ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಆವಾಹನೆ

Last Updated 20 ಜೂನ್ 2020, 19:45 IST
ಅಕ್ಷರ ಗಾತ್ರ

ಗೋಧೂಳೀ ಮುಹೂರ್ತ. ಸೂರ್ಯ ತನ್ನ ದಿನದ ಕರ್ತವ್ಯ ಮುಗಿಸಿ ಪಶ್ಚಿಮದಲ್ಲಿ ಮುಳುಗುತ್ತ ಬೈ ಹೇಳುತ್ತಿದ್ದ. ಕಾಂತಿ ಬ್ಯೂಟಿ ಪಾರ್ಲರ್‌ಒಡತಿ ಅನು ಮೋಹನ್ ಖಿನ್ನಳಾಗಿ ಕುರ್ಚಿಗೊರಗಿಕೊಂಡಳು. ಅವಳ ಸಹಾಯಕಿಯರಾದ ದೀಪಾ ಮತ್ತು ಅಂಜಲಿ ಪಕ್ಕದಲ್ಲಿ ನಿಂತು ಅವಳ ಕಣ್ಣಾಲಿಗಳನ್ನೇ ದಿಟ್ಟಿಸುತ್ತಿದ್ದರು. ಆಂಟಿ, ಇಂಥಹವನ್ನು ಸಹಜವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಅವು ನಮ್ಮನ್ನು ಇನ್ನಷ್ಟು ಸೊರಗಿಸುತ್ತವೆ ಅಷ್ಟೆ ಎಂದಳು ಅಂಜಲಿ. ಅವಳ ಮಾತಿಗೆ ದೀಪ ಧ್ವನಿಗೂಡಿಸಿದ್ದಳು. ಮಹಾನಗರದ ಆ ಬ್ಯೂಟಿ ಪಾರ್ಲರ್‌ ತೆರೆಯಲು ಎಂಟು ವರ್ಷಗಳ ಹಿಂದೆ ತಾನು, ಮೋಹನ್ ಪಟ್ಟ ಶ್ರಮವೆಷ್ಟು? ನಾನು ಹೇಗೂ ಸಾಫ್ಟ್‌ವೇರ್ ಎಂಜಿನಿಯರ್, ನೀನು ಸಾಫ್ಟ್‌ಸ್ಕಿನ್ ಎಂಜಿನಿಯರಾಗು ಅಂತ ಪ್ರಾಸ ಹೊಂದಿಸಿದ್ದ ಜೀವದ ಗೆಳೆಯ. ಅನು ಸಹ ಬಿ.ಇ. ಪದವೀಧರೆ. ನೋಡೋಣ, ಮಹಿಳೆಯರಿಗೆ ಅಂದ, ಚಂದ ಕಲಿಸೋಣ. ಚೆಲುವು ಪ್ರಕೃತಿಯಿತ್ತ ಕೊಡುಗೆ. ಅದನ್ನು ಹಿಗ್ಗಿಸಿಕೊಂಡು ಇನ್ನಷ್ಟು, ಮತ್ತಷ್ಟು ಸುಂದರವಾಗಿ ಕಾಣುವುದು ಎಲ್ಲರ ಹಕ್ಕು. ಸೌಂದರ್ಯವರ್ಧಕಗಳಿಗೆ ಬರವಿಲ್ಲ. ಆದರೆ ಅವನ್ನು ಹೇಗೆ, ಯಾವ ಸಂದರ್ಭದಲ್ಲಿ ಎಷ್ಟು ಬಳಸಬೇಕು ಎನ್ನುವ ಅರಿವು ಮುಖ್ಯ. ಇದೇ ಅವಳ ಇರಾದೆ, ಧ್ಯೇಯ.

ನಾನು ನೌಕರಿಗೆ ರಾಜೀನಾಮೆ ಕೊಟ್ಟು ಬ್ಯೂಟಿ ಪಾರ್ಲರ್ ಶುರು ಮಾಡ್ತೀನಿ. ನೀನು ಅದೇ ಕಂಪನಿಯಲ್ಲಿರು. ಸಾಧ್ಯವಾದಷ್ಟು ನನ್ನನ್ನು ಉತ್ತೇಜಿಸಿದರೆ ಸಾಕು ಎಂದಿದ್ದಳು ಅನು. ಮೋಹನನಂತು ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದ್ದ. ಸರಳ, ಹಗುರವಾದರೂ ವಿಶಿಷ್ಟ ವಿನ್ಯಾಸದ ನಿಲುವುಗನ್ನಡಿ, ಪೀಠೋಪಕರಣಗಳನ್ನು ತಂದು ಸಜ್ಜುಗೊಳಿಸಿದ್ದ. ಸ್ವಲ್ಪ ದೊಡ್ಡದೇ ಇರಲಿ ಅಂತ ಪಕ್ಕದ ಮಳಿಗೆಯನ್ನೂ ಬಾಡಿಗೆಗೆ ಪಡೆಯಲಾಗಿತ್ತು.

ಮೇಜಿನ ಮೇಲೆ ಸಲಹಾ ಪುಸ್ತಕ, ದೂರು ಪೆಟ್ಟಿಗೆ ಇರಿಸಿದ್ದ. ಅನು ಮತ್ತೆ ಮತ್ತೆ ಅವುಗಳನ್ನು ದಿಟ್ಟಿಸಿದಳು. ಬಹುಶಃ ದೂರು, ಅಭಿಪ್ರಾಯಗಳನ್ನು ಮುಕ್ತವಾಗಿ ಬರಮಾಡಿಕೊಂಡಿದ್ದರಿಂದಲೇ ಈ ಸಂದಿಗ್ಧ ಉದ್ಭವಿಸಿತೆ ಎನ್ನುವ ಜಿಜ್ಞಾಸೆ ಅವಳನ್ನು ಕಾಡಿತು. ಹೌದು, ಮನುಷ್ಯನಾದರೂ ಹೀಗೆ ಏಕೆ ಸ್ಫುರದ್ರೂಪಕ್ಕೆ ಪೈಪೋಟಿಯಲ್ಲಿ ಹಂಬಲಿಸುತ್ತಾನೆ? ಒಂದು ವೃತ್ತಾಂತ ಉದಾಹರಣೀಯ. ಒಬ್ಬ ರಾಣಿ ಜಗತ್ತಿನಲ್ಲೇ ಚೆಂದವಾಗಿರುವ ಮೂಗು, ಕಣ್ಣು, ಕಿವಿ, ಹಣೆ, ತಲೆಗೂದಲು ತನ್ನದಾಗಲಿ ಅಂತ ದೇವರನ್ನು ಪ್ರಾರ್ಥಿಸಿದಳಂತೆ. ದೇವರು ಪ್ರತ್ಯಕ್ಷನಾಗಿ ತಥಾಸ್ತು ಎಂದ. ಮರುಗಳಿಗೆಯಲ್ಲೇ ಆಕೆಗೆ ಬಯಸಿದ ಮುಖ ಪ್ರಾಪ್ತವಾಯಿತು. ಕನ್ನಡಿ ನೋಡಿಕೊಂಡಳು. ಅವಳಿಗಿಂತ ಕುರೂಪಿ ಜಗತ್ತಿನಲ್ಲೇ ಮತ್ತೆಲ್ಲೂ ಇಲ್ಲವೆನ್ನುವಂಥಹ ರೂಪ ಅದರಲ್ಲಿ ಮೂಡಿತ್ತು! ಅದಕ್ಕೇ ಹೇಳುವುದು ಪ್ರಕೃತಿ ಮನುಷ್ಯನಿಗೂ ಮೀರಿ ಬುದ್ಧಿಶಾಲಿ, ವಿವೇಕಿ, ಚತುರ ಅಂತ. ಜೋಡಣೆ ಏನು ಎತ್ತ ಅದಕ್ಕೆ ತಿಳಿದಿದೆ. ಬಿಡುವಿನಲ್ಲಿ ಹಣಕಾಸಿನ ಲೆಕ್ಕ ನೋಡಿಕೊಳ್ಳುವ ಮೋಹನ್ ಗ್ರಾಹಕರೊಂದಿಗೆ ಸಾಮಾಜಿಕ ಸಮಸ್ಯೆ, ಸವಾಲುಗಳನ್ನು ಚರ್ಚಿಸುವುದಿದೆ. ತಮಾಷೆಗೆ ‘ಅನು ಆಂಟಿ ಬ್ಯೂಟಿ, ನೀವು ಕೌಂಟರ್ ಬ್ಯೂಟಿ ಸಾರ್’ ಅಂತ ಗ್ರಾಹಕರಿಂದ ದಂಪತಿಗಳು ಗೇಲಿಗೊಳಗಾಗುವುದೂ ಉಂಟು!

ಎಂದಿನಂತೆ ಮೋಹನ್ ಪಾರ್ಲರಿಗೆ ಬಂದ. ನೀವು ನಿಮ್ಮ ಮನಗೆ ಹೊರಡಿಮ್ಮ ಅಂತ ಅಂಜಲಿ, ದೀಪಾರನ್ನು ಕಳಿಸಿದ. ಪುಸ್ತಕ ಮತ್ತು ಪೆಟ್ಟಿಗೆಯನ್ನು ದಂಪತಿ ಮನೆಗೆ ಒಯ್ದರು. ರಾತ್ರಿ ಬೇಗನೆ ಅಡುಗೆ ಮಾಡಿ ಮಗನಿಗೆ ತಿನ್ನಿಸಿ ತಾವೂ ಊಟ ಮಾಡಿದರು. ಸಾವಧಾನವಾಗಿ ಸಲಹೆ, ದೂರುಗಳ ಪರಾಮರ್ಶನಕ್ಕೆ ಕುಳಿತರು. ಪುಸ್ತಕದಲ್ಲಿ ಕೊನೆಯ ಎರಡು ಪುಟಗಳು ಮಾತ್ರವೇ ಖಾಲಿ. ಉಳಿದಂತೆ ದೊಡ್ಡ ದೊಡ್ಡ ಒಕ್ಕಣೆಗಳು. ಇನ್ನು ಪೆಟ್ಟಿಗೆಯಲ್ಲಿ ಬಹುತೇಕ ಅನಾಮಧೇಯ ಪತ್ರಗಳದ್ದೇ ಕಾರುಬಾರು. ಅವರು ಸದ್ಯ ನಮ್ಮ ಪಾರ್ಲರ್‌ಗೆ ಇಷ್ಟೊಂದು ಮಂದಿ ಗ್ರಾಹಕರಿದ್ದಾರಲ್ಲ ಅದೇ ಸಂತೋಷ ಅಂತ ಒಳಗೊಳಗೇ ಖುಷಿಪಟ್ಟರು. ಬಹುತೇಕ ಗ್ರಾಹಕರ ಅತೃಪ್ತಿ ಅದೇ. ತಾವು ಏನೇನೋ ಅರಸಿ ಬಂದೆವು. ತಮ್ಮನ್ನು ಥಳ ಥಳ ಬೆಳಗುತ್ತೀರಿ, ತಮಗಿಂತ ಸುಂದರವಾಗಿ ಯಾರೂ ಇಲ್ಲವೆನ್ನುವಂತೆ ಮುಖ ಸುಧಾರಿಸಿ ಕಳುಹಿಸುತ್ತೀರಿ ಎಂದುಕೊಂಡಿದ್ದೆ ಬಂತು. ಇಲ್ಲ... ಇಲ್ಲ ಹಾಗಾಗಲಿಲ್ಲ ಎನ್ನುವುದೇ ಅವರ ಅಳಲು. ಒಬ್ಬಾಕೆಯಂತು ತನ್ನ ಗೆಳತಿಯರು ಮೊದಲೇ ಚೆನ್ನಾಗಿದ್ಯಲ್ಲ, ವೃಥಾ ಹಣ ಕೊಟ್ಟು ಕೋತಿ ಹಾಗೆ ಆದೀಯಲ್ಲ ಎಂದು ಹಂಗಿಸಿದರೆಂದು ಬರೆದಿದ್ದಾಳೆ. ಹುಬ್ಬು ಜಿಂಕೆಯಂತಿರುವೆಂದು ಟ್ರಿಮ್ ಮಾಡಿಸಿಕೊಂಡೆ. ಆದರೆ ಅನು ಮೇಡಂ ಮಕ್ಕಳು ಚೀರಿಕೊಳ್ಳುವ ಹಾಗೆ ರೂಪಿಸಿದ್ದಾರೆ ಎಂದು ಇನ್ನೊಬ್ಬರ ಗೊಣಗು. ಅರವತ್ತರ ವಯಸ್ಸಿನ ಮಹಿಳೆಯೊಬ್ಬರು ವ್ಯಕ್ತಪಡಿಸಿರುವ ಅಸಮಾಧಾನ ಬಹು ಸ್ವಾರಸ್ಯಕರವಾಗಿದೆ. ಆಕೆ ಬಾಬ್ ಕಟ್ ಮಾಡಿಸಿಕೊಂಡರಂತೆ.

ದೀಪಾ, ಅಂಜಲಿ ಜೊತೆಗೂಡಿ ಒಂದೊಂದು ಹಂತದಲ್ಲೂ ಈಗ ನೋಡಿಕೊಳ್ಳಿ ಅಂತ ಕನ್ನಡಿ ಹಿಡಿದರಂತೆ. ಸರೀಕಣ್ರಮ್ಮ ಥ್ಯಾಂಕ್ಸ್ ಬರ್ತೀನಿ ಅಂತ ಮನೆಗೆ ಹೋದರಂತೆ. ಕಾರು ನಿಲ್ಲಿಸಿ ಮೊಮ್ಮಗನಿಗೆ ‘ಪುಟಾಣಿ, ನಾನು ಈಗ ಹೇಗೆ ಕಾಣಿಸ್ತೀನಿ ಹೇಳು’ ಎಂದು ಕೇಳಿದರಂತೆ. ಆ ಕೂಸು ಸಣ್ಣಗೆ ನಕ್ಕಿತ್ತು. ‘ಅಜ್ಜಿಯ ತರಹ ಕಾಣಿಸ್ತಿಲ್ಲ ತಾನೆ?’ ಎಂಬ ಮರು ಪ್ರಶ್ನೆ. ಅದಕ್ಕೆ ಪುಟಾಣಿ ‘ಅಜ್ಜಿಯ ಹಾಗಿಲ್ಲ, ಅಜ್ಜನ ಹಾಗೆ ಕಾಣಿಸ್ತೀದೀಯ’ ಎಂದಿತಂತೆ! ಹೇರ್‌ಡೈಗೊಳಗಾದವರ ತಗಾದೆ, ಗೋಳು ಬಹಳವೇ ಇದ್ದವು. ಒಬ್ಬ ಮದುಮಗಳು ಹಸೆಮಣೆಯಲ್ಲಿ ಕೂರುವುದೆ ತಡ ಎಲ್ಲರೂ ಅಬ್ಬ!, ಅದೆಷ್ಟು ಪಸಂದಾಗಿ ಗೊತ್ತೇ ಆಗದಂತೆ ಡೈ ಮಾಡಿಸಿಕೊಂಡಿದೀಯಲ್ಲ ಎಂದು ಪ್ರಶಂಸಿದರಂತೆ! ಲಿಪ್‌ಸ್ಟಿಕ್ ತಿಂದಿದ್ದೀಯೋ ಇಲ್ಲವೆ ಬಳಿದುಕೊಂಡಿದ್ದೀಯೋ ಎಂಬ ಪ್ರಶ್ನೆ ಎದುರಾಗುವ ತನಕ ತನ್ನ ತುಟಿಗೆ ಕೆಂಬಣ್ಣ ಜಾಸ್ತಿಯಾಗಿರುವುದು ತನಗೆ ಅರಿವಾಗಿರಲಿಲ್ಲ ಎನ್ನುವುದು ಒಬ್ಬರ ಪ್ರಲಾಪ. ಇಲ್ನೋಡಿ ನಮ್ಮ ಪಾರ್ಲರಿಂದ ಮನೆಗೆ ಹೋದಾಗ ಇವಳ ಸೊಸೆ ಇದೇನತ್ತೆ ನಿಮ್ಮ ಮುಖ ಇನ್ನಷ್ಟು ಭಯಾನಕ ಅಂದ್ಳಂತೆ. ಇಗೋ ಇವಳ ಮುಖದ ಸುಕ್ಕುಗಳು ಹೋಗದೆ ಹಾಗೆ ಇದ್ಯಂತೆ. ಇದಪ್ಪ ಸರಿ ಐನಾತಿ ಪತ್ರ. ತಲೆಗೂದಲ ಕಪ್ಪು ಬಣ್ಣ ಹೋಗೊಲ್ಲ ಅಂತ ಖಾತರಿಪಟ್ಕೊಳೋಕೆ ಈ ಹೆಂಗಸು ಚೆನ್ನಾಗಿ ತಲೆ ಉಜ್ಜಿ ಸ್ನಾನ ಮಾಡಿದ್ಳಂತೆ ಪುಣ್ಯಾತ್ಗಿತ್ತಿ! ಅಲ್ರೀ ಹೋಗ್ದೆ ಇನ್ನೇನಾಗುತ್ತೆ ಹೇಳಿ....ಮುಂತಾದ ಪ್ರತಿಕ್ರಿಯೆಗಳಿಂದ ಅನು ಮೋಹನನ ಗಮನಸೆಳೆಯುತ್ತಿದ್ದಳು.

***

ಅನು, ಮೋಹನ್‍ರದು ಹತ್ತು ವರ್ಷಗಳ ಹಿಂದಿನ ಪ್ರೇಮ ವಿವಾಹ. ಇಬ್ಬರದೂ ಮಹಾನಗರದ ಒಂದೇ ಖ್ಯಾತ ಡೈಮಂಡ್ ಸಾಫ್ಟ್‌ವೇರ್ ಕಂಪನಿಯಲ್ಲಿ ನೌಕರಿ. ಗೆಳೆತನ ಒಬ್ಬರನೊಬ್ಬರು ಒಂದು ದಿನ ನೋಡದಿದ್ದರೂ ಹಪಹಪಿಸುವಷ್ಟರ ಮಟ್ಟಿಗೆ ಅಂಕುರಿಸಿತು. ಪರಸ್ಪರ ಮೆಚ್ಚಿದರು. ನಿನ್ನೆ ನಾನೆಷ್ಟು ಕಾಲ್ ಮಾಡಿದೆ ಅಂತ ಅವನು. ಇಲ್ಲ ಮಾಡಿದ್ದರೆ ನಾನು ಫೋನ್ ಮಾಡುತ್ತಿರಲಿಲ್ಲವೆ ಅಂತ ಅವಳು. ಒಮ್ಮೊಮ್ಮೆ ಜಗಳ ತಾರಕಕ್ಕೇರಿ ಎರಡು ಮೂರುದಿನ ಮಾತು ಬಿಡುವಷ್ಟು ಬಿಗಡಾಯಿಸಿಬಿಡುತ್ತಿತ್ತು. ಆದರೆ ಆ ಮೌನ ಮುಂದೆ ದಿನಗಟ್ಟಲೆ ಬಿಡುವಿಲ್ಲದ ಮಾತಿಗೆ ಪೀಠಿಕೆಯಾಗಿರುತ್ತಿತ್ತು. ಪ್ರೇಮಿಗಳೇ ಹಾಗೆ. ಅವರ ಪಾಲಿಗೆ ಮೌನ ಕಥಾನಕಗಳನ್ನೇ ತನ್ನಲ್ಲಿ ಸಾಂದ್ರೀಕರಿಸಿಕೊಂಡಿರುತ್ತದೆ. ಪ್ರೀತಿ ಮಸಾಲೆ ದೋಸೆ, ಸಿನಿಮಾದಚೆಗೆ ಸಾಗಿ ಇಬ್ಬರೂ ಒಂದು ನಿರ್ಧಾರಕ್ಕೇನೋ ಬಂದಿದ್ದರು. ಅವಳ ಅಪ್ಪ, ಅಮ್ಮ ಸಮ್ಮತಿಸಿರಲಿಲ್ಲ. ನೋಡು ಅನಿ ಈವಾಗೇನೋ ಮದುವೆ ಆಗಿಬೀಡ್ತೀರಿ, ಅದು ದೊಡ್ಡ ವಿಷಯ ಅಲ್ಲ. ನಾಳೆ ಇಬ್ಬರ ಕಡೆ ತಂದೆ, ತಾಯಿ ಇಂಟ್ರ್ಯಾಕ್ಷನ್ ಬಹಳ ಮುಖ್ಯ ಅಲ್ವೇನಮ್ಮ ಎಂದಿದ್ದರು ಒಕ್ಕೊರಲಿನಿಂದ ಅವಳ ಅಪ್ಪ, ಅಮ್ಮ. ದಿನಗಳು ಉರುಳಿದವು. ಕಡೆಗೆ ಮಗಳಿಗೆ ತಾವು ಇನ್ನೇನೇ ಹೇಳಿದರೂ ನಾಟದು ಅನ್ನಿಸಿದಾಗ ಸರಿಯಮ್ಮ, ನಾವಂತು ಅವರ ಮನೆಗೆ ಬಂದು ಹೋಗಿ ಮಾಡಲ್ಲ ಎಂದಿದ್ದರು. ಎರಡು ವರ್ಷಗಳ ನಂತರ ಸಂದೀಪ್ ಅನುವಿನ ತೊಡೆಯೇರಿದಾಗ ಪರಿಸ್ಥಿತಿ ಬಹುಮಟ್ಟಿಗೆ ಸುಧಾರಿಸಿತು. ನಿಜವೆ, ಹೊಸ ಜೀವ ಅಂಗಳದಲ್ಲಿ ಓಡಾಡಿದರೆ ಎಲ್ಲರನ್ನೂ ಬರಮಾಡಿಕೊಳ್ಳುತ್ತದೆ. ಮನೆ ಮನೆ, ಮನ ಮನ ಒಂದುಗೂಡುತ್ತದೆ. ಅನು, ಮೋಹನ್ ಮಗುವಿನ ಎರಡನೇ ವರ್ಷದ ಹುಟ್ಟಿದ ಹಬ್ಬದ ವೇಳೆಗಾಗಲೇ ಆವಲಹಳ್ಳಿಯಲ್ಲಿ ಸಾಲಕ್ಕೆ ಹೆದರದೆ 20 ಬೈ 30 ಸೈಟಿನಲ್ಲಿ ಒಂದು ಸ್ವಂತ ಗೂಡು ಕಟ್ಟಿದ್ದರು. ನಿಜವಾಗಿ ಮನೆಯಾಗಿದ್ದು ನಾವೆಲ್ಲ ಇಲ್ಲಿ ಸೇರಿದ್ದರಿಂದ ಅಂತ ಕವಿಯೂ ಆದ ಮೋಹನನ ಅಪ್ಪ ಶೇಷಪ್ಪ ತಮ್ಮ ಧೀಮಂತಿಕೆ ಮೆರೆದಿದ್ದರು.

ಅನುಳ ಅಳಲಿಗೆ ಕಾರಣವಾದರೂ ಏನು? ಹೇಳಿ ಕೇಳಿ ಪಾರ್ಲರ್‌ ಇರುವ ಜಾಗ ಪ್ರಶಸ್ತವಾಗಿಯೆ ಇದೆ. ಸುತ್ತ ಮುತ್ತ ಡಜನ್‍ಗೂ ಮೀರಿ ಮದುವೆ ಛತ್ರಗಳಿವೆ. ಹಾಗಾಗಿ ಬ್ರೈಡಲ್ ಮೇಕಪ್‍ಗೆ ಮೊದಲ್ಗೊಂಡು ಅಲ್ಲಿಗೆ ಭರಪೂರ ಸೌಂದರ್ಯಾಕಾಂಕ್ಷಿಗಳು ಬರುತ್ತಾರೆ. ಮೋಹನ್ ಈಚೆಗೆ ಬ್ರೈಡ್‍ಗ್ರೂಮ್ ಮೇಕಪ್ ಕೇಸನ್ನು ಚೆನ್ನಾಗಿಯೆ ನಿರ್ವಹಿಸುತ್ತಾನೆ. ಅವನದು ಮೌಲಿಕ ಚಿಂತನೆಯೆನ್ನಬಹುದು. ಹುಬ್ಬಿನ ಟ್ರಿಮಿಂಗ್ ಕೂಡದು ಎಂದೇ ಅವನು ವಾದಿಸುತ್ತಾನೆ. ಹುಬ್ಬು ಕಣ್ಣಿನ ರಕ್ಷಣೆಗೆ ಪ್ರಕೃತಿ ನಿಯಮಿಸಿರುವ ರಚನೆ. ಅದನ್ನು ನಾಜೂಕಿನ ಭ್ರಮೆಯಲ್ಲಿ ವಿವಿಧ ವಿನ್ಯಾಸದಲ್ಲಿ ಕಟಾಯಿಸಿದರೆ ಧೂಳು ಇತ್ಯಾದಿ ಕಣಗಳು ಕಣ್ಣಿಗೆ ದಾಳಿಯಿಡುತ್ತವಲ್ಲ ಎನ್ನುವ ಅವನ ತರ್ಕ ಯಾರು ತಾನೆ ಅಲ್ಲಗೆಳೆಯಲು ಸಾಧ್ಯ?. ಬಿ.ಇ. ಮುಗಿಸಿ ಒಂದು ವರ್ಷದವರೆಗೆ ಮೋಹನ್ ಕಾಲೇಜೊಂದರಲ್ಲಿ ಅಧ್ಯಾಪಕನಾಗಿ ಸಮರ್ಥ ಬೋಧಕನೆನ್ನಿಸಿದ್ದ. ಇಲ್ಲೇ ಇರಿ. ಡೈಮಂಡ್ ಸಾಫ್ಟ್ವೇರ್ ಕಂಪನಿಗೆ ಏಕೆ ಹೋಗುತ್ತೀರಿ, ಅಲ್ಲಿ ಬರುವ ಸಂಬಳವನ್ನೇ ಇಲ್ಲಿ ಕೊಡುವಂತೆ ಆಡಳಿತ ವರ್ಗಕ್ಕೆ ಶಿಫಾರಸು ಮಾಡುತ್ತೇನೆ ಅಂತ ಪ್ರಾಂಶುಪಾಲ ಧವಳ ಮಿತ್ರ ಹೇಳಿದರು. ಇಲ್ಲ ಸಾರ್, ನನಗೇಕೋ ಈ ಹುದ್ದೆಯನ್ನು ಇನ್ನೂ ಅಸ್ಥೆಯಿಂದ ಮಾಡುವರುಂಟು ಅನ್ನಿಸ್ತಿದೆ ಎಂದು ನಯವಾಗಿ ಒಲ್ಲೆನೆಂದಿದ್ದ. ಮೋಹನನ ಅಧ್ಯಾತ್ಮ ಅರಿವು ಎಂಥಹವರನ್ನೂ ಬೆರಗುಗೊಳಿಸುವಂಥದ್ದು. ಅವನನ್ನು ಹಲವು ಸಂಘ ಸಂಸ್ಥೆಗಳು ಪ್ರವಚನ ನೀಡಲು ಆಹ್ವಾನಿಸುತ್ತವೆ. ತಂತ್ರಜ್ಞಾನವೆಲ್ಲಿ ಪಾರಮಾರ್ಥಿಕವೆಲ್ಲಿ?. ಎತ್ತಿಂದೆತ್ತಣ ಸಂಬಂಧವಯ್ಯ ಎಂಬ ಪ್ರಶ್ನೆಗೆ ಅವನ ಉಲ್ಲೇಖ ಸಿದ್ಧವಾಗಿರುತ್ತದೆ; 'ಎಲ್ಲಿ ವಿಜ್ಞಾನ ಕೊನೆಯಾಗುವುದೋ ಅಲ್ಲಿ ಅಧ್ಯಾತ್ಮ ಹುಟ್ಟುತ್ತದೆ'. ಅಂದಹಾಗೆ ಮದುವೆ, ಮುಂಜಿ, ಪಾರ್ಟಿಗಳಲ್ಲಿ ಚೆಂದವಾಗಿ ಕಾಣಿಸಬೇಕೆಂಬ ಹಂಬಲ ಸಹಜ ತಾನೆ? ಹಾಗಾಗಿ ಮದುವೆ ಛತ್ರಗಳಿರುವ ಆಸುಪಾಸಿನಲ್ಲಿ ಬ್ಯೂಟಿ ಪಾರ್ಲರ್‌ಗಳು ಎಷ್ಟಿದ್ದರೂ ಕಡಿಮೆಯೇ. ಅದು ಸರಿ. ಮೂರು ವರ್ಷಗಳಿಂದ ಇಂಥದ್ದೊಂದೂ ದೂರು ಬಂದಿಲ್ಲ. ಈಗೇಕೆ ಮೇಲಿಂದ ಮೇಲೆ ತರಾವರಿ ದೂರುಗಳು ಗ್ರಾಹಕರಿಂದ ಬರತೊಡಗಿವೆ? ಮೊನ್ನೆ ವಾರಕ್ಕೊಮ್ಮೆಯಾದರೂ ಪಾರ್ಲರ್‌ಗೆ ಭೇಟಿ ನೀಡುವ ಮಹಿಳಾ ಸಮಾಜದ ಕಾರ್ಯದರ್ಶಿ ಸುಮಿತ್ರಮ್ಮ ಇದೇಕೆ ಹೀಗೆ ಮಾಡಿದರು. ಅವರ ಗೈರಿರಲಿ. ತಮ್ಮ ಮಗಳ ಮದುವೆ ಸಂಬಂಧವಾಗಿ ಮದುಮಗಳ ಜೊತೆ ದಂಡನ್ನೇ ಇತ್ತ ಕೆರೆತರಬೇಕಿತ್ತಲ್ಲ?

***

ಮರು ದಿನ ಎಂದಿನಂತೆ ಮೋಹನ್ ಪಾರ್ಲರಿಗೆ ಸಂಜೆ ಬಂದವನೆ ‘ಅನು ಒಂದು ಉಪಾಯವಿದೆ. ನಾಳಿದ್ದು ಬೆಳಿಗ್ಗೆ ನಾನೊಂದು ಪ್ರವಚನ ಇಟ್ಟುಕೊಳ್ಳುತ್ತೇನೆ. ಗ್ರಾಹಕರೆಲ್ಲರಿಗೂ ಮೆಸೇಜ್ ಮಾಡೋಣ. ಎಲ್ಲರನ್ನೂ ಆಹ್ವಾನಿಸೋಣ. ಅಂಜಲಿ, ದೀಪು, ನಾನು, ನೀನು ಮನಸ್ಸು ಮಾಡಿದರೆ ಅದೇನು ತ್ರಾಸವಲ್ಲ’ ಎಂದ. ಮೊದಲಿಗೆ ನಿಮಗೇನು ತಲೆ ಕೆಟ್ಟಿದೆಯೆ ಎಂದಳು ಅನು. ಡಿಯರ್, ಮುಖಾಮುಖಿ ಮಾತು, ಸಂವಾದದಿಂದ ಖಂಡಿತ ಪ್ರಯೋಜನವಿದೆ, ಅನುಮಾನ ಬೇಡ ಎಂದು ಮೋಹನ್ ಮನವರಿಕೆ ಮಾಡಿದ. ಅಂದು ಬೆಳಿಗ್ಗೆ ಹನ್ನೊಂದರ ವೇಳೆಗೆ ಅರವತ್ತು ಮಂದಿ ಅಲ್ಲಿ ಜಮಾಯಿಸಿದ್ದರು. ಪಾರ್ಲರ್ ಹೊರಗೂ ಕುರ್ಚಿಗಳನ್ನು ಹಾಕಲಾಗಿತ್ತು. ಐವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಗ್ರಾಹಕರ ಸಭೆ ಪ್ರಾರ್ಥನೆ, ಸ್ವಾಗತದೊಂದಿಗೆ ಚಾಲನೆ ಪಡೆಯಿತು. ನೇರವಾಗಿ ಮೋಹನ್ ವಿಷಯಕ್ಕೆ ಬಂದ.

‘ನಿಮ್ಮೆಲ್ಲರ ಸಹಕಾರಕ್ಕೆ ಕಾಂತಿ ಬ್ಯೂಟಿ ಪಾರ್ಲರ್ ಆಭಾರಿಯಾಗಿದೆ. ನೀವು, ನಾವೆಲ್ಲ ಒಂದೇ ಕುಟುಂಬದವರಿದ್ದಂತೆ. ಅಂದಕಾಲತ್ತಲೆ ಅಜ್ಜಿ, ತಾಯಿ ಮನೆ ಮಕ್ಕಳಿಗೆ ತಲೆ ಬಾಚುವುದು, ಹೇನು ತೆಗೆಯುವುದು, ಜಡೆ ಹಾಕುವುದು, ಕಣ್ಕಪ್ಪು ಹಚ್ಚುವುದು, ಸೀರೆ ಉಡಿಸುವುದು, ಅಲಂಕರಿಸುವುದು ಇತ್ಯಾದಿ ನಿರ್ವಹಿಸುತ್ತಿದ್ದುದು ನಿಮಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಇಂದು? ಬದುಕಿನ ಶೈಲಿ ನಿರೀಕ್ಷೆಗೂ ಮೀರಿ ಬದಲಾಗಿದೆ. ಹಾಗೆಂದು ನಾವೇನು ಬ್ಯೂಟಿ ಪಾರ್ಲರ್‌ ಅನಿವಾರ್ಯವೆನ್ನುತ್ತಿಲ್ಲ. ಪರಂಪರಾಗತ ಜ್ಞಾನವೇ ನಮಗೆ ಮೂಲಾಧಾರ. ಪ್ರಕೃತಿಯಲ್ಲೇ ಸರ್ವ ಚೆಲುವಿದೆ. ಯಾರೂ ಅದನ್ನು ಸೃಷ್ಟಿಸುವ ಅಗತ್ಯವಿಲ್ಲ, ಸೃಷ್ಟಿಸಲಾಗದು ಕೂಡ. ಕುರೂಪವೆನ್ನುವುದೇ ಅರ್ಥಹೀನ. ವೈವಿಧ್ಯಮಯವಾದ ಪ್ರಕೃತಿಯಲ್ಲಿ ಮೊಗೆದಷ್ಟೂ ಸೌಂದರ್ಯ ತೆರೆದುಕೊಳ್ಳುತ್ತದೆ. ಎಂದಮೇಲೆ ಯಾವುದೇ ಬ್ಯೂಟಿ ಪಾರ್ಲರ್ ಸೌಂದರ್ಯವನ್ನು ಕಟ್ಟಿಕೊಡುವ ಗುತ್ತಿಗೆ ತೆಗೆದುಕೊಳ್ಳಲಾಗದು. ಆದರೆ ಚೆಲುವು ಎದ್ದು ಕಾಣುವಂತೆ ಕೌಶಲ ಪ್ರಯೋಗಿಸುತ್ತೇವೆಯಷ್ಟೆ. ನಾನು ನಿಮ್ಮನ್ನು ಮಾತಿನಿಂದ ಮೋಡಿಗೊಳಿಸುತ್ತಿದ್ದೇನೆಂದು ನೀವು ಭಾವಿಸುವುದಿಲ್ಲವೆಂಬ ವಿಶ್ವಾಸ ನನಗಿದೆ. ಬಹುಮುಖ್ಯ ಸಂಗತಿಯೆಂದರೆ ನಾವು ಏನೆಲ್ಲ ನಿಮ್ಮ ಅಂದ ಚಂದ ಹಿಗ್ಗಿಸಬಹದು. ನೀವು ನಿಮ್ಮ ಮುಗುಳ್ನಗೆಯನ್ನು ಆಹ್ವಾನಿಸಿಕೊಂಡರೆ ಮಾತ್ರ ಅದಕ್ಕೆ ಪರಿಪೂರ್ಣತೆ. ಮುಗುಳ್ನಗು ಅಂಕಿತವಿದ್ದಂತೆ. ಅದು ನಿಮ್ಮಿಂದ ಮಾತ್ರ ನೀಡಬಹುದಾದ ಫೈನಲ್ ಟಚ್ ಅಪ್! ಸಹಿ ಇಲ್ಲದಿದ್ದರೆ ಯಾವುದೇ ದಾಖಲೆ ಊರ್ಜಿತವಾಗದು. ಪಾರ್ಲರ್ ನಿಮ್ಮನ್ನು ಹೇಗಾದರೂ ಶೃಂಗರಿಸಿರಲಿ, ಮುಖದಲ್ಲಿ ನಸು ನಗೆ ತಂದುಕೊಳ್ಳಿ. ತಾನೇ ತಾನಾಗಿ ಎದುರಿಗಿನ ಕನ್ನಡಿ ನಿಮ್ಮ ಚೆಲುವನ್ನು ಅಹುದೌಹುದು ಎಂದು ಮೆಚ್ಚುತ್ತದೆ..."

ಮೋಹನ್ ಮಾತು ಮುಂದುವರಿಯದಷ್ಟು ಜೋರು ಚಪ್ಪಾಳೆ ಸುರಿದಿತ್ತು. ಮುಂದಿನ ಸಾಲಿನಲ್ಲಿದ್ದ ಸುಮಿತ್ರಮ್ಮನವರ ಕಣ್ಣುಗಳು ತೇವದ ಬುಗ್ಗೆಗಳಾಗಿದ್ದವು.

'ನೀವು ಮುಗುಳ್ನಗೆ ಸೂಸಿದಾಗಲೇ ನಾವು ಮಾಡುವ ಫೇಸ್ ಲಿಫ್ಟ್ ಸಾರ್ಥಕ್ಯ'

ಮೋಹನ್ ಗೋಡೆಯ ಮೇಲೆ ನಿಲುವುಗನ್ನಡಿಗಳ ನಡುವೆ ಬಿಸ್ಕತ್, ಚಾ ಸೇವಿಸುತ್ತಿದ್ದವರ ಸಮ್ಮುಖದಲ್ಲಿ ಎದ್ದು ಕಾಣುವಂತೆ ಆ ಫಲಕ ಲಗತ್ತಿಸಿದ. ಅನುವಿನತ್ತ ನೋಡಿ ನಿನಗೆ ಮೇಕಪ್ ಮಾಡಿಕೊ ಅಂತ ನಾನು ಹೇಳುವುದಿಲ್ಲ. ನೀನಾಗಲೇ ನಗುತ್ತಿದ್ದೀಯ ಅಂದ. ದೀಪು "ಆಂಟಿ, ನಿಮ್ಮಗ ಸಂದೀಪ್ ಫೋನು ಮಾಡಿದಾನೆ. ಈಗ ತಾನೆ ಸ್ಕೂಲ್ ಬಸ್ನಿಂದ ಇಳಿದ್ನಂತೆ. ಪಕ್ಕದ್ಮನೇಲಿ ಆಟವಾಡ್ತಿದಾನಂತೆ" ಎಂದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT