ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಳವರ್‌ನ ಪೊರೆದ ಮಾತೃರೂಪಿ ಅರಸ್!

Last Updated 16 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ದೇವರಾಜ ಅರಸರು ಮುಖ್ಯಮಂತ್ರಿ ಆಗಿದ್ದ ಸಂದರ್ಭ. ಅವರು ಪ್ರವಾಸ ಹೋದಾಗಲೆಲ್ಲಾ ಅಧಿಕೃತ ಕಚೇರಿ ಕೆಲಸಗಳು ಮುಗಿಸಿದ ನಂತರ ಅವರು ತಂಗಿರುವ ಊರು, ನಗರಗಳ ಮೂಲೆ ಮೂಲೆಗಳಲ್ಲಿ ಅಲೆದಾಡುತ್ತಿದ್ದರು; ಅಲೆಮಾರಿಗಳು, ಆದಿವಾಸಿಗಳು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಜೀವಿಸುವ ಟೆಂಟುಗಳ, ಗುಡಿಸಲುಗಳ ಕಡೆ ನಡೆದಾಡುತ್ತಿದ್ದರು ಎಂದು ಅವರೊಂದಿಗಿದ್ದವರು ಈಗಲೂ ಹೇಳುತ್ತಾರೆ.

ಒಮ್ಮೆ ಬಿಜಾಪುರದ ಪ್ರವಾಸಿಮಂದಿರದಲ್ಲಿ ಅರಸರು ತಂಗಿದ್ದರು. ಬೆಳಿಗ್ಗೆ ವಾಕಿಂಗ್ ಹೊರಟ ಅವರ ನಡಿಗೆ ಊರಾಚೆಗೆ ಸಾಗಿತು. ಅವರ ವಾಕಿಂಗ್ ಕೂಡ ಅಸಹಾಯಕ ಬದುಕುಗಳನ್ನು ಅರಸುತ್ತಲೇ ನಡೆದಂತಿತ್ತು. ಒಂಟಿಸಲಗದಂತೆ ಗಾಂಭೀರ್ಯದಿಂದ ನಡೆಯುತ್ತಿದ್ದ ಅರಸರ ಕಣ್ಣಿಗೆ ಎತ್ತೊಂದರ ಮೇಲೆ ಕೂತು ಗಂಟೆ ಬಾರಿಸುತ್ತಾ ಹೊರಟವನೊಬ್ಬ ಎದುರಿಗೆ ಸಿಕ್ಕ. ಅವನನ್ನು ನೋಡಿ ಕುತೂಹಲಗೊಂಡ ಅರಸು-  ಸಹಜವಾಗಿಯೇ, `ಯಾರಯ್ಯ ನೀನು? ಬೆಳಿಗ್ಗೇನೆ ಎತ್ತಿನ ಮೇಲೆ ಸವಾರಿ ಮಾಡ್ತಾ ಗಂಟೆಯಾಡಿಸುತ್ತ ಹೊರಟೆಯಲ್ಲ' ಎಂದರು. ಅದಕ್ಕೆ ಆ ವ್ಯಕ್ತಿ- `ನಾವು ಹೆಳವರು ಸ್ವಾಮಿ. ಹೀಗೆ ಎತ್ತಿನ ಮೇಲೆ ಊರೂರು ಸುತ್ತಿ ನಿಮ್ಮಂತ ದೊಡ್ಡವರ, ಉಳ್ಳವರ ವಂಶಾವಳಿಯನ್ನು ಹೇಳುತ್ತಾ ಭಿಕ್ಷಾಟನೆ ಮಾಡುತ್ತೇವೆ' ಅಂದ. ಅವನ ಮಾತು ಕೇಳಿದ ಅರಸರಿಗೆ ಎಲ್ಲಿಲ್ಲದ ಕೂತುಹಲ. `ನಿಮ್ಮ ಜಾತಿ ಯಾವುದಯ್ಯ' ಅಂದರು. ಆತ `ನಾವು ಹೆಳವ ಜಾತಿಯವರು ಸ್ವಾಮಿ' ಅಂದ. `ಹೆಳವ ಎನ್ನುವುದು ಒಂದು ಜಾತಿಯೇನಯ್ಯ? ನೀವು ಎಲ್ಲಿದ್ದೀರಿ? ಏನು ಮಾಡುತ್ತೀರಿ?' ಅಂತ ಕೇಳತೊಡಗಿದರು. ಅದಕ್ಕೆ ಆ ಹೆಳವ- `ವಂಶಾವಳಿಯನ್ನು ಹೇಳುವ ಅಲೆಮಾರಿ ಜಾತಿ ನಮ್ಮದು. ನಮಗೆ ಒಂದೂರಿಲ್ಲ, ಒಂದು ಕೇರಿಯಿಲ್ಲ. ಸಿಕ್ಕಸಿಕ್ಕ ಕಡೆ ಅಲೆದಾಡುತ್ತಾ ಊರಾಚೆ ಟೆಂಟುಗಳಲ್ಲಿ ಜೀವಿಸುತ್ತೇವೆ' ಅಂದ.

ಒಂದು ಕ್ಷಣ ಆಲೋಚಿಸಿದ ಅರಸರು ಅವನ ಎತ್ತು, ಗಂಟೆ, ವೇಷಭೂಷಣ ಎಲ್ಲವನ್ನು ನಿರುಕಿಸಿ ನೋಡಿದರು. `ನಿಮ್ಮಲ್ಲಿ ಯಾರಾದರೂ ಓದಿದವರು ಇದ್ದಾರೇನಯ್ಯ' ಅಂದರು. ಆ ಹೆಳವ ಒಂದು ಕ್ಷಣ ಯೋಚಿಸಿ- `ಹಾ.. ಇದಾನೆ ಸ್ವಾಮಿ. ಇಲ್ಲೇ ಮಠದಲ್ಲಿ ನಮ್ಮವನೊಬ್ಬ ಬಾಳ ವರ್ಷಗಳಿಂದ ಕಲೀತಿದಾನೆ' ಎಂದ. ತಕ್ಷಣ ಅರಸರು `ಅವನನ್ನು ಆ ಪ್ರವಾಸಿ ಮಂದಿರಕ್ಕೆ ಕಳಿಸಯ್ಯ' ಎಂದರು. ನಾನು ದೇವರಾಜ ಅರಸು ಅಂತ, ಮುಖ್ಯಮಂತ್ರಿ' ಎಂದು ತಮ್ಮನ್ನು ತಾವೇ ಪರಿಚಯಿಸಿಕೊಂಡರು. ಅದಕ್ಕೆ ಆ ವ್ಯಕ್ತಿ `ತಾವು ಗೊತ್ತು ಸ್ವಾಮಿ ಬುದ್ಯೋರು... ಈಗಲೇ ಮಠಕ್ಕೆ ಹೋಗಿ ಅವನನ್ನು ಕಳಿಸ್ತೀನಿ' ಅಂತ ಎತ್ತನ್ನು ಏರಿ ಹೊರಟ.

ಅರಸರು ವಾಕಿಂಗ್ ಮುಗಿಸಿ ಪ್ರವಾಸಿ ಮಂದಿರಕ್ಕೆ ಬಂದು ಸ್ನಾನ ಮುಗಿಸಿ ಹೊರ ಬರುವಷ್ಟರಲ್ಲಿ ಯುವಕನೊಬ್ಬ ನಿಂತಿದ್ದ. `ಬುದ್ದಿ... ನಾನು ಹೆಳವರ್ ಅಂತ ಹೆಳವ ಸಮಾಜದವನು. ಬೆಳಿಗ್ಗೆ ನಮ್ಮವನೊಬ್ಬ ನಿಮಗೆ ಸಿಕ್ಕಿದ್ದನಂತಲ್ಲ, ಆತ ನಿಮ್ಮನ್ನು ಕಾಣಲು ಹೇಳಿ ಕಳಿಸಿದ' ಎಂದ.
ಆ ಯುವಕನನ್ನು ಒಳಕ್ಕೆ ಕರೆದು ಕೂರಿಸಿದ ಅರಸರು, ಅವನ ಜಾತಿ, ಕುಲವೃತ್ತಿ, ಓದು, ಬರಹ ಎಲ್ಲವನ್ನು ವಿಚಾರಿಸಿಕೊಂಡರು. ಆಗಿನ ಕಾಲಕ್ಕೆ ಹೆಳವ ಸಮಾಜದ ಏಕೈಕ ವಿದ್ಯಾವಂತ ಆ ಹುಡುಗ ಎಂಬುದು ಅರಸರಿಗೆ ಅವನ ಮಾತುಗಳಿಂದ ಮನದಟ್ಟಾಯಿತು. ಆತ ಹೇಗೋ ವೀರಶೈವ ಮಠ ಸೇರಿ ಆಗಷ್ಟೇ ಕಾನೂನು ಪದವಿ ಮುಗಿಸಿದ್ದ. ಅರಸರಿಗೆ ಅವನನ್ನು ನೋಡಿ ತುಂಬಾ ಸಂತೋಷವಾಯಿತು. `ಬರುವ ವಾರ ವಿಧಾನಸೌಧಕ್ಕೆ ಬಂದು ನನ್ನ ನೋಡಯ್ಯ' ಎಂದು ಆ ಹುಡುಗನನ್ನು ಕಳಿಸಿಕೊಟ್ಟರು.

ಒಂದು ವಾರದ ನಂತರ ಒಂದು ಪುಟ್ಟ ಟ್ರಂಕ್ ಹಿಡಿದ ಆ ಹೆಳವರ ಹುಡುಗ ವಿಧಾನಸೌಧದ ಗೇಟಿನಲ್ಲಿ ನಿಂತಿದ್ದ. ಅರಸರು ಆ ಹುಡುಗನನ್ನು ವಿಧಾನಸೌಧಕ್ಕೆ ಕರೆದದ್ದಕ್ಕೆ ಯಾವುದೇ ಲಿಖಿತ ದಾಖಲೆ, ಪರಿಚಯ ಪತ್ರ, ಇರಲಿಲ್ಲ. ಹಾಗಾಗಿ ಭದ್ರತಾ ಸಿಬ್ಬಂದಿ ಆ ಹುಡುಗನಿಗೆ ವಿಧಾನಸೌಧಕ್ಕೆ ಪ್ರವೇಶ ನೀಡಲಿಲ್ಲ. ಪರಿಪರಿಯಾಗಿ ಅಂಗಲಾಚಿದ ಆ ಹುಡುಗ ಸೋತು ಸುಣ್ಣವಾಗಿ ಗೇಟಿನ ಬಳಿಯೇ ಕಾಯುತ್ತಾ ನಿಂತಿದ್ದ. ಮಧ್ಯಾಹ್ನದ ವೇಳೆಗೆ ಅರಸರು ವಿಧಾನಸೌಧದಿಂದ ಹೊರಬರುತ್ತಾರೆಂಬ ಸೂಚನೆ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ಗಡಿಬಿಡಿ ಹಾಗೂ ಚಲನವಲನಗಳಿಂದ ಆ ಹುಡುಗನಿಗೆ ಅರಿವಾಯಿತು.

ನಿರೀಕ್ಷೆಯಂತೆಯೇ ಅರಸರು ಹೊರಬಂದು ಕಾರಿನಲ್ಲಿ ಕೂತರು. ಗೇಟಿನ ಬಳಿ ನಿಂತಿದ್ದ ಜನಸಂದಣಿಯನ್ನು ಪೊಲೀಸರು ನಿಯಂತ್ರಿಸಲು ಹೆಣಗಾಡುತ್ತಿದ್ದರು. ಆ ವೇಳೆಗೆ ಜನಸಂದಣಿಯ ಮಧ್ಯದಿಂದ ಬಾಯಿ ಬಡಕೊಂಡು ಆ ಹೆಳವರ ಹುಡುಗ ಮುಖ್ಯಮಂತ್ರಿಗಳ ಕಾರಿಗೆ ಅಡ್ಡ ಬಂದ. ಪೊಲೀಸರು ತಡೆ ಹಿಡಿದಿದ್ದ ಆ ಹುಡುಗನನ್ನು ಅರಸರು ಗುರುತಿಸಿದರು. ಕಾರಿನ ಬಾಗಿಲು ತೆಗೆದು ಪಕ್ಕದಲ್ಲಿ ಕೂರಿಸಿಕೊಂಡರು. ಆ ಹುಡುಗ ತನ್ನ ಟ್ರಂಕ್‌ನೊಂದಿಗೆ ಮುಖ್ಯಮಂತ್ರಿಗಳ ಪಕ್ಕದ್ಲ್ಲಲಿ ಮುದುಡಿ ಕುಳಿತ. ಅರಸರು ಅವನನ್ನು ಕಾಂಗ್ರೆಸ್ ಕಚೇರಿಗೆ ಕರೆದೊಯ್ದರು. ಅಲ್ಲಿದ್ದ ನಾಯಕರ ಮುಂದೆ ಆ ಹುಡುಗನನ್ನು ನಿಲ್ಲಿಸಿ- `ಈ ಹುಡುಗ ಅಲೆಮಾರಿ, ಹೆಳವ ಜಾತಿಗೆ ಸೇರಿದವನು. ಇವನನ್ನು ಇಂದಿನಿಂದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷನನ್ನಾಗಿ ನೇಮಿಸುತ್ತಿದ್ದೇನೆ' ಎಂದಾಕ್ಷಣ, ಕಾಂಗ್ರೆಸ್ ಕಚೇರಿ ದಂಗು ಬಡಿದುಹೋಯಿತು. ಅನಿರೀಕ್ಷಿತ ಘೋಷಣೆ ಮಾಡಿದವರೇ ಯಾರ ಪ್ರತಿಕ್ರಿಯೆಗೂ ಕಾಯದೆ ಅರಸರು ಆ ಹುಡುಗನನ್ನು ತನ್ನೊಂದಿಗೆ ಕರೆದುಕೊಂಡು ಹೊರಟೇಬಿಟ್ಟರು. ಅವನಿಗೆ ತಂಗಲು ವ್ಯವಸ್ಥೆ ಮಾಡಬೇಕೆಂದು ಆಪ್ತ ಸಹಾಯಕರಿಗೆ ಹೇಳಿದರು.

ಅನಾಮಧೇಯ ಅಲೆಮಾರಿಯಾಗಿದ್ದ ಹೆಳವ ತರುಣನನ್ನು ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಿದ್ದೇ ತಡ ಪಕ್ಷದ ಕಚೇರಿಯಲ್ಲಿನ  ಬಲಿಷ್ಠ ಜಾತಿಗಳು, ಮೇಲ್ಜಾತಿಗಳು, ಸ್ಥಿರ ಜಾತಿಗಳು ಎಲ್ಲರೂ ಕೆಂಡಮಂಡಲವಾದವು. ಅರಸರು ಯಾವುದಕ್ಕೂ ಸೊಪ್ಪು ಹಾಕಲಿಲ್ಲ
ಹೆಳವ ಜಾತಿಯ ಈ ಹೆಳವರ್ ಎಂಬ ಅನಾಮಧೇಯ ಯುವ ಕಾಂಗ್ರೆಸ್ ಅಧ್ಯಕ್ಷನಾದ ಮತ್ತೊಮ್ಮೆ ಅರಸರನ್ನು ಭೇಟಿಯಾದ. `ಬುದ್ಧಿ, ನನಗೆ ಅಧಿಕಾರ ಕೊಟ್ಟಿರಿ. ಬದುಕಲಿಕ್ಕೆ ಏನಾದರೂ ಮಾಡಿಕೊಟ್ಟರೆ ಬದುಕಿಕೊಳ್ತೇನೆ' ಅಂದ. ಅರಸರು `ನಿನಗೆ ಏನು ಬೇಕೋ..' ಅಂದರು ಕೊಂಚ ಸಲಿಗೆಯಿಂದ. ಅದಕ್ಕಾತ, `ನಂಗೆ ಒಂದಷ್ಟು ಭೂಮಿ ಕೊಡಿಸಿ' ಎಂದು ನೇರವಾಗಿ ಬೇಡಿಕೆಯನ್ನಿಟ್ಟ. ತಕ್ಷಣ ರೆವೆನ್ಯೂ ಸೆಕ್ರೆಟರಿಯನ್ನು ಕರೆಸಿದ ಮುಖ್ಯಮಂತ್ರಿಗಳು, `ಈ ಹೆಳವನಿಗೆ ಎಲ್ಲಾದರೂ ಒಂದಷ್ಟು ಭೂಮಿ ಕೊಡಿಸ್ರಿ...' ಅಂದರು. ಆ ಅಧಿಕಾರಿ ತಕ್ಷಣ ಭೂಮಿ ಹುಡುಕಿ, `ಕಡೂರಲ್ಲಿ ಒಂದಷ್ಟು ಭೂಮಿ ಇದೆ ಸಾರ್, ಅದನ್ನ ಕೊಡಬಹುದು' ಎಂದರು. ಕಡೂರು ಎಂಬ ಹೆಸರನ್ನೇ ಕೇಳದ ಅಲೆಮಾರಿ ಹೆಳವ ತನಗೆ ಮಂಜೂರಾದ ಭೂಮಿ ಹುಡುಕುತ್ತಾ ಟ್ರಂಕ್ ಹಿಡಿದು ಕಡೂರಿನ ಕಡೆ ಹೊರಟ.

ಇಂದು ಆ ಹೆಳವ ಕಡೂರಿನ ಜಮೀನ್ದಾರ!

ಭೂಮಿ ಕೊಡಿಸಿದ ನಂತರವೂ ಹೆಳವರ್ ಮೇಲಿನ ಪ್ರೀತಿ ಅರಸರಿಗೆ ಬಿಡಲೇಯಿಲ್ಲ. ಈ ಹೆಳವ ಅತ್ಯಂತ ಬುದ್ಧಿವಂತನಾಗಿದ್ದ, ನಾಜೂಕಿನವನಾಗಿದ್ದ. ತನ್ನ ಭೂಮಿಯನ್ನು ಅಭಿವೃದ್ಧಿ ಮಾಡುತ್ತಾ ಅರಸರನ್ನು ಆಗಾಗ ಭೇಟಿ ಮಾಡುತ್ತಾ, ಅವರಿಗೆ ಆಪ್ತನಾದ. ಅರಸರು ಒಮ್ಮೆ ಈ ಹೆಳವರ್‌ಗೆ ಕಡೂರಿನ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ತೀರ್ಮಾನಿಸಿದರು. ಇದರಿಂದ ಹೆಳವರ್ ಕಂಗಾಲಾದರು. ಮೇಲ್ಜಾತಿಗಳ ವಿರೋಧ ಕಟ್ಟಿಕೊಂಡು ಹೋರಾಟ ನಡೆಸಬೇಕಾಗುತ್ತದೆ ಎಂದು ಲೆಕ್ಕಾಚಾರ ಹಾಕಿದವರೇ ಬಿ.ಫಾರಂ ನಿಂದ ತಪ್ಪಿಸಿಕೊಳ್ಳಲು ಯಾರಿಗೂ ಕಾಣದಂತೆ ಮೂರು ದಿನ ರೈಲ್ವೆ ಸ್ಟೇಷನ್‌ನಲ್ಲಿ ತಲೆಮರೆಸಿಕೊಂಡರು. ಸಮಯಕ್ಕೆ ಹೆಳವರ್ ಸಿಗದ ಕಾರಣಕ್ಕೆ ಅರಸರು ಬಿ.ಫಾರಂ ಅನ್ನು ಬೇರೆ ಯಾರಿಗೋ ಕೊಡಬೇಕಾಯಿತು. ಹೆಳವರ್ ಹೊರ ಬಂದಮೇಲೆ ಅರಸರಿಂದ ಚೆನ್ನಾಗಿ ಬೈಸಿಕೊಂಡರು.

ಇಂದಿರಾಗಾಂಧಿ ಸ್ಪರ್ಧಿಸಿದ ಚಿಕ್ಕಮಗಳೂರಿನ ಚರಿತ್ರಾರ್ಹ ಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರಿನ ಕಾಂಗ್ರೆಸ್ ಕಚೇರಿಯ ಚುನಾವಣೆ ಉಸ್ತುವಾರಿಯನ್ನು ನೋಡಿಕೊಳ್ಳಲು ಈ ಹೆಳವರ್‌ಗೆ ಅರಸರ ಆದೇಶಿಸಿದರು. ಅರಸರು ಚುನಾವಣಾ ಪ್ರಚಾರದಲ್ಲಿ ಊರೆಲ್ಲಾ ಸುತ್ತಾಡಿ ದಣಿದು, ಮಧ್ಯರಾತ್ರಿ ವೇಳೆಗೆ ಪ್ರವಾಸಿ ಮಂದಿರಕ್ಕೆ ಬರುತ್ತಿದ್ದರು. ಸರಿಹೊತ್ತಿನಲ್ಲಿ `ರಾಯಲ್ ಸೆಲ್ಯೂಟ್' ಹಿಡಿದು ಕೂತಿರುತಿದ್ದ ಹೆಳವರ್ ಕಂಬಳಿ ಹೊದ್ದು ನಡುಗುತ್ತಿದ್ದಂತೆ ನಟಿಸುತ್ತಿದ್ದರಂತೆ. ಅರಸರಿಗೆ ಒಂದು ಪೆಗ್ ಹಾಕಿ ಅಲ್ಲೇ ನೆಲದ ಮೇಲೆ ಕೂರುತಿದ್ದ ಅವರನ್ನು ನೋಡಿ,  `ಚಳಿ ಇದೆ ನೀನು ಒಂದು ಪೆಗ್ ಹಾಕ್ಕೋ...' ಎಂದು ಅರಸರು ಹೇಳಿದಾಗ, ಹೆಳವರ್ ಭಯ, ಭಕ್ತಿ ಅಭಿನಯಿಸುತ್ತ- `ನಿಮ್ಮ ಮುಂದೆ ಹೆಂಗ್ ಕುಡೀಲಿ ಬುದ್ದಿ' ಎನ್ನುತಿದ್ದರಂತೆ. ಆಗ ಅರಸರು ನಕ್ಕು, `ಹೊರಗೆ ಹೋಗಿ ಒಂದು ಪೆಗ್ ಕುಡಿದು ಬಾ' ಎನ್ನುತಿದ್ದರಂತೆ. ಇಡೀ ಬಾಟಲಿಯನ್ನು ಹೊರಗೆ ತೆಗೆದುಕೊಂಡು ಹೋಗಿ, ನೀರು-ಸೋಡ ಏನನ್ನೂ ಬೆರಸದೆ ಇಡೀ ಬಾಟಲಿಯನ್ನು ಗಂಟಲಿಗೆ ಸುರಿದುಕೊಳ್ಳುತಿದ್ದ ಹೆಳವರ್, ಒಂದು ಪೆಗ್ ಅನ್ನು ಉಳಿಸಿ ಅರಸರಿಗೆ ವಾಪಸ್ ನೀಡುತ್ತಿದ್ದರಂತೆ. ಇದನ್ನು ಕಂಡ ಅರಸರು, `ಎಲಾ ಹೆಳವ, ಒಂದು ಪೆಗ್ ಕುಡಿದು ತಾರೋ ಎಂದು ಬಾಟಲಿ ಕೊಟ್ಟರೆ ಒಂದು ಪೆಗ್ ಉಳಿಸಿ ತಂದಿದ್ದೀಯಲ್ಲ... ಇಷ್ಟು ದುಬಾರಿ ಸ್ಕಾಚ್ ಅನ್ನು ನೀರು ಕುಡಿದಂತೆ ಕುಡಿದಿದ್ದೀಯಲ್ಲ' ಎಂದಾಗ, ಹೆಳವರ್ ಏನೂ ತಿಳಿಯದ ಮುಗ್ಧನಂತೆ ಭಯ ಭೀತನಾಗಿ ನಿಂತಂತೆ ನಟಿಸುತ್ತಿದ್ದರಂತೆ.

ಇಂದಿರಾಗಾಂಧಿ, ವಿರೇಂದ್ರ ಪಾಟೀಲ್ ನಡುವಿನ ಪ್ರತಿಷ್ಠಿತ ಚಿಕ್ಕಮಗಳೂರು ಚುನಾವಣೆಯಲ್ಲಿ ಜಾತಿ ಕಾರಣಕ್ಕೆ ಕೆಲ ಬಲಿಷ್ಠ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡುತ್ತಿದ್ದರು. ಇದನ್ನು ತಿಳಿದ ಅರಸರಿಗೆ ಬೇಸರವಾದರೂ, ಅದನ್ನು ನೇರವಾಗಿ ಹೇಳಲಾರದ ಪರಿಸ್ಥಿತಿ ಅವರದು. ಈ ತೊಳಲಾಟದ ಸಂದರ್ಭದಲ್ಲಿ ಪಕ್ಷದ ನಾಯಕರೆಲ್ಲ ಚಿಕ್ಕಮಗಳೂರಿನ ಕಾಂಗ್ರೆಸ್ ಕಚೇರಿಗೆ ಬಂದಾಗ, ಹೆಳವರ್‌ನನ್ನು ಕರೆದ ಅರಸರು, `ಏ ಹೆಳವ, ಕಾಂಗ್ರೆಸ್ ಅನ್ನ ತಿಂದು ಕಾಂಗ್ರೆಸ್‌ಗೆ ವಂಚನೆ ಮಾಡ್ತಿಯಲ್ಲೋ... ಪಕ್ಷಕ್ಕೆ ಮೋಸಮಾಡಿದ್ರೆ ನಿನಗೆ ಒಳ್ಳೇಯದಾಗುತ್ತಾ.. ನಿನಗೇನಾದ್ರು ನೀತಿ ನಿಯತ್ತಿದೆಯಾ...' ಅಂತೆಲ್ಲ ನಾಯಕರ ಎದುರೇ ಸಿಕ್ಕಾಪಟ್ಟೆ ಬೈದರಂತೆ. ನಾಯಕರೆಲ್ಲ ಹೋದಮೇಲೆ, ಬೈಸಿಕೊಂಡ ಹೆಳವರ್ `ನಾನು ಹೊಗ್ತೀನಿ ಬುದ್ದಿ... ಅವರ ಮುಂದೆಲ್ಲಾ ಬಾಯಿಗೆ ಬಂದಂತೆ ಬೋದುಬಿಟ್ಟಿರಿ..' ಅಂದನಂತೆ. ಆಗ ಅರಸರು ಹೆಳವನನ್ನು ತಬ್ಬಿಕೊಂಡು `ನಿನ್ನನ್ನು ಬೈಯದೆ ಇನ್ಯಾರನ್ನು ಬೈಯಲಿ.. ಆ ಬಲಿಷ್ಠ ಜಾತಿಯವರನ್ನು ಬೈಯಲಿಕ್ಕಾಗುತ್ತಾ.. ನಿನಗೆ ಬೈದಿದ್ದು ನಿನಗಲ್ಲ ಅನ್ನುವುದು ಅವರಿಗೂ ಗೊತ್ತು.. ಆದ್ದರಿಂದ ನಿನ್ನನ್ನು ನೆಪಮಾಡಿಕೊಂಡು ಅವರನ್ನು ಬೈದೆ..' ಎಂದು ಕಣ್ಣಲ್ಲಿ ನೀರು ತುಂಬಿಕೊಂಡರಂತೆ.

ಅರಸರು ಅಂದು ರೂಪಿಸಿದ ಹೆಳವ ಜಾತಿಯ ಹೆಳವರ್, ಹಾವನೂರು ಆಯೋಗದಿಂದ ಹಿಡಿದು ನನ್ನ ನೇತೃತ್ವದ ಆಯೋಗದವರೆಗೆ ಸತತವಾಗಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿದ್ದರು. ಅವರು ತಮ್ಮ ಮಕ್ಕಳೆಲ್ಲರನ್ನು ಒಳ್ಳೆಯ ವಿದ್ಯಾವಂತರನ್ನಾಗಿ, ಬುದ್ಧಿವಂತರನ್ನಾಗಿ ಮಾಡಿದ್ದಾರೆ. ಅರಸರು ಅಂದು ತನ್ನ ಜಾತಿ ಮೇಲೆ ತೋರಿದ ಪ್ರೀತಿ, ವಿಶ್ವಾಸಗಳ ಕಾರಣಕ್ಕೆ ಅನಾಮಧೇಯರಾದ ಅಂದಿನ ಹೆಳವರೊಬ್ಬರು ಇಂದು ಸಮಾಜದಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ ಬೆಳೆದಿದ್ದಾರೆ.

ಹಿಂದುಳಿದ ವರ್ಗಗಳಿಗೆ, ಅಲೆಮಾರಿಗಳಿಗೆ, ಅಸಹಾಯಕರಿಗೆ ತಾಯಿಯಂತಿದ್ದ ಅರಸರು ಅದೆಷ್ಟು ಮಂದಿ ಹೆಳವರಂತರನ್ನು ಗುರುತಿಸಿದ್ದರೋ, ಬೆಳೆಸಿದ್ದರೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT