ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ‘ಮಾಯಾ’ಲೋಕ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಹದಿನೇಳನೆ ಕ್ರಾಸ್‌­ನಲ್ಲಿನ ಸಂಪಿಗೆ ಹೂಗಳ ಪರಿಮ­ಳಕ್ಕೆ ಕಥಕ್‌ ನೃತ್ಯಕ್ಕೆಂದು ಗೆಜ್ಜೆ ಕಟ್ಟಿದ­ವರು ಹೊಮ್ಮಿ­ಸುತ್ತಿದ್ದ ನಾದದ ಅಲೆಯು ಹೊಸ ಅರ್ಥ ಕಲ್ಪಿಸುತ್ತಿತ್ತು. ಸಂಪಿಗೆ ಪರಿಮಳ ಇತ್ತೀಚೆಗೆ ಕಡಿಮೆಯಾಗಿದೆ. ಇನ್ನು ಗೆಜ್ಜೆ ನಾದದ ಅಲೆಯಲ್ಲೂ ಹಳೆಯ ತೂಕ ಇರುತ್ತದೋ ಇಲ್ಲವೋ. ಯಾಕೆಂದರೆ, ಅಂಥ ನಾದದಲೆ ಹರಡು­ವಂತೆ ಮಾಡಿದ್ದ ಮಾಯಾ ರಾವ್‌ ನೃತ್ಯೋತ್ಸಾಹಿಗಳನ್ನು ಅಗಲಿದ್ದಾರೆ.

ಇದೇ ತಿಂಗಳ ಪ್ರಾರಂಭದಲ್ಲಿ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ‘ಕಥಕ್‌ ಥ್ರೂ ಏಜಸ್‌’ ಎಂಬ ನೃತ್ಯ ರೂಪಕ ಪ್ರದರ್ಶನಗೊಂಡಿತು. ದೇವಸ್ಥಾನದ ಪ್ರಾಂಗ­ಣದಲ್ಲಿ ಮೂಡಿದ ಕಥಕ್‌ ಹೆಜ್ಜೆ ಗುರುತುಗಳು ಆಮೇಲೆ ‘ಕೊರಿಯಾ­ಗ್ರಫಿ’ ಮಟ್ಟಕ್ಕೆ ಬೆಳೆದು ನಿಂತ ಬಗೆಯನ್ನು ತೋರುವ ಆ ಕಾರ್ಯಕ್ರಮ ಮಾಯಾ ರಾವ್‌ ಅವರ ಕಥಕ್‌ ಹೆಜ್ಜೆಗುರುತು­ಗಳಿಗೆ ಎಪ್ಪತ್ತು ತುಂಬಿದ್ದರ ನೆಪವಾಗಿತ್ತು.

ಮಾಯಾ ಗರಡಿಯಲ್ಲಿ ಪಳಗಿದವರು, ಅವರ ವಯಸ್ಸು  86 ಆದ­ಮೇಲೂ ‘ಮಾಯಾ ದೀದಿ’ ಎಂದೇ ಸಂಬೋಧಿಸು­ತ್ತಿದ್ದುದು. ಅವರು ಹೋಗಿ­ಬಿಟ್ಟರು ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿದಾ­ಗಲೂ ಅವರ ಹೆಸರು ‘ದೀದಿ’ ಆಗಿಯೇ ಉಳಿದಿತ್ತು. ನೃತ್ಯ ಶಿಕ್ಷಕಿಯಾಗಿ ಅವರು ಅಕ್ಕನ ಮಮಕಾರ ತೋರಿದ್ದಕ್ಕೆ ‘ದೀದಿ’ ಎಂಬ ಈ ಸಂಬೋಧನೆಯೇ ಸಾಕ್ಷಿ.

ಮಾಯಾ ತಮ್ಮ ಏಳು ದಶಕಗಳ ನೃತ್ಯ ಬದುಕಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಥಕ್‌ ಹೆಜ್ಜೆಗಳನ್ನು ಪಳಗಿಸಿ, ದೇಶಕ್ಕೆ ಕೊಟ್ಟರು. ಹಟ್ಟಂಗಡಿ ಸಂಜೀವ ರಾವ್‌ ಹಾಗೂ ಸುಭದ್ರಾ ಬಾಯಿ ದಂಪತಿಯ ಮಗ­ಳಾಗಿ ಮಾಯಾ ಹುಟ್ಟಿದ್ದು 1928, ಮೇ 2ರಂದು.ಶಾಲೆಯಲ್ಲಿ ಕಲಿಯು­ವಾಗಲೇ ಆಕರ್ಷಿಸಿದ್ದು ನೃತ್ಯಗುರು ಉದಯ ಶಂಕರ್‌ ದೊಡ್ಡ ತಂಡ ಕಟ್ಟಿಕೊಂಡು, ಕರ್ಣಾನಂದ ನೀಡುವಂಥ ಸಂಗೀತ­ದೊಂದಿಗೆ ನೀಡುತ್ತಿದ್ದ ಪ್ರದರ್ಶನ.

ಬೆಂಗಳೂರು ರೈಫಲ್‌ ವಾಲೆಂಟಿಯರ್ಸ್‌ (ಬಿ.ಆರ್‌.ವಿ) ಥಿಯೇಟರ್‌ನಲ್ಲಿ ನಡೆಯುತ್ತಿದ್ದ ನೃತ್ಯ ನೋಡಿ ತಾವೂ ಹೆಜ್ಜೆ ಹಾಕುವುದನ್ನು ಕಲಿಯಬೇಕು ಎಂದು ಹನ್ನೆರಡರ ಬಾಲೆ ಮಾಯಾಗೆ ಅನಿಸಿತು. ರಾಮರಾವ್‌ ಬಳಿ ಹಿಂದೂಸ್ತಾನಿ ಸಂಗೀತ ಹಾಗೂ ದಿಲ್‌ರುಬಾ ವಾದ್ಯ ನುಡಿಸುವುದನ್ನು ಕಲಿಯುತ್ತಿದ್ದ ಮಾಯಾ ಮನಸ್ಸು ನೃತ್ಯದತ್ತ ವಾಲಿದಾಗ ಅವರ ತಂದೆ–ತಾಯಿಗೆ ಅಚ್ಚರಿಯಾಯಿತು. ಸಾಂಪ್ರ­ದಾಯಿಕ ಕುಟುಂಬದ, ಅದರಲ್ಲೂ ಮೂರು ಗಂಡು, ಮೂರು ಹೆಣ್ಣು ಮಕ್ಕಳ ದೊಡ್ಡ ಕುಟುಂಬದ ಕುಡಿ­ಯೊಂದು ಹೆಜ್ಜೆ ಹಾಕಲು ಬಯಸಿದಾಗ ಹಿರಿಯರು ಅದಕ್ಕೆ ಸುಲಭವಾಗಿ ಅಸ್ತು ಎನ್ನುವ ಕಾಲ ಅದಾಗಿರಲಿಲ್ಲ. ಸ್ವತಃ ಉದಯ ಶಂಕರ್‌ ನೃತ್ಯದ ಅಭಿಮಾನಿ­ಯಾಗಿದ್ದ ಸಂಜೀವ್‌ ರಾವ್‌ ಮಗಳ ಬಯಕೆ ಈಡೇರಿಸಲು ಕೊನೆಗೂ ಒಪ್ಪಿದರು.

ಮೊದಲು ಗೆಜ್ಜೆ ಕಟ್ಟಿದಾಗ ವಯಸ್ಸು ಹದಿನಾಲ್ಕು. ಎರಡು ವರ್ಷ ಸೋಹನ್‌­ಲಾಲ್‌ ಬಳಿ ಕಲಿತರು. 1951ರಲ್ಲಿ ಕಥಕ್‌ ನೃತ್ಯಾಭ್ಯಾಸಕ್ಕೆ ಗರಿ ಮೂಡಿಸಿ­ಕೊಳ್ಳಲು ಜೈಪುರಕ್ಕೆ ಹೋದರು. ಮಹಾರಾಣಿ ಗಾಯತ್ರಿ ಸ್ಕೂಲ್‌ನಲ್ಲಿ ಇಂಗ್ಲಿಷ್‌ ಪಾಠ ಹೇಳುತ್ತಲೇ ಅಲ್ಲಿ ನೃತ್ಯಾಭ್ಯಾಸ ಮುಂದುವರಿಸಿದರು.

ಅಣ್ಣ ಮನೋಹರ್‌ ಒತ್ತಾಸೆಯಿಂದ ಶ್ರೀಲಂಕಾಗೆ ಹೋಗಿ, ಅಲ್ಲಿ ಕಾಂಡ್ಯನ್‌ ನೃತ್ಯ ಕಲಿತುಬಂದರು. 1954ರಲ್ಲಿ ದೆಹಲಿಯ ಭಾರತೀಯ ಕಲಾ ಕೇಂದ್ರದಲ್ಲಿ ಕಥಕ್‌ ಕಲಿಯಲು ವಿದ್ಯಾರ್ಥಿ ವೇತನ ಸಂದಿತು. ಅಲ್ಲಿ ಶಂಭು ಮಹಾರಾಜ್‌ ಅವರ ಮೊದಲ ಶಿಷ್ಯೆಯಾಗಿ ನಾಲ್ಕು ವರ್ಷ ಕಥಕ್‌ ಸಾಣೆಗೆ ಒಡ್ಡಿಕೊಂಡರು. ರಷ್ಯಾದಲ್ಲಿ ಕೊರಿಯಾಗ್ರಫಿಯಲ್ಲಿ ತರಬೇತಿ ಪಡೆಯಲು ಭಾರತ ಸರ್ಕಾರ ನೀಡುವ ಸಾಂಸ್ಕೃತಿಕ ವೇತನ ಪಡೆದ ಮೊದಲ ಮಹಿಳೆ ಎಂಬ ಅಗ್ಗಳಿಕೆ ಇವರ­ದ್ದಾಯಿತು.

ರಷ್ಯಾದಲ್ಲಿ ಎರಡು ಗಂಟೆ ಅಲ್ಲಿನ ಭಾಷೆಯ ಕಲಿಕೆ, ಎರಡು ಗಂಟೆ ಬ್ಯಾಲೆ ಅಭ್ಯಾಸ. ಇಂಗ್ಲಿಷ್‌ನಲ್ಲಿ ಪಾಠ ಹೇಳಿಕೊಡದೇ ಇದ್ದುದರಿಂದ ಆರು ತಿಂಗಳು ಎರಡೆರಡು ತರಗತಿಗಳಿಗೆ ಹಾಜ­ರಾಗುವುದು ಅನಿವಾರ್ಯ­ವಾಗಿತ್ತು. ಮೂರು ವರ್ಷ ರಷ್ಯಾದಲ್ಲಿ ಕಲಿತು, ಶಾಸ್ತ್ರೀಯ ನೃತ್ಯದ ಬುನಾದಿ ಮೇಲೆ ಮನಸ್ಸಿನಲ್ಲಿಯೇ ಕೊರಿಯಾಗ್ರಫಿಯ ಕಟ್ಟಡ ಕಟ್ಟಿಕೊಂಡು 1964ರಲ್ಲಿ ಭಾರತಕ್ಕೆ ಮರಳಿದರು. ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷೆ ಆಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಕೊರಿಯಾಗ್ರಫಿ ಶಾಲೆ ತೆರೆಯುವಂತೆ ಬೆನ್ನುತಟ್ಟಿದರು.

ಅದರ ಫಲವೇ ಆಗಸ್ಟ್‌ 17, 1964ರಲ್ಲಿ ನಾಟ್ಯ ಇನ್ಸ್‌­ಟಿಟ್ಯೂಟ್‌ ಆಫ್‌ ಕೊರಿಯಾಗ್ರಫಿಯ ಹುಟ್ಟು. ನಾಲ್ಕು ತಿಂಗಳ ನಂತರ ಸಂಗೀತಗಾರ ಎಂ.ಎಸ್‌. ನಟರಾಜ ಅವರನ್ನು ಮದುವೆಯಾದರು. 1987­ರಲ್ಲಿ ಬೆಂಗಳೂರಿನಲ್ಲಿ ನಾಟ್ಯ ಇನ್‌­ಸ್ಟಿಟ್ಯೂಟ್‌ ಆಫ್‌ ಕಥಕ್‌ ಅಂಡ್‌ ಕೊರಿಯಾಗ್ರಫಿ (ಎನ್‌ಐಕೆಸಿ) ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ತಲೆ­ಎತ್ತಿತು. ಶಾಸ್ತ್ರೀಯ ಬೇರು, ಆಧುನಿಕ ಕಾಲದ ಬೆಳಕು, ವಿನ್ಯಾಸದ ಟಿಸಿಲು­ಗಳನ್ನು ಒಳಗೊಂಡಂಥ ನೃತ್ಯರೂಪಕ­ಗಳನ್ನು ಮೂಡಿಸುವುದರಲ್ಲಿ ಎನ್‌ಐಕೆಸಿ ಛಾಪು ಮೂಡಿಸಿತು.

ಭರತನಾಟ್ಯ, ಮಣಿಪುರಿ, ರಷ್ಯಾದ ಬ್ಯಾಲೆ ಎಲ್ಲ ರಸಗಳನ್ನು ಬಲ್ಲವರಾಗಿದ್ದ ಮಾಯಾ ರಾವ್ ಗೀತಗೋವಿಂದ, ರವೀಂದ್ರನಾಥ ಟ್ಯಾಗೋರರ ಕೃತಿಗಳನ್ನು ನೃತ್ಯಕ್ಕೆ ಅಳವಡಿಸಿದರು. ಕುವೆಂಪು ‘ರಾಮಾಯಣ ದರ್ಶನ’ದ ಕೆಲವು ಭಾಗಗಳೂ ಅವರ ಕೊರಿಯಾಗ್ರಫಿಗೆ ವಸ್ತುಗಳಾದವು. ಶಾಕುಂತಲ ಇವರ ಕೊರಿಯಾಗ್ರಫಿಯ ಜನಪ್ರಿಯ ನೃತ್ಯರೂಪಕ. ಸುಮಾರು 30 ದೇಶಗಳಿಗೆ ಸಾಂಸ್ಕೃತಿಕ ತಂಡಗಳನ್ನು ಮುನ್ನಡೆಸಿದ ಅಗ್ಗಳಿಕೆ ಅವರದ್ದು.

ಕಥಕ್‌ ನೃತ್ಯದಲ್ಲಿ ಮೂರು ವರ್ಷದ ಬಿ.ಎ. ಪದವಿ ನೀಡುವ ಏಕೈಕ ಸಂಸ್ಥೆಯಾಗಿ ‘ಎನ್‌ಐಕೆಸಿ’ಯನ್ನು ಬೆಳೆಸಿದ್ದು, 90 ನಿರ್ಮಾಣ ಸಂಸ್ಥೆಗಳನ್ನು ಒಂದೇ ಸೂರಿಗೆ ತಂದು ನಿಲ್ಲಿಸಿದ ‘ನಾಟ್ಯ ಸ್ಟೆಮ್‌ ಡಾನ್ಸ್‌ ಕಂಪ್ನಿ’ ಕಟ್ಟಿದ್ದು, ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ರಾಷ್ಟ್ರ ಮಟ್ಟದ ಪ್ರದರ್ಶನ ಕಲೆಗಳ ಉತ್ಸವ­ಗಳನ್ನು ಸೋಮನಾಥಪುರ, ಪಟ್ಟದ­ಕಲ್ಲು, ಹಳೇಬೀಡಿನಲ್ಲಿ ಆಯೋಜಿಸಿದ್ದು ಮಾಯಾ ಕೊಡುಗೆಗಳಿಗೆ ಉದಾಹರ­ಣೆಗಳು.

ಗ್ರಂಥ ಭಂಡಾ­ರ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಕಥಕ್‌ ಪರೀಕ್ಷೆಗೆ ಪಠ್ಯಕ್ರಮ ರೂಪಿಸಿಕೊಟ್ಟ ಅವರು, ‘ಎನ್‌ಐಕೆಸಿ’­ಯಲ್ಲಿ ಪ್ರದರ್ಶನ ಕಲೆಗಳು ಹಾಗೂ ಫೈನ್‌ಆರ್ಟ್ಸ್‌ ಕುರಿತ ಅಪರೂಪದ 3000ಕ್ಕೂ ಹೆಚ್ಚು ಕೃತಿಗಳ ಗ್ರಂಥಭಂಡಾ­ರವನ್ನು ರೂಪಿಸಿದರು. ಅವರು ಹೊರತಂದ ‘ಮಾಯಾ ಟು ಮ್ಯಾಟರ್‌’  ಎಂಬ ಡಿವಿಡಿ ನೃತ್ಯ, ಕೊರಿಯಾಗ್ರಫಿ ಹಾಗೂ ಅವುಗಳ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1989), ಹೆಲ್ಸಿಂಕಿಯಲ್ಲಿ ನಡೆದ ವರ್ಲ್ಡ್‌ ಆರ್ಟ್‌ ಫೆಸ್ಟಿವಲ್‌ನಲ್ಲಿ ಕಥಕ್‌ ನೃತ್ಯದ ಶ್ರೇಷ್ಠ ಪ್ರದರ್ಶನಕ್ಕೆ ಚಿನ್ನದ ಪದಕ, ಎಮಿರೇಟ್ಸ್‌ ಫೆಲೊಷಿಪ್, ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (1968), ರಾಜ್ಯೋತ್ಸವ ಪ್ರಶಸ್ತಿ (1986), ಶಾಂತಲಾ ಪ್ರಶಸ್ತಿ (2000) ಅವರ ಹಿರಿಮೆಯ ಮುಕುಟದಲ್ಲಿ ಹೊಳೆ­ಯುವ ಕೆಲವು ಮುತ್ತುಗಳು.

ಆಂಗಿಕ, ವಾಚಿಕ ಹಾಗೂ ಆಹಾರ್ಯ ಅಭಿನಯವನ್ನು ಒಗ್ಗೂಡಿಸಿ ‘ಕೊರಿ­ಯಾಗ್ರಫಿ’ ಮಾಡುವ ಪರಿಕಲ್ಪನೆಯ ಕುರಿತು ಗಂಟೆಗಟ್ಟಲೆ ಮಾತನಾಡುತ್ತಿದ್ದ ಮಾಯಾ ರಾವ್, ತಮ್ಮ ವಿದ್ಯಾರ್ಥಿ­ ಗಳಿಗೆ ನೃತ್ಯ ಸಂಯೋಜನೆಯ ಸ್ವಾತಂತ್ರ್ಯವನ್ನೂ ಕೊಡುತ್ತಿದ್ದರು.
ಕಥಕ್‌ ಕನಸಿನ ಮುಂದುವರಿಕೆಯಾಗಿ ಹುಟ್ಟಿದ ‘ನಾಟ್ಯ ಸ್ಟೆಮ್‌ ಡಾನ್ಸ್‌ ಕಂಪ್ನಿ’ಯನ್ನು ಮಗಳು ಮಧು ನಟರಾಜ್‌ ನಡೆಸಿಕೊಂಡು ಹೋಗುತ್ತಿರುವ ರೀತಿಯ ಕುರಿತು ಅವರಲ್ಲಿ ಮೆಚ್ಚುಗೆ ಇತ್ತು.

ಕಥಕ್‌ ಕಲಿಕೆಗೆ ತನ್ನ ಮಗುವನ್ನು ಸೇರಿಸುವ ತಾಯಿ, ಮಗಳ ರಂಗ­ಪ್ರವೇಶಕ್ಕೆ ಎಷ್ಟು ದಿನ ಬೇಕು ಎಂದು ಕೇಳಿದಾಗ ಬೆರಗುಗೊಂಡು ಕಣ್ಣರಳಿ­ಸುತ್ತಿದ್ದ ಅವರಿಗೆ ಹೊಸ ತಲೆಮಾರಿನ ಧಾವಂತದ ಅರಿವಿತ್ತು. ಕೆಲವೇ ದಿನ­ಗಳಲ್ಲಿ ಅಂಥ ಧಾವಂತದ ತಾಯಿಗೂ ಅವರು ‘ದೀದಿ’ ಆಗಿಬಿಡುತ್ತಿದ್ದರು. ಮಾಯಾ ರಾವ್‌ ಇನ್ನಿಲ್ಲ; ಅವರು ಮೂಡಿಸುವ ಕಥಕ್‌ ಛಾಪು ಢಾಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT