ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸ್ತ್ರಾಣ ಪುರಾಣ

ಮಂದಹಾಸ
Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ಹಣ್ಣನ್ನು ಕೊಳ್ಳಲು ಸಾಲಗಾಮೆ ಗೇಟ್ ಬಳಿಯ ಮಾಮೂಲಿ ಅಂಗಡಿಗೆ ಹೋದೆ. ಅಂಗಡಿಯ ಅರ್ಧಭಾಗ ಖಾಲಿ ಮಾಡಿ ಅದರಲ್ಲಿ ವಿವಿಧ ಸ್ಟೇಜಿನ ಹೆಲ್ಮಟ್ಟನ್ನು ಇಟ್ಟಿರುವುದು ಕಂಡು ಬಂತು.

“ಇದು ಹೆಲ್ಮೆಟ್ ಸೀಸನ್ ಸಾರ್’ ಅಂದ ಅಂಗಡಿಯವ.
ಮಾವಿನಹಣ್ಣು, ಕಿತ್ತಳೆಹಣ್ಣು, ಹಲಸಿನಹಣ್ಣಿನ ಸೀಸನ್ ಎಂದೆಲ್ಲಾ ಹೇಳಿ ಅಭ್ಯಾಸವಾಗಿದ್ದ ಆತನ ಬಾಯಲ್ಲಿ ಇಂಥ ಮಾತು ಸಹಜವೆ ಆಗಿತ್ತು.
‘ಹೇಗಿದೆ ಬಿಜಿನೆಸ್?’ ಎಂದೆ.

‘ಪರ್ವಾಗಿಲ್ಲ ಸಾರ್. ಆದ್ರೆ ಮೂರು ದಿನದಿಂದ ಇಡೀ ಬೀದಿ ತುಂಬಾ ಹೆಲ್ಮೆಟ್‌ನವರೇ ಆಗ್ಬಿಟ್ಟಿದ್ದಾರೆ. ಈಗ ಸ್ವಲ್ಪ ಡಲ್ ಆಗಿದೆ’ ಎಂದ.
ಹಾಗೆಯೇ ನೋಡಿದೆ. ಇಡೀ ರಸ್ತೆಯುದ್ದಕ್ಕೂ ಸಂತೆಯಲ್ಲಿ ತರಕಾರಿ ಗುಡ್ಡೆ ಹಾಕಿದಂತೆ ಹೆಲ್ಮೆಟ್ಟುಗಳ ರಾಶಿ! ತಕ್ಷಣ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯದ ವಿಷಯ ಜ್ಞಾಪಕಕ್ಕೆ ಬಂತು. ಪಕ್ಕದಲ್ಲಿಯ ತಗಡಿನ ಹೊದಿಕೆಯ ಶೆಡ್ ಹೊರಭಾಗದಲ್ಲಿ ‘ರೈನ್‌ಬೋ ಹೆಲ್ಮೆಟ್’ ಎಂಬ ನಾಮಫಲಕ ಕಂಡು, ಆ ಅಂಗಡಿಯೆಡೆಗೆ ಧಾವಿಸಿದೆ. ಅಲ್ಲಿ ನೋಡಿದರೆ ಗೆಳೆಯ ರಂಗಣ್ಣ!

‘ಏನೋ ಇದು ರಂಗಣ್ಣ’ ಎಂದೆ.
‘ನಾನು ಸೀಸನ್ ಗುರು ಅಂಥ ಗೊತ್ತಿಲ್ವ!’ ಅಂದ
ನಿಜ. ಇವನೂ ಒಂಥರಾ ಸೀಸನ್ ಮಾಸ್ಟ್ರು. ದೀಪಾವಳೀಲಿ ಪಟಾಕಿ, ಜಾತ್ರೇಲಿ ಖರ್ಜೂರ, ಗಣಪತಿ ಹಬ್ಬದಲ್ಲಿ  ಗೌರಿಗಣೇಶ... ಹೀಗೆ ಅವನ ವ್ಯಾಪಾರ.
‘ಹೆಲ್ಮೆಟ್ ಬೇಕಿತ್ತಾ?’ ಎಂದ.

‘ಹೆಲ್ಮೆಟ್ ನಂಗಲ್ಲಾ. ನಮ್ಮ ಮನೆಯವ್ರಿಗೆ’.
‘ಸರಿ. ಅವರನ್ನೇ ಕರ್ಕೊಂಡು ಬಾ’.
‘ಅವರು ಯಾಕೋ? ನೀನೇ ಒಂದು ಕೊಡು ಮಾರಾಯ’ ಎಂದೆ.
‘ಹಾಗಲ್ಲ. ಈಗ ಆಫರ್ ಇಟ್ಟಿದ್ದೇನೆ’.

‘ಏನ್ ಆಫರ್?’
‘ನಮ್ಮ ಅಂಗಡಿ ಹೆಸ್ರು ನೋಡು. ರೈನ್‌ಬೋ ಅಂದ್ರೆ ಕಾಮನಬಿಲ್ಲು. ಏಳು ಬಣ್ಣದ ಹೆಲ್ಮೆಟ್ ವಿತ್ ಡಿಫರೆಂಟ್ ಡಿಸೈನ್ ಇಲ್ಲಿದೆ. ಏಳು ತಗೊಂಡ್ರೆ ಒಂದು ಬಿಳಿ ಬಣ್ಣದ ಹೆಲ್ಮೆಟ್ ಫ್ರೀ’ ಎಂದ.
‘ಅಷ್ಟೊಂದೆಲ್ಲಾ ಯಾಕೋ?’ ಎಂದ.

‘ಯಾಕೆ ಅಂದ್ರೆ... ಸ್ಯಾರಿಗೆ ಮ್ಯಾಚ್ ಆಗೋದು ಬೇಡ್ವ. ಅದಕ್ಕೆ ಇಷ್ಟು ಕಲರ್ಸ್‌ನಲ್ಲಿ ಒಂದಲ್ಲಾ ಒಂದು ಕಲರ್ ಮ್ಯಾಚ್ ಆಗುತ್ತೆ’.
‘ಆದ್ರೆ ಇಷ್ಟೊಂದು ಇಡೋಕೆ ಜಾಗ ಬೇಡ್ವೆನೋ?’
‘ಅಲ್ಲಿ ನೋಡು...’

ನೋಡಿದೆ. ಉದ್ದಕ್ಕೂ ಚಪ್ಪಲಿ ಸ್ಟಾಂಡ್ ರೀತಿ ಹೆಲ್ಮೆಟ್ ಸ್ಟಾಂಡ್‌ ಇಟ್ಟಿದ್ದ. ಅದರ ಪಕ್ಕದಲ್ಲಿ ನೇಮ್ ಪ್ಲೇಟ್‌ಗಳ ರೀತಿ ಪ್ಲೇಬೋರ್ಡ್‌ಗಳು.
‘ಸ್ಟಾಂಡ್ ತಗೊಂಡ್ರೆ ಪ್ಲೇಬೋರ್ಡ್ ಉಚಿತ’ ಎನ್ನುವ ಬೋರ್ಡ್ ನೋಡಿದೆ.
‘ಮೆಟ್ಟು ಬಿಡುವ, ಹೆಲ್ಮೆಟ್ ಇಡುವ ಸ್ಥಳ’ –ಕವಿ ಹೃದಯದ ರಂಗಣ್ಣ ಅಲ್ಲೂ ಪ್ರಾಸ ಹುಡುಕಿದ್ದ.
‘ಮೆಚ್ಚಿದೆ ನಿನ್ನ ಪ್ರಾಸ’ ಎಂದೆ.

‘ಪ್ರಾಸ ಇದೆ. ಅದ್ರೆ ಅಲ್ಲೊಂದು ಎಡ್ವಟ್ಟಾಗಿದೆ. ಕನ್ನಡದಲ್ಲಿ ಓಕೆ. ಇಂಗ್ಲೀಷಿನಲ್ಲಿ ಓದಿದ್ರೆ Hell mate ಆಗಿ ನರಕದ ಒಡನಾಡಿ ಅಂಥ ಅರ್ಥ ಆಗ್ಬಿಡುತ್ತೆ’.
‘ಹಾಗೇನೂ ಇಲ್ಲ ಕಣೋ. ನರಕದಂಥ ರಸ್ತೆಗಳಿಗೆ ಇದು ಅತ್ಯುತ್ತಮ ಒಡನಾಡಿ ಅಂಥ ಅರ್ಥನೂ ಆಗುತ್ತೆ’ ಎಂದೆ.
‘ಹೌದು. ನಿನ್ನ ಪಾಸಿಟಿವ್ ಆಟಿಟ್ಯೂಡ್ ಮೆಚ್ಚಿದೆ’ ಅಂದ.
‘ಆದ್ರೆ ಇದನ್ನ ಇಟ್ಕೊಂಡ್ ತಿರುಗೋಕೆ ಬೇಜಾರು ಅಷ್ಟೇ’.

‘ಅದನ್ಯಾಕೆ ಇಟ್ಕೊಂಡು ತಿರುಗ್ತೀಯಾ? ಕಟ್ಕೊಂಡು ತಿರುಗು, ಪ್ಯಾಂಟ್ ಬೆಲ್ಟ್‌ಗೆ ಒಂದು ಎಕ್‌ಸ್ಟ್ರಾ ಬಕಲ್ ಹಾಕ್ಸು’.
‘ಅದೆಲ್ಲಾ ಆಗೋಲ್ಲ’ ಅನ್ನುವಷ್ಟರಲ್ಲಿ– ‘ಹಲೋ ಹೆವೆನ್ ಮೇಟ್ಸ್’ ಎನ್ನುವ ಪರಿಚಿತ ದನಿ ಕೇಳಿಸಿತು. ಅತ್ತ ತಿರುಗಿದರೆ ಧರಣಿ! ತರಗತಿಯಲ್ಲಿ ಮೇಸ್ಟ್ರು ಕೇಳುವ ಪದಗಳಿಗೆ ಸಮಾನಾರ್ಥಕ, ವಿರುದ್ಧಾರ್ಥಕ ಪದಗಳನ್ನು ಹೇಳಿ ಮೇಸ್ಟ್ರಿಂದ ಶಹಭಾಸ್‌ಗಿರಿ ಗಿಟ್ಟಿಸಿದವ ಹೆಲ್ಮೆಟ್‌ಗೆ ವಿರುದ್ಧ ಪದ ಹುಡುಕಿದ್ದ.
‘ಏನೋ ನೀನು ಊರು ಬಿಟ್ಟಿದ್ದಿಯಂಥ ಸುದ್ದಿ ಕೇಳಿದ್ದೆ’ ಎಂದ ರಂಗಣ್ಣ.

‘ನಿಜ ಕಣೋ. ಇರಲಾರದಕ್ಕೆ ಇರುವೆ ಬಿಟ್ಕೊಂಡ್ರು ಅನ್ನೋ ಹಾಗೇ ಬ್ಯಾಂಕ್‌ನಿಂದ ವಾಲೆಂಟರಿ ತಗೊಂಡ ಮೇಲೆ ಸುಮ್ನಿರೋದು ಬಿಟ್ಟು ಚೀಟಿ ವ್ಯವಹಾರ ಮಾಡೋಕೆ ಹೋದೆ. ಮೊದಲ ಚೀಟಿ ತೆಗೆದುಕೊಂಡವರ ಹತ್ರ ಯಾವುದಕ್ಕೂ ಇರಲಿ ಅಂಥ ಅಡ್ವಾನ್ಸ್ ಚೆಕ್ ಇಸ್ಕೊಂಡಿದ್ದೆ. ಕೆಲವು ತಿಂಗಳ ಹಿಂದೆ ನಡೆದ ‘ಡೆತ್‌ನೋಟ್’ ಪ್ರಕರಣದಲ್ಲಿ ‘ಖಾಲಿ ಚೆಕ್’ ಇಸ್ಕೊಂಡರ್ನ, ಚೀಟಿ ನಡೆಸೋರ್ನ ಹುಡುಕ್ತಾ ಅವ್ರೆ ಅಂಥ ಸುದ್ದಿ ಬಂತು. ಅದರ ಗಾಬರಿ ಜೊತೆಗೆ ಚೀಟಿ ಸರಿಯಾಗಿ  ನಡೆಸೋಕೆ ಆಗ್ದೆ ಊರು ಬಿಟ್ಟಿದ್ದೆ’.
‘ಮತ್ತೆ ಅದ್ಯಾವ ಧೈರ್ಯದ ಮೇಲೆ ಊರಿಗ್ಬಂದೆ’ ಎಂದೆ ನಾನು.

‘ಹೆಲ್ಮೆಟ್ ಧೈರ್ಯ’ ಆತ ಮುಂದುವರಿಸಿದ. ‘ಕಾರು ಮಾರಿದೆ. ಮನೆ ಬದಲಾಯಿಸಿದೆ. ಈಗ ಹೊಸ ಸ್ಕೂಟರ್‌ನಲ್ಲಿ ಓಡಾಟ. ನಾನು – ನನ್ನೆಂಡ್ತಿ ಹೆಲ್ಮೆಟ್ ಹಾಕ್ಕೊಂಡು ಫುಲ್ ಮುಖ ಮುಚ್ಕೊಂಡು ಹೊರಟ್ರೆ ಮತ್ತೆ ಮನೆಗೆ ಬಂದಾಗಲೇ ತೆಗೆಯೋದು’ ಎಂದ.
‘ಶಿರಸ್ತ್ರಾಣವೆ ನಿನ್ನ ತ್ರಾಣ, ಉಳಿಸಿಸೆ ಪ್ರಾಣ’ ಎಂದೆ.
‘ಶಿರಸ್ತ್ರಾಣ ನಿನ್ನದೊಂದು ಮಹಾ ಪುರಾಣ’ ಎಂದ ರಂಗಣ್ಣಿ ಬೇರೆ ಗಿರಾಕಿ ಕಡೆ ಹೊರಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT