತಿಭಾವವನ್ನು ಬೆರೆಸಿತ್ತು.

ಖಾಜಾನಿಗೆ ಮಾತ್ರ ಏನನ್ನೂ ತಿನ್ನುವಂತಿರಲಿಲ್ಲ. ರುಚಿ ನೋಡುವಂತೆಯೂ ಇರಲಿಲ್ಲ. ಓದಿಕೆ ಆಗದೆ ಏನನ್ನೂ ಬಾಯಿಗೆ ಹಾಕಕೂಡದೆಂದೂ, ತಿಂದರೆ ಎಂಜಲಾಗುತ್ತದೆಂದೂ, ಈಗಾಗಲೇ ಆಶಮ್ಮ ಸುಗ್ರೀವಾಜ್ಞೆ ಹೊರಡಿಸಿ ತಪ್ಪಿದರೆ ಕಡಿಮೆ ಎಂದರೂ ಚರ್ಮ ಸುಲಿಯುವುದಾಗಿ ಪ್ರಕಟಪಡಿಸಿದ್ದಳು.

ಇನ್ನೇನು ಓದಿಕೆ (ಪಾತೆಹಾ) ಮಾಡಲು ದಾದಾಮಿಯಾ ಸಾಹೇಬರು ಬರುವವರಿದ್ದರು. ಹಬ್ಬಕ್ಕೆ ಬಟ್ಟೆ ಬಗ್ಗೆ ನಬಿ ಏನೂ ಹೇಳಿರಲಿಲ್ಲವಾದ್ದರಿಂದ ಆಶಮ್ಮ ಮೌನ ಮುರಿದಿರಲಿಲ್ಲ. ಹೊಸ ಬಟ್ಟೆ ಇಲ್ಲದ್ದರಿಂದ ಕೋಪವಿದ್ದರೂ ಯಾರಿಗೂ ಇಲ್ಲವಲ್ಲ ಎಂದು ಸಮಾಧಾನ ತಂದುಕೊಂಡಿದ್ದಳು.

ಹಬ್ಬಕ್ಕೆ ತಂದ ಬಟ್ಟೆಗಳನ್ನು ನಬಿ ಸಾಹುಕಾರ ನಜೀರಣ್ಣರ ಮನೆಯಲ್ಲಿಟ್ಟಿದ್ದ. ಇನ್ನೇನು ಓದಿಕೆಯ ಸಮಯ ಹತ್ತಿರ ಬಂದಾಗ ಹೊಸ ಬಟ್ಟೆಗಳನ್ನು ತಂದು ಹೆಂಡತಿಗೆ ಏನನ್ನೂ ಹೇಳದೆ ಓದಿಕೆ ಮಾಡುವ ಜಾಗದಲ್ಲಿ ಮತ್ತೊಂದು ತಟ್ಟೆಯಲ್ಲಿ ಜೋಡಿಸತೊಡಗಿದ. ಆ ಮನೆಯಲ್ಲಿ ಒಂದು ಕಡ್ಡಿಯೂ ಆಶಮ್ಮನ ಕಣ್ಣುತಪ್ಪಿಸಿ ಕದಲುತ್ತಿರಲಿಲ್ಲ. ಅಂತಹುದರಲ್ಲಿ ನಬಿ ತಂದ ಬಟ್ಟೆಗಳು ಕೂಡಲೇ ಆಶಮ್ಮನ ಅವಗಾಹನೆಗೆ ಬಂದವು.

ತನಗೆಂದು ತಂದಿದ್ದ ವಾಯಲ್ ಸೀರೆಗಿಂತಲೂ ಶರ್ಪಜ್ಜಿಗೆಂದು ತಂದಿದ್ದ ಕಡ್ಡಿ ಸೀರೆ ಆಶಮ್ಮನ ಕಣ್ಣಿಗೆ ಅತ್ಯಾಕರ್ಷಕವಾಗಿ ಕಂಡಿತು. ಬೇಕೆಂದೇ ತನ್ನ ಗಂಡ ಈ ರೀತಿ ತಾರತಮ್ಯ ಮಾಡಿದ್ದಾನೆಂದೂ ತನಗಿಂತಲೂ ತನ್ನ ಗಂಡನಿಗೆ ತಾಯಿಯೇ ಮುಖ್ಯವೆಂದೂ ಚೀರಿದಳು.

ಬಚ್ಚಲಲ್ಲಿ ಸ್ನಾನ ಮಾಡುತ್ತಿದ್ದ ಖಾಜಾ ಅಲ್ಲೇ ಉಚ್ಚೆ ಹೊಯ್ದುಕೊಂಡ. ತನಗೆ ತಂದಿರುವ ಹೊಸ ಬಟ್ಟೆಗಳನ್ನು ನೋಡುವ ಕಾತುರ ಇಂಗಿಯೇ ಹೋಯಿತವನಿಗೆ. ಹಿರಿಯರ ಹಬ್ಬದ ದಿನವೂ ರಾಣಾರಂಪು ಮಾಡ್ತಾಳಿವಳು ಅಂತ ಶರ್ಪಜ್ಜಿ ಪಕ್ಕದ ಅಡಬಿಸಾಬರ ಮನೆಗೋದಳು.

‘ಏನು? ನನಿಗೆಂತಹದ್ದೋ ಮಸಿ ಅರಿವೆ ಅಂತ ಸೀರೆ ತಂದಿದಿ. ನಿನ್ನಮ್ಮನಿಗೆ ಹೈಕ್ಲಾಸ್ ಸೀರೆ ತಂದಿದ್ದೀಯಲ್ಲ! ಎಲ್ಲಿಟ್ಟಿದ್ದೀಯ ಗ್ಯಾನ. ನಿನ್ನೋಸಡಗ. ನಿನ್ನ ಒಡ್ಲುರಿದು ಕುಂದುರ್ಲಿ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಾಕುವ ನಿನ್ನ ಮನೆಹಾಳು ಬುದ್ಧಿಗೆ ಬೆಂಕಿ ಹಾಕ’ – ಮುಂತಾಗಿ ಬೈಗುಳಗಳು ಪುಂಖಾನುಪುಂಖವಾಗಿ ಆಶಮ್ಮನ ಬಾಯಿಂದ ಹೊರಟವು.

ಎಲ್ಲರ ಮನೆಯಲ್ಲಿ ಸಂತೋಷ ಸಂಭ್ರಮಗಳಿದ್ದರೆ ಶರ್ಪಜ್ಜಿ ಮನೆಯಲ್ಲಿ ಆಶಮ್ಮ ಯುದ್ಧ ಸಾರಿದ್ದಳು. ಇಲ್ಲಿ ಪಾತ್ರೆಗಳನ್ನು ಎತ್ತಿ ಹಾಕುತ್ತ, ಅಲ್ಲಿ ಪಾತ್ರೆಗಳನ್ನು ಕಾಲಲ್ಲಿ ಹೊಡೆಯುತ್ತ ಮನೆಯನ್ನು ರಣರಂಗ ಮಾಡಿದಳು.

ಅದೃಷ್ಟಕ್ಕೆ ಆ ಸಮಯಕ್ಕೆ ಸರಿಯಾಗಿ ಓದಿಕೆ ಮಾಡಲು ಮಿಯಾ ಸಾಹೇಬರು ಮನೆಗೆ ಬಂದರು. ಉದ್ದನೆಯ ಬಿಳಿಗಡ್ಡದ ಮಿಯಾ ಸಾಹೇಬರು ತಮ್ಮ ಗಿಣಿ ಮೂಗಿನಿಂದಲೂ, ಬೊಚ್ಚು ಬಾಯಿಯಿಂದಲೂ, ಕುರಾನಿನ ಕೆಲವು ಸಾಲುಗಳನ್ನು ನೆನಪು ಮತ್ತು ಅಭ್ಯಾಸಬಲದಿಂದಲೇ ಉದ್ಧರಿಸುತ್ತ ಎದುರಿದ್ದವರನ್ನು ಗಪ್‌ಚುಪ್ ಮಾಡುವ ತಾಕತ್ತು ಹೊಂದಿದ್ದರು.

ಪಿಂಜಾರರಾದರೂ ಕುರಾನನ್ನು ಕರತಲಾಮಲಕ ಮಾಡಿಕೊಂಡು ಸುತ್ತು ಹತ್ತು ಹಳ್ಳಿಯಲ್ಲಿ ಕುರಾನ್ ಪಾಂಡಿತ್ಯದಲ್ಲಿ ಏಕಮೇವಾದ್ವಿತೀಯರಾಗಿದ್ದರು. ಕುರಾನಿನ ಸಾಲುಗಳನ್ನು ಬರೀ ಬಾಯಿಪಾಠ ಮಾಡದೆ ಜೀವನದಲ್ಲಿ ಅಳವಡಿಸಿಕೊಂಡಿದ್ದರಿಂದ ಅವರ ಮಾತಿಗೆ ಬೆಲೆಯಿತ್ತು.

‘ಹೋಗ್ಲಿ ಬಿಡಮ್ಮ, ಹಬ್ಬದ ದಿನ ಏನು ಗಲಾಟೆ. ಹಿರಿಯರ ಆತ್ಮಕ್ಕೆ ನೋವುಂಟು ಮಾಡಬಾರದು’ ಎಂದು ಆಶಮ್ಮನಿಗೆ ಹೇಳಿ ಓದಿಕೆ ಮುಗಿಸಿ ಹೊರನಡೆದರು. ಆದರೆ ಆಶಮ್ಮನ ಸಿಟ್ಟು ಸೆಡವು ಇಳಿದಿರಲಿಲ್ಲ.

ಯಾರಿಗೂ ಊಟಕ್ಕೆ ಕೊಡಲಿಲ್ಲ. ತಾನೂ ತಿನ್ನಲಿಲ್ಲ. ಪ್ರಾಣ ಹೋದರೂ ನೀನು ತಂದುರ ಕತ್ತೆ ಲದ್ದಿ ಬಣ್ಣದ ಸೀರೆ ಉಟ್ಕನದುಲ್ಲ ಎಂದು ತನ್ನ ಸೀರೆಯನ್ನು ಮೂಲೆಗೆಸೆದಳು. ಬೈಗುಳ, ಶಾಪ ಮತ್ತು ಅಳುವುದು ಕರೆಯುವುದನ್ನು ಮುಂದುವರೆಸಿದಳು. ಇಡೀ ಜಗತ್ತನ್ನು ತನ್ನ ಪ್ರತಿಸ್ಪರ್ಧಿಯೆಂಬಂತೆ ಬೈಯ್ಯತೊಡಗಿದಳು.

ಶರ್ಪಜ್ಜಿ ತನ್ನ ಅತ್ತೆ ಮಾವ ಗಂಡನನ್ನು ಮನಸ್ಸಿನಲ್ಲಿಯೇ ನೆನೆದು ಕೆಂಡದ ಮೇಲೆ ಲೋಬಾನ ಹಾಕಿ ಹಣೆಯನ್ನು ನೆಲಕ್ಕೆ ತಾಗಿಸಿ ಸಣ್ ಮಾಡಿದಳು. ನಬಿ ಮತ್ತು ಖಾಜಾರೂ ಸಹ ಶರ್ಪಜ್ಜಿಯನ್ನು ಅನುಕರಿಸಿದರು. ಆದರೆ ಆಶಮ್ಮ ಮಾತ್ರ ತನಗೆ ಸಂಬಂಧವೇ ಇಲ್ಲದಂತೆ ಧುಮುಧುಮು ಎನ್ನುತ್ತಿದ್ದಳು. ಅಂದು ರಾತ್ರಿ ಆ ಮನೆಯಲ್ಲಿ ಯಾರಿಗೂ ನಿದ್ದೆ ಬರಲಿಲ್ಲ.

ಮಗ ತಂದ ಸೀರೆ ಎಂದು ಶರ್ಪಜ್ಜಿ ತನ್ನ ಸೀರೆಯನ್ನು ಟ್ರಂಕಿನಲ್ಲಿ ತೆಗೆದಿಟ್ಟಳು. ಕಡ್ಡಿ ಸೀರೆಯು ಮೃದುವಾಗಿ ಬೆಣ್ಣೆಯಂತಿತ್ತು. ಇಷ್ಟು ದೊಡ್ಡ ಸೀರೆ ಯಾಕೆ ತಂದೆಯೋ ಎಂದು ಮಗನ ಮೇಲೆ ಸಿಟ್ಸಿಟ್ಟಾದಳು.

‘ಇಲ್ಲವ್ವ ಆಕೀದು ಬಾಳ ರೇಟಿನ ಸೀರೆ. ನಿನ್ನದೇ ಕಡಿಮೆ ದುಡ್ಡಿಂದು. ಹೊಟ್ಟೆಕಿಚ್ಚಿಗೆ ಹಂಗೆ ಮಾಡ್ತಳೆ’ ಎಂದು ಕಿವಿಯಲ್ಲಿ ಉಸುರಿದ. ‘ಇಂಥವಳನ್ನು ಕಟ್ಟಿಕೊಂಡು ನೀನೇನು ಸುಖಪಡ್ತೀಯೋ ನಬಿ’ ಎಂದು ಶರ್ಪಜ್ಜಿ ನಬಿಯ ತಲೆ ನೇವರಿಸಿದಳು. ತೊಡೆಯ ಮೇಲೆ ಖಾಜಾ ಕೂತಿದ್ದ. ಅವಳ ಹೃದಯ ಒಡೆದುಹೋಗಿತ್ತು.

ಹಬ್ಬದ ದಿನವೂ ಆಶಮ್ಮ ಮನೆಯ ಮರ್ಯಾದೆಯನ್ನು ಬಹಿರಂಗವಾಗಿ ಹರಾಜು ಹಾಕಿದ್ದಳು. ನಬಿಯ ಮನೆ ಪರಿಸ್ಥಿತಿ ಕಂಡು ಕೆಲವರು ಅಯ್ಯೋ ಎಂದರು, ಕೆಲವರು ನಕ್ಕರು. ಹಬ್ಬದ ನಂತರದ ದಿನಗಳು ಬೇಸರದಿಂದ ಕೂಡಿದ್ದವು.

ತನ್ನ ತಾಯಿಗೆ ಒಂದು ಸೀರೆಯನ್ನೂ ಸಂತೋಷದಿಂದ ತಂದುಕೊಡುವುದಾಗಲಿಲ್ಲ ಎಂದು ನಬಿ ವ್ಯಗ್ರನಾಗಿದ್ದ. ದಿನದಲ್ಲಿ ಯಾವಾಗಲಾದರೊಮ್ಮೆ ಮನೆಗೆ ಬಂದುಹೋಗುತ್ತಿದ್ದ. ಶರ್ಪಜ್ಜಿ ಹಬ್ಬದ ನಂತರ ನೆಲ ಹಿಡಿದುಬಿಟ್ಟಳು. ಮಗ ಮನೆಗೆ ಬರುತ್ತಿಲ್ಲ ಎಂಬುದು ಅವಳ ವ್ಯಸನವಾಗಿತ್ತು.

ಒಂದೆರಡು ಬಾರಿ ಮಾತ್ರ ತಾನು ಸಾಹುಕಾರ್ ನಜೀರಣ್ಣರ ಮನೆಗೆ ಹೋಗಿ ಬಂದಳು. ನಜೀರಣ್ಣರ ಮಗ ಬಾಬಣ್ಣ ಒಂದೆರಡು ಬಾರಿ ಶರ್ಪಜ್ಜಿ ಮನೆಗೂ ಬಂದು ಹೋಗಿದ್ದ. ಬಾಬಣ್ಣನೊಡನೆ ಶರ್ಪಜ್ಜಿ ತನ್ನೆಲ್ಲ ದುಃಖವನ್ನು ತೋಡಿಕೊಂಡಳು. ‘ಹಬ್ಬ ಅನ್ಲುಲ್ಲ, ಹರಿದಿನ ಅನ್ಲುಲ್ಲ.

ಹಿರೇರ ಹಬ್ಬದ ದಿನಾನೂ ಹಂಗೆ ಮಾಡಿ, ಹಿರೇರ ಆತ್ಮಗಳಿಗೆ ಅವಮಾನ ಮಾಡಿದ್ಳು ಬಾಬಣ್ಣ. ಹಿರೇರು ಯಾರೂ ನಮ್ಮನ್ನ ಕ್ಷಮಿಸಲ್ಲ. ಯಾರ್ಯಾರು ಹೆಂಗೆಂಗೆ ಸಾಪಳಿಸಿದರೋ ಗೊತ್ತುಲ್ಲ. ನಮಿಗೆ ಕ್ಷಮೆ ಇಲ್ಲ ಬಾಬಣ್ಣ. ಇಂಥದುನ್ನೋಡಿಕೆಂತ ಬಾಳ ದಿನ ಬದುಕಿರಬಾರ್ದು’ ಎಂದು ದುಃಖಿಸಿದಳು.

ಕೊನೆಯ ಮಾತು ಅವಳ ದುಃಖದ ಮಾತು ಮಾತ್ರ ಆಗಿರದೆ, ಆಸೆ ಸಹ ಆಗಿತ್ತೆಂದು ಬಾಬುಗೆ ತೋರಿತು. ನನ್ನ ಜೀವವೇ ಚಂಚಳಾದಂಗಾಯ್ತಲ್ಲಜ್ಜಿ. ಓಳ್ತು ಅನ್ನು. ಅಂಗೆ ಮಾತಾಡ್ಬಾರ್ದು ಎಂದ ಬಾಬು. ಮನೆಗೆ ವಾಪಸು ಹೋಗ್ಬೇಕಾದ್ರೆ ಎಂಥ ವೇಳೆಯಲ್ಲೂ ಶರ್ಪಜ್ಜಿ ನಕ್ಕು ಹೋಗುತ್ತಿದ್ದಳು.

ಈ ಬಾರಿ ಶರ್ಪಜ್ಜಿ ನಗಲಿಲ್ಲ. ಬಾಬುಗೆ ಬಾಳ ಸಂಕಟ ಆಯ್ತು. ಶರ್ಪಜ್ಜಿ ಬಾಳ ದಿನ ಬದುಕಿರಲಿ ಎಂದು ಮಹಬೂಬ್ ಸುಬಾನಿ ದರಗಕ್ಕೆ ಸಕ್ಕರೆ ಓದಿಸುವ ಹರಕೆ ಹೇಳಿಕೊಂಡು ಸಾಯಿಬಾಬಾನನ್ನೂ ಸ್ಮರಿಸಿಕೊಂಡ.

ಹಬ್ಬ ಮುಗಿದು ಹದಿನೈದು ದಿನಕ್ಕೆ ಸರಿಯಾಗಿ ಶರ್ಪಜ್ಜಿ ತೀರಿಕೊಂಡಳು. ಶರ್ಪಜ್ಜಿಯ ಅಂತಿಮ ದರ್ಶನ ಪಡೆಯಲು ಬಂದವರೆಲ್ಲರೂ ಮನಸ್ಸಿನಲ್ಲಿ ಅಂದುಕೊಂಡರೂ, ‘ಶರ್ಪಜ್ಜಿಗೆ ಸೊಸೆ ಒಳ್ಳೆಯವಳು ಸಿಗಲಿಲ್ಲ. ಸೊಸೆ ಸರಿ ಇದ್ದರೆ ಇನ್ನೂ ಹತ್ತು ವರ್ಷ ಯಾವ ಮುಲಾಜಿಲ್ಲದೆ ಬದುಕುತ್ತಿದ್ದಳು’ ಎಂದು ಪಿಸುಗುಡುತ್ತಿದ್ದ ಎಲ್ಲರ ಮಧ್ಯೆ ಹಟ್ಟಿಯ ಹಳ್ಳಳ್ಳಿ ಹನುಮವ್ವ ಜೋರಾಗಿ ಅಂದೇಬಿಟ್ಟಳು.

‘ಬಿಡವ್ವ ಅತ್ತೆನೇ ನುಂಗಿ ನೊಣೆದೆ. ತವರಿಗೆ ಬಂದಿದ್ದ ಚಳ್ಳಕೆರೆ ಬುಡ್ಡಮ್ಮ ‘ಸೈ ಬಿಡವ್ವ. ಹಿರಿಯರಬ್ಬದ ದಿನ ಸೀರೆಗೆ ಹೊಡ್ದಾಡಿದೆಂತಲ್ಲವ್ವ. ಮುಂದೆ ನಿನಗೂ ಒಬ್ಬ ಸೊಸೆ ಬರ್ತಳೆ ತಗ. ಮಗನ ಮದುವೆ ಮಾಡ್ಲೇಬೇಕಲ್ಲ?’ ಎಂದಳು.

ಗರ ಬಡಿದಂತಾಗಿದ್ದ ನಬಿ ಮತ್ತು ಖಾಜಾ ಇಬ್ಬರೂ ಮೌನಕ್ಕೆ ಶರಣಾಗಿದ್ದರು. ಅವರಿಗೆ ಅತ್ತೂ ಅತ್ತೂ ಕಣ್ಣೀರು ಬತ್ತಿ ಹೋಗಿದ್ದವು. ಸಾವಿಗೆ ಹೆದರಿದಂತಿದ್ದ ಅವರು ಮನುಷ್ಯನ ನೀಚತನಕ್ಕೂ ಹೆದರಿದಂತಿತ್ತು.

ಶರ್ಪಜ್ಜಿ ತೀರಿಕೊಂಡು ಒಂದು ವಾರವಾಗಿತ್ತು. ಹತ್ತನೇ ದಿನದ ಕಾರ್ಯವನ್ನು ಮಾಡಲು ನಬಿ, ಕುರಿಕಣ್ಣಿನ ಟೀಪು, ಬಾಬಣ್ಣ ಸಮಾಲೋಚಿಸುತ್ತಿದ್ದರು. ಆಶಮ್ಮ ತನ್ನತ್ತೆಯ ಟ್ರಂಕನ್ನು ತೆಗೆದು ಕುತೂಹಲಭರಿತಳಾಗಿ ಏನಿದೆಯೆಂದು ನೋಡಲು ಬಯಸಿದ್ದಳು. ಖಾಜಾ ಅವಳೆದುರು ಕೂತಿದ್ದ. ಮನೆ ನಿಶ್ಶಬ್ದವಾಗಿತ್ತು.

ಶರ್ಪಜ್ಜಿಯ ಎಲೆಅಡಿಕೆ ಚೀಲದಲ್ಲಿದ್ದ ಬೀಗದ ಕೈಯನ್ನು ತೆಗೆದುಕೊಂಡು ಆಶಮ್ಮ ಟ್ರಂಕನ್ನು ತೆರೆದಳು. ಟ್ರಂಕು ತೆರೆಯುತ್ತಿದ್ದಂತೆ ಆಶಮ್ಮನಿಗೆ ಶರ್ಪಜ್ಜಿಯ ಕಡ್ಡಿ ಸೀರೆಯ ಮೇಲಿಟ್ಟಿದ್ದ ಒಂದು ಪತ್ರ ಸಿಕ್ಕಿತು. ಸಾಹುಕಾರ್ ನಜೀರಣ್ಣನ ಮಗ ಬಾಬುನ ಕೈ ಬರಹದಲ್ಲಿದ್ದ ಅದು ಶರ್ಪಜ್ಜಿ ಆಶಮ್ಮನಿಗೆ ಬರೆಸಿದ ಪತ್ರವಾಗಿತ್ತು.

‘ನನ್ನದೊಂದು ಬೆಳ್ಳಿಯ ಡಾಬು ಐತೆ. ಅದ್ನ ನೀನೇ ತಗ. ಮೊನ್ನೆ ತಂದ ಸೀರೆ ಬಾಳ ದೊಡ್ಡ ಸೀರೆ. ನನಗೆ ಬ್ಯಾಡ. ಅದನ್ನ ನೀನೇ ತಗ. ಅವಾಗ ಇವಾಗ ಕೂಡಿಟ್ಟಿದ್ದು ನೂರೈವತ್ತು ರೂಪಾಯಿ ಐತೆ. ಒಡವೆ ಮಾಡಿಸ್ಕ. ನಬಿ, ಖಾಜಾನ್ನ ಚನ್ನಾಗಿ ನೋಡಿಕೊಳ್ಳವ್ವ. ಅಪ್ಪ ಮಗನಿಗೆ ಮೀನಿನ ಸಾರು ಅಂದ್ರೆ ಬೊಲಾಸೆ. ಅವಾಗವಾಗ ಮಾಡಿ ಉಣ್ಣುಸವ್ವ’.

ಅಷ್ಟೇ ಇದ್ದದ್ದು ಆ ಪತ್ರದಲ್ಲಿ. ಇಷ್ಟನ್ನು ಓದುವಷ್ಟರಲ್ಲಿ ಆಶಮ್ಮನ ಕಣ್ಣಲ್ಲಿ ನೀರು ಒಸರತೊಡಗಿದವು. ಶರ್ಪಜ್ಜಿ ಬಂದು ಆಶಮ್ಮನ ಹೆಗಲು–ಮುಖವನ್ನು ಸವರಿದಂತಾಯಿತು. ಗಂಟಲು ಕಟ್ಟಿತು. ಮೂಗು ಸಡಿಲವಾಯಿತು. ತುಟಿಗಳು ಸ್ವಲ್ಪ ಸಂಕುಚಿತಗೊಂಡಂತೆಯೂ, ಬಿಗಿಯಾದಂತೆಯೂ, ಕಂಪಿಸಿದಂತೆಯೂ ಆಯಿತು. ಕಣ್ಣೀರು ತಟತಟ ಉದುರತೊಡಗಿದವು. ಸೆರಗಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದಳು.

ಎದುರಿಗೇ ಕೂತಿದ್ದ ಖಾಜ, ತನ್ನ ತಾಯಿ ವಿನಾ ಕಾರಣ ಅಳುವುದನ್ನು ಕಂಡು ಆಶ್ಚರ್ಯಪಟ್ಟವನಂತೆ ‘ಯಾಕವ್ವ ಅಳ್ತೀಯ? ಅಪ್ಪ ಬೈಯ್ದಿಲ್ಲ, ಹೊಡೆದಿಲ್ಲ. ಎಲ್ಲಾದ್ರೂ ಬಿದ್ದು ಬಂದೇನವ್ವ?’ ಎಂದ. ಆಶಮ್ಮ ಯಾವ ಪ್ರಶ್ನೆಗೂ ಉತ್ತರಿಸದೆ ಇನ್ನೂ ಜೋರಾಗಿ ಅಳತೊಡಗಿದಳು.

ಯೋಚಿಸುತ್ತ ಕೂತಿದ್ದ ನಬಿ ತಟ್ಟನೆ ಎದ್ದು ಬಂದು ಆಶಮ್ಮನ ಭುಜ ಹಿಡಿದು ಅಲ್ಲಾಡಿಸಿ ಯಾಕೆ, ‘ಯಾಕೆ ಅಳ್ತೀಯ?’ ಎಂದು ಪ್ರಶ್ನಿಸಿದ. ಹಿಂದೆಯೇ ಕುರಿಕಣ್ಣಿನ ಟೀಪಣ್ಣ, ಬಾಬಣ್ಣ ಅವಸರಿಸಿಕೊಂಡು ಬಂದು ಬೆಪ್ಪಾಗಿ ನಿಂತರು. ಆಶಮ್ಮ ನಬಿ ಮತ್ತು ಖಾಜಾನನ್ನು ಅಪ್ಪಿಕೊಂಡು ಹುಚ್ಚಿಯಂತೆ ಅಳತೊಡಗಿದಳು. ಅವಳ ಮುಖದಲ್ಲಿ ಪಶ್ಚಾತ್ತಾಪ ಮನೆಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT