ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟ್ಯೋತ್ಸವ’ ಚೌಕಟ್ಟಿನಿಂದ ಸಮಗ್ರದ ಬಯಲಿಗೆ...

ವಿಮರ್ಶೆ
Last Updated 31 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಪೇಜಾವರ ಸದಾಶಿವ ರಾಯರು (15.2.1913– 18.10.1939) ಕೇವಲ ಇಪ್ಪತ್ತಾರು ವರ್ಷ ಬದುಕಿದ್ದ ಕನ್ನಡದ ಕವಿ. ಅವರ ‘ವರುಣ’ ಮತ್ತು ‘ನಾಟ್ಯೋತ್ಸವ’ ಕವಿತೆಗಳು ಕನ್ನಡದ ಶಾಶ್ವತ ಕೀರ್ತಿಯ ಕವಿತೆಗಳೆಂದು ಮಾನ್ಯವಾಗಿವೆ. ಸದಾಶಿವರಾಯರ ಶತಮಾನೋತ್ಸವ ವರ್ಷದಲ್ಲಿ ಅವರ ಬದುಕಿನ ವಿವರಗಳ ಜತೆಗೆ ಅವರ ಸಮಗ್ರ ಸಾಹಿತ್ಯವನ್ನು ಸಂಶೋಧಿಸುವ ಮತ್ತು ವಿಚಾರ ಸಂಕಿರಣಗಳನ್ನು ನಡೆಸಿ ಅವರ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ಚಿಂತನೆ ನಡೆಸುವ ಕೆಲಸಗಳು ನಡೆದವು.

ಸಾಹಿತ್ಯ ಅಕಾಡೆಮಿ ಸೇರಿದಂತೆ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳು ಪೇಜಾವರ ಸದಾಶಿವರಾಯರ ಶತಮಾನೋತ್ಸವವನ್ನು ಆಚರಿಸಿದವು. ಇದಕ್ಕೆ ಪ್ರೇರಣೆ ಮತ್ತು ಸಹಕಾರ ನೀಡಿದ್ದು ಸದಾಶಿವರಾಯರ ಕುಟುಂಬಸ್ಥರು. ಕಳೆದುಹೋಗುತ್ತಿದ್ದ ಪೇಜಾವರರ ಸಾಹಿತ್ಯ ಹಾಗೂ ಬದುಕಿನ ದಾಖಲೆಗಳನ್ನು ಸಂಗ್ರಹಿಸಲು ಶ್ರಮ ಪಟ್ಟ ಗಾಯತ್ರಿ ನಾವಡ ಮತ್ತು ಎ.ವಿ. ನಾವಡ ದಂಪತಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಹಿಂದೆ ವಿ.ಕೃ. ಗೋಕಾಕರು ಮತ್ತು ರಂ.ಶ್ರೀ. ಮುಗಳಿಯವರು ಸದಾಶಿವರಾಯರ ಸಾಹಿತ್ಯವನ್ನು ಬಹುತೇಕ ಉಳಿಸಿ ಅವರಿಗೆ ಕನ್ನಡದಲ್ಲಿ ಶಾಶ್ವತ ಸ್ಥಾನವನ್ನು ದೊರಕಿಸಿಕೊಟ್ಟಿದ್ದರು.

ಡಾ. ಶ್ರೀನಿವಾಸ ಹಾವನೂರ ಮತ್ತು ನಾ. ದಾಮೋದರ ಶೆಟ್ಟಿಯವರು ಮುಂದಿನ ಹಂತದಲ್ಲಿ ಇದಕ್ಕೆ ಇನ್ನಷ್ಟು ಬಲ ನೀಡಿದರು (ಪೇಜಾವರ ಸದಾಶಿವರಾವ್ ಸಾಹಿತ್ಯ ವಾಚಿಕೆ. ಸಂ. ನಾ. ದಾಮೋದರ ಶೆಟ್ಟಿ, ಪ್ರಕಾಶನ: ಕರ್ನಾಟಕ ಸಾಹಿತ್ಯ ಅಕಾಡೆಮಿ, 1995). ಈಗ ನಾವಡ ದಂಪತಿ ಇದನ್ನು ಪೂರ್ಣಗೊಳಿಸಿದ್ದಾರೆ. ಪೇಜಾವರ ಸದಾಶಿವರಾಯರ ಬದುಕಿನ ಸಮಗ್ರ ಲಭ್ಯ ದಾಖಲೆಗಳು ಮತ್ತು ಅವರ ಕುರಿತು ಬಂದ ಪ್ರಮುಖ ವಿಮರ್ಶೆಯ ಲೇಖನಗಳನ್ನು ‘ಪೇಜಾವರ ಸದಾಶಿವರಾವ್: ನೂರರ ನುಡಿ ನಮನ’ ಎಂಬ ಒಂದು ಸಂಪುಟವಾಗಿ ಸಂಕಲಿಸಿರುವ ಗಾಯತ್ರಿ ನಾವಡರು, ಪೇಜಾವರ ಅವರ ಕುರಿತಾದ ಸಮಗ್ರ ರೆಫರೆನ್ಸ್ ಪುಸ್ತಕವನ್ನು ಸಿದ್ಧಪಡಿಸಿಕೊಟ್ಟಂತಾಗಿದೆ. ಸದಾಶಿವರಾಯರ ಶತಮಾನೋತ್ಸವವನ್ನು ಆಚರಿಸಿದ ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ ಇದನ್ನು ಪ್ರಕಟಿಸಿದೆ.  

ಪೇಜಾವರ ಸದಾಶಿವರಾಯರ ನೂರರ ನುಡಿನಮನ ಗ್ರಂಥದಲ್ಲಿ ಐದು ಭಾಗಗಳಿವೆ. ‘ಕ್ಯಾಮರಾ ಕಣ್ಣಿನಲಿ’, ‘ಬಂಧುಗಳ ಕಣ್ಣಿನಲ್ಲಿ’, ‘ಸ್ನೇಹಿತರ ಕಣ್ಣಿನಲ್ಲಿ’, ‘ವಿಮರ್ಶಕರ ಕಣ್ಣಿನಲ್ಲಿ’ ಮತ್ತು ‘ಪತ್ರಗಳ ಕಣ್ಣಿನಲ್ಲಿ’ ಎಂದು ಈ ಚಿತ್ರ ಹಾಗೂ ಮಾಹಿತಿಗಳನ್ನು ವಿಂಗಡಿಸಿ ನೀಡಿದ್ದಾರೆ. ಪೇಜಾವರರ ಪತ್ರಗಳ ಪ್ರತಿಗಳು ಅನುಬಂಧದಲ್ಲಿವೆ. ಕೆಲವು ಅಪೂರ್ವ ಚಿತ್ರಗಳು ಮೊದಲನೆಯ ಭಾಗದಲ್ಲಿ ಸೇರಿವೆ. ಎರಡನೆಯ ಮತ್ತು ಮೂರನೆಯ ಭಾಗದಲ್ಲಿ ಸದಾಶಿವರಾಯರ ಬಂಧುಮಿತ್ರರು ಅವರ ಬಗ್ಗೆ ಬರೆದಿರುವ ಬರಹಗಳಿವೆ.

ಬಂಧುಗಳಾದ ಡಾ. ಪೇಜಾವರ ರಮಾನಂದ ರಾವ್ (ತಮ್ಮ), ಎಸ್. ಶ್ಯಾಮಸುಂದರ್ (ಅಳಿಯ), ಡಾ. ಸಿ.ಆರ್. ಬಲ್ಲಾಳ್ (ನಾದಿನಿಯ ಮಗ) ಮತ್ತು ಡಾ. ಶಿವಶರಣ ಸೋಮೇಶ್ವರ (ಮೊಮ್ಮಗ) ಬಹುಶಃ ಈ ಸಂಪುಟಕ್ಕಾಗಿಯೇ ಲೇಖನಗಳನ್ನು ಬರೆದಿದ್ದಾರೆ. ಪೇಜಾವರರ ಗೆಳೆಯರಾದ ಜೋಡುಮಠ ವಾಮನ ಭಟ್ಟ ಮತ್ತು ವಿ.ಕೃ. ಗೋಕಾಕರ ಬರಹಗಳು ಹಿಂದೆ ಪ್ರಕಟವಾದವುಗಳು. ಶ್ರೀನಿವಾಸ ಹಾವನೂರರ ಲೇಖನ ಸಾಹಿತ್ಯ ಅಕಾಡೆಮಿಯ ವಾಚಿಕೆಗಾಗಿ ಬರೆದಿದ್ದ ಪ್ರಸ್ತಾವನೆ. ಅನಿಲ್ ಗೋಕಾಕ್ ಮತ್ತು ವತ್ಸಲಾ ಕಿಣಿ ಅವರ ಲೇಖನಗಳು ಬಹುಶಃ ಈ ಸಂಪುಟಕ್ಕಾಗಿಯೇ ಬರೆದ ಬರಹಗಳು.

ಈ ಗ್ರಂಥದ ಒಂದು ಕೊರತೆಯನ್ನು ಇಲ್ಲಿಯೇ ಹೇಳಿಬಿಡಬೇಕು. ಅದೇನೆಂದರೆ, ಯಾವ ಬರಹಗಳಿಗೂ ಸಂದರ್ಭಸೂಚಿಯನ್ನು ಸಂಪಾದಕರು ಒದಗಿಸಿಲ್ಲ. ಆಕರ – ದಿನಾಂಕಗಳು ಗೊತ್ತಾಗದ ಕಾರಣ ಕೆಲವು ವಾಗ್ವಾದಗಳನ್ನು ಸರಿಯಾದ ಕ್ರಮದಲ್ಲಿ ಗ್ರಹಿಸಲು ತೊಡಕುಂಟಾಗಿದೆ. ಅದೇ ವೇಳೆಗೆ ಸಂಪಾದಕಿ ಬೇರೆಲ್ಲ ವಿಭಾಗಗಳಲ್ಲಿ ಮಾದರಿ ಎನ್ನಬಹುದಾದ ಟಿಪ್ಪಣಿಗಳನ್ನು ನೀಡಿದ್ದಾರೆ; ಇತರರ ಲೇಖನಗಳಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿ ದೋಷಗಳನ್ನು ಅಡಿಟಿಪ್ಪಣಿಯಲ್ಲಿ ಸರಿಪಡಿಸಿದ್ದಾರೆ.

ಉದಾಹರಣೆಗೆ ಶ್ರೀನಿವಾಸ ಹಾವನೂರರಿಂದ ಪ್ರಾರಂಭಿಸಿ (ಅವರನ್ನು ಆಧರಿಸಿದ) ಎಲ್ಲರೂ ಪೇಜಾವರರು ಇಟಲಿಯಲ್ಲಿ ಕೊನೆಯುಸಿರೆಳೆದ ಮೇಲೆ ಅವರ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು ಎಂದಿದ್ದಾರೆ. ಅದು ಸರಿಯಲ್ಲ, ಪೇಜಾವರ ಅವರ ಶರೀರವನ್ನು ಹಿಂದೂ ಸಂಪ್ರದಾಯದಂತೆ ದಹನಮಾಡಿ ಚಿತಾಭಸ್ಮವನ್ನು ಅವರ ಪತ್ನಿಗೆ ತಲುಪಿಸಲಾಗಿತ್ತು ಎಂದು ಸಂಪಾದಕಿ ಟಿಪ್ಪಣಿ ಬರೆಯುತ್ತಾರೆ. ಇಂತಹ ಹಲವು ತಪ್ಪು ಮಾಹಿತಿಗಳನ್ನು ಮೂಲ ಲೇಖಕರು ನೀಡಿದಾಗಲೆಲ್ಲ ಸರಿಪಡಿಸಿ ಟಿಪ್ಪಣಿ ನೀಡಿದ್ದಾರೆ. 

ಪೇಜಾವರ ಸದಾಶಿವರಾಯರ ಜೀವನಚರಿತ್ರೆಯನ್ನು ಸರಿಯಾಗಿ ಕಟ್ಟುವುದರ ಜತೆಗೆ, ಸಂಪಾದಕಿಯ ಪ್ರಮುಖ ಉದ್ದೇಶ ಪೇಜಾವರ ಸದಾಶಿವರಾಯರನ್ನು ‘ನಾಟ್ಯೋತ್ಸವದ ಕವಿ’ ಎಂಬ ಸೀಮಿತ ಗ್ರಹಿಕೆಯಿಂದ ಬಿಡಿಸಿ ಅವರ ಸಮಗ್ರ ಸಾಹಿತ್ಯದ ಅಧ್ಯಯನಕ್ಕೆ ಪ್ರೇರೇಪಿಸುವುದು ಎನ್ನುವುದನ್ನು ಅವರ ಮುನ್ನುಡಿಯಿಂದ ತಿಳಿದುಕೊಳ್ಳಬಹುದು. ‘‘ಪೇಜಾವರರನ್ನು ‘ನಾಟ್ಯೋತ್ಸವದ ಕವಿ’ಯಾಗಿ ಮತ್ತೆ ಮತ್ತೆ ಕಾಣುವ ಪ್ರಯತ್ನದಲ್ಲಿ ಸಾಹಿತ್ಯಿಕವಾಗಿ ಅವರ ಒಟ್ಟು ಬರಹದ ಅರ್ಥ ಮತ್ತು ವ್ಯಾಪ್ತಿಯನ್ನು ಕುಗ್ಗಿಸಲಾಗಿದೆ. ಹಾಗಾಗಿಯೇ ಆ ನೆಲೆಯಲ್ಲಿ ಸರಿಯಾದ ಚರ್ಚೆ, ಮೌಲ್ಯಮಾಪನ ನಡೆದೇ ಇಲ್ಲ...

ಈಚೆಗೆ ಅನಿಲ್ ಗೋಕಾಕರು, ವಿ.ಕೃ. ಗೋಕಾಕ ಮತ್ತು ಸದಾಶಿವರಾಯರ ಪತ್ರ ಸಾಹಿತ್ಯ ಪ್ರಕಟಿಸಲಾಗಿ ಪೇಜಾವರರ ಆ ಮುಖದ ಒಂದಷ್ಟು ಪರಿಚಯವಾದುದು. ಹೀಗಿದ್ದೂ ಪೇಜಾವರರ ಗದ್ಯ ರಚನೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ನೇಪಥ್ಯದಲ್ಲೆ ಉಳಿಯಿತು. ಇದೀಗ, ಕೇಂದ್ರ ಸಾಹಿತ್ಯ ಅಕಾಡೆಮಿ ಶತಮಾನದ ಸ್ಮೃತಿಗಾಗಿ ‘ಪೇಜಾವರ ಸದಾಶಿವರಾಯರ ಸಮಗ್ರ ಸಂಪುಟ’ವನ್ನು ಪ್ರಕಟಿಸುತ್ತಿದೆ. ‘ಪೇಜಾವರ ಸದಾಶಿವರಾವ್ ನೂರರ ನುಡಿ ನಮನ’ವನ್ನು ಉಡುಪಿಯ ರಾ.ಗೋ.ಪೈ.ಸಂ. ಕೇಂದ್ರ ಹೊರತರುತ್ತಿದೆ. ಈ ಎರಡು ಕೃತಿಗಳು ಅನಾವರಣಗೊಂಡಾಗ ಪೇಜಾವರರ ಸಾಹಿತ್ಯದ ಮರು ಓದು, ಮರು ವ್ಯಾಖ್ಯಾನ ಸಾಧ್ಯವಾಗಬಹುದು, ಆಗಬೇಕು’’.

ಇದು ಈ ಕೃತಿಯಲ್ಲಿ ಸ್ವಲ್ಪಮಟ್ಟಿಗೆ ಸಾಧಿತವಾಗಿದೆ. ಪೇಜಾವರ ಸದಾಶಿವರಾಯರ ಕಾವ್ಯದ ಬಗ್ಗೆ ಇರುವ ಹಲವಾರು ಲೇಖನಗಳ ಜತೆಗೆ ‘ಪೇಜಾವರರ ಕೃತಿಗಳನ್ನು ಕುರಿತು’ (ಡಾ. ನಾ. ದಾಮೋದರ ಶೆಟ್ಟಿ), ‘ಕಥನ ರೂಪಗಳ ಹುಡುಕಾಟ: ಪೇಜಾವರ ಸದಾಶಿವ ರಾಯರ ಸಣ್ಣಕತೆಗಳು’ (ಡಾ. ಬಿ. ಜನಾರ್ದನ ಭಟ್) ಮತ್ತು ‘ಸದಾಶಿವರಾವ್: ಪತ್ರ ಸಂವಾದ’ (ಡಾ. ಎ.ವಿ. ನಾವಡ) ಎಂಬ ಲೇಖನಗಳು ಸದಾಶಿವರಾಯರ ನಾಟಕಗಳು, ಕತೆ - ಲಲಿತ ಪ್ರಬಂಧಗಳು ಮತ್ತು ಪತ್ರಗಳಲ್ಲಿ ಸಾಹಿತ್ಯ ಚರ್ಚೆ, ಇತ್ಯಾದಿ ಗದ್ಯ ಬರಹಗಳ ಕುರಿತು ಚರ್ಚಿಸುತ್ತವೆ.  

ಪೇಜಾವರರ ಕಾವ್ಯದ ಕುರಿತು ಬಹಳ ಮುಖ್ಯವಾದ ಲೇಖನವೊಂದನ್ನು ಬರೆದವರು ಪ್ರೊ. ಡಿ. ರಘುನಾಥ ರಾಯರು. ಪೇಜಾವರರು ಹೇಗೆ ನವೋದಯ, ಪ್ರಗತಿಪರ ಹಾಗೂ ನವ್ಯ ಈ ಮೂರೂ ಮಾದರಿಯ ಕವಿತೆಗಳನ್ನು ಬರೆದಿದ್ದರು ಎನ್ನುವುದನ್ನು ಅವರು ವಸ್ತುನಿಷ್ಠವಾಗಿ ಚರ್ಚಿಸಿದ್ದಾರೆ. ‘ನಾಟ್ಯೋತ್ಸವ’ ಕವಿತೆಯ ಬಗ್ಗೆ ಸುಮತೀಂದ್ರ ನಾಡಿಗರು ಬರೆಯುತ್ತಾ– ಅದು ಇಟಾಲಿಯನ್ ಕವಿ ಲೊರೆನ್ಸೋನಿಂದ ಪ್ರಭಾವಿತವಾಗಿದೆ, ಲೊರೆನ್ಸೋನಿಗೆ ಬದುಕಿನ ಬಗ್ಗೆ ಇದ್ದ ಧೋರಣೆಯೇ ‘ನಾಟ್ಯೋತ್ಸವ’ ಕವನದ ಧೋರಣೆ ಎನ್ನುವ ಮುಖ್ಯವಾದ ಅಂಶದ ಕಡೆಗೆ ಗಮನ ಸೆಳೆದಿದ್ದಾರೆ.  

ಕೀರ್ತಿನಾಥ ಕುರ್ತಕೋಟಿಯವರ ಪ್ರಸಿದ್ಧ ಅಭಿಪ್ರಾಯ ಹೀಗಿದೆ: ‘‘ಸೂಕ್ಷ್ಮವಾಗಿ ನೋಡಿದರೆ ನಮ್ಮಲ್ಲಿ ನವ್ಯತೆ, ಇಟಲಿಯ ನೃತ್ಯಮಂದಿರದಲ್ಲಿ ಹುಟ್ಟಿದ ಪೇಜಾವರ ಸದಾಶಿವರಾಯರ ಕಾವ್ಯದಿಂದ ಪ್ರಾರಂಭವಾಯಿತೆನ್ನಬಹುದು. ಅವರಲ್ಲಿ ಪ್ರಾರಂಭವಾದ ನವ್ಯತೆ ಮುಂದುವರಿಯಲಿಲ್ಲ, ಒಂದು ಪರಂಪರೆಯಾಗಲಿಲ್ಲ’’ ಎನ್ನುವ ಅಭಿಪ್ರಾಯ ಅವರದು ಮತ್ತು ನಾಡಿಗರದು. ವಿ.ಕೃ. ಗೋಕಾಕ್, ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ (ಇವರ ದೀರ್ಘ ಲೇಖನ ಪೇಜಾವರರ ಬದುಕು - ಸಮಗ್ರ ಬರವಣಿಗೆಯನ್ನು ಕುರಿತದ್ದಾಗಿದೆ), ಡಾ. ಕೆ.ಎಸ್. ಭಗವಾನ್, ಪ್ರೊ. ಎನ್. ಪ್ರಭಾಕರ ಆಚಾರ್ಯ, ಡಾ. ಶ್ಯಾಮಸುಂದರ ಕೋಚಿ, ಪ್ರೊ. ಕೆ.ಎಸ್. ಮಧುಸೂದನ, ಎಸ್.ಆರ್. ವಿಜಯಶಂಕರ, ಆರ್. ತಾರಿಣಿ ಶುಭದಾಯಿನಿ ಮತ್ತು ಡಾ. ಜಯಪ್ರಕಾಶ ಮಾವಿನಕುಳಿ ಇವರೆಲ್ಲ ಪೇಜಾವರ ಕಾವ್ಯದ ವಿವಿಧ ಮಗ್ಗುಲುಗಳನ್ನು ಪರಿಶೀಲಿಸಿದ್ದಾರೆ. (‘ವರುಣ’ ಸಂಕಲನಕ್ಕೆ ರಂ. ಶ್ರೀ. ಮುಗಳಿಯವರು ಬರೆದ ಮುನ್ನುಡಿಯೊಂದು ಈ ಸಂಪುಟದಿಂದ ಹೊರಗೆ ಉಳಿದಿದೆ). ಈ ಬರಹಗಳಲ್ಲಿ ವಿಮರ್ಶಕ - ವಿಮರ್ಶಕರ ನಡುವಿನ ಸಂವಾದವೂ ಇರುವುದು ಪೇಜಾವರರ ಕಾವ್ಯವನ್ನು ಕನ್ನಡ ವಿಮರ್ಶಾ ಲೋಕ ಗಂಭೀರವಾಗಿ ಸ್ವೀಕರಿಸಿರುವುದಕ್ಕೆ ಮತ್ತು ಕನ್ನಡ ವಿಮರ್ಶೆಯ ಪ್ರಬುದ್ಧತೆಗೆ ಸಾಕ್ಷಿಯಾಗಿದೆ.

ಪೇಜಾವರರ ಎರಡು ಮುಖ್ಯ ಕವಿತೆಗಳ ಬಗ್ಗೆ ನಡೆದ ಚರ್ಚೆಗಳು ಗಮನಾರ್ಹವಾಗಿದೆ. ಆ ಕವಿತೆಗಳ ಶಕ್ತಿ, ವೈಶಿಷ್ಟ್ಯಗಳ ಜತೆಗೆ ‘ನಾಟ್ಯೋತ್ಸವ’ ಕನ್ನಡದ ಮೊದಲನೆಯ ನವ್ಯ ಕವಿತೆಯೇ ಅಲ್ಲವೇ, ಅಥವಾ ‘ನಾಟ್ಯೋತ್ಸವ’ದಲ್ಲಿ ನವ್ಯ ಸಂವೇದನೆ ಇದೆಯೇ ಇಲ್ಲವೇ, ಮೂರು ಮೂರು ಮಾತ್ರೆಗಳ ಬಂಧಕ್ಕೆ ಒಳಪಟ್ಟುದರಿಂದ ಅದರ ನವ್ಯತೆಗೆ ಧಕ್ಕೆ ಉಂಟಾಯಿತೇ; ‘ವರುಣ’ದಲ್ಲಿ ನವ್ಯ ಪ್ರಜ್ಞೆ ಇದೆಯೇ ಇಲ್ಲವೇ ಮುಂತಾದ ಪ್ರಶ್ನೆಗಳೂ ಕೇಳಿಸುತ್ತವೆ. ಕವಿತೆಗಳು ಪಂಥಕ್ಕೆ ಬದ್ಧವಾಗಿವೆಯೇ ಇಲ್ಲವೇ ಎನ್ನುವುದನ್ನು ಚರ್ಚಿಸುವ ಅಗತ್ಯವಿದೆಯೇ ಎನ್ನುವ ಪ್ರಶ್ನೆಯನ್ನೇ ಇಂತಹ ಚರ್ಚೆಗಳು ಹುಟ್ಟಿಸುತ್ತವೆ.  

ಸದಾಶಿವರಾಯರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಆಟೊಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದ ಮೇಲೆ ಇಟಲಿಯ ಮಿಲಾನೋ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪದವಿಗೆ ಇಟಾಲಿಯನ್ ಭಾಷೆಯಲ್ಲಿಯೇ ಸಂಪ್ರಬಂಧವನ್ನು ಬರೆದು ಒಪ್ಪಿಸಿದ್ದರು ಎನ್ನುವುದು ಕುತೂಹಲಕರ ಸಂಗತಿಯಾಗಿದೆ. ಮಂಗಳೂರಿನಲ್ಲಿಯೇ ಇಟಾಲಿಯನ್ ಭಾಷೆಯನ್ನು ಕಲಿತು ಇಟಲಿಗೆ ಹೋಗಿದ್ದ ಅವರು ಇಟಾಲಿಯನ್ ಭಾಷೆಯಲ್ಲಿಯೂ ಕೆಲವು ಲೇಖನಗಳನ್ನು ಬರೆದಿದ್ದರಂತೆ.

ಅಂತಹ ಒಂದು ಲೇಖನವನ್ನು ಸಂಪಾದಿಸಿ (ಯುದ್ಧ ವಿಮಾನಯಾನ: 1937), ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ (ಎವೆಲಿನಾ ನಂಬಿಯಾರ್ ಅವರಿಂದ), ಆ ಮೂಲಕ ಕನ್ನಡಕ್ಕೆ ಅನುವಾದಿಸಿ (ಸುಧೀಂದ್ರ ಹಾಲ್ದೊಡ್ಡೇರಿ) ಅನುಬಂಧದಲ್ಲಿ ಕೊಟ್ಟಿರುವುದು ಸಂಪಾದಕಿಯ ಒಂದು ಸಾಹಸವಾಗಿದೆ. ಒಬ್ಬ ಕವಿಯ ಶತಮಾನೋತ್ಸವದ ಸಂದರ್ಭದಲ್ಲಿ ಒಂದು ಭಾಷೆ ಅವನಿಗೆ ಎಂತಹ ನುಡಿನಮನವನ್ನು ಅರ್ಪಿಸಬಹುದು ಎನ್ನುವುದಕ್ಕೆ ಗಾಯತ್ರಿ ನಾವಡರ ಈ ಕೃತಿ ಮಾದರಿಯಾಗಿದೆ.

*
ಪೇಜಾವರ ಸದಾಶಿವರಾವ್: ನೂರರ ನುಡಿ ನಮನ
ಸಂ: ಡಾ. ಗಾಯತ್ರೀ ನಾವಡ
ಬೆಲೆ ರೂ.399
ಪ್ರ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ. ಜಿ. ಎಂ. ಕಾಲೇಜು, ಉಡುಪಿ– 576102

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT