ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪೆಗಳ ಲೋಕ

Last Updated 15 ಜೂನ್ 2019, 19:45 IST
ಅಕ್ಷರ ಗಾತ್ರ

ಸಮುದ್ರ ತೀರದಲ್ಲೊಂದು ಊರು. ಆ ಊರಿನಲ್ಲಿ ಒಂದು ಹಳೆಯ ಬಾವಿ. ಆ ಬಾವಿ ಬತ್ತಿದ್ದನ್ನು ನೋಡಿದ್ದೇನೆ ಎನ್ನುವವರು ಯಾರೂ ಇಲ್ಲ. ಅದೇ ಬಾವಿಯಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಾ ಬಂದಿರುವ ಮೀನು-ಕಪ್ಪೆಗಳ ಕುಟುಂಬಗಳಿವೆ. ಯಾವತ್ತೂ ನೀರು ಬತ್ತದಿದ್ದರಿಂದ ಕಪ್ಪೆಗಳಂತೂ ತುಂಬಾ ನೆಮ್ಮದಿಯಿಂದ ಬಾಳುತ್ತಿದ್ದವು ಎನ್ನಬಹುದು. ಆದರೆ ಮೀನುಗಳನ್ನು ಆಗಾಗ ಯಾರಾದರೂ ಹಿಡಿಯುತ್ತಿದ್ದರಿಂದ, ಯಾವಾಗ ಯಾರು ತಮ್ಮನ್ನು ಹಿಡಿದು ತಿನ್ನುತ್ತಾರೋ ಎಂಬ ಭಯದಲ್ಲೇ ಮೀನುಗಳು ಬದುಕಬೇಕಾಗಿತ್ತು. ಹಾಗಾಗಿ ಬಾವಿಯಲ್ಲಿ ನೀರು ಬತ್ತದಿದ್ದರೂ ಅಲ್ಲಿನ ಮೀನುಗಳು ಕಪ್ಪೆಗಳಷ್ಟು ಸುಖಿಗಳಲ್ಲ.

ಹೀಗೆ ಕಪ್ಪೆಗಳು ಸುಖ-ಸಮೃದ್ಧಿಯಿಂದ ಬಾಳುತ್ತಿದ್ದಾಗ ಒಮ್ಮೆ ಮಳೆ ಜಾಸ್ತಿಯಾಗಿ, ಬಾವಿಯ ನೀರು ತುಂಬಿತು. ಬಾವಿಯೊಳಗಿದ್ದ ಒಂದು ತುಂಟ ಕಪ್ಪೆ ಮರಿ ಖುಷಿಯಿಂದ ಕುಣಿದಾಡಿ, ಎಲ್ಲೆಂದರಲ್ಲಿ ನೆಗೆಯುತ್ತಿತ್ತು. ನೆಗೆಯುತ್ತಾ ಬಾವಿಯಿಂದ ಹೊರಚಿಮ್ಮಿ ಬಿದ್ದುಬಿಟ್ಟಿತು. ತಾನೆಲ್ಲಿದ್ದೇನೆ ಎಂದು ಅದು ನೋಡಿಕೊಳ್ಳುವ ಮೊದಲೇ ಪಕ್ಕದ ಸಮುದ್ರವೂ ತುಂಬಿದ್ದರಿಂದ, ಸಮುದ್ರದ ಅಲೆಯೊಂದು ಬಂದು ಕಪ್ಪೆ ಮರಿಯನ್ನು ತನ್ನ ಕಂಕುಳಲ್ಲಿ ಕೂರಿಸಿಕೊಂಡು, ಸಮುದ್ರದೊಳಕ್ಕೆ ಹೊತ್ತೊಯ್ದುಬಿಟ್ಟಿತು. ಅಲೆ ತಾಕಿದ್ದಷ್ಟೇ ಕಪ್ಪೆಮರಿಗೆ ಗೊತ್ತಾಗಿದ್ದು; ನಂತರ ಅದರ ಕಣ್ಣು ಮಂಜಾಗಿ, ತಲೆ ತಿರುಗಿ, ಪ್ರಜ್ಞಾಹೀನವಾಗಿಬಿಟ್ಟಿತು.

ಸುಮಾರು ಹೊತ್ತಿನ ನಂತರ ಪ್ರಜ್ಞೆ ಬಂದು, ಕಣ್ಬಿಟ್ಟು ನೋಡಿದರೆ, ತಾನ್ಯಾವುದೋ ಹೊಸ ಲೋಕದೊಳಗೆ ಇರುವುದು ಅದಕ್ಕೆ ಅರಿವಿಗೆ ಬಂತು. ಬಾಯೆಲ್ಲ ಉಪ್ಪುಪ್ಪಾಗಿ, ಹೊಟ್ಟೆ ತೊಳಸಿದಂತಾಯ್ತು. ಹಾಗೂ ಹೀಗೂ ಸಾವರಿಸಿಕೊಂಡು‌ ಸುತ್ತಲೂ ನೋಡಿದರೆ ತುದಿಯೇ ಕಾಣದ ವಿಶಾಲ ಜಾಗ. ಎಲ್ಲೆಲ್ಲೂ ನೀರೋ ನೀರು. ಆ ವಿಸ್ತಾರವಾದ ಸಮುದ್ರದಲ್ಲಿ ಎಲ್ಲಿ ಹೋಗಬೇಕೆಂಬುದೇ ಕಪ್ಪೆಮರಿಗೆ ತಿಳಿಯಲಿಲ್ಲ. ತನ್ನ ಸ್ವಂತ ಜಾಗವಾದ ಬಾವಿಗೆ ವಾಪಸು ಹೋಗುವ ಮಾರ್ಗ ತಿಳಿಯದೆ, ಹೊಸ ಜಾಗದಲ್ಲಿ ಇರಲು ಭಯವಾಗಿ ಅಳಲಾರಂಭಿಸಿತು. ಈ ಕಪ್ಪೆ ಮರಿಯ ಅಳುವನ್ನು ಕೇಳಿ ದೂರದಲ್ಲಿದ್ದ ಅನೇಕ ಸಮುದ್ರ ಕಪ್ಪೆಗಳು ಬಂದು ವಿಚಾರಿಸಿದಾಗ, ಈ ಬಾವಿ ಕಪ್ಪೆ ತನ್ನ ವೃತ್ತಾಂತವನ್ನೆಲ್ಲ ಹೇಳಿಕೊಂಡು ಪುನಃ ಅತ್ತಿತು.

ಅದಕ್ಕೆ ಸಮುದ್ರ ಕಪ್ಪೆಗಳು ಸಮಾಧಾನ ಹೇಳಿ, ‘ನಿನ್ನೂರಿನ ದಾರಿ ನಮಗೂ ಗೊತ್ತಿಲ್ಲ, ಆದರೂ ಪರವಾಗಿಲ್ಲ. ಊರಿನ ದಾರಿ ಸಿಗುವವರೆಗೂ ನಮ್ಮ ಜೊತೆ ಇರು’ ಎಂದು ತಮ್ಮೊಂದಿಗೆ ಸೇರಿಸಿಕೊಂಡು ಚೆನ್ನಾಗಿ ನೋಡಿಕೊಂಡವು. ಸ್ವಲ್ಪ ದಿನ ಬೇಸರದಿಂದ ಇದ್ದ ಬಾವಿ ಕಪ್ಪೆ, ಸಮುದ್ರದ ಕಪ್ಪೆಗಳ ಜೊತೆ ಬೆರೆತು, ವಿಶಾಲವಾದ ಸಮುದ್ರದಲ್ಲಿ ತನಗೆ ಇಷ್ಟ ಬಂದಲ್ಲಿ ಓಡಾಡುತ್ತಾ, ಖುಷಿಯಿಂದ ಕುಣಿದಾಡುತ್ತಾ, ಆರಾಮವಾಗಿ ಬಾಳುತ್ತಾ, ತನ್ನ ಸ್ವಂತ ಜಾಗವಾದ ಬಾವಿಯನ್ನೂ, ಬಾವಿಯ ಇತರ ಕಪ್ಪೆಗಳನ್ನೂ ಮರೆತುಬಿಟ್ಟಿತು.

ಹೀಗೇ ವರ್ಷಗಳು ಉರುಳಿದವು. ಕಪ್ಪೆಮರಿ ಈಗ ದೊಡ್ಡ ಕಪ್ಪೆಯಾಗಿತ್ತು. ಮರಿಯಾಗಿದ್ದಾಗಲೇ ತುಂಬ ತುಂಟನಾಗಿದ್ದು, ಈಗ ಸಮುದ್ರಕ್ಕೆ ಬಂದು ಹೊಂದಿಕೊಂಡ ಮೇಲೆ ತನ್ನದೇ ಒಂದು ಸಣ್ಣ ಗುಂಪು ಕಟ್ಟಿಕೊಂಡು, ರೌಡಿ ಕಪ್ಪೆಯಾಗಿ ಉಳಿದ ಕಪ್ಪೆಗಳ ಮೇಲೆ ಸುಖಾಸುಮ್ಮನೆ ಮುಗಿಬೀಳುತ್ತಿತ್ತು. ಬಾವಿ ಕಪ್ಪೆಯ ದೌರ್ಜನ್ಯವನ್ನು ಸುಮಾರು ದಿನ ಸಹಿಸಿಕೊಂಡ ಸಮುದ್ರದ ಕಪ್ಪೆಗಳು ಒಂದುಗೂಡಿ, ಹಿಡಿದು ಚೆನ್ನಾಗಿ ಹೊಡೆದು, ಇನ್ನೊಮ್ಮೆ ಸಮುದ್ರಕ್ಕೆ ಬಂದರೆ ಸಾಯಿಸಿಬಿಡುತ್ತೇವೆ ಎಂದು ಸಮುದ್ರದಿಂದ ಆಚೆಗೆ ಎಸೆದವು. ಸಮುದ್ರಕ್ಕೆ ತಿರುಗಿ ಹೋಗಲೂ ಆಗದೆ, ತನ್ನ ಊರಿನ ದಾರಿಯೂ ತಿಳಿಯದೆ ಬಾವಿಕಪ್ಪೆ ಬಾಯಿ ಬಾಯಿ ಬಡಿಯುತ್ತಾ ಅಳುತ್ತಾ ಅಲೆದಾಡತೊಡಗಿತು. ಅಲೆಯುತ್ತಾ ಅಲೆಯುತ್ತಾ ತುಂಬಾ ದಣಿವಾಗಿ, ಕಣ್ಣು ಕತ್ತಲಾಗಿ, ಕಷ್ಟಪಟ್ಟು ಕುಪ್ಪಳಿಸಿ ನೆಗೆಯಿತು. ಏನಾಗುತ್ತಿದೆ ಎಂದು ಗೊತ್ತಾಗುವದರೊಳಗೆ ಒಂದು ಆಳವಾದ ಬಾವಿಯೊಳಗೆ ಬಿತ್ತು. ಆಶ್ಚರ್ಯದಿಂದ ಸುತ್ತಲೂ ನೋಡಿದರೆ, ತಾನು ಬಿಟ್ಟು ಹೋದ ತನ್ನದೇ ಮನೆ ಈ ಬಾವಿ ಎಂಬುದು ಗೊತ್ತಾಯಿತು! ಆನಂದದಿಂದ ಉಬ್ಬಿ ಹೊಯಿತು. ಆಗಿದ್ದ ಆಯಾಸವೆಲ್ಲ ಕಡಿಮೆಯಾದಂತಾಗಿ, ಕುಣಿಯಲಾರಂಭಿಸಿತು. ಜೊತೆಗೆ ಮನಸ್ಸಿನಲ್ಲಿ ಒಂದು ಆಲೋಚನೆ ಹೊಳೆಯಿತು.

ಈಗ ದೊಡ್ಡದಾಗಿ, ಗುರುತು ಸಿಗದಂತಾಗಿದ್ದ ಈ ಕಪ್ಪೆಯನ್ನು ಯಾರೆಂದು ಉಳಿದ ಕಪ್ಪೆಗಳು ವಿಚಾರಿಸಿದಾಗ, ತನ್ನ ಪರಿಚಯವನ್ನು ಅನೇಕ ಸಾಕ್ಷಿ ಸಮೇತ ತಿಳಿಸಿ, ತನಗಾದ ಗತಿಯನ್ನು ವಿವರಿಸದೆ, ‘ನಾನು ಹೊರದೇಶಕ್ಕೆ ಹೋಗಿದ್ದೆ. ಅಲ್ಲಿ ತುಂಬಾ ವಿದ್ಯೆಯನ್ನು, ಜ್ಞಾನವನ್ನು ಸಂಪಾದಿಸಿಕೊಂಡು ಬಂದಿದ್ದೇನೆ. ನಾನು ಕಪ್ಪೆಗಳ ಕಾನೂನನ್ನೆಲ್ಲ ಅರೆದು ಕುಡಿದಿದ್ದೇನೆ. ನಾನೀಗ ಮಹಾನ್ ಮೇಧಾವಿ’ ಎಂದು ಬಡಾಯಿ ಕೊಚ್ಚಿಕೊಂಡಿತು. ಇದರ ಮಾತನ್ನು ಸತ್ಯವೆಂದೇ ನಂಬಿದ ಒಂದಿಷ್ಟು ಕಪ್ಪೆಗಳು ಇದರ ಹಿಂಬಾಲಕರಾಗಿ, ಈ ಕಪ್ಪೆ ಹಿಂದೆ ಸುತ್ತುತ್ತಾ ಜೈಕಾರ ಹಾಕತೊಡಗಿದವು. ಈ ಕಪ್ಪೆಯೂ ಬೇರೆ ಕಪ್ಪೆಗಳನ್ನೆಲ್ಲ ಕೀಳಾಗಿ ಕಾಣುತ್ತಾ, ಅಣಕಿಸುತ್ತಿತ್ತು. ಆದರೆ ಅನೇಕ ಕಪ್ಪೆಗಳಿಗೆ ಇದು ಸರಿ ಬರಲಿಲ್ಲ. ಅದಕ್ಕೆ ಬುದ್ಧಿ ಕಲಿಸಬೇಕೆಂದುಕೊಂಡ ಉಳಿದ ಕಪ್ಪೆಗಳು, ತುಂಬಾ ಪ್ರಯತ್ನ ಪಟ್ಟು, ಚೆನ್ನಾಗಿ ಓದಿ, ಅದ್ಭುತ ಜ್ಞಾನ ಸಂಪಾದಿಸಿ, ಈ ಕಪ್ಪೆಯ ಎದುರೇ ದೊಡ್ಡ ದೊಡ್ಡ ನೌಕರಿ ಗಿಟ್ಟಿಸಿಕೊಂಡು ಜುಂ ಎಂದು ಓಡಾಡಲಾರಂಭಿಸಿದವು.

ಆಗ ಈ ಕಪ್ಪೆಯ ಹಿಂದಿದ್ದ ಒಂದಿಷ್ಟು ಕಪ್ಪೆಗಳು ಇದನ್ನು ಬಿಟ್ಟು, ದೊಡ್ಡ ನೌಕರಿ ಗಿಟ್ಟಿಸಿಕೊಂಡ ಕಪ್ಪೆಗಳ ಹಿಂದೆ ಓಡಿದವು. ಈಗ ಈ ಕಪ್ಪೆ ಎಲ್ಲರಿಂದಲೂ ದೂರವಾಗಿ, ಒಂಟಿಯಾಯಿತು. ಯಾರೂ ಇದನ್ನು ತಮ್ಮ ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಹತ್ತಿರ ಹೋದರೆ ‘ನೀನು ಮಹಾನ್ ಮೇಧಾವಿ, ನಾವು ದಡ್ಡರಪ್ಪ. ನಿಮ್ಮಂಥೋರ ಜೊತೆ ನಮಗೇನು ಕೆಲಸ’ ಎಂದು ದೂರ ಹೋಗುತ್ತಿದ್ದವು. ನಿಧಾನಕ್ಕೆ ಈ ಕಪ್ಪೆಗೆ ತನ್ನ ತಪ್ಪಿನ ಅರಿವಾಗತೊಡಗಿತು. ಆಗ ಬಾವಿಯ ಹೊರಗೆ ತಾನು ಹೋಗಿದ್ದು, ಅಲ್ಲಿ ತಾನಿದ್ದಿದು, ತಾನು ಅಲ್ಲಿ ನಡೆದುಕೊಂಡಿದ್ದು, ಕೊನೆಗೆ ತನಗೆ ಬಂದ ಪರಿಸ್ಥಿತಿಯನ್ನು ತಿಳಿಸಿ, ಎಲ್ಲರಲ್ಲೂ ಕ್ಷಮೆ ಕೇಳಿ, ಮತ್ತೆಂದೂ ಅಹಂಕಾರ ತೋರದೆ ಎಲ್ಲರೊಂದಿಗೆ ಸುಖವಾಗಿ ಬಾಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT