ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ

Last Updated 27 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಗಣಹೋಮ ಬೆಳಿಗ್ಗೆ ಎಂಟು ಗಂಟೆಗೆ ನಿಗದಿಯಾಗಿತ್ತು. ಕೆಂಪಮ್ಮ ಏಳೂವರೆಗೆ ಬಂದು ಗುಡಿಸಿ, ಸಾರಿಸಿ ಸ್ವಚ್ಚಗೊಳಿಸಿದ್ದಳು. ವಲಯ ಪ್ರಬಂಧಕರು ಗಣಹೋಮಕ್ಕೆ ಬರುವವರಿದ್ದುದರಿಂದ ಬ್ಯಾಂಕ್ ಮ್ಯಾನೇಜರ್ ಸಿದ್ಧರಾಮಪ್ಪ ಸಿಬ್ಬಂದಿಗೆ ಬೇಗನೆ ಬರುವಂತೆ ಆದೇಶ ನೀಡಿದ್ದರು.

ಗಣಹೋಮ ಮಾಡುವ ತೀರ್ಮಾನವಾಗಿದ್ದು ಸಿದ್ಧರಾಮಪ್ಪ ವಲಯ ಪ್ರಬಂಧಕರನ್ನು ಭೇಟಿಯಾದ ಸಂದರ್ಭದಲ್ಲಿ.ತ್ರೈಮಾಸಿಕ ಪ್ರಗತಿ ಪರಿಶೀಲನೆಗೆ ವಲಯಕಚೇರಿಯಲ್ಲಿ ಎಲ್ಲಾ ಶಾಖೆಗಳ ಮ್ಯಾನೇಜರುಗಳ ಸಭೆಯನ್ನು ಕರೆಯಲಾಗಿತ್ತು. ಕೆಲವು ಶಾಖೆಗಳಲ್ಲಿ ಅನುತ್ಪಾದಕ ಸಾಲಗಳು ಏರು ಮಟ್ಟದಲ್ಲಿದ್ದು,ಸಾಲ ವಿತರಣೆಯಲ್ಲಿಯೂ ತೀವ್ರ ಕಡಿತ ಉಂಟಾಗಿತ್ತು. ಅವುಗಳಲ್ಲಿ ಸಿದ್ಧರಾಮಪ್ಪನ ಶಾಖೆಯೂಒಂದು.

ಸಿದ್ಧರಾಮಪ್ಪನ ಸರದಿ ಬಂದಾಗ ನೆರೆದಿದ್ದ ಎಲ್ಲರ ಎದುರಲ್ಲಿ ಅವರ ಕೆಲಸ ತೃಪ್ತಿಕರವಾಗಿಲ್ಲವೆಂದೂ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅನುತ್ಪಾದಕ ಸಾಲವನ್ನು ಶೇಕಡಾ ನಾಲ್ಕಕ್ಕಿಂತ ಕೆಳಗಿಳಿಸದಿದ್ದರೆ ಗಂಟು ಮೂಟೆಕಟ್ಟಲು ಸಿದ್ಧರಾಗಿರಬೇಕೆಂದೂ ವಲಯಾಧಿಕಾರಿ ನಿಷ್ಠುರವಾಗಿ ಹೇಳಿದರು. ಸರಿಯಾಗಿ ಪರಿಶೀಲನೆ ಮಾಡದೆ, ಹಿಂದಿನವರ ಅವಧಿಯಲ್ಲಿ ಎರ‍್ರಾಬಿರ‍್ರಿ ಸಾಲ ನೀಡಿದ್ದು ಇದಕ್ಕೆ ಕಾರಣ ಎಂದು ಸಿದ್ಧರಾಮಪ್ಪ ಅಂಕಿ ಅಂಶಗಳ ಸಮೇತ ಹೇಳಲು ಸಿದ್ಧರಿದ್ದರೂ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ.

ಸಭೆ ಮುಗಿಸಿ ಭಾರವಾದ ಮನಸ್ಸಿನಿಂದ ಸಿದ್ಧರಾಮಪ್ಪ ವಲಯ ಕಚೇರಿಯ ಮೆಟ್ಟಲು ಇಳಿಯುತ್ತಿದ್ದಾಗ ಮೊಬೈಲ್‌ಗೆ ವಲಯ ಪ್ರಬಂಧಕರಕರೆ ಬಂತು.ಇನ್ನೇನು ಹಾಕಿ ತುರುಬುತ್ತಾರೋ ಎನ್ನುವ ಆತಂಕದಲ್ಲಿ ಸಿದ್ಧರಾಮಪ್ಪ ಕಚೇರಿಗೆ ಹೋದರು.

ಮುಖದ ಬಿಗುವು ಸಡಿಲಿಸಿದ್ದ ವಲಯ ಪ್ರಬಂಧಕರು ‘ಟೇಕ್‌ಯುವರ್ ಸೀಟ್’ ಎಂದು ಹೇಳಿ ‘ನಿಮಗೆ. ತುಂಬಾ ಬೇಜಾರಾಯಿತು ಎಂದುಕಾಣಿಸುತ್ತದೆ’ ಎಂದು ಸಮಾಧಾನಿಸುವ ಧಾಟಿಯಲ್ಲಿ ಮಾತನಾಡಿದರು.ಸಿದ್ಧರಾಮಪ್ಪ ಉತ್ತರಕೊಡಲಿಲ್ಲ. "ನೋಡಿ ಮಿಸ್ಟರ್ ಸಿದ್ಧರಾಮಪ್ಪ, ಬ್ಯಾಂಕಿನ ಪೊಸಿಶನ್ ನಿಮಗೆ ಗೊತ್ತೇಇದೆ.ಬ್ಯಾಂಕು ಉಳಿಯಬೇಕಾದರೆ ನಾವು ಹೆಚ್ಚು ಎಫರ್ಟ್ ಹಾಕಲೇಬೇಕು. ನಿಮ್ಮ ಟ್ರ್ಯಾಕ್‌ ರೆಕಾರ್ಡ್‌ ಚೆನ್ನಾಗಿದೆ. ಆದರೆ ಈ ಬ್ರಾಂಚಿಗೆ ಬಂದಆರು ತಿಂಗಳಲ್ಲಿ ನೀವು ಏನೂ ಇಪ್ರೂವ್‌ಮೆಂಟ್ ತೋರಿಸಿಲ್ಲ.ಅದಕ್ಕೆ ಜೋರಾಗಿ ಮಾತಾಡಬೇಕಾಯಿತು"ಎಂದು ಹೇಳಿ ಸಿದ್ಧರಾಮಪ್ಪನ ಪ್ರತಿಕ್ರಿಯೆಗೆಕಾದರು.

‘ಸರ್,ಲೋನ್‌ಡಾಕ್ಯುಮೆಂಟ್ಸ್ ಸರಿ ಇರಲಿಲ್ಲ .ಕೆಲವರುರಾಂಗ್‌ ಅಡ್ರೆಸ್‌ಕೊಟ್ಟಿದ್ದಾರೆ. ಇವನ್ನೆಲ್ಲಾ ಸರಿ ಮಾಡುವುದಕ್ಕೇ ಇಷ್ಟು ಸಮಯ ಆಯಿತು’

‘ಅದೆಲ್ಲಾ ಸಣ್ಣ,ಪುಟ್ಟ ಸಮಸ್ಯೆಗಳು.ಬ್ರಾಂಚ್ ಹೆಡ್‌ಆದ ಮೇಲೆ ನೀವದನ್ನು ಸರಿ ಮಾಡಬೇಕು’

‘ಮಾಡ್ತೇನೆ ಸರ್. ನಮ್ಮ ಬ್ರಾಂಚಲ್ಲಿ ಮಾತ್ರ ಡಿಪಾಸಿಟ್ಸ್ ಕಡಿಮೆ ಆಗಿದ್ದಲ್ಲ. ಪಕ್ಕದಲ್ಲಿಎರಡು ಬ್ಯಾಂಕ್‌ಗಳಿವೆ. ಅವರ ಫಿಗರ್‍ರೂ ಮಾರ್ಚ್‌ಗಿಂತ ಕೆಳಗಿದೆ’

‘ನೋಡಿ, ನನಗೆ ಅದೆಲ್ಲಾ ಬೇಡ. ನಿಮ್ಮ ಮೇಲೆ ನನಗೆ ವಿಶ್ವಾಸಇದೆ.ಮುಂದಿನ ಕ್ವಾಟರ್‌ಗೆ ಟಾರ್ಗೆಟ್‌ ರೀಚ್ ಆಗಬೇಕು’ ಮಾತು ಮುಗಿಸುವ ದಾಟಿಯಲ್ಲಿ ವಲಯ ಪ್ರಬಂಧಕರು ಹೇಳಿದರು.

‘ಪ್ರಯತ್ನ ಮಾಡುತ್ತೇನೆ ಸಾರ್’ ಸಿದ್ಧರಾಮಪ್ಪ ಎದ್ದರು.

"ಅಂದ ಹಾಗೆ ಇನ್ನೊಂದು ಮಾತು,ಆರು ತಿಂಗಳಿಂದ ಯಾವ ಪ್ಯಾರಾ
ಮೀಟರೂ ರೀಚ್‌ ಆಗಿಲ್ಲ. ನಿಮ್ಮ ಬ್ರಾಂಚಲ್ಲಿ ಏನೋ ಸಮಸ್ಯೆಯಿದೆ. ಯಾಕೆ ಪರಿಹಾರಕ್ಕಾಗಿ ಒಂದು ಗಣಹೋಮ ಮಾಡಬಾರದು?"

‘ಆಯಿತು ಸಾರ್. ಮಾಡ್ತೇನೆ’

ಒಪ್ಪಿಕೊಂಡಿದ್ದರು ಸಿದ್ಧರಾಮಪ್ಪ.

ಭಟ್ಟರು ಬಂದು ಹೋಮಕ್ಕೆ ಪರಿಕರಗಳನ್ನು ಸಿದ್ಧಮಾಡುವಷ್ಟರಲ್ಲಿ ಸಿಬ್ಬಂದಿಯೆಲ್ಲಾ ಬಂದಾಗಿತ್ತು. ಸಿದ್ಧರಾಮಪ್ಪ ಬಂದಿದ್ದೇ ಸ್ವಲ್ಪತಡವಾಗಿ.ಗಣಹೋಮಕ್ಕೆ ಇಬ್ಬರು ಕುಳಿತುಕೊಳ್ಳಬೇಕೆಂದು ಭಟ್ರು ಹೇಳಿದ್ದರಿಂದ ಅವರ ಹೆಂಡತಿ ಮಂಜುಳಾ ರೇಷ್ಮೆ ಸೀರೆ ಉಟ್ಟುಕೊಂಡು ಬಂದಿದ್ದರು.

ಎಂಟುಗಂಟೆಗೆ ಸರಿಯಾಗಿ ವಲಯ ಪ್ರಬಂಧಕರು ಆಗಮಿಸಿದರು.ಸಿಬ್ಬಂದಿಗೆ ಹಸ್ತಲಾಘವ ನೀಡಿ ಹೋಮದ ವ್ಯವಸ್ಥೆಯನ್ನು ಪರಿಶೀಲಿಸಿ ಸಂತೃಪ್ತಿ ವ್ಯಕ್ತಪಡಿಸಿದರು.

ಭಟ್ರು ಹೋಮಕುಂಡವನ್ನಿಟ್ಟು ಹೋಮಕರ್ತರನ್ನು ಆಸೀನರಾಗುವಂತೆ

ಕೋರಿದರು. ಮಹಿಳಾ ಸಿಬ್ಬಂದಿಯ ಜತೆಯಲ್ಲಿ ಹೆಂಡತಿ ಮಾತುಕತೆಯಲ್ಲಿ ನಿರತರಾಗಿದ್ದರು. ಅವರನ್ನು ಕರೆದ ಸಿದ್ಧರಾಮಪ್ಪ ಕುಳಿತುಕೊಳ್ಳಲು ಸಿದ್ಧರಾದರು.

ಭಟ್ಟರು ಸಿದ್ಧರಾಮಪ್ಪಗೆ ‘ಶರ್ಟ್‌ತೆಗೆಯಿರಿ’ ಎಂದರು.

ಸಿದ್ಧರಾಮಪ್ಪ ತೋಳಿರುವ ಅಂಗಿಯನ್ನು ಇನ್‌ಶರ್ಟ್ ಮಾಡಿ ಬ್ಯಾಂಕಿಗೆ ಬರುವುದು ಪದ್ಧತಿ. ಎದೆಯ ಮೇಲೆ ದಟ್ಟವಾಗಿ ಹಬ್ಬಿರುವರೋಮವನ್ನು ಮರೆ ಮಾಚಲು ಕುತ್ತಿಗೆಯ ವರೆಗೂ ಬಟನ್ ಹಾಕುತ್ತಾರೆ.ರೋಮ ಅಸಹ್ಯವಾಗಿ ಕಾಣುತ್ತದೆಂದು ಆರ್ಧ ತೋಳಿನ ಶರ್ಟ್‌ ಅವರು ಹಾಕುತ್ತಲೇ ಇರಲಿಲ್ಲ. ಗೆಳೆಯರ ಮುಂದೆ ಕೂಡಾ ಅಂಗಿ ಬಿಚ್ಚದ ಅವರಿಗೆ ಬ್ಯಾಂಕ್ ಸಿಬ್ಬಂದಿಯ ಎದುರು ಶರ್ಟ್ ಬಿಚ್ಚಲು ಇರುಸು ಮುರುಸುಆಯಿತು.

ಮುಂಜುಳಾ ಹೋಮಕುಂಡದ ಮುಂದೆಕೂತಾಗಿತ್ತು. ಏನು ಮಾಡುವುದೆಂದು ತೋಚದೆ ಸಿದ್ಧರಾಮಪ್ಪ ಅತ್ತಿತ್ತ ನೋಡಿದರು.

‘ತಡ ಮಾಡಬೇಡಿ. ಹತ್ತು ಗಂಟೆಗೆ ಬ್ರಾಂಚ್‌ ಓಪನ್ ಆಗಬೇಕು’ ವಲಯಾಧಿಕಾರಿ ಹೇಳಿದರು.

ಭಟ್ರು ಕೂಡಾ ‘ಬನ್ನಿ,ಬನ್ನಿ’ಎಂದು ಕರೆಯುತ್ತಿದ್ದರು.

‘ಸರ್,ನೀವು ಕೂತುಕೊಂಡ್‌ಬಿಡಿ’ಸಿದ್ಧರಾಮಪ್ಪ ವಲಯ ಪ್ರಬಂಧಕರಿಗೆ ಹೇಳಿ ಬಿಟ್ಟರು.

‘ನೀವು ಯಾಕೆಕೂರಲ್ಲ?’

‘ಅದು.....ಆಮೇಲೆ ಹೇಳ್ತಿನಿ ನೀವು ಕೂತುಕೊಳ್ಳಿ’ಅಂದರು ಖಚಿತವಾಗಿ ಸಿದ್ಧರಾಮಪ್ಪ.

ವಲಯಾಧಿಕಾರಿಯವರು ಅಂಗಿ ಬಿಚ್ಚತೊಡಗಿದರು.

ಸಿದ್ಧರಾಮಪ್ಪನವರ ಹೆಂಡತಿ ಮಂಜುಳಾ ಮೇಕ್‌ಶಿಪ್ಟ್ ಹೋಮಕುಂಡವನ್ನು ನೋಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT