ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯದ ಸಾಧ್ಯತೆಗಳ ಅಪೂರ್ವ ಪ್ರಯೋಗ

ವಿಮರ್ಶೆ
Last Updated 13 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಸೊನಾಟಾ (ನಾಟಕ)
ಮೂಲ ಮರಾಠಿ: ಮಹೇಶ ಎಲಕುಂಚವಾರ

ಪುಟ:60 ರೂ.50
ಕನ್ನಡ ಅನು: ಗಿರೀಶ ಕಾರ್ನಾಡ
ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ


ಸುಪ್ರಸಿದ್ಧ ಮರಾಠಿ ನಾಟಕಕಾರರಾದ ಮಹೇಶ ಎಲಕುಂಚವಾರ ಅವರು ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದು ಸಮಕಾಲೀನ ಭಾರತೀಯ ನಾಟಕಕಾರರಲ್ಲೇ ತುಂಬ ಪ್ರಯೋಗಶೀಲರೆಂಬ ಹೆಗ್ಗಳಿಕೆಗೆ ಪಾತ್ರರಾರಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾಳಿದಾಸ ಸಮ್ಮಾನ್ ಮತ್ತು ಸರಸ್ವತಿ ಸಮ್ಮಾನ್‌ಗಳಿಂದ ಪುರಸ್ಕೃತರಾಗಿರುವ ಇವರ ಹಲವು ನಾಟಕಗಳು ಕನ್ನಡಕ್ಕೂ ಅನುವಾದಗೊಂಡಿವೆ.

‘ಚಿರೇಬಂದಿ ವಾಡಾ’ ಎಂಬ ನಾಟಕವು ಮಾರುತಿ ಶಾನಭಾಗರಿಂದ ಕನ್ನಡಕ್ಕೆ ಬಂದಿದ್ದು ಚಿದಂಬರರಾವ್ ಜಂಬೆ ಅವರ ನಿರ್ದೇಶನದಲ್ಲಿ ‘ನೀನಾಸಂ’ ತಿರುಗಾಟದಲ್ಲಿ ರಾಜ್ಯಾದ್ಯಂತ ಪ್ರದರ್ಶನ ಕಂಡು ಜನಪ್ರಿಯವಾಗಿದೆ. ಈ ನಾಟಕವು ತ್ರಿವಳಿಯೊಂದರ ಮೊದಲ ಭಾಗವಾಗಿದ್ದು ಇಡೀ ತ್ರಿವಳಿಯ ರಂಗಪ್ರಯೋಗವು ದೆಹಲಿಯ ರಾಷ್ಟ್ರೀಯ ನಾಟಕಶಾಲೆಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿದೆ. ಮಹೇಶರ ‘ಧರ್ಮಪುತ್ರ’ ಹಾಗೂ ‘ವಾಸಾಂಸಿ ಜೀರ್ಣಾನಿ’ ಎಂಬ ನಾಟಕಗಳನ್ನು ಮರಾಠಿಯಿಂದ ಕನ್ನಡಕ್ಕೆ ತಂದಿದ್ದ ಗಿರೀಶ ಕಾರ್ನಾಡರು ಸದ್ಯ ಅವರ ‘ಸೊನಾಟಾ’ ನಾಟಕವನ್ನು ಅನುವಾದಿಸಿ ಕೊಟ್ಟಿದ್ದಾರೆ.

‘ಸೊನಾಟಾ’ ಎಂದರೆ ಪಾಶ್ಚಾತ್ಯ ಸಂಗೀತದಲ್ಲಿ ಒಂದು ಬಗೆಯ ಸಂಗೀತ ಕೃತಿಸಂಯೋಜನೆ. ಪಿಯಾನೋ, ಪಿಟೀಲು ಮುಂತಾದ ತಂತುವಾದ್ಯಗಳಿಗಾಗಿ ರಚಿಸಲ್ಪಡುವಂಥದ್ದು. ಪರಸ್ಪರ ವೈದೃಶ್ಯವಿರುವ ಮೂರು ಭಾಗಗಳಲ್ಲಿ ಇರುವ ಈ ಸಂಗೀತ ಸಂಯೋಜನೆ ಒಂದು ವಸ್ತುವನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಅಂತಿಮವಾಗಿ ಒಂದು ಕೃತಿಯಾಗಿ ಹೊರಹೊಮ್ಮುವಂಥದ್ದು. ಈ ಶೀರ್ಷಿಕೆಯಲ್ಲೇ ಮಹೇಶ ಎಲಕುಂಚವಾರರು ತಮ್ಮ ನಾಟಕ ಕೃತಿಯ ಸ್ವರೂಪವನ್ನೂ ನಾವು ಅದನ್ನು ಗ್ರಹಿಸಬೇಕಾದ ರೀತಿಯನ್ನೂ ಸೂಚ್ಯವಾಗಿ ಧ್ವನಿಸಿದ್ದಾರೆ ಎಂದು ಅನ್ನಿಸುತ್ತದೆ.

ಅನುವಾದಕರಾದ ಗಿರೀಶ ಕಾರ್ನಾಡರು ಮರಾಠಿ ಭಾಷೆಯಲ್ಲಿ ‘ಸನ್ನಾಟಾ’ ಎಂಬ ಶಬ್ದಕ್ಕೆ ‘ಸ್ಮಶಾನ ಮೌನ’ ಎಂಬ ಅರ್ಥವಿದೆ ಎಂಬುದನ್ನು ಗಮನಿಸಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ. ‘ಸನ್ನಾಟಾ’ ಶಬ್ದವನ್ನು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಕಾವಳ, ಕಳವಳ ಎಂಬ ಅರ್ಥಗಳಲ್ಲೂ ಬಳಸುತ್ತಾರಂತೆ.

ಹಾಗೆ ನೋಡಿದರೆ ಈ ನಾಟಕದಲ್ಲಿ ಮೌನದ ಬಳಕೆ ವಿರಳವೇ. ಹಲವು ಭಾಷೆಗಳ ಪದಗಳು, ವಾಕ್ಯಗಳಿಂದ ಕೂಡಿದ ಚುರುಕು ಸಂಭಾಷಣೆಗಳಲ್ಲಿ ಕಟ್ಟಿಕೊಳ್ಳುವ ಈ ನಾಟಕದಲ್ಲಿ ಸಂಗೀತವೂ ಸೇರಿದಂತೆ ಒಂದು ಸಂಕೀರ್ಣ ಶಾಬ್ದಿಕ ವಿನ್ಯಾಸವಿದೆ. ಮೂರು ಪಾತ್ರಗಳ ಸುತ್ತ ಹೆಣೆಯಲಾಗಿರುವ ಈ ನಾಟಕವು ಪರಸ್ಪರ ವೈದೃಶ್ಯವಿರುವ ಪ್ರತಿಯೊಂದು ಪಾತ್ರದ ವೈಯಕ್ತಿಕ ಸ್ಥಿತಿ, ಸಂಕಟ, ಆಶೋತ್ತರಗಳನ್ನು ಬಿಂಬಿಸುತ್ತಲೇ ಆ ಮೂವರ ಒಟ್ಟಾರೆ ಅವಸ್ಥೆಯನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತದೆ. ಅಂದರೆ ಈ ಮೂರೂ ಪಾತ್ರಗಳ ವೈಯಕ್ತಿಕ ಗಾಥೆಗಳನ್ನು ಅವುಗಳ ವೈದೃಶ್ಯಗಳಲ್ಲಿ ಕಾಣಿಸುತ್ತಲೇ ನಾಟಕದ ಬಂಧದಲ್ಲಿ ಅವುಗಳನ್ನು ಕೂಡಿಸಿ ಅವುಗಳ ಜೀವನ ಸ್ವರೂಪದ ಸಾಧಾರಣೀಕೃತ ದರ್ಶನವನ್ನು ಮೂಡಿಸಲು ಯತ್ನಿಸುತ್ತದೆ.

ಮನೀಷಾ, ದೋಲನ್ ಮತ್ತು ಸುಭದ್ರಾ ಎಂಬ ಮಧ್ಯವಯಸ್ಸಿನ ಮಹಿಳೆಯರ ಸುತ್ತ ಈ ನಾಟಕ ಕಟ್ಟಿಕೊಂಡಿದೆ. ಗಿರೀಶರ ಕನ್ನಡ ಅನುವಾದದಲ್ಲಿ ಮನೀಷಾ ಎಂಬ ನಾಮಧೇಯವನ್ನು ಹೊತ್ತ ಪಾತ್ರವು ಮಹೇಶ ಎಲಕುಂಚವಾರರ ಇಂಗ್ಲಿಷ್ ಅನುವಾದದಲ್ಲಿ ಅರುಣಾ ಎಂಬ ಹೆಸರನ್ನು ಪಡೆದಿದೆ. ವಿಮರ್ಶಕರೊಬ್ಬರ ಇಂಗ್ಲಿಷ್ ಬರಹದಲ್ಲಿ ಈ ಪಾತ್ರವನ್ನು ಶುಭದಾ ಎಂದು ಹೆಸರಿಸಲಾಗಿದೆ. ಇದಕ್ಕೆ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಈ ನಾಟಕದ ಹಲವು ಪಾಠಾಂತರಗಳು ಇವೆಯೇ ಎಂಬುದೂ ಸ್ಪಷ್ಟವಿಲ್ಲ.  ಉಳಿದ ಎರಡು ಪಾತ್ರಗಳ ಹೆಸರುಗಳು– ದೋಲನ್ ಮತ್ತು ಸುಭದ್ರಾ– ಮೂರೂ ಕಡೆ ಹಾಗೆಯೇ ಇವೆ.

ಅದೇನೇ ಇರಲಿ ಗಿರೀಶರ ಅನುವಾದದ ಮೂಲಕ ಮರಾಠಿಯ ಒಂದು ಉತ್ತಮ ನಾಟಕವು ಕನ್ನಡಕ್ಕೆ ಬಂದಿದೆ. ಕನ್ನಡದಲ್ಲಿ ಈ ಬಗೆಯ ನಾಟಕಗಳು ವಿರಳ. ಈ ದೃಷ್ಟಿಯಿಂದ ಕನ್ನಡ ನಾಟಕ-ರಂಗಭೂಮಿಗಳು ‘ಸೊನಾಟಾ’ ಪ್ರಕಟಣೆಯಿಂದ ಹೊಸ ಸಂವೇದನೆಯೊಂದನ್ನು ಪಡೆದುಕೊಳ್ಳ ಬಹುದಾಗಿದೆ. ಈ ನಾಟಕವು ನಮ್ಮ ರಂಗಭೂಮಿ ನಟಿಯರಿಗೆ ನಿಜಕ್ಕೂ ಒಂದು ಸೃಜನಶೀಲ ಸವಾಲಾಗಿದೆ ಎಂದು ಅನ್ನಿಸುತ್ತದೆ. ಮುಂಬಯಿಯ ಮೇಲುವರ್ಗದ ಒಂದು ಜೀವನಶೈಲಿಯನ್ನೂ ಮರಾಠಿ ಭಾಷೆಯ ಒಂದು ವಾತಾವರಣವನ್ನೂ ಮೂಡಿಸಲು ಅನುವಾದಕರಾದ ಗಿರೀಶ ಕಾರ್ನಾಡರು ಯಶಸ್ವಿಯಾಗಿದ್ದಾರೆ ಎಂದು ಯಾವ ಉತ್ಪ್ರೇಕ್ಷೆಯೂ ಇಲ್ಲದಂತೆ ಹೇಳಬಹುದಾಗಿದೆ.

ಮನೀಷಾ, ದೋಲನ್ ಮತ್ತು ಸುಭದ್ರಾ ಬಹುಕಾಲದ ಗೆಳತಿಯರಾಗಿದ್ದರೂ ಸ್ವಭಾವದಲ್ಲಿ, ಜೀವನಕ್ರಮದಲ್ಲಿ, ಭಾಷಾಬಳಕೆಯಲ್ಲಿ, ಸಾಮಾಜಿಕ ವರ್ತನೆಗಳಲ್ಲಿ ಪರಸ್ಪರ ತುಂಬ ಭಿನ್ನ, ಮನೀಷಾ ಸಂಸ್ಕೃತ ಅಧ್ಯಾಪಕಿ. ಸಂಸ್ಕೃತದ ಸೂಕ್ತಿಗಳನ್ನು ನಾಟಕದುದ್ದಕ್ಕೂ ಉದ್ಧರಿಸುತ್ತ ಹೋಗುತ್ತಾಳೆ. ತುಸು ಸಂಪ್ರದಾಯಸ್ಥೆ ಎನ್ನಬಹುದಾದ ಮರಾಠಿ ಮಹಿಳೆ ಅವಳು. ಅವಳಿಗೆ ಶಿಸ್ತು ಬೇಕು. ಒಂದು ನಿಶ್ಚಿತ ಜೀವನ ವಿಧಾನ ಬೇಕು. ದೋಲನ್ ಬಂಗಾಲಿ. ದೊಡ್ಡ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಕೈತುಂಬ ಸಂಪಾದಿಸುತ್ತಿರುವವಳು.

ಹಾಗೆಯೇ ಬಿಂದಾಸ್ ಆಗಿ ಹಣವನ್ನು ವ್ಯಯಿಸುವವಳು. ಧೂಮಪಾನ, ಮದ್ಯಪಾನ, ಪರಿಮಳ ದ್ರವ್ಯ, ಬೆಲೆಬಾಳುವ ಬಟ್ಟೆಗಳಿಗಾಗಿ ನಿರ್ಯೋಚನೆಯಿಂದ ಹಣ ಖರ್ಚು ಮಾಡುವವಳು. ಸುಭದ್ರಾ ಮಾಧ್ಯಮದಲ್ಲಿ ಕೆಲಸ ಮಾಡುವವಳು. ದೋಲನ್ ಮತ್ತು ಮನೀಷಾಗೆ ಹೋಲಿಸಿದರೆ ತುಸು ಸಾಹಸ ಪ್ರವೃತ್ತಿಯವಳು. ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯದವಳು. ತನ್ನ ಸಂಗಾತಿಯೊಂದಿಗೆ ತೀವ್ರ ಪ್ರೇಮ–ದ್ವೇಷಗಳ ಸಂಬಂಧವನ್ನು ಇಟ್ಟುಕೊಂಡವಳು. ಇವರಿಬ್ಬರಲ್ಲಿ ಅಷ್ಟಾಗಿ ಕಾಣದ ಹೊರಚಾಚು ಸುಭದ್ರಾಳ ಜೀವನ ವಿಧಾನದಲ್ಲಿದೆ. ದೋಲನ್ ಮತ್ತು ಸುಭದ್ರಾ ಇವರೀರ್ವರ ಮಾತಿನಲ್ಲಿ ಇಂಗ್ಲಿಷ್ ಧಾರಾಳವಾಗಿ ಬಳಕೆಯಾಗುತ್ತದೆ.

ಗಿರೀಶರ ಅನುವಾದಿತ ಕೃತಿಯಲ್ಲೂ ಮರಾಠಿ, ಬಂಗಾಲಿ, ಹಿಂದಿ, ಇಂಗ್ಲಿಷ್ ಪದ–ವಾಕ್ಯಗಳು ಸಮೃದ್ಧವಾಗಿ ಬಳಕೆಯಾಗಿ ಒಂದು ಮೆಟ್ರೊಪಾಲಿಟನ್, ಕಾಸ್ಮೊಪಾಲಿಟನ್ ವಾತಾವರಣ ತಾನಾಗಿ ಸೃಷ್ಟಿಯಾಗಿದೆ. ಇವರೆಲ್ಲ ನಲವತ್ತರ ಆಸುಪಾಸಿನಲ್ಲಿರುವವರು. ಇವರಿಗೆ ಅವರವರದೇ ಆದ ಭೂತಗಳೂ ಇವೆ. ಆದರೆ ಆ ಭೂತಗಳಿಂದ ತಪ್ಪಿಸಿಕೊಂಡು ಕೇವಲ ವರ್ತಮಾನದಲ್ಲಿ ಬದುಕುವ ಇರಾದೆ ಅವರದು. ಮನೀಷಾ ಮತ್ತು ದೋಲನ್ ಮದುವೆಯಾಗಿಲ್ಲ. ಸುಮಾರು ಇಪ್ಪತ್ತೈದು ವರ್ಷಗಳಿಂದ ಒಂದೇ ಫ್ಲಾಟಿನಲ್ಲಿ ವಾಸಮಾಡುತ್ತಿದ್ದಾರೆ. ತನ್ನ ಸಂಗಾತಿಯೊಡನೆ ಜಗಳವಾದಾಗಲೆಲ್ಲ ಸುಭದ್ರಾ ಈ ಗೆಳತಿಯರ ಫ್ಲಾಟಿಗೆ ಬರುತ್ತಿರುತ್ತಾಳೆ.

ಅವಳು ಅಲ್ಲೇ ಇರಲೂ ಆರಳು. ಮತ್ತೆ ಹೊರಗೆ ನೆಮ್ಮದಿಯಿಂದ ವಾಸಿಸಲೂ ಆರಳು. ಮೇಲುನೋಟಕ್ಕೆ ತುಂಬ ವಿಭಿನ್ನವೆನ್ನಿಸುವ ಜೀವನಶೈಲಿಯನ್ನು ರೂಢಿಸಿಕೊಂಡಿದ್ದರೂ ಈ ಮೂವರ ಅವಸ್ಥೆ ಮೂಲಭೂತವಾಗಿ ಒಂದೇ ತೆರನದು. ಉದ್ಯೋಗ, ಹಣ, ಸ್ವಾತಂತ್ರ್ಯ ಎಲ್ಲ ಇದ್ದರೂ ಇವರೆಲ್ಲ ಅಸುಖಿಗಳು. ಸುಖವೇನೆಂದು ಚಡಪಡಿಸುವವರು. ಏಕತಾನದ, ಯಾಂತ್ರಿಕ ಬದುಕಿನಲ್ಲಿ ಸಿಕ್ಕಿಕೊಂಡವರು. ಪರಸ್ಪರ ಗೆಳತಿಯರಾಗಿದ್ದರೂ ಆಂತರ್ಯದಲ್ಲಿ ಒಂಟಿಯಾಗಿಯೇ, ಏಕಾಂಗಿ ಯಾಗಿಯೇ ಇರುವವರು. ಅದನ್ನು ಕಳೆದುಕೊಳ್ಳಲು ಸದಾ ಒಬ್ಬರನ್ನೊಬ್ಬರು ಛೇಡಿಸಿಕೊಳ್ಳುತ್ತಾ, ಸ್ನೇಹದ, ಜಗಳದ, ಹೊಂದಾಣಿಕೆಯ, ಮರುಹೊಂದಾಣಿಕೆಯ ಆಟದಲ್ಲಿ ಮಗ್ನರಾಗಿರುವಂಥವರು.

ಅದಕ್ಕಾಗಿ ಕೆಲವೊಮ್ಮೆ ತಮ್ಮ ತಮ್ಮ ಭೂತಗಳನ್ನು ಕೆದಕಿ ಮೈಪರಚಿಕೊಳ್ಳುವವರು. ಆದರೂ ಕೇವಲ ವರ್ತಮಾನಕ್ಕೆ ಅಂಟಿಕೊಂಡವರು. ತಮ್ಮ ಭವಿಷ್ಯದ ಬಗ್ಗೆ ಅವರಿಗೆ ಯಾವ ಕಲ್ಪನೆಯೂ ಇಲ್ಲ. ಸ್ಥಗಿತಗೊಂಡ, ಭರವಸೆಯೇ ಇಲ್ಲದ ಸದ್ಯದಲ್ಲಿ ಹೇಗೆ ಬದುಕಬೇಕೆಂಬ ನಿಶ್ಚಿತ ಗೊತ್ತುಗುರಿ ಇಲ್ಲದ ಜೀವನ ಇವರದು. ಒಂದು ಕಾದಂಬರಿಯ ವಿಸ್ತಾರದಲ್ಲಿ ಬೆಳೆಯಬಹುದಾಗಿದ್ದ ಜೀವನ ಸಂದರ್ಭವೊಂದು ಪ್ರತಿಭಾವಂತ, ಪರಿಣಿತ ನಾಟಕಕಾರರೊಬ್ಬರ ಕೈಯಲ್ಲಿ ತುಂಬ ಸಾಂದ್ರವಾದ ನಾಟಕ ಕೃತಿಯಾಗಿ ಪರಿವರ್ತಿತಗೊಂಡಿದೆ. ಕೆಲವೇ ತಾಸುಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಾಟಕ ನಡೆದು ಹೋಗುತ್ತದೆ.

ಮುಂಬಯಿ ಮಹಾನಗರದಲ್ಲಿ ಬದುಕುತ್ತಿರುವ ಆಧುನಿಕ ವಿದ್ಯಾವಂತ ಮಹಿಳೆಯರ ಅವಸ್ಥೆಯನ್ನು ಒಂದು ಮೆಟ್ರೊಪಾಲಿಟನ್ ‘ಸೊನಾಟಾ’ ಆಗಿ ಗ್ರಹಿಸಿ ತಮ್ಮ ಮಾಧ್ಯಮದಲ್ಲಿ ಅಭಿವ್ಯಕ್ತಿಸುವುದು ನಾಟಕಕಾರರ ಉದ್ದೇಶವಾಗಿದ್ದು ಅದರಲ್ಲಿ ಅವರು ತುಂಬ ಯಶಸ್ವಿಯಾಗಿದ್ದಾರೆ.
ಮಹೇಶ ಎಲಕುಂಚವಾರರ ಕೃತಿಯು ವಾಸ್ತವಿಕ ವಿವರಗಳಿಂದ ಸಮೃದ್ಧವಾಗಿದ್ದರೂ ವಾಸ್ತವವಾದೀ ಶೈಲಿಯನ್ನು ಬಿಟ್ಟುಕೊಟ್ಟಿದೆ. ಕಾರ್ಯಕಾರಣ ಸಂಬಂಧಗಳ ವಾಸ್ತವವಾದೀ ತರ್ಕವನ್ನು ಬಿಟ್ಟುಕೊಟ್ಟು ಅದು ಆಧುನಿಕ ಜೀವನವನ್ನು ಸಮರ್ಥವಾಗಿ ಧ್ವನಿಸಬಲ್ಲ ಪ್ರತಿಮಾ ಸಂಯೋಜನೆಯಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ತನ್ನ ಪಾತ್ರಗಳ ವೈಯಕ್ತಿಕ ಚರಿತ್ರೆಯನ್ನು ಅದು ಅಷ್ಟಾಗಿ ಸೂಚಿಸದೆ ಅವರ ವರ್ತಮಾನದ ಗಳಿಗೆಗಳನ್ನು ಸೂಕ್ಷ್ಮವಾಗಿ ನೋಡಿದೆ.

ಅವರು ವಾಸಿಸುತ್ತಿರುವುದು ಒಂದು ಫ್ಲಾಟಿನಲ್ಲಿ. ಈ ಫ್ಲಾಟು ಅನೇಕ ಗಗನಚುಂಬಿ ಕಟ್ಟಡಗಳಿಂದ ಆವೃತವಾಗಿದೆ. ಅಂದರೆ ಫ್ಲಾಟಿನ ಹೊರಗಡೆಯ ಪ್ರಪಂಚ ಅವರಿಗೆ ಭೌತಿಕವಾಗಿಯೂ ಅನುಭವಕ್ಕೆ ಬರುತ್ತಿಲ್ಲ. ಎದುರಿನ ಕಟ್ಟಡದ ಮೂರನೆಯ ಮಹಡಿಯ ಮೇಲಿನ ಎಡಬದಿಯ ಫ್ಲಾಟಿನಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯೊಬ್ಬಳು– ಅವಳಿಗೆ ಇವರು ಮಿಸ್ ಟುಪ್ ಟುಪ್ ಎಂದು ಹೆಸರಿಟ್ಟಿದ್ದಾರೆ–  ಸರಿಯಾಗಿ ಎಂಟಕ್ಕೆ ಬಂದು ದೀಪ ಹಚ್ಚಿ ಕಿಡಕಿ ತೆಗೆದು, ಬೆಡ್ಡಿನ ಮೇಲೆ ಪರ್ಸನ್ನು ಬಿಸಾಡಿ, ಕಿವಿಯದನ್ನು ಬಿಚ್ಚಿ ಡ್ರೆಸರ್ ಮೇಲೆ ಇಟ್ಟು, ಒಂದು ಗ್ಲಾಸು ನೀರು ಕುಡಿದು ರಾತ್ರಿ ಹನ್ನೆರಡರ ತನಕ ಕಂಪ್ಯೂಟರ್ ಮುಂದೆ ಕೂಡ್ರುವ ದೃಶ್ಯವಷ್ಟೇ ಹೊರಪ್ರಪಂಚ.

ಅರ್ಧ ಸ್ಕರ್ಟ್ ತೊಡುತ್ತಿದ್ದ ಆಕೆ ಸಲವಾರ ಕಮೀಜಿಗೆ ಬಂದು ತಲುಪಿದ, ಅಂದರೆ ಆಕೆಗೆ ಕ್ರಮೇಣ ವಯಸ್ಸಾಗುತ್ತಿದ್ದುದನ್ನು ಇಪ್ಪತ್ತೈದು ವರುಷಗಳಿಂದ ನೋಡಿಕೊಂಡು ಬಂದು ತಮ್ಮ ಜೀವನ ಕಳೆದಿರುವ ಈ ಮಹಿಳೆಯರು ಖಾಲಿಯಾದ ಪರ್‌ಫ್ಯೂಮ್ ಬಾಟಲ್‌ಗಳನ್ನು ಸಂಗ್ರಹಿಸಿಡುತ್ತ ತಮ್ಮ ಕಳೆದುಹೋದ ವರ್ಷಗಳ ಲೆಕ್ಕ ಹಾಕುತ್ತಿದ್ದಾರೆ. ಇಂಥ ಪ್ರತಿಮೆಗಳ ಮೂಲಕ ಅವರ ಜೀವನವನ್ನು ದಾಖಲಿಸುತ್ತ ಮಹೇಶ ಎಲಕುಂಚವಾರರ ನಾಟಕವು ಸೊನಾಟದ ಅನುಭವವನ್ನು ಮೂಡಿಸುವುದು ಹೀಗೆ.

ನಾಟಕದ ಒಳಗೆ ಹಲವು ಸಂಗೀತಗಳ ಪ್ರಸ್ತಾಪವೂ ಬರುತ್ತದೆ. ಕುಶಲಿಯಾದ ನಿರ್ದೇಶಕರಿಗೆ ಈ ನಾಟಕದೊಳಗಿನ ಸಂಗೀತ ಸಂಯೋಜನೆಯಲ್ಲೇ ತಮ್ಮ ಸೊನಾಟವನ್ನು ಕಟ್ಟುವ ಮುಕ್ತ ಅವಕಾಶವನ್ನು ನಾಟಕಕಾರರು ಕಲ್ಪಿಸಿಕೊಟ್ಟಿದ್ದಾರೆ. ಕಥೆಯ ಹಂಗನ್ನು, ಕಾಲಾನುಕ್ರಮಣಿಕೆಯನ್ನು ಪ್ರಜ್ಞಾಪೂರ್ವಕ ತೊರೆದಿರುವ ಈ ನಾಟಕ ಕಾವ್ಯದ, ಸಂಗೀತದ ಅನುಭವವನ್ನು ಕೊಡುತ್ತ ಸಮಕಾಲೀನ ಭಾರತೀಯ ನಾಟಕಗಳಲ್ಲೇ ಅಪೂರ್ವವಾದ ಪ್ರಯೋಗ ಎನಿಸಿಕೊಳ್ಳುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT