ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜ ಅಳಿಸಲಿಲ್ಲ...

ಕಥೆ
Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಫೋನ್ ಒಂದೇ ಸಮನೆ ರಿಂಗಣಿಸತೊಡಗಿತು. ಸ್ಥಿರ ಫೋನ್ ಆದ್ದರಿಂದ ಅಡಿಗೆಯವರಲ್ಲದೆ ನಾವು ಮುಟ್ಟುವಂತಿಲ್ಲ. ಫೋನಲ್ಲಿ ಮಾತಾಡಿ ಇಟ್ಟವರೆ ನನ್ನನ್ನು ಕರೆದು ನೀನು ಅಜ್ಜಿ ಮನೆಗೆ ಹೋಗಬೇಕಂತೆ ಎಂದು ಅಡಿಗೆಯವರು ಹೇಳಿದರು.
“ಯಾಕೆ?”

“ಅಜ್ಜ ಸತ್ತಿದ್ದಾರಂತೆ...”
“ಅಜ್ಜನಾ...!” 
ಅವರು ಮತ್ತೆ ತಮ್ಮ ಕೆಲಸ ಮುಂದುವರಿಸಿದರು. ನಾನು ಕುಳಿತು ಲೆಕ್ಕ ಹಾಕಿದೆ. ಅಜ್ಜಿ ಮನೆಯಿರುವುದು ಉಪ್ಪಿನಂಗಡಿಯಲ್ಲಿ. ವಾಮದಪದವಿನಿಂದ ಪುಂಜಾಲಕಟ್ಟೆಗೆ ಗವರ‌್ನಮೆಂಟು ಬಸ್ಸು, ಅರ್ಧ ಟಿಕೇಟು ಇಲ್ಲ, 12 ರೂಪಾಯಿ... ಅಲ್ಲಿಂದ ಉಪ್ಪಿನಂಗಡಿಗೆ ಶಾರದ ಬಸ್ಸು. ವಿದ್ಯಾರ್ಥಿಗಳಿಗೆ ಸಿ.ಆರ್ ಇದೆ. 6 ರೂಪಾಯಿ ಅಂದರೆ ಒಟ್ಟು 18... ಇಲ್ಲದ ದುಡ್ಡಿಗಾಗಿ 9ನೇ ತರಗತಿಯ ಮಹೇಶ ಅಣ್ಣನಲ್ಲಿ `20 ರೂಪಾಯಿ ಕೊಡು, ಅಷ್ಟಿಲ್ಲದಿದ್ದರೂ ಹದಿನೆಂಟಾದರೂ ಕೊಡು' ಎಂದೆ. ಕೊಟ್ಟದ್ದು 20. ಅಂದರೆ 2 ರೂಪಾಯಿ ಉಳಿಯಿತು.

ಚಾಕಲೇಟಿಗಾಯಿತು. ಅಜ್ಜ ಸತ್ತಿದ್ದಾನೆಂದರೆ ಏನಿಲ್ಲವೆಂದರೂ ಸ್ವಲ್ಪ ನೆಂಟರಿರುತ್ತಾರೆ... ಒಳ್ಳೆಯ ಅಂಗಿ ಹಾಕಬೇಕು. ಶಾಲೆಯ ಬ್ಯಾಗ್ ಹೆಗಲಿಗೇರಿಸಿಕೊಂಡು ಹಾಸ್ಟೆಲ್ ಬಿಟ್ಟೆ. 

ಉಳಿಯಲಿರುವ 2 ರುಪಾಯಿಯ ಚಾಕಲೇಟು ಈಗಲೇ ತಿನ್ನಲಾ ಅಥವಾ ಮತ್ತೆ; ಅಂದ ಹಾಗೆ ಸತ್ತದ್ದು ಅಜ್ಜನಾ ಅಥವಾ ಅಜ್ಜಿಯಾ?... ಅಜ್ಜನಿಗಿಂತ ಅಜ್ಜಿ ಹೆಚ್ಚು ಮುದುಕಿಯಾಗಿದ್ದಳು. ಕಣ್ಣು ಕಾಣುವುದೂ ಅಷ್ಟಕಷ್ಟೆ... ಮೊನ್ನೆ ನಾನು ಹಾಕಿದ್ದ ಹಳದಿ ಅಂಗಿಯನ್ನು ಬಿಳಿ ಅಂಗಿಯೆಂದೂ, ಮಕ್ಕಳು ಬಿಳಿ ಅಂಗಿ ಹಾಕಬಾರದೆಂದಳು. ಅಜ್ಜ ನೆಟ್ಟಗಿದ್ದ. ಒಂದ್ಸ್ವೊಲ್ಪ ಕೂದಲು ಉದುರಿ, ಇದ್ದ ಕೂದಲುಗಳು ಬಿಳಿಯಾಗಿದ್ದು ಬಿಟ್ಟರೆ  ಮುಖದಲ್ಲಿ ಮುದುಕತನದ ಅಚ್ಚಿರಲಿಲ್ಲ. ಥೇಟ್ ನಮ್ಮ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪನ ಹಾಗೆಯೇ ಇದ್ದ. ಹಾಸ್ಟೆಲ್‌ನಲ್ಲಿ ವಾರ್ತೆ ನೋಡುತ್ತಾ ಗೆಳೆಯರಲ್ಲಿ `ಅಜ್ಜನ ಹಾಗೆಯೇ ಯಡ್ಯೂರಪ್ಪ!' ಅಂದಿದ್ದೆ.

ಏನೇ ಆಗಲಿ ಉಳಿದ 2 ರೂಪಾಯಿಯಲ್ಲಿ ಫೋನ್ ಮಾಡಿದರಾಯ್ತು. ಕಾಯಿನ್ ಹಾಕಿ ನಂಬರ್ ಒತ್ತಿದೆ. ಎತ್ತಿಕೊಂಡದ್ದು ಅಪ್ಪ, ಸತ್ತದ್ದು ಅಜ್ಜನೇ ಅಂದ. ನಂತರ `ಬೇಗ ಬಾ ಜಾಗ್ರತೆ' ಬಾಯಿಪಾಠ ಮಾಡಿಟ್ಟಂತೆ ಹೇಳಿ ದಡಕ್ಕನೆ ಫೋನಿಟ್ಟ. ಈ ಅಪ್ಪನಿಗೇನಾಯ್ತು? ನಾನು ಫೊನ್ ಮಾಡಿದರೆ ಹೇಗಿದ್ದೀಯಾ? ಅಂತ ಕೇಳುವಲ್ಲಿಂದ ಹಿಡಿದು ನನಗೆ ನೀನಿಲ್ಲದೆ ಉರುವಾಗುತ್ತದೆ, ನೀನು ನಾಡಿದ್ದು ಶನಿವಾರ ಬರುವಾಗ 30 ರೂಪಾಯಿಯ ಬಂಗುಡೆ ತೆಗೆದಿಡುತ್ತೇನೆ... ಹೀಗೆ ತುಂಬಾ ಮಾತಾಡುತ್ತಿದ್ದ ಅಪ್ಪ ಇವತ್ತು ಯಾಕೆ ಇಷ್ಟು ಬೇಗ ಫೋನಿಟ್ಟ. ಹ್ಹ... ನೆಂಟರಿದ್ದಾರಲ್ಲ ಮಾತನಾಡುತ್ತಿರಬೇಕು. ಆಡಿದ್ದು ಹೆಚ್ಚೆಂದರೆ 10-12 ಸೆಕೆಂಡು ಮಾತು. ಒಂದು ನಿಮಿಷಕ್ಕಾಗಿ ಹಾಕಿದ ಕಾಯಿನ್ ಮತ್ತೆ ಬರಲಾರದೆ?... ಕೊಂಡಿಯನ್ನು ಹಿಡಿದೆಳೆದು ಅಲುಗಾಡಿಸಿದೆ. ಅಂಗಡಿಯಲ್ಲಿದ್ದ ಅದರ ಮಾಲೀಕ “ಅದೇನು ಎಳೆಯುತ್ತಿಯಾ?... ಇಲ್ಲಿಂದ ಹೋಗ್ತಿಯೋ ಇಲ್ಲವೋ?...” ಎಂದು ಗದರಿದ. ಅವನಿಗೆ ಸಮಾಧಾನವಾಗಲೆಂದು ಉಳಿಯಲಿರುವ 1 ರೂಪಾಯಿಯ ಚಾಕಲೇಟು ಅವನ ಅಂಗಡಿಯಿಂದಲೇ ಕೊಂಡೆ. ಎರಡು ಚಾಕಲೇಟು. ಒಂದನ್ನು ಬಾಯಿಗೆ ಹಾಕಿಕೊಂಡು ಇನ್ನೊಂದು ಮಡಂತ್ಯಾರು ದಾಟಿದ ಮೇಲೆ ತಿನ್ನಲೆಂದು ತೆಗೆದಿಟ್ಟೆ.

ಗವರ್ನಮೆಂಟು ಬಸ್ಸು ಬಂತು. ಸೀಟುಗಳು ಖಾಲಿ ಇರಲಿಲ್ಲ. ಅಂಗಿ ಪ್ಯಾಂಟನ್ನು ತುರುಕಿಕೊಂಡ ಬ್ಯಾಗ್‌ಅನ್ನು ಕುಳಿತಿದ್ದ ಒಬ್ಬ ಯುವಕನ ತೊಡೆಗೆ ಹಸ್ತಾಂತರಿಸಿದೆ. ಆ ವ್ಯಕ್ತಿ ದುರುಗುಟ್ಟಿ ನೋಡಿದ. ಮೆಲ್ಲ ಬ್ಯಾಗನ್ನು ಮರಳಿ ತೆಗೆದು ಬೆನ್ನಿಗೆ ಹಾಕಿಕೊಂಡೆ. ಅಂದ ಹಾಗೆ ಸತ್ತದ್ದು ಅಜ್ಜ... ಆದರೆ ಸತ್ತದ್ದು ಹೇಗೆ? ಅಮ್ಮನಲ್ಲಿ ಮೊನ್ನೆ ಮಾತನಾಡುತ್ತಾ ಅಜ್ಜನಿಗೆ ವಯಸ್ಸೆಷ್ಟು ಎಂದು ಕೇಳಿದ್ದೆ. 65 ಎಂದರು. ಅಂದರೆ ಅಜ್ಜನಿಗೆ 35 ವರ್ಷವಿದೆ ಸಾಯಲು- ಲೆಕ್ಕ ಹಾಕಿ ಹೇಳಿದ್ದೆ. ತರಗತಿಯಲ್ಲಿ ವಿಜ್ಞಾನದ ಮೇಡಮ್ ಪಾಠ ಮಾಡುತ್ತಾ ಮನುಷ್ಯ ಹೆಚ್ಚೆಂದರೆ 100 ವರ್ಷ ಬದುಕುತ್ತಾನೆ ಎಂದಿದ್ದರು. ಅಜ್ಜಿಗೆ ಉಳಿದದ್ದು 46, ಅಮ್ಮನಿಗೆ 63. ಅಲ್ಲಿಯವರೆಗೆ ಅಮ್ಮ ಸುಮ್ಮನೆ ನಕ್ಕಿದ್ದಳು. ನನಗೆ ಸಾಯಲು 88 ವರ್ಷವಿದೆ ಎಂದಾಗ ಅಮ್ಮ ಬೈದು ಹೊರಗಟ್ಟಿದ್ದಳು.

ಮಡಂತ್ಯಾರು ಮುಟ್ಟುತ್ತಿದ್ದಂತೆ ಶಾರದ ಬಸ್ಸು ಮಡಂತ್ಯಾರಿನಲ್ಲಿ ನಿಂತಿತ್ತು. ಆ ಬಸ್ಸು ಉಪ್ಪಿನಂಗಡಿಗೆ ಹೋಗುವ ಮೊದಲು ಮಡಂತ್ಯಾರಿನಲ್ಲಿ ಸ್ವಲ್ಪ ಹೊತ್ತು ವಿರಮಿಸುವುದು ರೂಢಿ. ಬಸ್ಸು ಹೊರಟು ಮುಂದಿನ ಸ್ಟ್ಯಾಂಡ್ನಲ್ಲಿ ನಿಂತು ಬರುವವರನ್ನು ತುಂಬಿಸಿಕೊಳ್ಳುತ್ತಿರುವಾಗ ನನಗೆ ನೋಡಿ ಪರಿಚಯವಿರುವ, ಸಂಬಂಧಿಕರೂ ಆಗಿರಬಹುದಾದ ಒಬ್ಬರು ಅಂಗಡಿಯಲ್ಲಿ ನಿಂತು ಕೈ ಭಾಷೆಯಲ್ಲಿ ಏನೋ ಹೇಳಿದರು. ನಾನು ಟಾಟಾ ಮಾಡಿದ್ದೆಂದು ತಲೆ ಹೊರಗೆ ಹಾಕಿ ಕೈ ಬೀಸಿದೆ. ಕಂಡಕ್ಟರ್ ತಲೆಗೆ ಕುಟ್ಟಿದಾಗಲೇ ಗೊತ್ತಾದದ್ದು...
ಉಳಿದಿರುವ ಇನ್ನೊಂದು ಚಾಕಲೇಟನ್ನು ಬಾಯಿಗೆ ಹಾಕಿಕೊಂಡು ಟಿಕೇಟಿನ 6 ರೂಪಾಯಿ ಕಂಡಕ್ಟರ್‌ನ ಕೈಗಿಟ್ಟು `ಉಪ್ಪಿನಂಗಡಿ' ಎಂದೆ.
`ಎಷ್ಟಿದೆ ಇದರಲ್ಲಿ' ಎಂದು ಕೇಳಿದ.

`6'
`ಈಗ 7'
`ಅರ್ಧ ಟಿಕೇಟು ಶಾಲೆಗೆ ಹೋಗುತ್ತೇನೆ'.
`ಅದೇ ಮಕ್ಕಳಿಗೆನೇ 7' ಅಂದ.
ಇಲ್ಲ ಅಂದದ್ದಕ್ಕೆ ಚಾಕಲೇಟಿಗೆ ದುಡ್ಡಿದೆಯಾ? ಎಂದು ಕೇಳಿದ. ಚಾಕಲೇಟನ್ನು ನುಂಗಿಕೊಂಡು ಬಗ್ಗಿ ಕುಳಿತೆ. ಎದುರಲ್ಲಿ ಕೂತಿದ್ದವರೊಬ್ಬರಲ್ಲಿ ಜೋರು ಧ್ವನಿಯಲ್ಲಿ ಹೇಳಲಾರಂಭಿದ. “ಈ ಮಕ್ಕಳು ದುಡ್ಡು ಸರಿ ಕೊಡೋದಿಲ್ಲ ಗಟ್ಟಿ ತಿಂಡಿ ತಿಂದು ಬಸ್ಸಿನವರಿಗೆ ಒಂದೆರಡು ರೂಪಾಯಿ ಕಡಿಮೆ ಕೊಡುವವರೆ, ನಾಳೆಯಿಂದ ಭರ್ತಿ ಚಿಲ್ಲರೆ ತರದಿದ್ದರೆ ಬಸ್ಸಿಗೆ ಹತ್ತಲಿಕ್ಕೆ ಬಿಡೋದಿಲ್ಲ”. ಎಲ್ಲರೂ ನನ್ನನ್ನೇ ನೋಡಿದರು. ನಾನು ಬಗ್ಗಿಯೇ ಕುಳಿತೆ. `ಒಂದು ಸ್ಟಾಪ್ ಈಚೆನೆ ಇಳಿಸ್ತೆನೆ ನಿಮಗೆ ಬುದ್ಧಿ ಬರಬೇಕು' ಎದುರಿನಿಂದಲೇ ಮತ್ತೊಮ್ಮೆ ಅಬ್ಬರಿಸಿದ.

ಅಳಬೇಕೆನಿಸಿತು ಸುಮ್ಮನಾದೆ. ಒಳ್ಳೆಯ ಜನ ಇಳಿಯಬೇಕಾದ ಸ್ಟಾಪ್‌ನಲ್ಲೇ ಇಳಿಸಿದ, `ಪಾಪ ಕಂಡಕ್ಟರ್' ಅಂದುಕೊಂಡೆ.
ಬಸ್ಸಿನಿಂದಿಳಿದು ಹೆಚ್ಚು ಕಡಿಮೆ ಅಜ್ಜಿ ಮನೆಗೆ ಅರ್ಧ ಗಂಟೆ ನಡೆಯಲಿಕ್ಕಿದೆ. ಮಾರ್ಗ ಇದೆಯಾದರೂ ರಿಕ್ಷಾದವರೇನು ಧರ್ಮಕ್ಕೆ ಬಿಟ್ಟು ಬರ‌ತ್ತಾರ?
ಇಳಿದಲ್ಲಿಂದಲೇ ಚಂದದ ಚಪ್ಪಟೆಯ ಕಲ್ಲನ್ನು ಎತ್ತಿಕೊಂಡೆ. ಕುಟ್ಟುತ್ತಾ ಕಡೆಯವರೆಗೆ ಮುಟ್ಟಿಸಬೇಕು. ಪಾಪಿನಲ್ಲಿ ಕೈಯಲ್ಲಿ ಹಿಡಿದುಕೊಂಡು ಹೋದರಾಯಿತು.

ಅಜ್ಜ !. ಅಜ್ಜ ಕೇವಲ ಆ ಪದವಿಯಿಂದ ಮಾತ್ರ ಗೌರವ ಪಡೆದಿದ್ದ. ಅಜ್ಜಿ ಮನೆಗೆ ಹೋದಾಗಲೆಲ್ಲ ಅವನು ಇದ್ದದ್ದು ಕಡಿಮೆಯೇ. ಆತನೊಂಥರ ನಾರದನಿದ್ದ ಹಾಗೆ. ಇದ್ದ ಅವನ ನಾಲ್ಕೈದು ತಂಗಿಯರ ಮನೆಗೆ, ನಮ್ಮ ಅಂದರೆ ಮಗಳ ಮನೆಗೆ, ಇನ್ನು ಸಂಬಂಧಿಕರ ಮನೆಗೆ ಹೋಗಿ ನಾಲ್ಕು ದಿನವೋ ವಾರವೋ ಕುಳಿತು ಬರುತ್ತಿರಬೇಕಾದರೆ ಮನೆಯಲ್ಲಿ ಕೂರಲು ಸಮಯವೆಲ್ಲಿರುತ್ತದೆ? ಸ್ವಂತ ಮನೆಯಲ್ಲಿರೋದು ತಿಂಗಳಿಗೆ ಮೂರು ನಾಲ್ಕು ದಿನಗಳಷ್ಟೆ. ಅದೂ ಇನ್ನು ಸಂಬಂಧಿಕರ ಮನೆಯಲ್ಲಿ ಮದುವೆ ಮುಂಜಿ ಇದ್ದರೆ ಮುಗಿಯಿತು ಕಥೆ. ವಾರದ ಮೊದಲು ಹೋದವ ಕಾರ‌್ಯಕ್ರಮ ಮುಗಿದು ವಾರ ಕಳೆಯುವವರೆಗೆ ಕದಲುವವನಲ್ಲ. ಹಾಗೆ ಹೋದಲ್ಲೆಲ್ಲಾ ಸುಮ್ಮನೆ ಕೂತಿರುತ್ತಾನೆ ಎಂದು ಅನ್ಕೋಬೇಡಿ. ಅಲ್ಲೆಲ್ಲಾ ಸಣ್ಣ ಸಣ್ಣ ಕೆಲಸಕ್ಕೆಲ್ಲಾ ಇವನನ್ನೆ ಅವಲಂಬಿಸಿದವರು ಹೆಚ್ಚು.

ಆದರೆ ದುಡಿದು ತಿನ್ನುವ ಜಾತಿಯಲ್ಲ ಅವನದು . ಹೆಚ್ಚೆಂದರೆ ಹೋದಲ್ಲೆಲ್ಲಾ ಚಿಕ್ಕ ಚಿಕ್ಕ ಕೆಲಸ ಮಾಡಿಯಾನು. ಹಾಗಾದರೆ ಒಂದೇ ಸಮನೆ ತಿರುಗಾಡುತ್ತಿರಲು ದುಡ್ಡು ಎಲ್ಲಿಂದ ಬರುತ್ತದೆ? ಅನ್ನುವ ಪ್ರಶ್ನೆ ನಿಮಗೂ ಕಾಡಬಹುದು. ತಿಂಗಳಿಗೆ 400 ರೂಪಾಯಿ ಸರ್ಕಾರದ ದಯೆಯಿಂದ ವೃದ್ಧಾಪ್ಯ ವೇತನ, ಇನ್ನು ಅಜ್ಜಿ ಮನೆಯ ಚಿಕ್ಕ ತೋಟದ ಅಡಿಕೆ ಗಿಡಗಳಿಗೆ ಹಿಡಿ ಮಣ್ಣು ಹಾಕದಿದ್ದರೂ ಒಂದೆರಡು ಕೆ.ಜಿ ಅಡಿಕೆ, ಹತ್ತು-ಹನ್ನೆರಡು ತೆಂಗಿನಕಾಯಿಯನ್ನೋ ಅಜ್ಜಿಯ ಕಣ್ಣು ತಪ್ಪಿಸಿ ಮಾರುತ್ತಾನೆ. ಇನ್ನು ಅವನ ಅಕ್ಕ ತಂಗಿಯರು ನನ್ನ ಅಮ್ಮ, ಎಲ್ಲರೂ ಅವನಿಗೆ ಸ್ವಲ್ಪ ಸ್ವಲ್ಪ ದುಡ್ಡು ಕೊಡುವವರೆ.
ಅಮ್ಮ ಚಿಕ್ಕಂದಿನಲ್ಲಿರುವಾಗ ಊರಲ್ಲಿ ಎಲ್ಲರ ಮನೆಯಲ್ಲೂ ಅನ್ನಕ್ಕೆ ಬರವಂತೆ. ಅಜ್ಜಿ ಸ್ವಲ್ಪ ಗಂಜಿ ಬೇಯಿಸಿ ಅಮ್ಮನಿಗೆ ಕೊಟ್ಟರೆ, ಅವಳು ಸೊಪ್ಪು ಬೇಯಿಸಿ ತಿನ್ನುತಿದ್ದಳಂತೆ. ಆದರೆ ಅಜ್ಜ ಊರ ಧನಿಕನ ಶರಾಬು ಅಂಗಡಿಯಲ್ಲಿ ದಿನದ ಎರಡು ಊಟಕ್ಕೆ, ಒಂದು ಚಹಾ ಸಂಬಳಕ್ಕೆ ಕೆಲಸಕ್ಕಿದ್ದ. ಹಾಗಾಗಿ ಅಜ್ಜನಿಗೆ ದಿನದೂಡುವುದು ಕಷ್ಟವಿರಲಿಲ್ಲ. ಮಗಳ ನೆನಪೂ ಕಾಡಿಲ್ಲವಿರಬೇಕು !

ಕಲ್ಲನ್ನು ಕುಟ್ಟುತ್ತಾ ಕುಟ್ಟುತ್ತಾ ತೋಡಿನ ಬದಿ ಬಂದೆ. ಕಲ್ಲು ನನ್ನ ಹದ ತಪ್ಪಿ ಹರಿಯುತ್ತಿದ್ದ ತೋಡಿಗೆ ಬಿತ್ತು. ಮತ್ತೊಂದು ಕಲ್ಲನ್ನು ಆರಿಸಿಕೊಂಡೆ. ಎದುರಲ್ಲಿ ಒಂದಿಬ್ಬರು ಬರುತ್ತಿರುವುದು ಕಾಣಿಸಿತು. `ನೀನು ಗೋಪಾಲಕೃಷ್ಣನ ಪುಲ್ಲಿ ಅಲ್ವ?'
`ಹೌದು' ನಗುತ್ತಾ ಅಂದೆ.
ನನ್ನನ್ನು ಗುರುತಿಸುವವರೂ ಇದ್ದಾರೆ.
`ಬೇಗ ಹೋಗು ಅಲ್ಲಿ ಎಲ್ಲವೂ ಆಯ್ತು'.
ಆಯ್ತು ಎಂದರೆ... ಕೇಳೋಣವೆಂದರೆ ಅವರು ಹೋಗಿಯಾಯಿತು.
ಕಲ್ಲನ್ನು ಕುಟ್ಟುತ್ತಾ......

ಅಜ್ಜ ಸತ್ತಿದ್ದಾನೆಂದರೆ ಇನ್ನು ಸಂಬಂಧಿಕರ ವರದಿ ಒಪ್ಪಿಸುವವರಿಲ್ಲ. ಅವನಿಗೆ ಚಿಕ್ಕ ಅಕ್ಕ ಎಂದರೆ ಭಾಳ ಪ್ರೀತಿ. ಚಿಕ್ಕಂದಿರುವಾಗ ಅಜ್ಜ ನಮ್ಮನ್ನು ಎತ್ತಿಕೊಂಡದ್ದೂ ಇಲ್ಲವಂತೆ. ದೂರದಲ್ಲೇ ಕೂರಿಸಿ ಆಡಿಸಿದ್ದರಂತೆ. ಮಕ್ಕಳೆಂದರೆ ಅವನಿಗೆ ಅಷ್ಟಕಷ್ಟೆ ಎಂದು ಅಮ್ಮ ಹೇಳಿದ ನೆನಪು. ಚಿಕ್ಕ ಅಕ್ಕನನ್ನು ಎತ್ತಿ ಒಂದೆರಡು ಬಾರಿ ಆಡಿಸಿರಬಹುದಂತೆ. ಅವಳು ತಪ್ಪು ಮಾಡಿದರೂ ಅಜ್ಜನದು ನಿರುತ್ತರ. ನಮಗೆ ಕಾಲಲ್ಲೂ ಒದ್ದ ನೆನಪಿದೆ. ಸತ್ತದ್ದು ಒಳ್ಳೆಯದೇ ಆಯ್ತು ಮುದುಕ...

ಛೇ ಅಜ್ಜ ಸಾಯಬಾರದಿತ್ತು. ಬರುವಾಗ ಏನನ್ನೂ ತರದಿದ್ದರೂ ಒಂದು ಸ್ವಲ್ಪ ಕಡ್ಲೆಯನ್ನು ಮನೆಗೆ ಬರುವಾಗ ತಪ್ಪದೇ ತರುತ್ತಿದ್ದ. ನಾವು ಚಿಕ್ಕವರಾದರೂ ನಮ್ಮ ಕೈಲಿ ಅದನ್ನು ಕೊಟ್ಟಿದ್ದಿಲ್ಲ. ಕೊಟ್ಟದ್ದು ಚಿಕ್ಕ ಅಕ್ಕನ ಕೈಲಿಯೇ. ಅವಳ ಹಂಚಿಕೆಯನ್ನೇ ನಾವು ಸುಮ್ಮನೆ ಒಪ್ಪಬೇಕಾಗಿತ್ತು. ಹಂಚುವಾಗಲೆಲ್ಲ `ನಿನಗೆ ಇಟ್ಟುಕೊ' ಎಂದು ಹೇಳುತ್ತಲೇ ಇರುತ್ತಿದ್ದ. ಇನ್ನು ಅಜ್ಜನಿಗೆ ತಿಂಡಿ ಎಂದರೆ ಪ್ರಾಣ. ದುಡ್ಡು ಕೊಟ್ಟು ತರದಿದ್ದರೂ ಮನೆಯಲ್ಲಿ ತಂದಿಟ್ಟದ್ದನ್ನೆಲ್ಲಾ ತಿಂದು ಮುಗಿಸುವ ಚಪಲ. ಅಜ್ಜಿ ಮನೇಲಿ ತಾಳೆ ಮರದ ಬೀಜಗಳನ್ನು ಮೊಳಕೆ ಬರಿಸಲು ಮಣ್ಣಿನಲ್ಲಿ ಮಿಶ್ರ ಮಾಡಿ ತಿಂಗಳುಗಟ್ಟಲೆ ಕಾದು ಮೊಳಕೆ ಬಂದ ನಂತರ ಒಡೆದು ತಿನ್ನುತಿದ್ದ. ನಮಗೆ ಐದಾರು ಒಡೆದು ಕೊಟ್ಟಿದ್ದರೆ ಹೆಚ್ಚು.

ಇನ್ನು ಅಜ್ಜಿಗೂ ಅಜ್ಜನಿಗೂ ನಾನು ನೋಡಿದಂತೆ ಹೊಂದಿಕೆಯಾಗುತ್ತಿರಲಿಲ್ಲ. ಅಜ್ಜಿ ವಟವಟ ಎನ್ನುತ್ತಿದ್ದರೆ ಅಜ್ಜನದು ದಿವ್ಯ ಮೌನ. ಗುಡುಗು ಮತ್ತು ಭೂಮಿಯ ಹಾಗೆ. ಕೇವಲ ಇಬ್ಬರೇ ಇದ್ದರೂ ಹೊರಗಿನ ವಿಚಾರ ಬಿಟ್ಟು ಪರಸ್ಪರ ಆತ್ಮೀಯರಾಗಿ ಮಾತಾನಾಡುತಿದ್ದುದೇ ಕಡಿಮೆ. ಅಜ್ಜಿ ಅಜ್ಜನನ್ನು ಅವರು ಅಂದದ್ದಕ್ಕಿಂತ `ಅದು' ಎಂದೇ ಸಂಭೋಧಿಸಿದ್ದು ಹೆಚ್ಚು. ಅಜ್ಜಿ ಅಜ್ಜನ ಬಗ್ಗೆ ಮನೆಗೆ ಬಂದಾಗ ಮಗಳಲ್ಲಿ ದೂರು ಹೇಳುತ್ತಿದ್ದರೆ ಅಜ್ಜಿ ತೀರಾ ಸಾಚಾಳೆಂದೇ ತಿಳಿಯಬೇಕು. ಹಾಗಿರುತ್ತಿತ್ತು ಅವಳ ಹಾವಭಾವ. ಅಜ್ಜನಿಗೆ ಕೆಲಸಕ್ಕೆ ಹೋಗಲು ಸನ್ನಿಯ?, ಎಂಥೆಂಥ ಮುದುಕರು ಕೆಲಸಕ್ಕೆ ಹೋಗುತ್ತಾರೆ ಎನ್ನುವಲ್ಲಿಂದ ಹಿಡಿದು ಅಜ್ಜ ಜಗಲಿಯಲ್ಲೇ ನಿಂತುಕೊಂಡು ಮೂತ್ರ ಮಾಡುತ್ತಾನೆ ಎನ್ನುವಲ್ಲಿಯವರೆಗೆ...

ಕಲ್ಲನ್ನು ಕುಟ್ಟುತ್ತ ಕುಟ್ಟುತ್ತಾ ಮನೆಯ ಹತ್ತಿರಕ್ಕೆ ಬಂದೆ. ಮನೆ ಎತ್ತರದಲ್ಲಿ ಇರೋದು. ತೋಡು ದಾಟಿ ಹತ್ತಿಪ್ಪತ್ತು ಮೆಟ್ಟಿಲೇರಿ ಹೋಗಬೇಕು. ಎದುರಿಗೆ ಅಜ್ಜಿಯ ತೋಟ, ಗದ್ದೆ ಹಿಂದಕ್ಕೆ ಗುಡ್ಡ. ಚಿಕ್ಕ ಮನೆ.

ನೆಂಟರಿರಬೇಕು ಮಾತನಾಡುವುದು ಕೇಳಿಸುತ್ತಿದೆ. ಅಂಗಿ ಪ್ಯಾಂಟು ಸರಿಯಾಗಿದೆಯಾ ಎಂದು ಖಾತ್ರಿಪಡಿಸಿಕೊಂಡೆ. ನಾಗು ಮಾವ, ವಿಶಾಲು ಆಂಟಿ, ಹುಬ್ಬಳ್ಳಿಯ ಅಜ್ಜನ ಮೊಮ್ಮಗ ಇನ್ನೂ ಕೆಲವರು ಕೆಳಗಿನಿಂದಲೇ ಕಾಣಿಸುತ್ತಿದ್ದಾರೆ. ಅಂಗಳಕ್ಕೆ ಹೋಗಿ ಮುಟ್ಟಿದರೂ ಯಾರೂ ಮಾತನಾಡುತ್ತಿಲ್ಲ. ನಕ್ಕರೂ ಯಾರದೂ ಪ್ರತಿಕ್ರಿಯೆ ಇಲ್ಲ. ಒಳಗೆ ಹೋದರೆ ಅಜ್ಜನನ್ನು ಮಲಗಿಸಿದ್ದಾರೆ. ಅಮ್ಮ ಹತ್ತಿರವೇ ಕೂತು ಅಳುತ್ತಿದ್ದಾಳೆ. ಅಮ್ಮನ್ಯಾಕೆ ಅಳುತ್ತಿದ್ದಾಳೆ?...

ತೆಂಗಿನಕಾಯಿಯಲ್ಲಿಟ್ಟ ದೀಪ ಯಾವುದೇ ಪರಿವೇ ಇಲ್ಲದಂತೆ ತನ್ನಷ್ಟಕೆ ಉರಿಯುತಿತ್ತು. ಎಣ್ಣೆ ಹಾಕಿ ಅತ್ತಿತ್ತ ಹೋಗುತ್ತಿದ್ದಳು ಅಜ್ಜಿ. ಚಾವಡಿಯಲ್ಲಿದ್ದ ಬೆಂಚಲ್ಲಿ ಕುಳಿತುಕೊಂಡೆ. ಮಾತನಾಡುವವರಿಲ್ಲ, ಅಜ್ಜನ ಮುಖ ನೋಡಿದೆ. ಸಾಯುವಾಗಲೂ ನಗಲಿಲ್ಲ! ಅಜ್ಜ ಗಿಡ್ಡವಾಗಿದ್ದರೂ ನೋಡಲು ಅಜ್ಜಿಗಿಂತ ಸುಂದರವಾಗಿಯೇ ಇದ್ದ.

ಜಗಲಿಯಲ್ಲಿ ನಿಂತ ದಾಸಯ್ಯ ಜಾಗಟೆ ಬಡಿಯುತ್ತಾ ಮಂತ್ರ ಪಠಿಸುತ್ತಿದ್ದ. ಅಜ್ಜಿ ಮನೆಗೆ ತಿಂಗಳಿಗೊಮ್ಮೆಯಾದರೂ ಆತ ಬಂದಾಗ ಮಂತ್ರ ಹೇಳುವ ಮೊದಲೇ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ತಿನ್ನಲು ವೀಳ್ಯದೆಲೆ ಕೊಟ್ಟು ಕಳಿಸುತ್ತಿದ್ದರು. ಒಮ್ಮಮ್ಮೆ ನಾನು ಅಲ್ಲಿದ್ದಾಗ ನನ್ನ ಕೈಯಾರೆ ಕೊಟ್ಟಿದ್ದಿದೆ. ಇವತ್ತು ಯಾರು ಕೊಟ್ಟಿಲ್ಲವಿರಬೇಕು. ನಾನೇ ಹೋಗಿ ಕೊಡೋಣವೆಂದು ರೂಮಿಗೆ ಹೋಗಿ ಸೇರಿನಲ್ಲಿ ಅಕ್ಕಿ ಅಳೆದುಕೊಂಡು ಬಂದೆ. ಅಪ್ಪ ಕಿವಿಯನ್ನು ಹಿಂಡಿ ಬೆನ್ನಿಗೆರಡು ಬಾರಿಸಿದ. ಸುಮ್ಮನಾದೆ ಯಾಕೆಂದು ತಿಳಿಯದೆ. ಮನೆ ಹಿಂದಿನ ಗುಡ್ಡದಲ್ಲಿ ಜನ ಕಾಣುತ್ತಿದ್ದರು. ಓಡೋಡಿ ಹೋದೆ. ಕಟ್ಟಿಗೆ ಅಟ್ಟಿ ಮಾಡಿ ಇಡಲಾಗಿತ್ತು. ಅಜ್ಜನನ್ನು ಮಲಗಿಸಲಂತೆ. ಅಲ್ಲಿದ್ದ ಜನ ನನ್ನನ್ನು ಮರಳಿ ಮನೆಗೆ ಹೋಗುವಂತೆ ಹೇಳಿದರು.

ಅಂದ ಹಾಗೆ ಅಜ್ಜ ಸತ್ತದ್ದು ಹೇಗೆಂದು ತಿಳಿಯಲಿಲ್ಲವಲ್ಲ.  ಗುಡ್ಡದಿಂದ ಬರುತ್ತಲೇ ಎದುರಿಗೆ ಸಿಕ್ಕ ನಾಗು ಮಾವನಲ್ಲಿ ಜೋರಾಗಿಯೇ ಕೇಳಿದೆ “ಅಜ್ಜ ಹೇಗೆ ಸತ್ತ?” ಕಣ್ಣು ದೊಡ್ಡದು ಮಾಡಿ “ನೀನು ಸುಮ್ನಿರ್ನತಿಯೋ ಇಲ್ವೋ” ಅಂದ.

ಇಲ್ಲಿ ನನಗೆ ಎಲ್ಲರೂ ಬಯ್ಯುವವರೆ ಎಂದುಕೊಂಡು ಸೀದಾ ಮೆಟ್ಟಿಲಿಳಿದು ತೋಡಿಗೆ ಬಂದೆ. ನಾನು ಮರಳಲ್ಲಿ ಆಡುತ್ತಿದ್ದಂತೆ ಒಂದಿಬ್ಬರು ಮಕ್ಕಳು ಬಂದರು. ನನಗೆ ಮರಳಲ್ಲಿ ಮನೆ ಕಟ್ಟೋ ಆಸೆ!... ಒಬ್ಬ ಹೇಳಿದ `ನಿನ್ನ ಅಜ್ಜ ಇದೇ ಬರೆಯಿಂದ ತೋಡಿಗೆ ಬಿದ್ದು ಸತ್ತ' ಎಂದು. ತೋಡನ್ನೊಮ್ಮೆ ನೋಡಿದೆ, ಪಾಪಿ ತೋಡು... ! ಅಪ್ಪ ಕರೆಯೋದು ಕೇಳಿಸಿತು. ಓಡಿ ಹೋಗಿ ಅಂಗಳದಲ್ಲಿ ನಿಂತುಕೊಂಡೆ. ಅಜ್ಜನನ್ನು ಸ್ನಾನ ಮಾಡಿಸಿ ಒಳ್ಳೆಯ ಬಟ್ಟೆ ಹಾಕಿ ಕಚ್ಚೆ ಸುತ್ತಿ ಮಲಗಿಸಿದ್ದರು. ಅಜ್ಜ ಇಷ್ಟು ಚಂದ ಯಾವಾಗಲೂ ಕಂಡಿರಲಿಲ್ಲ. ಒಬ್ಬೊಬ್ಬರೇ ಬಂದು ತುಳಸಿ ಎಲೆಯಿಂದ ಬಾಯಿಗೆ ನೀರು ಹಾಕುತ್ತಿದ್ದರು. ನನಗೆ ಪಕ್ಕನೆ ಸಾಲಾಗಿ ನಿಂತು ಶಾಲೆಯಲ್ಲಿ ಬಿಸಿಯೂಟ ತೆಗೆದುಕೊಳ್ಳುವುದು ನೆನಪಿಗೆ ಬಂತು. ಬದಿಯಲ್ಲಿ ನಿಂತು ಕುತೂಹಲದಲ್ಲಿ ನೋಡುತಿದ್ದ ನನ್ನನ್ನು `ಹೋಗಿ ನೀರು ಹಾಕು' ಎಂದು ಆಂಟಿ ಅಂದರು. ಒಮ್ಮೆ ನೀರು ಹಾಕಿದೆ. ಅಜ್ಜ ಬಾಯಿ ತೆರೆಯಲೇ ಇಲ್ಲ. ಮತ್ತೊಮ್ಮೆ ಎಡಗೈಯಿಂದ ಬಾಯನ್ನು ಅಗಲಿಸಿ ನೀರು ಹಾಕಿದೆ.

ನಂತರ ನಾಗು ಮಾವ, ಅಪ್ಪ, ಅಜ್ಜನ ಮೊಮ್ಮಕ್ಕಳು ಅಜ್ಜನನ್ನು ಹೊತ್ತುಕೊಂಡು ಹೋದರು. ದಾಸಯ್ಯ ಮುಂದೆ ಜಾಗಟೆ ಬಡಿಯುತ್ತಾ...
ಅಮ್ಮನ ಅಳು ಒಂದೇ ಸಮನೆ ತಾರಕಕ್ಕೇರಿತು. ಇವಳಿಗೇನಾಗಿದೆ? ಅಪ್ಪ ಆಗೊಮ್ಮೆ ಈಗೊಮ್ಮೆ ಬಾರಿಸಿದಾಗಲೂ ಯಾರಿಗೂ ಕೇಳದಂತೆ ಅತ್ತವಳು ಇವತ್ತು ಯಾಕೆ ಇಷ್ಟು ಜೋರಾಗಿ ಅಳುತ್ತಿದ್ದಾಳೆ? ನೆಂಟರಿರುವಾಗ ಅಳಬಾರದು ಎಂದು ಗೊತ್ತಿಲ್ಲವ ಅವಳಿಗೆ?... ಯಾರೋ ಬಂದು ಸ್ವಲ್ಪ ಸೀಮೆ ಎಣ್ಣೆ ಕೊಡಿ ಚಂಡಿ ಕಟ್ಟಿಗೆ ಪಕ್ಕನೆ ಉರಿಯೋದಿಲ್ಲ ಎಂದರು. ಅಜ್ಜಿ `ಇರೋದೆ ಸ್ವಲ್ಪ ಅದು ಚಿಮಣಿ ಉರಿಸಲು ಬೇಕು'  ಎಂದಳು. ಅಮ್ಮ ಅರಚುತ್ತಾ `ಈಗ ಕೊಡಿ. ಮತ್ತೆ ಎಲ್ಲಿಂದಾದರೂ ತರೋಣ' ಎಂದ ನಂತರ ಕೊಟ್ಟಳು.

ನಾನೂ ಅಜ್ಜನನ್ನು ಉರಿಸಲು ಕೊಂಡು ಹೋದ ಜಾಗಕ್ಕೆ ಹೋದೆ. ಬೆಂಕಿ ಒಂದೇ ಸಮನೆ ಉರಿಯುತ್ತಿತ್ತು . ಜನ ಸ್ವಲ್ಪ ಹೊತ್ತು ನಿಂತು ಮರಳಿ ಬಂದರು. ಅಂಗಳದಲ್ಲಿ ನಿಂತಿದ್ದ ನಾಗು ಮಾವ, ಆಂಟಿ, ಅಜ್ಜನ ತಂಗಿಯರಿಬ್ಬರು ನನ್ನನ್ನೇ ನೋಡುತ್ತಿದ್ದುದು ಯಾಕೆಂದು ತಿಳಿಯಲಿಲ್ಲ. “ಯಾವ ಸೊಯೆ ಇಲ್ಲದ ಮಗು ಇದು? ಅಜ್ಜ ಸತ್ತಿದ್ದರೆ ಇವನು ಒಳ್ಳೆಯ ಡ್ರೆಸ್ಸು ಹಾಕಿಕೊಂಡು ಬಂದಿದೆ, ಇನ್ನು ಆಗಾಗ ನಗೋದಕ್ಕೆ ಇಲ್ಲಿ ಏನು ಮಂಗ ಕುಣಿಯುತ್ತಿತ್ತಾ? ಅಜ್ಜ ಸತ್ತದ್ದು ಪುಳ್ಳಿಗಳಿಗೆ ಖುಷಿಯಾಗಿರಬೇಕು ಅದಕ್ಕೆ...” ಬಯ್ಯುತ್ತಿರುವುದು ನನಗೇ ಇರಬೇಕು. ಇದ್ದಕ್ಕಿದ್ದಂತೆ ಅಪ್ಪ ಅಂಗಳದ ಬದಿ ಎಳೆದುಕೊಂಡು ಹೋಗಿ ನಾಲ್ಕು ಬಾರಿಸಿಯೇ ಬಿಟ್ಟ. ಈ ಬಾರಿಯ ಪೆಟ್ಟು ಜೋರಾಗಿಯೇ ಇತ್ತು. ಅಮ್ಮ ಏನೂ ಅನ್ನಲೇ ಇಲ್ಲ.
ಸತ್ತ ಅಜ್ಜ ಅಳಿಸಲಿಲ್ಲ, ಬದುಕಿದವರು ಅಳಿಸಿದ್ದರು. ಜಗಲಿಯ ಮೂಲೆಯಲ್ಲಿ ಅಳುತ್ತಾ ಕೂತೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT