ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಡಾ’ದ ಎಂಬಿಎ ಮನೆಮಗಳ ‘ಮರಳಿ ಮಣ್ಣಿಗೆ’ ಯಶೋಗಾಥೆ

Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಬೆಳಿಗ್ಗೆ ಆರು ಗಂಟೆಗೆ ಹೊಟೇಲ್ ಕೈಲ್‌ರುಗ್ಜಿಗೆ ಬಂದು ಬಿಡಿ’.
ನರೇಂದ್ರ ಸಿಂಗ್ ರಜಾವತ್ ಆ ಕಡೆಯಿಂದ ಹೇಳಿದಾಗ, ‘ಕೈಲ್‌ರುಗ್ಜಿ! ಇದು ಹೊಟೇಲ್ ಹೆಸರೇ?’ – ಅಚ್ಚರಿಯಿಂದ ಮರುಪ್ರಶ್ನೆ ಹಾಕಿದೆ. ನವೆಂಬರ್ ಕೊನೆ. ಜೈಪುರದ ಥರಗಟ್ಟುವ ಚಳಿಯ ನಡುವೆ ಬೆಳಿಗ್ಗೆ ಆರು ಗಂಟೆಗೆ ಆ ವಿಚಿತ್ರ ಹೆಸರಿನ ಹೊಟೇಲ್ ಹುಡುಕಿ ಹೋಗಬೇಕಿತ್ತು.

ಜೈಪುರಕ್ಕೆ ಹೋದಾಗಲೆಲ್ಲಾ ನಾನು ಕಾಯಂ ಆಗಿ ಉಳಿಯುತ್ತಿದ್ದ ಹೊಟೇಲ್ ‘ಉಮೇದ್ ಭವನ್’ ಬನಿಪಾರ್ಕ್‌ನಲ್ಲಿತ್ತು. ಅಲ್ಲಿಂದ ಕೈಲ್‌ರುಗ್ಜಿ ಹುಡುಕಿಕೊಂಡು ಹೋಗಬೇಕಿತ್ತು. ಏಕೋ ಹೆಸರು ವಿಚಿತ್ರ ಎನ್ನಿಸಿದ ಕಾರಣ, ಮತ್ತೊಮ್ಮೆ ಕೇಳಿ ಖಚಿತಪಡಿಸಿಕೊಳ್ಳುವ ಯತ್ನ ಮಾಡಿದ್ದೆ.

‘ಹೌದು, ಕೈಲ್‌ರುಗ್ಜಿ ನಮ್ಮದೇ ಹೊಟೇಲ್. ಗೋಪಾಲ್ ಬರಿಯ ಪಿಡಬ್ಲ್ಯುಡಿ ಡಾಕ್ ಬಂಗಲೆ ಎದುರು ಅಂತ ಆಟೋ ಡ್ರೈವರ್‌ಗೆ ಹೇಳಿ. ಕರೆದುಕೊಂಡು ಬರುತ್ತಾರೆ’ ಎಂದರು. ಮರುದಿನದ ನಮ್ಮ ವೇಳಾಪಟ್ಟಿ ಅದಾಗಲೇ ಸಿದ್ಧವಾಗಿತ್ತು. ರಾಜಸ್ತಾನದ ಒಂದು ರಾಜಕುಟುಂಬಕ್ಕೆ ಸೇರಿದ ನರೇಂದ್ರ ಸಿಂಗ್ ರಜಾವತ್ ತಂದೆ ರಘುಭೀರ್ ಸಿಂಗ್ ಭಾರತ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದವರು. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ‘ಮಹಾವೀರ ಚಕ್ರ’ ಪಡೆದಿದ್ದ ರಘುಭೀರ್ ಸಿಂಗ್ ಹುಟ್ಟೂರು ಸೋಡಾಗೆ ಭೇಟಿ. ಅಲ್ಲಿ ಭಾರತದ ಮೊತ್ತ ಮೊದಲ ಎಂಬಿಎ ಪದವಿ ಹೊಂದಿರುವ ಸರಪಂಚ್ (ಗ್ರಾಮ ಪಂಚಾಯ್ತಿ ಅಧ್ಯಕ್ಷರು) ಜೊತೆ ಒಂದು ದಿನ ಕಳೆಯುವುದು.

ಆ ಸರಪಂಚ್ ಬೇರೆ ಯಾರೂ ಅಲ್ಲ, ನರೇಂದ್ರ ಸಿಂಗ್ ರಜಾವತ್ ಅವರ ಏಕೈಕ ಪುತ್ರಿ ಮತ್ತು ಬ್ರಿಗೇಡಿಯರ್ ರಘುಭೀರ್ ಸಿಂಗ್ ಅವರ ಮೊಮ್ಮಗಳು ಛಾವಿ ರಜಾವತ್! ಬೆಂಗಳೂರು ನಗರದ ಸಮೀಪ ಕರ್ನಾಟಕದ ಗಡಿಗಂಟಿಕೊಂಡು ಆಂಧ್ರದಲ್ಲಿರುವ ರಿಷಿ ವ್ಯಾಲಿ ಅಂತರ್ ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಯಾಗಿದ್ದು, ನವದೆಹಲಿಯ ಪ್ರತಿಷ್ಠಿತ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆದು, ಪುಣೆಯ ಬಾಲಾಜಿ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಎ ಪದವೀಧರೆಯಾಗಿದ್ದ ಛಾವಿ, ನಂತರ ಕಾರ್ಪೋರೇಟ್ ವಲಯ ಸೇರಿದ್ದರು. ಆದರೆ, ಮಣ್ಣಿನ ಕರೆಗೆ ಓಗೊಟ್ಟು ಕಾರ್ಪೋರೇಟ್ ಲೋಕಕ್ಕೆ ವಿದಾಯ ಹೇಳಿ, ಸೋಡಾ ಗ್ರಾಮ ಪಂಚಾಯ್ತಿಯ ಚುನಾವಣೆಯಲ್ಲಿ ಜಯಗಳಿಸಿ ಸರಪಂಚ್ ಆಗಿ ಆಯ್ಕೆಯಾಗಿದ್ದರು.

ಇದು ಸುಮಾರು ಐದು ವರ್ಷಗಳ ಹಿಂದಿನ ಮಾತು. ಛಾವಿ ರಜಾವತ್ ಸರಪಂಚ್ ಆಗಿ ಒಂದೇ ವರ್ಷದ ಅವಧಿಯಲ್ಲಿ ಜಗತ್ತಿನ ಗಮನ ಸೆಳೆಯಲು ಯಶಸ್ವಿಯಾಗಿದ್ದರು. ಆಗಿನ್ನೂ 31 ವರ್ಷ ವಯಸ್ಸಿನ ಯುವತಿ. ಕಾರ್ಪೋರೇಟ್ ಜಗದ ಮೋಹದಿಂದ ಮುಕ್ತಿ ಪಡೆದು, ಮರಳಿ ಮಣ್ಣಿಗೆ ತೆರಳಿದ್ದ ಅವರನ್ನು ಭೇಟಿ ಮಾಡಲು ಸೋಡಾ ಕಡೆ ಮುಖ ಮಾಡಿದ್ದೆ.

ನಿಗದಿಯಾದಂತೆ ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ಕೈಲ್‌ರುಗ್ಜಿ ತಲುಪಿದೆ. ಸೇನಾ ಹಿನ್ನಲೆಯ ಕುಟುಂಬದಿಂದ ಬಂದಿದ್ದ ನರೇಂದ್ರ ಸಿಂಗ್ ರಜಾವತ್ ಠಾಕುಠೀಕಾಗಿ ಸಿದ್ಧರಾಗಿ ನಿಂತಿದ್ದರು. ಮಹೀಂದ್ರಾ ಜೀಪ್‌ನಲ್ಲಿ ಹೊರಟ ನಾವು ಜೈಪುರದ ಹೊರವಲಯದ ಮಾನಸರೋವರದಲ್ಲಿದ್ದ ‘ಈಕ್ವೆಸ್ಟ್ ಹಾರ್ಸ್ ರೈಡಿಂಗ್ ಅಕಾಡೆಮಿ’ ಆವರಣವನ್ನು ಪ್ರವೇಶಿಸಿದೆವು.

‘ಛಾವಿ ಮುಂಜಾನೆಯೇ ಅಕಾಡೆಮಿಯಲ್ಲಿ ಎಳೆಯ ಮಕ್ಕಳಿಗೆ ಕುದುರೆ ಸವಾರಿ ಕಲಿಸಲು ಬಂದಿದ್ದಾಳೆ. ಅವಳನ್ನು ಕರೆದುಕೊಂಡು ಹೋಗಲು ಇಲ್ಲಿಗೆ ಬರಬೇಕಾಯಿತು’ ಎಂದು ನರೇಂದ್ರ ಸಿಂಗ್ ಸುಳಿವು ನೀಡಿದರು. ತರಬೇತಿಯ ಆವರಣದಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ಛಾವಿ ನಮ್ಮನ್ನು ಕಂಡ ಕೂಡಲೇ ಹುಲ್ಲು ಛಾವಣಿ ಹೊದಿಸಿದ್ದ ಆಧುನಿಕ ಕಚೇರಿಯತ್ತ ಧಾವಿಸಿದರು.

ಉಭಯಕುಶಲೋಪರಿಯ ನಂತರ ನಾವು ಮೂವರೂ ಕೂತಿದ್ದ ಜೀಪ್ ರಾಜಸ್ತಾನದ ಅತ್ಯಂತ ಬರಪೀಡಿತ ಜಿಲ್ಲೆಗಳ ಪೈಕಿ ಒಂದಾದ ಟೋಂಕ್ ಕಡೆ ಹೊರಟಿತು. ಬಲಾವಲಾ ದಾಟಿದ ಮೇಲೆ ಕ್ರಮೇಣ ಹಸಿರು ಮಾಯವಾಗಿ ಕಂದು ಆವರಿಸಿಕೊಂಡಿತು. ಎರಡು ಗಂಟೆಯ ಅವಧಿಯಲ್ಲಿ 60 ಕಿಲೋಮೀಟರ್ ಕ್ರಮಿಸಿದ ಮೇಲೆ ನಾವು ಸೋಡಾ ಪ್ರವೇಶಿಸಿದೆವು. ಹಳ್ಳಿಯ ಹೆಬ್ಬಾಲಿಗೆ ಅಂಟಿಕೊಂಡಂತೆಯೇ ಒಣಗಿ ನಿಂತಿದ್ದ ಬೃಹತ್ ಕೆರೆ ಸ್ವಾಗತ ಕೋರಿತು. ಕಿರಿದಾದ ಮಣ್ಣಿನ ರಸ್ತೆಯ ಮೂಲಕ ಮುಂದೆ ಸಾಗಿದ ನಮ್ಮ ಜೀಪು ಹಳ್ಳಿಯ ನಡುವಿದ್ದ ಹವೇಲಿಯ ಮುಂದೆ ನಿಂತಿತು.

‘ಬೈಸಾ... ಬೈಸಾ’ ಎಂದು ಹಳ್ಳಿಗರು ಛಾವಿಯನ್ನು ಮುತ್ತಿಕೊಂಡರು. ‘ಬೈಸಾ ಎಂದರೆ ಮನೆ ಮಗಳು’– ನಗುತ್ತಲೇ ನನಗೆ ಆ ಪದದ ಅರ್ಥ ಹೇಳಿದ ಛಾವಿಯ ಜೊತೆ ಹವೇಲಿ ಒಳಗೆ ಕಾಲಿಟ್ಟೆ. ಅದಾಗಲೇ ಸುಮಾರು ಮೂವತ್ತು ಮಂದಿ ಗ್ರಾಮಸ್ಥರು ಹವೇಲಿಯಲ್ಲಿ ನೆರೆದಾಗಿತ್ತು. ಜಗಲಿಯ ಮೇಲೆ ಕೂತು ಅವರ ಜೊತೆ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದ ಛಾವಿ, ಮೂಲೆಯಲ್ಲಿ ಕೂತಿದ್ದ ನನ್ನ ಬಳಿ ಬಂದರು. ಗ್ರಾಮಸ್ಥರು ಛಾವಿ ತಂದೆಯ ಜೊತೆ ಮಾತು ಮುಂದುವರಿಸಿದರು.

‘‘ಎಂಬಿಎ ಮುಗಿಸಿ ‘ಟೈಮ್ಸ್ ಆಫ್ ಇಂಡಿಯ’ ಮತ್ತು ‘ಕಾರ್ಲ್ಸ್‌ನ್ ಗ್ರೂಪ್ ಆಫ್ ಹೊಟೇಲ್‌’ನಲ್ಲಿ ಉದ್ಯೋಗ ಮಾಡಿ ಹೊರಬಂದಿದ್ದೆ. ಜೈಪುರದಲ್ಲಿಯೇ ಬಂದು ಏರ್‌ಟೆಲ್ ಸೇರಿಕೊಂಡಿದ್ದೆ. ನಮ್ಮ ಹೊಟೇಲ್‌ನ ಮೇಲ್ವಿಚಾರಣೆ ಕೂಡ ಮಾಡುತ್ತಿದ್ದೆ. ಜೊತೆಗೆ ಗೆಳೆಯರೊಬ್ಬರ ಜೊತೆ ಸೇರಿ, ಕುದುರೆ ಸವಾರಿ ಕಲಿಸುವ ಶಾಲೆ ಕೂಡ ತೆರೆದಿದ್ದೆ.

2010ರ ಪಂಚಾಯ್ತಿ ಚುನಾವಣೆಗೆ ಮೊದಲು ಸೋಡಾದ ಸುಮಾರು 50 ಗ್ರಾಮಸ್ಥರು ಜೈಪುರದ ನಮ್ಮ ಮನೆಗೆ ಒಂದು ಮುಂಜಾನೆ ಬಂದರು. ನಮಗ್ಯಾರಿಗೂ ಅವರ ಭೇಟಿಯ ಹಿನ್ನೆಲೆ ತಿಳಿದಿರಲಿಲ್ಲ. ಅಪ್ಪ–ಅಮ್ಮ ಮತ್ತು ನನ್ನ ಜೊತೆ ಮಾತಿಗೆ ಕೂತ ಗ್ರಾಮಸ್ಥರು, ‘ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಾನು ನಿಲ್ಲಲೇಬೇಕು. ಅವಿರೋಧವಾಗಿ ಆಯ್ಕೆ ಮಾಡುತ್ತೇವೆ’ ಎಂದು ಹಟ ಹಿಡಿದರು. ಅದುವರೆಗೆ ನಮ್ಮ ಮೂಲವಾಗಿದ್ದ ಸೋಡಾಗೆ ಮರಳುವ, ಸರಪಂಚಳಾಗಿ ಸೇವೆ ಸಲ್ಲಿಸುವ ಬಗ್ಗೆ ನಾನು ಕನಸು ಕೂಡ ಕಂಡಿರಲಿಲ್ಲ’’ – ಛಾವಿ ಮಾತಿಗಿಳಿದರು.

ಗ್ರಾಮಸ್ಥರ ಒತ್ತಾಯಕ್ಕೆ ಬಲವಾದ ಕಾರಣ ಕೂಡ ಇತ್ತು. 1975ರಲ್ಲಿ ಸೇನೆಯಿಂದ ನಿವೃತ್ತರಾದ ಛಾವಿಯ ಅಜ್ಜ ಬ್ರಿಗೇಡಿಯರ್ ರಘುಭೀರ್ ಸಿಂಗ್ ಸೋಡಾಗೆ ಮರಳಿ 15 ವರ್ಷಗಳ ಕಾಲ ಆ ಗ್ರಾಮ ಪಂಚಾಯ್ತಿಯ ಸರಪಂಚರಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಆ ಹಿನ್ನೆಲೆಯಲ್ಲಿ ರಜಾವತ್ ಕುಟುಂಬದ ಮೇಲೆ ಗ್ರಾಮಸ್ಥರಿಗೆ ಅಪಾರ ಭರವಸೆ ಇತ್ತು. ಜೊತೆಗೆ ಅವರ ಕಣ್ಣ ಮುಂದೆಯೇ ಬೆಳೆದ ಛಾವಿ, ಮನೆಮಗಳ ಬಗ್ಗೆ ಕೂಡ ಅವರಿಗೆ ಬಹಳಷ್ಟು ನಂಬಿಕೆಯಿತ್ತು.

ಆ ನಂಬಿಕೆ ಮತ್ತು ಪ್ರೀತಿಗೆ ತಲೆಬಾಗಿದ ಛಾವಿ, ಕಾರ್ಪೋರೇಟ್ ಜಗತ್ತಿಗೆ ವಿದಾಯ ಹೇಳಿ ಗ್ರಾಮ ಪಂಚಾಯ್ತಿ ಚುನಾವಣಾ ಕಣಕ್ಕೆ ಇಳಿದರು. ಗ್ರಾಮದ ಪ್ರಮುಖರು ಇಚ್ಛಿಸಿದಂತೆ ಛಾವಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಯತ್ನ ಫಲ ಕೊಡಲಿಲ್ಲ. ಸಣ್ಣ ಮಟ್ಟದ ವಿರೋಧವುಂಟಾಗಿ ಚುನಾವಣೆ ನಡೆಯಿತು. ಆದರೂ, ಛಾವಿ ಬಹುಮತದಿಂದ ಆಯ್ಕೆಯಾಗಿ ಸರಪಂಚ ಪಟ್ಟಕ್ಕೇರಿದರು.

‘ಕಾರ್ಪೋರೇಟ್ ಪ್ರಪಂಚದಿಂದ ಇದ್ದಕ್ಕಿದ್ದಂತೆ ಪಂಚಾಯ್ತಿ ರಾಜ್ ವ್ಯವಸ್ಥೆಗೆ ಧುಮುಕಿದಿರಿ. ಸೋಡಾ ಜನರೇನೋ ನಿಮ್ಮನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದರು. ಆದರೆ, ಸರ್ಕಾರಿ ಮತ್ತು ಸಾಮಾಜಿಕ ವ್ಯವಸ್ಥೆ ನಿಮ್ಮನ್ನು ಯಾವ ರೀತಿ ಸ್ವೀಕರಿಸಿತು?’ ಎಂದು ಕೇಳಿದಾಗ, ಛಾವಿ – ‘‘ಓದು ಮತ್ತು ವೃತ್ತಿಯ ಕಾರಣ ಸೋಡಾದಿಂದ ದೂರವಿದ್ದರೂ, ವೈಯಕ್ತಿಕ ನೆಲೆಯಲ್ಲಿ ಸೋಡಾ ಮತ್ತು ಅಲ್ಲಿನ ಗ್ರಾಮಸ್ಥರಿಗೆ ನಾನು ಬಹಳ ಹತ್ತಿರವಾಗಿದ್ದೆ.

ಜೈಪುರ, ದೆಹಲಿ, ಬೆಂಗಳೂರಿನಲ್ಲಿನ ಅನುಭವದ ಪರಿಣಾಮವಾಗಿ ನಾನು ಕೂಡ ಬೇರೆಯವರಂತೆ ಕಾರ್ಪೋರೇಟ್ ಬದುಕಲ್ಲಿ ಮುಳುಗಿಹೋಗುವ ಸಾಧ್ಯತೆ ಕೂಡ ಇತ್ತು. ಆದರೆ, ನನ್ನ ಬೇರು ಎಷ್ಟು ಭದ್ರವಾಗಿತ್ತೆಂದರೆ ಯಾವ ಕ್ಷಣ ನಾನು ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲಬೇಕು ಎಂದು ತೀರ್ಮಾನಿಸಿದೆನೋ, ಅದೇ ಕ್ಷಣ ನನ್ನ ಬದುಕನ್ನೇ ಗ್ರಾಮಾಭಿವೃದ್ಧಿಗೆ ಮೀಸಲಿಡುವ ನಿರ್ಧಾರ ಮಾಡಿದೆ.

ಆ ದೃಢ ನಿರ್ಧಾರದ ಫಲವಾಗಿ ಸರ್ಕಾರಿ ಮತ್ತು ಸಾಮಾಜಿಕ ವ್ಯವಸ್ಥೆಯ ಸ್ವೀಕೃತಿ ಅಥವಾ ಕೆಲವೊಮ್ಮೆ ಅಸ್ವೀಕೃತಿ ನನ್ನನ್ನು ಅಷ್ಟು ಕಾಡಲಿಲ್ಲ. ಸೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ನನ್ನ ಗುರಿಯ ಮುಂದೆ ಆ ಎಲ್ಲ ಅಡೆ–ತಡೆಗಳು ಕ್ಷಣಿಕವಾಗ ತೊಡಗಿದವು’’ ಎಂದು ಸ್ಪಷ್ಟ ಚಿತ್ರ ನೀಡಿದರು.

ಮಾತನಾಡುತ್ತಲೇ ನಾವು ಹವೇಲಿಯಿಂದ ಹೊರಬಂದು ಸೋಡಾದ ಮಣ್ಣಿನ ರಸ್ತೆಗಳಲ್ಲಿ ಹೆಜ್ಜೆ ಹಾಕಿದೆವು. ಭಾರತದ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಇರುವಂತೆಯೇ ಸೋಡಾದಲ್ಲಿ ಕೂಡ ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಅರಣ್ಯ ನಾಶದ ಸಮಸ್ಯೆಗಳು ಇವೆ. ಅದೃಷ್ಟವಶಾತ್ ನನಗೆ ಸಿಕ್ಕಿದ ವಿದ್ಯೆ ಮತ್ತು ಹೊರಜಗತ್ತಿನ ಜೊತೆಗೆ ನನಗಿರುವ ಸಂಪರ್ಕದ ನೆರವಿನಿಂದ ನಮ್ಮ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ ಛಾವಿ, ಅವರ ಹಲವು ಅನುಭವಗಳನ್ನು ತೆರೆದಿಟ್ಟರು.

ಆ ದಿನ ಪೂರ್ತಿ ಛಾವಿ ಮತ್ತು ಸೋಡಾ ಗ್ರಾಮಸ್ಥರ ಜೊತೆ ಕಳೆದ ಮೇಲೆ ಸಂಜೆ ನಾನು ಜೈಪುರಕ್ಕೆ ವಾಪಸು ಹೊರಟೆ. ಸುಮಾರು ನಾಲ್ಕು ಕಿಲೋ ಮೀಟರ್ ದೂರದ ಮುಖ್ಯರಸ್ತೆಯಲ್ಲಿ ನನ್ನನ್ನು ಬಸ್ ಹತ್ತಿಸಲು ಸ್ವತಃ ಜೀಪು ಚಲಾಯಿಸಿಕೊಂಡು ಬಂದ ಛಾವಿ ಬಳಿ, ‘ಯಾವುದಾದರೂ ಹಂತದಲ್ಲಿ ನಿಮಗೆ ನೀವು ತೆಗೆದುಕೊಂಡ ನಿರ್ಧಾರ ತಪ್ಪು ಅನ್ನಿಸಿದೆಯಾ? ಅಥವಾ ಮುಂದೆಂದಾದರೂ ಅನ್ನಿಸಿದಾಗ ಮತ್ತೆ ಕಾರ್ಪೋರೇಟ್ ಪ್ರಪಂಚಕ್ಕೆ ಮರಳುವ ಸಾಧ್ಯತೆಯಿದೆಯಾ?’ ಎಂದು ಕೇಳಿದೆ. ‘ಬದುಕಿನ ಯಾವುದೇ ಹಂತದಲ್ಲಿ ನಾನು ತೆಗೆದುಕೊಂಡ ಈ ನಿರ್ಧಾರ ತಪ್ಪು ಎಂದೆನ್ನಿಸುವ ಸಾಧ್ಯತೆಯೇ ಇಲ್ಲ.

ಏಕೆಂದರೆ ಸೋಡಾ ಗ್ರಾಮದ ಜನರು ನನ್ನನ್ನು ಮನೆಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಪ್ರೀತಿ–ವಿಶ್ವಾಸದ ಮುಂದೆ ನನ್ನ ಈ ಯತ್ನ ಅಂತಹ ದೊಡ್ಡದೇನೂ ಅಲ್ಲ. ಯಾವಾಗ ನಾನು ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲಲು ಒಪ್ಪಿಕೊಂಡೆನೋ, ಅದೇ ಕ್ಷಣ ನನ್ನ ಜೀವನವನ್ನು ಸೋಡಾಗೆ ಅರ್ಪಿಸಿಕೊಂಡಾಗಿದೆ’ – ಆ ಧ್ವನಿ ಸ್ಪಷ್ಟವಾಗಿತ್ತು. ಸಂಜೆಯ ಇಳಿಗತ್ತಲಿನಲ್ಲಿ ಬಸ್ ಹತ್ತಿದ ನಾನು ಜೈಪುರಕ್ಕೆ ಹಿಂತಿರುಗಿ ಹೊರಟೆ. ದಾರಿಯುದ್ದಕ್ಕೂ ಛಾವಿಯ ಬದ್ಧತೆ ಮತ್ತು ಸೋಡಾ ಗ್ರಾಮಸ್ಥರ ಪ್ರೀತಿ–ವಿಶ್ವಾಸ ನನ್ನನ್ನು ಸಾಕಷ್ಟು ಕಾಡಿತು.

ಆ ಭೇಟಿಯ ನಂತರ ನಿರಂತರವಾಗಿ ಛಾವಿ ಅವರೊಂದಿಗೆ ಸಂಪರ್ಕದಲ್ಲಿದ್ದ ಪರಿಣಾಮ, 2065 ಕಿಲೋಮೀಟರ್ ದೂರದಲ್ಲಿರುವ ಸೋಡಾದಲ್ಲಿ ಆಗುತ್ತಿದ್ದ ಪ್ರತಿಯೊಂದು ಅಭಿವೃದ್ಧಿ ಕಾರ್ಯವೂ ನನ್ನ ಅರಿವಿಗೆ ಬರುತ್ತಿತ್ತು. ಸೋಡಾ ಗ್ರಾಮ ಪಂಚಾಯ್ತಿಗೆ ಸೇರಿದ 3 ಹಳ್ಳಿಗಳಲ್ಲಿ ಅಂತರ್ಜಲ ಕುಡಿಯಲು ಮಾತ್ರವಲ್ಲ, ಕೃಷಿಗೆ ಕೂಡ ಯೋಗ್ಯವಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಮಳೆಯ ನೀರನ್ನು ಸಂಗ್ರಹಿಸಿ, ಕಾಪಾಡಿಕೊಂಡು ಉಪಯೋಗಿಸುವುದು ಗ್ರಾಮಸ್ಥರ ಪಾಲಿಗೆ ಉಳಿದ ದಾರಿಯಾಗಿತ್ತು.

ನೂರು ಎಕರೆಯಷ್ಟು ವಿಸ್ತೀರ್ಣವುಳ್ಳ ಊರಂಚಿನ ಕೆರೆಯ ಹೂಳು ತೆಗೆದು, ಮಳೆ ನೀರನ್ನು ಸಂಗ್ರಹಿಸುವ ಯೋಜನೆಯನ್ನು ಛಾವಿ ಸಿದ್ಧಗೊಳಿಸಿದರು. ಸುಮಾರು 3.5 ಕೋಟಿ ರೂಪಾಯಿ ಮೌಲ್ಯದ ಆ ಯೋಜನೆಯನ್ನು ‘ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಹಕ್ಕು’ ಕಾಯಿದೆಯಡಿ (ಎಂಎನ್‌ಆರ್‌ಇಜಿಎ) ಕೈಗೊಳ್ಳಲು ತಾಂತ್ರಿಕ ಅನುಮತಿ ದೊರೆಯಲಿಲ್ಲ. ಪರಿಣಾಮ, ಛಾವಿ ಕಾರ್ಪೋರೇಟ್ ವಲಯದ ‘ಸಾಮಾಜಿಕ ಜವಾಬ್ದಾರಿ’ (ಸಿಎಸ್‌ಆರ್) ಮೂಲಕ ದೇಣಿಗೆ ಸಂಗ್ರಹಿಸುವ ಯತ್ನ ಮಾಡಿ ವಿಫಲರಾದರು. ಆದರೆ ಧೈರ್ಯಗೆಡದೇ ತಮ್ಮ ಯತ್ನ ಮುಂದುವರಿಸಿ ಶ್ರಮದಾನದ ಮೂಲಕ ಸುಮಾರು 20 ಎಕರೆ ವಿಸ್ತೀರ್ಣದಲ್ಲಿ ಹೂಳು ತೆಗೆದು ಕೆರೆಗೆ ಮರುಜೀವ ನೀಡಲು ಯಶಸ್ವಿಯಾದರು.

ಅದೇ ರೀತಿ ಹಳ್ಳಿಯ ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ನಿರ್ಮಾಣ ಮಾಡುವ ಛಾವಿ ಪ್ರಯತ್ನ ಯಶಸ್ವಿಯಾಗಿದೆ. ಮಣ್ಣಿನ ರಸ್ತೆಗಳ ಜಾಗದಲ್ಲೀಗ ಸಿಮೆಂಟಿನ ರಸ್ತೆಗಳು ಪ್ರತ್ಯಕ್ಷವಾಗಿವೆ. ಎಲ್ಲ ಮನೆಗಳಲ್ಲೂ ಈಗ ವಿದ್ಯುತ್ ಸಂಪರ್ಕವಿದೆ. ಶಾಲೆಗಳ ಅಭಿವೃದ್ಧಿಯಾಗಿದೆ. ಹೊಸ ಪಂಚಾಯ್ತಿ ಕಟ್ಟಡ ತಲೆಯೆತ್ತಿ ನಿಂತಿದೆ.

2015ರಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸೋಡಾ ಗ್ರಾಮಸ್ಥರು ಛಾವಿ ಅವರನ್ನು ಮರು ಆಯ್ಕೆ ಮಾಡಿದ್ದು, ಎರಡನೇ ಬಾರಿಗೆ ಅವರು ಸರಪಂಚರಾಗಿ ಮುಂದುವರಿದಿದ್ದಾರೆ. ಅಚ್ಚರಿಯ ವಿಷಯವೆಂದರೆ ರಜಾವತ್ ಕುಟುಂಬ ಸೋಡಾದಲ್ಲಿಯೇ ನೆಲೆ ನಿಲ್ಲಲಿ ಎಂಬ ಒಂದೇ ಕಾರಣಕ್ಕೆ ಛಾವಿ ಅವರ ತಾಯಿ ಹರ್ಷ ಚೌಹಾಣ್ ಅವರನ್ನು ಕೂಡ ಬಲವಂತವಾಗಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಇಳಿಸಿದ ಗ್ರಾಮಸ್ಥರು, ಅವರನ್ನು ಪಂಚಾಯ್ತಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಸೋಡಾ ಪಂಚಾಯ್ತಿಯಲ್ಲೀಗ ಮಗಳು ಅಧ್ಯಕ್ಷೆ! ತಾಯಿ ಸದಸ್ಯೆ!

ಇದು ಕೌಟುಂಬಿಕ ರಾಜಕಾರಣ ಅಥವಾ ಅಧಿಕಾರದ ದುರಾಸೆಯ ಫಲವಲ್ಲ. ಸೋಡಾ ಗ್ರಾಮಸ್ಥರ ಪ್ರೀತಿ–ವಿಶ್ವಾಸದ ಫಲ. ರಜಾವತ್ ಕುಟುಂಬ ಆರ್ಥಿಕವಾಗಿ ಸಬಲವಾಗಿಯೇ ಇದೆ. ಜೈಪುರದ ಕೈಲ್‌ರುಗ್ಜಿ ಹೊಟೇಲ್ ಸ್ವತಃ ಕುಟುಂಬದ ಆಸ್ತಿ. ಜೊತೆಗೆ ಸಾಕಷ್ಟು ಜಮೀನು ಇದೆ. ಗ್ರಾಮ ಪಂಚಾಯ್ತಿ ಮಟ್ಟದ ರಾಜಕಾರಣದಲ್ಲಿ ಸಕ್ರಿಯವಾಗಿ ಬದುಕು ಭದ್ರ ಮಾಡಿಕೊಳ್ಳುವ ಅಗತ್ಯವಂತೂ ಈ ಕುಟುಂಬಕ್ಕೆ ಇಲ್ಲ. ಆದರೆ, ಊರಿನ ಋಣಕ್ಕೆ ತಲೆಬಾಗಿರುವ ರಜಾವತ್ ಕುಟುಂಬ, ಮುಖ್ಯವಾಗಿ ಛಾವಿ ಅವರ ಬದುಕನ್ನೇ ಗ್ರಾಮಾಭಿವೃದ್ಧಿಗೆ ಮೀಸಲಿಡಲು ಫಣ ತೊಟ್ಟಿದ್ದಾರೆ.

‘ಊರಿನ ಮತ್ತು ಸಮಾಜದ ಋಣ ಎಲ್ಲಕ್ಕಿಂತ ದೊಡ್ಡದು. ಅದೃಷ್ಟವಶಾತ್ ನನಗೆ ಒಳ್ಳೆಯ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಯಿತು. ಸೋಡಾದಲ್ಲಿ ಈಗ ಕೂಡ ಹೈಸ್ಕೂಲ್ ದಾಟದ ನನ್ನಂತಹ ಹಲವಾರು ಬಾಲಕಿಯರು ಇದ್ದಾರೆ. ನನಗೆ ದಕ್ಕಿದ ವಿದ್ಯೆಯ ಮೂಲಕ ಅಂತಹ ಬಾಲಕಿಯರಿಗೆ ವಿದ್ಯೆ ದೊರಕುವಂತೆ ಮಾಡುವುದು ನನ್ನ ಕರ್ತವ್ಯ. ನನ್ನ ಪ್ರಕಾರ ಇದು ಪ್ರತಿಯೊಬ್ಬ ವಿದ್ಯಾವಂತನ ಕರ್ತವ್ಯವಾಗಬೇಕು. ಏಕೆಂದರೆ ಎಲ್ಲಿಯವರೆಗೆ ನಮ್ಮ ಹಳ್ಳಿಗಳ ಸಂಪೂರ್ಣ–ಸಮಗ್ರ ಅಭಿವೃದ್ಧಿ ಆಗುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ದೇಶ ಅಭಿವೃದ್ಧಿ ಆಗುವುದಿಲ್ಲ’ ಎನ್ನುವ ಛಾವಿ ಮಾತು ನೂರಕ್ಕೆ ನೂರರಷ್ಟು ಸತ್ಯ.
ಸೋಡಾದ ಕೆರೆಯಲ್ಲೀಗ ನೀರು ತುಂಬಿ ನಿಂತಿದೆ.

ಇಡೀ ಗ್ರಾಮವೇ ಅಭಿವೃದ್ಧಿಯ ದಿಕ್ಕಿನಲ್ಲಿ ದಾಪುಗಾಲು ಹಾಕಿದೆ. ತನ್ನ ಸಾಧನೆಯ ಮೂಲಕ ವಿಶ್ವಸಂಸ್ಥೆಯವರೆಗೆ ಹೋಗಿ ಅನುಭವಗಳನ್ನು ಹಂಚಿಕೊಂಡು ಬಂದಿರುವ ಛಾವಿ ಈಗ ಎರಡನೇ ಹಂತದ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದ್ದಾರೆ. ಸೋಡಾದಲ್ಲಿ ಗ್ರಾಮೀಣ ‘ಬಿಪಿಓ’ ಒಂದನ್ನು ಸ್ಥಾಪಿಸಬೇಕು ಎಂಬ ಗುರಿ ಇಟ್ಟುಕೊಂಡಿರುವ ಅವರೀಗ ಕೊಯಮತ್ತೂರಿನ ಬಳಿ ಅದಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ.

ಗಾಂಧೀಜಿಯ ಗ್ರಾಮಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಲು ಹೊರಟಿರುವ ಛಾವಿ ಸಾಧನೆ, ಇನ್ನೊಂದೆಡೆ ಬೇರೆ ವಿದ್ಯಾವಂತ ಯುವಕ ಯುವತಿಯರ ಬದುಕಿಗೆ ಸ್ಫೂರ್ತಿಯಾಗಲಾರಂಭಿಸಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ 2015ರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ರಾಜಸ್ತಾನದ ಹುನುಮನಗಢ ಜಿಲ್ಲೆಯ ಲಿಲಾವಲಿ ಗ್ರಾಮ ಪಂಚಾಯ್ತಿಯಲ್ಲಿ ವಸುಂದರಾ ಚೌಧರಿ ಎಂಬ 21ರ ಹರೆಯದ ಪದವೀಧರೆ ಸರಪಂಚಳಾಗಿ ಆಯ್ಕೆಯಾಗಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT