ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಕಾಲೀನ ವಸ್ತುವಿನ ಸೂಕ್ಷ್ಮ ನಿರ್ವಹಣೆ

Last Updated 5 ಸೆಪ್ಟೆಂಬರ್ 2015, 19:51 IST
ಅಕ್ಷರ ಗಾತ್ರ

ಹದ
ಲೇ:
ಚೀಮನಹಳ್ಳಿ ರಮೇಶಬಾಬು
ಪ್ರ: ಅನಿಮ ಪುಸ್ತಕ, ಚಿಂತಾಮಣಿ
ಪು: 165 ರೂ. 120

ಮನಹಳ್ಳಿ ರಮೇಶಬಾಬು ಅವರ ‘ಹದ’ ಕಾದಂಬರಿ ಒಂದು ವಿಶಿಷ್ಟ ಸಮಕಾಲೀನ ವಸ್ತುವನ್ನು ಎತ್ತಿಕೊಂಡು ಶ್ಲಾಘನೀಯವಾಗಿ ನಿರ್ವಹಿಸಿದೆ. ಕನ್ನಡ ನಾಡಿನ ಸಾಹಿತ್ಯಿಕ – ಸಾಂಸ್ಕೃತಿಕ ಸನ್ನಿವೇಶವನ್ನು, ಒಂದು ಸಣ್ಣ ಕಿಟಕಿಯ ಮೂಲಕ ತೋರಿಸುವುದರ ಜತೆಗೆ, ಅದರಾಚೆಗಿನ – ಬಹುಶಃ ಅದನ್ನು ಪ್ರಭಾವಿಸುತ್ತಿರುವ ವಿಶಾಲ ಭಿತ್ತಿಯ ರಾಜಕೀಯ ಭ್ರಷ್ಟತೆಯನ್ನೂ ತೋರಿಸಿ ಅವುಗಳನ್ನು ಮೀರಬೇಕಾದ ಸ್ವಸ್ಥ ಸಮಾಜದ ಕನಸನ್ನು, ಭರವಸೆಯನ್ನು ಮನೆಮಂದಿಯಲ್ಲಿ ಮೂಡಿಸುವಂತಹ ಬರವಣಿಗೆ ಈ ಕಾದಂಬರಿಯದು.

ಹಾಗಂತ ಈ ಕಾದಂಬರಿ ಸಾಹಿತ್ಯ ಲೋಕವನ್ನಾಗಲಿ, ರಾಜಕೀಯ ಭ್ರಷ್ಟತೆಯನ್ನಾಗಲೀ, ಕೃಷಿ ಭೂಮಿ ಉಳಿಸುವ – ಕೃಷಿಯನ್ನು ಪುನರುಜ್ಜೀವನಗೊಳಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುವ ರೈತಪರ ಹೋರಾಟವನ್ನಾಗಲೀ ಪ್ರಾತಿನಿಧಿಕ ಎಂಬಂತೆ ಚಿತ್ರಿಸಲು ಹೋಗಿಲ್ಲ. ಇಂತಹ ಯಾವುದನ್ನಾದರೂ ಕುರಿತು ತಾನು ಚರ್ಚಿಸುತ್ತೇನೆಂಬ ಸೋಗನ್ನೂ ಹಾಕಿಕೊಂಡಿಲ್ಲ.

ಕೇವಲ ಎರಡು ಮೂರು ಪಾತ್ರಗಳ ಒಂದೆರಡು ತಿಂಗಳ ಚಟುವಟಿಕೆಗಳ ಮೂಲಕ ಇವೆಲ್ಲವನ್ನೂ ಓದುಗನ ಅನುಭವಕ್ಕೆ ತಂದುಕೊಡುತ್ತದೆ. ಅದೇ ಇದರ ಹೆಚ್ಚುಗಾರಿಕೆ. ಕಾದಂಬರಿಯ ಮೂರು ಮುಖ್ಯ ಪಾತ್ರಗಳು ದಲಿತ ಕವಿ ರಂಗಸ್ವಾಮಿ, ರೈತಪರ ಹೋರಾಟಗಾರ ರಘುನಾಥ, ಮತ್ತು ಸಾಹಿತ್ಯಾಭಿಮಾನಿ ರಂಗನಟಿ ಸುಮಾ ಹೆಬ್ಬಾಳು.

ಪ್ರಾರಂಭದಲ್ಲಿ ಕೋಲಾರದ ಪತ್ರಕರ್ತರ ಭವನದಲ್ಲಿ ಸಾಹಿತ್ಯದ ಕಾರ್ಯಕ್ರಮವೊಂದು ನಡೆಯುತ್ತಿದೆ. ನಾಡಿನ ಹೆಸರಾಂತ ಸಾಹಿತಿಗಳನ್ನು ಅಲ್ಲಿಗೆ ಕರೆಸಲಾಗಿದೆ. ಅದರಲ್ಲಿ ಈಗ ಮಾತನಾಡುತ್ತಿರುವುದು ನಾಡಿನ ಬಹುಚರ್ಚಿತ ಕವಿಯಾದ ಇನ್ನೂ ಮೂವತ್ತರ ಆಸುಪಾಸಿನ ಹಾಗೂ ಕೋಲಾರ ಜಿಲ್ಲೆಯವರೇ ಆದ ರಂಗಸ್ವಾಮಿ. ಸಣಕಲು ದೇಹದ, ಕುರುಚಲು ಗಡ್ಡದ, ಗಡುಸು ದನಿಯ ರಂಗಸ್ವಾಮಿಯ ಮಾತಿನ ಶೈಲಿಗೆ ಹಾಗೂ ವಿದ್ವತ್ತಿಗೆ ಇಡೀ ಸಭಾಂಗಣವೆ ಮೂಕವಾಗಿ ತದೇಕಚಿತ್ತದಿಂದ ಕೇಳತೊಡಗಿತು.

ಇಂತಹ ರಂಗಸ್ವಾಮಿಯ ಆಕರ್ಷಣೀಯ ವ್ಯಕ್ತಿತ್ವಕ್ಕೆ ಮರುಳಾಗಿ ಸುಮಾ ಹೆಬ್ಬಾಳು ಎಂಬ ಸಾಹಿತ್ಯಾಸಕ್ತ ಯುವತಿ ಅವನಿಗೆ ಅಂಟಿಕೊಳ್ಳುತ್ತಾಳೆ. ಅವನ ಕೆಮ್ಮು, ಒರಟುತನ, ಅವಳಿಗೆ ಸಮಾಜದ ಕೆಳಸ್ತರದ ಬದುಕನ್ನು ತೋರಿಸುವ ಅವನ ಹಟ, ವ್ಯಗ್ರ ವ್ಯಕ್ತಿತ್ವ– ಇವುಗಳಿಗೆ ಮನಸೋತ ಅವಳು ಅವನಿಗೆ ಬಹುಬೇಗನೆ ದೇಹವನ್ನೂ ಅರ್ಪಿಸಿಕೊಳ್ಳುತ್ತಾಳೆ. ನಂತರ ಓದುಗನಿಗೆ ಗೊತ್ತಾಗುವುದೆಂದರೆ ಅವಳು ಮೊದಲೇ ಮದುವೆಯಾಗಿದ್ದು ಗಂಡನ ವಿಕೃತ ಹಿಂಸೆಯನ್ನು ತಾಳಲಾರದೆ, ಹೆತ್ತವರ ಜತೆಗಿದ್ದು ಮತ್ತೊಬ್ಬ ಯೋಗ್ಯ ಸಂಗಾತಿಯ ಹುಡುಕಾಟದಲ್ಲಿರುವ ಹೆಣ್ಣು ಎನ್ನುವುದು. ಅವಳು ರಂಗಸ್ವಾಮಿಯ ಆತ್ಮರತಿ, ಪೊಸೆಸಿವ್ ವ್ಯಕ್ತಿತ್ವದಿಂದಾಗಿ ಅವನ ಬದುಕಿಗೆ ಬಂದಷ್ಟೇ ವೇಗವಾಗಿ ದೂರವಾಗುತ್ತಾಳೆ.

ತನ್ನ ಪರಿಸರದವನೇ ಆದ ರೈತ ಹೋರಾಟಗಾರ ರಘುನಾಥ ತನಗಿಂತ ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯುವುದು ರಂಗಸ್ವಾಮಿಯನ್ನು ಇನ್ನಷ್ಟು ವ್ಯಗ್ರನನ್ನಾಗಿಸುತ್ತದೆ. ರಘುನಾಥನ ಮೂಲಕ ಕಾದಂಬರಿಕಾರರು ಸಮಾಜಕ್ಕೆ ಒಂದು ಸಂದೇಶವನ್ನು ಕೊಡುತ್ತಾರೆ. ಕೆರೆಗಳನ್ನು ಜೋಡಿಸಿ, ಅಂತರ್ಜಲವನ್ನು ಹೆಚ್ಚಿಸಿ, ಕೃಷಿ ಕ್ಷೇತ್ರವನ್ನು ಉಳಿಸುವ ರಘುನಾಥನ ಯೋಜನೆಗಳು, ಅದಕ್ಕಾಗಿ ಅವನ ಹೋರಾಟಗಳು ಕಾದಂಬರಿಯ ನಾಯಕನನ್ನಾಗಿ ಅವನನ್ನು ಸ್ಥಾಪಿಸುವಂತಿವೆ.

ರಘುನಾಥನ ಪ್ರಸಿದ್ಧಿಯನ್ನು ಸಹಿಸದ ರಂಗಸ್ವಾಮಿ ಕೆಲವು ಸಂದರ್ಭಗಳಲ್ಲಿ ರಘುನಾಥನ ಸ್ಥಾನವನ್ನು ಆಕ್ರಮಿಸಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಅವನ ಆತ್ಮರತಿ, ಮೂರ್ತಿ ಭಂಜಕ ಪ್ರವೃತ್ತಿ ಹೆಚ್ಚಾಗುತ್ತಾ ಹೋಗಿ ಅವನನ್ನು ಮಾನಸಿಕ ಅಸ್ವಾಸ್ಥ್ಯಕ್ಕೆ ತಳ್ಳುತ್ತದೆ. ಜತೆಗೆ, ಕ್ಷಯ ರೋಗವೂ ಅಂಟಿಕೊಂಡು ಸಾವಿನಂಚಿಗೆ ತಳ್ಳುತ್ತದೆ.

ಖ್ಯಾತ ದಲಿತ ಕವಿ ಬೋರಯ್ಯನವರ ಜತೆಗಿನ ಅವನ ಹೊಡೆದಾಟ, ಅಕಾಡೆಮಿ ಪುರಸ್ಕೃತ ಕವಿಯ ಜತೆಗೆ ಅವನ ಜಗಳ ಇತ್ಯಾದಿಗಳಿಂದಾಗಿ ಅವನ ವ್ಯಕ್ತಿತ್ವ ಖಳನಾಯಕನದಾಗುತ್ತಾ ಹೋಗುತ್ತದೆ. ಇಡೀ ನಾಡೆಲ್ಲಾ ಗೌರವಿಸೋ ಆ ಕವಿಯನ್ನು ಎದುರು ಹಾಕಿಕೊಳ್ಳಲು ರಂಗಸ್ವಾಮಿಯ ಮನಸ್ಸು ನಿರ್ಧರಿಸಿಬಿಟ್ಟಿತ್ತು. ಆ ಕವಿಯ ಕಾವ್ಯವನ್ನು ಇವನು ತೆಗಳಿದ್ದರಿಂದ ಅವರು ಇವನ ಕವಿತೆಯನ್ನು ತೆಗಳುತ್ತಾರೆ. ಆಗ ಅವನ ಬಾಯಿಯಿಂದ ಸತ್ಯ ಹೊರಬರುತ್ತದೆ: ನೋಡಿ ‘ಸರ.... ಆ ಮುದುಕ ಹೇಗೆ ಮಾತಾಡ್ತಾನೆ.... ಇವತ್ತು ನಾನು ಓದಿದ್ದು ತೆಲುಗಿನ ಮಹತ್ವದ ಕವಿಯೊಬ್ಬರ ಕವಿತೆಯ ಅನುವಾದ’. ಹೀಗೆ ರಂಗಸ್ವಾಮಿಯ ಸಾಹಿತ್ಯ ಸೃಷ್ಟಿ ಕೂಡಾ ತೆಲುಗಿನಿಂದ ಕದ್ದದ್ದು ಎನ್ನುವುದನ್ನು ಲೇಖಕರು ಸೂಕ್ಷ್ಮವಾಗಿ ಅನಾವರಣ ಮಾಡುತ್ತಾರೆ.

ಜತೆಗೆ ಸುಳ್ಳು ಸುಳ್ಳೇ ತನ್ನನ್ನು ತಾನು ನಾಡಿನ ಬಹುಮುಖ್ಯ ಕವಿ ಎಂದು ಬಿಂಬಿಸಿಕೊಳ್ಳಲು ರಂಗಸ್ವಾಮಿ ಮಾಡುವ ಪ್ರಯತ್ನಗಳು, ರಘುನಾಥನನ್ನು ಅನಗತ್ಯವಾಗಿ ಹೀಯಾಳಿಸುವ ಪ್ರವೃತ್ತಿ ಇವುಗಳು ಅವನ ಕುರಿತಾಗಿ ಅಸಹನೆಯನ್ನು ಹುಟ್ಟಿಸುತ್ತಾ ಲೇಖಕರ ಉದ್ದೇಶ ಇಂತಹ ಸಾಹಿತಿಯೊಬ್ಬನ ವಿಡಂಬನೆಯೇ ಆಗಿದೆಯೇ ಎಂದು ಅನಿಸುವಷ್ಟರಲ್ಲಿ ಅವನ ವ್ಯಕ್ತಿತ್ವದ ವಿಕೃತಿ ಸಮಾಜದ ವಿಕೃತಿಗೆ ಒಂದು ರೂಪಕ ಅನ್ನುವಂತಹ ತಿರುವೊಂದನ್ನು ಲೇಖಕರು ಕೊಡುತ್ತಾರೆ.

ತನ್ನ ವ್ಯಕ್ತಿತ್ವದ ಎಲ್ಲ ಮುಖವಾಡಗಳು ಕಳಚಿಬಿದ್ದು ಕರುಣಾರ್ಹ ವ್ಯಕ್ತಿಯಾಗಿ ಬೆತ್ತಲಾಗುವ ರಂಗಸ್ವಾಮಿಯನ್ನು ಅವನ ಮಿತ್ರರು ಮತ್ತು ರಘುನಾಥ ಮಾನಸಿಕ ಚಿಕಿತ್ಸೆ ಕೊಡಿಸುವ ಮೂಲಕ ಸ್ವಸ್ಥ ವ್ಯಕ್ತಿಯನ್ನಾಗಿ ಮಾಡುತ್ತಾರೆ. ಅಷ್ಟರಲ್ಲಿ ರಘುನಾಥನನ್ನು ರಾಜಕೀಯ ಪುಢಾರಿಗಳು ಮುಗಿಸಿಬಿಟ್ಟಿರುತ್ತಾರೆ. ಆದರೆ ಅವನು ಹುಟ್ಟುಹಾಕಿದ ಹೋರಾಟಗಳು ಮುಂದುವರಿಯುತ್ತವೆ. ರಂಗಸ್ವಾಮಿ ಸಾಹಿತ್ಯದ ಸೋಗನ್ನು ಬಿಟ್ಟು ರಘುನಾಥನ ದಾರಿಯಲ್ಲಿ ನಡೆದು ತನ್ನ ಕೃಷಿ ಭೂಮಿಯನ್ನು ಪುನರುಜ್ಜೀವನಗೊಳಿಸಿ ಸ್ವಸ್ಥ ಬದುಕನ್ನು ಬಾಳುವ ನಿರ್ಧಾರ ಮಾಡುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.

ನಾಯಕನೇ ಖಳನಾಯಕನೂ ಆಗಿರುವ ಕ್ರೌನ್ ಆಕಾರದ ೧೬೫ ಪುಟಗಳ ಈ ಸಣ್ಣ ಕಾದಂಬರಿ ತನ್ನ ರಭಸದಲ್ಲಿ ನೀಳ್ಗತೆಯಂತಿದೆ. ಅಥವಾ ತನ್ನ ಕೇಂದ್ರ ವಸ್ತುವನ್ನು ಧ್ರುವವಾಗಿ ಇಟ್ಟುಕೊಂಡು ಮುಕ್ತಾಯದತ್ತ ಚಲಿಸಿರುವುದರಿಂದ ತೀವ್ರ ಅನುಭವವನ್ನು ನೀಡಲು ಶಕ್ತವಾಗಿದೆ. ಶ್ರೀಕೃಷ್ಣ ಆಲನಹಳ್ಳಿ, ವೈಕುಂಠರಾಜು ಮುಂತಾದವರು ಬರೆದ ನವ್ಯ ಸಂವೇದನೆಯ ಉತ್ತಮ ಕಾದಂಬರಿಗಳಂತಿರುವ ಈ ಕಾದಂಬರಿಯ ಸಂವೇದನೆ ಮಾತ್ರ ಅವುಗಳಿಗಿಂತ ಭಿನ್ನವಾಗಿ, ಈ ಕಾಲದ ಸಂವೇದನಾಶೀಲರ ಮರಳಿ ಮಣ್ಣಿಗೆ ಚಿಂತನೆಯನ್ನು ಪ್ರತಿಪಾದಿಸುತ್ತದೆ. ಆ ಕಾರಣದಿಂದಾಗಿ ಇತ್ತೀಚಿನ ಗಮನಾರ್ಹ ಕಾದಂಬರಿಗಳಲ್ಲಿ ‘ಹದ’ ಒಂದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT