ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಅತ್ಯಾಚಾರಿಗಳು ಗೆದ್ದಾಗ...

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಜಗತ್ತಿನ ಮೂಕ ಆತ್ಮಸಾಕ್ಷಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸುತ್ತಿರುವ ದೌರ್ಜನ್ಯಗಳು ದೂರದ ದುಃಸ್ವಪ್ನದಂತೆ ಭಾಸವಾಗುತ್ತಿವೆ. ಅವರು ಮೊದಲ ಬಾರಿಗೆ ಅಮೆರಿಕನ್ನರ ತಲೆ ಕತ್ತರಿಸಿದಾಗ ಎಲ್ಲರೂ ಬೆಚ್ಚಿಬಿದ್ದರು. ಅದಾದ ನಂತರ ಅಮಾನವೀಯ ಕೃತ್ಯಗಳು ಒಂದಾದ ಮೇಲೆ ಒಂದರಂತೆ ವರದಿಯಾದವು: ಕ್ರಿಶ್ಚಿಯನ್ನರು ಮತ್ತು ಇತರರ ಸಾಮೂಹಿಕ ಹತ್ಯೆ, ಸಲಿಂಗಕಾಮಿಗಳನ್ನು ಮನೆಗಳ ಮೇಲಿನಿಂದ ಎಸೆದು ಕೊಂದಿದ್ದು, ಅಪಾರ ಪುರಾತತ್ವ ಮೌಲ್ಯ ಹೊಂದಿದ್ದ ಇತಿಹಾಸದ ಕುರುಹುಗಳನ್ನು ಹಾಳು ಮಾಡಿದ್ದು, ವಿಷಾನಿಲದ ಸತತ ಬಳಕೆ ಅವರ ಅಮಾನವೀಯತೆಗೆ ಸಾಕ್ಷಿಯಾದವು.
‘ದಿ ಟೈಮ್ಸ್‌’ನಲ್ಲಿ ಈಚೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಅತಿ ವ್ಯವಸ್ಥಿತ ಅತ್ಯಾಚಾರ ಯೋಜನೆ ಕುರಿತು ವರದಿ ಪ್ರಕಟವಾಗಿತ್ತು. ಇದು ಸಹ ಜಗತ್ತನ್ನು ಗಾಬರಿಗೊಳಿಸಿತು. ಆದರೆ ಇಂಥ ಕೃತ್ಯಗಳನ್ನು ತಡೆಯಲು ಏನಾದರೂ ಮಾಡಬೇಕು ಎಂದು ಯಾರಿಗೂ ಅನ್ನಿಸಲಿಲ್ಲ.

ಈಗ ಇದಕ್ಕಿಂತಲೂ ದೊಡ್ಡ ಅನಾಹುತ ನಡೆಯುತ್ತಿದೆ. ಇತಿಹಾಸದಲ್ಲಿ ಹೂತು ಹೋಗಿರುವ ಮತ್ತೊಂದು ಯುಗಕ್ಕೆ ಏಕಾಏಕಿ ಹೋಗಲು ರಹಸ್ಯ ಬಿಲ ಹುಡುಕಿದ ಹಾಗಾಗಿದೆ ಅಲ್ಲಿನ ಸ್ಥಿತಿ. ಶತಮಾನಗಳಿಂದ ಗಳಿಸಿದ ಜ್ಞಾನವನ್ನು ಏಕಾಏಕಿ ಮರೆತ ಸ್ಥಿತಿ ಕಂಡು ಬರುತ್ತಿದೆ. ಈ ಬೆಳವಣಿಗೆಯು ನೈತಿಕತೆಯ ಗೋಳದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಸರ್ಕಾರಿ ಪ್ರಾಯೋಜಿತ ಜೀತ ಪದ್ಧತಿಯು ಇತಿಹಾಸದ ಪಳೆಯುಳಿಕೆಯಂತೆ ಕಂಡು ಬರುತ್ತಿದೆ. ಇಸ್ಲಾಮಿಕ್ ಸ್ಟೇಟ್ ಗುಲಾಮಿ ಪದ್ಧತಿಯನ್ನು ಪೋಷಿಸುವ, ಪಶ್ಚಾತ್ತಾಪವೇ ಇಲ್ಲದ ರಾಜ್ಯವಾಗಿದೆ. ಸೆರೆ ಹಿಡಿದ ಯಾಜಿದಿ ಮಹಿಳೆಯರನ್ನು ನಾಜೂಕಾಗಿ ವಿಂಗಡಿಸಿ, ‘ದಾಸ್ತಾನು’ ಇಟ್ಟು ಹರಾಜು ಹಾಕಲಾಗುತ್ತಿದೆ.

ಐಎಸ್ ಆಡಳಿತ ಪ್ರದೇಶದಲ್ಲಿ ಅತ್ಯಾಚಾರಗಳನ್ನೂ ಸಿದ್ಧಾಂತದ ಬಂಧದಲ್ಲಿ ಹೆಣೆಯಲಾಗಿದೆ. ಲೈಂಗಿಕ ಕ್ರಿಯೆ ನಡೆಸುವ ಮುನ್ನ ಮತ್ತು ನಂತರ ಅತ್ಯಾಚಾರಿಗಳು ‘ಶ್ರದ್ಧೆ’ಯಿಂದ ಪ್ರಾರ್ಥಿಸುತ್ತಾರೆ.  ಅತ್ಯಾಚಾರವನ್ನು ಒಂದು ಸರ್ಕಾರಿ ಕಾರ್ಯಕ್ರಮವಾಗಿ ನಿರ್ವಹಿಸುವ ಧಾರ್ಮಿಕ ನಾಯಕರು ಯುವ ಅತ್ಯಾಚಾರಿಗಳಿಗಾಗಿ ‘ಪದೇಪದೇ ಕೇಳುವ ಪ್ರಶ್ನೆಗಳು’ ಎಂಬ ಕೈಪಿಡಿಯನ್ನೇ ಪ್ರಕಟಿಸಿದ್ದಾರೆ.

ಪ್ರಶ್ನೆ 12: ಮತ್ತೊಬ್ಬನ ಸುಪರ್ದಿಯಲ್ಲಿರುವ ಗುಲಾಮಳಿಗೆ, ಮಾಲೀಕನ ಅನುಮತಿ ಪಡೆದು ಮುತ್ತು ಕೊಡಬಹುದೇ?
ಉತ್ತರ: ಮತ್ತೊಬ್ಬನ ಸುಪರ್ದಿಯಲ್ಲಿರುವ ಗುಲಾಮಳಿಗೆ ಮುತ್ತು ಕೊಡುವಂತಿಲ್ಲ. ಮುತ್ತು ತೃಪ್ತಿ ಕೊಡುತ್ತದೆ. ಗುಲಾಮಳನ್ನು ಸಂಪೂರ್ಣವಾಗಿ ತನ್ನ ಸುಪರ್ದಿಯಲ್ಲಿರಿಸಿಕೊಳ್ಳದವರು ತೃಪ್ತಿ ಹೊಂದುವುದನ್ನು ನಿಷೇಧಿಸಲಾಗಿದೆ.

ಪ್ರಶ್ನೆ 13: ಇನ್ನೂ ಪ್ರೌಢಾವಸ್ಥೆ ತಲುಪದ ಗುಲಾಮಳೊಂದಿಗೆ ಸಂಭೋಗ ನಡೆಸಬಹುದೇ?
ಉತ್ತರ: ಸಂಭೋಗಕ್ಕೆ ಸೂಕ್ತ ಎನಿಸಿದರೆ ಪ್ರೌಢಾವಸ್ಥೆ ತಲುಪದ ಗುಲಾಮಳೊಂದಿಗೂ ಸಂಭೋಗ ನಡೆಸಲು ಅವಕಾಶವಿದೆ. ಅವಳು ಸಂಭೋಗಕ್ಕೆ ಸೂಕ್ತ ಎನಿಸದಿದ್ದರೆ ಆಕೆಯ ಜತೆ ಸಂಭೋಗ ಮಾಡದೇ ಖುಷಿಪಡಬಹುದು. ಇದು 21ನೇ ಶತಮಾನದಲ್ಲಿ ಕಂಡುಬರಬೇಕಿದ್ದ ವಿದ್ಯಮಾನವಲ್ಲ. ಪಾಶ್ಚಿಮಾತ್ಯ ತಜ್ಞರು ನಾವು ಸಾಕ್ಷಿಯಾಗುತ್ತಿರುವ ನೈತಿಕ ಅಧಃಪತನವನ್ನು ನಿಟ್ಟಿಸಿ ನೋಡುತ್ತಿದ್ದಾರೆ. ಅದರ ಕಾರಣ ಮತ್ತು ಪ್ರಸ್ತುತತೆ ಹುಡುಕಲು ಯತ್ನಿಸುತ್ತಿದ್ದಾರೆ. ಈಚೆಗೆ ‘ದಿ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್‌’ನಲ್ಲಿ ಒಂದು ಉತ್ತಮ ಪ್ರಬಂಧ ಪ್ರಕಟವಾಗಿತ್ತು. ಮಧ್ಯಪ್ರಾಚ್ಯ ದೇಶಗಳ ವ್ಯವಹಾರದಲ್ಲಿ ಪರಿಣತರಾದವರೊಬ್ಬರು ಆ ಪ್ರಬಂಧ ಬರೆದಿದ್ದರು. ಆದರೆ ಅದರಲ್ಲಿ ಅವರ ಹೆಸರು ಪ್ರಕಟವಾಗಿರಲಿಲ್ಲ. ಅವರು ಅನಾಮಿಕರಾಗಿಯೇ ಉಳಿಯಲು ಇಚ್ಛಿಸಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರರು ಜಗತ್ತಿನಲ್ಲಿ ಭೀತಿ ಮೂಡಿಸಿ ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿ ಬಾರಿಯೂ ನಾವು ಆಲೋಚಿಸುತ್ತೇವೆ. ಆದರೆ ವಾಸ್ತವದಲ್ಲಿ ಆ ಸಂಘಟನೆ  ತನ್ನದೇ ಆದ ರೀತಿಯಲ್ಲಿ ಶಕ್ತಿ ಬೆಳೆಸಿಕೊಳ್ಳುತ್ತಿದೆ.

‘ದಿ ನ್ಯಾಷನಲ್ ಇಂಟರೆಸ್ಟ್‌’ನಲ್ಲಿ ಬರೆದ ರೋಸ್ ಹ್ಯಾರಿಸನ್, ಇಸ್ಲಾಮಿಕ್ ಸ್ಟೇಟ್‌ನ ಮಾಯಾ ಬಿಲವು ಹೇಗೆ ನೈತಿಕ ಯುಗಧರ್ಮವನ್ನೇ ಬದಲಿಸಿದೆ, ರಾಜಕೀಯ ಮಾಯಾ ಬಿಲದ ಮೂಲಕ ಭೂಗೋಳದ ಮೇಲೆ ದೇಶಗಳ ಗಡಿ ಗೆರೆ ಅಳಿಸುವ ಹೊಸ ಕಾರ್ಯಪದ್ಧತಿಯತ್ತ ದಾಪುಗಾಲಿಡುತ್ತಿದೆ ಎಂಬ ವಿಚಾರವನ್ನು ಎತ್ತಿ ತೋರಿಸಿದ್ದರು. ರಾಷ್ಟ್ರೀಯತೆ ಮತ್ತು ಅರಬ್ ನಾಡಿನಲ್ಲಿರುವ ದೇಶಗಳನ್ನು (ಗಡಿ) ಹೂತುಹಾಕಲು ಇಸ್ಲಾಮಿಕ್ ಸ್ಟೇಟ್ ಮೇಲೆದ್ದಿದೆ ಎಂದು ಹ್ಯಾರಿಸನ್ ವಾದಿಸುತ್ತಾರೆ.

ದೇಶಗಳ ನಡುವಣ ಗಡಿಯನ್ನು ನಾಶಪಡಿಸಲು ಇಸ್ಲಾಮಿಕ್ ಸ್ಟೇಟ್ ಸದಾ ಯತ್ನಿಸುತ್ತದೆ. ರಾಷ್ಟ್ರೀಯ ಗುರುತುಗಳನ್ನು ಹೀಗಳೆಯುತ್ತದೆ, ಗೊಂದಲಕ್ಕೀಡಾಗಿಸುತ್ತದೆ ಅಥವಾ ಹಾಳು ಮಾಡುತ್ತದೆ. ಹ್ಯಾರಿಸನ್‌ ಹೇಳುವಂತೆ ‘ತನ್ನ ನೆಲೆ ಇರುವ ಇರಾಕ್, ಸಿರಿಯಾ ಗಡಿ ದಾಟಿ ಲೆಬನಾನ್, ಜೋರ್ಡಾನ್‌, ರಾಷ್ಟ್ರೀಯತೆ ಪ್ರಬಲವಾಗಿರುವ ಈಜಿಪ್ಟ್‌ನಲ್ಲಿಯೂ ಜಾತ್ಯತೀತ ರಾಷ್ಟ್ರೀಯ ಬಂಧ ಶಿಥಿಲಗೊಳಿಸುವುದು ಇಸ್ಲಾಮಿಕ್ ಸ್ಟೇಟ್‌ನ ಉದ್ದೇಶವಾಗಿದೆ’.

‘ಕ್ರೌರ್ಯ ಹೊರತುಪಡಿಸಿದರೆ ಇಸ್ಲಾಮಿಕ್ ಸ್ಟೇಟ್‌ಗೆ ಇನ್ಯಾವುದೇ ಅಸ್ತಿತ್ವವಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳುತ್ತಾರೆ. ಇದು ಸಂಪೂರ್ಣ ತಪ್ಪು ಅಭಿಪ್ರಾಯ. ಇಸ್ಲಾಮಿಕ್ ಸ್ಟೇಟ್‌ನ ನಾಯಕರು ಮತ್ತು ಸೈನಿಕರನ್ನು ಕೊಲ್ಲುವ ಸಂಘರ್ಷದ ಬಗ್ಗೆ ಅಮೆರಿಕದ ಮಿಲಿಟರಿ ನಾಯಕರು ಮಾತನಾಡುತ್ತಾರೆ. ಆದರೆ ಈ ಯುದ್ಧವು ಇದೆಲ್ಲವನ್ನೂ ಮೀರಿದ್ದಾಗಿದೆ. ಈ ಯುದ್ಧದ ವ್ಯಾಪ್ತಿಗೆ ಇತಿಹಾಸದ ಬಗೆಗಿನ ದೃಷ್ಟಿಕೋನವೂ ಸೇರ್ಪಡೆಗೊಂಡಿದೆ. ಇಸ್ಲಾಮಿಕ್ ಸ್ಟೇಟ್‌ನ ಪ್ರತಿಪಾದನೆಗಳಿಗೆ ಕಾನೂನಿನ ಸ್ವರೂಪವೂ ಇದೆ. ಏಕೆಂದರೆ ಈ ಸಂಘಟನೆಯ ವ್ಯಾಪ್ತಿಯಲ್ಲಿ ಭೂ ಪ್ರದೇಶವಿದೆ. ಅದರಲ್ಲಿ ತನ್ನ ಸಿದ್ಧಾಂತವನ್ನು ಅದು ಕಟ್ಟುನಿಟ್ಟಾಗಿ ಜಾರಿ ಮಾಡುತ್ತದೆ.

ಇಸ್ಲಾಮಿಕ್ ಸ್ಟೇಟ್‌ನ ವಿರುದ್ಧ ನಡೆದ ಕಾರ್ಯಾಚರಣೆಗಳು ಅಷ್ಟು ಯಶಸ್ವಿಯಾಗಿಲ್ಲ. ಸಿರಿಯಾದಲ್ಲಿ 15 ಸಾವಿರ ಉದಾರವಾದಿ ಹೋರಾಟಗಾರರ ಪಡೆಯೊಂದನ್ನು ಕಟ್ಟಲು ಅಮೆರಿಕ 5 ಸಾವಿರ ಲಕ್ಷ ಡಾಲರ್ ಮೀಸಲಿಟ್ಟಿತ್ತು. ಆದರೆ ಸತತ ಮೂರು ವರ್ಷದ ಪ್ರಯತ್ನದಲ್ಲಿ 60 ಹೋರಾಟಗಾರರು ಸಿದ್ಧಗೊಂಡರು, ಅವರಲ್ಲಿ 40 ಮಂದಿಯನ್ನು ತಕ್ಷಣ ಸೆರೆ ಹಿಡಿಯಲಾಯಿತು.

ಇಸ್ಲಾಮಿಕ್ ಸ್ಟೇಟ್‌ನ ಶಕ್ತಿಯನ್ನು ವಿಶ್ವಾಸಕ್ಕೆ ಅರ್ಹರಲ್ಲದ ಹುಚ್ಚು ಯುವಕರ ಗುಂಪು ಎಂದು ತಪ್ಪಾಗಿ  ಅಂದಾಜಿಸುವುದನ್ನು ಮೊದಲು ನಿಲ್ಲಿಸಬೇಕು. ಮಧ್ಯಪ್ರಾಚ್ಯದಲ್ಲಿ ಇದೀಗ ಕಂಡು ಬರುತ್ತಿರುವ ಅತಿ ಕೆಟ್ಟ– ದುರ್ಬಲ ಸ್ವರೂಪದ ಸ್ಥಿರತೆಗೆ ಇಸ್ಲಾಮಿಕ್ ಸ್ಟೇಟ್ ನೈತಿಕ ಮತ್ತು ರಾಜಕೀಯ ಆತಂಕ ಒಡ್ಡಿದೆ. ತನ್ನ ಬಳಿ ಭೂಮಿ ಇರುವವರೆಗೆ ಈ ಸಂಘಟನೆ ಹುಲುಸಾಗಿ ಬೆಳೆಯುತ್ತದೆ, ಸಿದ್ಧಾಂತಗಳನ್ನು ಪ್ರಚುರಪಡಿಸುತ್ತದೆ. ಮತ್ತೆ ಮೇಲೇಳಲು ಹವಣಿಸುತ್ತಿರುವ ಇರಾನ್, ಸಾಂಕ್ರಾಮಿಕ ರೋಗದಂಥ ಇಸ್ಲಾಮಿಕ್ ಸ್ಟೇಟ್ ಮತ್ತು ದೇಶಗಳಲ್ಲಿ ಸುವ್ಯವಸ್ಥೆ ಕುಸಿಯುತ್ತಿರುವ ಕಾಲಘಟ್ಟದಲ್ಲಿ ನಿಂತು ಭವಿಷ್ಯ ಕಟ್ಟಿಕೊಳ್ಳಲು ನಾವು ಯತ್ನಿಸುತ್ತಿದ್ದೇವೆ. ಇದು ಪುನರ್‌ಮೌಲ್ಯಮಾಪನಕ್ಕೆ ಎಚ್ಚರಿಕೆಯ ಗಂಟೆಯಲ್ಲದಿದ್ದರೆ ಮತ್ತೇನು?

ದಿ ನ್ಯೂಯಾರ್ಕ್ ‌ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT