ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ್ವೀಪ’ದ ಸಮರ್ಥ ಪಯಣ

ವಿಮರ್ಶೆ
Last Updated 22 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ದ್ವೀಪ: ಐಲ್ಯಾಂಡ್
ಲೇ: ನಾ. ಡಿಸೋಜ ;, ಇಂಗ್ಲಿಷಿಗೆ: ಸುಶೀಲ ಪುನೀತ, ಪು: 128; ಬೆ: ರೂ. 195, ಪ್ರ: ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್


ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್‌ನ ಇತ್ತೀಚಿನ ಶ್ಲಾಘನೀಯ ಪ್ರಯತ್ನಗಳಲ್ಲಿ ನಾ.ಡಿಸೋಜ ಅವರ ‘ದ್ವೀಪ’ ಕಾದಂಬರಿಯ ಇಂಗ್ಲಿಷ್ ಅನುವಾದ ‘ಐಲ್ಯಾಂಡ್’ ಒಂದು ಮಹತ್ವದ ಹೆಜ್ಜೆ. ನಾ. ಡಿಸೋಜ, ಸಾಹಿತ್ಯ ಎಂಬ ಸೀಮಿತ ಚೌಕಟ್ಟಿನಲ್ಲಿ ಬಂಧಿಯಾಗದೆ ಸಮಾಜದ ಎಲ್ಲ ಆಗುಹೋಗುಗಳಿಗೆ ಸ್ಪಂದಿಸುತ್ತಿರುವ ಅಪರೂಪದ ಲೇಖಕ.

ಪರಿಸರ ಹಾಗೂ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದಾರೆ. ಸಾಹಿತಿಗಳು ಸಮಾಜದ ಸ್ವತ್ತು. ಸಮಾಜದ ನಡುವೆ ಇದ್ದಾಗ ಮಾತ್ರ ಸಾಹಿತಿಗಳಿಗೆ ತಾವು ಕೃಷಿ ಮಾಡುವ ಕ್ಷೇತ್ರದಲ್ಲಿ ಸಾಧನೆಗೈಯಲು ಸಾಕಷ್ಟು ವಿಷಯಗಳು ಸಿಗುತ್ತವೆ.

ಡಿಸೋಜ ಅವರು ಸರ್ಕಾರಿ ನೌಕರರಾಗಿದ್ದುಕೊಂಡೇ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡವರು. ಅವರ ಬಹುತೇಕ ಕೃತಿಗಳು ನೊಂದವರ ಧ್ವನಿಯಾಗಿ ಹೊರಬಂದಿವೆ. ಲೇಖಕನಿಗೆ ಸಾಮಾಜಿಕ ಬದ್ಧತೆ ಇರಬೇಕು; ಸಾಹಿತಿ– ಸಮಾಜ, ಸಾಮಾಜಿಕ ಸಮಸ್ಯೆ ಬಗ್ಗೆ ಮಾತನಾಡಬೇಕು.

ಬದುಕು, ಬರಹ ಬೇರೆಬೇರೆ ಆಗಿರಬಾರದು ಎನ್ನುವ ಅಭಿಪ್ರಾಯದವರು ಡಿಸೋಜ. ಪರಿಸರದ ಉಳಿವಿಗೆ ಮಧ್ಯಂತರದ ಹಾದಿಯನ್ನು ತುಳಿಯುವ ಸಲಹೆ ನೀಡುವ ಅವರು, ಪರಿಸರ ಮುಂದಿನ ಪೀಳಿಗೆಗೂ ಉಳಿಯಬೇಕೆನ್ನುವ ಕಳಕಳಿ ಇದ್ದರೆ ಈಗಿನ ಅಭಿವೃದ್ಧಿಯ ಮಂತ್ರ ಅದಕ್ಕೆ ಪೂರಕವಾಗಿರಬೇಕು ಎನ್ನುವ ನಿಲುವು ಹೊಂದಿದ್ದಾರೆ.

ರಾಜ್ಯಕ್ಕೆ ಬೆಳಕು ನೀಡಿದ ಶಿವಮೊಗ್ಗ ಜಿಲ್ಲೆಯ ಜಲ ವಿದ್ಯುತ್ ಯೋಜನೆಯ ಭಾಗವಾದ ಲಿಂಗನಮಕ್ಕಿ ಅಣೆಕಟ್ಟಿನಿಂದಾಗಿ ಉಕ್ಕಿ ಹರಿದ ಶರಾವತಿ ನದಿಯಲ್ಲಿ ಕೊಚ್ಚಿಹೋದ ಹಲವಾರು ಹಳ್ಳಿಗಳ ಸಂತ್ರಸ್ತರ ಸಂಕಷ್ಟಗಳ ಚಿತ್ರಣವನ್ನು ಮನಮುಟ್ಟುವಂತೆ ತಮ್ಮ ಕಾದಂಬರಿಗಳ ಮೂಲಕ ಹೊರಪ್ರಪಂಚಕ್ಕೆ ತಿಳಿಸಿರುವ ಡಿಸೋಜ ‘ಮುಳುಗಡೆ ಸಾಹಿತಿ’ ಎಂದೇ ಹೆಸರುವಾಸಿಯಾದವರು.

ಆಧುನೀಕರಣದ ಕುರುಹುಗಳಾದ ಅಣೆಕಟ್ಟುಗಳ ಭರಾಟೆಯಲ್ಲಿ ಭೂಮಿ ಮುಳುಗಡೆಯಾಗುವ ಸಮಸ್ಯೆ ಮತ್ತು ಅದರ ಪರಿಣಾಮವಾಗಿ ತಮ್ಮ ಮನೆ, ಆಸ್ತಿ, ಜಮೀನುಗಳನ್ನು ಕಳೆದುಕೊಂಡ ಸ್ಥಳೀಯ ಜನರು ಸ್ಥಳಾಂತರಗೊಳ್ಳಬೇಕಾದ ದಾರುಣ ಪರಿಸ್ಥಿತಿಗಳು ಅವರನ್ನು ಗಾಢವಾಗಿ ಕಾಡಿವೆ.

ನಮ್ಮ ಸಮಾಜದ ಶೋಷಿತ ವರ್ಗದವರ ಬವಣೆಗಳನ್ನು ಧ್ವನಿಸುವ ಈ ಕಾದಂಬರಿಯನ್ನು ಇಂಗ್ಲಿಷ್ ಭಾಷಾನುವಾದದ ಮೂಲಕ ಹೊರ ಜಗತ್ತಿಗೆ ಪರಿಚಯಿಸುವ ಕಳಕಳಿಯ ಪ್ರಯತ್ನ ಅತ್ಯಂತ ಪರಿಣಾಮಕಾರಿಯಾಗಿ ಸುಶೀಲ ಪುನೀತರವರ ‘ಐಲ್ಯಾಂಡ್’ ಇಂಗ್ಲಿಷ್ ಆವತರಣಿಕೆಯಲ್ಲಿ ಮೂಡಿ ಬಂದು ಇಂಗ್ಲಿಷ್ ಸಾಹಿತ್ಯ ಕೃತಿಗಳ ಓದುಗರ ಗಮನವನ್ನು ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಅನುವಾದಕಿಯ ಪ್ರಾಸ್ತಾವಿಕ ಮಾತುಗಳು ಪ್ರಾಮುಖ್ಯ ಪಡೆದುಕೊಳ್ಳುತ್ತವೆ.

‘ದ್ವೀಪ’ ಕಾದಂಬರಿಯ ಅರ್ಥಗರ್ಭಿತ ವಾದ ಮೌನದ ಬಗ್ಗೆ ಹೇಳುತ್ತ ಸುಶೀಲ ಪುನೀತ, ಅದನ್ನು ದನಿಯಿಲ್ಲದವರ ಮತ್ತು ಸಂಕಟದಿಂದ ನಲುಗಿ, ಉಸಿರುಗಟ್ಟುವ ಸ್ಥಿತಿಯಲ್ಲಿರುವವರ ಹೆಪ್ಪುಗಟ್ಟಿದ ಮೌನವೆಂದು ಅರ್ಥೈಸುತ್ತಾರೆ.

ಮೂಲ ಕೃತಿಯ ಆಶಯವನ್ನು ಕಡೆಗಣಿಸದೆ, ಅದಕ್ಕೆ ಕಿಂಚಿತ್ತೂ ಅಪಚಾರವಾಗದಂತೆ ಇಂಗ್ಲಿಷ್ ಭಾಷೆಗೆ ಅನುವಾದಿಸುವುದು ಕ್ಲಿಷ್ಟವಾದ ಸವಾಲೇ ಆಗಿದೆ. ಈ ನಿಟ್ಟಿನಲ್ಲಿ ಯು.ಆರ್. ಅನಂತಮೂರ್ತಿ ಅವರ ‘ಭಾರತೀಪುರ’ ಹಾಗೂ ವೈದೇಹಿಯವರ ‘ಅಸ್ಪೃಶ್ಯರು’ ಕಾದಂಬರಿಗಳನ್ನು ಸಮರ್ಥವಾಗಿ ಇಂಗ್ಲಿಷಿಗೆ ಅನುವಾದಿಸಿರುವ ಸುಶೀಲ ಪುನೀತ, ಡಿಸೋಜರವರ ‘ದ್ವೀಪ’ವನ್ನು ಕೂಡ ಇಂಗ್ಲಿಷಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿರುವ ಮೂಲ ಕೃತಿಯೊಳಗೆ ಕಂಡುಬರುವ ಹೆಪ್ಪುಗಟ್ಟಿರುವ ಮೌನದಲ್ಲಿ ಸಹಜವಾಗಿಯೇ ಅಂತರ್ಗತವಾಗಿರುವ ಅರ್ಥಗಳನ್ನು ಇಂಗ್ಲಿಷಿನಲ್ಲಿ ಹಿಡಿದಿಡುವ ಪ್ರಕ್ರಿಯೆಯಲ್ಲಿ ಎದುರಾಗುವ ಸಂದಿಗ್ಧಗಳು, ಬಿಕ್ಕಟ್ಟಗಳ ಬಗ್ಗೆ ನಿದರ್ಶನಗಳನ್ನು ನೀಡುತ್ತ ಅವುಗಳನ್ನು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಅನುವಾದಕಿ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಇದಕ್ಕೆ ಅವರು ಕೆಲವು ಉದಾಹರಣೆಗಳ ಮೂಲಕ ಸ್ಪಷ್ಟೀಕರಣ ನೀಡುತ್ತಾರೆ.

‘ಹುಟ್ಟಾಳುಗಳು’ ಎಂಬ ಪದವನ್ನು ತಾವು ಇಂಗ್ಲಿಷಿಗೆ ಅನುವಾದಿಸುವಾಗ ಎದುರಿಸಿದ ಗೊಂದಲಗಳ ಕುರಿತು ಅವರು ವಿವರಿಸುತ್ತಾರೆ. ಭಾರತ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಕಂಡುಬರುವ ಜೀತ ಪದ್ಧತಿ– ಇವೇ ಮೊದಲಾದ ಶೋಷಣಾತ್ಮಕ ರಿವಾಜುಗಳ ಬಗ್ಗೆ ಅರಿವಿಲ್ಲದಿರುವ ಓದುಗರಿಗೆ ಆ ಪದದ ಸೂಕ್ಷ್ಮತೆಗಳು ಹೇಗೆ ಅರ್ಥವಾಗಬೇಕು? ಹಾಗಾಗಿ ತಾನು ಸಂದರ್ಭಕ್ಕನುಸಾರವಾಗಿ ವಿವರಣಾತ್ಮಕವಾದ ಉದ್ದನೆಯ ಸಾಲುಗಳ ಮೊರೆಹೋಗಬೇಕಾಯಿತು ಎಂದು ಅನುವಾದಕಿ ಹೇಳಿಕೊಳ್ಳುತ್ತಾರೆ.

ತಮ್ಮ ಸಂಪಾದಕಿ ಮಿನಿ ಕೃಷ್ಣನ್‌ಅವರು ಕನ್ನಡ ಭಾಷೆ ಬಲ್ಲವರಲ್ಲ, ಆದುದರಿಂದಲೇ ಕೆಲವೊಮ್ಮೆ ಭಾಷೆ ಬಲ್ಲವರು ಅನಗತ್ಯವಾದ ವಿವರಣೆಯೆಂದು ಪರಿಗಣಿಸುವ ಎಷ್ಟೋ ಅಂಶಗಳ ಬಗ್ಗೆ ವಿವರಣೆ ಅಗತ್ಯ ಎಂಬುದನ್ನು ತನಗೆ ಮನವರಿಕೆ ಮಾಡಿಕೊಟ್ಟ ಮಿನಿಯವರ ಒಳನೋಟಗಳ ಬಗ್ಗೆಯೂ ಅನುವಾದಕಿ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.
ಪುನೀತ ಅವರ ಅನುವಾದ ಎಲ್ಲೂ ಪೆಡಸಾಗಿಲ್ಲ. ಈ ಕೃತಿಯ ಮತ್ತೊಂದು ವಿಶೇಷವೆಂದರೆ, ಕಾದಂಬರಿಯ ಪ್ರತಿಯೊಂದು ಅಧ್ಯಾಯದ ಅನುವಾದವನ್ನೂ ಸಹ ಅನುವಾದಕಿ ಲೇಖಕ ಡಿಸೋಜ ಅವರೊಡನೆ ದೀರ್ಘವಾದ ಸಂವಾದಗಳ ಮೂಲಕ, ಒಂದೊಂದೇ ಅಧ್ಯಾಯವನ್ನು ಲೇಖಕರ ಅವಗಾಹನೆಗಾಗಿ ಕಳಿಸಿಕೊಟ್ಟು ಅವರ ಸಹಮತದಿಂದಲೇ ಅಂತಿಮ ರೂಪ ನೀಡಿದ್ದಾರೆ.

ಅನುವಾದಕಿಯ ಶ್ರದ್ಧೆ ಹಾಗೂ ನಿಸ್ಪೃಹತೆಗಳು ನಿಜವಾಗಿಯೂ ಪ್ರಶಂಸನೀಯ. ಕಾದಂಬರಿಯ ಅಧ್ಯಾಯಗಳು ಕೃತ್ತಿಕ, ರೋಹಿಣಿ, ಮೃಗಶಿರ– ಹೀಗೆ ಮಳೆ ನಕ್ಷತ್ರಗಳ ಹೆಸರಲ್ಲೇ ಮುಂದುವರಿಯುವ ಮೂಲಕ ಕೃತಿಯಹಂದರವನ್ನೇ ಆಕರ್ಷಕವಾಗಿ ಬಳಸಿಕೊಳ್ಳುವ ಪ್ರಯತ್ನವಿದೆ.

ಕನ್ನಡ ಭಾಷೆ – ಸಂಸ್ಕೃತಿಯಲ್ಲಿಯೇ ಹಾಸುಹೊಕ್ಕಾಗಿರುವ ಕೆಲವು ಶಬ್ದಗಳನ್ನು ಅನುವಾದಕಿ ಅನುವಾದಿಸುವ ಗೋಜಿಗೆ ಹೋಗದೆ ಕಾದಂಬರಿಯ ಕೊನೆಗೆ ಸಂಕ್ಷಿಪ್ತವಾದ ಅರ್ಥಗಳ ಪಟ್ಟಿ ನೀಡುತ್ತಾರೆ. ಈ ಅನುವಾದದ ಮೌಲ್ಯವನ್ನು ಹೆಚ್ಚಿಸುವಲ್ಲಿ ವಿ.ಎಸ್. ಶ್ರೀಧರರವರ ಮುನ್ನುಡಿಯ ಪಾತ್ರವೂ ಮಹತ್ವದ್ದಾಗಿದೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ನೂರು ವರ್ಷಗಳನ್ನು ಪೂರೈಸಿದ ಸುಸಂದರ್ಭದಲ್ಲಿ ಕನ್ನಡ ಭಾಷೆಯ ಅಮೂಲ್ಯವಾದ ಕೃತಿಯೊಂದು ಇಂಗ್ಲಿಷ್ ಅನುವಾದದಲ್ಲಿ ಸಮರ್ಥವಾಗಿ ಮೈದಾಳಿರುವುದು ಸ್ವಾಗತಾರ್ಹ.

ಮಲೆನಾಡಿನ ತಲ್ಲಣಗಳನ್ನು ಇಂಗ್ಲಿಷ್ ಓದುಗರಿಗೆ ಅತ್ಯಂತ ಕಳಕಳಿಯಿಂದ ಪರಿಚಯಿಸುವುದರಲ್ಲಿ ಅನುವಾದಕಿ ಸುಶೀಲ ಪುನೀತ ಹಾಗೂ ಕಾದಂಬರಿಯಲ್ಲಿ ಬರುವ ಪರಿಸ್ಥಿತಿಗಳ ಮೇಲೆ ತಮ್ಮ ಮುನ್ನುಡಿಯಲ್ಲಿ ಬೆಳಕು ಚೆಲ್ಲುವ ಶ್ರೀಧರ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT