ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ರ್ ಬಿಟ್ ಇವ್ರ್ ಬಿಟ್ ಇವ್ರ್ಯಾರು?

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಆ ಮಗುವಿನ ಮನಸ್ಸು ನಲುಗಿದೆ. ದೈಹಿಕವಾಗಿ ಮಗು ಹಿಂಸೆಯನ್ನು ಎದುರಿಸಿದೆ. ಈಗ ಆ ಮಗು ಆಗಾಗ ಆ ಮನಸ್ಥಿತಿಯಿಂದ ಹೊರಬಂದು ಆಟವಾಡಲೂ ಪ್ರಯತ್ನಿಸುತ್ತಿರಬಹುದು. ಮಧ್ಯೆ ಮಧ್ಯೆ ಮಾತ್ರ ಆ ಕತ್ತಲ ಕೋಣೆ,  ತನ್ನ ಮೇಲೆ ಮಾಡಿದ ದೌರ್ಜನ್ಯ ಎಲ್ಲವೂ ಹೊಳಹುಗಳ ತರಹ ಕಾಣುತ್ತಿರಲಿಕ್ಕೂ ಸಾಕು. ಇನ್ನು ಸ್ವಲ್ಪ ದಿನಕ್ಕೆ ಆ ಮಗು ಅದನ್ನು ಮರೆತೂಬಿಡಬಹುದು. ಆದರೆ, ಬೆಳೆಯುತ್ತಲೇ ಪ್ರೌಢಾವಸ್ಥೆ ಮಾತ್ರ ನರಕ­ವಾ­ಗು­ತ್ತದೆ. ಈ ನೆನಪುಗಳು ಮರುಕಳಿಸಲು ಪ್ರಾರಂಭ­ವಾಗುತ್ತವೆ. ತನ್ನದಲ್ಲದ ತಪ್ಪಿಗೆ ತಾನು ಬಲಿಯಾ­ದದ್ದು ಬೆಳೆಯುತ್ತಿರುವ ಹುಡುಗಿಗೆ ಅರ್ಥೈಸಲು ಸಾಧ್ಯವಿಲ್ಲದ ತಳಮಳವನ್ನು ತಂದಿಡುತ್ತದೆ. ಯಾಕೆ, ಯಾಕೆ, ಯಾಕೆಗಳೇ ದುಃಖದ ಬಣ್ಣ ತಳೆದು ಗಟ್ಟಿಯಾಗುತ್ತಾ ಹೋಗುತ್ತವೆ.

ಇವತ್ತು ಧರಣಿ ಕೂರುತ್ತಿರುವವರು, ಪ್ಲಕಾರ್ಡ್ ಹಿಡಿದು ರಸ್ತೆ ಮೇಲೆ ನಡೆಯುತ್ತಿರು­ವ­ವರು, ಯಾರೂ ಆಕೆಯ ಸಹಾಯಕ್ಕೆ ಬರು­ವು­ದಿಲ್ಲ. ಈ ಒಳಗಿನ ಯುದ್ಧದಲ್ಲಿ ಶತ್ರು ಪಾಳೆ­ಯವೂ ಅವಳದ್ದೇ, ಮಿತ್ರ ಪಾಳೆಯವೂ ಅವ­ಳದ್ದೇ. ಜಯಿಸಿದ ಯುದ್ಧವನ್ನೂ ಅವಳ ಮನಸ್ಸೇ ಹುಟ್ಟುಹಾಕಿದ್ದು. ಇದೆಲ್ಲ ಯಾಕೆ ಯಾಕೆ ಮುಖ್ಯ ಆಗುತ್ತದೆ ಎಂದರೆ ಅಂದು ಘೋಷಣೆಗಳನ್ನು ಕೂಗಿದ, ಪ್ರತಿಭಟನೆ ನಡೆಸಿದ ನಾವ್ಯಾರೂ ಇರುವುದಿಲ್ಲ. ಇದು ಅವಳೊಬ್ಬಳ ಕಥೆಯೂ ಅಲ್ಲ. ಲಕ್ಷಾಂತರ ಹೆಣ್ಣುಗಳ ಕಥೆ. ಸಾಕಷ್ಟು ಗಂಡುಗಳ ಕಥೆಯೂ ಹೌದು. ಲೈಂಗಿಕ ದೌರ್ಜನ್ಯ ಮಾನಸಿಕವಾದದ್ದು, ದೇಹವನ್ನು ಮೀರಿದ ಗಾಯ ಮಾಡಿಬಿಟ್ಟು ವರ್ಷಾ­ನುಗಟ್ಟಲೆ ಆ ವಿಷವನ್ನು ಬಿಡುಗಡೆಗೊಳಿ­ಸುತ್ತಾ ಇರುವ ಸಾಮರ್ಥ್ಯ ಹೊಂದಿದ ಹಿಂಸಾಕ್ರಮ.

ಬಸ್ಸು- ರೈಲು -ರಿಕ್ಷಾಗಳು, ಮನೆಗಳ ಗೋಡೆ­ಗಳು, ಹಳ್ಳಿಗಳ ಕಣಗಳು, ಗದ್ದೆಗಳು, ಶಾಲೆಯ ಬಯ­ಲುಗಳು ಮಾತಾಡುವಂತಿದ್ದರೆ ಇಂತಹ ಮಿಲಿ­ಯಗಟ್ಟಲೆ ಕಥೆಗಳನ್ನು ಹೇಳುತ್ತಿದ್ದವೇನೋ. ಈಗ ಅಂತರರಾಷ್ಟ್ರೀಯ ಶಾಲೆಯೊಂದರಲ್ಲಿ ನಡೆದ ಘಟನೆ ನಾವು ಬೆಳೆಸುತ್ತಿರುವ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಜ್ಞಾನ ಪಸರಿಸುತ್ತಿರುವ ಹಾಗೇ ಇಂದು ದೌರ್ಜನ್ಯದ ಸುಲಭ ಮಾರ್ಗಗಳೂ ಬೆಳೆಯುತ್ತಿವೆ. ಹಾಗೆ ನೋಡಿದರೆ ಈ ಸಮಸ್ಯೆ ಹೊಸತಲ್ಲ. ಆದರೆ, ಮುಂದುವರೆದ ಸಮಾಜದಲ್ಲಿ ಅನಾದಿ ಕಾಲದಿಂದ ನಡೆದುಬಂದು ಇಂದಿಗೂ ಜೀವಂತ­ವಿರುವ ಸಮಸ್ಯೆಗಳಲ್ಲಿ ಲೈಂಗಿಕ ದೌರ್ಜನ್ಯವೂ ಒಂದಾ­ಗಿದೆ.  ಈ ಸಮಸ್ಯೆಯನ್ನು  ಅರ್ಥಮಾಡಿ­ಕೊಳ್ಳುವಲ್ಲಿ, ಇದಕ್ಕೆ ಪರಿಹಾರ ಹುಡುಕುವಲ್ಲಿ ಎಲ್ಲೋ ನಾವು ದಾರಿ ತಪ್ಪಿದ್ದೇವೆ. ಈ ಸಮಸ್ಯೆಯ ಬುಡವೇ ನಮಗೆ ಕಾಣುತ್ತಿಲ್ಲ.

ಇಷ್ಟಕ್ಕೂ ಅತ್ಯಾಚಾರ ಲೈಂಗಿಕವೇ ಅಥವಾ ಅವಕಾಶ -ಆಧರಿತ ಒಂದು ಕ್ರಿಯೆಯೇ? ಹಿಂಸ್ರ ಮನಸ್ಥಿತಿಯನ್ನು ಪ್ರತಿಫಲಿಸುವ ಈ ಕ್ರಿಯೆ ದೈಹಿಕ ಅವಶ್ಯಕತೆಯಂತೂ ಅಲ್ಲ. ಯಾಕೆಂದರೆ ಒಬ್ಬ ಮನುಷ್ಯ ಲೈಂಗಿಕ ಕ್ರಿಯೆಗೆ ತಯಾರಾಗಿ ತನ್ನ ‘ಟಾರ್ಗೆಟ್’ಗಳನ್ನು ಹುಡುಕುವುದು ನಡೆದಿರಬ­ಹು­ದಾ­ದರೂ ಹಾಗೆ ಪೂರೈಕೆಯಾಗಿರುವುದು ಕಡಿಮೆ. ಬಹುತೇಕ ಅತ್ಯಾಚಾರಗಳು ಅವಕಾಶ ಸಿಕ್ಕಾಗ ಆದಂತಹವು. ಒಂದು ಕೊಲೆ ಮಾಡಲು ಮನುಷ್ಯ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಾನೆ ಎಂದು ಮನೋ­ವೈದ್ಯರು ಹೇಳುತ್ತಾರೆ. ಅದು ಅಪರಾಧವೆಂದು ಅವನಿಗೆ ಗೊತ್ತಿದ್ದರೂ ಅದು ಅವನ ಗುರಿಯಾ­ಗಿರುತ್ತದೆ. ಅದಕ್ಕೆ ಪ್ಲಾನಿಂಗ್ ಅವಶ್ಯಕತೆ ಇದೆ. ಆದರೆ, ಅತ್ಯಾಚಾರ ಹಾಗಲ್ಲ. ಅವಕಾಶ ಸಿಕ್ಕ ಕೂಡಲೇ ಪ್ಲಾನ್ ತಯಾರಾಗುತ್ತದೆ.

ಮೊನ್ನೆ ಮಗುವಿನ ಮೇಲೆ ನಡೆದ ಅತ್ಯಾಚಾರ ಯಾರ ತಪ್ಪು ಎಂದು ಆಲೋಚಿಸುವುದೂ ಕಷ್ಟವಾಗಿದೆ. ಆ ಘಟನೆ ನಡೆದ ಶಾಲೆಯದ್ದೇ? ಆರೋಪಿ ಸ್ಕೇಟಿಂಗ್ ಮಾಸ್ಟರನ ರೋಗಗ್ರಸ್ತ ಮನಸ್ಸೇ? ಅಥವಾ ಹಿಂದೆ ಈ ತೆರನ ಘಟನೆಗಳು ನಡೆದಾಗ ಕಣ್ಣು ಮುಚ್ಚಿ ಕೂತ ನಮ್ಮದೇ? ವ್ಯವಸ್ಥೆಯದ್ದೇ? ಉತ್ತರ ಕೊಡದೆ ಇನ್ನೂ ಪರಿಶೀಲಿಸುತ್ತಿದ್ದೇವೆ ಎಂದು ಹಾರಿಕೆಯ ಉತ್ತರ ಕೊಟ್ಟು ನಡೆದ ಪೊಲೀಸರದ್ದೇ? ಶಾಲೆ ಸುರಕ್ಷಿತ ಎಂದು ನಂಬಿದ ತಂದೆತಾಯಿಗಳದ್ದೇ?
ಇದೊಂದೇ ಘಟನೆಯನ್ನು ಮುಂದಿಟ್ಟು­ಕೊಂಡು ನೋಡಿದರೆ ಎಲ್ಲರೂ ತಪ್ಪಿತಸ್ಥರೇ ಎನ್ನಿಸುತ್ತದೆ. ಅದರೆ, ಹೆಚ್ಚಿನ ತೂಕ ಬೀಳುವುದು ಮೂವರ ಮೇಲೆ. ಮೊದಲಿಗೆ ಆ ದೌರ್ಜನ್ಯ ನಡೆಸಿದಾತ. ನಂತರ ಶಾಲೆಯ ಆಡಳಿತ ವರ್ಗ. ಮತ್ತು ಆತ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಯ ವ್ಯವಸ್ಥಾಪಕ ವರ್ಗ. ಈ ಮೂವರೂ ಸೇರಿ ಆ ಮಗುವಿಗೆ ಈ ಹಿಂಸೆಯನ್ನು ತಂದಿಟ್ಟಿದ್ದಾರೆ.

ಅತ್ಯಾಚಾರ ಮಾಡಿದ ಆ ದುರಾತ್ಮನಿಗೆ ಮೂರು ವರ್ಷ ವಯಸ್ಸಿನ ಮಗಳಿದ್ದಾಳೆ. ತಂದೆಯ ಸಂವೇ­ದ­ನೆಗಳೇ ಇರಲಿಲ್ಲವೇ ಆತ­ನಿಗೆ? ಕತ್ತಲ ಕೋಣೆ­ಯಲ್ಲಿ ಮಗು ಕಂಡ ಮರು­ಕ್ಷಣ­ದಲ್ಲಿ ಆತ ಲೈಂಗಿಕ ಕ್ರಿಯೆಗೆ ತಯಾ­ರಾ­ಗು­ತ್ತಾನೆ ಎಂದರೆ ಅವನ ಸೆಕ್ಶುಯಾಲಿಟಿ ಎಂಥದ್ದು? ಇದು ದೈಹಿಕ ಕ್ರಿಯೆ­ಯಷ್ಟೇ ಅಲ್ಲ, ಅವಕಾಶ ಕಂಡಾಗ ತನ್ನೊ­ಳ­ಗಿನ ತಂದೆಯನ್ನೂ ಕೊಂದು ತನ್ನ ನರನಾಡಿಗ­ಳನ್ನೆಲ್ಲ ಕೇಂದ್ರೀಕರಿಸಿ ಪ್ರೀತಿಯಲ್ಲಿ ಮಾತ್ರ ನಡೆಯಬಹುದಾದ್ದು ಎಂದು ನಂಬಿರುವ ಒಂದು ಕ್ರಿಯೆಯನ್ನು ಇಪ್ಪತ್ತು ನಿಮಿಷಗಳ ಒಳಗೇ ಮಾಡಿ ಮುಗಿಸಿಬಿಡುತ್ತಾನೆ ಎಂದರೆ ಒಳಗೆ ಬೆಳೆ­ದಿ­ರುವ ವಿಕೃತಿಗೆ ಒಂದು ಆಯಾಮ ಇರಲು ಸಾಧ್ಯವೇ?

ಇದನ್ನು ಗಮನಿಸಿ. ಹಿಂದೆ ಆತ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಆತನಿಗೆ ಇಂತಹದ್ದೇ ನಡವಳಿಕೆಯಿಂದಾಗಿ ವಾರ್ನಿಂಗ್ ಕೊಟ್ಟಿದ್ದರು. ಕಾರ್ಪೊರೇಟ್ ಕಂಪೆನಿಗಳಲ್ಲಿ, ಶಾಲೆಗಳಲ್ಲಿ ಕೆಲವು ಟೋಕನ್ ಪ್ರಾಕ್ಟೀಸುಗಳು ಇರುತ್ತವೆ. ಅಂದರೆ, ತೋರಿಕೆಗೆ ಮಾತ್ರ. ಹಿನ್ನೆಲೆ ಪರಿಶೀಲ­ನೆಯೂ ಅಂಥದ್ದೇ ಒಂದು ಅಂತರ­ರಾಷ್ಟ್ರೀಯ ಅಂತ ಹೇಳಿಕೊಳ್ಳಲು ಅನುಕೂಲವಾಗಲಿಕ್ಕೆ ಇಟ್ಟಿ­ರುವ ಸಾಧನ. ತೋರಿಸಲಿಕ್ಕೆ ಕರಾಟೆ, ಸ್ಕೇಟಿಂಗು, ಸ್ವಿಮ್ಮಿಂಗು ಎಲ್ಲದಕ್ಕೂ ಮಾಸ್ಟರುಗಳು ಬೇಕು. ಆ ಮಾಸ್ಟರುಗಳು ಇದ್ದಾರೆಂಬುದು ಪೋಷಕರಿಗೂ ಮೇಲೆ-ಮೇಲೆ ಸಮಾಧಾನ ತರಿಸುವ, ಹಾಗೂ ಪ್ರತಿಷ್ಠೆ ಹೆಚ್ಚಿಸುವ ಸಂಗತಿ.

ಆತ ವಿಬ್ಗಯೊರ್ ಶಾಲೆಗೆ ಬಂದು ಸೇರಿ­ಕೊಂಡಾಗ ಆತನ ಹಿನ್ನೆಲೆ ಪರಿಶೀಲನೆ ನಡೆದಿಲ್ಲ ಎನ್ನುವುದು ಖಚಿತವಾಗುತ್ತಿದೆ. ಅಥವಾ, ಹಿಂದಿನ ಶಾಲೆಯವರು ಬೇಜವಾಬ್ದಾರಿತನದಿಂದ ಆ ಮಾಹಿತಿಯನ್ನು ಕೊಡದಿರಲಿಕ್ಕೂ ಸಾಕು. ಆಗ, ಈ ಘಟನೆಯ ಹೊಣೆಗಾರಿಕೆಯನ್ನು ಹಿಂದಿನ ಶಾಲೆಯವರೂ ಹೊರಬೇಕಾಗುತ್ತದೆ. ಯಾಕೆಂದರೆ ತಮ್ಮ ಶಾಲೆಯಲ್ಲಿ ಆತ ಕೆಟ್ಟದಾಗಿ ನಡೆದುಕೊಂಡದ್ದಕ್ಕೆ ಹೊರ ಹಾಕಿದವರು, ಆತ ಇದೇ ಊರಿನ ಇನ್ನೊಂದು ಶಾಲೆ ಸೇರಿದ್ದಾನೆ ಎನ್ನುವ ವಿಷಯಕ್ಕೆ ಕುರುಡರಾಗಿಯಂತೂ ಇರಲು ಸಾಧ್ಯವಿಲ್ಲ. ತಮ್ಮ ಮನೆಯಲ್ಲಿದ್ದ ಕಸವನ್ನು ಬೀದಿಗೆ ಹಾಕಿ ಕೈತೊಳೆದುಕೊಂಡು ಬಿಟ್ಟರು. ಇದು ಒಪ್ಪುವ ಮಾತೇ?

ಸರ್ಕಾರದ ವಿರುದ್ಧ ದನಿಯೆತ್ತಬೇಕಾಗಿ ಬಂದಾಗ ಶಾಲೆಗಳೆಲ್ಲ ಅದು ಹೇಗೋ ಒಗ್ಗಟ್ಟಾ­ಗಿ­ಬಿಡುತ್ತವೆ. ಶಿಕ್ಷಣ ಹಕ್ಕು  ಕಾಯ್ದೆ ವಿಚಾರ ಬಂದಾಗ ಎಲ್ಲ ಶಾಲೆಗಳ ಆಡಳಿತ ಮಂಡಳಿ ಪ್ರತಿನಿಧಿಗಳೂ ಕೂತು ಚರ್ಚೆ ಮಾಡಿದ್ದೇನು, ಸರ್ಕಾರಕ್ಕೆ ಅಹವಾಲು ತಲುಪಿಸಿ ಆ ಕಾಯ್ದೆ ಸರಿಯಲ್ಲ ಎನ್ನುವುದನ್ನು ಮನದಟ್ಟು ಮಾಡಿ­ಕೊಡಲು ಆಗಾಗ್ಗೆ ಮೀಟಿಂಗುಗಳನ್ನು ಮಾಡಿ­ದ್ದೇನು. ಅಂಥದಕ್ಕೆ ಒಂದಾಗುವ ಇವರಿಗೆ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಮಾತ್ರ ಒಬ್ಬರ ಮುಖ ಒಬ್ಬರು ನೋಡಲು ಪುರುಸೊತ್ತಿಲ್ಲ.

ಇಂದು ಅಂತರ್ಜಾಲವಿದೆ. ಮುಖತಃ ಭೇಟಿ ಆಗಲೇಬೇಕೆಂದಿಲ್ಲ. ಎಲ್ಲರಿಗೂ ಅನ್ವಯವಾಗುವ ಹಾಗೆ ಒಂದು ಜಾಲತಾಣ ಮಾಡಿ ಈತನ ಹಾಗೂ ಈತನಂತಹವರ ವಿವರಗಳನ್ನು ದಾಖಲಿ­ಸ­ಬಹುದು. ಇದು ದುರುಪಯೋಗ­ವಾ­ಗುವ ಸಾಧ್ಯ­ತೆ­ಗಳೂ ಇವೆ. ಇದು ಶೋಷಣೆಗೆ ದಾರಿ­ಯಾಗಲೂಬಹುದು. ಆದರೆ, ಮಕ್ಕಳ ಭವಿಷ್ಯದ ಮುಂದೆ ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಮಾಜಿಕ ಹೊಣೆಗಾರಿಕೆಯಾಗಿದೆ.

ಮತ್ತೆ, ಹೆಣ್ಣು ಮಕ್ಕಳಿಗೆ ಮೈ ಪೂರ್ತಿ ಬಟ್ಟೆ ಧರಿಸಿ ಎಂದು ಹೇಳುವ ಕೆಲ ಮನಸ್ಸುಗಳನ್ನು ಪ್ರಶ್ನಿಸುವ ಸಂದರ್ಭ ಪದೇ ಪದೇ ಉದ್ಭವಿ­ಸು­ತ್ತದೆ. ಅವಕಾಶ ಸಿಕ್ಕಾಗ ದೌರ್ಜನ್ಯ ಎಸಗಿಬಿಡುವ ಮನುಷ್ಯರಿಗೆ ಬಟ್ಟೆಯಿಂದಲೇ ಉದ್ರೇಕ­ವಾಗುತ್ತದೋ? ಅಥವಾ ಅವಕಾಶದಿಂದಲೋ? ದೇವರಿಲ್ಲದ ಜಾಗವಿಲ್ಲ ಎಂದು ದಾಸರು ಹೇಳಿದ ಹಾಗೆ ದುರಾತ್ಮರಿಲ್ಲದ ಜಾಗ, ದೇಶ ಯಾವುದೂ ಇಲ್ಲ. ನನ್ನ ಅವಶ್ಯಕತೆ ಪೂರೈಸಲೆಂದೇ ಇನ್ನೊಂದು ದೇಹ ಇರುವುದು ಎಂದು ಅಹಂಕಾರದಲ್ಲಿ ಮೆರೆಯುವ ಮನುಷ್ಯನಿಗೆ ಪಾಠ ಕಲಿಸಲು ಹೇಗೆ ಸಾಧ್ಯವಾದೀತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT