ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಾಹುವಿನ ಮಿಸ್ಡ್ ಕಾಲ್

Last Updated 5 ಡಿಸೆಂಬರ್ 2015, 19:46 IST
ಅಕ್ಷರ ಗಾತ್ರ

ಓದಿರಿ (ಕಾದಂಬರಿ)
ಲೇ: ಬೊಳುವಾರು ಮಹಮದ್ ಕುಂಞಿ
ಪ್ರ: ಮುತ್ತುಪ್ಪಾಡಿ ಪುಸ್ತಕ

ಕೆಲವು ದಿನಗಳ ಕೆಳಗೆ ಬೊಳುವಾರು ಮಹಮದ್ ಕುಂಞಿ ಅವರ ‘ಓದಿರಿ’ ಕಾದಂಬರಿಯನ್ನು ಹಿಡಿದುಕೊಂಡು ಬಸ್ಸಿನಲ್ಲಿ ಕುಳಿತಿದ್ದಾಗ ಪಕ್ಕದಲ್ಲಿ ಕುಳಿತಿದ್ದ ಮುಸ್ಲಿಮ್ ಹಿರಿಯರೊಬ್ಬರು ‘ನೀವು ಇದನ್ನು ಓದಿದ್ದೀರಾ?’ ಎಂದು ಕೇಳಿದರು. ‘ಇಲ್ಲ, ಓದಬೇಕಷ್ಟೆ’ ಎಂದಾಗ ‘ಓದಿ, ಓದಿ, ಚೆನ್ನಾಗಿದೆ’ ಎಂದರು. ಆಶ್ಚರ್ಯಗೊಂಡು, ‘ನೀವು ಇದನ್ನು ಓದಿದ್ದೀರಾ?’ ಎಂದು ಪ್ರಶ್ನಿಸಿದೆ. ‘ಹೌದು. ನಿಮಗೆ ಹೇಗೆ ಹೇಳಬೇಕೋ ಗೊತ್ತಾಗ್ತಾ ಇಲ್ಲ. ನಮಗೆ ಈಗೆಲ್ಲಾ ನಮ್ಮ ಕುರಾನ್ ಮಿಸ್ಡ್ ಕಾಲ್ ಆಗಿಬಿಟ್ಟಿದೆ. ನಮಗೆ ಕಾಲ್ ಮಾಡಿ ಯಾರೋ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾರೆಂದು ಗೊತ್ತಿರುತ್ತದೆ. ಆದರೆ ನಾವು ಅದನ್ನು ನೋಡಿಯೂ ನೋಡದವರಂತೆ ಸುಮ್ಮನಿರುತ್ತೇವೆ. ಈ ‘ಓದಿರಿ’ ಪುಸ್ತಕ ಉಂಟಲ್ವಾ, ಇದು ಕುಕ್ಕರ್ ಜೊತೆಗೆ ಬರುವ ಕ್ಯಾಟಲಾಗ್ ಇದ್ದಹಾಗೆ. ಕುಕ್ಕರನ್ನು ಹೇಗೆ ಬಳಸಬೇಕು ಎಂಬುದೆಲ್ಲಾ ಅದರಲ್ಲಿ ಇರುತ್ತದೆ. ಈ ಪುಸ್ತಕ ಮುಸ್ಲಿಮರಿಗೆ ಒಂದು ಕ್ಯಾಟಲಾಗ್ ಇದ್ದ ಹಾಗೆ. ಇದನ್ನು ಓದಿದ ನಂತರ ಆ ಮಿಸ್ಡ್ ಕಾಲ್‌ಗೆ ಫೋನ್ ಮಾಡಿ ಅಲ್ಲಾಹು ನಮಗೆ ಏನು ಹೇಳ್ತಿದ್ದಾನೆ ಅಂತ ಕೇಳಬೇಕಾಗಿದೆ!’.

ಯಾವ ವಿಮರ್ಶೆಯ ಪರಿಭಾಷೆಗೂ ಸಿಕ್ಕದ ಅವರ ವ್ಯಾಖ್ಯಾನವನ್ನು ಕೇಳಿ ಬೆರಗಾಗಿಬಿಟ್ಟೆ. ಯಾಕೆ ಒಬ್ಬ ಸಾಮಾನ್ಯ ಓದುಗನಿಗೆ ಕೂಡಾ ಅದು ಮೆಚ್ಚುಗೆಯಾಯಿತು?

‘ಓದಿರಿ’ ಕಾದಂಬರಿ ಮುದ್ರಣವಾದ ನಂತರ ಪ್ರತಿಗಳೆಲ್ಲ ಮಾರಾಟವಾಗಿ ಎರಡು ಮೂರು ಮುದ್ರಣಗಳಾಗಿವೆಯಂತೆ. ಈ ಪುಸ್ತಕದ ಜನಪ್ರಿಯತೆಗೆ ಕಾರಣವನ್ನು ನಮ್ಮ ಕಾವ್ಯಮೀಮಾಂಸೆಯ ಪರಿಭಾಷೆಯಲ್ಲಿಯೇ ಹೇಳಬಹುದು. ಇಸ್ಲಾಮ್ ಬಗ್ಗೆಯಾಗಲಿ, ಪ್ರವಾದಿ ಮುಹಮ್ಮದರ ಬಗ್ಗೆಯಾಗಲಿ ನಮಗೆ ತಿಳಿದಿರುವ ವಿಚಾರಗಳೆಲ್ಲ ಶಾಸ್ತ್ರಗಳಾಗಿ ಪ್ರಭುಸಂಮಿತೆಯ ಮಾದರಿಯಲ್ಲಿವೆ. ಬೊಳುವಾರು ಇದನ್ನು ಕಾವ್ಯದ ಕಾಂತಾಸಂಮಿತೆಯ ಮಾದರಿಯಲ್ಲಿ ಕೊಟ್ಟಿದ್ದಾರೆ. ರಾಮ, ಕೃಷ್ಣ, ಹನುಮಂತ ಮುಂತಾದ ನಮ್ಮ ಪೌರಾಣಿಕ ದೇವರುಗಳೆಲ್ಲ ನಮಗೆ ಆತ್ಮೀಯರಾಗಿರುವುದು ನಮ್ಮ ಕಾವ್ಯ (ಅಂದರೆ ಪುರಾಣ, ಯಕ್ಷಗಾನ, ಯಯನಾಟಕಾದಿ ಸಾಹಿತ್ಯ)ಗಳಿಂದ. ವೇದ, ಉಪನಿಷತ್ತು ಮುಂತಾದ ಶಾಸ್ತ್ರಗಳಿಂದ ಅಲ್ಲ.

ಹಾಗೆ ಬೊಳುವಾರು ಈ ಕಾದಂಬರಿಯ ಮೂಲಕ ದೊಡ್ಡದೊಂದು ಶಿಫ್ಟ್ ಒದಗಿಸಿದ್ದಾರೆ. ಇದು ಕೂಡಾ ಒಂದು ಸ್ವೀಕಾರಾರ್ಹ ಮಾದರಿ ಎನ್ನುವುದು ಆ ಮುಸ್ಲಿಮ್ ಹಿರಿಯರ ಮಾತಿನಿಂದ ನನಗೆ ಅನಿಸಿತು.   

ಇದನ್ನು ಬೊಳುವಾರು ತಮ್ಮ ಮುನ್ನುಡಿಯಲ್ಲಿ ಬೇರೊಂದು ರೀತಿಯಲ್ಲಿ ಪ್ರಸ್ತಾಪಿಸಿದ್ದಾರೆ. ‘‘ದಕ್ಷಿಣ ಕನ್ನಡದಲ್ಲಿ ಹುಟ್ಟಿಬೆಳೆದ ನಮಗೆ ಹರಿ-ಹರ-ಬ್ರಹ್ಮಾದಿಗಳೆಲ್ಲರ ನಿಕಟ ಪರಿಚಯವಿರುತ್ತದೆ... ಶ್ರೀ ಕೃಷ್ಣನ ಚಕ್ರ, ಇಂದ್ರನ ವಜ್ರಾಯುಧ, ಅರ್ಜುನನ ಗಾಂಡೀವ, ಹನುಮಂತನ ಬಾಲ, ಪರಶುರಾಮನ ಕೊಡಲಿ ಇತ್ಯಾದಿಗಳನ್ನೆಲ್ಲ ಚೌಕಿಗಳಲ್ಲಿ ತಟ್ಟಿ ಮುಟ್ಟಿ ನೋಡಿದವರು ನಾವು. ಶ್ರೀರಾಮ, ಶ್ರೀಕೃಷ್ಣ, ಇಂದ್ರ-ಚಂದ್ರರ ನಡುವಿನ ಎಲ್ಲ ಕತೆಗಳೂ ನಮಗೆ ಗೊತ್ತಿವೆ. ಬಕಾಸುರ, ಕುಂಭಕರ್ಣ, ರುದ್ರಾವತಾರ, ರಾಮಬಾಣ, ನಳಪಾಕ, ಇಚ್ಛಾಮರಣ, ತೊಟ್ಟಬಾಣವನ್ನು ತೊಡದಿರುವುದು, ನಿನ್ನ ರಾಮಾಯಣ ಬೇಡ, ಮತ್ತೊಂದು ಕುರುಕ್ಷೇತ್ರವಾದೀತು ಇತ್ಯಾದಿ ಬಗೆಬಗೆಯ ಪ್ರತಿಮೆ- ಸಂಕೇತ- ರೂಪಕ - ನುಡಿಗಟ್ಟುಗಳು ನಮ್ಮನ್ನೆಂದೂ ಅರ್ಥವಾಗದ ಯಕ್ಷಪ್ರಶ್ನೆಗಳಾಗಿ ಕಾಡಿದ್ದಿಲ್ಲ’’. 

ಪ್ರವಾದಿ ಮುಹಮ್ಮದರ ಜೀವನ ಮತ್ತು ಬೋಧನೆಗಳನ್ನು ೩೦೦ ಪುಟಗಳ ಕಾದಂಬರಿಯಾಗಿ ಕಟ್ಟಿಕೊಡುವ ಸವಾಲನ್ನು ಬೊಳುವಾರು ಬಹಳ ವಿಶಿಷ್ಟವಾಗಿ, ಆಧುನಿಕ ಕಾದಂಬರಿ ತಂತ್ರಗಳ ಮೂಲಕ ಎದುರಿಸಿ ಗೆದ್ದಿದ್ದಾರೆ. ಕಾದಂಬರಿಯಲ್ಲಿ ಮೂರು ಭಾಗಗಳಿವೆ. ಭಾಗ - ಒಂದು: ಅಂತರಂಗ (ಕ್ರಿ. ಶ. 0570 - 0612); ಭಾಗ - ಎರಡು: ಬಹಿರಂಗ (ಕ್ರಿ. ಶ. 0613 - 0622); ಭಾಗ - ಮೂರು : ಚದುರಂಗ (ಕ್ರಿ. ಶ. 0623 - 0632).

ಕುರ್‌ಆನ್ ಎನ್ನುವ ಶಬ್ದದ ಅರ್ಥ ‘ಓದಿರಿ’ ಅಥವಾ ‘ಓದಿದ’ ಎಂದಂತೆ! ಕಾದಂಬರಿ ಪ್ರಾರಂಭವಾಗುವುದು ಅದೇ ಶಬ್ದದಿಂದ.
‘ಓದಿರಿ’
ಮತ್ತೊಮ್ಮೆ ಕೇಳಿಸಿತ್ತು; ನೇರವಾಗಿ ಆಕಾಶದಿಂದ ಭೂಮಿಗೆ ಇಳಿದುಬಂದಂತಿದ್ದ ಆ ಧ್ವನಿ.

ಸಂಶಯವೇ ಇಲ್ಲ; ಆರು ತಿಂಗಳ ಹಿಂದೆ ಇದೇ ‘ಹಿರಾ’ ಗುಹೆಯೊಳಗಿನ ಕತ್ತಲಲ್ಲಿ ಕುಳಿತು ಧ್ಯಾನಿಸುತ್ತಿದ್ದಾಗ, ಎದೆ ಝಲ್ಲೆನ್ನಿಸುವಂತೆ ಬೆಚ್ಚಿ ಬೀಳಿಸಿದ್ದ ಅದೇ ಕಂಚಿನ ಧ್ವನಿ.

‘ನನಗೆ ಓದಲು ತಿಳಿಯದು’.
ನಲುವತ್ತರ ಹೊಸ್ತಿಲಲ್ಲಿ ನಿಂತಿದ್ದ ಮುಹಮ್ಮದರು ಗಾಬರಿಯಿಂದಲೇ ತೊದಲಿದ್ದರು. ಅದು ನಿಜವೂ ಆಗಿತ್ತು.

–ಹೀಗೆ ಕುರ್‌ಆನಿನ ಸಂದೇಶಗಳು ಮುಹಮ್ಮದರಿಗೆ ‘ಶ್ರುತಿ’ಗಳಾಗಿ ಒದಗಿಬರುವ ಸನ್ನಿವೇಶದಿಂದ ನಾಟಕೀಯವಾಗಿ ಪ್ರಾರಂಭವಾಗುವ ಕಥಾನಕ ಅವರ ಬಾಲ್ಯಕ್ಕೆ ಜಾರಿಕೊಂಡು ಮುಂದುವರಿಯುತ್ತದೆ. ಬಾಲ್ಯದಲ್ಲಿಯೇ ವಿಶಿಷ್ಟ ಆಕರ್ಷಣೆಯ ಸತ್ಯವಂತ ಬಾಲಕನಾಗಿದ್ದ ಮುಹಮ್ಮದರೇ ತಮ್ಮ ಗ್ರಂಥಗಳಲ್ಲಿ ಹೇಳಲ್ಪಟ್ಟಿದ್ದ ಅಂತಿಮ ಪ್ರವಾದಿ ಎಂದು ಬಹೀರಾ ಆಶ್ರಮದ ವೃದ್ಧ ಕ್ರೈಸ್ತ ಸಂನ್ಯಾಸಿಯ ಮಾತಿನಿಂದ ಅರ್ಥಮಾಡಿಕೊಂಡು, ಅವರ ದೊಡ್ಡಪ್ಪ ಅಬೂತಾಲಿಬ್ ಮುಂತಾದವರು ಅವರನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅಪ್ಪ ಅಮ್ಮನನ್ನು ಕಳೆದುಕೊಂಡು ಅಬೂತಾಲಿಬರ ವ್ಯಾಪಾರಿ ಮಳಿಗೆಯಲ್ಲಿ ಸಹಾಯಕನಾಗಿ ದುಡಿಯುತ್ತಿದ್ದ ಮುಹಮ್ಮದರು ಹದಿನೈದು ವರ್ಷ ದೊಡ್ಡವರಾಗಿದ್ದ ಶ್ರೀಮಂತ ವಿಧವೆ ವರ್ತಕಿ ಖದೀಜಾರನ್ನು ಮದುವೆಯಾಗುತ್ತಾರೆ. ತಮ್ಮನ್ನು ಕಾಡುವ ಅನಂತ ಪ್ರಶ್ನೆಗಳಿಗೆ ಉತ್ತರ ಸಿಗಲೆಂದು ಅಂತರ್ಮುಖಿಯಾಗಿ ಹಿರಾ ಬೆಟ್ಟದ ಗುಹೆಯಲ್ಲಿ ಧ್ಯಾನ ಮಾಡುವಾಗ ಅವರಿಗೆ ಸಾಕಾರ ದೇವತೆಗಳ ವಿಗ್ರಹಗಳ ಆರಾಧನೆ ಸರಿಯಲ್ಲ, ಅಲ್ಲಾಹು ಒಬ್ಬನೇ ದೇವರು ಎನ್ನುವ ಸತ್ಯದ ಅರಿವಾಗುತ್ತದೆ. ಪ್ರಾರ್ಥನೆ (ನಮಾಜ್) ಮಾಡುವ ವಿಧಾನವೂ ಅವರಿಗೆ ತಿಳಿಯುತ್ತದೆ. ಅದನ್ನು ಮೊದಲು ತಮ್ಮ ಬಂಧುವರ್ಗದವರಿಗೆ, ನಂತರ ಮಿತ್ರರಿಗೆ, ಇತರರಿಗೆ ಬೋಧಿಸುತ್ತಾ ಹೋಗುತ್ತಾರೆ. ಅವರ ಅನುಯಾಯಿಗಳಾಗುವ ಮುಸ್ಲಿಮರು ಬಹಳ ರಹಸ್ಯವಾಗಿ ಈ ಆರಾಧನಾ ವಿಧಾನವನ್ನು ಅನುಸರಿಸುತ್ತಾರೆ.

ಧಾರ್ಮಿಕ ಕೇಂದ್ರವಾಗಿದ್ದ ಮಕ್ಕಾ ಆಗ ಕುರೈಶ್ ಎಂಬ ಅರಬ್ ಗೋತ್ರದವರ ಉಸ್ತುವಾರಿಯಲ್ಲಿತ್ತು. ಮುಹಮ್ಮದರ ಹೊಸ ಧರ್ಮದ ಅನುಯಾಯಿಗಳು (ಮುಸ್ಲಿಮರು) ಹೆಚ್ಚಾದರೆ ಅವರು ಮಕ್ಕಾದ ಪ್ರಸಿದ್ಧ ಕಅಬಾ ಮಂದಿರವನ್ನು ವಶಪಡಿಸಿಕೊಂಡು, ಅಲ್ಲಿರುವ 360 ವಿಗ್ರಹಗಳನ್ನು ನಾಶಮಾಡುವರೆಂಬ ಭಯದಿಂದ ಕುರೈಶರು ಮುಸ್ಲಿಮರ ವಿರುದ್ಧ ಕತ್ತಿಮಸೆಯುತ್ತಾರೆ. ವಿಧವಿಧವಾದ ಕಿರುಕುಳಗಳನ್ನು ನೀಡುತ್ತಾರೆ. ಮುಸ್ಲಿಮರು ಮಕ್ಕಾದಲ್ಲಿ ಬದುಕಲಾರದೆ ರಕ್ಷಣೆಗಾಗಿ ದೂರದ ನಗರ, ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಕೊನೆಗೆ ಮುಹಮ್ಮದರ ಕೊಲೆ ಸಂಚೂ ನಡೆಯುತ್ತದೆ. ಅವರು ತಪ್ಪಿಸಿಕೊಂಡು ಮದೀನಾಕ್ಕೆ ಹೋಗಿ ಅಲ್ಲಿ ಆಶ್ರಯ ಪಡೆಯುತ್ತಾರೆ. ಅದು ಯಹೂದಿಯರ ಪ್ರಾಬಲ್ಯವಿರುವ ಊರಾಗಿರುತ್ತದೆ. ವರ್ಷಗಳು ಉರುಳಿದಂತೆ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತದೆ. ಮುಹಮ್ಮದರು ಕೊನೆಗೂ ಮಕ್ಕಾಕ್ಕೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಕಅಬಾ ಮಂದಿರವನ್ನು ವಶಪಡಿಸಿಕೊಳ್ಳುತ್ತಾರೆ. ಅಲ್ಲಿನ ವಿವಿಧ ದೇವತೆಗಳ ವಿಗ್ರಹಗಳನ್ನು ಹೊರಗೆ ಹಾಕಲಾಗುತ್ತದೆ. ಇದು ಕಾದಂಬರಿಯ ಕಥಾನಕ.

ಇದರ ನಡುನಡುವೆ ಮುಹಮ್ಮದರ ಚಿಂತನೆಗಳು, ಬೋಧನೆಗಳು ಓದುವಿಕೆಗೆ ಕಷ್ಟವಾಗದಂತೆ ಸಹಜವಾಗಿ ನಿರೂಪಿಸಲ್ಪಟ್ಟಿವೆ. ಇದು ಅತ್ಯಂತ ಕಠಿಣ ಸವಾಲು ಎನಿಸುತ್ತದೆ. ಇದಲ್ಲದೆ ನಮಗೆ ಅಪರಿಚಿತವಾದ ಅರೇಬಿಯದ ಆ ಕಾಲದ ಸಂಸ್ಕೃತಿ, ಅಲ್ಲಿನ ಜೀವನ ವಿಧಾನ, ಕೌಟುಂಬಿಕ ಪದ್ಧತಿ, ಮಕ್ಕಾ ಮತ್ತು ಸುತ್ತಲಿನ ಪ್ರದೇಶಗಳು ಇವುಗಳೆಲ್ಲಾ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವುದು, ಮುಹಮ್ಮದರ ಬದುಕಿನ ಸಮಗ್ರ ಚಿತ್ರಣವನ್ನು ಸುಮಾರು ಇಪ್ಪತ್ತು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ನಿರೂಪಿಸುವುದು ಸುಲಭವಲ್ಲ. ಈ ಸೂಕ್ಷ್ಮಾತಿಸೂಕ್ಷ್ಮ ವಿವರಗಳೆಲ್ಲ ತಮಗೆ ಅಸಂಖ್ಯ ಗ್ರಂಥಗಳಿಂದ ಲಭಿಸಿವೆ ಎಂದು ಬೊಳುವಾರು ಪ್ರಸ್ತಾವನೆಯಲ್ಲಿ ಹೇಳುತ್ತಾರೆ. ಮಾಹಿತಿಗಳನ್ನು ಅನುಭವವಾಗಿ ಮಾರ್ಪಡಿಸುವುದು ಕಾದಂಬರಿಕಾರನ ಕಲೆ. ಇಂತಹ ಕಲೆಯಲ್ಲಿ ಬೊಳುವಾರು ಪಳಗಿದವರು.

ಕಾದಂಬರಿಯ ಆಶಯ ಕೊನೆಯಲ್ಲಿ ಬರುವ ಒಂದು ಪ್ರಕರಣದಲ್ಲಿ, ಮುಹಮ್ಮದರ ಉತ್ತರಾಧಿಕಾರಿ ಯಾರು ಎಂಬ ಚರ್ಚೆಯ ನಡುವೆ ಬರುವ ಈ ಮಾತಿನಲ್ಲಿದೆ ಅನಿಸುತ್ತದೆ: ‘‘ಅಲ್ಲ, ನನ್ನ ಯೋಚನೆ ಬೇರೆಯೇ ಇದೆ. ಇಸ್ಲಾಮ್ ಕೇವಲ ಒಂದು ಅಧಿಕಾರ ಲಾಲಸೆಯ ಒಂದು ರಾಜಕೀಯ ಶಕ್ತಿಯಾಗದೆ, ಮುಸ್ಲಿಮರು ಮಾತ್ರವಲ್ಲ ಭೂಮಿಯ ಮೇಲಿನ ಎಲ್ಲರೂ ಸಮಾನರೆಂದು ಸಾರುವ ಪ್ರಬಲ ಧಾರ್ಮಿಕ ಸಂಘಟನೆಯಾಗಿ ಬೆಳೆದರಷ್ಟೇ ಸಾಕು ಎಂಬುದೇ ಪ್ರವಾದಿಯವರ ಬಯಕೆಯಾಗಿದ್ದರೆ?’’ (ಆದಮ್). ‘‘ಏನೋಪ್ಪ.... ಹಾಗೆಯೇ ಆಗಿದ್ದರೆ ಒಳಿತಿತ್ತೇನೋ’’. ಆ ಹಿರಿಯರು ಮೆತ್ತಗೆ ಗೊಣಗಿದ್ದರು. (ಪುಟ 287).      

ಮುಹಮ್ಮದರ ಅವಸಾನದ ನಂತರದ ಬೆಳವಣಿಗೆಗಳನ್ನು ಕಾದಂಬರಿ ಚರ್ಚಿಸುವುದಿಲ್ಲ. ಆದರೂ ಸೂಕ್ಷ್ಮವಾಗಿ, ಒಂದು ಅರ್ಥಗರ್ಭಿತ ಮಾತಿನೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.

ಹೂವು ಅರಳಿದಂತೆ ಮುಗುಳುನಕ್ಕ ಪ್ರವಾದಿಯವರು ಕೊನೆಯ ಬಾರಿಗೆಂಬಂತೆ ಹೇಳಿದರು, ‘‘ಮರಣದ ಬಳಿಕ ನನ್ನ ದೇಹವನ್ನು ಮಾತ್ರ ದಫನ ಮಾಡಿರಿ. ಆದರೆ ತಪ್ಪು ವ್ಯಾಖ್ಯಾನಗಳೊಂದಿಗೆ ನನ್ನ ಮಾತುಗಳನ್ನೂ ಹಾಗೆಯೇ ಮಾಡದಿರಿ’’.
ಎಲ್ಲರೂ, ಆಯಿತು ಎಂದರು.
ಮತ್ತು, ಅದು ಹಾಗೆಯೇ ಆಯಿತು.....
(ಸಶೇಷ)

ಈ ‘ಅದು ಹಾಗೆಯೇ ಆಯಿತು’ ಎಂಬ ಮಾತನ್ನು ಕಾದಂಬರಿಯ ಹಲವು ಆಯಕಟ್ಟಿನ ಜಾಗಗಳಲ್ಲಿ ಧರ್ಮಗ್ರಂಥಗಳ ಗತ್ತಿನಲ್ಲಿ ಬೊಳುವಾರು ಬಳಸುತ್ತಲೇ ಕಾದಂಬರಿಯನ್ನು ಬೆಳೆಸುತ್ತಾರೆ. ಅದು ಸಣ್ಣದೊಂದು ಖುಷಿ ಕೊಡುತ್ತದೆ.

ಬಾಲಕ ಮುಹಮ್ಮದರ ಬಗ್ಗೆ ಏಕವಚನವನ್ನು ಸಹಜವಾಗಿ ಪ್ರಯೋಗಿಸುವ ಲೇಖಕರು ಮುಹಮ್ಮದರ ಪ್ರವಾದಿತ್ವ ಗುರುತಾಗುತ್ತಿದ್ದಂತೆ ಬಹುವಚನಕ್ಕೆ ಸರಿಯುತ್ತಾರೆ. ಅವರ ಕುರಿತು ಬರೆಯುವಾಗ, ಅವರ ಸಂಗಡಿಗರ ಕುರಿತು ಬರೆಯುವಾಗ, ಪರಸ್ಪರ ಸಂಬೋಧನೆಗಳಲ್ಲಿ ಬಹುವಚನಗಳನ್ನು ಬಳಸುವುದು (ಉದಾಹರಣೆಗೆ ಪ್ರವಾದಿ ಮತ್ತು ಅವರ ಜೀವದ ಗೆಳೆಯ ಅಬೂಬಕರ್ ನಡುವಿನ ಮಾತುಗಳು ಕೂಡ) ಅನಿವಾರ್ಯ ಎನ್ನುವುದಕ್ಕಿಂತ ಸಹಜ ಎನ್ನುವಂತೆ ಬಳಸಲು ಬೊಳುವಾರು ಅವರಿಗೆ ನೆರವಾಗಿರುವುದು ದಕ್ಷಿಣ ಕನ್ನಡಿಗರ ಭಾಷಾಸಂಸ್ಕೃತಿ. ದಕ್ಷಿಣ ಕನ್ನಡಿಗರು ಬಂಧುಮಿತ್ರರಿಗೆ ಹಾಗೂ ಸಹಪಾಠಿಗಳಿಗೂ ಹೆಚ್ಚಾಗಿ ಬಹುವಚನವನ್ನೇ ಬಳಸುವುದು ಕ್ರಮ. ದಕ್ಷಿಣ ಕನ್ನಡಿಗರ ಈ ಸಂಸ್ಕೃತಿ ಇಲ್ಲಿ ಬೊಳುವಾರರಿಗೆ ಒದಗಿಬಂದಿದೆ. ಕುರೈಶ್ ಸೇನೆಯ ಅಮ್ರ್ ಎಂಬ ಜಗಜಟ್ಟಿಯ ಕುರಿತು ಹೇಳುವಾಗಲೂ, .... ಎಂದ ಜಗಜಟ್ಟಿ ಗಹಗಹಿಸಿ ನಗುತ್ತಾರೆ (ಪುಟ 235) ಎಂದು ಬಹುವಚನ ಪ್ರಯೋಗವಿದೆ. ಇದು ಒಟ್ಟು ಕಾದಂಬರಿಯಲ್ಲಿ ಒಂದು ಭಿನ್ನವಾದ ವಾತಾವರಣವನ್ನು ಸೃಷ್ಟಿಸಲು ನೆರವಾಗುತ್ತದೆ. ಅದೇ ರೀತಿ ಕೆಲವೊಮ್ಮೆ ವರ್ತಮಾನ ಕಾಲದ ಕ್ರಿಯಾಪದಗಳನ್ನು ಬಳಸುವುದು ಕೂಡ. ‘ಹೋದರು’, ‘ಬಂದರು’ ಇತ್ಯಾದಿ ಕ್ರಿಯಾಪದಗಳುಳ್ಳ ಪಾರಗಳ ನಂತರ ‘ಹೇಳುತ್ತಾರೆ’, ‘ನೋಡುತ್ತಾರೆ’ ಎಂಬ ಪ್ರಯೋಗಗಳುಳ್ಳ ಪಾರಗಳು ಬಹಳ ಸಶಕ್ತವಾಗಿ ಘಟನೆಯನ್ನು ಇತಿಹಾಸ ವರ್ತಮಾನಕ್ಕೆ (ಹಿಸ್ಟಾರಿಕ್ ಪ್ರೆಸೆಂಟ್) ಒಯ್ಯುತ್ತವೆ. ಈ ಶೈಲಿಯಲ್ಲಿ ತುಳು ಜಾನಪದ ಮಹಾಕಾವ್ಯಗಳ (ಪಾಡ್ದನಗಳು) ಸೊಗಡನ್ನು ಕಾಣಬಹುದು. ಇಂತಹ ಕೆಲವು ತಂತ್ರಗಳಿಂದ ಬೊಳುವಾರು ತಮ್ಮ ಕಾದಂಬರಿಗೆ ಪೌರಾಣಿಕದ ಪರಿಪ್ರೇಕ್ಷ್ಯವನ್ನು ಒದಗಿಸಿಕೊಟ್ಟಿದ್ದಾರೆ.   

‘ಓದಿರಿ’ ಕನ್ನಡ ಸಾಹಿತ್ಯಕ್ಕೆ ಒಂದು ಕೊಡುಗೆ. ಲೇಖಕರೇ ದಾಖಲಿಸಿದಂತೆ ಇದು ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತಮೊದಲ ಐತಿಹಾಸಿಕ ಕಾದಂಬರಿ. ಇದು ಬೇರೆ ಭಾಷೆಗಳಿಗೆ ಅನುವಾದಗೊಂಡರೆ ಅದು ಕನ್ನಡದ ಕೊಡುಗೆಯೂ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT