ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಗಳ ಅಧ್ಯಯನಕ್ಕೆ ಮಾರ್ಗದರ್ಶಿ

ವಿಮರ್ಶೆ
Last Updated 14 ನವೆಂಬರ್ 2015, 19:49 IST
ಅಕ್ಷರ ಗಾತ್ರ

ದೇವಾಲಯ ಪೂರ್ವೋತ್ತರ
ಲೇ: ಕೆ.ಎಲ್. ಕುಂಡಂತಾಯ
ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ, ಮುಂಬಯಿ

ಪತ್ರಕರ್ತ ಮತ್ತು ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅವರು ಕಳೆದ ಮೂರು ದಶಕಗಳಿಂದ ಕರಾವಳಿಯ ದೇವಾಲಯ ನಿರ್ಮಾಣ, ಪುನರ್‌ ನಿರ್ಮಾಣ ಪ್ರಕ್ರಿಯೆಗಳನ್ನು ಕ್ಷೇತ್ರ ಕಾರ್ಯದ ಮೂಲಕ ಅಧ್ಯಯನ ಮಾಡುತ್ತಾ ಬಂದವರು. ಅವರ ಅಧ್ಯಯನಕ್ಕೆ ಪೂರಕವಾಗಿ ಈ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನೂರಾರು ದೇವಾಲಯಗಳ ಜೀರ್ಣೋದ್ಧಾರ ನಡೆದು, ಅಷ್ಟಬಂಧ ಬ್ರಹ್ಮಕಲಶಾದಿ ವಿಧಿಗಳ ಮೂಲಕ ಮರು ಸ್ಥಾಪನೆ ನಡೆದಿದೆ.

ಇಂತಹ ಪ್ರಕ್ರಿಯೆಯ ಅಧ್ಯಯನ ನಡೆಸಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಮತ್ತು ಮುಂದೆ ಇಂತಹ ಜೀರ್ಣೋದ್ಧಾರ ಕೆಲಸಗಳನ್ನು ಕೈಗೊಳ್ಳುವ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಮಾರ್ಗದರ್ಶಕವಾಗುವಂತೆ ಕೆ.ಎಲ್. ಕುಂಡಂತಾಯರು ರಚಿಸಿರುವ ಕೃತಿಯೇ ‘ದೇವಾಲಯ ಪೂರ್ವೋತ್ತರ: ದೇವಾಲಯ ನಿರ್ಮಾಣ ಒಂದು ಅಧ್ಯಯನ’.

ದೇವಾಲಯಗಳಲ್ಲಿ ಗರ್ಭಗೃಹದ ನಿರ್ಮಾಣವೇ ಅತ್ಯಂತ ಪ್ರಮುಖವಾದುದು. ಅದರಲ್ಲಿ ಮೂಲ ವಿಗ್ರಹದ ಸ್ಥಾಪನೆ ಆಗಮಶಾಸ್ತ್ರದ ನಿರ್ದೇಶನದಂತೆ ನಡೆಯುತ್ತದೆ. ವಿಶಿಷ್ಟ ತಂತ್ರದ ಮೂಲಕ ಮೂಲ ವಿಗ್ರಹವನ್ನು ಗರ್ಭಗೃಹದೊಳಗೆ ಸ್ಥಾಪಿಸಲಾಗುತ್ತದೆ. ನೂರಾರು ವರ್ಷಗಳಷ್ಟು ಪುರಾತನ ಗರ್ಭಗೃಹಗಳನ್ನು ನೆಲಸಮಮಾಡಿ, ಆಳಕ್ಕೆ ಅಗೆದು ನೋಡಿದಾಗ ಈ ರೀತಿಯ ತಾಂತ್ರಿಕ ವಿಧಾನಗಳು ಎಷ್ಟು ಹಿಂದಿನಿಂದ ಬಳಕೆಯಲ್ಲಿದ್ದವು ಎನ್ನುವುದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಅವಕಾಶ ಸಿಗುವುದು ಅಪೂರ್ವ. ಆದರೆ ಲೇಖಕರು ಸುಮಾರು 70 ದೇವಾಲಯಗಳು ಮತ್ತು 23 ದೈವಸ್ಥಾನ, ಬ್ರಹ್ಮಸ್ಥಾನ, ಸಿರಿಕ್ಷೇತ್ರಗಳ ಜೀರ್ಣೋದ್ಧಾರ ಪ್ರಕ್ರಿಯೆಯ ಕ್ಷೇತ್ರಕಾರ್ಯ ನಡೆಸಿರುವುದು ಒಂದು ದಾಖಲೆಯೇ ಸರಿ.

ಇಂತಹ ಅವಕಾಶವನ್ನು ಒದಗಿಸಿಕೊಳ್ಳಲು ಮತ್ತೊಬ್ಬ ಅಧ್ಯಯನಕಾರನಿಗೆ ಸಾಧ್ಯವಾಗಲಾರದು. ಯಾಕೆಂದರೆ ದೇವಾಲಯಗಳ ಜೀರ್ಣೋದ್ಧಾರದ ಸುವರ್ಣ ಯುಗ ಎನ್ನಬಹುದಾದ ಕಾಲಘಟ್ಟ ಈಗ ಮುಗಿದಿದೆ ಎನ್ನಬಹುದು. ಇನ್ನು ನೂರಾರು ವರ್ಷಗಳ ಕಾಲ ಈ ದೇವಾಲಯಗಳ ಗರ್ಭಗೃಹಗಳನ್ನು ಬಿಚ್ಚುವ ಪ್ರಮೇಯ ಬರಲಿಕ್ಕಿಲ್ಲ. ಪುರಾತನ ಷಢಾಧಾರಗಳನ್ನು ಅಧ್ಯಯನ ಮಾಡುವ ಪ್ರಸಂಗಗಳಂತೂ ಇನ್ನು ಸಿಗುವುದು ಕಷ್ಟ. ಇದರಿಂದಾಗಿ ಕುಂಡಂತಾಯರ ಈ ಕೃತಿಗೆ ಮಹತ್ವವಿದೆ.

ಈ ಪುಸ್ತಕದಲ್ಲಿ 27 ಬರಹಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಪೋಣಿಸಲಾಗಿದೆ. ಭಾಗ ಒಂದು – ದೇವಾಲಯ ನಿರ್ಮಾಣ ಮರು ನಿರ್ಮಾಣ, ಭಾಗ ಎರಡು – ಕ್ಷೇತ್ರ ಕಾರ್ಯ, ಭಾಗ ಮೂರು – ಪುನಾರಚನೆಯ ಅನಾವರಣ.

ಹಲವಾರು ದೇವಾಲಯಗಳು ಜೀರ್ಣೋದ್ಧಾರಗೊಳ್ಳುವ ಸಂದರ್ಭದಲ್ಲಿ ಚುಕ್ಕಾಣಿ ಹಿಡಿದವರ ಅಜ್ಞಾನದಿಂದಾಗಿ ಆಧುನೀಕರಣಗೊಳ್ಳುವ ಹುಮ್ಮಸ್ಸಿನಲ್ಲಿ ವಿಲಕ್ಷಣವಾಗುತ್ತಿವೆ ಎನ್ನುವ ಕಳಕಳಿಯನ್ನು ಕುಂಡಂತಾಯರ ಕೃತಿಯಲ್ಲಿ ಕಾಣಬಹುದು. ‘ದೇವಾಲಯ ಜೀರ್ಣೋದ್ಧಾರಗಳು ಪುನಾರಚನೆಗಳೇ ಆಗಬೇಕಲ್ಲದೆ ನವನಿರ್ಮಾಣಗಳಾಗಬಾರದು. ಸಂಸ್ಕೃತಿ ಪ್ರೀತಿಯ ಪ್ರವಾಸಿಗಳು ಇಲ್ಲಿಯ ಸಂಸ್ಕೃತಿಯ ಮೂರ್ತಸ್ವರೂಪಗಳಾದ ದೇವಾಲಯಗಳನ್ನು ವೀಕ್ಷಿಸಲು ಬರುತ್ತಾರೆಯೇ ಹೊರತು ಮಿಶ್ರಣಶೈಲಿಯ ಪರಸ್ಪರ ಏಕಸೂತ್ರತೆಗಳಿಲ್ಲದ ರಚನೆಗಳಿರುವ ದೇವಾಲಯಗಳನ್ನು ನೋಡಲು ಅಲ್ಲ’ ಎನ್ನುವುದು ಅವರ ಅನುಭವದ ಮಾತು.

ಪ್ರಾಚೀನ ರಚನೆಗಳ ಯಥಾವತ್ ಪುನಾರಚನೆ ಕಂಡುಬರುವ ಎಲ್ಲೂರು, ಕುಂಜೂರು ಮುಂತಾದ ದೇವಾಲಯಗಳ ವಾಸ್ತುವೈಭವವನ್ನು ಲೇಖಕರು ಉತ್ಸಾಹದಿಂದ ದಾಖಲಿಸಿದ್ದಾರೆ; ದಾರು ಶಿಲ್ಪಗಳ ಅದ್ಭುತ ಪುನಾರಚನೆ ಇರುವ ಕಟಪಾಡಿ ದೇವಸ್ಥಾನ, ನಂದಳಿಕೆಯಲ್ಲಿ ರಥವೊಂದರ ನವೀಕರಣ ಇತ್ಯಾದಿಗಳನ್ನು ಮಾದರಿಗಳಾಗಿ ಕೊಟ್ಟಿದ್ದಾರೆ. ಅಪಸವ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದಾರೆ.


ಕುಂಡಂತಾಯರ ಅಧ್ಯಯನದ ಮಹತ್ವ ಇರುವುದು ಷಢಾಧಾರ (ದೇವರ ಮೂರ್ತಿಗೆ ನೆಲದಾಳದಿಂದ ಆಧಾರವಾಗಿರುವ ಆರು ರಚನೆಗಳು– ಆಧಾರ ಶಿಲೆ, ನಿಧಿಕುಂಭ, ಶಿಲಾಪದ್ಮ, ಶಿಲಾಕೂರ್ಮ, ಯೋಗನಾಳ, ನಪುಂಸಕಶಿಲೆ) ಎಷ್ಟು ಪ್ರಾಚೀನ, ಅದರ ಕಲ್ಪನೆ ವಿಕಸನವಾದುದು ಹೇಗೆ, ಇತ್ಯಾದಿಗಳನ್ನು ಕ್ಷೇತ್ರಕಾರ್ಯದ ಮೂಲಕ ದಾಖಲಿಸಿರುವುದರಲ್ಲಿ. ಬಾರಕೂರು, ಮುಂಡ್ಕೂರು, ಇನ್ನಾ, ನರಸಿಂಗೆ, ಆರೂರು ಮುಂತಾದ ದೇವಾಲಯಗಳ ಗರ್ಭಗೃಹಗಳ ತಳಭಾಗದಲ್ಲಿ ದೊರಕಿದ ಕುರುಹುಗಳನ್ನು ಆಧರಿಸಿ ದೇವಾಲಯ ನಿರ್ಮಾಣದ ಬಗ್ಗೆ ಕೆಲವು ಮಹತ್ವದ ವಿಚಾರಗಳನ್ನು ಲೇಖಕರು ದಾಖಲಿಸಿದ್ದಾರೆ. ಅವರ ತೀರ್ಮಾನ ಇದು: ‘ಪುರಾತನ ದೇವಾಲಯಗಳ ನಿರ್ಮಾಣ ವಿಧಾನದಲ್ಲಿ ಏಕತಾನತೆ ಇರಲಿಲ್ಲ.

ಒಂದೊಂದು ದೇವಳ ಒಂದೊಂದು ಶಾಸ್ತ್ರಗ್ರಂಥದ ಆಧಾರದಲ್ಲಿ ನಿರ್ಮಾಣವಾಗುತ್ತಿತ್ತು... ಸುಮಾರು ಹದಿನೈದನೆ ಶತಮಾನದ ವೇಳೆ ತಂತ್ರ ಸಮುಚ್ಛಯ ಗ್ರಂಥ ಬರೆದ ಬಳಿಕ ಕರಾವಳಿಯ (ಕೇರಳ ಸಹಿತ) ದೇವಳ ನಿರ್ಮಾಣದಲ್ಲಿ ಒಂದು ಸ್ಪಷ್ಟ ಶಾಸ್ತ್ರ ಪ್ರಮಾಣ ರೂಢಿಗೆ ಬಂತೆನ್ನಬಹುದು’.

ದೇವಾಲಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಮತ್ತು ಆಡಳಿತವರ್ಗದವರಿಗೂ ಕುಂಡಂತಾಯರ ಪುಸ್ತಕ ಒಂದು ಮಾರ್ಗದರ್ಶಿ ಕೈಪಿಡಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT