ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕನ್ನಡದ ಅವಸ್ಥೆ

Last Updated 15 ಜೂನ್ 2016, 3:46 IST
ಅಕ್ಷರ ಗಾತ್ರ

ಬಹುತೇಕ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳು ಆರಂಭವಾಗಿವೆ. ನಾನು ಮಧ್ಯಾಹ್ನ ಕಾಲೇಜೊಂದರ ಪ್ರಾಂಶುಪಾಲರ ಕಚೇರಿಯಲ್ಲಿ ಕುಳಿತಿದ್ದೆ. ಅಲ್ಲಿಗೆ ಬಂದ ಆ ಕಾಲೇಜಿನ ಕನ್ನಡ ಉಪನ್ಯಾಸಕರು ಮಕ್ಕಳು ಬರೆದಿದ್ದ ಕೆಲವು ಹಾಳೆಗಳನ್ನು ತಂದಿದ್ದರು.

ಮೊದಲ ದಿನವಾದ್ದರಿಂದ ಮಕ್ಕಳಿಗೆ ಅವರ ಹೆಸರು, ಓದಿದ ಶಾಲೆ ಹಾಗೂ ತಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ನಾಲ್ಕೈದು ಸಾಲು ಬರೆಯುವಂತೆ ಹೇಳಿದ್ದರು. ಹಾಗೆ ಬರೆದವುಗಳಲ್ಲಿ ಅರ್ಧದಷ್ಟನ್ನು ಪ್ರಾಂಶುಪಾಲರಿಗೆ ತೋರಿಸುವುದಕ್ಕಾಗಿ ಬಂದಿದ್ದರು.

ಪ್ರಾಂಶುಪಾಲರ ಅನುಮತಿ ಪಡೆದು, ಅವುಗಳ ಮೇಲೆ ಕಣ್ಣಾಡಿಸಿದ ನಾನು ಮೂರ್ಛೆ ಬೀಳುವುದೊಂದು ಬಾಕಿ. ಹೆಚ್ಚಿನವರು ತಮ್ಮ ಹೆಸರನ್ನೇ ತಪ್ಪಾಗಿ ಬರೆದಿದ್ದರು! ತಾವು ಓದಿದ ಪ್ರೌಢಶಾಲೆಯ ಹೆಸರನ್ನೂ ಸರಿಯಾಗಿ ಬರೆದವರು ಕಮ್ಮಿಯೆ.

ಇನ್ನು ಕೆಲವರು ಕನಿಷ್ಠ ಒಂದು ಪದವನ್ನಾದರೂ ಕಾಗುಣಿತ ದೋಷವಿಲ್ಲದೆ ಬರೆಯಲು ವಿಫಲರಾಗಿದ್ದರು. ಕೆಲವರಂತೂ ಅಕ್ಷರಗಳನ್ನು ಜೋಡಿಸಿ ಅರ್ಥವೇ ಇರದ ಪದಗಳ ಗುಂಪನ್ನು ಬರೆದಿದ್ದರು. ಹತ್ತನೇ ತರಗತಿಯ ಕನ್ನಡ ಪತ್ರಿಕೆಯಲ್ಲಿ 68 ಅಂಕಗಳನ್ನು ಪಡೆದಿದ್ದ ವಿದ್ಯಾರ್ಥಿಯೊಬ್ಬನ ಬರಹದಲ್ಲಿ ಕಾಗುಣಿತ ದೋಷವಿಲ್ಲದ ಒಂದು ಪದವೂ ಇರಲಿಲ್ಲ.

ಇಂಥ ಮಕ್ಕಳನ್ನು ನಾವು ಹೇಗೆ ಪಿಯುಸಿ ಪಾಸು ಮಾಡಿಸುವುದು ಎಂಬುದೇ ಆ ಕನ್ನಡ ಉಪನ್ಯಾಸಕರ ಚಿಂತೆ. ಪಾಪ, ಅವರು ಮಕ್ಕಳಿಗೆ ಅ ಆ ಇ ಈ ಕಲಿಸುವುದೇ,

ಕಾಗುಣಿತ ಬರೆಸುವುದೇ ಅಥವಾ ಕೊಟ್ಟಿರುವ ಪಠ್ಯಕ್ರಮ ಮುಗಿಸುವುದೇ? ಶೇ 100 ಫಲಿತಾಂಶ ತೋರಿಸಬೇಕೆನ್ನುವ ಧಾವಂತದಲ್ಲಿರುವ ಖಾಸಗಿ ಕಾಲೇಜುಗಳ ಉಪನ್ಯಾಸಕರ ಮೇಲಿನ ಒತ್ತಡವನ್ನಂತೂ ಕೇಳುವಂತೆಯೇ ಇಲ್ಲ.

ಕೆಲವು ಕಾಲೇಜುಗಳಲ್ಲಿ ವಾರಕ್ಕೆ ನಾಲ್ಕು ತರಗತಿಗಳಿರುವ ಕಡೆ, ಕನ್ನಡ ಭಾಷಾ ವಿಷಯಕ್ಕೆ ಎರಡೋ ಮೂರೋ ತರಗತಿಗಳನ್ನಷ್ಟೇ ಕೊಟ್ಟಿರುತ್ತಾರೆ. ಇನ್ನು ಮಕ್ಕಳನ್ನು ಸಿಇಟಿ, ‘ನೀಟ್’ ಮೊದಲಾದ ಪ್ರವೇಶ ಪರೀಕ್ಷೆಗಳಿಗೆ ಸಿದ್ಧಪಡಿಸುವ ಹೊಣೆಯನ್ನೂ ಹೊತ್ತಿರುವ ಖಾಸಗಿ ಕಾಲೇಜುಗಳಲ್ಲಿ ವರ್ಷದ ಕೊನೆಯಲ್ಲಿ, ಕೇವಲ ಒಂದೆರಡು ತಿಂಗಳ ಮಟ್ಟಿಗೆ ಭಾಷಾ ತರಗತಿಗಳು ನಡೆಯುತ್ತವಂತೆ!

ಕನ್ನಡ ನಾಡಿನ ಶಾಲೆಯಲ್ಲಿ ಓದಿದ ಕನ್ನಡ ಮಕ್ಕಳೇ ಇಷ್ಟೊಂದು ಕೆಟ್ಟದಾಗಿ ಕನ್ನಡ ಬರೆಯಲು ಕಾರಣವೇನು? ಹತ್ತನೇ ತರಗತಿವರೆಗಿನ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಶ್ನೆಗಳು ಬಹು ಆಯ್ಕೆ ಮಾದರಿಯದ್ದಾಗಿರುವುದು, 9ನೇ ತರಗತಿಯವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮಗಳಿಂದಾಗಿ ಮಕ್ಕಳ ಬರಹ ಸಾಮರ್ಥ್ಯ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದೆ ಎಂಬುದು ಅವರ ಆರೋಪ.

ಕನ್ನಡ ಮಾತನಾಡಲು ಮತ್ತು ಓದಲು ಸಾಮರ್ಥ್ಯವಿರುವ ವಿದ್ಯಾರ್ಥಿಗೆ ಅದನ್ನು ಬರೆಯಲು ಕಲಿಸುವುದು ಅಷ್ಟೊಂದು ಕಷ್ಟವೇನಲ್ಲ. ಪ್ರಾಥಮಿಕ ತರಗತಿಗಳಿಂದ, ಕನಿಷ್ಠ ದಿನವೊಂದಕ್ಕೆ ಒಂದು ಪುಟ ಕಾಪಿ ಬರೆಸಿದರೂ ಸಾಕು.

ಶಿಕ್ಷಕರು, ಪೋಷಕರು ಇದರತ್ತ ಗಮನ ನೀಡದೆ ವಿಜ್ಞಾನ, ಗಣಿತದಂಥ ವಿಷಯಗಳಿಗೆ ಹೆಚ್ಚು ಮಹತ್ವ ನೀಡುತ್ತಿರುವುದೂ ಇದಕ್ಕೆ ಕಾರಣವಿರಬಹುದು. ಆದರೆ, ನಮ್ಮ ಶಿಕ್ಷಣದ ನೀತಿ ನಿಯಮಗಳನ್ನು, ಪರೀಕ್ಷಾ ವ್ಯವಸ್ಥೆಯನ್ನು ರೂಪಿಸುವವರು ದೂರದೃಷ್ಟಿಯಿಲ್ಲದೆ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ.

ಕನ್ನಡ ನಾಡಿನಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲಾರದಷ್ಟು ಮಟ್ಟಿಗೆ ವ್ಯವಸ್ಥೆಯನ್ನು ಹಾಳು ಮಾಡಿರುವವರು ನಮ್ಮನ್ನು ಆಳುವವರೆ. ಅವರೇ ನಿಜವಾದ ಅಪರಾಧಿಗಳು. ದುರಂತವೆಂದರೆ ಶಿಕ್ಷೆ ಮಾತ್ರ ಮಕ್ಕಳಿಗೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT