ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಒಳನೋಟ:ಕಲ್ಯಾಣ ಕೆಡುವ ಹಾದಿ– ರಾಜಕೀಯ ಬೆಳವಣಿಗೆಗೂ ಕನ್ನಡಿ ಹಿಡಿವ ಆತ್ಮಕಥನ

ವಿ.ಬಾಲಸುಬ್ರಮಣಿಯನ್ ಅವರ ಕಲ್ಯಾಣ ಕೆಡುವ ಹಾದಿ- ಕನ್ನಡಕ್ಕೆ: ಎನ್.ಸಂಧ್ಯಾರಾಣಿ
Published 25 ನವೆಂಬರ್ 2023, 21:36 IST
Last Updated 25 ನವೆಂಬರ್ 2023, 21:36 IST
ಅಕ್ಷರ ಗಾತ್ರ

ಕನ್ನಡದಲ್ಲಿ ಈವರೆಗೆ ಬಂದಿರುವ ಆತ್ಮಕಥನಗಳ ಸಾಲಿನಲ್ಲಿ ಬಹುಶಃ ‘ಕಲ್ಯಾಣ ಕೆಡುವ ಹಾದಿ’ ಹತ್ತರಲ್ಲಿ ಹನ್ನೊಂದು ಆಗುತ್ತಿತ್ತು. ಆದರೆ, ಅದಕ್ಕೆ ಆಸ್ಪದ ನೀಡದ ರೆಬೆಲ್ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್ ಬೇರೆಯದ್ದೇ ಕಥನ ತೆರೆದಿಡುತ್ತಾರೆ. ತಮ್ಮ ಬದುಕಿನ ಚಿತ್ರಣಕ್ಕೆ ಸೀಮಿತಗೊಳ್ಳದೇ ಆಯಾ ಕಾಲಘಟ್ಟದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ.

‘ರಾಜಿಯಾಗದೇ ಅನ್ಯಮಾರ್ಗವಿಲ್ಲ’ ಎಂಬ ಅಸಹಾಯಕ ಸ್ಥಿತಿ ಎದುರಾದರೂ ವ್ಯವಸ್ಥೆಯೊಂದಿಗೆ ‘ನಾ ಮಣಿಯೇ’ ಎಂಬುದನ್ನು ಸ್ಪಷ್ಟವಾಗಿ ಹೇಳುವ ಬಾಲಸುಬ್ರಮಣಿಯನ್ 46 ವರ್ಷಗಳ ವೃತ್ತಿಜೀವನದಲ್ಲಿ ಅರಾಜಕತ್ವ ಸಿದ್ಧಾಂತ ಅನುಸರಿಸಿದವರು. ಮಾರ್ಕ್ಸಿಸ್ಟ್ ವಿಚಾರಧಾರೆಯು ಅವರ ಬದುಕು ಮತ್ತು ವೃತ್ತಿಯ ಮೇಲೆ ಪ್ರಭಾವ ಬೀರಿದೆ.

ಸರ್ಕಾರಿ ಅಧಿಕಾರಿಗಳು ವೃತ್ತಿಯಲ್ಲಿದ್ದಾಗ ಅಷ್ಟೇ ಅಲ್ಲ, ನಿವೃತ್ತಿ ಬಳಿಕವೂ ಸರ್ಕಾರಿ ವ್ಯವಸ್ಥೆಯಲ್ಲಿ ಆಗು–ಹೋಗುಗಳು, ‘ಆನ್‌’ ಮತ್ತು ‘ಆಫ್‌ ದಿ ರಿಕಾರ್ಡ್’ ಮಾತನಾಡಲು ಬಯಸುವುದಿಲ್ಲ. ರಾಜಕಾರಣಿ ಬಯಸಿದಂತೆ ‘ಸೇವೆ’ ಸಲ್ಲಿಸಿ, ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಅಲ್ಲಿಗೆ ಆ ದಿನದ ಕೆಲಸ ಮುಗೀತು ಎಂಬ ಮನೋಭಾವ ಕೆಲ ಅಧಿಕಾರಿಗಳದ್ದಾಗಿರುತ್ತದೆ. ಆದರೆ, ಅಂಥವರೊಂದಿಗೆ ಗುರುತಿಸಿಕೊಳ್ಳಲು ಬಯಸದೇ ಮತ್ತು ಕಾನೂನಿನ ಚೌಕಟ್ಟನ್ನೂ ಮೀರದೇ ಜನರ ಪರ ಕೆಲಸ ಮಾಡುವ ಮನಃಸ್ಥಿತಿ ವಿ.ಬಾಲಸುಬ್ರಮಣಿಯವರದ್ದು. ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು, ಸಹೋದ್ಯೋಗಿಗಳ ಜೊತೆ ಹೇಗೆಲ್ಲ ಕೆಲಸ ಮಾಡಿ, ಸವಾಲುಗಳನ್ನು ಎದುರಿಸಬೇಕಾಯಿತು ಎಂಬುದನ್ನು ಅವರು ಯಾವುದೇ ಮುಚ್ಚುಮರೆಯಿಲ್ಲದೆ ಮತ್ತು ವೈಭವೀಕರಿಸದೇ ವಿವರಿಸಿದ್ದಾರೆ.

ಪರಿಚಯ ಮತ್ತು ಪೀಠಿಕೆಯ ಕೆಲ ಪುಟಗಳನ್ನು ಓದುತ್ತ ಸಾಗಿದಂತೆ ಬೇರೆಯದ್ದೇ ಅನುಭೂತಿ ನೀಡುತ್ತದೆ. ಕೃತಿಯುದ್ದಕ್ಕೂ ಅಲ್ಲಲ್ಲಿ ಬರುವ ದಾರ್ಶನಿಕರ ಅಭಿಮತ, ಸಿದ್ಧಾಂತ, ವೈಚಾರಿಕತೆ ಮತ್ತು ಅದಕ್ಕೆ ಪೂರಕವಾದ ಪ್ರಸಂಗಗಳು ಆಸಕ್ತಿ ಮೂಡಿಸುತ್ತವೆ. ಗ್ರಾಮೀಣ ಪ್ರದೇಶದಿಂದ ವಿದೇಶದವರೆಗಿನ ಪ್ರಯಾಣ ಎಲ್ಲವನ್ನೂ ಕಟ್ಟಿಕೊಡುತ್ತದೆ.

ಹಳೆಯ ಘಟನೆಗಳ ಮೆಲುಕು ಮತ್ತು ಆಯಾ ಪ್ರದೇಶದ ಚಿತ್ರಣ ಕಟ್ಟಿಕೊಡುವ ಈ ಕೃತಿಯು ಭಾರತೀಯ ರಾಜಕೀಯ ವ್ಯವಸ್ಥೆ ಮತ್ತು ಅಧಿಕಾರಿಗಳ ಕಾರ್ಯನಿರ್ವಹಣೆ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಬೇರೆ ಬೇರೆ ಕಾರಣಗಳಿಂದ ಈವರೆಗೆ ಎಲ್ಲಿಯೂ ದಾಖಲಾಗದ ಹಲವು ಸಂಗತಿಗಳು ಇದರಲ್ಲಿ ಅನಾವರಣಗೊಂಡಿವೆ.

ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ, ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್ ಮತ್ತು ಎಸ್.ಎಂ.ಕೃಷ್ಣ ಅವರ ಕಾರ್ಯದರ್ಶಿ ಮತ್ತು ಕೈಕೆಳಗಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ವಿ.ಬಾಲಸುಬ್ರಮಣಿಯನ್ ಅವರ ‘Fall from Grace’ ಇಂಗ್ಲಿಷ್ ಕೃತಿಯನ್ನು ಸಾಹಿತಿ ಎನ್.ಸಂಧ್ಯಾರಾಣಿ ಅವರು ಕನ್ನಡಕ್ಕೆ ತಂದಿದ್ದಾರೆ. ಮೂಲಕೃತಿಯ ಆಶಯಕ್ಕೆ ಧಕ್ಕೆಯಾಗದ ಮತ್ತು ಓದುಗರಿಗೂ ಕಠಿಣವಾಗದ ರೀತಿಯಲ್ಲಿ ಸೊಗಸಾಗಿ ಕನ್ನಡೀಕರಿಸಿದ್ದಾರೆ.

ಕಲ್ಯಾಣ ಕೆಡುವ ಹಾದಿ

ಇಂಗ್ಲಿಷ್: ವಿ.ಬಾಲಸುಬ್ರಮಣಿಯನ್

ಕನ್ನಡಕ್ಕೆ: ಎನ್.ಸಂಧ್ಯಾರಾಣಿ

ಪ್ರ: ಲಡಾಯಿ ಪ್ರಕಾಶನ

ಸಂ: 9480286844

Cut-off box - ಕಲ್ಯಾಣ ಕೆಡುವ ಹಾದಿ ಇಂಗ್ಲಿಷ್: ವಿ.ಬಾಲಸುಬ್ರಮಣಿಯನ್ ಕನ್ನಡಕ್ಕೆ: ಎನ್.ಸಂಧ್ಯಾರಾಣಿ ಪ್ರ: ಲಡಾಯಿ ಪ್ರಕಾಶನ ಸಂ: 9480286844

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT