ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ವಾಣಿಜ್ಯ ಉದ್ಯಮಶೀಲತೆಗೆ ಬೇಕು ಉತ್ತೇಜನ

ಅರ್ಥ ವಿಚಾರ
Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೀಪಾವಳಿ ಧಮಾಕಾ ಮತ್ತು ‘ಬಿಗ್‌ ಬಿಲಿಯನ್‌ ಡೇ’ ಮಾರಾಟ ಜಾಹೀರಾತು ಮೂಲಕ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತಿತರ ಆನ್‌ಲೈನ್‌ ಮಾರಾಟ ಸಂಸ್ಥೆಗಳು ಕೆಲವೇ ಕೆಲ ಗಂಟೆಗಳಲ್ಲಿ ಕೋಟ್ಯಂತರ ರೂಪಾಯಿ­ಗಳ ವಹಿವಾಟು ನಡೆಸಿರುವುದು ಸಣ್ಣ ಪುಟ್ಟ ವಹಿವಾಟುದಾರರೂ ಸೇರಿದಂತೆ ರಿಟೇಲ್‌ ವಹಿವಾಟಿನ ದೊಡ್ಡ ಸಂಸ್ಥೆ­ಗಳಲ್ಲೂ ತಲ್ಲಣ ಮೂಡಿಸಿ, ಅವರೆಲ್ಲ ತಮ್ಮ ರಕ್ಷಣೆಗೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.

ಇ– ವಾಣಿಜ್ಯ ವಹಿವಾಟಿನ ದೈತ್ಯ ಸಂಸ್ಥೆಗ­ಳಾದ ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌­ಡೀಲ್‌, ಅಮೆ­ಜಾನ್‌­ಗಳ ವಹಿವಾಟು ಕಂಡು ಸರಕುಗಳ ಚಿಲ್ಲರೆ ವಹಿವಾಟಿನ ಬೃಹತ್‌ ಉದ್ದಿಮೆ ಸಂಸ್ಥೆಗಳು  ಹಠಾ­ತ್ತಾಗಿ ಎಚ್ಚರಗೊಂಡಿವೆ. ತಮ್ಮೆಲ್ಲ ವಹಿ­ವಾಟು ಎಲ್ಲಿ ಕೈಬಿಟ್ಟು ಹೋಗುವುದೋ ಎನ್ನುವ ಆತಂಕದಲ್ಲಿ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಳಿ ಧಾವಿಸಿ, ಇ–ಕಾಮರ್ಸ್‌ನ  ಎಂಟೆದೆಯ ಹೊಸ ವಹಿವಾಟು­ದಾರರ ರೆಕ್ಕೆಗಳನ್ನು ಕತ್ತರಿಸಬೇಕೆಂದು ಮೊರೆ ಹೋಗಿದ್ದಾರೆ. ಅಹವಾಲುಗಳನ್ನು ಪರಿಶೀ­ಲಿ­ಸುವುದಾಗಿ ಸಚಿವೆ ಭರವಸೆ ನೀಡಿರುವುದು ಕಂಡು ಮರುಕ ಉಂಟಾ­ಗುತ್ತದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಬೇರು ಬಿಟ್ಟಿ­ರುವ, ವಹಿವಾಟಿನಲ್ಲಿ ಏಕಸ್ವಾಮ್ಯ ಸ್ಥಾಪಿಸಿರುವ ಅನೇಕರು  ಇ–ಕಾಮರ್ಸ್‌ನ ಹೊಸ ಸಂಸ್ಥೆಗಳ ಭರಾಟೆ ವಹಿವಾಟಿನಿಂದ ಧೃತಿಗೆಟ್ಟಿ­ದ್ದಾರೆ. ಬದ­ಲಾದ ಕಾಲಕ್ಕೆ ತಕ್ಕಂತೆ ಮಾರಾಟ ತಂತ್ರ ಬದಲಿಸದಿರುವುದೇ ಇದಕ್ಕೆ ಕಾರಣ. ವಹಿವಾಟಿ­ನಲ್ಲಿ ಹೊಸ­ಬರ ಪ್ರವೇಶವು ಸಾಂಪ್ರದಾಯಿಕ ವ್ಯಾಪಾರ ವಹಿವಾಟಿನಲ್ಲಿ ತೊಡಗಿ­ಕೊಂಡಿ­ರುವ ಲಕ್ಷಾಂತರ ಜನರ ಜೀವನಾಧಾರಕ್ಕೆ ಎರವಾಗ­ಲಿದೆ ಎಂದು ಅವರೆಲ್ಲ ಹುಯಿಲೆಬ್ಬಿಸಿದ್ದಾರೆ.

ತಮ್ಮ ವಾದಕ್ಕೆ ಸಮರ್ಥನೆಯಾಗಿ ಅವರೆಲ್ಲ ಹುರುಳಿಲ್ಲದ ಕಾರಣಗಳನ್ನು ನೀಡುವುದರ ಜತೆಗೆ ರಾಜಕೀಯ­ವಾ­ಗಿಯೂ ಪ್ರಭಾವ ಬೀರುತ್ತಿ­ದ್ದಾರೆ. ಬಿಜೆಪಿಯ ವೋಟ್‌ ಬ್ಯಾಂಕ್‌ ಎಂದೇ ಪರಿಗಣಿಸಲಾಗಿರುವ ಲಕ್ಷಾಂತರ ಸಣ್ಣ ವ್ಯಾಪಾರಿ­ಗಳು, ತಮ್ಮ ಜೀವನಾಧಾರಕ್ಕೆ ಇದು ಮುಳು­ವಾಗಲಿದೆ ಎಂದೂ ಹಲುಬುತ್ತಿದ್ದಾರೆ.

ಕೆಲ ಪಟ್ಟಭದ್ರರು ತಮ್ಮ ಬೇಳೆ ಬೇಯಿಸಿ­ಕೊಳ್ಳಲು ಇದೇ ಬಗೆಯಲ್ಲಿ ಸರ್ಕಾರದ ಮೇಲೆ ಪ್ರಭಾವ ಬೀರಲು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಪ್ರಯತ್ನಿಸಿದ ಹತ್ತಾರು ನಿದರ್ಶನಗಳಿವೆ.

ಅಗ್ಗದ ವಿಮಾನ ಯಾನ ಸಂಸ್ಥೆ ಏರ್‌ ಡೆಕ್ಕನ್‌, ಕೈಗೆಟುಕುವ ಪ್ರಯಾಣ ದರದಲ್ಲಿ ವಿಮಾನ ಯಾನ ಸೌಲಭ್ಯ, ಟ್ರಾವೆಲ್‌ ಏಜೆಂಟರ ಹಾವ­ಳಿಗೆ ಕಡಿವಾಣ, ಇಂಟರ್‌ನೆಟ್‌­ನಲ್ಲಿ ಟಿಕೆಟ್‌ ಮಾರಾಟ ಸೇವೆ ಆರಂಭಿಸಿದಾಗ, ಇತರ ವಿಮಾನ ಯಾನ ಸಂಸ್ಥೆಗಳು ಸಾಕಷ್ಟು ಬಗೆಯಲ್ಲಿ ಅಡ್ಡಿಪಡಿ­ಸಲು ಮುಂದಾಗಿದ್ದವು.  ತಮ್ಮ ಹಿತಾ­ಸಕ್ತಿ ರಕ್ಷಣೆಗಾಗಿ ಸರ್ಕಾರದ ಮೊರೆ ಹೋಗಿ­ದ್ದವು. ಭಾರತದಲ್ಲಷ್ಟೇ ಅಲ್ಲ, ಅಮೆರಿಕ, ಯುರೋಪ್‌ ದೇಶಗಳಲ್ಲೂ ಜನಸಾಮಾನ್ಯರಿಗೆ ಕಡಿಮೆ ದರದ ವಿಮಾನ ಯಾನ ಸೇವೆ ಆರಂಭಿಸಿ­ದಾಗಲೂ ಇದೇ ಬಗೆಯ ಪ್ರತಿರೋಧ ಕಂಡು ಬಂದಿತ್ತು.

ತಮ್ಮ ವಹಿವಾಟಿನಲ್ಲಿನ ದೋಷಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ, ವಹಿವಾ­ಟಿನ ಮಾದರಿಯಲ್ಲಿ ಬದಲಾ­ವಣೆ ಅಳವಡಿಸಿ­ಕೊಳ್ಳುವ, ಹೊಸ ತಂತ್ರಜ್ಞಾನ ಬಳಸಿಕೊಳ್ಳುವ ಬದಲಿಗೆ ಸಾಂಪ್ರದಾಯಿಕ ವಹಿವಾಟುದಾರರು ಮತ್ತು  ರಿಟೇಲ್‌ ಕಾರ್ಪೊರೇಟ್‌ ದಿಗ್ಗಜರು ತಮ್ಮ ವಹಿವಾಟಿನ ರಕ್ಷಣೆಗಾಗಿ ಸರ್ಕಾರದ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಲೇ ಬಂದಿದ್ದಾರೆ.

ಇತಿಹಾಸದ ಉದ್ದಕ್ಕೂ ಕೆಲವು ವರ್ಷಗಳ ಅಂತರದಲ್ಲಿ ಹೊಸ ತಂತ್ರ­ಜ್ಞಾನ, ಹೊಸ ವಹಿವಾಟಿನ ಮಾದರಿ, ಸ್ಫೋಟಕ ಸ್ವರೂಪದ ಹೊಸ ಚಿಂತನೆ, ಎದುರಿಗೆ ಬಂದದ್ದನ್ನೆಲ್ಲ ಆಪೋಶನ ತೆಗೆದುಕೊಳ್ಳುವ ಬದಲಾವಣೆಯ ಸುನಾಮಿ ಅಲೆಗಳು ಹಳೆಯ ವಹಿವಾ­ಟನ್ನು ಗುಡಿಸಿ ಗುಡ್ಡೆ ಹಾಕಿ ಬಿಟ್ಟಿವೆ. ಜನರ ಬದುಕು ಕೂಡ ಬದಲಾವ­ಣೆಯ ಪ್ರಭಾವಕ್ಕೆ ಒಳಗಾಗಿದೆ.

‘ಭವಿಷ್ಯದಲ್ಲಿ ಎದುರಾಗಲಿರುವ ಪರಿ­ವ­ರ್ತ­ನೆಯ ಲಕ್ಷಣಗಳನ್ನು ಮುಂಚಿತ­ವಾಗಿಯೇ ಅಂದಾ­ಜಿ­ಸುವವರು ಮತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಹೊಂದಿ­ಕೊಳ್ಳುವವರು ಮಾತ್ರ ವಹಿವಾಟಿನ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳು­ತ್ತಾರೆ’ ಎಂದು ಇಂಟೆಲ್‌ ಸಂಸ್ಥೆಯ ಸ್ಥಾಪಕ ಆ್ಯಂಡಿ ಗ್ರೋವ್‌ ಅಭಿಪ್ರಾಯ­ಪಟ್ಟಿದ್ದರು.

ಹೈಸ್ಕೂಲ್‌ ಹಂತದಲ್ಲಿಯೇ ವಿದ್ಯಾ­ಭ್ಯಾಸಕ್ಕೆ ಬೆನ್ನು ಮಾಡಿದ್ದ ಡೆಲ್‌ ಕಂಪ್ಯೂಟರ್ಸ್‌ ಸಂಸ್ಥೆಯ ಸ್ಥಾಪಕ ಮೈಕಲ್‌ ಡೆಲ್‌, ಗ್ರೋವ್‌ ಅವರ ಚಿಂತ­ನಾ­ಕ್ರಮದಂತೆಯೇ ಹೊಸ ಮಾದರಿಯ ವಹಿ-­ವಾಟಿನ ಸ್ವರೂಪ ಅಳವಡಿಸಿ­ಕೊಂಡು ಕಾಂಪ್ಯಾಕ್‌, ಡಿಜಿಟಲ್‌ ಮತ್ತು ಎಚ್‌ಪಿ ಸಂಸ್ಥೆಗ­ಳನ್ನು ಹಿಂದಿಕ್ಕಿ ತಮ್ಮ ವಹಿವಾಟನ್ನು ವಿಸ್ತರಿಸುವಲ್ಲಿ ಯಶಸ್ವಿ­ಯಾದರು.

ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಆರಂಭದಲ್ಲಿ ರಸ್ತೆ ಮತ್ತು ರೈಲು ಸಂಚಾರ ಸೇವೆಯು ಕುದುರೆಗಾಡಿಗಳನ್ನು ನಿರುಪ­ಯುಕ್ತ­ಗೊಳಿಸಿದರೆ, ವಾಹನಗಳ ಉದ್ದಿ­ಮೆಯು, ಕಡಿಮೆ ದೂರದ ರೈಲು ಸಂಚಾರ ಸೇವೆಯನ್ನು ಅನುಪಯುಕ್ತ­ಗೊಳಿಸಿತು. ಅಗ್ಗದ  ವಿಮಾನ ಯಾನ ಸೇವೆಯು ಅಮೆರಿಕದಲ್ಲಿ ಬಸ್‌ಗಳ ಸಂಚಾರವನ್ನೇ ರದ್ದುಪಡಿಸಲು ಕಾರಣ­ವಾಯಿತು. ಡಿಜಿಟಲ್‌ ಕ್ಯಾಮೆರಾಗಳು, ಕ್ಯಾಮೆರಾಕ್ಕೆ ಅನ್ವರ್ಥನಾಮವಾಗಿದ್ದ ಕೋಡಕ್‌ ಸಂಸ್ಥೆಯ ಅವನತಿಗೆ ಕಾರಣವಾದವು. ಕ್ಯಾನನ್‌, ಜೆರಾಕ್ಸ್‌ ಸಂಸ್ಥೆಯ ವಹಿವಾಟಿಗೆ ಧಕ್ಕೆ ಒದಗಿಸಿತು. ಆ್ಯಪಲ್‌ ಮತ್ತು ಸ್ಟೀವ್‌ ಜಾಬ್ಸ್‌, ಬಹುತೇಕ ಜನರ ಅಚ್ಚುಮೆಚ್ಚಿನ ಸೋನಿ ಸಂಸ್ಥೆಯ ವಹಿವಾಟಿಗೆ ಅಡ್ಡಿಪಡಿಸು­ವುದರ ಜತೆಗೆ ಅದರ ವಾಕ್‌ಮನ್‌ಗಳು ಮಾರುಕಟ್ಟೆಯಿಂದ ಕಣ್ಮರೆಯಾಗಲು ಮತ್ತು ವಿಶ್ವದ ಅತಿ ದೊಡ್ಡ ಮೊಬೈಲ್‌ ಮಾರಾಟ ಸಂಸ್ಥೆ ನೋಕಿಯಾದ ಅವ­ನತಿಗೆ  ಕಾರಣರಾಗುತ್ತಾರೆ. ಅಂತ­ರ್ಜಾ­ಲದ ದೈತ್ಯ ಸಂಸ್ಥೆ ಗೂಗಲ್‌, ಮೈಕ್ರೊ­ಸಾಫ್ಟ್‌ನ ಅಭೇದ್ಯ ಕೋಟೆಯಲ್ಲಿ ಬಿರುಕು ಮೂಡಿಸಲಿದೆ ಎಂದು  ಯಾರೊ­ಬ್ಬರೂ ಊಹಿಸಿರಲಿಲ್ಲ.

ಮುದ್ರಣ ಯಂತ್ರ, ಉಗಿ ಬಂಡಿ, ರೇಡಿಯೊ, ಸ್ಥಿರ ದೂರವಾಣಿ, ವಿದ್ಯುತ್‌ ದೀಪ, ವಿಮಾನ ಮುಂತಾದವುಗಳ ಸಂಶೋಧನೆಗಳು ಜಗತ್ತಿನ ಇತಿಹಾಸ ಮತ್ತು ನಮ್ಮ ಬದುಕಿನ ವಿಧಾನವನ್ನೇ ಬದಲಿಸಿವೆ.

ಈ ಎಲ್ಲ ಸಂಶೋಧನೆಗಳು ದಶಕಗಳ ಅಂತರ­ದಲ್ಲಿ ಅಥವಾ ಶತಮಾನಕ್ಕೊಮ್ಮೆ ನಡೆದಿರು­ವುದೂ ನಿಜ. ಉದ್ದಿಮೆ ವಹಿ­ವಾಟಿನಲ್ಲಿಯೂ ಹೊಸ ಸ್ವರೂಪ, ತಂತ್ರಜ್ಞಾನ ಅಳವಡಿಕೆ ಮೂಲಕ ಸಾಮಾನ್ಯ ಗ್ರಾಹಕರ ಜತೆ ಮುಖಾ­ಮುಖಿಯಾಗುವ ಮೂಲಕ, ಗ್ರಾಹಕರ ನಿಗೂಢ ಮನಸ್ಸನ್ನು ಉದ್ಯಮ­ಶೀಲತಾ ಒಳನೋಟದ ಮೂಲಕ ಅರಿಯುವ ಪ್ರಯತ್ನ ಮಾಡಿ,  ಸಂಪೂರ್ಣ ಹೊಸ ರೂಪದಲ್ಲಿ ವಹಿವಾಟು ನಡೆಸುವುದು ಸದ್ಯದ ಮಾರುಕಟ್ಟೆ ತಂತ್ರವಾಗಿದೆ.

ಸ್ಯಾಮ್‌ ವಾಲ್ಟನ್‌ ಅವರು ಐವತ್ತು ವರ್ಷಗಳ ಹಿಂದೆಯೇ  ಸಣ್ಣ ಅಂಗಡಿ­ಯೊಂದರ ಮೂಲಕ ವಹಿವಾಟು ಆರಂಭಿಸಿ ವಿಶ್ವದ ಅತಿ ದೊಡ್ಡ ರಿಟೇಲ್‌ ಸರಣಿ ಮಳಿಗೆಗಳ ವಹಿವಾಟಿ­ನವರೆಗೆ ವಿಸ್ತರಿಸಲು ವಿಶಿಷ್ಟ ಬಗೆಯ ಮಾರಾಟ ತಂತ್ರಗಾರಿಕೆ ನೆರವಾಗಿದೆ. ‘ಅತ್ಯಂತ ಕಡಿಮೆ ಬೆಲೆಯೇ ಪ್ರತಿ ದಿನದ ರಿಟೇಲ್‌ ವಹಿವಾಟಿನ ಮಾದರಿ’ ಎನ್ನುವ ಮಾರಾಟ ತತ್ವದಡಿ, ವಾಲ್ಟನ್‌ ತಮ್ಮ ವಹಿವಾಟನ್ನು ವಿಸ್ತರಿಸುವಲ್ಲಿ ಸಫಲ­ರಾದರು. ವಾಲ್‌ಮಾರ್ಟ್‌ ಈಗ ವಿಶ್ವದ­ಲ್ಲಿಯೇ ಅತಿ ಹೆಚ್ಚು ವರಮಾನ ಗಳಿಸುವ ಉದ್ದಿಮೆ ಸಂಸ್ಥೆಯಾಗಿ ಬೆಳೆದಿದೆ.

‘ಯಾವುದೇ ಒಂದು ಸರಕು ಖರೀದಿಸುವಲ್ಲಿ ಅಕಸ್ಮಾತಾಗಿ ಒಂದು ಡಾಲರ್‌ ಹೆಚ್ಚಿಗೆ ಕೊಟ್ಟಿದ್ದರೆ ವಾಸ್ತವ­ದಲ್ಲಿ ಅದರಿಂದ ಯಾರೊ ಒಬ್ಬರ ಅದಕ್ಷತೆ­ಯನ್ನೇ ನಾನು ಖರೀದಿಸಿದಂತೆ’ ಎಂದು ಸ್ಯಾಮ್‌ ವಾಲ್ಟನ್‌ ಅಭಿಪ್ರಾಯ­ಪಟ್ಟಿದ್ದರು. ದಕ್ಷ ರೀತಿ­ಯಲ್ಲಿ ಸರಕುಗಳ ಖರೀದಿ, ಪೂರೈಕೆ ಸರಣಿ ವ್ಯವಸ್ಥೆಯಲ್ಲಿ ದಕ್ಷತೆ, ಮಾರಾಟದ ಸರಕುಗಳ ಮೇಲೆ ನಿಗಾ ಮತ್ತು ತಂತ್ರಜ್ಞಾನದ ನೆರವಿನ ಮೂಲಕ ವಾಲ್ಟನ್‌ ಅವರು ತಮ್ಮ ವಹಿವಾ­ಟನ್ನು ಅಸಾಮಾನ್ಯ ಬಗೆಯಲ್ಲಿ ವಿಸ್ತರಿಸುವಲ್ಲಿ ಯಶಸ್ವಿಯಾದರು.

ಭಾರತದ ಸಂದರ್ಭದಲ್ಲಿ ಹೇಳುವು­ದಾದರೆ, ಫ್ಲಿಪ್‌­ಕಾರ್ಟ್‌ ಮತ್ತು ಸ್ನ್ಯಾಪ್‌­ಡೀಲ್‌ಗಳ ವಹಿ­ವಾ­ಟಿನ ಮಾದರಿ­ಯನ್ನು ಎಲ್ಲರೂ ಶ್ಲಾಘಿಸ­ಬೇಕಾಗಿದೆ. ಸರ್ಕಾರವೂ ಈ  ಸಂಸ್ಥೆಗಳಿಗೆ ಸೂಕ್ತ ಉತ್ತೇಜನ ನೀಡಬೇಕಾ­ಗಿದೆ. ಹೊಸತನ, ಸೂಕ್ತ ತಂತ್ರಜ್ಞಾನದ ಅಳವಡಿಕೆ, ಗ್ರಾಹಕರ ಜತೆ ನೇರ ಮುಖಾಮುಖಿ ಮೂಲಕ ಹಲವಾರು ವೆಚ್ಚಗ­ಳಿಗೆ ಕಡಿವಾಣ ಹಾಕಲು  ಈ ಸಂಸ್ಥೆಗಳಿಗೆ ಸಾಧ್ಯವಾಗಿದೆ. ಲಕ್ಷಾಂತರ ಬಗೆಯ ವೈವಿಧ್ಯ­ಮಯ ಉತ್ಪನ್ನಗಳನ್ನು ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ವರ್ಗಾ­ಯಿಸುವಲ್ಲಿ ಈ ಸಂಸ್ಥೆಗಳು ಯಶಸ್ವಿ­ಯಾಗಿವೆ.

ಚಿಲ್ಲರೆ ಅಂಗಡಿಗಳಿಗೆ ಭೇಟಿ ಕೊಡುವುದನ್ನು ತಪ್ಪಿಸಿರುವ ಈ ಇ–ಕಾಮರ್ಸ್‌ನ ಅಂತರ್ಜಾಲ ಮಾರಾಟ  ಸಂಸ್ಥೆಗಳು ಮನೆ ಅಥವಾ ಕಚೇರಿ­ಯಲ್ಲಿಯೇ ಕುಳಿತು ಸ್ಮಾರ್ಟ್‌ ಫೋನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌  ಮತ್ತು ಐಪಾಡ್‌ಗಳ ಮೂಲಕವೇ ಸರಕು ಖರೀದಿಸುವ ಅನುಕೂಲ ಒದಗಿಸಿವೆ.

ಗ್ರಾಹಕರನ್ನು ಸೆಳೆಯಲು ಮಳಿಗೆ­ಗಳನ್ನು ಆಕರ್ಷಕವಾಗಿ ಅಲಂಕರಿಸುವ, ಅಚ್ಚುಕಟ್ಟುತ­ನದ ನಿರ್ವಹಣೆ, ವಾತಾನು­ಕೂಲಿ ಸೌಲಭ್ಯ, ದೀಪಾಲಂಕಾರ, ನೀರು, ಮಾರಾಟ ಸಿಬ್ಬಂದಿಯ ವೇತನ, ಸರಕು­ಗಳ ಸಂಗ್ರಹಣೆಗೆ ಮಾಡುವ ವೆಚ್ಚ ಮುಂತಾದವು ಇ–ಕಾಮರ್ಸ್‌ನಲ್ಲಿ ಇರು­ವುದಿಲ್ಲ. ಇದರಿಂದಾಗಿಯೇ ಸರಕು­ಗಳನ್ನು ಸಾಂಪ್ರದಾಯಿಕ ಮಾರುಕಟ್ಟೆ­ಗಿಂತ ಕಡಿಮೆ ದರಕ್ಕೆ ಮಾರಲು ಸಾಧ್ಯವಾ­ಗುತ್ತದೆ.
ಇ–ಕಾಮರ್ಸ್‌ನ ಹೊಸ ಸಂಸ್ಥೆಗಳು ಅಳವಡಿ­ಸಿಕೊಂಡಿರುವ ಸಾಹಸ ಮನೋ­ಭಾವ, ನಿರಂತರ ಆಶಾವಾದ ಮತ್ತು ಉದ್ಯಮ­ಶೀಲತೆಯ ಉತ್ಸಾ­ಹವು ನಮ್ಮ ಕನಸಿನ ಹೊಸ ಭಾರತ ರೂಪುಗೊಳ್ಳಲು ನೆರವಾಗಲಿದೆ.

ಫ್ಲಿಪ್‌ಕಾರ್ಟ್‌ ಮತ್ತು ಸ್ನ್ಯಾಪ್‌ಡೀಲ್‌­ನಂತಹ ಸಂಸ್ಥೆಗಳು ಸೀಮಿತ ಪ್ರಮಾಣದ ಸಂಪನ್ಮೂಲದ ಗರಿಷ್ಠ ಸದ್ಬಳಕೆ ಮೂಲಕ ಅನಿಯಮಿತ ಕನಸು­ಗಳನ್ನು ಕಾಣುವ ಉದ್ಯಮಶೀಲತೆಯ ಕಲೆ­ಯನ್ನು ಪ್ರದ­ರ್ಶಿ­ಸು­ವಲ್ಲಿ ಸಫಲವಾಗಿವೆ. ದಶಕಗಳ ಕಾಲ ಸಾವಿರಾರು ಕೋಟಿ ರೂಪಾಯಿ­ಗಳನ್ನು ವೆಚ್ಚ ಮಾಡಿ 100 ಕೋಟಿ ಡಾಲರ್‌ (₨ 6000 ಕೋಟಿ) ವಹಿ­ವಾಟು ನಡೆಸಲು ದೊಡ್ಡ ಕಾರ್ಪೋ­ರೇಟ್‌ ಸಂಸ್ಥೆಗಳು ದಶಕಗಳನ್ನೇ ತೆಗೆದು­ಕೊಂಡಿದ್ದರೆ, ಈ ಎರಡೂ ಸಂಸ್ಥೆಗಳು ₨ 12 ಸಾವಿರ ಕೋಟಿಗಳಷ್ಟು ವಹಿವಾ­ಟನ್ನು ಅತ್ಯಲ್ಪ ಅವಧಿಯಲ್ಲಿ ನಡೆಸುವ ಮೂಲಕ ಅಚ್ಚರಿ ಮೂಡಿಸಿವೆ.

ಇದಕ್ಕೆಲ್ಲ ಹೊಸ ಉದ್ಯಮಿಗಳ ಪರಿಶ್ರಮ, ಆಸಕ್ತಿ, ಹೊಸ ಚಿಂತನಾ ಕ್ರಮ, ಬದ್ಧತೆ ಮತ್ತು ಉತ್ಸಾಹಗಳೇ ಕಾರಣ. ಇಂತ­ಹವರ ಸಂತತಿ ಹೆಚ್ಚುವಂತಾಗಲಿ. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವಂತಾಗಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT