ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ಹಿಗ್ಗಿಸುವ ಕಥನಗಳು (ಚಿಲಿಯಲ್ಲಿ ಭೂಕಂಪ)

ವಿಮರ್ಶೆ
Last Updated 2 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಚಿಲಿಯಲ್ಲಿ ಭೂಕಂಪ
(ಹದಿನೆಂಟು ಕಥನಗಳು), ಲೇ: ಬಿ.ಎ. ವಿವೇಕ ರೈ, ಪ್ರ: ಅಕ್ಕೆಸಿರಿ ಸಾಂಸ್ಕೃತಿಕ ಕೇಂದ್ರ,ಪು: 96, ರೂ.75  ಮಂಗಳೂರು.

ಬಿ.ಎ. ವಿವೇಕ ರೈ ಅವರು ನಮ್ಮ ನಡುವಿನ ಅಪರೂಪದ ವಿದ್ವಾಂಸರಲ್ಲಿ ಒಬ್ಬರು. ಅವರ ಆಸಕ್ತಿಯ ಮತ್ತು ಅಧ್ಯಯನದ ವ್ಯಾಪ್ತಿ ಪಾಶ್ಚಾತ್ಯ ಸಾಹಿತ್ಯದಿಂದ ಹಳೆಗನ್ನಡ ಸಾಹಿತ್ಯ, ಜನಪದ ಸಾಹಿತ್ಯದಿಂದ ಅಭಿಜಾತ ಸಾಹಿತ್ಯ, ಕತೆ–ಕಾದಂಬರಿಗಳಿಂದ ರಂಗಭೂಮಿ–ಚಲನಚಿತ್ರಗಳವರೆಗೆ ಹಬ್ಬಿದೆ. ವಿಶ್ವದ ಹಲವು ಅತ್ಯುತ್ತಮ ಸಂಗತಿಗಳನ್ನು ಕನ್ನಡಿಗರಿಗೆ ಪರಿಚಯಿಸಿರುವಂತೆ ಕನ್ನಡದ ಹಲವು ಅತ್ಯುತ್ತಮ ಸಾಧನೆಗಳನ್ನು ಅವರು ವಿಶ್ವಕ್ಕೂ ಪರಿಚಯಿಸಿದ್ದಾರೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ, ಪ್ರಕಟಿಸಿದ ಹದಿನೆಂಟು ಕಥನಗಳನ್ನು ಅವರು ಪ್ರಸ್ತುತ ‘ಚಿಲಿಯಲ್ಲಿ ಭೂಕಂಪ’ ಹೆಸರಿನ ಸಂಕಲನದಲ್ಲಿ ಒಟ್ಟಿಗೆ ತಂದಿದ್ದಾರೆ. ‘ಕತೆ ಮತ್ತು ಕಥನಗಳು ಎಂದೂ ಹಳತಾಗುವುದಿಲ್ಲ’ ಎಂಬುದು ವಿವೇಕ ರೈಗಳ ನಂಬಿಕೆ. ಅದು ನಿಜ ಎಂದು ಈ ಕಥನಗಳನ್ನು ಓದಿದಾಗ ಖಂಡಿತಾ ಅನ್ನಿಸುತ್ತದೆ.

‘ಕಥನ’ ಎಂಬ ಪರಿಕಲ್ಪನೆಯನ್ನು ವಿವೇಕ ರೈ ಕೇವಲ ಕತೆ–ಕಾದಂಬರಿಗಳಿಗೆ ಸೀಮಿತಗೊಳಿಸಿಕೊಳ್ಳದೆ ಅನುಭವ ಕಥನ, ವಿಮರ್ಶೆಯ ಕಥನ ಮತ್ತು ಅನುವಾದ–ಪುನರ್ಲೇಖ ಕಥನಗಳಿಗೂ ವಿಸ್ತರಿಸಿಕೊಂಡಿದ್ದಾರೆ. ಹಾಗಾಗಿ ಈ ಸಂಗ್ರಹದ ಲೇಖನಗಳಲ್ಲಿ ತುಂಬ ವೈವಿಧ್ಯ ಕಂಡುಬರುತ್ತದೆ. ಅವರು ಎಂದೋ ಕೇಳಿದ ಹಲವು ಜಾನಪದ ಕತೆಗಳು ಇವತ್ತಿಗೂ ಹೇಗೆ ಮತ್ತು ಯಾಕೆ ಪ್ರಸ್ತುತ ಎಂಬ ಪ್ರಶ್ನೆಗಳೊಂದಿಗೆ ಇಲ್ಲಿ ಪುನರ್ ಕಥಿತವಾಗಿವೆ. ಹಲವು ಐತಿಹ್ಯ, ಪುರಾಣ, ಕಥನ ಮಾದರಿಗಳ ಸ್ವಾರಸ್ಯಕರ ನಿರೂಪಣೆ ಅನೇಕ ಲೇಖನಗಳ ಆಶಯವಾಗಿದೆ. ಗುಲ್ವಾಡಿ ವೆಂಕಟರಾಯರ ‘ಭಾಗೀರಥಿ’ (1900) ಕಾದಂಬರಿಯನ್ನು ಕುರಿತ ಮೌಲಿಕವಾದ ವಿಮರ್ಶೆಯೂ ಇಲ್ಲಿ ಸೇರಿದೆ.

ವಿವೇಕ ರೈ ಅವರು ಈಚಿನ ವರ್ಷಗಳಲ್ಲಿ ಜರ್ಮನಿಯಲ್ಲಿ ಬೋಧನೆ–ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದವರು. ಸಹಜವಾಗಿಯೇ ಈ ಸಂಗ್ರಹದ ಹೆಚ್ಚಿನ ಬರಹಗಳು ಅಲ್ಲಿಯ ಅನುಭವ, ಸಾಹಿತ್ಯ ಕುರಿತು ಇವೆ. ಅನೇಕ ಸುಪ್ರಸಿದ್ಧ ಜರ್ಮನ್ ಲೇಖಕರನ್ನು ರೈ ಅವರು ಇಲ್ಲಿ ಅರ್ಥಪೂರ್ಣವಾಗಿ ಪರಿಚಯಿಸಿಕೊಟ್ಟಿದ್ದಾರೆ. ಹೀಗೆ ಮೇಲುನೋಟಕ್ಕೆ ಚದುರಿದ ಬರಹಗಳ ಸಂಗ್ರಹ ಎಂದು ಅನ್ನಿಸಬಹುದಾದ ಸಂಕಲವೊಂದನ್ನು ‘ಕಥನಗಳು’ ಎಂಬ ವಿಶಾಲ ಸೂತ್ರದಲ್ಲಿ ಬಂಧಿಸಿ ವಿವೇಕ ರೈ ನಮ್ಮ ಮುಂದೆ ಇಟ್ಟಿದ್ದಾರೆ. ಈ ದೃಷ್ಟಿಯಿಂದ ಇದನ್ನು ಒಂದು ಅಸಾಂಪ್ರದಾಯಕ ಸಂಕಲನವೆಂದು ಕರೆಯಬಹುದಾದರೂ ಇಲ್ಲಿ ರೈ ಅವರು ಪ್ರಸ್ತಾಪಿಸುವ ಹಲವು ಹೊಸ ಸಂಗತಿಗಳು ಮತ್ತು ಹೊಸತಾಗಿ ಮರುನಿರೂಪಿಸಲ್ಪಟ್ಟ ಅನೇಕ ಹಳೆಯ ಸಂಗತಿಗಳು ಓದುಗರ ಗಮನವನ್ನು ಸೆಳೆಯುವಂತಿವೆ; ಓದುಗರ ಭಾವ ಮತ್ತು ವೈಚಾರಿಕ ಜಗತ್ತನ್ನು ವಿಸ್ತರಿಸಿ ಸಮೃದ್ಧಗೊಳಿಸುವಂತಿವೆ.

ಜರ್ಮನ್ ಕತೆಗಾರ ಹೀನ್ರಿಶ್ ಕ್ಲೆಯಿಸ್ಟ್(1777–1811) ಬರಹಗಳು ಫ್ರೆಂಚ್ ಕ್ರಾಂತಿ ಮತ್ತು ನೆಪೋಲಿಯನ್ ಯುದ್ಧಗಳಿಂದ ನಿರ್ಮಾಣವಾದ ಅರಾಜಕತೆಯ ಗೊಂದಲದ ಸ್ಥಿತಿಯ ಪ್ರತಿನಿಧೀಕರಣವೆಂದೂ, ಮನುಷ್ಯ ನಿರ್ಮಿತ ವ್ಯವಸ್ಥೆಗಳ ಕ್ರೌರ್ಯ ದೌರ್ಜನ್ಯಗಳ ಪರಿಣಾಮಕಾರೀ ಚಿತ್ರಣಗಳೆಂದೂ ತಿಳಿಸುವ ವಿವೇಕ ರೈ ಅವರು ಈ ಬರಹಗಾರನನ್ನು ಕಿರ್ಕೆಗಾರ್ಡ್, ಕಾಫ್ಕ, ಥಾಮಸ್‌ಮನ್, ಕಮೂ ಮುಂತಾದವರೊಂದಿಗೆ ಇಟ್ಟುನೋಡಬೇಕಾದ ಅಗತ್ಯವನ್ನು ಸೂಚಿಸುತ್ತಾರೆ. ಕ್ಲೆಯಿಸ್ಟ್‌ನ ಸುಪ್ರಸಿದ್ಧ ಕತೆ ‘ಚಿಲಿಯಲ್ಲಿ ಭೂಕಂಪ’ ಕತೆಯನ್ನು ಅವರು ಅನುವಾದಿಸಿಕೊಟ್ಟಿದ್ದಾರೆ.

ಈ ಕತೆಯಲ್ಲಿ ಭಾರಿ ಶ್ರೀಮಂತನೊಬ್ಬನ ಮಗಳು ಎರೋನಿಮೋ ತನ್ನ ಟ್ಯೂಟರ್ ಯೋಸೆಫಾನನ್ನು ಪ್ರೀತಿಸುತ್ತಾಳೆ. ಗರ್ಭಿಣಿಯಾಗುತ್ತಾಳೆ.  ಧಾರ್ಮಿಕ ಉತ್ಸವದ ಸಂದರ್ಭವೊಂದರಲ್ಲಿ ಚರ್ಚಿನ ಮೆಟ್ಟಿಲುಗಳ ಮೇಲೆಯೇ ಒಂದು ಮಗುವನ್ನು ಹೆತ್ತು ತನ್ನ ‘ಪಾಪ’ಕ್ಕಾಗಿ ಜೈಲು ಸೇರುತ್ತಾಳೆ. ಅವಳ ಬಹಿರಂಗ ವಧೆಗಾಗಿ ಆದೇಶ ಹೊರಡುತ್ತದೆ. ಆ ದೃಶ್ಯವನ್ನು ನೋಡಲು ಜನ ಸಾಲುಗಟ್ಟಿ ನಿಲ್ಲುತ್ತಾರೆ.

ಆ ಸಮಯದಲ್ಲಿ, ತನ್ನ ಪ್ರಿಯತಮೆಯನ್ನು ಪಾರುಮಾಡಲಿಕ್ಕಾಗದ ಹತಾಶೆಯಲ್ಲಿ,  ಜೈಲಿನ ಕೋಣೆಯೊಂದರಲ್ಲಿ ಆತ್ಮಹತ್ಯೆಗಾಗಿ ಯೋಸೆಫಾ ಪ್ರಯತ್ನಿಸುತ್ತಿರುತ್ತಾನೆ. ಆಗ ಅನಿರೀಕ್ಷಿತವಾಗಿ ಭೂಕಂಪವಾಗುತ್ತದೆ! ಈ ಕೋಲಾಹಲದಲ್ಲಿ ಪ್ರೇಮಿಗಳಿಬ್ಬರೂ ತಪ್ಪಿಸಿಕೊಂಡು ಓಡುತ್ತಾರೆ. ಎಷ್ಟೋ ಸಮಯದ ನಂತರ ಒಂದುಗೂಡುತ್ತಾರೆ. ದೇಶವನ್ನೇ ಬಿಟ್ಟು ಸ್ಪೇನ್‌ಗೆ ಹೋಗಲು ನಿರ್ಧರಿಸುತ್ತಾರೆ. ಅದಕ್ಕಾಗಿ ಡಾನ್ ಫೆರ್ನಾಂದೋ–ಎಲ್ವಿರ ಎಂಬ ಆತ್ಮೀಯ ದಂಪತಿಗಳ ನೆರವನ್ನು ಪಡೆಯಲು ಉದ್ಯುಕ್ತರಾಗುತ್ತಾರೆ.

ಕ್ಲೆಯಿಸ್ಟನ ಕತೆಯು ಒಂದು ಕಡೆ ಭೂಕಂಪದಿಂದ ನಾಶವಾಗಿರುವ ನಗರದ ಭೀಕರ ಚಿತ್ರಣವನ್ನು ಕೊಡುತ್ತಿರುವಂತೆಯೇ ಈ ಇಬ್ಬರು ದಂಪತಿಗಳು ತಮ್ಮ ತಮ್ಮ ಹಸುಳೆಗಳನ್ನು ರಕ್ಷಿಸಿಕೊಳ್ಳುತ್ತಾ ತಮ್ಮ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಹೆಣಗುವ ಮಾರ್ಮಿಕ ಪ್ರಯತ್ನಗಳನ್ನೂ ಹೃದಯಂಗಮವಾಗಿ ಚಿತ್ರಿಸುತ್ತದೆ. ಇವುಗಳ ನಡುವೆ ಓದುಗರನ್ನು ಬೆಚ್ಚಿಬೀಳಿಸುವಂತೆ ಉನ್ಮಾದಕ್ಕೊಳಗಾದ ಒಂದು ಗುಂಪು ಈ ಪಾಷಂಡಿಗಳ, ಪಾಪಿಗಳ ಬೇಟೆಯಾಡಲು ತೊಡಗುತ್ತದೆ. ಪರಿಣಾಮವಾಗಿ ಯೋಸೆಫಾ, ಎರೋನಿಮಾ ಮತ್ತು ಡಾನ್ ಫೆರ್ನಾಂದೋ–ಎಲ್ವಿರರ ಹಸುಳೆ ಯುಯುನ್ ಸಾಯುತ್ತಾರೆ.

ಆದರೆ ಈ ದಂಪತಿ ಯೋಸೆಫಾ–ಎರೋನಿಮಾರ ಮಗು ಫೆಲಿಪೆಯನ್ನು ತಮ್ಮ ಮಗುವೆಂದೇ ಸ್ವೀಕರಿಸಿ ಸಾಕುತ್ತಾರೆ ಎಂಬ ಸೂಚನೆಯಲ್ಲಿ ಈ ನೀಳ್ಗತೆ ಮುಗಿಯುತ್ತದೆ. ಇಲ್ಲಿ ಕ್ಲೆಯಿಸ್ಟ್ ಎರಡು ರೀತಿಯ ಕ್ರೌರ್ಯವನ್ನು ದಟ್ಟವಾಗಿ ಚಿತ್ರಿಸಿದ್ದಾರೆ. ಒಂದು ಮನುಷ್ಯನ ನಿಯಂತ್ರಣವಿಲ್ಲದ, ಮನುಷ್ಯನು ಕಾರಣನಲ್ಲದ ಪ್ರಾಕೃತಿಕ ಕ್ರೌರ್ಯ. ನಿಷ್ಕಾರಣವಾಗಿ ಒಂದು ನಗರ ನಾಶವಾಗುತ್ತದೆ. ಮುಗ್ಧರೂ ಪ್ರಕೃತಿಯ ಹಿಂಸೆಗೆ ಬಲಿಯಾಗುತ್ತಾರೆ. ಇನ್ನೊಂದೆಡೆ ಕರುಣೆ, ಪ್ರೀತಿ, ಕ್ಷಮೆ ಇಂಥ ಮೌಲ್ಯಗಳ ಬುನಾದಿಯ ಮೇಲೆ ರೂಪುಗೊಂಡು ಬೆಳೆದ ಕ್ರಿಶ್ಚಿಯನ್ ಧರ್ಮ ಈಗ ಒಂದು ಅಧಿಕಾರಸ್ಥ ಸಂಸ್ಥೆಯಾಗಿ ಬೆಳೆದು ಮೂಲ ಕ್ರಿಶ್ಚಿಯನ್ ತತ್ವಗಳನ್ನು ಬದಿಗೆ ತಳ್ಳಿದೆ. ಚರ್ಚು ಜನರನ್ನು ಆಳುವ ವ್ಯವಸ್ಥೆಯಾಗಿಬಿಟ್ಟಿದೆ.

ತಾನು ರೂಪಿಸಿದ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಪ್ರಭುತ್ವವಾಗಿ ಮಾರ್ಪಟ್ಟಿದೆ. ಪ್ರಾಕೃತಿಕ ಕ್ರೌರ್ಯ ಮತ್ತು ಮನುಷ್ಯ ನಿರ್ಮಿತ ಕ್ರೌರ್ಯಗಳನ್ನು ಹೀಗೆ ಎದುರುಬದುರು ನಿಲ್ಲಿಸಿ ಇವುಗಳಲ್ಲಿ ಮನುಷ್ಯ ನಿರ್ಮಿತ ಕ್ರೌರ್ಯವೇ ಹೆಚ್ಚು ಭೀಕರವಲ್ಲವೆ ಎಂದು ಕತೆ ಓದುಗರಿಗೆ ಸವಾಲು ಹಾಕುವಂತಿದೆ. ಇಂಥ ಕ್ರೌರ್ಯಗಳ ಮಧ್ಯೆಯೂ ಮಿನುಗುವ ಮಾನವೀಯತೆಯನ್ನೂ ಕತೆ ಗಮನಿಸಿ ದಾಖಲಿಸಿದೆ. ಒಂದು ಜನಾಂಗದ ಅಂತಃಕರಣವನ್ನೇ ಕಲಕಿದ ಈ ಕತೆಯನ್ನು ವಿವೇಕ ರೈ ಅವರು ಅನುವಾದಿಸಿ ಸೂಕ್ತ ಪ್ರಸ್ತಾವನೆಯ ಸಮೇತ ಕನ್ನಡ ಓದುಗರಿಗೆ ನೀಡಿದ್ದಾರೆ.

ಇದೇ ರೀತಿ ವಿವೇಕ ರೈ ಅವರು ಕಾರ್ಲ್ ಮೈ (1842-1912) ಎಂಬ ಲೇಖಕನ ಫ್ಯಾಂಟಸಿ ಕತೆಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ. ಇಬ್ಬರು ಸಮಕಾಲೀನ ಜರ್ಮನ್ ಲೇಖಕಿಯರ ವಿಶಿಷ್ಟ ಸಾಧನೆಯ ಪ್ರಸ್ತಾಪ ತುಂಬ ಪ್ರಸ್ತುತವೆನಿಸುತ್ತದೆ. ಯೂರೋಪಿಯನ್ ಯೂನಿಯನ್ ಹೆಸರಿನಲ್ಲಿ ಸ್ಥಳೀಯ ಅನನ್ಯತೆಗಳನ್ನು ನಾಶಮಾಡುವ ಅಪಾಯಗಳ ಬಗ್ಗೆ ಎಚ್ಚರಿಸುವ, ಆ ಪ್ರವೃತ್ತಿಯನ್ನು ವಿಡಂಬಿಸುವ ಉಲ್ರೀಕಾ ಲಾಂಗ್ಲೆ ಅವರ ‘ಮನುಷ್ಯರ ಗೆಳೆಯ ಸೈತಾನ’ ಒಂದು ಅನ್ಯೋಕ್ತಿಯಾಗಿ ನಮಗೂ ಒಂದು ಎಚ್ಚರಿಕೆಯ ಗಂಟೆಯ ಹಾಗಿದೆ.

೨೦೦೯ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಹೆರ್ತಾ ಮುಲ್ಲರ್ ಅವರ ಸುಪ್ರಸಿದ್ಧ ಪುಟ್ಟ ಕತೆ ‘ಬೀದಿ ಗುಡಿಸುವ ಜಾಡಮಾಲಿಗಳು’ ತನ್ನ ಅಸಾಧಾರಣ ರೂಪಕಶಕ್ತಿಯಿಂದ ನಮ್ಮನ್ನು ಕಾಡುವಂತಿದೆ. ವಿವೇಕ ರೈಗಳ ಸಂಗ್ರಹ ವೈವಿಧ್ಯಮಯವಾಗಿದೆ. ‘ನರವಿಜ್ಞಾನದ ಕತೆಗಳು’, ‘ಕ್ರಿಮಿನಲ್ ಲಾಯರ್ ಹೇಳಿದ ಕತೆಗಳು’ ಮಾತ್ರವಲ್ಲದೆ ಅವರು ಪರಿಚಯಿಸಿರುವ ‘ಜರ್ಮನ್ ಐತಿಹ್ಯಗಳು’, ‘ಜನಪದ ಕತೆಗಳು’ ಆ ದೇಶವನ್ನೂ ಅದರ ಸಂಸ್ಕೃತಿಯನ್ನೂ ಅವುಗಳ ಒಳಮೈನಲ್ಲಿ ಅನುಸಂಧಾನ ಮಾಡಲು ಅನೇಕ ಉಪಯುಕ್ತ ಸೂಚನೆಗಳನ್ನು ನೀಡುವಂತಿವೆ. ಸ್ವತಃ ರೈಗಳ ಅನುಭವಕಥನಗಳೂ ಇವಕ್ಕೆ ಪೂರಕವಾಗಿವೆ ಎನ್ನಬಹುದು. ರೈ ಅವರ ಸೂಕ್ಷ್ಮ ಅವಲೋಕನ, ಅಧ್ಯಾಪನ ಪ್ರತಿಭೆ, ವಿದ್ವತ್ತು ಲಘುಧಾಟಿಯಲ್ಲೇ ಇಲ್ಲಿ ಅನಾವರಣಗೊಂಡಿವೆ.

ಉಳಿದ ಲೇಖನಗಳಲ್ಲಿ ನಮ್ಮ ಗಮನವನ್ನು ಸೆಳೆದುಕೊಳ್ಳುವ ಎರಡು ಮುಖ್ಯ ಬರಹಗಳೆಂದರೆ ಅಮಿತಾವ್ ಘೋಷ್ ಅವರ ‘ಇನ್ ಅನ್ ಆಂಟಿಕ್ ಲ್ಯಾಂಡ್’ ಕುರಿತದ್ದು ಮತ್ತು ಗುಲ್ವಾಡಿ ವೆಂಕಟರಾಯರ ‘ಭಾಗೀರಥಿ’ ಕಾದಂಬರಿಯ ವಿಮರ್ಶೆ. ಅಮಿತಾವ್ ಘೋಷರ ಪುಸ್ತಕದಲ್ಲಿ ವಿವೇಕ ರೈ ಅವರೂ ಒಂದು ಪಾತ್ರ. ‘ಈ ಕೃತಿಯು ಮಾನವವಿಜ್ಞಾನ, ಇತಿಹಾಸ, ಸಂಶೋಧನೆ, ಪ್ರವಾಸ ಕಥನ, ಕಾದಂಬರಿ– ಇವೆಲ್ಲವನ್ನೂ ಒಳಗೊಂಡೂ ಇವೆಲ್ಲವುಗಳ ಸಮಷ್ಟಿಗಿಂತ ಹೆಚ್ಚಿನ ಆಯಾಮಗಳುಳ್ಳ ಮಹತ್ವದ ಗ್ರಂಥ’ ಎಂದು ರೈ ಅಭಿಪ್ರಾಯಪಡುತ್ತಾರೆ.

12ನೇ ಶತಮಾನದಲ್ಲಿ ಮಂಗಳೂರಿನಿಂದ ಈಜಿಪ್ಟಿಗೆ ಹೋದ, ‘ಬಮ್ಮ’ ಎಂದು ಉಲ್ಲೇಖಿತಗೊಂಡ ವ್ಯಕ್ತಿಯೊಬ್ಬನ ಹಿನ್ನೆಲೆಯನ್ನು ಅರಸುತ್ತಾ ಮಂಗಳೂರಿಗೆ ಬರುವ ಅಮಿತಾವ್ ಘೋಷ್ ಅವರು ವಿವೇಕ ರೈಯವರನ್ನು ಭೇಟಿಯಾಗಿ ಅನೇಕ ವಿವರಗಳನ್ನು ಸಂಗ್ರಹಿಸಿದ್ದು; ಈ ವ್ಯಕ್ತಿಯ ಹೆಸರು ತುಳು ಸಂಸ್ಕೃತಿಯ ಹಿನ್ನೆಲೆಯಲ್ಲಿ ‘ಬೊಮ್ಮ’ ಇರಬಹುದೆಂಬ ರೈ ಅವರ ಇಂಗಿತ; ಈತ ಗುಲಾಮನೆಂದು ಅನೇಕ ಬರಹಗಳಲ್ಲಿ ದಾಖಲಾಗಿದ್ದರೂ ನಿಜವಾಗಿ ಅವನೊಬ್ಬ ವ್ಯಾಪಾರೀ ಏಜೆಂಟ್ ಆಗಿರಬಹುದೆಂಬ ಜಿಜ್ಞಾಸೆ; ಈಜಿಪ್ಟಿನ ಸಾಂಸ್ಕೃತಿಕ ಚರಿತ್ರೆ ಮತ್ತು ವರ್ತಮಾನದ ಸಮೃದ್ಧ ವಿವರಗಳು– ಮೊದಲಾಗಿ ಈ ಗ್ರಂಥದ ಸ್ವರೂಪ ಮತ್ತು ಪ್ರಸ್ತುತತೆಗಳನ್ನು ವಿವೇಕ ರೈಗಳು ಪ್ರಸ್ತಾಪಿಸಿರುವ ರೀತಿ ನಮ್ಮ ಅರಿವನ್ನು ಅನೇಕ ರೀತಿಗಳಲ್ಲಿ ಹಿಗ್ಗಿಸುವಂತಿದೆ.

‘ಭಾಗೀರಥಿ’ ಕಾದಂಬರಿಯನ್ನು ಕುರಿತ ರೈ ಅವರ ವಿಮರ್ಶೆಯು ಒಂದು ಹಳೆಯ ಕಾದಂಬರಿಯನ್ನು ಇಂದು ಹೇಗೆ ಓದಬಹುದೆಂಬುದಕ್ಕೆ ಒಂದು ಅರ್ಥಪೂರ್ಣ ಮಾದರಿ ಎಂಬಂತಿದೆ. ಈ ಕಾದಂಬರಿಯು ಭಾಗೀರಥಿ ಎಂಬ ಬಡ ವಿಧವೆಯ ಉತ್ತಮಪುರುಷ ನಿರೂಪಣೆಯಲ್ಲಿ ನಿರೂಪಿತವಾಗಿದೆ. ಲೀಲಾ ಎಂಬ ಸುಶಿಕ್ಷಿತ ಹೆಣ್ಣು ಲೀಲಾವತಿಗೆ ಭಾಗೀರಥಿಯು ತನ್ನ ಜೀವನದ ಕತೆಯನ್ನು ಹೇಳುತ್ತಾಳೆ. ಸೋಮವಾರ ಪ್ರಾರಂಭವಾಗುವ ಭಾಗೀರಥಿ ಕಥನವು ಶನಿವಾರ ಮುಗಿಯುತ್ತದೆ. ಮೇಲುನೋಟಕ್ಕೆ ಭಾಗೀರಥಿಯು ಬ್ರಾಹ್ಮಣ ಸಮಾಜದ ಮೂಢನಂಬಿಕೆಗಳನ್ನು ವಿಜೃಂಭಿಸಿ ಹೇಳುತ್ತಿದ್ದರೂ ನಿಜವಾಗಿ ಈ ಪಾತ್ರದ ಮೂಲಕ ಹೇಗೆ ಲೇಖಕರು ಆ ಮೌಲ್ಯವ್ಯವಸ್ಥೆಯನ್ನು ವಿಡಂಬಿಸಿ ವಿಮರ್ಶಿಸಿದ್ದಾರೆಂದು ರೈ ತಮ್ಮ ವಿಮರ್ಶೆಯಲ್ಲಿ ತೋರಿಸಿಕೊಟ್ಟಿದ್ದಾರೆ.

ವಿವೇಕ ರೈ ಅವರ ಬಹುಶ್ರುತತೆ, ಅಭಿರುಚಿ ಮತ್ತು ಸಂಕೀರ್ಣ ವಿಷಯಗಳನ್ನೂ ಸರಳವಾಗಿ ನಿರೂಪಿಸಬಲ್ಲ ಸಂವಹನ ಕೌಶಲಗಳಿಂದಾಗಿ ಇದು ಒಂದು ಸಂಗ್ರಹಯೋಗ್ಯ ಕೃತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT