ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡ್‌ ಪಾಯಿಂಟ್‌ನಲ್ಲಿ 3ನೇ ಜಲಾಶಯ

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ– ಶಾಸಕ ಪ್ರಮೋದ್ ಮಧ್ವರಾಜ್
Last Updated 16 ಏಪ್ರಿಲ್ 2016, 6:26 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಎಂಡ್‌ ಪಾಯಿಂಟ್‌ನಲ್ಲಿ ಮೂರನೇ ಜಲಾಶಯ ನಿರ್ಮಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಹಿರಿಯಡಕ ಸಮೀಪದ ಬಜೆ ಜಲಾಶಯಕ್ಕೆ ಶುಕ್ರವಾರ ಭೇಟಿ ನೀಡಿ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮಳೆಗಾಲ ಸೇರಿ ಒಟ್ಟು ಎಂಟು ತಿಂಗಳ ಕಾಲ ನೀರಿನ ಸಮಸ್ಯೆ ಇರುವುದಿಲ್ಲ. ಉಳಿದ ನಾಲ್ಕು ತಿಂಗಳಿಗೆ ಬೇಕಾಗುವ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬೇಕಾಗುತ್ತದೆ. ಈಗಿರುವ ಜಲಾಶಯದಲ್ಲಿ ಮೂರು ತಿಂಗಳಿಗೆ ಆಗುವಷ್ಟು ನೀರನ್ನು ಮಾತ್ರ ಸಂಗ್ರಹಿಸಬಹುದು. ಆದ್ದರಿಂದ ಮಳೆಯಾಗುವುದು ವಿಳಂಬವಾದರೆ ನೀರಿನ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಮಣಿಪಾಲದ ಎಂಡ್‌ ಪಾಯಿಂಟ್‌ ಸಮೀಪ ಇನ್ನೊಂದು ಜಲಾಶಯ ನಿರ್ಮಿಸುವ ಯೋಚನೆ ಇದೆ.

ಅಮೃತ್‌ ಯೋಜನೆಯಲ್ಲಿ ಉಡುಪಿ ನಗರಸಭೆಗೆ ಕೇಂದ್ರದಿಂದ ₹100 ಹಾಗೂ ರಾಜ್ಯದಿಂದ ₹100 ಕೋಟಿ ಬಿಡುಗಡೆಯಾಗಲಿದೆ. ಈ ಮೊತ್ತದಲ್ಲಿ ಜಲಾಶಯ ನಿರ್ಮಾಣ ಮಾಡಲಾಗುವುದು. ಪ್ರತಿ ವರ್ಷ ಎರಡರಿಂದ ಮೂರು ಸಾವಿರ ಹೊಸ ನೀರಿನ ಸಂಪರ್ಕ ನೀಡಲಾಗುತ್ತಿದೆ. ನೀರಿನ ಕೊರತೆಯಾಗಲು ಇದು ಸಹ ಪ್ರಮುಖ ಕಾರಣ. ತಗ್ಗಿನ ಪ್ರದೇಶಗಳಿಗೆ ಸುಲಭವಾಗಿ ನೀರು ಪೂರೈಕೆಯಾಗುತ್ತದೆ. ಆದರೆ ಎತ್ತರದ ಪ್ರದೇಶದಲ್ಲಿರುವ ಜನರಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗುವುದಿಲ್ಲ ಎಂದರು.

ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಸರಿಪಡಿಸಲು ಕುಡ್ಸೆಂಪ್‌ ಯೋಜನೆಯಲ್ಲಿ ₹100 ಕೋಟಿ ವೆಚ್ಚ ಮಾಡಲಾಗುವುದು. ಇದರಲ್ಲಿ ಒಂದು ಹೊಸ ಪಂಪ್‌ ಅನ್ನು ಸಹ ಖರೀದಿಸಲಾಗುವುದು. ಈಗಿರುವ ಪಂಪ್‌ ಅನ್ನು ದಿನದ 24 ಗಂಟೆ ಚಾಲನೆಯಲ್ಲಿಡಬೇಕಾಗಿದೆ. ಆದರೆ ಹೊಸ ಪಂಪ್‌ 12 ಗಂಟೆ ಮಾತ್ರ ಕಾರ್ಯನಿರ್ವಹಿಸಲಿದ್ದು 24 ಗಂಟೆಗೆ ಬೇಕಾಗುವಷ್ಟು ನೀರನ್ನು ಪಂಪ್‌ ಮಾಡಲಿದೆ ಎಂದರು.

ಸದ್ಯ ಜಲಾಶಯದಲ್ಲಿ 3.86 ಮೀಟರ್‌ ನೀರಿನ ಸಂಗ್ರಹ ಇದೆ. ಹಿಂದಿನ ವರ್ಷ ಇದೇ ವೇಳೆಗೆ 4.2 ಮೀಟರ್‌ ನೀರಿನ ಸಂಗ್ರಹ ಇತ್ತು. ಕಳೆದ ವರ್ಷ ಈ ವೇಳೆಗೆ ಕಾರ್ಕಳದ ಪ್ರದೇಶದಲ್ಲಿ ಮಳೆಯಾಗಿದ್ದರಿಂದ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಪ್ರತಿ ದಿನ 7ರಿಂದ 9 ಸೆ.ಮೀ ನೀರು ಖಾಲಿಯಾಗುತ್ತಿದೆ. ಮಳೆಯಾದರೆ ಯಾವುದೇ ಸಮಸ್ಯೆಯಾಗದು ಎಂದು ಹೇಳಿದರು.

ಕುಡ್ಸೆಂಪ್‌ ಯೋಜನೆಯಲ್ಲಿ ಒಟ್ಟು ₹ 300 ಕೋಟಿ ಬಿಡುಗಡೆಯಾಗಿದೆ. ಕುಡ್ಸೆಂಪ್‌ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್‌ ಅವರು ಇದೇ 18ರಂದು ಉಡುಪಿಗೆ ಭೇಟಿ ನೀಡುವರು. ಅಂದು ಸಭೆ ನಡೆಸಿ ಯೋಜನೆ ಜಾರಿಯ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುವುದು. ಮಣಿಪಾಲ, ಶಿವಳ್ಳಿ, ಕೊಡವೂರು ಹಾಗೂ ಪುತ್ತೂರಿನ ಒಳಚರಂಡಿ ವ್ಯವಸ್ಥೆ ಉತ್ತಮಪಡಿಸಲಾಗುವುದು. ಇದಕ್ಕಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿ ಸಹ ತಯಾರಾಗಿದೆ.

ಖಾಸಗಿ ಜಮೀನು ಬೇಕಾಗಿರುವುದರಿಂದ ಸಂಧಾನದ ಮೂಲಕ ಪಡೆಯಲು ನಿರ್ಧರಿಸಲಾಗಿದೆ. ಇಲ್ಲವಾದರೆ ಭೂ ಸ್ವಾಧೀನ ಪ್ರಕ್ರಿಯೆ ಮೂಲಕವೇ ಪಡೆಯಬೇಕಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ಕುಮಾರಿ, ಸದಸ್ಯರಾದ ಜನಾರ್ದನ ಭಂಡಾರ್ಕರ್‌, ರಮೇಶ್‌ ಕಾಂಚನ್‌, ಪಿ. ಯುವರಾಜ, ಪೌರಾಯುಕ್ತ ಡಿ. ಮಂಜುನಾಥಯ್ಯ, ಎಂಜಿನಿಯರ್‌್ ಗಣೇಶ್‌ ಉಪಸ್ಥಿತರಿದ್ದರು.

* * *
ಮಣಿಪಾಲ ವಿಶ್ವವಿದ್ಯಾಲಯಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕೊರತೆ ಎದುರಾದರೆ ಮಾತ್ರ ನೀರಿನ ಪ್ರಮಾಣದಲ್ಲಿ ಕಡಿತ ಮಾಡಲಾಗುವುದು.
-ಪ್ರಮೋದ್‌ ಮಧ್ವರಾಜ್‌,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT