ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರ ಛಲಕ್ಕೆ ಬಲ ತುಂಬುವ ನಿರೀಕ್ಷೆ

ಪ್ಯಾರಾ ಬ್ಯಾಡ್ಮಿಂಟನ್
Last Updated 10 ಜನವರಿ 2016, 19:45 IST
ಅಕ್ಷರ ಗಾತ್ರ

ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡೆಗೆ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಾನ್ಯತೆ ನೀಡಲಾಗಿದೆ. ಇದರಿಂದಾಗಿ ಭಾರತದ  ಪ್ಯಾರಾ ಬ್ಯಾಡ್ಮಿಂಟನ್‌ ಪಟುಗಳ ಹುರುಪು ಹೆಚ್ಚಿದೆ. ಆ ನಿಟ್ಟಿನಲ್ಲಿ  ತಂಡವನ್ನು ಬೆಳೆಸಲು ನಮ್ಮಲ್ಲಿ ಸೌಲಭ್ಯಗಳು ಇವೆಯೇ. ಪೂರಕ ಕಾರ್ಯಗಳು ನಡೆಯುತ್ತಿವೆಯೇ? ಎಂಬುದರ ಕುರಿತು ಗಿರೀಶ ದೊಡ್ಡಮನಿ ವಿಶ್ಲೇಷಿಸಿದ್ದಾರೆ.

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕರ್ನಾಟಕದ್ದು ವಿಶ್ವಮಟ್ಟದ ಸಾಧನೆ. ಪ್ಯಾರಾ ಬ್ಯಾಡ್ಮಿಂಟನ್‌ ಪಟುಗಳೂ ರಾಜ್ಯದ ಕೀರ್ತಿ ಕಿರೀಟದ ಮೆರಗು ಹೆಚ್ಚಿಸುವಲ್ಲಿ ಹಿಂದೆ ಬಿದ್ದಿಲ್ಲ. ಹೋದ ವರ್ಷ ಸೆಪ್ಟೆಂಬರ್‌ನಲ್ಲಿ ವಿಶ್ಚ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಆನಂದಕುಮಾರ್ ಬೋರೆಗೌಡ ಅವರು ಚಿನ್ನದ ಪದಕ ಮತ್ತು  ಕೆ.ಜಿ. ಪ್ರಭು ಕಂಚಿನ ಪದಕ ಜಯಿಸಿದ್ದರು.

ಮುಂಬೈ ನಗರದಲ್ಲಿ ಅಂದು ನಡೆದ ರಸ್ತೆ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ  ಮಾನಸಿ ಜೋಶಿ ಹೆಚ್ಚು ದಿನ ಕೊರಗಲಿಲ್ಲ. ಅಂಗವೈಕಲ್ಯಕ್ಕೆ ಕುಗ್ಗಲೂ ಇಲ್ಲ. ಕೃತಕ ಕಾಲು ಅಳವಡಿಸಿಕೊಂಡ ಅವರು ತಮ್ಮ ನೆಚ್ಚಿನ ಬ್ಯಾಡ್ಮಿಂಟನ್ ಆಟದ ಅಂಗಳಕ್ಕೆ ಧುಮುಕಿದರು. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯ್‌ಷಿಪ್‌ನಲ್ಲಿ 11 ಪದಕಗಳನ್ನು ಗೆದ್ದ ಭಾರತದ ಆಟಗಾರರಲ್ಲಿ ಇವರೂ ಒಬ್ಬರಾಗಿದ್ದರು. 2011ರಲ್ಲಿ ಸ್ಕೂಟರ್‌ ಮೇಲೆ ತಮ್ಮ ಕಚೇರಿಗೆ ತೆರಳುತ್ತಿದ್ದ ಮಾನಸಿ ಜೋಶಿ ಅವರಿಗೆ ಟ್ರಕ್ ಡಿಕ್ಕಿ ಹೊಡೆದಿತ್ತು. ಜೀವಕ್ಕೆ ಕುತ್ತು ಬರದಿದ್ದರೂ ಎಡಗಾಲು ನಜ್ಜುಗುಜ್ಜಾಗಿತ್ತು.  ಯಾರನ್ನೂ ಬಯ್ಯದೆ, ಹಣೆಬರಹವನ್ನು ಹಳಿಯದೇ ಛಲದಿಂದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಬೆಳೆದಿದ್ದಾರೆ.

ಗುಲ್ಬರ್ಗದ ಸಿದ್ದಣ್ಣ ಅವರದ್ದು ಇನ್ನೊಂದು ಕಥೆ. ಸರಿಯಾದ ಸೌಲಭ್ಯಗಳು ಇಲ್ಲದಿದ್ದರೂ ತಮಗೆ ತಾವೇ ಗುರುವಾಗಿ, ಸ್ನೇಹಿತರ ಸಹಾಯದಿಂದ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರನಾಗಿದ್ದಾರೆ. ಆ ಮೂಲಕ ತಮ್ಮ ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

ಈ ಮೂವರೂ ಸೇರಿದಂತೆ ಒಟ್ಟು11 ಆಟಗಾರರು ಭಾರತಕ್ಕೆ ವಿಶ್ವ ಚಾಂಪಿಯ್‌ಷಿಪ್‌ನಲ್ಲಿ ಪದಕಗಳನ್ನು ಗೆದ್ದು ಬಂದಿದ್ದರು. ಅವರತ್ತ ಸರ್ಕಾರ ಮತ್ತು ಸಂಘಸಂಸ್ಥೆಗಳು ಕಣ್ಣೆತ್ತಿಯೂ ನೋಡಲಿಲ್ಲ. ಅದಕ್ಕಾಗಿಯೇ ಇವರೆಲ್ಲ ಸೇರಿ ರಾಷ್ಟ್ರದ ಪ್ಯಾರಾ ಬ್ಯಾಡ್ಮಿಂಟನ್‌ ಕ್ರೀಡೆಗೆ ಹೊಸ ದಿಕ್ಕು ನೀಡಲು ಸಿದ್ಧರಾಗಿದ್ದಾರೆ. ‘ಆಟಗಾರರಿಂದ ಆಟಗಾರರಿಗಾಗಿ’ ಎಂಬ ತತ್ವದಡಿಯಲ್ಲಿ ಸಂಘಟಿತರಾಗಿ ರಾಷ್ಟ್ರಮಟ್ಟದ ಟೂರ್ನಿಗಳ ಆಯೋಜನೆ, ಪರಸ್ಪರ ಸಹಕಾರ, ಸಹಾಯಗಳ ಯೋಜನೆ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಅದರ ಅಂಗವಾಗಿ ಈಚೆಗೆ ಬೆಂಗಳೂರಿನ ಕೆನರಾ ಯೂನಿಯನ್‌ನಲ್ಲಿ ಅಖಿಲ ಭಾರತ ಟೂರ್ನಿ ಆಯೋಜಿಸಿದ್ದರು. 

ಎಲ್ಲ ರಾಜ್ಯಗಳಿಂದ ಒಟ್ಟು 120 ಆಟಗಾರರು ಸ್ಪರ್ಧಿಸಿದ್ದರು. ಅದರಲ್ಲಿ ಅಂತರರಾಷ್ಟ್ರೀಯ ಆಟಗಾರರಾದ ಉತ್ತರಾಖಂಡದ ಮನೋಜ್ ಸರ್ಕಾರ್, ಮಹಾರಾಷ್ಟ್ರದ ಮಾರ್ಕ್ ಡರ್ಮೈಟ್. ಒಡಿಶಾದ ಪ್ರಮೋದ್ ಭಗತ್, ತೆಲಂಗಾಣದ ಸರಿತಾ ಅವರು ಪ್ರಮುಖ ಆಕರ್ಷಣೆಯಾಗಿದ್ದರು. 

ವ್ಹೀಲ್‌ಚೇರ್ 1 ಮತ್ತು 2, ಎಸ್‌ಎಲ್‌ 3 ಮತ್ತು ಎಸ್‌ಎಲ್‌4 (ಕಾಲುಗಳ ವೈಕಲ್ಯ ಇರುವವರು), ಎಸ್‌ಯು 5 (ಕೈಗಳಲ್ಲಿ ತೊಂದರೆಯಿರುವವರು) ಮತ್ತು ಎಸ್‌ಎಸ್‌ 6 (ಕುಬ್ಜರು) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.  ಪುರುಷ ಮಹಿಳೆಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ಗಳಲ್ಲಿ ಸ್ಪರ್ಧೆಗಳು ನಡೆದವು. 

‘ಇದೇ ಮೊದಲ ಬಾರಿಗೆ ನಾವು ಈ ಪ್ರಯೋಗ ಮಾಡಿದ್ದೇವೆ. ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ನಿಷ್ಕ್ರಿಯವಾಗಿದೆ.  ಅಂಗವಿಕಲರ ಬೇರೆ ಕ್ರೀಡೆಗಳಲ್ಲಿ ಇರುವಷ್ಟು ಸೌಲಭ್ಯ, ನೆರವುಗಳು ನಮಗಿಲ್ಲ. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಕಾರ್ಯದರ್ಶಿಯಾಗಿರುವ ಸುಧೀರ್ ಮತ್ತು ಮಂಜುನಾಥ್ ಅವರು ನಮಗೆ ಬೆಂಬಲ ನೀಡಿದ್ದಾರೆ’ ಎಂದು ಆನಂದಕುಮಾರ್ ಒತ್ತಾಯಿಸುತ್ತಾರೆ. ಬೆಂಗಳೂರಿನ ಮೂರು ಕಡೆ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ನೀಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.  ಉಳಿದ ಆಟಗಾರರದ್ದು ಇದೇ ಕಥೆ.

ಒಲಿಂಪಿಕ್ಸ್ ಅರ್ಹತೆ
ಇಲ್ಲಿಯವರೆಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ಗೆ ಮಾನ್ಯತೆ ನೀಡಿರಲಿಲ್ಲ. ಆದೆ, 2020ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸೇರ್ಪಡೆ ಮಾಡಲಾಗಿದೆ. ಆನಂದ್ ಅದರಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದಾರೆ.

‘ನಮ್ಮ ವಿಭಾಗಕ್ಕೆ ಪ್ರೋತ್ಸಾಹ ನೀಡುವಂತೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ (ಬಿಎಐ)ಪತ್ರ ಬರೆದಿದ್ದೇವೆ. ಮುಂಬರಲಿರುವ ದಿನಗಳಲ್ಲಿ ಟರ್ಕಿಯಲ್ಲಿ ಅಂತರರಾಷ್ಟ್ರೀಯ ಟೂರ್ನಿ, ಏಷ್ಯನ್ ಟೂರ್ನಿ ಸೇರಿದಂತೆ ಐದಾರು ಮಹತ್ವದ ಟೂರ್ನಿಗಳು ಇವೆ. ಅವುಗಳಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ಮುಖ್ಯ. ಅದಕ್ಕಾಗಿ ಎದುರು ನೋಡುತ್ತಿದ್ದೇವೆ’ ಎಂದು ಆನಂದ್ ಹೇಳುತ್ತಾರೆ.

ಕರ್ನಾಟಕದಲ್ಲಿ ಸದ್ಯ ಆನಂದ್ ಮತ್ತು ಪ್ರಭು ಅವರ ಆಟದಿಂದ ಪ್ರೇರಣೆಗೊಂಡು ಶಟಲ್ ಹಿಡಿಯುವವರ ಸಂಖ್ಯೆ ಬೆಳೆಯುತ್ತಿದೆ. ಸಿ.ವಿ. ರಾಜಣ್ಣ, ರೇಣುಕುಮಾರ್, ಎಂ. ಪ್ರಕಾಶ್ ಅವರು ಅದರಲ್ಲಿ ಪ್ರಮುಖರು. ಮಾನ್ಯತೆ ಮತ್ತು ಸೌಲಭ್ಯಗಳು ಸಿಕ್ಕರೆ ಈ ಸಂಖ್ಯೆ ದುಪ್ಪಟ್ಟಾಗುವುದು ಖಚಿತ.

***
ಫಿಸಿಯೊ ನೆರವು ಇಲ್ಲ
ಅಂಗವಿಕಲರ ಕ್ರೀಡೆಗಳಲ್ಲಿ ವಿಶೇಷ ತರಬೇತಿಯ ಜೊತೆಗೆ ವೈದ್ಯಕೀಯ ಸೌಲಭ್ಯವು ಅತಿ ಅವಶ್ಕಕ. ಆದರೆ, ಪ್ಯಾರಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ವೃತ್ತಿಪರತೆಯ ಕೊರತೆ ಇದೆ. ಫಿಸಿಯೊ, ಕೋಚ್‌ ಇಲ್ಲದೇ ಆಟಗಾರರು  ತಾವೇ ಖಾಸಗಿ ಸೌಲಭ್ಯ ಪಡೆದು ಹಣ ವ್ಯಯಿಸಬೇಕಾಗಿದೆ.

‘ಇಂಗ್ಲೆಂಡ್, ಅಮೆರಿಕ ಮತ್ತಿತರ ದೇಶಗಳಲ್ಲಿ ಅಂಗವಿಕಲರ ಬ್ಯಾಡ್ಮಿಂಟನ್‌ ಕ್ರೀಡೆಗಾಗಿ ವೃತ್ತಿಪರ ನೆರವು ಇದೆ. ವಿಶೇಷ ಪರಿಣತ ಕೋಚ್‌ಗಳು, ಫಿಸಿಯೋ ಇದ್ದಾರೆ. ನಮ್ಮಲ್ಲಿ ಅಂತಹ ಯಾವ ಸೌಲಭ್ಯಗಳೂ ಇಲ್ಲ’ ಎಂದು ಅವರು ಹೇಳುತ್ತಾರೆ. 2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಅರ್ಹತೆ ಪಡೆದಿರುವುದರಿಂದ ಸ್ಪರ್ಧೆ ಇನ್ನಷ್ಟು ತೀವ್ರಗೊಳ್ಳಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT