ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಪೋಷಕಾಂಶ ಒದಗಿಸುತ್ತಿದೆಯೇ?

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹಸಿ ತರಕಾರಿ ತಿನ್ನಬೇಕು, ಅದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ನಿಜ. ಆದರೆ ಹಾಗಂತ ಹಸಿಯಾಗಿ ತಿನ್ನಬಹುದಾದುದೆಲ್ಲವನ್ನೂ ಯಾವಾಗಲೂ ಹಸಿಯಾಗೇ ಸೇವಿಸುತ್ತ ಇದ್ದುಬಿಟ್ಟರೆ? ಅದನ್ನು ಬೇಯಿಸಿ ತಿಂದಾಗ ಸಿಗುವ ಲಾಭದಿಂದ ವಂಚಿತರಾಗುತ್ತೇವೆ.

‘ನಮ್‌ ಸೊಸಿ ಎಷ್ಟ ಚೊಲೊ ಅಡಿಗಿ ಮಾಡ್ತಾಳರಿ, ಕೋಸಂಬರಿ ನೋಡಬೇಕ ನೀವು, ಅಷ್ಟ ಸಣ್ಣಗ ಹೆಚ್ಚಾಕ ನಂಗೂ ಬರೂದಿಲ್ಲ’ ಅಂತಿದ್ದರು ರೇಣುಕಮ್ಮ. ಸಣ್ಣಗೆ ಹೆಚ್ಚಿ ಹಸಿ ತರಕಾರಿ ತಿಂದು ಬೇಕಾದಷ್ಟು ಆರೋಗ್ಯ ಗಟ್ಟಿಯಾಯಿತೆಂದೇ ಭಾವಿಸಿದ್ದರು ಅವರು. ಇದೇ ಭ್ರಮೆ ಬಹಳಷ್ಟು ಜನರಿಗೆ ಇರೋದು. ಬಹಳ ಸಣ್ಣದಾಗಿ ಹೆಚ್ಚುವಾಗಲೇ ಅದರಲ್ಲಿನ ಪೋಷಕಾಂಶವೆಲ್ಲ ಚಾಕು, ಈಳಿಗೆಮಣೆಗೆ ಅಂಟಿಕೊಂಡು, ಗಾಳಿಯಲ್ಲೊಂದಿಷ್ಟು, ಹೆಚ್ಚುವಾಗ ಸೋರಿದ ರಸದಲ್ಲಷ್ಟು ಅಂತ ಹೋಗೇಬಿಟ್ಟಿರುತ್ತದೆ. ಚರಟಕ್ಕೆ ಉಪ್ಪು, ಕಾರ ಹಾಕಿ ಚಪ್ಪರಿಸಿರುತ್ತೇವೆ. 

ತಿನ್ನುವ ಒಂದೊಂದು ಆಹಾರದಲ್ಲೂ ಏನೇನಿದೆ ಅಂತ ಹೆಚ್ಚೂ ಕಡಿಮೆ ಈಗ ಎಲ್ಲರಿಗೂ ಅಂದಾಜಿದೆ. ಟಿವಿಯಲ್ಲಿ ಬರುವ ಕುಕರಿ ಶೋಗಳಲ್ಲಿ ಸ್ವಲ್ಪ ಜ್ಞಾನ, ಪತ್ರಿಕೆಯಲ್ಲಿನ ಅಂಕಣಗಳಿಂದ ಪಡೆದ ಪೌಷ್ಟಿಕ ಆಹಾರದ ಮಾಹಿತಿ ಸಿಗುತ್ತದೆ. ಯಾವುದರಿಂದ ಎಷ್ಟು ಕ್ಯಾಲೊರಿ ಸಿಗುತ್ತೆ? ಯಾವುದರಲ್ಲಿ ಕೊಬ್ಬು ಹೆಚ್ಚು, ಕಾರ್ಬೋಹೈಡ್ರೇಟ್‌ ಎಲ್ಲಿ ಹೆಚ್ಚಿದೆ, ಪ್ರೋಟೀನ್‌ ಸಮೃದ್ಧವಾದ ಆಹಾರ ಯಾವುದು? ತೌಡು, ನಾರಿನಂಶ ಎಷ್ಟು ಅಗತ್ಯ ಎಂಬೆಲ್ಲ ಕುತೂಹಲವೂ ತಣಿಯುತ್ತಲೇ ಇರುತ್ತದೆ.  ಆದರೆ ನಾವು ಸೂಕ್ಷ್ಮ ಅಂಶಗಳತ್ತ ಕಣ್ಣಾಡಿಸಲು, ಹುಡುಕಲು ನಮಗೇನು ಮಾಹಿತಿ ಬೇಕೆಂಬುದಾದರೂ ತಿಳಿದುಕೊಂಡಿರಬೇಕು. ಅಲ್ಲಿಂದ ಮನಸ್ಸು ಮಾಡಿದರೆ ಜ್ಞಾನ ದಾಹ ತಣಿಯುವುದು ಸುಲಭ.

ಪ್ರತಿಯೊಬ್ಬ ವ್ಯಕ್ತಿಯೂ ಹೇಗೆ ವಿಶಿಷ್ಟವೊ, ಹಾಗೇ ಪ್ರತಿಯೊಂದು ದೇಹವೂ, ಮನವೂ ಭಿನ್ನವೇ. ಅದಲ್ಲವೇ ನಾವು ನಾವಾಗಿ ರೂಪುಗೊಳ್ಳಲು ಕಾರಣ? ನಮ್ಮ ಅರೆಕೊರೆಗಳನ್ನು ಅರಿತು ಅದನ್ನು ಸೂಕ್ತವಾಗಿ ದೇಹಕ್ಕೆ ಪೂರೈಕೆ ಮಾಡುವುದು ಆರೋಗ್ಯದ ಗುಟ್ಟು. ಕೊರತೆಯೂ ಅಗತ್ಯ, ಅನಗತ್ಯ ಅಂಶಗಳನ್ನಾಧರಿಸೇ ಇರುವುದು. ದೈನಂದಿನ ನಮ್ಮ ಚಟುವಟಿಕೆ, ಕೆಲಸ ಕಾರ್ಯಗಳು ದೈಹಿಕ ಶ್ರಮವನ್ನು ಹೆಚ್ಚಾಗಿ ಬೇಡುತ್ತವೊ, ಕುಳಿತು ಕೆಲಸ ಮಾಡುತ್ತ ಮಿದುಳಿಗೆ ಕಸರತ್ತು ಕೊಟ್ಟು, ಆಲೋಚನೆಗೆ ಹಚ್ಚಿ ದೇಹಕ್ಕಿಂತ ಹೆಚ್ಚಾಗಿ ಮನದಣಿಯುತ್ತದೊ ಎಂಬುವುದೂ ಈ ಕೊರತೆ ಅರಿಯುವಲ್ಲಿ ಮುಖ್ಯವಾಗುತ್ತದೆ. ಪ್ರೊಟೀನ್‌ಭರಿತ ಆಹಾರ ಉತ್ತಮ ಎಂದು ಧಂಡಿಯಾಗಿ ಸೇವಿಸಿ, ಆಮೇಲೆ ಅದನ್ನು ಖರ್ಚೇ ಮಾಡದಂತೆ ಇದ್ದರೆ ಅದೇ ಅನಾರೋಗ್ಯಕ್ಕೆ ದಾರಿಯಾಗಬಲ್ಲದು. ಮೊದಲು ನಮಗೆ ಬೇಕಿರುವುದೇನು ಎಂದು ತಿಳಿಯಬೇಕು. ಅದಾದಮೇಲೆ, ಅದನ್ನು ಪಡೆಯುವ ಬಗೆ ಅರಿಯಬೇಕು. ಕ್ಯಾಲ್ಸಿಯಂ ಕಡಿಮೆ ಇದೆ ಎನಿಸಿದರೆ ಕ್ಯಾಲ್ಸಿಯಂ ಇರೊ ಆಹಾರ ಸೇವಿಸಿದರಾಯಿತು, ಸಾಕಾಗಲಿಲ್ಲವೆ? ಮಾತ್ರೆ ನುಂಗಿದರಾಯಿತು ಎಂಬುದೇ ನಮ್ಮಲ್ಲಿ ಹೆಚ್ಚಿನವರ ಆಲೋಚನೆ. ಬರೀ ಕ್ಯಾಲ್ಸಿಯಂ ಇರೊ ಆಹಾರ ಸೇವಿಸಿದರೆ ಆಯಿತೆ? ಅದು ನಿಜಕ್ಕೂ ನಮ್ಮ ದೇಹಕ್ಕೆ ದಕ್ಕಿದೆಯೇ ಎಂದು ತಿಳಿಯುವುದು ಬೇಡವೆ? ಹೌದು.   ನಾವಂದುಕೊಂಡಷ್ಟು ಸರಳವಲ್ಲ, ಈ ಆಹಾರಲೋಕ.

ಒಕ್ಕಲಿಗನೊಬ್ಬ ಹೊಲಕ್ಕೆ ಹೋಗಿ ಅಕ್ಕರೆಯಿಂದ ಉತ್ತಿ ಬಿತ್ತಿ ಬೆಳೆದು ಸಂತೆಗೆ ಕಳಿಸುವವರೆಗೆ ತರಕಾರಿ, ಕಾಳುಗಳ ಗತಿ ಏನಾಗಿರುತ್ತದೆ? ಚೆನ್ನಾಗಿ ಹದವಾದ ಬಿಸಿಲುಂಡು ಬೆಳೆದ ಕಾಯಿಪಲ್ಲೆಗಳ ಸ್ವಾದವೇ ಬೇರೆ. ಎಣ್ಣೆ ಸಿಂಪಡಿಸಿ, ನೀರು ಹರಿಸಿ ಮೈಯುಬ್ಬಿಸಿ ಮಾರುಕಟ್ಟೆಗೆ ಬಿಟ್ಟ ಹೈಬ್ರೀಡ್‌ ತಳಿಗಳ ಸ್ವಾದವೇ ಬೇರೆ. ಸಂತೆಯಿಂದ ನಾವು ಹೇಗೆ ಎಂತಹ ತರಕಾರಿ, ಹಣ್ಣು ಆರಿಸಿ ತರಬೇಕು. ತಂದ ಮೇಲೆ ಹೇಗೆ ಅದನ್ನು ತಾಳಿಸಿ, ಬೇಯಿಸಿ, ಕುದಿಸಿ ಸೇವನೆಗೆ ಯೋಗ್ಯವಾಗಿ ಅಡುಗೆ ತಯಾರಿಸಬೇಕು ಎಂಬುದೆಲ್ಲ ಬಹಳ ಮುಖ್ಯ. ಪ್ರತಿ ಹಂತದಲ್ಲೂ ಪೌಷ್ಟಿಕಾಂಶ ನಷ್ಟವಾಗುತ್ತ ಹೋಗಿ ಕೊನೆಗೆ ನಿಜಕ್ಕೂ ನಮಗೆ ದಕ್ಕುವುದು ಅಷ್ಟೊ ಇಷ್ಟೊ ಮಾತ್ರ. ಪೋಷಕಾಂಶ ನಮಗೆ ದಕ್ಕುವಂತೆ ತಿನ್ನುವ ಆಹಾರದ ಹೆಚ್ಚಿನ ಲಾಭ ದೇಹಕ್ಕೆ ಒದಗುವಂತೆ ಮಾಡುವುದರಲ್ಲಿ ಜಾಣ್ಮೆ ಇದೆ. 

ಪ್ರೊಟೀನ್‌, ಶರ್ಕರಪಿಷ್ಟಗಳು, ನಾರುಗಳ ಹೊರತಾಗಿ ಲವಣಾಂಶ, ಪೋಷಕಾಂಶಗಳ ಲಭ್ಯತೆಯೂ ಬಹಳ ಮುಖ್ಯ. ಅದೆಲ್ಲ ಇರುವ ಆಹಾರ ಇದು ಎಂದು ಸೇವಿಸಿದರೆ ಎಲ್ಲ ದೊರೆತು ಬಿಡುವುದಿಲ್ಲ, ಆ ಪೋಷಕಾಂಶ, ಜೀವಸತ್ವಗಳು, ಲವಣಗಳೆಲ್ಲ ನೀರಿನಲ್ಲಿ ಕರಗುತ್ತವೆಯೊ, ಎಣ್ಣೆಯಲ್ಲಿ ಕರಗುವಂಥವೊ ಎಂಬುದು ತಿಳಿದಿದ್ದರೆ ಅದನ್ನು ಕಚ್ಚಾ ಸೇವಿಸಬೇಕೊ, ಕುದಿಸಬೇಕೊ, ಎಣ್ಣೆಯಲ್ಲಿ ತಾಳಿಸಿ, ತುಪ್ಪದಲ್ಲಿ ಬಾಡಿಸಿ, ಬೇಯಿಸಿ ತಿನ್ನುವುದೊ ಎಂಬುದು ತಿಳಿಯುತ್ತದೆ. ಹೇಗೆ ಸೇವಿಸಿದರೆ ಆ ಪದಾರ್ಥದ ಬಹುಪಾಲು ಲಾಭವನ್ನು ನಮ್ಮ ದೇಹಕ್ಕೆ ಒದಗಿಸಿಕೊಡಲು ಸಾಧ್ಯ ಎಂಬುದರ ಮೇಲೆ ಆಹಾರವನ್ನು ಊಟವಾಗಿಸುವ ಆ ಪ್ರಕ್ರಿಯೆ ಅವಲಂಬಿತವಾದರೆ ಉತ್ತಮ ಫಲಿತಾಂಶ ಸಿಗಲು ಸಾಧ್ಯ. ಥಯಾಮಿನ್‌, ರಿಬೊಫ್ಲೇವಿನ್‌, ನಯಾಸಿನ್‌, ಫೋಲಿಕ್‌ ಆಸಿಡ್‌ಗಳು ನೀರಿನಲ್ಲಿ ಕರಗುತ್ತವೆ. ‘ಎ’, ‘ಡಿ’, ‘ಇ’, ‘ಕೆ’ ಜೀವಸತ್ವಗಳು ಕೊಬ್ಬಿನಲ್ಲಿ ಕರಗುತ್ತವೆ.

ಕಾಳುಗಳ ಹೊರಮೈಯಲ್ಲಿ ಬಿ ಕಾಂಪ್ಲೆಕ್ಸ್‌ ಇರುತ್ತದೆ. ಆದರೆ ನಾವು ಗಿರಣಿಗೆ ಹಾಕಿಸಿದಾಗಲೇ ಇದನ್ನು ಕಳೆದುಕೊಂಡುಬಿಡುತ್ತೇವೆ. ಕಾಳುಗಳ ಸಿಪ್ಪೆಯಲ್ಲೇ ಹೆಚ್ಚು ಪೋಷಕಾಂಶಗಳಿವೆ. ಇನ್ನು ಪಾಲಿಶ್‌ ಮಾಡಿದ ಅಕ್ಕಿ, ಬೇಳೆ ಕಾಳುಗಳಲ್ಲಿ ನಮ್ಮ ದೈಹಿಕ ಶ್ರಮಕ್ಕೆ ಅತ್ಯಗತ್ಯವಾಗಿ ಬೇಕಾದ ಬಿ ಕಾಂಪ್ಲೆಕ್ಸ್ ಅಂಶವೇ ಉಳಿದಿರುವುದಿಲ್ಲ. ಹೀಗಾಗಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ತೌಡಿನಲ್ಲಿ ನಾರಿನಂಶ, ಮ್ಯಾಂಗನೀಸ್‌, ಬಿ ಕಾಂಪ್ಲೆಕ್ಸ್‌, ಸೆಲೆನಿಯಂ, ಮ್ಯಾಗ್ನೇಶಿಯಂನಂತಹ ಲವಣಾಂಶಗಳಿವೆ. ಗಿರಣಿಗೆ ಹಾಕಿಸುವ ಮತ್ತು ಪಾಲಿಶ್‌ ಮಾಡುವ ಸಂಪೂರ್ಣ ಪ್ರಕ್ರಿಯೆಯಲ್ಲಿ ಕೆಂಪಕ್ಕಿ ಬಿಳಿ ಅಕ್ಕಿಯಾಗಿ ಬದಲಾಗುತ್ತದೆ. ಶೇ. 67ರಷ್ಟು ವಿಟಮಿನ್‌ ಬಿ3, ಶೇ. 80ರಷ್ಟು ವಿಟಮಿನ್‌ ಬಿ1, ಶೇ. 90ರಷ್ಟು ವಿಟಮಿನ್‌ ಬಿ6ಅನ್ನು ನಾಶ ಮಾಡುತ್ತದೆ; ಅರ್ಧಕ್ಕರ್ಧ ಮ್ಯಾಂಗನೀಸ್‌, ಅರ್ಧದಷ್ಟು ಫಾಸ್ಫರಸ್‌, ಶೇ. 60ರಷ್ಟು ಕಬ್ಬಿಣಾಂಶ ಮತ್ತು ಪೂರ್ತಿ ನಾರಿನಂಶ ಹಾಗೂ ಅಗತ್ಯ ಫ್ಯಾಟಿ ಆಸಿಡ್‌ಗಳನ್ನು ಕಳೆದುಬಿಡುತ್ತದೆ. ಇಂಥ ಬಿಳಿಯನ್ನ ಉಂಡರೆ ನಮಗೆ ದಕ್ಕುವುದು ಶರ್ಕರಪಿಷ್ಟ ಮಾತ್ರ, ಉಳಿದೆಲ್ಲ ಸತ್ವಗಳೂ ಗಿರಣಿಗೆ ಹಾಕಿಸಿದಾಗಲೇ ಕಳೆದುಹೋಗಿರುತ್ತವೆ. ಹೊಟ್ಟೆಯಂತೂ ತುಂಬುತ್ತದೆ, ಆದರೆ ಮತ್ತೆ ಬೇಗನೆ ಹಸಿವಾಗುತ್ತದೆ. ಕಾರಣ, ಶರ್ಕರಪಿಷ್ಟ ನಮ್ಮ ಶಕ್ತಿಯ ಉತ್ತಮ ಮೂಲ. ಆದರೆ ಹೆಚ್ಚು ಸೇವಿಸಿದರೆ ದೇಹದಲ್ಲಿನ ಸಕ್ಕರೆಯ ಪ್ರಮಾಣದ ಸಮತೋಲನ ತಪ್ಪುತ್ತದೆ. ಸಕ್ಕರೆ ಕಾಯಿಲೆಗೆ ಕಾರಣವಾಗುತ್ತದೆ.

*ಸೇವಿಸುವ ಹಣ್ಣು, ಮೊಟ್ಟೆ ಹೇಗಿರಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT