ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕ ಬಾರ್‌ನಲ್ಲಿ ಸರ್ವರ್‌!

Last Updated 14 ಡಿಸೆಂಬರ್ 2014, 20:25 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ­­ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರು ಕುಟುಂಬ­­ವನ್ನು ಸಾಕಲಾಗದೆ ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆ­ಯ­ವರೆಗೆ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಾರೆ!

ಅಚ್ಚರಿಯಾದರೂ ಇದು ಸತ್ಯ. ಹೀಗೆ ಉಪ­ನ್ಯಾಸಕರಾಗಿದ್ದು ಬೇರೆ ಕಡೆ ಅರೆ­ಕಾಲಿಕ ಕೆಲಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ‘ಇಲ್ಲಿ ಕೆಲಸ ಮಾಡುವ ದುರ್ಗತಿ ಯಾಕೆ ಬಂತು’ ಎಂದು ಅವ­ರನ್ನು ಪ್ರಶ್ನೆ ಮಾಡಿದರೆ ‘ಸರ್ಕಾರ 6 ತಿಂಗಳಿಗೋ ಒಂದು ವರ್ಷಕ್ಕೋ ಸಂಬಳ­ವನ್ನು ನೀಡುತ್ತದೆ. ನನ್ನನ್ನೇ ನಂಬಿಕೊಂಡ ಹೆಂಡತಿ ಮಕ್ಕಳಿ­ದ್ದಾರೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ಅವರನ್ನು ಸಾಕು­ವುದು ಕಷ್ಟ. ಅದಕ್ಕೇ ಇಲ್ಲಿ ದುಡಿಯು­ತ್ತಿ­ದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಹೆಸರು ಬರೆಯಬೇಡಿ. ನನ್ನ ವಿದ್ಯಾ­ರ್ಥಿ­ಗಳು ಈ ಬಾರ್‌ಗೆ ಬಂದರೆ ನನಗೆ ಮುಜುಗರವಾಗುತ್ತದೆ. ಆದರೂ ಕೆಲ­ವರು ಆಗಾಗ ಇಲ್ಲಿಗೆ ಬರುತ್ತಾರೆ. ಆಗ ನಾನು ಆ ಟೇಬಲ್‌ಗೆ ಸರ್ವ್ ಮಾಡು­­­­­ವುದನ್ನು ತಪ್ಪಿಸಿಕೊಳ್ಳುತ್ತೇನೆ. ಅವರಿಗೆ ಕುಡಿಯಬೇಡಿ ಎಂದು ಹೇಳುವ ನೈತಿಕತೆಯನ್ನೂ ನಾನು ಕಳೆದು­ಕೊಂಡಿ­ದ್ದೇನೆ. ಅವರು ಬಿಟ್ಟು ಹೋದ ‘ಟಿಪ್ಸ್‌’  ಮುಟ್ಟುವುದಕ್ಕೆ ಮನಸ್ಸು ಒಪ್ಪು­ವು­ದಿಲ್ಲ ಸಾರ್‌’ ಎಂದು ಕಣ್ಣೀರಿಟ್ಟರು.

ರಾಜ್ಯದ ಹಲವಾರು ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 11, 680 ಮಂದಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡು­ತ್ತಿ­­ದ್ದಾರೆ. ಇವರಲ್ಲಿ 5 ಸಾವಿ­ರಕ್ಕೂ ಹೆಚ್ಚು ಮಂದಿ ಮಹಿಳೆಯ­ರಿದ್ದಾರೆ. ಇವರಲ್ಲಿ ಬಹು­ತೇಕರು ತಮ್ಮ ವಿಷಯದಲ್ಲಿ ಸ್ನಾತ­ಕೋತ್ತರ ಪದವಿಯ ಜೊತೆಗೆ ಎನ್‌ಇಟಿ, ಕೆ–ಸ್ಲೆಟ್‌ ಪರೀಕ್ಷೆ ಪಾಸಾಗಿದ್ದಾರೆ. ಕೆಲ­ವರು ಪಿಎಚ್‌ಡಿ ಮಾಡಿ­ಕೊಂಡ­ವರೂ ಇದ್ದಾರೆ. ಪಿಎಚ್‌ಡಿ ಮಾಡಿ­ಕೊಂಡ­ವರಿಗೆ ಮಾಸಿಕ ರೂ 10 ಸಾವಿರ, ಉಳಿ­ದವರಿಗೆ ಮಾಸಿಕ ರೂ 8 ಸಾವಿರ ವೇತನ ನೀಡ­ಲಾ­ಗು­ತ್ತದೆ. ಈ ವೇತನ­ವನ್ನು 6 ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಒಟ್ಟಿಗೇ ಕೊಡ­ಲಾ­­­ಗುತ್ತದೆ. ಕಳೆದ ವರ್ಷದ ವೇತನ 2014ರ ಆಗಸ್ಟ್ ನಲ್ಲಿ ಬಂದಿದೆ. ಈ ವರ್ಷದ ಹಣ ಯಾವಾಗ ಬರುತ್ತದೆ  ಗೊತ್ತಿಲ್ಲ. ಕೆಲವು ಜಿಲ್ಲೆಗಳಲ್ಲಿ 10 ತಿಂಗಳು ಕೆಲಸ. ಇನ್ನು ಕೆಲವು ಜಿಲ್ಲೆಗಳಲ್ಲಿ 9 ತಿಂಗಳು ಮಾತ್ರ ಕೆಲಸ. ಈ ವರ್ಷ ಇದ್ದ­ವರನ್ನು ಮುಂದಿನ ವರ್ಷವೂ ಮುಂದು­ವ­ರಿ­ಸಲಾಗುತ್ತದೆ ಎಂಬ ‘ಗ್ಯಾರಂಟಿ’ ಇಲ್ಲ. ಕಳೆದ ವರ್ಷ ತೀವ್ರ ಹೋರಾಟ ನಡೆಸಿದ್ದರಿಂದ ಈ ಬಾರಿ ಮಾತ್ರ ಕಳೆದ ಬಾರಿ ಇದ್ದವರ­ಲ್ಲಿಯೇ ಬಹುತೇಕರನ್ನು ಮುಂದುವರಿಸ­ಲಾಗಿದೆ.

15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರನ್ನು ಕಾಯಂ ಮಾಡ­ಬೇಕು. ಅತಿಥಿ ಉಪನ್ಯಾಸಕರ ಸೇವೆ ಕಾಯಂ­ಗೊಳಿಸಲು ತಜ್ಞರ ಸಮಿತಿ ರಚಿಸ­ಬೇಕು. ಮಾಸಿಕ ₨25 ಸಾವಿರ ವೇತನ ನೀಡಬೇಕು. 12 ತಿಂಗಳೂ ವೇತನ ನೀಡಬೇಕು. ಪ್ರತಿ ತಿಂಗಳ ಮೊದಲವಾರ ವೇತನ ನೀಡಬೇಕು. ಮಹಿಳೆಯರಿಗೆ ವೇತನ ಸಹಿತ 3 ತಿಂಗಳು ಹೆರಿಗೆ ರಜೆ ನೀಡಬೇಕು
–ರಾಜಶೇಖರ ಮೂರ್ತಿ, ಗೌರವಾಧ್ಯಕ್ಷ ಅತಿಥಿ ಉಪನ್ಯಾಸಕರ ಸಂಘ

‘6 ತಿಂಗಳಿಗೋ, ಒಂದು ವರ್ಷಕ್ಕೋ ಬರುವ ಹಣವನ್ನೂ ಪಡೆಯಲು ಶೇ 10ರಿಂದ 15ರಷ್ಟು ಲಂಚ ನೀಡಲೇ ಬೇಕಾ­ಗುತ್ತದೆ. ಯಾವಾಗಲೋ ಹಣ ಬರುತ್ತದೆ ಎಂದು ಸಾಕಷ್ಟು ಸಾಲವನ್ನೂ ಮಾಡಿಕೊಂಡಿರುತ್ತೇವೆ. ಬಂದ ಹಣ ಸಾಲ ತೀರಿಸಲೂ ಸಾಕಾಗುವುದಿಲ್ಲ. ಅದಕ್ಕೆ ನಾವು ಬೇರೆ ಕೆಲಸ ಮಾಡುವುದು ಅನಿ­­ವಾರ್ಯ’ ಎಂದು ಅತಿಥಿ ಉಪ­ನ್ಯಾಸಕರ ಸಂಘದ ಅಧ್ಯಕ್ಷ ಶ್ರೀನಿವಾ­ಚಾರ್‌ ಹೇಳು­ತ್ತಾರೆ. ಇವರೂ ಕೂಡ ಮಾಲೂ­ರಿ­ನಲ್ಲಿ ರಾಜ್ಯಶಾಸ್ತ್ರ ಬೋಧನೆ ಮಾಡು­ವು­ದರ ಜೊತೆಗೆ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.

ಬೆಳಗಾವಿ ಪ್ರಥಮ ದರ್ಜೆ ಕಾಲೇಜಿ­ನಲ್ಲಿ ಕಳೆದ 13 ವರ್ಷಗಳಿಂದ ರಾಜ್ಯ­ಶಾಸ್ತ್ರ ಉಪನ್ಯಾಸಕರಾಗಿರುವ ಗದಿಗೆಪ್ಪ ಕರಡಿ ಅವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ­ಯಲ್ಲಿ ರಾತ್ರಿ ಟೆಲಿಫೋನ್‌ ಆಪರೇ­ಟರ್‌ ಆಗಿ ಕೆಲಸ ಮಾಡುತ್ತಾರೆ. ಹಿಂಡ­ಲಗ ಕಾಲೇಜಿನಲ್ಲಿ 13 ವರ್ಷಗಳಿಂದ ಕನ್ನಡ ಉಪನ್ಯಾಸ­ಕರಾಗಿರುವ ರಮೇಶ್‌ ರಾತ್ರಿ ಕಾವಲುಗಾರ­ರಾಗಿದ್ದಾರೆ. ಬೆಳ­ಗಾವಿ ಜಿಲ್ಲೆ ಹುಕ್ಕೇರಿಯಲ್ಲಿ 8 ವರ್ಷ­ಗಳಿಂದ ಸಮಾಜಶಾಸ್ತ್ರ ಬೋಧಿಸುತ್ತಿ­ರುವ ಆಂಜಿನಪ್ಪ ಚಪ್ಪಲಿ ಅಂಗಡಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಾರೆ.

ಮಹಿಳಾ ಉಪನ್ಯಾಸಕರ ಕಷ್ಟ: ಮಹಿಳಾ ಉಪ­ನ್ಯಾಸಕರ ಕಷ್ಟವಂತೂ ಹೇಳ­ತೀರದು. ಅವರಿಗೆ ಹೆರಿಗೆ ರಜೆಯೂ ಇಲ್ಲ. ಹೆರಿಗೆ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ­ಯಾಗಿ­ದ್ದರೂ ಒಂದೇ ತಿಂಗಳಿನಲ್ಲಿ ಕೆಲಸಕ್ಕೆ ಹಾಜ­ರಾ­ಗುತ್ತಾರೆ. ಇಲ್ಲವಾದರೆ ಕೆಲಸ ಕಳೆದು­ಕೊಳ್ಳುವ ಭೀತಿ ಇರುತ್ತದೆ ಎಂದು ಸಂಘದ ಗೌರವಾಧ್ಯಕ್ಷ ರಾಜಶೇಖರ ಮೂರ್ತಿ ಹೇಳಿದರು.

ರಾಜ್ಯದಲ್ಲಿ ಈಗ ಪ್ರಥಮದರ್ಜೆ ಕಾಲೇಜುಗಳಲ್ಲಿ 4,800 ಉಪನ್ಯಾಸಕರ ಹುದ್ದೆ ಖಾಲಿ ಇವೆ. ರಾಜ್ಯ ಸರ್ಕಾರ ಈಗ 1192 ಹುದ್ದೆಗಳ ಭರ್ತಿಗೆ ಮುಂದಾ­ಗಿದೆ. ಈ ನೇಮಕಾತಿಯಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿ­ಸು­ತ್ತಿರುವ ಹಾಗೂ ವಯೋಮಿತಿ ಮೀರಿ­ದ­ವ­ರಿಗೆ ಅವಕಾಶ ನೀಡಬೇಕು ಎಂದು ಒತ್ತಾ­­­ಯಿ­ಸಿದರೂ ಸರ್ಕಾರ ಕಿವಿಗೆ ಹಾಕಿ­ಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಮಹಿಳಾ ಅತಿಥಿ ಉಪನ್ಯಾಸಕರು ಗಾರ್ಮೆಂಟ್‌, ಬ್ಯೂಟಿ ಪಾರ್ಲರ್‌ ಮುಂತಾದ ಕಡೆ ಅರೆಕಾಲಿಕ ಕೆಲಸ ಮಾಡು­ತ್ತಾರೆ. ಜೊತೆಗೆ ಕುಟುಂಬದ ನಿರ್ವ­ಹಣೆಯನ್ನೂ ಮಾಡುತ್ತಾರೆ. ವಿದ್ಯಾರ್ಥಿ­ಗಳಿಗೆ ಪಾಠ ಮಾಡುವ ಉಪ­ನ್ಯಾಸಕರ ಬದುಕೇ ಹೀಗೆ ಅತಂತ್ರ­ವಾಗಿ­ದ್ದರೆ ಅವರು ಹೇಗೆ ಪಾಠ ಮಾಡುತ್ತಾರೆ. ಉತ್ತಮ ವಿದ್ಯಾರ್ಥಿ­ಗಳನ್ನು ಹೇಗೆ ತಯಾರು ಮಾಡುತ್ತಾರೆ? ಎಂದು ಅವರು ಪ್ರಶ್ನಿಸುತ್ತಾರೆ. ‘ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರಿ­ಸಬೇಕು. ನಮಗೆ ಜವಾಬ್ದಾರಿ­ಯುತ ಸರ್ಕಾರ ಬೇಕು’ ಎನ್ನುವುದು ಅವರ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT