ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣದಲ್ಲಿ ಕನ್ನಡ

Last Updated 20 ಫೆಬ್ರುವರಿ 2016, 19:40 IST
ಅಕ್ಷರ ಗಾತ್ರ

ಈಗಿನ ಸ್ನಾತಕರ ಬರೆವಣಿಗೆಯ ಕೌಶಲ ಅತಿ ಕಳಪೆ ಯಾಕೆ, ಎಂದರೆ ಕಾಲೇಜಿನವರು ಹೈಸ್ಕೂಲಿನಲ್ಲಿ ಕಲಿಸಲಿಲ್ಲ ಎನ್ನುವುದು, ಹೈಸ್ಕೂಲಿನವರು ಪ್ರೈಮರಿಯಲ್ಲಿ ಕಲಿಸಲಿಲ್ಲ ಎನ್ನುವುದು ಸರ್ವೇ ಸಾಮಾನ್ಯ. ಎಲ್ಲಿಯೇ ಆಗಲಿ ಆಯಾ ಸಾಮರ್ಥ್ಯಗಳಿಗೆ ಅನುಗುಣವಾದ ಕಲಿಕಾ ಅನುಭವಗಳನ್ನು ಕೊಡಲಿಲ್ಲ ಎಂಬುದೇ ಸತ್ಯದ ಮಾತು.

ನಮ್ಮ ಕನ್ನಡ ನಾಡಿನಲ್ಲಿ ಯಾವುದೇ ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡ್ಡಾಯವಲ್ಲ. ಪದವಿ ಪೂರ್ವ ಮತ್ತು ಅದಕ್ಕೂ ಹಿಂದಿನ ಹಂತದಿಂದಲೇ ಈ ಪದ್ಧತಿ ಜಾರಿಗೆ ಬಂದುಬಿಡುತ್ತದೆ. ವಿಶ್ವವಿದ್ಯಾನಿಲಯದ ಪದವಿ ತರಗತಿಗಳ ಭಾಷಾಕಲಿಕೆಗೆ ಸಂಬಂಧಿಸಿದಂತೆ ಒಂದು ನಿಯಮಾವಳಿ ಜಾರಿಯಲ್ಲಿದೆ. ಅದರ ಪ್ರಕಾರ ಪದವಿ ತರಗತಿಗಳಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅಭ್ಯರ್ಥಿಯು ಯಾವುದಾದರೂ ಎರಡು ಭಾಷೆಗಳನ್ನು ಕಲಿಯಬೇಕು, ಇವುಗಳಲ್ಲಿ ಒಂದು ಭಾರತೀಯ (ಅಂದರೆ ಸಂವಿಧಾನದ 8ನೆಯ ಪರಿಚ್ಛೇದದಲ್ಲಿರುವ ಭಾಷೆಗಳು) ಭಾಷೆಯಾಗಿರಬೇಕು. ಈ ನಿಯಮದಲ್ಲೂ ರಿಯಾಯಿತಿಗಳಿವೆ.

ವಿದ್ಯಾರ್ಥಿಗಳು ಪಿ.ಯು.ಸಿ.ಯಲ್ಲಿ ಕಲಿತ ಭಾಷೆಗಳನ್ನು ಪದವಿ ತರಗತಿಗಳಲ್ಲೂ ಕಲಿಯಬಹುದು. ಆದರೆ ವಿದ್ಯಾರ್ಥಿ ಇಚ್ಛೆಪಟ್ಟಲ್ಲಿ ಪಿ.ಯು.ಸಿ.ಯಲ್ಲಿ ಕಲಿಯದ ಭಾಷೆ/ಭಾಷೆಗಳನ್ನು ವಿಶ್ವವಿದ್ಯಾನಿಲಯದ ಅನುಮತಿಯೊಂದಿಗೆ ಆಯ್ಕೆ ಮಾಡಬಹುದಾಗಿದೆ. ಅಂದರೆ ವಿಶ್ವವಿದ್ಯಾನಿಲಯದ ನಿಯಮಾವಳಿಯಂತೆ ಕಲಿಕೆಯ ಎರಡು ಭಾಷೆಗಳಲ್ಲಿ ಇಂಗ್ಲಿಷ್ ಕಡ್ಡಾಯವಲ್ಲ. ಆದರೆ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಇಂಗ್ಲಿಷ್ ಅನಧಿಕೃತವಾಗಿ ಕಡ್ಡಾಯ ಭಾಷೆಯಾಗಿದ್ದು, ಎರಡನೇ ಭಾಷೆ ಇತರ ಭಾರತೀಯ ಭಾಷೆಗಳಲ್ಲಿ ಒಂದಾಗಿರುತ್ತದೆ. ಸಾಮಾನ್ಯವಾಗಿ ಈ ಎರಡನೇ ಭಾಷೆ ಎನಿಸಿಕೊಂಡದ್ದು ಕರ್ನಾಟಕದಲ್ಲಿ ಕನ್ನಡ, ಹಿಂದಿ ಅಥವಾ ಸಂಸ್ಕೃತವಾಗಿರುತ್ತದೆ. ಕೆಲವೆಡೆ ಇತರ ಭಾರತೀಯ ಭಾಷೆಗಳೊಂದಿಗೆ ಫ್ರೆಂಚ್ ಅಥವಾ ಜರ್ಮನ್ ಇರಬಹುದು. ಅಂದರೆ ಕನ್ನಡವನ್ನು ಕಲಿಯಬೇಕಾದ ಅನಿವಾರ್ಯತೆ ಇಲ್ಲ. 

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಭಾಷಾಕಲಿಕೆಗೆ ಸಂಬಂಧಿಸಿದಂತೆ ಪಠ್ಯಕ್ರಮದಲ್ಲಿ ಏಕರೂಪತೆ ಇಲ್ಲ. ಕೆಲವು ಪದವಿಗಳಿಗೆ ಮೂರು ವರ್ಷ, ಕೆಲವಕ್ಕೆ ಎರಡು ವರ್ಷ ಮತ್ತೆ ಕೆಲವಕ್ಕೆ ಒಂದು ವರ್ಷ ಭಾಷಾಕಲಿಕೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಒಂದೇ ವಿಶ್ವವಿದ್ಯಾನಿಲಯದಲ್ಲಿ ಕೆಲವು ಪದವಿಗಳಿಗೆ ಎರಡು ಸೆಮಿಸ್ಟರ್ ಮತ್ತೆ ಕೆಲವು ನಾಲ್ಕು ಸೆಮಿಸ್ಟರ್ ಭಾಷಾಕಲಿಕೆಗೆ ಅವಕಾಶವಿದ್ದರೆ, ಕೆಲವು ಪದವಿಗಳಿಗೆ ಭಾಷಾಕಲಿಕೆಯೇ ಇಲ್ಲ. ಭಾಷೆಗೆ ಸಂಬಂಧಿಸಿದ ವಾರಕ್ಕಿರುವ ಬೋಧನಾವಧಿಯಲ್ಲೂ ಎಲ್ಲ ಪದವಿಗಳಲ್ಲಿ ಏಕರೂಪತೆ ಇಲ್ಲ, ಆಂತರಿಕ ಪರೀಕ್ಷೆ ಬಾಹ್ಯ ಪರೀಕ್ಷೆಗಳ ಅಂಕಗಳಲ್ಲೂ ಏಕರೂಪತೆ ಇಲ್ಲ. ಇನ್ನು ಈ ಪಠ್ಯಕ್ರಮದ ಆಧಾರದ ಮೇಲೆ ಅಧ್ಯಯನ ಮಂಡಳಿಗಳು ರೂಪಿಸುವ ಈ ಪಠ್ಯವಸ್ತುವಿನಲ್ಲೂ ಭಾಷೆಗಳಿಗೆ ಸಂಬಂಧಿಸಿದಂತೆ ಏಕರೂಪತೆ ಇಲ್ಲ. ಬೇರೆ ಬೇರೆ ವಿಶ್ವವಿದ್ಯಾನಿಲಯದಲ್ಲಿ ಬೇರೆ ಬೇರೆ ಮಾದರಿಗಳಿವೆ. ಒಂದೇ ವಿಶ್ವವಿದ್ಯಾನಿಲಯದಲ್ಲಿ ಬೇರೆ ಬೇರೇ ಭಾಷೆಗಳಿಗೆ ಬೇರೆ ಬೇರೆ ರೂಪದ ಪಠ್ಯವಸ್ತುವಿರುತ್ತದೆ.

ಹಿಂದೆ ವಿಶ್ವವಿದ್ಯಾನಿಲಯಗಳಲ್ಲಿ ಬಿ.ಎ., ಬಿ.ಎಸ್ಸಿ., ಮತ್ತು ಬಿ.ಕಾಂ. ಎಂಬ ಮೂರು ಪದವಿಗಳಿದ್ದವು. ಕಾಲಕ್ರಮೇಣ ಬಿ.ಎಸ್ಸಿ ಮತ್ತು ಬಿ.ಕಾಂ. ಕೋರ್ಸುಗಳು ಟಿಸಿಲೊಡೆಯಲು ಆರಂಭಿಸಿದವು. ಈ ಟಿಸಿಲುಗಳ ಕಾರಣ ಹತ್ತಾರು ಹೊಸ ಪದವಿಗಳು ಹುಟ್ಟಿಕೊಂಡವು. ಜ್ಞಾನಶಿಸ್ತು ಹೀಗೆ ವಿಕಾಸವಾಗುವುದು ಸಹಜ ಮತ್ತು ಅಪೇಕ್ಷಿತ. ಆದರೆ ಭಾಷಾ ಬೋಧನೆಯ ವಿಷಯ ಬಂದಾಗ ಇಲ್ಲಿ ಮತ್ತಷ್ಟು ಗೊಂದಲಗಳು ಉಂಟಾದವು. ಒಂದೊಂದು ಪದವಿ ತರಗತಿಯ ಭಾಷಾಬೋಧನೆಗೆ ಸಂಬಂಧಿಸಿದಂತೆ ತನ್ನ ಮಂಡಳಿಯ ಅಥವಾ ಅಧ್ಯಾಪಕರ ನಿಲುವಿಗೆ ಆತುಕೊಂಡು ಪಠ್ಯವಸ್ತುವನ್ನು ತನಗೆ ಬೇಕಾದಂತೆ ರೂಪಿಸಲು ಪ್ರಾರಂಭಿಸಿದವು.

ಯಾವ ಯಾವ ಪದವಿಗಳನ್ನು ಒಟ್ಟುಗೂಡಿಸಿ ಪಠ್ಯವಸ್ತು ಸಿದ್ಧಪಡಿಸಬೇಕೆಂಬುದಕ್ಕೆ ಒಂದೇ ವಿಶ್ವವಿದ್ಯಾನಿಲಯದಲ್ಲಿ ಕಲಿಸುವ ವಿವಿಧ ಭಾಷಾಪಠ್ಯವಸ್ತುವಿನಲ್ಲಿ ಏಕರೂಪತೆ ಇಲ್ಲದಾಯಿತು. ಇನ್ನು ಇಡೀ ಕರ್ನಾಟಕದ ವಿಶ್ವವಿದ್ಯಾನಿಲಯದ ಪಠ್ಯವಸ್ತುಗಳನ್ನು ಗಮನಿಸಿದಲ್ಲಿ ಗೊಂದಲದ ಗೂಡುಗಳೇ ಕಾಣುತ್ತವೆ. ಕಾರಣ ಬಹುತೇಕ ಭಾಷಾಮಂಡಳಿಗಳು ಪಠ್ಯವಸ್ತು ಎಂದರೆ ಪಠ್ಯವನ್ನು ನಿಗದಿಪಡಿಸುವುದು ಎಂಬ ಮಟ್ಟದಲ್ಲೇ ವ್ಯವಹರಿಸಿವೆ. ಸ್ವಾಯತ್ತ ಖಾಸಗೀ ವಿಶ್ವವಿದ್ಯಾನಿಲಯ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ಭಾಷಾ ಕಲಿಕೆಗೆ ಸಂಬಂಧಿಸಿದ ಧೋರಣೆಯನ್ನಂತೂ ವಿವರಿಸಬೇಕಾದ ಅಗತ್ಯವಿಲ್ಲ.

ಭಾಷಾ ಪಠ್ಯಪುಸ್ತಗಳು ಈ ಹಿಂದೆ ಏಕರೂಪವಾಗಿರಲಿಲ್ಲ. ಹಿಂದೆ ವಿಶ್ವವಿದ್ಯಾನಿಲಯದ ಪ್ರಸಾರಾಂಗಗಳ ಮೂಲಕ ಒಂದೆರಡು ಪಠ್ಯಪುಸ್ತಕಗಳನ್ನು ರೂಪಿಸಿ ಉಳಿದ ಒಂದೆರಡು ಪಠ್ಯಪುಸ್ತಕಗಳನ್ನು ಖಾಸಗಿ ಪ್ರಕಾಶಕರಿಗೆ ವಹಿಸಿಕೊಡುವುದಿತ್ತು. ಕಾಲಕ್ರಮೇಣ ಈ ಖಾಸಗೀ ಪ್ರಕಾಶನ ದೂರವಾಗಿ ವಿಶ್ವವಿದ್ಯಾನಿಲಯದ ಅಧ್ಯಾಪಕರೇ ರೂಪಿಸಿದ ಪಠ್ಯಪುಸ್ತಕಗಳನ್ನು ವಿಶ್ವವಿದ್ಯಾನಿಲಯವೇ ಪ್ರಕಟಿಸಿ ಹೊರತರುವ ಕೆಲಸ ನಡೆಯುತ್ತಿದೆ. ವಿವಿಧ ಪದವಿಗಳಿಗೆ ವಿವಿಧ ಪಠ್ಯಪುಸ್ತಕಗಳನ್ನು ತಂದು ಪ್ರತಿ ಪದವಿಯನ್ನು ಭಾಷಾಕಲಿಕೆಯ ದೃಷ್ಟಿಯಿಂದ ಪ್ರತ್ಯೇಕವಾಗಿಸಿದ್ದ ಈ ವಿಶ್ವವಿದ್ಯಾನಿಲಯದ ಕ್ರಮವನ್ನು ಗಮನಿಸಿದ ಸರಕಾರ ಎಲ್ಲ ಪದವಿ ತರಗತಿಗಳಿಗೆ ಏಕರೂಪದ ಪಠ್ಯವನ್ನು ನಿಗದಿಗೊಳಿಸುವ ಆ ಮೂಲಕ ಭಾಷಾ ಬೋಧಕರ ಸಂಖ್ಯೆಯನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿತು.

ಇದರ ಜೊತೆಗೆ ಬಿ.ಎ., ಮತ್ತು ಬಿ.ಎಸ್ಸಿ ಹೊರತುಪಡಿಸಿ ಉಳಿದ ಪದವಿಗಳಿಗೆ ನಾಲ್ಕು ಸೆಮಿಸ್ಟರ್‌ಗೆ ಭಾಷಾ ಕಲಿಕೆಯನ್ನು ಎರಡು ಸೆಮಿಸ್ಟರ್‌ಗೆ ಇಳಿಸಿ ಆದೇಶವನ್ನೂ ಹೊರಡಿಸಿತು. ಇದರ ಸಾಧಕ ಬಾಧಕಗಳನ್ನು ಕುರಿತು ಪ್ರೊ.ಬರಗೂರು ರಾಮಚಂದ್ರಪ್ಪನವರು ಗಮನಸೆಳೆದಿದ್ದಾರೆ. ಮಂಗಳೂರಿನ ‘ವಿಕಾಸ’ (ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಸಂಘ) ಪತ್ರಗಳನ್ನು ಬರೆದು ಎಲ್ಲರ ಗಮನಕ್ಕೆ ತರಲು ಪ್ರಯತ್ನಿಸಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಲ್. ಹನುಮಂತಯ್ಯನವರ ಮುತುವರ್ಜಿಯಲ್ಲಿ ಈ ಆದೇಶ ಹಿಂಪಡೆದ ಸರಕಾರ ಏಕರೂಪದ ಭಾಷಾಕಲಿಕೆಗೆ ಗಮನ ಹರಿಸಿತು. ಇನ್ನೂ ಇದು ಚಾಲ್ತಿಗೆ ಬರಬೇಕಿದೆ.

ಉಳಿದ ಭಾಷಾಕಲಿಕೆಯ ವಿಚಾರ ಏನೇ ಇರಲಿ ಕನ್ನಡದ ಮಟ್ಟಿಗೆ ಭಾಷಾಕಲಿಕೆಯ ವ್ಯಾಪ್ತಿ ದೊಡ್ಡದು. ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಕನ್ನಡವನ್ನು ಕಲಿಯುತ್ತಾರೆ ಮತ್ತು ಕನ್ನಡದಲ್ಲಿ ಕಲಿಯುತ್ತಾರೆ ಎಂಬುದು ನಿಜ. ರಾಜ್ಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತರಿಸುವ ಎರಡು ಮಾಧ್ಯಮಗಳೆಂದರೆ ಇಂಗ್ಲಿಷ್  ಮತ್ತು ಕನ್ನಡ ಮಾತ್ರ. ಕೆಲವು ಕಾಲೇಜು ಹೊರತುಪಡಿಸಿದರೆ ರಾಜ್ಯದಲ್ಲಿ ಸಮಾಜವಿಜ್ಞಾನ ಮತ್ತು ಮಾನವಿಕಗಳ ಸಂದರ್ಭದಲ್ಲಿ ಕನ್ನಡದಲ್ಲಿ ಕಲಿಯುವ ಪದ್ಧತಿ ರೂಢಿಯಲ್ಲಿದೆ. ಕನ್ನಡವನ್ನು ಕಲಿಯದಿದ್ದರೂ ಕನ್ನಡದಲ್ಲಿ ಕಲಿಯದಿದ್ದರೂ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಕನ್ನಡದ ಅಭಿವ್ಯಕ್ತಿ ವಿಧಾನಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಅಗತ್ಯವಿದೆ.

ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ಬಂದ ಕೂಡಲೆ ಭಾಷಾಬೋಧನೆಯ ಉದ್ದೇಶಗಳು ಹಿಂದಿನ ಹಂತಗಳಿಗಿಂತ ಭಿನ್ನವಾಗಿ ಬಿಡುತ್ತವೆ ಎಂದೇನೂ ಇಲ್ಲ. ಹಿಂದಿನ ಉದ್ದೇಶಗಳೇ ಹೆಚ್ಚು ಗಟ್ಟಿಯಾಗಿ ಆಳವಾಗಿ ವಿಶಾಲವಾದ ಹರಹನ್ನು ಪಡೆದುಕೊಳ್ಳುತ್ತವೆ. ಭಾಷೆಯನ್ನು ಕಲಿಯುವ ಮೂಲ ಉದ್ದೇಶ ಅಭಿವ್ಯಕ್ತಿ, ಅದು ಮೌಖಿಕವಿರಬಹುದು, ಲಿಖಿತವಿರಬಹುದು. ತಾನು ಕಲಿತುದನ್ನು ತನಗೆ ಅನಿಸಿದುದನ್ನು ಈ ಹಂತದಲ್ಲಿ ಮತ್ತೂ ಚೆನ್ನಾಗಿ ಅಭಿವ್ಯಕ್ತಿಸಲು ವಿದ್ಯಾರ್ಥಿಗೆ ಸಾಧ್ಯವಾಗಬೇಕು. ಈ ದೃಷ್ಟಿಯಿಂದ ಬೇರೆ ಬೇರೆ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಪಠ್ಯಗಳು ಬೇಕು.  ಪ್ರತಿ ವಿದ್ಯಾರ್ಥಿಯಕಲಿಕೆ ಅವನ ಈವರೆಗಿನ ಹಿನ್ನೆಲೆಯ ಮೇಲೆ ಅವಲಂಬಿತವಾಗಿರುತ್ತದೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಅದರ ಪರಿಧಿಯಲ್ಲಿ ಮಾನವಿಕ ವಿದ್ಯಾರ್ಥಿಗಳಿಗೆ ಅದರ ಪರಿಧಿಯಲ್ಲಿ ಪಠ್ಯಗಳು ಹತ್ತಿರವಾಗುತ್ತವೆ.

ಎಲ್ಲರೂ ಎಲ್ಲವನ್ನೂ ಒಂದೇ ರೀತಿ ಕಲಿಯುವುದಿಲ್ಲ. ಕನ್ನಡದಲ್ಲಿ ವಿಜ್ಞಾನ, ಸಮಾಜವಿಜ್ಞಾನ ಮುಂತಾದ ವಿಷಯಗಳನ್ನು ಪಾಠಮಾಡುವವರೂ ಒಂದೇ ಮಾದರಿಯನ್ನೇ ಬಳಸುವುದಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯದ ವಲಯದಲ್ಲಿ 2003-04ರ ಅವಧಿಯಲ್ಲಿ ಭಾಷಾಕಲಿಕೆಗೆ ಸಂಬಂಧಿಸಿದ ಚರ್ಚೆ ನಡೆಯಿತು. ಈ ಚರ್ಚೆಯ ಫಲಿತಗಳನ್ನು ಕನ್ನಡದ ಬಗೆಗೆ ಕಾಳಜಿಯುಳ್ಳ ಹಲವರಿಗೆ ಕಳುಹಿಸಿ ಅವರ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ಎಲ್ಲ ಅಂಶಗಳನ್ನು ಪುಸ್ತಕರೂಪದಲ್ಲಿಯೂ ಪ್ರಕಟಿಸಲಾಯಿತು. ಒಟ್ಟಿನ ಸಾರಾಂಶ ಇಷ್ಟು. ವಾಣಿಜ್ಯ, ವಿಜ್ಞಾನ ಮತ್ತು ಮಾನವಿಕ ವಿಷಯಗಳ ತಿರುಳು ಪಠ್ಯಗಳ ಕಲಿಕೆಯ ಕಾರಣದಿಂದಾಗಿ ಈ ವಿದ್ಯಾರ್ಥಿಗಳ ಗ್ರಹಿಕೆ, ಅಭಿವ್ಯಕ್ತಿಯ ಸಾಮರ್ಥ್ಯದಲ್ಲಿ ಭಿನ್ನತೆ ರೂಪುಗೊಂಡಿರುತ್ತದೆ.

ಆದುದರಿಂದ ಭಿನ್ನ ಜ್ಞಾನಶಿಸ್ತಿಗೆ ಒಳಗಾಗುವ ವಿದ್ಯಾರ್ಥಿಗಳಿಗೆ ಭಾಷಾಪಠ್ಯವಸ್ತುವಿನಲ್ಲೂ ಭಿನ್ನತೆ, ಬೋಧನೆಯಲ್ಲೂ ಭಿನ್ನತೆ ಅಗತ್ಯವಾಗುತ್ತದೆ. ಬಹುರೂಪತೆಯನ್ನು ಪಠ್ಯವಸ್ತುವಿನಲ್ಲಿ ಅಳವಡಿಸಿದರೆ ವಿದ್ಯಾರ್ಥಿಯ ಮಾನಸಿಕ ಹಿನ್ನೆಲೆ ಮತ್ತು ವ್ಯಕ್ತಿತ್ವದ ಅಗತ್ಯಗಳಿಗೆ ಬೆಲೆಕೊಟ್ಟಂತೆ ಆಗುತ್ತದೆ. ಉನ್ನತ ಶಿಕ್ಷಣದ ದೊಡ್ಡ ವಿರೋಧಾಭಾಸ ಎಂದರೆ ತಾನು ಕಲಿತ ವಿಚಾರಗಳನ್ನು ತನ್ನ ಮಾತೃಭಾಷೆಯಲ್ಲಿ ಸರಳವಾಗಿ ಅಭಿವ್ಯಕ್ತಿಸಲು ಅಗತ್ಯವಾದ ಸಾಮರ್ಥ್ಯ ಮೂಡದೇ ಇರುವುದು. ತಾನು ಕಲಿತ ವಿಚಾರವನ್ನು ತನ್ನ ಭಾಷೆಯಲ್ಲಿ ಸರಳವಾಗಿ ಮತ್ತು ಸಮರ್ಥವಾಗಿ ಅಭಿವ್ಯಕ್ತಿಸಲು ಸಾಧ್ಯವಾಗದಿದ್ದಲ್ಲಿ ಕಲಿಕೆಯ ಅರ್ಥವಂತಿಕೆ ವ್ಯರ್ಥವಾದೀತು. ಉನ್ನತ ಶಿಕ್ಷಣದ ಕಲಿಕೆ ಮತ್ತು ಅಭಿವ್ಯಕ್ತಿಗೆ ಉನ್ನತ ಶಿಕ್ಷಣಕ್ಕೆ ಒಳಗಾದವರೇ ಫಲಾನುಭವಿಗಳಾಗುವ ಸಮಾಜ ವಿರೋಧಿ ಸ್ಥಿತಿ ಇದು.

ಅಂತರ್ಶಿಸ್ತೀಯ ಅಧ್ಯಯನ ಆಳವಷ್ಟೇ ಅಲ್ಲದೇ ಅಗಲಕ್ಕೂ ಹಬ್ಬುವ ಜಾಯಮಾನದ ಅಧ್ಯಯನ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ನೆರವಾಗಬಲ್ಲದು. ಇದು ಭಾಷಾ ತರಗತಿಗಳ ಮೂಲಕ ಹೆಚ್ಚು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮ ಮತ್ತು ಪಠ್ಯವಸ್ತುವಿನ ನಿರ್ಮಾಣದಲ್ಲಿ ಕೆಲವು ಬದಲಾವಣೆಗಳನ್ನು ರೂಪಿಸಿತು. ಸಾಂಪ್ರದಾಯಿಕ ಪದವಿಗಳಾದ ಬಿ.ಎ., ಬಿ.ಎಸ್ಸಿ ಮತ್ತು ಬಿ.ಕಾಂ.ಗಳಿಗಷ್ಟೇ ಅಲ್ಲದೆ ಹೊಸ ಪದವಿಗಳಿಗೂ ಪ್ರತ್ಯೇಕ ಪಠ್ಯಗಳನ್ನು ರೂಪಿಸಲಾಯಿತು. ವೃತ್ತಿಪರ ಕೋರ್ಸುಗಳಾದ ಕಂಪ್ಯೂಟರ್ ಸೈನ್ಸ್, ಅನಿಮೇಶನ್, ಫ್ಯಾಷನ್, ಗಾರ್ಮೆಂಟ್ ಡಿಸೈನಿಂಗ್, ವಾಕ್-ಶ್ರವಣ ವಿಜ್ಞಾನ ಮುಂತಾದ ಕೋರ್ಸುಗಳಿಗೆ ಸಂಬಂಧಿಸಿದಂತೆ ಕನ್ನಡ ಪರಿಸರದಲ್ಲಿ ಬೆಳೆದ ವಿದ್ಯಾರ್ಥಿಗಳಿಗೆ ಪ್ರೌಢ ಕನ್ನಡ, ಕನ್ನಡೇತರ ವಿದ್ಯಾರ್ಥಿಗಳಿಗೆ ಬುನಾದಿ ಕನ್ನಡ ಎಂಬ ಪಠ್ಯವಸ್ತು ನಿಗದಿ ಪಡಿಸಲಾಯಿತು.

ಬೇರೆ ಭಾಷಾಕಲಿಕೆಗಳ ಆಯ್ಕೆ ಇದ್ದರೂ ಶೇ 80ರಷ್ಟು ಕನ್ನಡೇತರ ವಿದ್ಯಾರ್ಥಿಗಳು ಬುನಾದಿ ಕನ್ನಡವನ್ನು ಕಲಿಯುತ್ತಿದ್ದರು ಎಂಬುದು ಆಶಾದಾಯಕ ಸಂಗತಿಯಾಗಿದೆ. ಈ ಭಾಷಾ ಪರೀಕ್ಷೆಯ ಅಂಕಗಳು ದರ್ಜೆ ಮತ್ತು ರ್‍್ಯಾಂಕುಗಳಿಗೂ ಅನ್ವಯವಾದದದ್ದರಿಂದ ಕಲಿಕೆಗೂ ಗಂಭೀರತೆ ಒದಗಿ ಬಂದಿತು. ಇಂಥ ಪ್ರಯತ್ನಗಳು ಮೈಸೂರು, ಬೆಂಗಳೂರು, ತುಮಕೂರು ಮುಂತಾದ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಹಂತದವರೆಗೆ ಜಾರಿಗೆ ಬಂದಿತು. ಬೆಂಗಳೂರು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಡುವ ಪ್ರಯತ್ನವನ್ನೂ ಮಾಡಿತು. ಪ್ರೊ. ಬರಗೂರು ವರದಿ ವೃತ್ತಿಪರ ಶಿಕ್ಷಣವೂ ಸೇರಿದಂತೆ ಉನ್ನತ ಶಿಕ್ಷಣದ ಹಲವು ವಿಭಾಗಗಳಲ್ಲಿ  ಕನ್ನಡಕ್ಕೆ ಸಂಬಂಧಿಸಿದಂತೆ ಹಲವು ಶಿಫಾರಸ್ಸುಗಳನ್ನು ಮಾಡಿದೆ. ಆದರೆ ಈ ಶಿಫಾರಸ್ಸುಗಳಲ್ಲಿ ಬಹುತೇಕ ಚಾಲ್ತಿಗೆ ಬರಲಿಲ್ಲ. ಜಾರಿಗೆ ಬಂದ ಶಿಫಾರಸು ಕಾಟಾಚಾರದ ವ್ಯವಸ್ಥೆಗೆ ಒಳಗಾಯಿತು. ಐ.ಟಿ.ಐ., ನರ್ಸಿಂಗ್, ಪಾಲಿಟೆಕ್ನಿಕ್ ಮುಂತಾದ ಕೋರ್ಸುಗಳಲ್ಲಿ ಕನ್ನಡವಿಲ್ಲ.

ಕಾನೂನು ಪದವಿ ಸರಕಾರಿ ವಿಶ್ವವಿದ್ಯಾನಿಲಯಗಳ ಸಂಯೋಜನೆಗೆ ಒಳಪಟ್ಟಿದ್ದ ಕಾಲದಲ್ಲಿ ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯ ಪಿಯುಸಿ ನಂತರದ ಕಾನೂನು ಪದವಿಯಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ತನ್ನ ಪಠ್ಯಕ್ರಮದಲ್ಲಿ ಸೇರಿಸಲೇ ಇಲ್ಲ. ಪ್ರತ್ಯೇಕ ಕಾನೂನು ವಿಶ್ವವಿದ್ಯಾನಿಲಯವಾದಾಗಲೂ ಭಾಷೆಯ ಮಾತೇ ಇಲ್ಲ. ಈಗ ಪ್ರೊ ಹಿ.ಚಿ. ಬೋರಲಿಂಗಯ್ಯ ಅವರ ವರದಿ ಬಂದಿದೆ. ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಈ ವರದಿ ಶಿಫಾರಸ್ಸು ಮಾಡುತ್ತದೆ. ಕನ್ನಡ ಐಚ್ಛಿಕದ ಬಗ್ಗೆಯೂ ಬರಗೂರು ವರದಿಯಲ್ಲಿ ಪ್ರಸ್ತಾವವಿದೆ. ಕನ್ನಡ ಐಚ್ಛಿಕ ಕಲಿಸುವ ಸಂಸ್ಥೆಗಳಿಗೆ ವಿಶೇಷಾವಕಾಶ ನೀಡಬೇಕೆಂದು ವರದಿ ಹೇಳುತ್ತದೆ. ದಿನೇದಿನೇ ಕನ್ನಡ ಐಚ್ಛಿಕ ಕಲಿಕೆ ಪಿಯುಸಿ ಮತ್ತು ಪದವಿಯಲ್ಲಿ ಗೌಣವಾಗುತ್ತ ನಡೆದಿದೆ. ಐಚ್ಛಿಕಕ್ಕೆ ಸರಕಾರದಿಂದ ಅನುದಾನವಿಲ್ಲದ ಹಲವು ಕಾಲೇಜುಗಳು ಐಚ್ಛಿಕ ತರಗತಿಗಳನ್ನು ಮುಚ್ಚಿವೆ.

ಸರಕಾರದ ಕಾಲೇಜುಗಳು ಮತ್ತು ಕೆಲವು ಖಾಸಗೀ ಕಾಲೇಜುಗಳಲ್ಲಿ ಐಚ್ಛಿಕವಿದೆ. ಸ್ನಾತಕೋತ್ತರ ಪದವಿಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇರುವ ವಿದ್ಯಾರ್ಥಿಗಳು ಮತ್ತು ಸಂಶೋಧನ ವಿದ್ಯಾರ್ಥಿಗಳೂ ಹಳೆಗನ್ನಡ ಅಧ್ಯಯನದಿಂದ ದೂರ ಹೋಗುತ್ತಿದ್ದಾರೆ. ಒಂದು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ನೂರು ಪಿಎಚ್‌.ಡಿ ಪದವಿಗಳನ್ನು ಪ್ರದಾನ ಮಾಡಿದ್ದರೆ ಇದರಲ್ಲಿ ಹಳಗನ್ನಡ ಸಂಶೋಧನೆಯ ಸಂಖ್ಯೆ ಹತ್ತು ಕೂಡ ಇರುವುದಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದಿದೆ. ಆದರೆ ಮುಂದೆ ಈ ಹಂತದಲ್ಲಿ ಸಂಶೋಧನೆ ಕೈಗೊಳ್ಳಬಲ್ಲ ಸಮರ್ಥ ಯುವಜನತೆ ದುರ್ಲಭವಾಗುವ ಸಾಧ್ಯತೆಯೂ ಇದೆ. ಭಾಷೆಯಾಗಿ ಭಾಷಾ ಅಧ್ಯಯನ ಎಂದರೆ ತೆಳುವಾದ ಅಧ್ಯಯನ ಮತ್ತು ಇತರ ಶಿಸ್ತುಗಳ ಅಧ್ಯಯನ ಎಂದರೆ ಆಳವಾದ ಅಧ್ಯಯನ ಎಂಬ ತಪ್ಪು ಭಾವನೆ ಇದೆ.(ಒಂದು ಸೆಮಿಸ್ಟರ್‌ನಲ್ಲಿ 100 ಅಂಕಗಳ ಭಾಷೆಗೆ ವಾರಕ್ಕೆ ನಾಲ್ಕು ಬೋಧನಾವಧಿಯಿದ್ದರೆ 100 ಅಂಕಗಳ ವಿಷಯಕ್ಕೆ ಆರು ಬೋಧನಾವಧಿ ಇರುತ್ತದೆ.)

ಒಂದು ವಿದ್ಯಾರ್ಥಿ ಏನನ್ನೇ ಕಲಿಯುವಾಗ ಅನೇಕ ವಿಷಯಗಳಿಗೆ ಅನುಗುಣವಾಗಿ (ಆಸಕ್ತಿ, ಕಲಿಯುವ ಉದ್ದೇಶ, ಕಲಿಕೆಯ ಡಿಮಾಂಡ್, ಅಭಿಪ್ರೇರಣೆ, ಹಿಂದಿನ ಗ್ರಹಿಕೆ ಇತ್ಯಾದಿ) ಎರಡು ರೀತಿಯಲ್ಲಿ ಕಲಿಯುತ್ತಾನೆ. ಒಂದು ಆಳವಾದ ಕಲಿಕೆ (deep approach) ಮತ್ತೊಂದು ತೆಳುಕಲಿಕೆ (Superficial approach). ಆದರೆ ಕಲಿಸುವ ಶಿಕ್ಷಕನಿಗೆ ವಿದ್ಯಾರ್ಥಿ ಕಲಿಯುವುದನ್ನು ಆಳವಾಗಿ ಕಲಿಯಬೇಕು ಎಂದೇ ಉದ್ದೇಶವಿರುತ್ತದೆ. ಆಳವಾಗಿ ಕಲಿಯುವ ವಿದ್ಯಾರ್ಥಿ ಕ್ರಿಯಾಶೀಲವಾಗಿ ಕಲಿಯುತ್ತಿರುತ್ತಾನೆ. ಹೀಗೆ ಆಳವಾಗಿ ಕಲಿತುದನ್ನು ತನ್ನ ಭಾಷೆಯಲ್ಲಿ ಅಭಿವ್ಯಕ್ತಿಸುವ ಮತ್ತು ತನ್ನ ಆಲೋಚನೆಗಳನ್ನು ಅಭಿವ್ಯಕ್ತಿಸುವ ಶಕ್ತಿ ಭಾಷೆಯಿಂದ ಬೆಳೆಯಬೇಕು. ಅಂದರೆ, ಕಲಿಯುವ ಮತ್ತು ಕಲಿತುದನ್ನು ವ್ಯಕ್ತಪಡಿಸುವ ಶಕ್ತಿಯನ್ನು ಭಾಷಾಬೋಧನೆ ಬೆಳೆಸಬೇಕು. ಇಂದು ಸಂವಹನವನ್ನು ಅತಿ ಪ್ರಮುಖವಾದ, ಮೂಲಭೂತವಾದ ಅಡಿಪಾಯ ಪ್ರಾಯವಾದ ಕೌಶಲ ಎಂದು ಪರಿಗಣಿಸಿ ವಿಜೃಂಭಿಸಲಾಗುತ್ತಿದೆ. ಅದೇ ಸಮಯದಲ್ಲಿ ನಮ್ಮ ಸ್ನಾತಕರು ಈ ವಿಷಯದಲ್ಲಿ ಅತಿ ಕಡಿಮೆ ಸಾಧಿಸಿದ್ದಾರೆ ಎಂಬ ಅಂಶಗಳೂ ಬೆಳಕಿಗೆ ಬರುತ್ತಿದೆ. ಹೀಗೆ ಆಗಲು ಕಾರಣವೇನು ಎಂದರೆ ಭಾಷಾಬೋಧನೆ ಈ ಗುರಿಯ ಹಿನ್ನೆಲೆಯಲ್ಲಿ ಸಾಗುತ್ತಿಲ್ಲ.

ಭಾಷೆಯನ್ನು ಏಕೆ ಕಲಿಸುತ್ತಿದ್ದೇವೆ ಎಂಬ ಅರಿವು ಅಧ್ಯಾಪಕರಿಗೂ ಇಲ್ಲ, ಏಕೆ ಕಲಿಯುತ್ತಿದ್ದೇವೆ ಎಂಬ ಅರಿವು ವಿದ್ಯಾರ್ಥಿಗಳಿಗೂ ಇಲ್ಲ. ಒಬ್ಬ ಸ್ನಾತಕ ಕನ್ನಡದ ಕಲಿಕೆಯ ಮೂಲಕ ಏನನ್ನು ಮಾಡಲು ಸಮರ್ಥನಾಗಬೇಕು ಎಂಬ ಫೋಕಸ್ ಇಲ್ಲವಾಗಿದೆ. ನಮ್ಮ ಕನ್ನಡ ಭಾಷಾಬೋಧನೆ ಸಾಮರ್ಥ್ಯವನ್ನು ಗುರಿಯಾಗಿಟ್ಟುಕೊಳ್ಳಬೇಕು. ಜ್ಞಾನದ ಮೂಲಕ ಸಾಮರ್ಥ್ಯಗಳು ಕೈಗೆ ಸಿಲುಕಬೇಕು. ಮಾನವಿಕ ಪದವಿ ಕಲಿಯುವ ವಿದ್ಯಾರ್ಥಿ ಕನ್ನಡಕ್ಕೆ ಸಂಬಂಧಿಸಿದಂತೆ ಇಂತಿಷ್ಟು ಸಾಮರ್ಥ್ಯಗಳನ್ನು ಪಡೆದುಕೊಂಡಿರಬೇಕು ಎಂಬ ಗುರಿಯನ್ನು ಗುರುತಿಸಿಕೊಂಡು ಅದಕ್ಕೆ ಅನುಗುಣವಾಗಿ ಪಠ್ಯವಸ್ತುವನ್ನು ಸಿದ್ಧಪಡಿಸಿಕೊಳ್ಳಬೇಕು. ಈ ಪಠ್ಯವಸ್ತುವಿನಲ್ಲಿ ಏನನ್ನು ಬೋಧಿಸಬೇಕು ಎಂಬುದರ ಜೊತೆಗೆ ಈ ಕಲಿಕೆ ಬೋಧನೆಯ ಒಟ್ಟು ಪ್ರಕ್ರಿಯೆ ಯಾವೆಲ್ಲ ಕಾರ್ಯ(ಟಾಸ್ಕ್) ಗಳನ್ನು ಒಳಗೊಂಡಿರಬೇಕು ಎಂಬುದು ನಮೂದಾಗಬೇಕು. ಕಾವ್ಯ, ಪ್ರಬಂಧ, ಕಾದಂಬರಿ ಹೀಗೆ ಪ್ರಕಾರವಾಗಿ ಕಲಿಸುವಾಗ ಅದನ್ನು ಏಕೆ ಕಲಿಸಬೇಕು? ಹೇಗೆ ಕಲಿಸಬೇಕು? ಎಂಬ ಬಗ್ಗೆ ವೈಜ್ಞಾನಿಕವಾದ ಸಮರ್ಥನೆ ಇರಬೇಕು.

ಈ ಪಠ್ಯಗಳು ವಿದ್ಯಾರ್ಥಿಯ ಅಭಿವ್ಯಕ್ತಿ ಮತ್ತು ಚಿಂತನ ಸಾಮರ್ಥ್ಯವನ್ನು ಹೇಗೆ ಬೆಳೆಸಬಲ್ಲುದು ಎಂಬುದರ ಸ್ಪಷ್ಟ ಕಲ್ಪನೆ ಇರಬೇಕು. ಇಡೀ ವರ್ಷ ಅಧ್ಯಾಪಕನೇ ಮಾತನಾಡಿ ವಿದ್ಯಾರ್ಥಿಯಲ್ಲಿ ಮೌಖಿಕ ಅಭಿವ್ಯಕ್ತಿ ಹೆಚ್ಚಾಗಬೇಕು ಎಂದರೆ ಸಾಧ್ಯವಿಲ್ಲ. ಮೌಖಿಕ ಅಭಿವ್ಯಕ್ತಿಗೆ ಪೂರಕವಾದ ಕಾರ್ಯಗಳನ್ನು (ಕಲಿಕಾ ಅನುಭವ) ರೂಪಿಸಿ ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಮಾಡಲೇಬೇಕು ಎಂದು ನಿಗದಿಪಡಿಸಬೇಕು. ಅದನ್ನು ಅತ್ಯಂತ ಗಂಭೀರವಾಗಿ ಮೌಲ್ಯಮಾಪನ ಮಾಡಿ ಅಂಕಗಳನ್ನು ಕೊಡಬೇಕು. ಮಾತನಾಡುವುದರಿಂದ ಮಾತ್ರ ಮಾತು ಬೆಳೆಯುವುದು. ಕೇಳುವುದರಿಂದ ಮಾತನ್ನು ಬೆಳೆಸುತ್ತೇನೆ ಎಂಬುದು ಹಾಸ್ಯಾಸ್ಪದ. ಬರೆವಣಿಗೆಯೂ ಹೀಗೆಯೇ. ಬರವಣಿಗೆಯ ಅಭ್ಯಾಸದಿಂದ ಮಾತ್ರ ಸಾಧ್ಯ.

ಈಗಿನ ಸ್ನಾತಕರ ಬರೆವಣಿಗೆಯ ಕೌಶಲ ಅತಿ ಕಳಪೆ ಯಾಕೆ, ಎಂದರೆ ಕಾಲೇಜಿನವರು ಹೈಸ್ಕೂಲಿನಲ್ಲಿ ಕಲಿಸಲಿಲ್ಲ ಎನ್ನುವುದು, ಹೈಸ್ಕೂಲಿನವರು ಪ್ರೈಮರಿಯಲ್ಲಿ ಕಲಿಸಲಿಲ್ಲ ಎನ್ನುವುದು ಸರ್ವೇ ಸಾಮಾನ್ಯ. ಎಲ್ಲಿಯೇ ಆಗಲಿ ಆಯಾ ಸಾಮರ್ಥ್ಯಗಳಿಗೆ ಅನುಗುಣವಾದ ಕಲಿಕಾ ಅನುಭವಗಳನ್ನು ಕೊಡಲಿಲ್ಲ ಎಂಬುದೇ ಸತ್ಯದ ಮಾತು. ಭಾಷಾಬೋಧನೆ ಗ್ರಹಿಕೆಗೆ ಪೂರಕವಾಗಿ ಆಲೋಚನೆಯನ್ನು ಬೆಳೆಸಬೇಕು ಎಂಬ ಅಂಶ ಎಲ್ಲ ಅಧ್ಯಾಪಕರ ಮನಸ್ಸಿನಲ್ಲಿರಬೇಕು. ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಅಧ್ಯಾಪಕರು ನೇರವಾಗಿ ಅಧ್ಯಾಪಕರ ಹಂತಕ್ಕೆ ಪ್ರವೇಶಿಸುತ್ತಾರೆ. ಅವರಿಗೆ ಅಧ್ಯಾಪನಕ್ಕೆ ಬೇಕಾದ ಯಾವುದೇ ಪೂರ್ವಸಿದ್ಧತೆಗಳ ಅಗತ್ಯವಿಲ್ಲ ಎಂಬ ತಿಳಿವಳಿಕೆಯಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಅಧ್ಯಾಪಕರಿಗೆ ತರಗತಿಗೆ ಹೋಗುವ ಮುನ್ನ ಶಿಕ್ಷಕ ತರಬೇತಿ ಇರಬೇಕೆಂಬ ನಿಯಮವಿದೆ. ಬಿ.ಎಡ್. ಕಲಿಸುವವರಂತೂ ತಮ್ಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಎಡ್.ಪದವಿ ಎರಡನ್ನೂ ಪಡೆದಿರಬೇಕು.

ಯಾವುದೇ ಪೂರ್ವಸಿದ್ಧತೆ ಅಥವಾ ತರಬೇತಿ ಇಲ್ಲದ ಅಧ್ಯಾಪಕರು ಇರುವ ಕಾರಣದಿಂದ ಬೋಧನೆಯು ಸಂಪೂರ್ಣ ವ್ಯಕ್ತಿನಿಷ್ಠವಾಗಿಬಿಟ್ಟಿದೆ. ಒಬ್ಬ ಹಿರಿಯರು ಕಾಲೇಜು ೩೫ವರ್ಷಗಳ ಅನುಭವ ಪಡೆದ ಕಾಲೇಜು ಅಧ್ಯಾಪಕರ ಬಗೆಗೆ ಹೇಳಿದ ಮಾತಿದು. ಅವರಿಗೆ ಐದು ವರ್ಷದ ಅನುಭವ. ಈ ಅನುಭವವೇ ಉಳಿದ ಮೂವತ್ತು ವರ್ಷ ಪುನರಾವರ್ತನೆಯಾಗಿದೆ! ಈಚೆಗೆ ಪಠ್ಯಕ್ರಮ ಆವೃತ ಭಾಷೆ ಎಂಬ (Language Across the Curriculum) ಪರಿಕಲ್ಪನೆ ಹೆಚ್ಚು ಪ್ರಚಲಿತವಾಗುತ್ತಿದೆ. ಭಾಷಾ ಬೆಳವಣಿಗೆ ಕೇವಲ ಕನ್ನಡ ಅಧ್ಯಾಪಕರ ಜವಾಬ್ದಾರಿ ಎಂಬ ತಿಳಿವಳಿಕೆ ಸಾಮಾನ್ಯವಾಗಿ ಇದೆ. ಅದು ಸಾಧುವಲ್ಲ. ವಿದ್ಯಾರ್ಥಿಗಳ ಭಾಷಾಬೆಳವಣಿಗೆ ಎಲ್ಲ ಅಧ್ಯಾಪಕರ ಜವಾಬ್ದಾರಿ. ಉನ್ನತ ಶಿಕ್ಷಣದ ತರಗತಿಗಳಲ್ಲಿ ಕನ್ನಡದ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಮಾತನಾಡುವುದು ಪಾಪಕರ ಎಂಬ ಅಧ್ಯಾಪಕರಿಲ್ಲದೇ ಇಲ್ಲ.

ಕನ್ನಡದ ಬಗ್ಗೆ ಕೀಳರಿಮೆಯ ಪರಿಸ್ಥಿತಿಯನ್ನು ನಿರ್ಮಾಣಮಾಡುವ ಕಾಲೇಜು ಪರಿಸರವೂ ಉಂಟು. ತರಗತಿಯ ಶೇ 85 ವಿದ್ಯಾರ್ಥಿಗಳು ಕನ್ನಡದಲ್ಲಿ ಉತ್ತರಿಸುತ್ತಾರೆ ಎಂದು ತಿಳಿದೂ ತಮಗೆ ತಿಳಿದಿರುವ ಇಂಗ್ಲಿಷ್ ನಲ್ಲೇ ಪಾಠಮಾಡಲು ಪಣತೊಟ್ಟ ಅಧ್ಯಾಪಕರಿಗೇನೂ ಕಡಿಮೆ ಇಲ್ಲ. ಹಲವೊಮ್ಮೆ ಮೇಷ್ಟರ ಪಾಠದ ಭಾಷೆಗೂ ವಿದ್ಯಾರ್ಥಿಯ ಅಭಿವ್ಯಕ್ತಿಯ ಭಾಷೆಗೂ ಕಂದಕವಿರುತ್ತದೆ. ಹೀಗಾದಾಗ ತರಗತಿಗಳು ಒಂದು ಸರ್ಕಸ್ ಆಗಿಬಿಡುವ ಅಪಾಯವಿದೆ. ಈ ಹೊಸ ಪರಿಕಲ್ಪನೆಯ ಅಡಿಯಲ್ಲಿ ಎಲ್ಲ ಅಧ್ಯಾಪಕರೂ ತಮ್ಮ ತಮ್ಮ ತರಗತಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಭಾಷೆಯನ್ನು ಬೆಳೆಸಲು ಪೂರಕವಾದ ಚಟುವಟಿಕೆಗಳ ಕಡೆಗೆ ಗಮನ ಹರಿಸಲೇಬೇಕು. 

***
ಜನರೆಲ್ಲರಿಗೂ ಗೊತ್ತಾಗದ ಭಾಷೆಯಲ್ಲಿ ಶಾಸನ ರಚನೆ, ಆಡಳಿತಕಾರ್ಯ, ನ್ಯಾಯನಿರ್ಣಯ, ಶಿಕ್ಷಣ ವ್ಯವಹಾರ ನಡೆದು ಈ ಜನದ ಬದುಕು ನೂರಾರು ವರ್ಷ ಬಂಜೆಯಾಯಿತು. ನಾಡಿನ ಹಿರಿಯ ನಾಯಕರ ಮಾತು ಜನಸಾಮಾನ್ಯಕ್ಕೆ ನೇರ ಅರ್ಥವಾಗದು. ಏನು ಪರಿಸ್ಥಿತಿ ಇದು? ಅನ್ಯ ಭಾಷೆಯನ್ನು ಕಲಿತಲ್ಲದೆ ಯಾವ ದೊಡ್ಡದೂ ಸಾಮಾನ್ಯರಿಗೆ ಇಲ್ಲಿ ತಿಳಿಯುವ ಹಾಗಿಲ್ಲ. ಅದಕ್ಕೆ ಅವರು ತಮ್ಮದಾಗಿ ಯಾವ ಆಲೋಚನೆಯ ಕಾಣಿಕೆಯನ್ನೂ ಸಲ್ಲಿಸಲಾಗುತ್ತಿಲ್ಲ.

ನಡೆವುದನ್ನು ನೇರವಾಗಿ, ಸುಲಭವಾಗಿ ಅರಿವುದು ಅವರಿಗೆ ದೊರಕದ ಭಾಗ್ಯ. ಅಂತೇ, ಕನ್ನಡದಲ್ಲಿಯೋ ಬೇರೆ ಪ್ರದೇಶ ಭಾಷೆಯಲ್ಲಿಯೋ ಬರೆದರೆ ಓದಿದರೆ ವಿಷಯ ಯಾವುದಾಗುತ್ತದೆ? ನಾಡಿನ ಕಾರ್ಯಕಲಾಪಗಳು ತಾನೆ? ಭರತಖಂಡದ ಮತ್ತು ಅಂತರ್‌ರಾಷ್ಟ್ರೀಯ ವಿಚಾರಗಳು ತಾನೇ? ಲೋಕದಲ್ಲಿ ಪ್ರಚಲಿತವಾದುದು, ಶಾಸ್ತ್ರ, ಕಲೆ, ಶಿಲ್ಪ ಮುಂತಾದ ವಿಷಯಗಳು ತಾನೆ? ಈ ಯಾವುದೂ ಆ ಪ್ರಾಂತದಷ್ಟಕ್ಕೇ ಸಂಕುಚಿತವಾಗಿ ಮುಗಿಯದು? ಜನದ ಅಭಿಮಾನ ಒಟ್ಟು ನಾಡಿನ ಪರವಾಗೇ ಹಬ್ಬುವುದು. ಈ ಅಂಶದಲ್ಲಿ ಯಾರೂ ಸಂಶಯಪಡಬೇಕಿಲ್ಲ.
–ವಿ. ಸೀತಾರಾಮಯ್ಯ (36ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಿಂದ. 1953, ಕುಮಟ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT