ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿಗನ್ನಡಂ ಗೆಲ್ಗೆ | ಪರಂಪರೆ ಮೀರಿದ ರಚನಾ ಕ್ರಮ

Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಒಂದು ಭಾಷೆಯ ಪದಪ್ರಯೋಗದಲ್ಲಾಗುವ ಸರಿ-ತಪ್ಪುಗಳ ವಿವೇಚನೆ, ಪದಗಳ ಹುಟ್ಟು ಬೆಳವಣಿಗೆ, ಹೊಸ ರೂಪಧಾರಣೆಗಳ ಇತಿಹಾಸ ಮತ್ತು ಶಬ್ದ ಪ್ರಯೋಗದ ಪರಿಷ್ಕೃತ ಚಿಂತನೆಯನ್ನು ಗುರಿಯಾಗಿ ಇಟ್ಟುಕೊಂಡು ರಚಿಸಲಾಗಿರುವ ಕೃತಿ ‘ಸರಿಗನ್ನಡಂ ಗೆಲ್ಗೆ’. ಕನ್ನಡದ ಬೆರಗನ್ನು ಕುರಿತ 600 ಸ್ವಾರಸ್ಯಕರ ಕಿರು ಟಿಪ್ಪಣಿಗಳನ್ನು ಈ ಪುಸ್ತಕ ಒಳಗೊಂಡಿದೆ. ಪಾ.ವೆಂ. ಆಚಾರ್ಯ, ಜಿ. ವೆಂಕಟಸುಬ್ಬಯ್ಯ, ಚಿ.ಮೂ. ಮೊದಲಾದ ಭಾಷಾಜಿಜ್ಞಾಸುಗಳ ಪೂರ್ವ ಪರಂಪರೆಯನ್ನು ಪ್ರಸ್ತುತ ಕೃತಿ ಅಧಿಕೃತವಾಗಿ ಮುಂದುವರೆಸುತ್ತಿದೆ. ಆದರೆ ಈ ಕೃತಿ ಪೂರ್ವಿಕರ ಈ ಬಗೆಯ ಕೃತಿಗಳಿಗಿಂತ ಭಿನ್ನವಾಗಿರುವುದು ಇದರ ರಚನಾ ಕ್ರಮದಲ್ಲಿ. ನುಡಿ ಜಾಣ್ಮೆ, ತಿಳಿ ತಮಾಷೆ, ಲಾಲಿತ್ಯಗಳಿಂದ ಈ ಪುಸ್ತಕ ಕೇವಲ ಪಾಂಡಿತ್ಯದ ಫಲವೆನ್ನಿಸದೆ ಅಸಾಮಾನ್ಯವಾದ ಓದಿಸಿಕೊಳ್ಳುವ ಗುಣವನ್ನು ಪಡೆದುಕೊಂಡಿದೆ.

ಕೆಲವು ಉದಾಹರಣೆಗಳನ್ನು ಗಮನಿಸಿ:  1. ಮಾಣಿ ಅಂದರೆ ಹೋಟೆಲ್ ಸರ್ವರ್. ಆದರೆ ಮಂಗಳೂರು ಕಡೆ ಮನೆಯ ಗಂಡು ಹುಡುಗರನ್ನು ಮಾಣಿ ಅಂತ ಕರೆಯುತ್ತಾರೆ. ಅದು ಬಂದಿರೋದು ಸಂಸ್ಕೃತದ ಮಾಣವ ಅನ್ನುವ ಪದದಿಂದ. ಅದರ ಅರ್ಥ ಹುಡುಗ ಅಂತ ಅಷ್ಟೆ. 2. ಕನ್ನಡದ ಬಗ್ಗೆ ಯಾವಾಗಲೂ ಮಾತಾಡುತ್ತೇವೆ... ಕನ್ನಡಕದಲ್ಲಿ ಕನ್ನಡ ಯಾಕೆ ಬಂತು? .... ಅದು ಕನ್ನಡಕ ಅಲ್ಲ; ಕಣ್ಣಡಕ! ದೃಷ್ಟಿಯನ್ನು ನಿಚ್ಚಳಗೊಳಿಸಿಕೊಳ್ಳಲು ಕಣ್ಣುಗಳಿಗೆ ಅಳವಡಿಸೊ ಸಾಧನ. ಕಣ್ಣಡಕ ಇದ್ದದ್ದು ಕನ್ನಡಕ ಆಗಿದೆ. 3. ಸಂಸ್ಕೃತದಲ್ಲಿ ವಹ್ ಎಂದರೆ ಹೊತ್ತುಕೊಂಡು ಹೋಗುವುದು. ನಮ್ಮನ್ನು ಹೊತ್ತುಕೊಂಡು ಹೋಗುವ ವಾಹನ ಬಂದದ್ದು ಅದರಿಂದಲೇ.... 4. ಬವಣೆ ಬಂದಿರೋದು ಸಂಸ್ಕೃತದ ಭ್ರಮಣೆ ಪದದಿಂದ.  5. ಮಿಡ್ ಟರ್ಮ್ ಅನ್ನುವುದನ್ನು ಮಧ್ಯಂತರ ಮಾಡಿಕೊಂಡಿದ್ದೇವೆ. ಆದರೆ ಇಲ್ಲೂ ಮಧ್ಯಾಂತರವೇ ಸರಿ. ವ್ಯಾಕರಣದ ಪ್ರಕಾರ ತಪ್ಪಾದರೂ ಮಧ್ಯಂತರ ಎನ್ನುವ ಪದ ಈಗ ನಿಘಂಟಿನಲ್ಲಿ ಇದೆ. ಬಳಕೆ ಯಿಂದಾಗಿ ಅದು ಒಪ್ಪಿತವಾಗಿ ಹೋಗಿದೆ. 

ಆಧುನಿಕ ಭಾಷಾ ವಿಜ್ಞಾನಿಗಳು ಹೇಳುವುದು ಇದನ್ನೇ. ಭಾಷೆಯಲ್ಲಿ ಇದೇ ಸರಿ, ಇದು ತಪ್ಪು ಎನ್ನುವಂತಿಲ್ಲ. ಬಳಕೆಯೇ ಪದಪ್ರಯೋಗದ  ಔಚಿತ್ಯವನ್ನು ನಿರ್ಧರಿಸುತ್ತದೆ. ಈ ಅಭಿಪ್ರಾಯ ‘ಸರಿಗನ್ನಡಂ ಗೆಲ್ಗೆ’ ಕೃತಿಕಾರರಿಗೂ ಮಾನ್ಯವೇ. ಆದರೂ ನಮ್ಮ ಭಾಷೆಯ ಅಧಿಕೃತತೆಯ ಬಗ್ಗೆ ಅರಿವನ್ನು ವೃದ್ಧಿಸಿಕೊಳ್ಳುವುದು ಉಚಿತ ಎನ್ನುವ ನಂಬಿಕೆಯೊಂದಿಗೆ ಅಪಾರ ಈ ಕೃತಿಯನ್ನು ರಚಿಸಿದ್ದಾರೆ. ಪದಗಳ ಮೂಲವನ್ನು ಶೋಧಿಸುವಲ್ಲಿ ತಮ್ಮ ವ್ಯುತ್ಪತ್ತಿಯನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಶಬ್ದಾರ್ಥ, ಶಬ್ದ ಮೂಲ, ಶಬ್ದ ಸ್ವರೂಪ ನಿರ್ಣಯದಲ್ಲಿ ವಿಶೇಷವಾದ ಎಚ್ಚರವನ್ನು ತೋರಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಕೃತಿಯು ಪಾಂಡಿತ್ಯ ಜಡವಾಗದಂತೆ, ಸುಲಲಿತವಾದ ತಮಾಷೆಯ ಶೈಲಿಯನ್ನು ಉದ್ದಕ್ಕೂ ಬಳಸಿಕೊಂಡಿದ್ದಾರೆ. ಎಚ್.ಎಸ್. ಬಿಳಿಗಿರಿ ಅವರು ಕೇಶಿರಾಜನ ಕೃತಿಗೆ ಬರೆದ ವ್ಯಾಖ್ಯೆಯಲ್ಲಿ ಈ ಗುಣವನ್ನು ನಾನು ಕಂಡಿದ್ದೇನೆ. ಇಂಥ ನಿತ್ಯಾಭ್ಯಾಸದ ಕೃತಿಯನ್ನು ಬರೆದ ಅಪಾರ, ಅವರಿಗೆ ಕುಮ್ಮಕ್ಕು ನೀಡಿದ ಅವರ ಗೆಳೆಯರು, ಪರಿಶುದ್ಧವಾಗಿ ಪ್ರಕಟಿಸಿದ ಛಂದ ಪುಸ್ತಕದ ಪ್ರಕಾಶಕರು ಇವರನ್ನು ಎಷ್ಟು ಶ್ಲಾಘಿಸಿದರೂ ಕಮ್ಮಿಯೇ. ಮೈ ಮತ್ತು ಮನ ಕೊಡವಿಕೊಂಡು ಈ ಪುಸ್ತಕ ರಚಿಸಿರುವ ಅಪಾರ ಅವರಿಗೆ ಅಭಿನಂದನೆ ಹೇಳಲೇಬೇಕು. 

ಸರಿಗನ್ನಡಂ ಗೆಲ್ಗೆ

ಲೇ: ಅಪಾರ

ಪ್ರ: ಛಂದ ಪುಸ್ತಕ, ಬೆಂಗಳೂರು

ಸಂ: 9844422782

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT