ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಿಕ್ರಮನಾದ ರೋಹನ!

Last Updated 1 ಜೂನ್ 2019, 19:30 IST
ಅಕ್ಷರ ಗಾತ್ರ

ರೋಹನ ತುಂಬ ಕುಳ್ಳಗಿರುವ ಹುಡುಗ. ಬೇರೆ ಮಕ್ಕಳ ಜತೆಗಿದ್ದರೆ ಅವನು ಅವರನ್ನು ನೋಡಲು ತಲೆ ಎತ್ತಬೇಕು! ಎಲ್ಲರೂ ಅವನನ್ನು ರೋಹನ ಎನ್ನುವ ಹೆಸರಿನಿಂದ ಕರೆಯದೆ ‘ವಾಮನ’, ‘ಕುಳ್ಳ’ ಅಂತ ಕರೆಯುತ್ತಿದ್ದರು, ಗೇಲಿ ಮಾಡುತ್ತಿದ್ದರು. ಇದರಿಂದ ತುಂಬ ಬೇಸರವಾಗುತ್ತಿತ್ತು ರೋಹನನಿಗೆ. ಕೆಲವೊಮ್ಮೆ ಅಳುವೇ ಬರುತ್ತಿತ್ತು. ಅವನನ್ನು ಯಾರೂ ತಮ್ಮ ಗೆಳೆಯರ ಗುಂಪಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ.

ಅವನು ತನ್ನ ದುಃಖವನ್ನು ಕ್ಲಾಸ್ ಮಿಸ್ ಗಂಗಾ ಅವರಲ್ಲಿ ಹೇಳಿಕೊಂಡ. ಗಂಗಾ ಮಿಸ್ ತುಂಬಾ ಒಳ್ಳೆಯವರು. ಎಲ್ಲ ಮಕ್ಕಳೂ ಅವರನ್ನು ಇಷ್ಟಪಡುತ್ತಿದ್ದರು. ಮಕ್ಕಳ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತಿದ್ದವು. ‘ನೀನು ಎತ್ತರವಾಗಲು ಔಷಧಿಯಿದೆ ನನ್ನಲ್ಲಿ. ಆದರೆ, ನಾನು ಹೇಳಿದ ಹಾಗೆ ಕೇಳಬೇಕು ನೀನು... ಹೇಳು, ನಿನಗೆ ಎತ್ತರವಾಗಬೇಕಾ?’ ಎಂದು ಮಿಸ್ ಅವನಲ್ಲಿ ಕೇಳಿದರು. ಓಹೋ! ಎತ್ತರವಾಗಲು ಔಷಧಿಯಿದೆ ಎಂದಾದರೆ ರೋಹನ ಏನು ಮಾಡಲೂ ಸಿದ್ಧನಿದ್ದ. ‘ಕುಳ್ಳ’ ಅನಿಸಿಕೊಳ್ಳುವುದು ಅವನಿಗೆ ಅಷ್ಟು ಬೇಸರದ ಸಂಗತಿಯಾಗಿತ್ತು.

ಮಿಸ್ ಮಾರ್ಗದರ್ಶನದಲ್ಲಿ ಅವನು ಆಟ, ಪಾಠ, ಭಾಷಣ, ಪ್ರಬಂಧ, ಕತೆ, ಕವಿತೆ... ಎಲ್ಲವನ್ನೂ ಶ್ರದ್ಧೆಯಿಂದ ಕಲಿಯತೊಡಗಿದ. ಔಷಧಿ ಪಡೆಯಬೇಕಾದರೆ ಅದಕ್ಕೆ ಸಿದ್ಧತೆ ಬೇಕು ಅಂದಿದ್ದಾರೆ ಮಿಸ್! ಅದು ಹಾಗೆಲ್ಲ ದುಡ್ಡು ಕೊಟ್ಟ ಕೂಡಲೇ ಸಿಗುವ ಔಷಧಿ ಅಲ್ಲ ಅಂತ ಹೇಳಿದ್ದಾರೆ. ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆಯಂತೆ.

‘ಮಿಸ್, ಇವತ್ತು ಅವನಿ ನನ್ನನ್ನು ಅವಳ ಗೆಳತಿಗೆ ತೋರಿಸಿ ನಕ್ಕಳು!’ ಅಂತ ರೋಹನ್ ತುಂಬ ಕೀಳರಿಮೆ ತಂದುಕೊಂಡು ಹೇಳಿದ. ಅವನ ಮಾತು ತಳ್ಳಿ ಹಾಕುವವರಂತೆ ಮಿಸ್, ‘ರೋಹನ್, ಯಾರು ಏನೇ ಹೇಳಿದ್ರೂ ನೀನದನ್ನು ಮನಸ್ಸಿಗೆ ಹಚ್ಚಿಕೊಂಡರೆ ಔಷಧಿ ಸಿಗುವುದಿಲ್ಲ. ಯಾರಾದರೂ ನಕ್ಕರೂ, ಗೇಲಿ ಮಾಡಿದರೂ, ತಮಾಷೆ ಮಾಡಿದವರನ್ನು ಅಯ್ಯೋ ಪಾಪ! ಮೂರ್ಖರು ಅವರು ಅಂದುಕೊಂಡು ಮನಸ್ಸನ್ನು ದೃಢವಾಗಿರಿಸಿಕೋ. ಆಗ ಮಾತ್ರ ಎತ್ತರವಾಗುವ ಔಷಧಿ ಸಿಗುವುದು’ ಎಂದು ಸಮಾಧಾನ ಮಾಡಿದರು. ‘ಹೌದಲ್ಲ’ ಅನಿಸಿತು ರೋಹನನಿಗೆ. ನಂತರ ರೋಹನ ಬೇರೆಯವರ ನಗು, ತಮಾಷೆ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನಷ್ಟಕ್ಕೆ ತಾನು ಇರತೊಡಗಿದ.

‘ರೋಹನ್, ನಾಳೆಯಿಂದ ಮೂರು ದಿನ ಆಟೋಟದ ಸ್ಪರ್ಧೆಗಳು, ಇತರ ಸ್ಪರ್ಧೆಗಳು ವಾರ್ಷಿಕೋತ್ಸವದ ನಿಮಿತ್ತ ನಡೆಯುತ್ತವೆ. ಎಲ್ಲದಕ್ಕೂ ಹೆಸರು ಕೊಡು, ಸ್ಪರ್ಧಿಸು. ಸಮಸ್ಯೆಯಿದ್ದರೆ ನನ್ನನ್ನು ಕೇಳು’ ಅಂದರು ಮಿಸ್. ರೋಹನ ಎಲ್ಲ ಸ್ಪರ್ಧೆಗಳಿಗೂ ಹೆಸರು ಸಲ್ಲಿಸಿದ. ಆಟೋಟಗಳ ಸ್ಪರ್ಧೆಗಳಲ್ಲಿ ಎಲ್ಲವುಗಳಲ್ಲಿ ಅಲ್ಲದಿದ್ದರೂ ಹೆಚ್ಚಿನ ಸ್ಪರ್ಧೆಗಳಲ್ಲಿ ಅವನೇ ಪ್ರಥಮ ಸ್ಥಾನ ಪಡೆದ.
ಭಾಷಣ, ಪ್ರಬಂಧ, ಕಥಾ ರಚನೆ, ಆಶು ಭಾಷಣ, ಡ್ರಾಯಿಂಗ್, ಕವಿತೆ ರಚಿಸುವುದು, ಕಾವ್ಯ ವಾಚನ... ಎಲ್ಲ ಸ್ಪರ್ಧೆಗಳಲ್ಲೂ ಅವನದೇ ಮೇಲುಗೈ. ತುಂಬ ಸಂತೋಷವಾಗಿತ್ತು ಅವನಿಗೆ. ಮಿಸ್ ಸದಾ ಅವನಿಗೆ ಮಾರ್ಗದರ್ಶನ ಕೊಡುತ್ತಿದ್ದರು.

ವಾರ್ಷಿಕ ಪರೀಕ್ಷೆಗಳ ಸಮಯದಲ್ಲಿ ಅದೇ ಹುರುಪಿನಿಂದ ಪಾಠಗಳನ್ನು ಓದತೊಡಗಿದ ರೋಹನ. ಗೊತ್ತಿಲ್ಲದ್ದನ್ನು ಕಲಿಸಲು ಮಿಸ್ ಇದ್ದೇ ಇರುತ್ತಿದ್ದರು. ತಿರುಗಾಟ, ಮೊಬೈಲ್, ಟಿ.ವಿ ಎಲ್ಲವನ್ನೂ ಬಿಟ್ಟು ಅವನು ಓದಿಗೆ ಸಮಯ ಮೀಸಲಿಟ್ಟ. ಮೊದಲೆಲ್ಲ ಬೆಳಿಗ್ಗೆ ಎಂಟಕ್ಕೆ ಏಳುತ್ತಿದ್ದವನು, ಐದು ಗಂಟೆಗೇ ಎಬ್ಬಿಸಲು ಅಮ್ಮನಿಗೆ ಹೇಳಿ ಓದಲು ಕುಳಿತುಕೊಳ್ಳುತ್ತಿದ್ದ.

ಪರೀಕ್ಷೆಗಳು ಒಂದರ ಮೇಲೆ ಒಂದು ಮುಗಿದುಹೋದವು. ‘ಅಬ್ಬಾ! ಮುಗಿದವಲ್ಲ!’ ಅಂತ ಎಲ್ಲರಿಗೂ ಸಮಾಧಾನ. ಫಲಿತಾಂಶವೂ ಬಂತು. ರೋಹನ ಅತಿ ಹೆಚ್ಚು ಅಂಕ ಗಳಿಸಿ ತರಗತಿಗೆ ಮೊದಲಿಗನಾಗಿದ್ದ! ಮೊದಲೆಲ್ಲ ಅವನು ಹತ್ತು, ಹನ್ನೆರಡನೆಯ ಸ್ಥಾನದಲ್ಲಿ ಇರುತ್ತಿದ್ದ ಹುಡುಗನಾಗಿದ್ದ.

ಕ್ಲಾಸ್ ಮಿಸ್ ಕ್ಲಾಸಿಗೆ ಬಂದವರು ನಗುತ್ತಾ, ‘ಮಕ್ಕಳೇ, ನಿಮ್ಮಲ್ಲಿ ಅತಿ ಕುಳ್ಳಗಿನ ಹುಡುಗ ಯಾರು?’ ಅಂತ ಕೇಳಿದರು. ಎಲ್ಲರೂ ಮುಸಿ ಮುಸಿ ನಗುತ್ತಾ, ‘ರೋಹನ!’ ‘ವಾಮನ!’ ಅಂತ ಬೊಬ್ಬಿಟ್ಟರು. ರೋಹನನಿಗೆ ಆಶ್ಚರ್ಯದ ಜತೆ ಆಘಾತ. ಎಂದೂ ತನ್ನನ್ನು ಗೇಲಿ ಮಾಡದ ಮಿಸ್ ಇವತ್ತು ಯಾಕೆ ಹೀಗಾಡುತ್ತಿದ್ದಾರೆ?

ಗಂಗಾ ಮಿಸ್ ಮಾತು ಮುಂದುವರಿಸಿದರು, ‘ಎತ್ತರವಾಗಲು ಔಷಧಿ ಇದೆ...!’ ಎಲ್ಲರೂ ಅತ್ಯಾಶ್ಚರ್ಯದಿಂದ ಮಿಸ್ ಮಾತುಗಳನ್ನು ಕೇಳತೊಡಗಿದರು. ಎತ್ತರವಾಗಲಿಕ್ಕೆ ಔಷಧಿ ಇದೆಯಾ? ನಂಬಲಾಗುತ್ತಿಲ್ಲ ಯಾರಿಗೂ. ‘ನಮ್ಮ ರೋಹನ ಆಟಗಳಲ್ಲಿ, ಇತರ ಸ್ಪರ್ಧೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಬಹುಮಾನ ಗಳಿಸಿರುವವನು. ಈಗ ಈ ವಾರ್ಷಿಕ ಪರೀಕ್ಷೆಗಳಲ್ಲಿ ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾನೆ..!’ ಅನ್ನುತ್ತಿರಬೇಕಾದರೆ ಎಲ್ಲರೂ ಹೊಡೆದ ಚಪ್ಪಾಳೆಯ ಶಬ್ದ ಶಾಲೆಯೊಳಗೆಲ್ಲ ತುಂಬಿಕೊಂಡಿತು.

‘ರೋಹನ...’ ಎಂದು ಮಿಸ್ ರೋಹನನನ್ನು ಹತ್ತಿರ ಕರೆದರು. ‘ಎತ್ತರವಾಗಲು ಇರುವ ಔಷಧಿ ನಿನಗೆ ಈಗಾಗಲೇ ಸಿಕ್ಕಿದೆ. ಅದೇ ಆತ್ಮವಿಶ್ವಾಸ ಮತ್ತು ಪ್ರಯತ್ನ. ಅದರಿಂದಾಗಿ ನೀನು ಈಗ ಎಲ್ಲರಿಗಿಂತ ಹೆಚ್ಚು ಎತ್ತರದವನಾಗಿಬಿಟ್ಟೆ! ಉಳಿದ ಎಲ್ಲರೂ ನಿನಗಿಂತ ಕೆಳಗಿದ್ದಾರೆ ನೋಡು!’ ಅಂದರು ಮಿಸ್.

ರೋಹನನಿಗೆ ಅರ್ಥವಾಯ್ತು. ಉಳಿದ ಮಕ್ಕಳಿಗೂ ಅರ್ಥವಾಯ್ತು. ರೋಹನನ ಕಣ್ಣುಗಳಿಂದ ನೀರು ಇಳಿಯುತ್ತಿತ್ತು. ಮಿಸ್ ಕಾಲು ಹಿಡಿದು ಅವನು, ‘ನನಗೆ ಈ ಔಷಧಿ ಕೊಟ್ಟದ್ದು ನೀವೇ ಮಿಸ್! ಥ್ಯಾಂಕ್ಯೂ!’ ಅಂದ. ವಾಮನ ಈಗ ತ್ರಿವಿಕ್ರಮನಾಗಿದ್ದ! ‘ಕುಳ್ಳ’ ಅಂತ ಕರೆದರೆ ಬೇಸರವಾಗದಿರುವಷ್ಟು ಎತ್ತರಕ್ಕೆ ಅವನು ಏರಿದ್ದ. ಆತ್ಮವಿಶ್ವಾಸ ಬೆಳೆಸಿಕೊಂಡಿದ್ದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT