ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಲ್ಪನೆ ಬದಲಾಗಲಿ

ಮಾನವ v/s ವನ್ಯಜೀವಿ ಯಾಕೀ ಸಂಘರ್ಷ?
Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದು ಅರಣ್ಯದಲ್ಲಿ ರೆಸಾರ್ಟ್‌ ನಿರ್ಮಿಸಿ ಪ್ರವಾಸೋದ್ಯಮ ಬೆಳೆಸುವುದೇ ಅಭಿವೃದ್ಧಿ ಎನ್ನುವಂತಾ­ಗಿದೆ. ಅರಣ್ಯ ಪ್ರದೇಶ ದಿನೇ ದಿನೇ ಸಂಕುಚಿತವಾಗುತ್ತಿದೆ. ಕೈಗಾರಿಕೆ, ನಗರೀಕರಣ, ಆರ್ಥಿಕ ಪ್ರಗತಿಯಿಂದ  ಕಾಡಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮುಖ್ಯವಾಗಿ ಪ್ರಾಣಿಗಳಿಗೆ ಆಹಾರ, ನೀರು ಮತ್ತು ಸಂತಾನ ಅಭಿವೃದ್ಧಿಗೆ ಸ್ಥಳ ಬೇಕು. ಆದರೆ, ಅರಣ್ಯ ಪ್ರದೇಶ ಸಂಕುಚಿತವಾಗುತ್ತಿರುವುದೇ ದೊಡ್ಡ ಸಮಸ್ಯೆ. ಜತೆಗೆ ಒಂದು ಕಾಡಿಗೂ ಇನ್ನೊಂದು ಕಾಡಿಗೂ ಸಂಪರ್ಕವೇ ಇಲ್ಲದಂತಾ­ಗುತ್ತಿದೆ.

ಮೊದಲು ಒಂದು ಕಾಡಿನ ತುದಿಗೆ ಇನ್ನೊಂದು ಕಾಡು ಆರಂಭವಾಗುತ್ತಿತ್ತು. ಈಗ ಅಂತಹ ಸಂಪರ್ಕವನ್ನೇ ಕಡಿದು ಹಾಕಲಾಗುತ್ತಿದೆ.  ಈಗಿರುವ ಕಾಡುಗಳ ಸುತ್ತ ಒತ್ತಡ ಹೆಚ್ಚುತ್ತಿದೆ. ಕಾಡುಗಳ ನಡುವೆ ‘ಕಾರಿಡಾರ್‌’ಗಳು ಇಲ್ಲ. ಒಂದೊಂದು ಕಾಡು ಒಂದೊಂದು ದ್ವೀಪವಾಗುತ್ತಿದೆ.

ನಿಸರ್ಗದಲ್ಲಿ ಆಹಾರ ಸರಪಳಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸರಪಳಿಯಲ್ಲಿ ಯಾವುದಾದರೂ ಒಂದು ಕೊಂಡಿ ಕಳಚಿದರೂ ಪರಿಸರದಲ್ಲಿ ಅಸಮತೋಲನ ಉಂಟಾಗಿ ವಿವಿಧ ರೀತಿಯಲ್ಲಿ ಪರಿಣಾಮಗಳು ಉಂಟಾಗುತ್ತವೆ. ಆಹಾರ ಸರಪಳಿಯಲ್ಲೂ ಯಾವ ಪ್ರಾಣಿ ಯಾವ ಜಾಗದಲ್ಲಿ ಇರಬೇಕೋ ಅಲ್ಲಿಯೇ ಇದ್ದರೆ ಸುರಕ್ಷಿತ.

ಪ್ರಾಣಿಗಳು ನಾಡಿಗೆ ಬಂದಾಗ ಜನ ಹೇಗೆ ವರ್ತಿಸುತ್ತಾರೆ ಎನ್ನುವುದು ಸಹ ಮುಖ್ಯ. ಆದರೆ, ಈಗಿನ ಪೀಳಿಗೆಗೆ ಪ್ರಾಣಿಗಳ ಬಗ್ಗೆ ಭಯ ಮಾತ್ರ ಇದೆ. ಪರಿಸರದ ಜತೆಗಿನ ಸಂಬಂಧ ಇಲ್ಲದಿರುವುದೇ ಇದಕ್ಕೆ ಕಾರಣ. ಹೀಗಾಗಿ ಅಂತರ ಸೃಷ್ಟಿಯಾಗಿದೆ. ಎಲ್ಲಿ ಮಾನವ–ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿ­ದೆಯೋ ಅಲ್ಲಿನ ಜನರಿಗೆ ಪ್ರಾಣಿಗಳು ಮತ್ತು ಅರಣ್ಯ ಕುರಿತಾದ ಸಾಮಾನ್ಯ ಜ್ಞಾನ ಮತ್ತು ತಿಳಿವಳಿಕೆ ಮೂಡಿಸಬೇಕು.

ತೋಟಕ್ಕೆ ಆನೆ ದಾಳಿ ಮಾಡಿದಾಗ ಹೇಗೆ ವರ್ತಿಸಬೇಕು ಎನ್ನುವ ಬಗ್ಗೆಯೂ ಅರಿವು ಇರಬೇಕು. ಪ್ರಸ್ತುತ ಯಾವುದಾ­ದರೂ ಪ್ರಾಣಿ ದಾಳಿ ನಡೆಸಿದರೆ ನೂರಾರು ಜನ ಸೇರುತ್ತಾರೆಯೇ ಹೊರತು ಯಾವುದೇ ರೀತಿ ಪರಿಹಾರ ರೂಪಿಸುವುದಿಲ್ಲ. ಇದ­ರಿಂದ ಹೆಚ್ಚಿನ ಹಾನಿ ಉಂಟಾಗುತ್ತಿದೆ. ಜನರಲ್ಲಿ ಸಹಿಷ್ಣು ಮನೋಭಾವವೇ ಇಲ್ಲದಂತಾಗಿದೆ. ಆದ್ದರಿಂದ ಜನರ ಮನಸ್ಥಿತಿ ಬದಲಾಗಬೇಕು. ಇನ್ನೊಂದೆಡೆ ಅರಣ್ಯ ಇಲಾಖೆ ಘರ್ಷಣೆಗಳ ನಿರ್ವಹಣೆಯಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಪ್ರಾಣಿಗಳಿಗೆ ರಕ್ಷಣೆ ದೊರೆಯುತ್ತಿಲ್ಲ.

ದೇಶದಲ್ಲಿ ಪ್ರತಿ ವರ್ಷ ಅಂದಾಜು ಒಂದು ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ. ಅಪಘಾತಗಳು ಸಂಭವಿಸುತ್ತವೆ ಎಂದು ವಾಹನಗಳನ್ನು ನಿಷೇಧಿಸಲು ಸಾಧ್ಯವೇ? ವನ್ಯಜೀವಿಗಳು ದಾಳಿ ನಡೆಸಿದಾಗ ಸಂಕಷ್ಟಕ್ಕೆ ಸಿಲುಕಿದವರಿಗೆ  ಪರಿಹಾರ ನೀಡುವುದರಿಂದ ಮಾತ್ರ ಎಲ್ಲ ಸಮಸ್ಯೆಗಳೂ ಇತ್ಯರ್ಥ­ವಾಗುವುದಿಲ್ಲ. ಇದರ ಬದಲಾಗಿ ಸಂಘರ್ಷ ಉಂಟಾಗುವ ಪರಿಸ್ಥಿತಿ ಹೇಗೆ ಸೃಷ್ಟಿಯಾಗಿದೆ ಎನ್ನುವುದನ್ನು ಅರಿತುಕೊಂಡು ಪರಿಹಾರ ರೂಪಿಸುವ ಪ್ರಯತ್ನ ಮಾಡಬೇಕು.

ಪ್ರಾಣಿಗಳನ್ನು ಕಂಡ ತಕ್ಷಣ ಸಾಯಿಸಬಹುದೇ? ಯಾವುದೇ ಪ್ರಾಣಿಯನ್ನು ಸಾಯಿಸಬೇಕಾದರೂ ಕಾನೂನಿನಲ್ಲಿ ಮಾನ­ದಂಡ­ಗಳನ್ನು ನಿಗದಿಪಡಿಸಲಾಗಿದೆ. ಮೂಕ ಪ್ರಾಣಿಗಳಿಗೆ ದನಿಯಾಗಬೇಕಾದವರೇ ಮೌನ ವಹಿಸಿದ್ದಾರೆ. ಹೀಗಾಗಿ ಮೂಕ ಪ್ರಾಣಿಗಳ ಕೂಗು ಅರಣ್ಯರೋದನವಾಗಿದೆ.

ಪರಿಹಾರ: ಅರಣ್ಯ  ಇಲಾಖೆ, ಮಾನವ–ಪ್ರಾಣಿಗಳ ನಡುವಿನ ಸಂಘರ್ಷದ ಪ್ರದೇಶಗಳನ್ನು ಗುರುತಿಸಬೇಕು. ಸಂಘರ್ಷವನ್ನು ಕಡಿಮೆ ಮಾಡುವ ಅಥವಾ ತಡೆಗಟ್ಟುವ ಯೋಜನೆಗಳನ್ನು ರೂಪಿಸಬೇಕು. ಸಂಘರ್ಷ ನಿಭಾ­ಯಿಸಲು ನಮ್ಮಲ್ಲಿ ಸಿದ್ಧತೆಗಳು ಕಡಿಮೆ. ನಾಡಿಗೆ ಪ್ರಾಣಿಗಳು ಬಂದಾಗ ಉಂಟಾಗುವ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸನ್ನದ್ಧ ಸ್ಥಿತಿಯಲ್ಲಿ ಅರಣ್ಯ ಇಲಾಖೆ ಇರುವುದಿಲ್ಲ. ಹೀಗಾಗಿ ಇಲಾಖೆಯ ಚಿಂತನಾ ಕ್ರಮಗಳು ಬದಲಾಗಬೇಕು.

ಪ್ರಾಣಿಗಳು ನಾಡಿಗೆ ಬಾರದಂತೆ ಕಂದಕ, ಸೌರಬೇಲಿ ನಿರ್ಮಿ­ಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ­ಗೊಳಿಸ­ಬೇಕು. ಅರಣ್ಯದ ಸಮೀಪ ಇರುವ ಜಮೀನಿನಲ್ಲಿ ಕಬ್ಬು, ಬಾಳೆ­ಯಂತಹ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರತಿ ಜೀವಿಗೂ ಬದು­ಕುವ ಛಲ ಇದ್ದೇ ಇರುತ್ತದೆ. ಹೀಗಾಗಿ ರುಚಿಕರವಾದ ಮತ್ತು ಸುಲಭವಾಗಿ ಆಹಾರ ಸಿಗುವುದಾದರೆ ಪ್ರಾಣಿಗಳು ಅಂತಹ ಸ್ಥಳಕ್ಕೆ ಲಗ್ಗೆ ಇಡುವುದು ಸಹಜ. ಆದ್ದರಿಂದ ಅರಣ್ಯಕ್ಕೆ ಸಮೀಪದ ಪ್ರದೇಶಗಳಲ್ಲಿ ಯಾವು­ದನ್ನು ಕಾಡು ಪ್ರಾಣಿಗಳು ತಿನ್ನುವು­ದಿಲ್ಲವೋ ಅಂತಹವನ್ನು ಬೆಳೆ­ಯಲು ಉತ್ತೇಜನ ನೀಡಬೇಕು.

ಕೆಲವೆಡೆ ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಾರೆ. ಇದರ ವಾಸನೆಗೂ ಆನೆಗಳು ಬರುತ್ತವೆ. ಇಂತಹ ಸಾಮಾಜಿಕ ಸಮಸ್ಯೆ­ಗಳಿಗೆ ಪರಿಹಾರ ರೂಪಿಸುವ ಪ್ರಯತ್ನ ಮಾಡಬೇಕು. ಯಾವುದಾದರೂ ಯೋಜನೆಗೆ ಭೂಮಿ ನೀಡುವ ಸಂದರ್ಭ ಒದಗಿದರೆ ಕಂದಾಯ ಭೂಮಿ ನೀಡಬೇಕೇ ಹೊರತು ಅರಣ್ಯ ಪ್ರದೇಶವನ್ನು ಅಲ್ಲ. ಎಲ್ಲರಿಗೂ ಭೂಮಿ ಕೊಡಲು ಸಾಧ್ಯವಿಲ್ಲದ ಕಾರಣ ಪುನರ್ವಸತಿ ಕಲ್ಪಿಸುವ ಯೋಜನೆಗಳಲ್ಲಿ ನಿರಾಶ್ರಿತರಿಗೆ ಉದ್ಯೋಗ ನೀಡಬೇಕು.

ಯೋಜನೆ ಬೇಡ: ಕಾಡಿನ ಮಧ್ಯೆ ವಿದ್ಯುತ್‌ ಸೇರಿದಂತೆ ಯಾವುದೇ ಯೋಜನೆ­ಜಾರಿಗೊಳಿಸ­ಬಾರದು. ನಗರಗಳ ಸುತ್ತ ಉದ್ಯ­ಮ­­ಗಳನ್ನು ಸ್ಥಾಪಿ­ಸಬೇಕೇ ಹೊರತು ಕಾಡು­ಗಳಲ್ಲಿ ಅಲ್ಲ. ಅರಣ್ಯ ಪ್ರದೇಶದ ತುದಿಯಲ್ಲಿ ಗಾಳಿ­ಯಂತ್ರ­ಗಳನ್ನು ಅಳ­ವಡಿಸುವ ಯೋಜನೆ­ಗಳು ಸಹ ಸಾಧು­ವಲ್ಲ. ಗಾಳಿ­ಯಂತ್ರ ಸ್ಥಾಪಿಸಿದರೆ ಶೇಕಡ 60ರಷ್ಟು ಸಬ್ಸಿಡಿ ದೊರೆ­ಯು­ತ್ತಿದೆ.

ಹೀಗಾಗಿ ಇದೊಂದು ಸಬ್ಸಿಡಿ ಪಡೆ­ಯುವ ಯೋಜನೆ­ಯಾಗುತ್ತಿದೆ ಹೊರತು ನಿಜ­ವಾಗಿ­ಯೂ ಎಷ್ಟು ವಿದ್ಯುತ್ ಉತ್ಪಾದನೆ­ಯಾಗಿದೆ ಎನ್ನುವ ಬಗ್ಗೆ ನಿಗಾ ವಹಿಸುವ ವ್ಯವಸ್ಥೆ ಸರಿ­ಯಾಗಿ ನಡೆಯುತ್ತಿಲ್ಲ. ಗಾಳಿ­ಯಂತ್ರಗಳಿಂದ ಪಕ್ಷಿಗಳಿಗೆ ತೊಂದರೆ­ಯಾಗುತ್ತಿದೆ. ವಲಸೆ ಬರುವ ಪಕ್ಷಿಗಳಿಗೂ ಧಕ್ಕೆ­ಯಾಗುತ್ತಿದೆ. ಜತೆಗೆ ಗಾಳಿ­ಯಂತ್ರ­­ಗಳನ್ನು ಅಳವ­ಡಿಸುವ ಸಲು­ವಾಗಿ ಅರಣ್ಯ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸ­ಲಾಗುತ್ತಿದೆ. ಆದರೆ, ಗಾಳಿಯಂತ್ರಗಳನ್ನು ನೆಲದ ಮಟ್ಟದಲ್ಲೇ ಅಳವಡಿಸ­ಬಹುದು.

ಇಂತಹ ಪ್ರಯೋಗ ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಆದ್ದರಿಂದ, ಈಗಿನ ವ್ಯವಸ್ಥೆಯನ್ನು ಆಮೂಲಾಗ್ರ­ವಾಗಿ ಬದಲಾಯಿಸಬೇಕಾಗಿದೆ. ಅರಣ್ಯದಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಅಗತ್ಯವೂ ಇಲ್ಲ. ಈಗ ಜೆಸಿಬಿ, ಲಾರಿಗಳು ಹೋಗುವ ಜಾಗಗಳಲ್ಲಿ ಮಾತ್ರ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ.  ಕಾಡಿನಲ್ಲೇ ಹಳ್ಳ, ಕೆರೆಕಟ್ಟೆಗಳಿವೆ. ಸಹಜವಾಗಿಯೇ ಹರಿಯುವ ನೀರು ಇದ್ದರೆ ಪ್ರಾಣಿಗಳಿಗೆ ಅನುಕೂಲ. ಚೆಕ್‌ಡ್ಯಾಂ ಇದ್ದಲ್ಲಿಯೇ ಎಲ್ಲ ಪ್ರಾಣಿ­ಗಳೂ ಹೋಗುವುದಿಲ್ಲ.

ಒಂದು ವೇಳೆ ಚೆಕ್‌ಡ್ಯಾಂ ನಿರ್ಮಿಸಿದರೂ ಆ ಸ್ಥಳದ ಸುತ್ತಮುತ್ತ ಮಾತ್ರ ಪ್ರಾಣಿಗಳ ಸಂಖ್ಯೆ ಅಧಿಕವಾಗಿ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ನಿಸರ್ಗದಲ್ಲಿ ಸಹಜವಾಗಿ ಬದುಕುವ ಪ್ರಾಣಿ, ಪಕ್ಷಿಗಳಿಗೆ ತೊಂದರೆ ನೀಡಿದಂತಾಗಿ ಅರಣ್ಯ ಪ್ರದೇಶದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ನೈಸರ್ಗಿಕವಾಗಿ ಇರುವುದನ್ನು ಅದು ಯಥಾಸ್ಥಿತಿಯಲ್ಲೇ ಇರಲು ಬಿಡಬೇಕು.

ಯಾವುದೇ ಸಂದರ್ಭದಲ್ಲಿ ನಿಸರ್ಗದ ವಿರುದ್ಧ ಹೋಗುವುದು ಸರಿ ಅಲ್ಲ.  ಈಗಿರುವ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ರಕ್ಷಣಾ ಕಾಯ್ದೆಗಳು ಉತ್ತಮ­ವಾಗಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಸಾಕು. ಆದರೆ, ಈ ಕಾಯ್ದೆಗಳನ್ನು ಸಡಿಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ಅಕ್ರಮ ಸಕ್ರಮ: ಅಕ್ರಮ–ಸಕ್ರಮದಂತಹ ಯೋಜನೆಗಳನ್ನು ಜಾರಿಗೊಳಿಸುವುದು  ತಪ್ಪು. ಅರಣ್ಯ ಭೂಮಿಯನ್ನು ಕಬಳಿಸಿದ ನಂತರ ಸಕ್ರಮಗೊಳಿಸಿಕೊಳ್ಳುವುದು ಸರಿ ಅಲ್ಲ. ಇಂತಹ ಭೂ ಅತಿಕ್ರಮಣವನ್ನು ಕಾನೂನು ಬದ್ಧಗೊಳಿಸುವುದಾದರೆ ಅದನ್ನು ‘ಅಕ್ರಮ’ ಎಂದು ಕರೆಯಲೇಬಾರದು. ಕಾನೂನು ಎಲ್ಲರಿಗೂ ಸಮ. ಆದರೆ, ಅದನ್ನು ವಿಶ್ಲೇಷಿಸುವಾಗ ಭೇದಭಾವ ಇರಬಾ­ರದು. ಬಡವರಿಗೆ ಯಾವ ರೀತಿಯ ಕಾನೂನು ಅನ್ವಯವಾಗು­ತ್ತದೋ ಶ್ರೀಮಂತರಿಗೂ ಅದೇ ಅನ್ವಯವಾಗಬೇಕು. ಈಗಲೇ ಎಚ್ಚೆತ್ತುಕೊಂಡು ದೂರದೃಷ್ಟಿಯಿಂದ ಅರಣ್ಯ ಸಂರಕ್ಷಿಸುವ ಯೋಜನೆಗಳನ್ನು ರೂಪಿಸಿದರೆ, ಭವಿಷ್ಯದಲ್ಲಿ ಇನ್ನಷ್ಟು ಬಿಗಡಾಯಿಸಬಹುದಾದ ಮಾನವ – ಪ್ರಾಣಿ ಸಂಘರ್ಷಕ್ಕೆ ತಡೆ ಒಡ್ಡಲು ಸಾಧ್ಯ.
(ಲೇಖಕರು ವನ್ಯಜೀವಿ ಕಾರ್ಯಕರ್ತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT