ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧ ರೂಪಕಗಳ ‘ಮುಕ್ತಬಂಧ’

ವಿಮರ್ಶೆ
Last Updated 27 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಜೀವನ ಕ್ರಮಗಳು, ಶೈಲಿಗಳು, ನಂಬಿಕೆಗಳು, ಆಶೋತ್ತರಗಳು ಕಾಲದ ಒತ್ತಡಕ್ಕೆ ಸಿಲುಕಿ ಪಲ್ಲಟಗೊಳ್ಳುವ ಪರಿಯನ್ನು ಅದರ ಎಲ್ಲ ಸೂಕ್ಷ್ಮತೆ ಮತ್ತು ಬಹುಮುಖತೆಗಳಲ್ಲಿ ಪರಿಶೀಲಿಸಿಕೊಳ್ಳುವುದು ಶ್ರೀಧರ ಬಳಗಾರ ಅವರ ಬರವಣಿಗೆಯ ಪ್ರಮುಖ ಆಶಯವಾಗಿದೆ.

ಇದುವರೆಗಿನ ಅವರ ಆರು ಕಥಾಸಂಕಲನಗಳು, ಎರಡು ಕಾದಂಬರಿಗಳು ಮತ್ತು ಎರಡು ಅಂಕಣ ಬರಹಗಳ ಸಂಕಲನಗಳ ಪ್ರಧಾನ ಲಕ್ಷಣ ಇದು.

ಸಾಮಾಜಿಕ–ರಾಜಕೀಯ ಸುಧಾರಣೆಗಳು, ವಸಾಹತೀಕರಣ, ಆಧುನಿಕತೆಯ ಪ್ರವೇಶ, ಜಾಗತೀಕರಣ, ಮುಕ್ತ ಆರ್ಥಿಕ ವ್ಯವಸ್ಥೆ, ನವಬಂಡವಾಳಶಾಹೀ ವ್ಯವಸ್ಥೆಯ ಉದಯ– ಹೀಗೆ ನಾನಾ ಕಾರಣಗಳಿಂದ ಪರಂಪರಾಗತ ಸಾಮಾಜಿಕ–ಸಾಂಸ್ಕೃತಿಕ ವ್ಯವಸ್ಥೆಗಳು ಕುಸಿಯುವ, ಬದಲಾಗುವ, ನಾಶವಾಗುವ ನಿರ್ದಯ ಐತಿಹಾಸಿಕ ಪ್ರಕ್ರಿಯೆಯನ್ನು ನಿಷ್ಠುರವಾಗಿ ಶೋಧಿಸುವ ಮಹತ್ವಾಕಾಂಕ್ಷೆ ಇವರ ಬರಹಗಳಲ್ಲಿ ಕಂಡುಬರುತ್ತದೆ.

ಹಳೆಯದನ್ನು ಏಕಮುಖವಾಗಿ ತಿರಸ್ಕರಿಸುವ, ಇಲ್ಲವೆ ವಿಜೃಂಭಿಸುವ, ಇಲ್ಲವೆ ಹೊಸದನ್ನು ಅವಿಮರ್ಶಾತ್ಮಕವಾಗಿ ನಿರಾಕರಿಸುವ, ಇಲ್ಲವೆ ಅಪ್ಪಿಕೊಳ್ಳುವ ಸರಳ ಮಾರ್ಗವನ್ನು ತೊರೆದು ಒಂದು ಸನ್ನಿವೇಶವನ್ನು ಇಡಿಯಾಗಿ ಗಮನಿಸಿ, ಗ್ರಹಿಸಿ, ಕಥಿಸುವ ಸಂಕೀರ್ಣ ಹಾದಿಯನ್ನು ಶ್ರೀಧರ ಬಳಗಾರರು ತುಳಿಯುತ್ತ ಬಂದಿದ್ದಾರೆ.

ಪ್ರಸ್ತುತ ‘ಈಸಾಡತಾವ ಜೀವಾ’ ಬಳಗಾರರ ಏಳನೆಯ ಕಥಾಸಂಕಲನ. ಅವರು ಕಳೆದ ಆರೇಳು ವರ್ಷಗಳಲ್ಲಿ ಬರೆದ ಹನ್ನೆರಡು ಕಥೆಗಳು ಈ ಸಂಗ್ರಹದಲ್ಲಿ ಸೇರಿವೆ. ಇಲ್ಲಿ ಅವರ ಬರಹ ಇನ್ನೂ ಮಾಗಿದೆ; ಕಥನ ಹೆಚ್ಚು ನೇರವೂ ಸರಳವೂ ಆಗಿದೆ. ಕತೆ ಹೇಳುವ ಕಲೆಯಲ್ಲೇ ಹೊಸ ಹೊಸ ಪ್ರಯೋಗಗಳನ್ನು ಉದ್ದೇಶಿಸದೆ ಸಾಧ್ಯವಾದಷ್ಟೂ ವಿವರಗಳಲ್ಲೇ ನಿಜವೆನ್ನಿಸಬಲ್ಲ ನಿರೂಪಣಾ ವಿಧಾನದತ್ತ ಮಾತ್ರ ಲೇಖಕರು ಈಚಿನ ಬರಹಗಳಲ್ಲಿ ಗಮನವನ್ನು ಕೇಂದ್ರೀಕರಿಸುತ್ತಿದ್ದಾರೆ ಅನ್ನಿಸುತ್ತದೆ.

ಅಷ್ಟೇ ಅಲ್ಲ, ಗಟ್ಟಿಮುಟ್ಟಾದ ಪಾತ್ರಗಳನ್ನು ಸೃಷ್ಟಿಸಿ ವ್ಯಕ್ತಿಕಥನದ ಮೂಲಕವೇ ಒಂದು ಸಮುದಾಯದ ಕಥನವನ್ನು ಮಾಡುವ ಆಸ್ಥೆಯನ್ನು ಅವರು ತೋರುತ್ತಿದ್ದಾರೆ. ಈ ಸಂಕಲನದಲ್ಲಿ ಕಂಡು ಬರುವ ಗಜು (ಚಕ್ರಾಕಾರ), ದೇವಿದಾಸ (ದೇವಲೋಕ), ಕರುಣಾಕರ (ಡೆಂಫೆ ಮನೆ), ಹಾದಿ (ಹಾದಿ), ತಮ್ಮಯ್ಯ (ಗ್ರಾಮತೇಜ), ಕೇತು (ಹದ್ದು ಮೀರಿ) ಮುಂತಾದ ಪಾತ್ರಗಳು ವಿಭಿನ್ನ ಜೀವನಕ್ರಮಗಳು ಮತ್ತು ಆಶೋತ್ತರಗಳನ್ನು ಪ್ರತಿಬಿಂಬಿಸುವವರಾಗಿದ್ದರೂ ತಮ್ಮ ವೈಯಕ್ತಿಕ ಗಟ್ಟಿತನ ಮತ್ತು ಮೌಲ್ಯವ್ಯವಸ್ಥೆಗಳಿಂದ ಓದುಗರ ಮನಸ್ಸಿನಲ್ಲಿ ಬಹುಕಾಲ ಉಳಿಯಬಲ್ಲವರಾಗಿದ್ದಾರೆ. ಇಂಥ ಪಾತ್ರಚಿತ್ರಣಗಳ ಮೂಲಕವೇ ಬದುಕಿನ ಬಗ್ಗೆ ತಮ್ಮ ತಾತ್ವಿಕ ನಿಲುವುಗಳನ್ನೂ ಆದ್ಯತೆಗಳನ್ನೂ ಸೂಚಿಸಲು ಲೇಖಕರು ತುಂಬ ಯಶಸ್ವಿಯಾಗಿದ್ದಾರೆ.

ಮನುಷ್ಯ ನಾಗರಿಕತೆಯಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ಅನಿವಾರ್ಯ ಎಂಬ ಎಚ್ಚರ ಇವರಿಗೆ ಇದ್ದೇ ಇದೆ. ಆದರೆ ಇತಿಹಾಸ ಚಕ್ರವು ನಿರ್ದಯವಾಗಿ ಉರುಳತೊಡಗಿದಾಗ ಅನಪೇಕ್ಷಿತವಾದದ್ದರ ಜೊತೆಗೆ ಎಷ್ಟೋ ಅಪೇಕ್ಷಿತ ಸಂಗತಿಗಳೂ ನಾಶವಾಗಿ ಬಿಡುವ ವಿಷಾದದಲ್ಲಿ ಶ್ರೀಧರ ಬಳಗಾರರು ತಮ್ಮ ಹೆಚ್ಚಿನ ಕಥೆಗಳನ್ನು ಕಟ್ಟಿದ್ದಾರೆ. ಹಳೆಯದರ ಬಗ್ಗೆ ಅವರಲ್ಲಿ ಸರಳ ರಮ್ಯ ಹಳಹಳಿಕೆಗಳೇನೂ ಇಲ್ಲ.

ಕಣ್ಮರೆಯಾಗುತ್ತಿರುವ ಲೋಕಗಳಲ್ಲಿ ಇಂದೂ ನಮಗೆ ಮುಖ್ಯವಾಗಬಲ್ಲ, ಪ್ರಸ್ತುತವಾಗಬಲ್ಲ ಅನೇಕ ಸಂಗತಿಗಳು ಇರಬಹುದಲ್ಲವೆ ಎಂಬ ಎಚ್ಚರದಲ್ಲಿ ಮತ್ತು ವಿಸ್ಮಯದಲ್ಲಿ ಅವರ ಕಥನಕರ್ಮ ಸಾಗಿದೆ. ಅಂದರೆ ಭೂತವನ್ನಾಗಲೀ, ವರ್ತಮಾನವನ್ನಾಗಲೀ ದ್ವಿದಳ ವಿಭಜನೆಯಲ್ಲಿ ಸರಳೀಕರಿಸದೆ ಹೊಸದನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸುತ್ತ, ಅನಗತ್ಯವೂ ಅಪ್ರಸ್ತುತವೂ ಆಗಿರುವುದನ್ನು ಕೊಡವಿಕೊಳ್ಳುತ್ತ ನಮ್ಮ ಜೀವನಕ್ರಮಗಳು ಸಹಜ ಲಯದಲ್ಲಿ ನವೀಕೃತಗೊಂಡು ಸಾಗಲಾರವೆ ಎಂಬ ಪ್ರಶ್ನೆ ಇವರ ಬರಹಗಳ ಮೂಲಶ್ರುತಿಯಾಗಿದೆ.

‘ಈಸಾಡತಾವ ಜೀವಾ’ ಕಥೆಯಲ್ಲಿ ಚಂದ್ರಹಾಸ ಭಟ್ಟರಿಗೆ ಅನ್ನ ಕೊಡುವ ತಮ್ಮ ಮಣ್ಣು ಬೇರು ಮತ್ತು ಕರುಳು ಎರಡೂ ಆಗಿದೆ. ಜಮೀನು ಪರಭಾರೆ ಮಾಡಿದ್ದರಿಂದ ಹುಟ್ಟಿದ್ದ ಯಾತನೆಯಿಂದ ಅವರಿಗೆ ಬಿಡುಗಡೆ ಸಿಗುವುದೇ ಇಲ್ಲ. ಆದರೆ ಅವರ ಹೆಂಡತಿ ಅನಸೂಯಗೆ ಅದು ಕಂದಾಚಾರದ ನರಕದ ಕೊಂಪೆ. ಭಟ್ಟರಿಗೆ ಯಾವುದು ಕರ್ಮಭೂಮಿಯೋ ಅದು ಅನಸೂಯಗೆ ಅಲ್ಲ.

‘ಊರು ಬಿಟ್ಟು ಬಂದ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ’ ಎಂದು ಅವರು ಹೇಳುತ್ತಾರೆ. ಇವರ ಮಗ ಇಂಜಿನಿಯರಿಂಗ್ ಪದವೀಧರ ಸಾರ್ಥಕನಿಗೆ ನಗರ ಮತ್ತು ಅದು ಒಡ್ಡುವ ಆಮಿಷ, ಅವಕಾಶಗಳ ಬಗ್ಗೆ ಯಾವ ಮೋಹವೂ ಇಲ್ಲ.

ಹಾಗೆಯೇ ತನ್ನ ಊರಿನೊಂದಿಗೆ ಯಾವುದೇ ಪ್ರಾಪಂಚಿಕ ಸಂಬಂಧವೂ ಇಲ್ಲ. ತನ್ನ ಊರು ತನ್ನ ಕಾವ್ಯಕ್ಕೆ ಮಾತ್ರ ನೆನಪಿನ ಅಕ್ಷಯ ಇಂಧನವಾಗಬಹುದು. ಹೀಗೆ ಒಂದೇ ಕುಟುಂಬದಲ್ಲಿಯೇ ಆ ಮೂರು ವ್ಯಕ್ತಿಗಳ ಸೆಳೆತಗಳು ವಿರುದ್ಧ ದಿಕ್ಕಿನಲ್ಲಿವೆ. ಇದು ಒಟ್ಟಾರೆ ಸಮಕಾಲೀನ ನಾಗರಿಕತೆಯಲ್ಲಿ ಕಂಡುಬರುವ ವೈರುಧ್ಯಗಳ ಸೂಕ್ಷ್ಮರೂಪವೇ ಹೌದು ಎಂದು ಬಳಗಾರರ ಕಥೆ ಧ್ವನಿಸಲು ಯತ್ನಿಸುತ್ತದೆ. ಲೇಖಕರ ಸಹಾನುಭೂತಿ ಮೂರು ಪಾತ್ರಗಳಿಗೂ ಸಮಾನವಾಗಿ ಹರಿದಿದೆ. ಮುಂದೇನು ಎಂಬ ಸಂದಿಗ್ಧದಲ್ಲಿ ಕಥೆ ಮುಕ್ತಾಯಗೊಳ್ಳುತ್ತದೆ.

ಈ ಕಥೆಯಲ್ಲಿ ಒಂದು ಕುಟುಂಬದೊಳಗಣ ಆವರಣದಲ್ಲಿ ಇಂದಿನ ಸಂದರ್ಭದ ಒತ್ತಡಗಳು ಸೂಚಿತವಾದರೆ, ‘ಗ್ರಾಮತೇಜ’ ಎಂಬ ಕಥೆಯಲ್ಲಿ ಇಡೀ ಹಳ್ಳಿ ಮಾರಾಟಕ್ಕಿದೆ. ಹಳ್ಳಿಯಲ್ಲಿ ಕೃಷಿ ಲಾಭದಾಯಕವಾಗಿಲ್ಲ.

ಕಲಿತವರು ಹೊಸ ಉದ್ಯೋಗಗಳನ್ನು ಅರಸಿ ನಗರಗಳಿಗೆ ಹೋಗುತ್ತಿದ್ದಾರೆ. ಅಷ್ಟೇನೂ ಕಲಿಯದವರೂ ರೈತಾಪಿ ಕೆಲಸದಲ್ಲಿ ಯಾವ ಭವಿಷ್ಯವನ್ನೂ ಕಾಣದೆ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಕೃಷಿ ಕೆಲಸಕ್ಕೆ ಬರುವವರ ಸಂಖ್ಯೆ ಅನೇಕ ಕಾರಣಗಳಿಂದ ಕ್ಷೀಣಿಸುತ್ತಿದೆ. ಗದ್ದೆಗಳು ಹಾಳು ಬೀಳಲಾರಂಭಿಸುತ್ತಿವೆ.

ಇನ್ನು ಗ್ರಾಮೀಣ ಬದುಕಿನ ಉಳಿದ ಕಾರ್ಪಣ್ಯಗಳೂ ಸದ್ಯಕ್ಕೆ ತೀರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಿರುವಾಗ ಭೋಲೆಲಾಲ ಎಂಬ ಮಾರವಾಡಿಯು ಇಡೀ ಹಳ್ಳಿಯನ್ನು ಕೊಂಡು ಅದನ್ನು ರೆಸಾರ್ಟುಗಳನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಯನ್ನು ಪ್ರಸ್ತಾಪಿಸಿದಾಗ ಮುಕ್ಕಾಲು ಹಳ್ಳಿ ಸುಲಭವಾಗಿ ಒಪ್ಪಿಬಿಡುತ್ತದೆ. ಆ ಮಣ್ಣಿಗೆ ಅಂಟಿರುವ, ಆ ನೆಲದ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿರುವ, ಗ್ರಾಮತೇಜದ ಗೌರವಕ್ಕೆ ಪಾತ್ರರಾದ ತಮ್ಮಯ್ಯನವರಿಗೆ ತಮ್ಮ ಕಾಲ ಮುಗಿಯಿತು ಅನ್ನಿಸುತ್ತದೆ.

‘ಗ್ರಾಮತೇಜ’ ಎಂದರೆ ಊರಿನ ಸಮುದಾಯವನ್ನು ಮುನ್ನಡೆಸುವ ಸಾಂಸ್ಕೃತಿಕ ಮುಂದಾಳುವಿಗೆ ಸಾಂಪ್ರದಾಯಿಕ ಒಸಗೆಗಳ ಸಭೆಯಲ್ಲಿ ಅರ್ಪಿಸುವ ಗೌರವ ಎಂದು ಲೇಖಕರ ಅಡಿಟಿಪ್ಪಣಿ ಸೂಚಿಸುತ್ತದೆ.

ಬದಲಾದ ಪರಿಸ್ಥಿತಿಯಲ್ಲಿ ಈ ಗೌರವವು ಆ ಊರು–ಸಂಸ್ಕೃತಿಗಳಲ್ಲೇ ಬೇರುಬಿಟ್ಟಿದ್ದ ತಮ್ಮಯ್ಯನವರಿಂದ, ಆ ಊರಿಗೇ ಸೇರದ, ಆ ಸಮುದಾಯಕ್ಕೇ ಸೇರದ ಬಂಡವಾಳಶಾಹಿ ಭೋಲೆಲಾಲನಿಗೆ ಹಸ್ತಾಂತರವಾಗಲಿದೆ ಎಂಬ ವ್ಯಂಗ್ಯದಲ್ಲಿ ಬಳಗಾರರ ಕಥೆಯು ಸಾಧಾರಣೀಕರಣಗೊಂಡು ತೃತೀಯ ಜಗತ್ತಿನಲ್ಲಿ ಕಂಡುಬರುತ್ತಿರುವ ವಿದ್ಯಮಾನಗಳಿಗೆ ಒಡ್ಡಿದ ಅರ್ಥಪೂರ್ಣ, ಶಕ್ತಿಶಾಲೀ ರೂಪಕವಾಗಿಬಿಡುತ್ತದೆ.  ಅಮೃತಪ್ಪನ ‘ವಾನಪ್ರಸ್ಥ’ ಕಥೆಯಲ್ಲಿ ಊರುಬಿಟ್ಟು ನಗರ ಸೇರಿದವರ ಪರಿಸ್ಥಿತಿಯ ಹೃದಯಸ್ಪರ್ಶಿ ಚಿತ್ರಣವಿದೆ.

ಊರು–ಮನೆ–ನೆಲದೊಂದಿಗಿನ ಸಂಬಂಧಗಳಲ್ಲಿ ಆಗುತ್ತಿರುವ ಪಲ್ಲಟಗಳಲ್ಲಿ ಸಮಕಾಲೀನ ನಾಗರಿಕತೆಯ ಸ್ವರೂಪವನ್ನು ಕಾಣುವ, ಕಾಣಿಸುವ ಬಳಗಾರರು ಕೇವಲ ಸರಳವಾದ, ರಾಜಕೀಯವಾಗಿ ಸರಿ ಎನ್ನಿಸುವ ಸಿದ್ಧಾಂತಗಳ ಮೂಲಕ ತಮ್ಮ ನಿಲುವುಗಳನ್ನು ವಾಚ್ಯಗೊಳಿಸದೆ ಜೀವನ ಸಂದರ್ಭಗಳ ದಟ್ಟವಾದ ವಿವರ-ವರ್ಣನೆಗಳಲ್ಲಿ ಒಂದು ಪ್ರಕ್ರಿಯೆಯನ್ನು ಗ್ರಹಿಸಿ ಅಭಿವ್ಯಕ್ತಿಸುವ ಮಾರ್ಗವನ್ನು ಹಿಡಿದಿರುವುದರಿಂದ, ಓದುಗರಿಗೂ ತಮ್ಮ ಆಯ್ಕೆಗಳನ್ನು ಮಾಡಿಕೊಳ್ಳುವಂಥ ಮುಕ್ತಬಂಧ ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ಕಂಡುಬರುತ್ತದೆ.

ಅಷ್ಟೇ ಅಲ್ಲ, ಮೇಲುನೋಟಕ್ಕೆ ಪಳೆಯುಳಿಕೆಗಳೆಂದೋ ಮೂಢ ನಂಬಿಕೆ–ಆಚಾರಗಳೆಂದೋ, ಈ ಕಾಲಕ್ಕೆ ಅಪ್ರಸ್ತುತವೆಂದೋ ಅನ್ನಿಸುವ ವ್ಯಕ್ತಿಗಳಿಂದ, ಜೀವನ ವಿಧಾನಗಳಿಂದ ಕೂಡಿದ ಗ್ರಾಮ ಸಮುದಾಯಗಳಲ್ಲಿ, ಸಣ್ಣ ಹಳ್ಳಿ–ಊರುಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳತ್ತ ಓದುಗರ ಗಮನ ಸೆಳೆಯುವಲ್ಲಿ ಲೇಖಕರು ತುಂಬ ಯಶಸ್ವಿಯಾಗಿದ್ದಾರೆ. ‘ಚಕ್ರಾಕಾರ’ ಕಥೆಯಲ್ಲಿ ಚಿತ್ರಿತವಾಗಿರುವ ಮೆಕ್ಯಾನಿಕ್ ಗಜು ಇಂಥ ಒಂದು ಅಸಾಧಾರಣ ಪ್ರತಿಭೆ. ಅದನ್ನು ಗುರುತಿಸುವವರು ತೀರಾ ಕಡಿಮೆ ಅಷ್ಟೆ.

ಆಸ್ಪತ್ರೆಯೊಂದರಲ್ಲಿ ಹೆಣಕೊಯ್ಯುವ, ಇತರ ಇಂಥ ಕೆಲಸಗಳಲ್ಲಿ ತೊಡಗಿಕೊಂಡಿರುವ ‘ಬಕಾಲ’ ಕಥೆಯ ಬಕಾಲನು ಹಗ್ಗ ಹೊಸೆಯುವ ಪರಂಪರಾಗತ ವೃತ್ತಿಯನ್ನು ಬಿಟ್ಟು ಜೀವನ ಸಾಗಿಸುವ ಇತರ ಸಾಧ್ಯತೆಗಳ ಬೆನ್ನುಹತ್ತಬೇಕಾಗುವುದೂ ಲೇಖಕರ ಶೋಧಕ್ಕೆ ಪೂರಕವಾಗಿಯೇ ಇದೆ. ಬದಲಾವಣೆಗಳನ್ನು ನಿಧಾನವಾಗಿ ಒಪ್ಪುತ್ತ, ಆ ಹಾದಿಯಲ್ಲಿರುವ ತೊಡರು–ತೊಡಕುಗಳನ್ನು ನಿವಾರಿಸಿಕೊಳ್ಳುತ್ತ ಹಳೆಯ ಆಚರಣೆಗಳನ್ನು ಹೊಸ ಸಮಸ್ಯೆ–ಸವಾಲು–ಸಾಧ್ಯತೆಗಳಲ್ಲಿ ನವೀಕರಿಸಿಕೊಂಡು ಸಾತತ್ಯ ಮತ್ತು ಪರಿವರ್ತನೆ ಎರಡನ್ನೂ ಸಮತೋಲನಗೊಳಿಸಿಕೊಂಡು ಬದುಕು ಸಾಗಿಸುವ, ಮುಂದುವರೆಸುವ ಚಿತ್ರ ‘ಹದ್ದು ಮೀರಿ’ ಕಥೆಯಲ್ಲಿ ಗೋಚರವಾಗುತ್ತದೆ. ಈ ಶೀರ್ಷಿಕೆಯ ಧ್ವನ್ಯಾರ್ಥವನ್ನು ಗ್ರಹಿಸಲು ಕಥೆಯನ್ನೇ ಓದಬೇಕು.

‘ಡೆಂಫೆ ಮನೆ’ ಈ ಸಂಕಲನದ ಅತ್ಯುತ್ತಮ ಕಥೆಗಳಲ್ಲಿ ಒಂದು. ನಮ್ಮ ಅನೇಕ ಸಮಕಾಲೀನ ವಿದ್ಯಮಾನಗಳಿಗೆ ಒಂದು ಚಿಕಿತ್ಸೆ ಎಂಬಂತೆಯೂ ಈ ಕಥೆಯನ್ನು ಓದಿಕೊಳ್ಳಬಹುದು. ಪಂಚಾಂಗ, ಊದುಬತ್ತಿ, ಯಜ್ಞೋಪವೀತ, ಪಟ್ಟೆನೂಲು, ಮಡ್ಡಿಂಗು ಮಾರುವ ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಡೆಂಫೆಯವರು ಸ್ವದೇಶಿ ಗುಂಗಿನಲ್ಲಿ ತಮ್ಮ ಏಕೈಕ ಮಗ ಶಿವರಾಯನನ್ನು ಖಾದಿ ಗ್ರಾಮೋದ್ಯೋಗದಲ್ಲಿ ನೌಕರಿಗೆ ಸೇರಿಸುತ್ತಾರೆ.

ಅವನು ಖಾದಿಯನ್ನೇ ಧರಿಸುತ್ತ, ಮದುವೆಯನ್ನೂ ತ್ಯಜಿಸಿ ಸಣ್ಣ ಪಗಾರದಲ್ಲೇ ಸರಳ ಜೀವನ ನಡೆಸುತ್ತಾನೆ. ಇದು ಬದಲಾವಣೆಯ ಮೊದಲ ಹಂತ. ಎರಡನೆಯ ಹಂತದಲ್ಲಿ ಈ ಶಿವರಾಯನು ತಮ್ಮ ಡೆಂಫೆ ಮನೆಯ ಒಂದು ದೊಡ್ಡ ಭಾಗವನ್ನು ಮುಸ್ಲಿಂ ಕುಟುಂಬವೊಂದಕ್ಕೆ ಮಾರಲು ಹಿಂಜರಿಯುವುದಿಲ್ಲ.

ಅವನ ತಾಯಿ ಸಂಪ್ರದಾಯಸ್ಥೆ ವೃದ್ಧೆ ರಕುಮಾ ಕೂಡ ಅದಕ್ಕೆ ಅಡ್ಡಿಪಡಿಸುವುದಿಲ್ಲ. ಅವಳ ಒಂದೇ ಕರಾರು– ತುಳಸೀ ಪೀಠ ಇರುವ ಜಾಗೆಯನ್ನು ಮಾರಬಾರದು; ತಾನು ಅಲ್ಲಿ ತನ್ನ ನಿತ್ಯಪೂಜೆಯನ್ನು ಮುಂದುವರೆಸಬೇಕು ಎಂಬುದಷ್ಟೆ. ಮನೆಯನ್ನು ಕೊಂಡ ಬ್ರಿಗೇಡಿಯರ್ ಮುಜಾವರ್ ಆ ಕರಾರಿಗೆ ಒಪ್ಪುವುದಷ್ಟೇ ಅಲ್ಲ, ತನ್ನ ಭಾಗದ ಮನೆಯ ದುರಸ್ಥಿ ಮಾಡಿಸುವಾಗ ಡೆಂಫೆ ಮನೆಯ ಮುಖಗೋಡೆಯ ಮೇಲೆ ಸಿಮೆಂಟಿನಲ್ಲಿ ಕೆತ್ತಿದ್ದ ‘ರಾಘವೇಂದ್ರ ನಿವಾಸ’ ಎಂಬ ಹೆಸರನ್ನು ತೆಗೆಯುವುದು ಬೇಡ ಎಂದು ಕೆಲಸಗಾರರಿಗೆ ತಾಕೀತು ಮಾಡುತ್ತಾರೆ.

ಎರಡೂ ಮನೆಯವರು ಏನೂ ತೊಂದರೆಯಿಲ್ಲದೆ ತಮ್ಮ ಪಾಡಿಗೆ ತಾವು ಜೀವನ ಸಾಗಿಸುತ್ತಾರೆ. ಆದರೆ ಈ ಪ್ರಕರಣವು ಮನೆ ಮಾರಾಟಕ್ಕೆ ಏನೂ ಸಂಬಂಧವಿರದ ಹಿಂದೂಗಳ ಒಂದು ಗುಂಪಿಗೂ ಮುಸಲ್ಮಾನರ ಒಂದು ಗುಂಪಿಗೂ ಇರುಸುಮುರುಸನ್ನು ಉಂಟುಮಾಡುತ್ತದೆ. ಹಿಂದೂ ಗುಂಪಿಗೆ– ಶಿವರಾಯ ಮನೆಯನ್ನು ಮುಸಲ್ಮಾನರಿಗೆ ಮಾರಿದ್ದಕ್ಕೆ ಸಿಟ್ಟು.

ಮುಸಲ್ಮಾನರಿಗೆ– ಮುಜಾವರ್ ತನ್ನ ಮನೆಯ ಎದುರಿಗೆ ತುಳಸೀ ಪೂಜೆಯನ್ನು ಮಾಡಲು ಅವಕಾಶ ಕೊಟ್ಟದ್ದಕ್ಕೆ ಸಿಟ್ಟು. ಇದು ಪರಾಕಾಷ್ಠೆಗೆ ಹೋಗಿ ಮನೆಮಾರಾಟದ ಮಧ್ಯಸ್ಥಿಕೆ ವಹಿಸಿದ್ದ, ಪರೋಪಕಾರಕ್ಕೆ ಊರಿನಲ್ಲಿಯೇ ಪ್ರಸಿದ್ಧರಾಗಿದ್ದ, ಕರುಣಾಕರರ ಮೇಲಿನ ದೈಹಿಕ ಹಲ್ಲೆಯಲ್ಲಿ ಮುಂದುವರೆಯುತ್ತದೆ.

ಈ ಪ್ರಕರಣವು ಮುಂದಿನ ಯಾವ ಸ್ಫೋಟಕ್ಕೆ ಕಾರಣವಾಗಬಹುದೋ ಅಥವಾ ಎರಡೂ ಮನೆಯವರ ಸಹಬಾಳ್ವೆ ನಿರಾತಂಕವಾಗಿ ಮುಂದುವರೆಯುತ್ತದೆಯೋ ಎಂಬುದನ್ನು ಬಳಗಾರರ ಕಥೆ ಮುಕ್ತವಾಗಿ ಇಡುತ್ತದೆ. ಹಾಗೆ ಮಾಡುವುದರ ಮೂಲಕ ಸದ್ಯದ ಭಾರತದ ಸಹಿಷ್ಣುತೆ–ಅಸಹಿಷ್ಣುತೆಗಳ ಸಂಕೀರ್ಣ ಪರಿಸ್ಥಿತಿಗೆ ಒಂದು ಸಮೃದ್ಧ ರೂಪಕವನ್ನು ಹೊಳೆಯಿಸಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT