ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಸಾಲು ಅಗ್ನಿದಿವ್ಯ

Last Updated 24 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ರಾಜಕೀಯವಾಗಿ ಬಹಳಷ್ಟು ತವಕ-ತಲ್ಲಣಗಳನ್ನು ಕಂಡ 2011 ಭ್ರಷ್ಟಾಚಾರದ ಉಬ್ಬರ ಮತ್ತು ಭ್ರಷ್ಟಾಚಾರ ಕುರಿತ ಜಾಗೃತಿ ಎರಡಕ್ಕೂ ಸಾಕ್ಷಿಯಾದ ವರ್ಷ. ಈ ವಿರೋಧಾಭಾಸಗಳ ವರ್ಷದ ಕೆಲವು ಪ್ರಮುಖ ಸಂಗತಿಗಳ ಸಂಕಲನ ಇಲ್ಲಿದೆ.

ಲೋಕಾಯುಕ್ತ ಪರ್ವ
2011ರಲ್ಲಿ ರಾಜ್ಯದಲ್ಲಿ ಅತಿದೊಡ್ಡ ಸಂಚಲನ ಉಂಟುಮಾಡಿದ ವಿದ್ಯಮಾನ ಎಂದರೆ ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಅವರು ನೀಡಿದ `ಅಕ್ರಮ ಗಣಿಗಾರಿಕೆ~ ಕುರಿತ ವರದಿ.

ಅಕ್ರಮ ಗಣಿಗಾರಿಕೆಯ ಆಳ-ಅಗಲಗಳನ್ನು ಜಗತ್ತಿಗೇ ಸಾರಿದ ವರದಿ ಅದು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈ ವರದಿಯ ಪರಿಣಾಮವಾಗಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದೇ ಅಲ್ಲದೆ, ನಂತರ ಜೈಲು ಸೇರಿದ ಕಹಿ ಘಟನೆಗೂ ಕರ್ನಾಟಕ ಸಾಕ್ಷಿಯಾಯಿತು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ದೊಡ್ಡ ಕಳಂಕವಾಗಿ ದಾಖಲಾಯಿತು. ನಂತರ ರಾಜ್ಯದಲ್ಲಿ ನಡೆದ ರಾಜಕೀಯ ಕೋಲಾಹಲಗಳು ಭಾರಿ ಸುದ್ದಿ ಮಾಡಿದವು. ರಾಜಕೀಯ ಹಾವು-ಏಣಿ ಆಟದಲ್ಲಿ, ಸಂಸದರಾದ ಡಿ.ವಿ.ಸದಾನಂದ ಗೌಡರಿಗೆ ಮುಖ್ಯಮಂತ್ರಿ ಪದವಿ ಒಲಿದು ಬಂತು. ಆದರೂ ಅವರು ಯಡಿಯೂರಪ್ಪ ಅವರ ರಾಜಕೀಯ ನೆರಳಲ್ಲೇ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಆರೋಪಗಳಿಂದ ಪೂರ್ಣವಾಗಿ ಮುಕ್ತರಾಗಿಲ್ಲ.

ಬಳ್ಳಾರಿಯ ಗಣಿ ಧಣಿಗಳ ವಿರುದ್ಧ ಲೋಕಾಯುಕ್ತದ ಚಾಟಿ ಬಲವಾಗಿಯೇ ಬೀಸಿತು. ಸುಪ್ರೀಂ ಕೋರ್ಟಿನ ಅಣತಿಯಂತೆ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ ಕೇಂದ್ರದ ಉನ್ನತಾಧಿಕಾರ ಸಮಿತಿ ನೀಡಿದ ವರದಿಗಳ ಫಲಶ್ರುತಿಯಾಗಿ ಆಂಧ್ರಪ್ರದೇಶ ಮತ್ತು ರಾಜ್ಯದ ಗಡಿ ಭಾಗದಲ್ಲಿ ಸಿಬಿಐ ತನಿಖೆ ಪ್ರಾರಂಭವಾಯಿತು. ಜನಾರ್ದನ ರೆಡ್ಡಿ ಜೈಲು ಸೇರಬೇಕಾಯಿತು. ಜೈಲಿನಿಂದ ಹೊರಗೆ ಬರಲು ಅವರು ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಹೆಣಗಾಡುತ್ತಲೇ ಇದ್ದಾರೆ.

ಸಮೀಪವಾದ ಕಾರಾಗೃಹ
ಕೆಐಎಡಿಬಿ ಭೂಸ್ವಾಧೀನ ಹಗರಣಗಳ ಪರಿಣಾಮವಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಪುತ್ರ ಕಟ್ಟಾ ಜಗದೀಶ್ ಜೊತೆಗೆ ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸಬೇಕಾಯಿತು. ಯಡಿಯೂರಪ್ಪ ಅವರೊಂದಿಗೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಕೂಡ ಭೂಹಗರಣಗಳ ಆರೋಪದ ಮೇಲೆ ಜೈಲು ಸೇರಿದರು. ಹಲವು ಹಿರಿಯ ಅಧಿಕಾರಿಗಳೂ ಜೈಲುವಾಸದ ಕಹಿ ಉಂಡರು.
 
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಅವರೂ ಕೆಲವು ನೇಮಕಾತಿಗಳಲ್ಲಿ ನಡೆದ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಕಾರಾಗೃಹ ಸೇರಬೇಕಾಯಿತು. ಲಂಚ ಪ್ರಕರಣದಲ್ಲಿ ಕೆಜಿಎಫ್ ಶಾಸಕ ವೈ.ಸಂಪಂಗಿ ಜೈಲಿಗೆ ಹೋದರು.

ಗಣಿ ಅವ್ಯವಹಾರಗಳ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ.ಕೃಷ್ಣ, ಧರ್ಮಸಿಂಗ್ ಮತ್ತು ಎಚ್. ಡಿ.ಕುಮಾರಸ್ವಾಮಿ ಅವರ ವಿರುದ್ಧವೂ ಲೋಕಾಯುಕ್ತ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಯಿತು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಯೂ ಬೆಂಗಳೂರಿನಲ್ಲಿ ನಡೆಯಿತು.

ರಾಜ್ಯಪಾಲರ ದನಿ
ವರ್ಷದ ಆರಂಭದಿಂದ ಹಿಡಿದು ಕೊನೆಯತನಕ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ರಾಜ್ಯದ ಬಿಜೆಪಿ ಸರ್ಕಾರವನ್ನು ಕಾಡುತ್ತಲೇ ಬಂದಿದ್ದಾರೆ. ಪ್ರಾರಂಭದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಬದಲು ಭಾಷಣದ ಪ್ರತಿಯನ್ನು ಮಂಡಿಸಿ ಹೊರನಡೆದ ರಾಜ್ಯಪಾಲರ ನಂತರದ ನಡೆಗಳ ಬಗ್ಗೆ ಬಿಜೆಪಿ ಸರ್ಕಾರ ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಲೇ ಹೋಯಿತು.
 
ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ರಾಷ್ಟ್ರಪತಿಗಳಿಗೇ ದೂರು ಸಲ್ಲಿಸಿದ ಹಂತಕ್ಕೂ ಹೋಯಿತು. ರಾಜ್ಯಪಾಲರು `ಪಕ್ಷಪಾತಿ ನಿಲುವು~ ತಳೆದಿದ್ದಾರೆ ಎಂದು ವಿರೋಧಿಸಿ ರಾಜ್ಯವ್ಯಾಪಿ ಬಂದ್ ಕರೆ ನೀಡಿದ ಪ್ರಸಂಗವೂ ಆಯಿತು. ಹೊಸ ಲೋಕಾಯುಕ್ತರ ನೇಮಕದ ವಿಚಾರದಲ್ಲಿ ಈಗಲೂ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ.

ನ್ಯಾ. ಸಂತೋಷ್ ಹೆಗ್ಡೆ ನಿರ್ಗಮನದ ಬಳಿಕ ನೂತನ ಲೋಕಾಯುಕ್ತರ ನೇಮಕದ ವಿಚಾರದಲ್ಲಿ ಬಹಳಷ್ಟು ರಂಪ-ರಗಳೆಗಳಾದವು. ಈ ಹಿಂದೆ ಸರ್ಕಾರ ನೇಮಕ ಮಾಡಿದ್ದ ನ್ಯಾ. ಶಿವರಾಜ ಪಾಟೀಲರು `ನಿವೇಶನ ವಿವಾದ~ದಿಂದ ನೊಂದು ಲೋಕಾಯುಕ್ತರ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಂತರ ಸರ್ಕಾರ ಶಿಫಾರಸು ಮಾಡಿದ ನ್ಯಾ.ಎಸ್.ಆರ್.ಬನ್ನೂರಮಠ ಅವರ ವಿಚಾರದಲ್ಲೂ ಇದೇ ವಿವಾದ ಎದ್ದಿತು. ಹೀಗಾಗಿ ಅವರನ್ನು ಲೋಕಾಯುಕ್ತರಾಗಿ ನೇಮಕ ಮಾಡಲು ರಾಜ್ಯಪಾಲರು ಸುತಾರಾಂ ಒಪ್ಪಲಿಲ್ಲ. ರಾಜ್ಯ ಸರ್ಕಾರ ತನ್ನ ಹಟ ಬಿಟ್ಟಿಲ್ಲ. ಅವರನ್ನೇ ನೇಮಕ ಮಾಡಬೇಕು ಎಂದು ಪಟ್ಟು ಹಿಡಿದಿದೆ.

ಏಳುಬೀಳಿನ ಆಟ!
ಕ್ರೀಡಾ ಲೋಕದಲ್ಲಿ ಉದ್ದೀಪನ ಮದ್ದು ಸೇವನೆಯ ಕಳಂಕಕ್ಕೆ ಒಳಗಾಗಿ ಅಶ್ವಿನಿ ಅಕ್ಕುಂಜೆಯಂತಹ ರಾಜ್ಯದ ಕ್ರೀಡಾಪಟುಗಳು ನೊಂದರೆ ನಂತರ ಇದು ಉದ್ದೇಶಪೂರ್ವಕವಾಗಿ ನಡೆದದ್ದಲ್ಲ ಎಂಬುದಾಗಿ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ಅವರು ನಿಟ್ಟುಸಿರುಬಿಟ್ಟರು.

ಕ್ರಿಕೆಟ್ ಲೋಕದಲ್ಲಿ ರಾಹುಲ್ ದ್ರಾವಿಡ್ ಹೊಸ ದಾಖಲೆ ಬರೆದರು. ಮೂಡುಬಿದರೆಯಂತಹ ತಾಲ್ಲೂಕು ಕೇಂದ್ರವು ಅಖಿಲ ಭಾರತ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟದ ಆತಿಥ್ಯ ವಹಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಪ್ರತಿಭಾನ್ವಿತ ಉದಯೋನ್ಮುಖ ಕ್ರೀಡಾಪಟು ಬ್ರಹ್ಮಾವರ ಅಂಪಾರಿನ ಪೃಥ್ವಿ ಆತ್ಮಹತ್ಯೆ ರಾಜ್ಯದ ಕ್ರೀಡಾಲೋಕಕ್ಕೊಂದು ಕಪ್ಪುಚುಕ್ಕೆ.

ವಿ.ಎಸ್.ಕೃಷ್ಣ ಅಯ್ಯರ್, ಕೆ.ಎಚ್.ರಂಗನಾಥ್, ಜಿ.ನಾರಾಯಣ, ಎಂ.ವೈ.ಘೋರ್ಪಡೆ ಅವರಂತಹ ರಾಜಕೀಯ ಮುತ್ಸದ್ದಿಗಳನ್ನು ರಾಜ್ಯವು ಈ ಸಾಲಿನಲ್ಲಿ ಕಳೆದುಕೊಂಡಿತು.

ವಿಧಾನಸೌಧ ಸಹಿತ ರಾಜ್ಯದ ಪ್ರಮುಖ ಕಟ್ಟಡಗಳನ್ನು ಸ್ಫೋಟಿಸುವ ಸಂಚು ಹೂಡಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಆರು ಮಂದಿ ಉಗ್ರರಿಗೆ ಜೀವಾವಧಿ ಶಿಕ್ಷೆಗೆ ನ್ಯಾಯಾಲಯ ಆದೇಶ ಹೊರಡಿಸಿತು.

ಸ್ವಾಭಿಮಾನದ ಜಪ!
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಯು ರಾಜ್ಯದ ಗಮನ ಸೆಳೆದ ಇನ್ನೊಂದು ಮಹತ್ವದ ವಿದ್ಯಮಾನ. ಸಚಿವರಾಗಿದ್ದ ಬಿ.ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಬಿಜೆಪಿಗೆ ಸೆಡ್ಡು ಹೊಡೆದು ಮರು ಚುನಾವಣೆಗೆ ಕಾರಣರಾದರು. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬರುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.
 
ಇದಕ್ಕೂ ಮೊದಲು ರಾಜ್ಯದಲ್ಲಿ ನಡೆದ ಬಹುತೇಕ ಉಪ ಚುನಾವಣೆಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆದ್ದು ಬಂದಿತ್ತು. ವರ್ಷದ ಆರಂಭದಲ್ಲಿ ಪ್ರಕಟವಾಗಿದ್ದ ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲೂ ಸ್ಪಷ್ಟ ಮೇಲುಗೈ ಸಾಧಿಸಿತ್ತು. ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ತೀರ್ಮಾನವನ್ನು ಹೈಕೋರ್ಟ್ ಎತ್ತಿಹಿಡಿದರೆ, ನಂತರ ಸುಪ್ರೀಂಕೋರ್ಟ್ ಅದನ್ನು ರದ್ದುಗೊಳಿಸುವ ಮೂಲಕ ಪಕ್ಷೇತರ ಶಾಸಕರಿಗೆ ಜೀವದಾನ ಸಿಕ್ಕಿತು.

ಚದುರಿದ ಚಿತ್ರಗಳು
ಬೆಳ್ತಂಗಡಿ ಬಳಿ ನಕ್ಸಲ್ ಎನ್‌ಕೌಂಟರ್ ಹೆಸರಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಬೇಟೆಗಾರನ ವಿವಾದವೂ ಹಾಗೇ ಉಳಿದಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ, ಕೃಷಿ ಮೇಳ, ಜಾಗತಿಕ ಮಟ್ಟದ ಕೃಷಿ ಹೂಡಿಕೆದಾರರ ಸಮಾವೇಶದಂತಹ ಪ್ರಮುಖ ಕೃಷಿ-ವಾಣಿಜ್ಯ ಚಟುವಟಿಕೆಗಳಿಗೂ ರಾಜಧಾನಿ ತಾಣವಾಯಿತು.

ಚರ್ಚ್‌ಗಳ ಮೇಲಿನ ದಾಳಿ ಪ್ರಕರಣಗಳಿಗೆ ಸಂಬಂಧಿಸಿ ನ್ಯಾ. ಬಿ.ಕೆ.ಸೋಮಶೇಖರ್ ಅವರು ಎರಡನೇ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿದರೂ ಅದು ಹೆಚ್ಚು ಸಂಚಲನ ಉಂಟುಮಾಡಲಿಲ್ಲ. `ನಾಡರಕ್ಷಣಾ ರ‌್ಯಾಲಿ~ ಹೆಸರಲ್ಲಿ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆಸಿದ ಪಾದಯಾತ್ರೆ ರಾಜಕೀಯವಾಗಿ ಬಹಳ ಸುದ್ದಿ ಮಾಡಿತು.
 
ಮೆಟ್ರೊ ರೈಲು ಸಂಚಾರ ಆರಂಭಗೊಂಡ ಖುಷಿಗೂ ರಾಜಧಾನಿ ಪಾತ್ರವಾಯಿತು. ಭ್ರಷ್ಟಾಚಾರ ವಿರುದ್ಧ ಅಣ್ಣಾಹಜಾರೆ ಅವರ ಆಂದೋಲನಕ್ಕೆ ರಾಜ್ಯವೂ ಸ್ಪಂದಿಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ಅಣ್ಣಾ ತಂಡದ ಹೋರಾಟಕ್ಕೆ ವೇದಿಕೆಯಾಗಿದೆ.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ನಡುವೆ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ `ಆಣೆ-ಪ್ರಮಾಣ~ ಕೊನೆ ಗಳಿಗೆಯಲ್ಲಿ ರದ್ದಾದರೂ ಈ ರಾಜಕೀಯ ಪ್ರಹಸನ ಕುತೂಹಲ ಕೆರಳಿಸಿತ್ತು. ಗದಗ ಜಿಲ್ಲೆಯ ಹಳ್ಳಿಗುಡಿಯು `ಪೋಸ್ಕೊ~ ಭೂಸ್ವಾಧೀನ ವಿವಾದ ರಾಜ್ಯದ ಗಮನಸೆಳೆದ ಮತ್ತೊಂದು ಸುದ್ದಿ. 

ವಿವಾದಗಳ ಸುಗ್ಗಿ
ಐದಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುವ ಸರ್ಕಾರದ ತೀರ್ಮಾನವು ವಿವಾದಕ್ಕೆ ಗುರಿಯಾಯಿತು. ಹೈಕೋರ್ಟ್ ಇದಕ್ಕೆ ತಡೆಯಾಜ್ಞೆಯನ್ನೂ ನೀಡಿತು. ಅದೇ ರೀತಿ ಸಿಇಟಿ, ಕಾಮೆಡ್-ಕೆ, ಎನ್‌ಇಇಟಿ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದ ವಿವಾದವೂ ಬಗೆಹರಿಯದೆ ಉಳಿದಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಡೆಸ್ನಾನ ವಿವಾದ ಹಾಗೂ ಕೆಜಿಎಫ್‌ನಲ್ಲಿ ಭಂಗಿಗಳ ದುರಂತದ ಬದುಕಿನ ಸಂಗತಿಗಳು ನಮ್ಮ ನಡುವಣ ನೈತಿಕ ಭ್ರಷ್ಟತೆಗೆ ಸಾಕ್ಷಿಪ್ರಜ್ಞೆಯಂತೆ ಕಾಣಿಸಿದವು. ಇದೇ ಅವಧಿಯಲ್ಲಿ ಸವಣೂರಿನ ಭಂಗಿಗಳು ಹೋರಾಟದ ಮೂಲಕ ಸರ್ಕಾರಿ ಉದ್ಯೋಗ ಗಳಿಸಿಕೊಂಡ ನೈತಿಕ ವಿಜಯವನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT