ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನ–ಸವಾಲಿನ ಕ್ಯಾಚರ್‌ ಸಖ್ಯ!

ವಿಮರ್ಶೆ
Last Updated 5 ಮಾರ್ಚ್ 2016, 19:39 IST
ಅಕ್ಷರ ಗಾತ್ರ

ಹದಿಹರೆಯದ ಒಬ್ಬಂಟಿ ಪಯಣ
ಲೇ: ಜೆ.ಡಿ. ಸಾಲಿಂಜರ್‌ 
ಕನ್ನಡಕ್ಕೆ: ಎಸ್.ಎಫ್. ಯೋಗಪ್ಪನವರ
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ

ಮೆರಿಕನ್ ಲೇಖಕ ಜೆ.ಡಿ. ಸಾಲಿಂಜರ್‌ನ ‘ದ ಕ್ಯಾಚರ್ ಇನ್ ದ ರೈ’ (1951) ಪ್ರಕಟವಾಗಿ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲವಾಯಿತು; ಇದರ ಕನ್ನಡ ಅವತರಣಿಕೆ ಎಂದೋ ಬರಬೇಕಾಗಿತ್ತು, ಬಂದಿರಲಿಲ್ಲ. ಈಗ ಈ ಕೃತಿ ಎಸ್.ಎಫ್. ಯೋಗಪ್ಪನವರ ಕೈಯಿಂದ ‘ಹದಿಹರೆಯದ ಒಬ್ಬಂಟಿ ಪಯಣ’ ಹೆಸರಿನಲ್ಲಿ ಕನ್ನಡಕ್ಕೆ ಬಂದಿರುವುದು ಸಂತೋಷದ ಸಂಗತಿ. ಸಾಲಿಂಜರ್ ತನ್ನ ಹೆಚ್ಚಿನ ಜೀವನವನ್ನು ಅಜ್ಞಾತವಾಗಿ ಕಳೆದವ.

ಅಂಥಾದ್ದೊಂದು ಮಹಿಮೆ ಅವನ ಸುತ್ತ ಹೆಣೆದುಕೊಂಡಿದೆ. ಅಲ್ಲದೆ ‘ದ ಕ್ಯಾಚರ್ ಇನ್ ದ ರೈ’ ಅವನು ಬರೆದ ಒಂದೇ ಒಂದು ಕಾದಂಬರಿ. ಇದರ ಹೊರತಾಗಿ ಅವನು ಬರೆದುದು ಬೆರಳೆಣಿಕೆಯಷ್ಟು ಕತೆಗಳನ್ನು ಮಾತ್ರ. ಇನ್ನು ಯೋಗಪ್ಪನವರ್ ಕೂಡ ಒಂದು ತರದಲ್ಲಿ ಸಾಲಿಂಜರ್‌ನಂತೆಯೇ ತಮ್ಮನ್ನು ತಾವು ಅಡಗಿಸಿಕೊಂಡವರು. ಅವರು ಕೆಲವು ಸೃಜನಶೀಲ ಕೃತಿಗಳನ್ನಲ್ಲದೆ ಅನುವಾದಗಳನ್ನೂ ಮಾಡಿದ್ದಾರೆ. ಅವರ ಬಾದಲೇರ್ ಪದ್ಯಗಳ ಅನುವಾದ ಈಚೆಗಷ್ಟೇ ಪ್ರಕಟವಾಯಿತು.

ಇಂಗ್ಲಿಷ್ ಎಂ.ಎ. ಮಾಡಿಕೊಂಡು ಕೆಲವು ಕಾಲ ಇಂಗ್ಲಿಷ್ ಲೆಕ್ಚರರ್ ಆಗಿದ್ದ ಅವರು ನಂತರ ಸರಕಾರಿ ಆಡಳಿತವನ್ನು ಸೇರಿದರು. ಯೋಗಪ್ಪನವರ್ ತುಂಬಾ ಓದಿಕೊಂಡವರು, ಒಳ್ಳೆಯ ಸಿನಿಮಾಗಳನ್ನು ಪ್ರೀತಿಸುವವರು. ಕನ್ನಡ ಇಂಗ್ಲಿಷ್ ಸಾಹಿತ್ಯವಲ್ಲದೆ, ಲೋಕದ ಇತರ ಸಾಹಿತ್ಯಗಳಿಗೂ ತಮ್ಮನ್ನು ತಾವು ತೆರೆದುಕೊಂಡವರು. ಕೆಲವು ಸಲ ಲಂಕೇಶ್ ಜತೆ ಕಾಣಿಸಿಕೊಳ್ಳುತ್ತಿದ್ದರು; ಉಳಿದಂತೆ ಅವರು ಅಜ್ಞಾತವನ್ನೇ ಬಯಸುವವರು.

ಈ ಸಾಮ್ಯವೇ ಅವರನ್ನು ಕ್ಯಾಚರ್ ಕಡೆಗೆ ಆಕರ್ಷಿಸಿತೋ ತಿಳಿಯದು. ಹಾಗಿದ್ದರೆ ಅದೊಂದು ರೋಚಕ ವಿಷಯ; ಆದರೆ ಅದು ಅಗತ್ಯವಿಲ್ಲ, ಯಾಕೆಂದರೆ ಕ್ಯಾಚರ್ ಪ್ರಕಟವಾದ ಕೆಲವೇ ಸಮಯದಲ್ಲಿ ಅದು ಜಗದ್ವಿಖ್ಯಾತವಾಯಿತು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದ ನಾನೂ ಈ ಕೃತಿಯನ್ನು ಬಹಳ ವರ್ಷಗಳ ಹಿಂದೆ ಒಮ್ಮೆ ಓದಿದ್ದೆ– ಪಠ್ಯವಾಗಿ ಅಲ್ಲ, ಅಲಾಯಿತವಾಗಿ, ಆಧುನಿಕ ಜಗತ್ ಸಾಹಿತ್ಯದ ಅಂಗವಾಗಿ; ಈಗ ಯೋಗಪ್ಪನವರು ಹೇಗೆ ಅನುವಾದಿಸಿದ್ದಾರೆ ಎಂಬ ಕುತೂಹಲದಿಂದ ಮೂಲವನ್ನು ಮತ್ತೊಮ್ಮೆ ಓದಿ ನೋಡುವ ಅವಕಾಶ ಸಿಕ್ಕಿತು.

ಸಾಧಾರಣವಾಗಿ ಮೂಲ ಓದಿದವರು ಅನುವಾದ ಓದುವುದಿಲ್ಲ; ಅನುವಾದ ಓದಿದವರು ಮೂಲ ಓದುವುದಿಲ್ಲ. ನಾನಿಲ್ಲಿ ಎರಡನ್ನೂ, ಆದಷ್ಟೂ ಒಟ್ಟಿಗೆ ವಿಮರ್ಶಾತ್ಮಕವಾಗಿ ಓದಿದ್ದೇನೆ. ಇದನ್ನೊಂದು ಕ್ರಿಟಿಕಲ್ ಅಥವಾ ಅಕಡೆಮಿಕ್ ಓದು ಎಂದು ಬೇಕಾದರೆ ಹೇಳಬಹುದು. ಹೀಗೆ ನಾನು ಓದಲು ಕಾರಣವೆಂದರೆ ಈ ಕಾದಂಬರಿ ನನಗೆ ಇಷ್ಟ. ಅಷ್ಟೇ ರೀತಿಯಲ್ಲಿ ನನಗೆ ಯೋಗಪ್ಪನವರ ಅನುವಾದ ಸಾಮರ್ಥ್ಯದಲ್ಲಿ ಭರವಸೆಯಿದೆ.

ಅವರು ಏನನ್ನು ಮಾಡಿದರೂ ಆಸಕ್ತಿಯಿಂದ ಮಾಡುತ್ತಾರೆ. ಸಮರ್ಥ ಅನುವಾದಕರೆಂದು ಹೆಸರು ಮಾಡಿದ್ದಾರೆ. ಆದರೆ ಪ್ರಕೃತ ಕಾದಂಬರಿಯಂತೂ ಅನುವಾದಕ್ಕೆ ಬಹು ದೊಡ್ಡ ಸವಾಲು. ಅದನ್ನು ಯೋಗಪ್ಪನವರ್ ಹೇಗೆ ನಿರ್ವಹಿಸಿದ್ದಾರೆ ಎಂದು ತಿಳಿಯುವ ಕುತೂಹಲವೊಂದು ನನ್ನನ್ನು ಈ ಹತ್ತಿರದ ಓದಿಗೆ ಪ್ರೇರೇಪಿಸಿತು.

‘ದ ಕ್ಯಾಚರ್ ಇನ್ ದ ರೈ’ ನಾಯಕ ಹದಿನೇಳರ ವಯಸ್ಸಿನ ಮಧ್ಯಮ ವರ್ಗದ ಒಬ್ಬ ಬಿಳಿ ಅಮೆರಿಕನ್ ಹುಡುಗ. ಇಡೀ ಕಾದಂಬರಿ ಅವನ ಬಾಯಿಮಾತಿನ ನಿವೇದನೆಯಂತೆ ಇದೆ. ಕತೆ ಶುರುವಾಗುವಾಗ ಅವನೊಂದು ಮಾನಸಿಕ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತ ಇರುತ್ತಾನೆ. ಅದರ ವಿವರಗಳು ಹೆಚ್ಚೇನೂ ಇಲ್ಲ; ಇರುವುದು ಅವನಿಗೆ ಕಳೆದ ವರ್ಷದ ಕ್ರಿಸ್‌ಮಸ್ ಸಮಯದಲ್ಲಿ ಘಟಿಸಿದ ಮೂರು ನಾಲ್ಕು ದಿನಗಳ ಕೆಲವು ವಿಚಿತ್ರ ಅನುಭವಗಳ ವಿವರಣೆಗಳು.

ಹೋಲ್ಡನ್ ಪೆನ್ಸಿ ಪ್ರೆಪ್ ಸ್ಕೂಲಿಗೆ ಹೋಗುತ್ತಿರುತ್ತಾನೆ, ಹಾಸ್ಟೆಲಿನಲ್ಲಿ ಅವನ ವಾಸ. ಪೆನ್ಸಿ ಸ್ಕೂಲು ಅವನಿಗೆ ಇಷ್ಟವಿಲ್ಲ; ಆದರೆ ಇದಕ್ಕಿಂತಲೂ ಕೆಟ್ಟ ಸ್ಕೂಲುಗಳಿಗೆ ಅವನು ಈ ಹಿಂದೆ ಹೋದವನು. (ಪೆನ್ಸಿ ಪ್ರೆಪ್ ನ್ಯೂಯಾರ್ಕಿನ ಒಂದು ಕಾಲ್ಪನಿಕ ಸ್ಕೂಲು; ಸಾಲಿಂಜರ್‌ನ ವ್ಯಕ್ತಿಗತ ಅನುಭವಗಳನ್ನು ಇಲ್ಲಿ ಕಾಣಬಹುದು). ಹೋಲ್ಡನ್‌ಗೆ ಓದಿನಲ್ಲಿ ಅಥವಾ ಈ ರೀತಿಯ ಪಬ್ಲಿಕ್ ಸ್ಕೂಲ್‌ನ ಸಾಂಪ್ರದಾಯಿಕ ಶಿಕ್ಷಣದಲ್ಲಿ ಉತ್ಸಾಹವಿಲ್ಲ.

ಆದರೆ ವಾಸ್ತವದಲ್ಲಿ ಅವನಿಗೆ ಪುಸ್ತಕಗಳನ್ನು ಓದುವುದು ಇಷ್ಟ. ಕಳೆದ ಕ್ರಿಸ್‌ಮಸ್ ಸಮಯಕ್ಕೆ ಅವನಿಗೆ ಆಘಾತವೊಂದು ಕಾದಿರುತ್ತದೆ, ಆದರೆ ಅದು ಅನಿರೀಕ್ಷಿತವೇನೂ ಆಗಿರಲಿಲ್ಲ. ಅವನನ್ನು ಶಾಲೆಯಿಂದ ಹೊರ ಹಾಕಲಾಗುತ್ತದೆ. ಕಾರಣ, ಇಂಗ್ಲಿಷ್ ಉಳಿದಂತೆ ಇನ್ನೆಲ್ಲಾ ವಿಷಯಗಳಲ್ಲೂ ಅವನು ಫೇಲಾಗಿರುತ್ತಾನೆ. ಇಂಗ್ಲಿಷ್ ಅವನ ಇಷ್ಟದ ವಿಷಯ; ಆದರೆ ಇಂಗ್ಲಿಷ್‌ನಲ್ಲಿ ಕೂಡ ಮೌಖಿಕ ಪರೀಕ್ಷೆಯಲ್ಲಿ ಅವನು ಪಾಸಾಗಿರುವುದಿಲ್ಲ; ಯಾಕೆಂದರೆ ಅವನ ಕ್ಲಾಸಿನವರ ಪ್ರಕಾರ, ಅವನು ಮಾತಾಡುವಾಗ ‘ವಿಷಯಾಂತರ ಮಾಡುತ್ತಾನೆ; ಆದರೆ ಹೀಗೆ ವಿಷಯಾಂತರ ಮಾಡುವುದು ಅವನಿಗೆ ಸಹಜವೆನಿಸುತ್ತದೆ; ಒಂದೇ ವಿಷಯಕ್ಕೆ ಅಂಟಿಕೊಳ್ಳುವುದಕ್ಕೆ ಅವನಿಂದ ಆಗದು.

ಕ್ರಿಸ್‌ಮಸ್‌ಗೆ ಇನ್ನೂ ಮೂರು ನಾಲ್ಕು ದಿನಗಳಿರುವಾಗ ಅವನನ್ನು ಶಾಲೆಯಿಂದ ಹೊರಹಾಕಿದ್ದು. ಈ ಅವಸ್ಥೆಯಲ್ಲಿ ಅವನು ರಜೆಗೆ ಮೊದಲೇ ಮನೆಗೆ ಹೋದರೆ ನಪಾಸಿನ ಬಗ್ಗೆ ಮನೆಯವರಿಗೆ ಗೊತ್ತಾಗುತ್ತದೆ. ಆ ರಂಪಾಟ ಬೇಡವೆಂದು ರಜೆ ಶುರುವಾಗುವುದಕ್ಕೆ ಸರಿಯಾಗಿ ಮನೆಗೆ ಹೋದರಾಯಿತು ಎಂದುಕೊಳ್ಳುತ್ತಾನೆ; ಆದ್ದರಿಂದ ಹೋಲ್ಡನ್ ಹಾಸ್ಟೆಲ್ ಬಿಟ್ಟು ಪೇಟೆ ಅಲೆಯಲು ತೀರ್ಮಾನಿಸುತ್ತಾನೆ. ಕಾದಂಬರಿಯಲ್ಲಿ ಚಿತ್ರಿತವಾದವು ಈ ಘಟನೆಗಳು, ಅವುಗಳಿಂದಾಗುವ ಅನುಭವಗಳು, ಮನಸ್ಸಿನಲ್ಲೇಳುವ ಯೋಚನೆಗಳು.

ಇವೆಲ್ಲಾ ಅಷ್ಟೊಂದು ಅಸಾಮಾನ್ಯವೇ ಎಂದರೆ ಅಲ್ಲ; ಆದರೆ ಕಾದಂಬರಿಯ ವಿಶೇಷತೆಯಿರುವುದು ಸಾಮಾನ್ಯತೆಯನ್ನು ಅಸಾಮಾನ್ಯಗೊಳಿಸುವುದರಲ್ಲಿ. ಯಾಕೆಂದರೆ ಹೋಲ್ಡನ್‌ನ ಅನುಭವಗಳು ಯಾವನೇ ಹದಿಹರೆಯದ ಹುಡುಗನ ಅನುಭವವಾಗಿರುವುದು ಸಾಧ್ಯ. ಹೋಲ್ಡನ್ ವಿದ್ಯಾಭ್ಯಾಸವನ್ನು ದ್ವೇಷಿಸುತ್ತಾನೆಯೇ ಎಂದರೆ ಅದೂ ಇಲ್ಲ; ಯಾಕೆಂದರೆ ತನ್ನ ಚಿಕ್ಕ ತಂಗಿ ಫೀಬಿ ಅವನು ಬಹುವಾಗಿ ಪ್ರೀತಿಸುವವಳು, ತಾನೂ ಶಾಲೆ ಬಿಟ್ಟು ನಿನ್ನೊಂದಿಗೆ ತಿರುಗಾಡಲು ಬರುತ್ತೇನೆ ಎಂದಾಗ ಹೋಲ್ಡನ್ ಅವಳನ್ನು ತಡೆಯುತ್ತಾನೆ.

ಅವಳು ಚೆನ್ನಾಗಿ ಕಲಿಯಬೇಕು ಎನ್ನುವುದು ಅವನ ಇರಾದೆಯಾಗಿರುತ್ತದೆ. ಹೋಲ್ಡನ್‌ನ ಸಮಸ್ಯೆ ಒಂದು ರೀತಿಯ ಹದಿಹರೆಯದ ಹುಡುಗರ ‘ಅನ್ಯತೆ’ ಅರ್ಥಾತ್ ಏಲಿಯನೇಶನ್. ಅದೇ ಗಂಭೀರ ಸ್ವರೂಪ ಪಡೆದು ಅವನು ಮಾನಸಿಕ ಚಿಕಿತ್ಸಾಲಯ ಸೇರುವಂತೆ ಮಾಡುತ್ತದೆ. ಒಂದು ವರ್ಷದ ನಂತರ ಅದನ್ನೆಲ್ಲ ನಿರೂಪಿಸುವಾಗ ಅವನು ಅದನ್ನು ತನಗೆ ಸಂಭವಿಸಿದ the madman stuff  ಎಂದು ಕರೆಯುತ್ತಾನೆ. ಇಡೀ ಕತೆಯಲ್ಲಿ ಮುಂದೆ ಐವತ್ತು ಅರವತ್ತರ ದಶಕದಲ್ಲಿ ಬಂದ ‘ಅಸಂಗತವಾದ’ದ ಮುನ್ಸೂಚನೆಯಿರುವುದು ಗಮನಾರ್ಹ.

ಇದಕ್ಕೆ ಒಂದು ಉದಾಹರಣೆ, ಹೋಲ್ಡನ್‌ಗೆ ಕೊಳದಲ್ಲಿನ ಬಾತುಕೋಳಿಗಳ ಕುರಿತಾದ ಚಿಂತೆ: ನೀರು ಹೆಪ್ಪುಗಟ್ಟುವ ಈ ಚಳಿಯಲ್ಲಿ ಅವು ಎಲ್ಲಿ ಹೋಗುತ್ತವೆ ಎಂದು ಮಧ್ಯರಾತ್ರಿಯಲ್ಲಿ ಅವನ್ನು ಹುಡುಕಿ ಹೋಗುತ್ತ, ಆತಂಕ ಪಡುತ್ತಾನೆ. ಪ್ರತಿಯೊಂದು ವಿಷಯದಲ್ಲೂ ಹೋಲ್ಡನ್ ಸಮಾಜದ ರೂಢ ಚಿಂತನೆಯೊಂದಿಗೆ ತಾಳತಪ್ಪಿರುವುದು ಸ್ಪಷ್ಟವೇ ಇದೆ.

ಇದೆಲ್ಲವನ್ನೂ ಓದುಗರು ತಾವೇ ಕಂಡುಕೊಳ್ಳಬಹುದು. ಇಲ್ಲಿ ಮುಖ್ಯವಾಗಿರುವುದು ಯೋಗಪ್ಪನವರ ಅನುವಾದ; ಎದುರಾದ ಸಮಸ್ಯೆಗಳನ್ನು ಅವರು ನಿಭಾಯಿಸಿದ ರೀತಿ. ಮೊದಲನೆಯದಾಗಿ, ಇದೊಂದು ಹದಿಹರೆಯದ ಹಾಗೂ ಬಂಡಾಯ ಮನೋಭಾವದ ಹುಡುಗನ ನಿರೂಪಣೆಯಾದ್ದರಿಂದ ಇಲ್ಲಿ ಬಳಕೆಯಾದ ಇಂಗ್ಲಿಷ್ ಆಡು ಮಾತಿನದು, ಬಹುತೇಕ ಗ್ರಾಮ್ಯ ಮತ್ತು ಅಶಿಷ್ಟ. ವಾಕ್ಯಗಳೂ ಮೌಖಿಕ ಶೈಲಿಯನ್ನು ಅನುಸರಿಸುತ್ತವೆ.

‘ವಿಷಯಾಂತರ’ವಂತೂ ಬಹಳಷ್ಟಿದೆ. ಯೋಗಪ್ಪನವರು ಇವನ್ನು ತಮ್ಮ ಅನುವಾದದಲ್ಲಿ ತರುವುದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಕೆಲವು ಭಾಗಗಳಂತೂ ಬಹಳ ಬಿರುಸಾಗಿ ಓದಿಸಿಕೊಂಡು ಹೋಗುತ್ತವೆ. ಮೂಲ ಪಠ್ಯವನ್ನು ಅತ್ಯಂತ ಪ್ರೀತಿಸದೆ ಇದ್ದರೆ ಇಂಥ ಅನುವಾದ ಸಾಧ್ಯವಿಲ್ಲ. ಯೋಗಪ್ಪನವರು ಅದೆಷ್ಟು ಕಾಲ ಈ ಕಾದಂಬರಿಯ ಜೊತೆ ಬದುಕಿದ್ದರೋ ಅವರಿಗೇ ಗೊತ್ತು. ಆದರೆ ಅಂಥ ತಲ್ಲೀನತೆ ಅಗತ್ಯ.
ಆದರೆ ಈ ಗ್ರಾಮ್ಯ ಶೈಲಿಗೆ ಸಂಬಂಧಿಸಿ ಅನುವಾದಕರಿಗೆ ಒಂದು ಸಮಸ್ಯೆ ಎದುರಾಗಿರುವುದು ಕಂಡುಬರುತ್ತದೆ.

ಮೂಲದಲ್ಲಿ ಹೋಲ್ಡನ್ ಬಳಸುವುದು ಬಿಳಿ ಮಧ್ಯಮ ವರ್ಗದ ಹದಿಹರೆಯದವರ ಆಡುನುಡಿ. ಅದಕ್ಕೆ ಕನ್ನಡದಲ್ಲಿ ಸಂವಾದಿ ಯಾವುದು? ಯೋಗಪ್ಪನವರ್ ಬಿಜಾಪುರ ಕಡೆಯ ಹಲವಾರು ಪದಗಳನ್ನು ಬಳಸಿರುವುದು ಕಂಡುಬರುತ್ತದೆ. ಉದಾಹರಣೆಗೆ: ಸೀಮಿಕೋರ್ಚರು, ಅಂಜಿಬುಟ್ಟಿ, ಹಂಡದರ್ಲಿ, ತಂಬೂ ಊರುವುದು, ಗಫಾ ಹೊಡೆಯುವುದು, ಮಡಸಲು ವರ್ತನೆ, ಹರಿವಾಣದ ಮುದುಕಿ, ಅದುರಗ ವ್ಯಕ್ತಿ, ಹಾಳಾದ ಊರಡಸಿಗೆ ಹುಟ್ಟಿದವ, ಕುದ್ಲಗೇಡಿ, ಹೆಡ್ಡ, ಹದ್ನೆಂಟಿಗೆ ಹುಟ್ಟಿದವ, ಚಂಬುಹರಿ ಹೊಡೆತ, ಯಕ್ರ, ಡಿಂಗ್ರಿ, ಲಪೂಟರು, ಚುಪಾರುಸ್ತುಂ, ಹಸಡಿಸೂಗ, ಕುಯಿಕ್ ಮಲ್ಲಿ, ಉರಕ ಎಂದು ಮುಂತಾಗಿ ನೂರಾರು ಪದಗಳನ್ನು ಅನುವಾದಕರು ಬಳಸುತ್ತಾರೆ.

ಇವು ಎಲ್ಲರಿಗೂ ಅರ್ಥವಾಗುವವು ಎನ್ನುವಂತಿಲ್ಲ. ಅರ್ಥದ ಪ್ರಶ್ನೆ ದೂರವಿರಲಿ. ಅವು ತೀರಾ ಪ್ರಾದೇಶಿಕವಾದ ಕಾರಣ, ಮೂಲ ಇಂಗ್ಲಿಷ್‌ನ ಆಡುಮಾತಿನ ವಿಸ್ತಾರ ಇಲ್ಲಿ ಬರುವುದಿಲ್ಲ. ಪ್ರತಿಯೊಬ್ಬ ಅನುವಾದಕನಿಗೂ ಪರ್ಯಾಯ ಪದಗಳ ಆಯ್ಕೆಯ ಸ್ವಾತಂತ್ರ್ಯವಿದ್ದರೂ ಅದು ಮೂಲಕ್ಕೆ ಹತ್ತಿರವಾಗಿದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಯೋಗಪ್ಪನವರ್ ಹೆಚ್ಚು ವ್ಯಾಪ್ತಿಯ ಗ್ರಾಮ್ಯ ಪದಗಳನ್ನು ಬಳಸಿದ್ದರೆ ಒಳ್ಳೆಯದಿತ್ತೋ ಏನೋ. ಯಾಕೆಂದರೆ ಸಾಲಿಂಜರ್ ಬಳಸಿದ್ದು ಅಂಥ ಪದಗಳನ್ನೇ.

ಇಡೀ ಕಾದಂಬರಿ ಎದುರು ಯಾರನ್ನೋ ಕೂರಿಸಿಕೊಂಡು ಕತೆ ಹೇಳುವಂತಿದೆ. ಇಲ್ಲಿ You ಎಂಬ ಪದ ಆಗಾಗ ಬರುತ್ತದೆ. ಇಂಗ್ಲಿಷ್‌ನಲ್ಲಿ ಈ ಪದ ಏಕವಚನದ್ದಾಗಬಹುದು, ಬಹುವಚನದ್ದು (ಬಹುಮಾನ ಸೂಚಕ) ಆಗಿರಬಹುದು. ಯಾಕೆಂದರೆ ‘ಯೂ’ವಿಗೆ ಏಕವಚನ ಬಹುವಚನ ವ್ಯತ್ಯಾಸವಿಲ್ಲ. ಅದಲ್ಲದೆ, ‘ಯೂ’ (ಮತ್ತು ‘ವೀ’– ನಾವು) ವಿಶ್ವಾತ್ಮಕವಾಗಿ ಸಹಾ ಬಳಕೆಯಾಗಬಹುದು. ಈ ಕಾದಂಬರಿಯಲ್ಲಿ ‘ಯೂ’ವಿನ ವಿಶ್ವಾತ್ಮಕ ಬಳಕೆ ವಿಪುಲವಾಗಿ ಇದೆ. ಇದನ್ನು ಕನ್ನಡಕ್ಕೆ ಅನುವಾದಿಸಿದಾಗ, ಯೋಗಪ್ಪನವರ್ ಹೆಚ್ಚಿನ ಕಡೆಯೂ ‘ನೀನು’ ಎಂದು ಏಕವಚನ ಉಪಯೋಗಿಸುತ್ತಾರೆ.

ಕಾದಂಬರಿಯಲ್ಲಿ ಅಲ್ಲಲ್ಲಿ ‘ಗೆಳೆಯ’ ಎಂದು ಕಥಾನಾಯಕ ಸಂಬೋಧಿಸುವುದರಿಂದ ಅವರು ಹೀಗೆ ಮಾಡಿರಬಹುದು. ಆದರೆ ಕನ್ನಡದಲ್ಲಿ ವಿಶ್ವಾತ್ಮಕ ‘ಯೂ’ ಎಂಬುದು ‘ನೀವು’ ಅಥವಾ ‘ನಾವು’ ಎಂದೇ ಅನುವಾದವಾಗಬೇಕು. ಇದರ ಗೊಂದಲಕ್ಕೆ ಯೋಗಪ್ಪನವರ್ ಒಳಗಾಗಿದ್ದಾರೆ ಎಂದು ತೋರುತ್ತದೆ. ಯಾಕೆಂದರೆ, ಒಂದೇ ಪ್ಯಾರಾದಲ್ಲಿ ‘ನೀವು’ ಮತ್ತು ‘ನೀನು’ ಎರಡೂ ಬರುವುದನ್ನು ಕಾಣುತ್ತೇವೆ.
ಇದೇ ರೀತಿಯ ಗೊಂದಲ ಇತರ ವ್ಯಕ್ತಿಗಳನ್ನು ಉದ್ದೇಶಿಸಿ ಹೇಳಿದಾಗಲೂ ಕಂಡುಬರುತ್ತದೆ: ಹೋಲ್ಡನ್ ತನ್ನ ಗುರು ಹಿರಿಯರನ್ನು ಅವರ ಅನುಪಸ್ಥಿತಿಯಲ್ಲಿ ‘ಅವನು’ ಎಂದು ಪದೇ ಪದೇ ಕರೆಯುವುದು ಕನ್ನಡದ ಮನಸ್ಥಿತಿಗೆ ಹೊಂದುವುದಿಲ್ಲ.

ಹಾಗೆ ಕರೆಯುವುದು ಅಗೌರವ ತೋರಿಸಿದಂತೆ. ಈ ಹುಡುಗ ಎಷ್ಟೇ ಸಂಪ್ರದಾಯ ವಿರೋಧಿಯಾದರೂ ತನ್ನ ಮೇಷ್ಟರುಗಳನ್ನು ಏಕವಚನದಿಂದ ಕರೆಯುವುದು ಅವನ ಕಥಾಪಾತ್ರಕ್ಕೇ ಕುಂದನ್ನು ಉಂಟುಮಾಡುವಂಥದು– ಯಾಕೆಂದರೆ ಅವನೇನೂ ಕೆಟ್ಟ ಹುಡುಗನಲ್ಲ, ವಾಸ್ತವದಲ್ಲಿ ಜನ ಪ್ರೀತಿಸಬಹುದಾದ ಹೈದ ಅವನು. ಇದು ಅನುವಾದದ ಸಮಸ್ಯೆ. ಹೋಲ್ಡನ್‌ಗೆ ಇಂಗ್ಲಿಷ್‌ನಲ್ಲಿ ಈ ಸಮಸ್ಯೆಯಿಲ್ಲ. ಆದರೆ ಅನುವಾದದ ಸಮಸ್ಯೆ ಸಾಂಸ್ಕೃತಿಕ ಸಮಸ್ಯೆಯೂ ಆಗಿರುತ್ತದೆ ಎನ್ನುವುದನ್ನು ನಾವಿಲ್ಲಿ ಕಾಣಬಹುದು.

ಇಂಗ್ಲಿಷ್ ವಿಶೇಷಣ ಪದ ‘old’ ಎನ್ನುವುದು ಅನುವಾದಕರನ್ನು ಸಾಕಷ್ಟು ಕಾಡಿರುವುದು ಕಂಡುಬರುತ್ತದೆ. ಕಾದಂಬರಿಯಲ್ಲಿ ಇದು ಹೆಚ್ಚಾಗಿ ಸಲಿಗೆಯ ಪದವಾಗಿ ಬಳಸಲ್ಪಟ್ಟಿದೆ. ಉದಾಹರಣೆಗೆ– ‘Old Phoebe’, ಎಂದರೆ ‘ಮುದಿ ಫೀಬಿ’ ಎಂದಲ್ಲ. ಇಲ್ಲಿ ‘ಓಲ್ಡ್’ ಸಲಿಗೆಯಲ್ಲಿ ಬಳಸಲಾದ ಪದ. ಈ ಪದ ಕಾದಂಬರಿಯಲ್ಲಿ ಯಥೇಚ್ಛವಾಗಿ ಬರುತ್ತದೆ. ಅಲ್ಲೆಲ್ಲಾ ಯೋಗಪ್ಪನವರ್ ಮುದಿ ಎಂದೇ ಅನುವಾದಿಸುತ್ತಾರೆ. ಅಪರೂಪಕ್ಕೆ ‘ವೃದ್ಧ’, ‘ಹಳೆಯ’ ಎಂಬ ಪದಗಳು ಕಾಣಿಸಿಕೊಳ್ಳುತ್ತವೆ.

ಇದರರ್ಥ ಇದು ಅವರಿಗೊಂದು ಸವಾಲಾಗಿದೆ ಎಂದು. ಆದರೆ ಮುದಿ ಎಂಬುದಕ್ಕೆ ಕನ್ನಡದಲ್ಲಿ ಸಲಿಗೆಯ ಅರ್ಥವಿಲ್ಲ. ಅಲ್ಲದೆ ಈ ‘ಓಲ್ಡ್’ ಪದಕ್ಕೆ ಸರಿಯಾದ ಸಂವಾದಿ ಪದವೂ ಕನ್ನಡದಲ್ಲಿ ಇಲ್ಲ. ಆದ್ದರಿಂದ ಯಾವುದೇ ಅನುವಾದಕನಿಗೂ ಇದೊಂದು ಕಿರಿಕಿರಿಯೇ. ಮುದಿ ಎಂಬ ಪದವನ್ನು ಬಳಸಿ, ಯೋಗಪ್ಪನವರ್ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ; ಆದರೆ ಈ ರಿಸ್ಕ್ ಮಾತ್ರ ಸರಿಯಾದ ಫಲ ನೀಡಿಲ್ಲ; ವಿರುದ್ಧವಾಗಿ, ಅದೊಂದು ಹಸ್ತಕ್ಷೇಪವೆನಿಸುತ್ತದೆ. ಏನು ಮಾಡಬಹುದಿತ್ತು? ಆ ಪದವನ್ನು ಒಂದೋ ಕೈಬಿಡಬಹುದಿತ್ತು, ಇಲ್ಲವೇ ‘ಈ ನಮ್ಮ’, ‘ನಮ್ಮೀ’, ‘ಈ’ ಎಂಬಿತ್ಯಾದಿ ಪದಗಳನ್ನು ಹಿತಮಿತವಾಗಿ ಬಳಸಬಹುದಿತ್ತು.

ಅವು ಪೂರ್ತಿ ತೃಪ್ತಿಕರವೆಂದಲ್ಲ, ಸಾಕಷ್ಟು ಸಮೀಪ ಎನ್ನುವ ಕಾರಣಕ್ಕೆ. ಆಡುಮಾತಿನ ಪದಗಳನ್ನು ಅನುವಾದಕರು ಅಲ್ಲಲ್ಲಿ ಬಳಸುತ್ತಾರಾದರೂ, ಆಡುಮಾತಿನ ಧ್ವನಿಶೈಲಿಯನ್ನು ಕೈಬಿಟ್ಟಿದ್ದಾರೆ. ‘Gimme that bag– ‘ಆ ಬ್ಯಾಗ್ ಕೊಡು’ ಎಂದಾಗಿದೆ; ಇದು ಸರಿಯೇ, ಆದರೆ Gimmeಯ ಚಂದ ಅದರಲ್ಲಿಲ್ಲ. ಅದನ್ನೇ ಬಟ್ಟಿಯಿಳಿಸುವುದು ಸಾಧ್ಯವಿಲ್ಲ; ಆದರೆ ಇದೂ ಇದರಂಥ Didja (ಡಿಡ್ಯ), Wouldja (ವುಡ್ಯ) ಮುಂತಾದ ಇತರ ಹ್ರಸ್ವ ಪದಗಳೂ ಮೂಲದ ಆಡುಮಾತಿನ ಲಯವನ್ನು ಸೂಚಿಸುತ್ತವೆ. ‘ನನಗೆ ಇಷ್ಟವಾಗುತ್ತದೆ’ ಎಂಬ ಸಾಲು ಅನುವಾದದಲ್ಲಿ ಆಗಾಗ ಕಾಣಿಸುತ್ತದೆ; ಆದರೆ,  ‘ನಂಗಿಷ್ಟ’ ಎನ್ನುವದು ಎಲ್ಲೂ ಕಾಣಿಸುವುದಿಲ್ಲ.

‘ಮಾಡಲಿಕ್ಕಾಗುವುದಿಲ್ಲ’ ಎನ್ನುವುದು ‘ಮಾಡಕ್ಕಾಗಲ್ಲ’ ಎಂದಾಗಬಹುದಿತ್ತು, ಹಾಗೂ ‘ಕೊನೆಗೊಳಿಸುತ್ತದೆ’ ಎನ್ನುವುದು ‘ಕೊನೆಗೊಳಿಸುತ್ತೆ’ ಎಂದು. ಯೋಗಪ್ಪನವರ್ toneಗೆ ಯಾಕೆ ಕಿವಿಗೊಡಲಿಲ್ಲ ಎಂದು ಆಶ್ಚರ್ಯವಾಗುತ್ತದೆ. ಮೂಲ ಕೃತಿಯ ತುಂಬಾ ಇರುವುದು ಚಿಕ್ಕ ಚಿಕ್ಕ ಆಂಗ್ಲೋ–ಸ್ಯಾಕ್ಸನ್ ಪದಗಳು. ಕನ್ನಡದಲ್ಲಿಂದು ಅಚ್ಚಗನ್ನಡವನ್ನೇ ತರುವುದು ಬಹುಶಃ ಸಾಧ್ಯವಾಗದು. ಆದರೆ ಎಲ್ಲಿ ಹ್ರಸ್ವತೆ ಸಾಧ್ಯವೋ ಅಲ್ಲಿ ಪದಗಳನ್ನು ಶ್ರಿಂಕ್ ಮಾಡಬಹುದಿತ್ತು. ಯೋಗಪ್ಪನವರ್ ಈ ಕುರಿತಾಗಿ ಯೋಚಿಸಿದಂತೆಯೇ ಇಲ್ಲ; ಆದ್ದರಿಂದ ಇಲ್ಲಿ ಒಂದೆಡೆ Ole ಎಂಬ ಪದವನ್ನು ‘ಒಲೆ’ಯೆಂದೇ ಇರಿಸಲಾಗಿದೆ! ವಾಸ್ತವದಲ್ಲಿ ಇದು ‘ಓಲ್ಡ್’ ಪದದ ಗ್ರಾಮ್ಯ ರೂಪ.

ಹೀಗೆಲ್ಲ ಇದ್ದರೂ, ಯೋಗಪ್ಪನವರ ಸಾಧನೆ ಸಣ್ಣದೇನೂ ಅಲ್ಲ. ಈ ಕಾದಂಬರಿಗೆ ಆಕರ್ಷಿತನಾಗಿ, ಅದನ್ನು ಕನ್ನಡದಲ್ಲಿ ಚಿಂತಿಸುವುದೇ ಒಂದು ದೊಡ್ಡ ಕೆಲಸ. ಅವರೀಗ ಅನುವಾದಿಸಿ ಕೊಟ್ಟುದರಿಂದ ನಾವು ವಿಮರ್ಶೆ ಮಾಡಬಹುದು. ಎಲ್ಲ ವಿಮರ್ಶೆಗಳೂ ಹಾಗೆಯೇ– ಪೋಸ್ಟ್ ಫ್ಯಾಕ್ಟೋ. ಕ್ಯಾಚರ್‌ನ ಕತೆಯೇ ಎಷ್ಟು ಅದ್ಭುತವಾಗಿದೆಯೆಂದರೆ ಅನುವಾದದ ಸಹಜ ಸಮಸ್ಯೆಗಳನ್ನು ಮೀರಿ ನಿಲ್ಲುವ ತಾಕತ್ತು ಅದಕ್ಕುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT