ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ದಂಧೆ

ಬರಿದಾಗುತ್ತಿದೆ ಕೃಷ್ಣೆ- ಮಲಪ್ರಭಾ-ಘಟಪ್ರಭಾ ಒಡಲು
Last Updated 5 ಜೂನ್ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ನದಿಗಳು ಮಳೆಗಾಲದಲ್ಲಿ ಹೊತ್ತು ತರುವ ಮರಳು, ಬೇಸಿಗೆಯಲ್ಲಿ ನೂರಾರು ಕೋಟಿ ಆದಾಯ ತರುತ್ತಿದೆ. ಆದರೆ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ನದಿಗಳ ಒಡಲು ಬರಿದಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸ್ಥಳೀಯ ರಾಜಕಾರಣಿಗಳು ಮತ್ತು ಪೊಲೀಸರು ಬೆಂಗಾವಲಾಗಿ ನಿಂತಿರುವಂತಿದ್ದು, ಟಾಸ್ಕ್ ಪೋರ್ಸ್ (ಮರಳು ಉಸ್ತುವಾರಿ ಸಮಿತಿ) ಅಸಹಾಯಕವಾಗಿದೆ.

`ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪಕ್ಷಭೇದವಿಲ್ಲದೆ ಎಲ್ಲ ರಾಜಕೀಯ ಪಕ್ಷಗಳ ಹಿಂಬಾಲಕರು ತೊಡಗಿದ್ದಾರೆ. ತಡೆಯಲು ಹೋದರೆ ಜೀವ ಬೆದರಿಕೆ ಒಡ್ಡುತ್ತಾರೆ' ಎಂದು ಆರೋಪಿಸುವ ಅಧಿಕಾರಿಗಳು, ಈ ಬಗ್ಗೆ ದೂರು ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರೆ `ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾದ ಪೊಲೀಸರೇ ಅಕ್ರಮದೊಂದಿಗೆ ಕೈಜೋಡಿಸಿದ್ದಾರೆ' ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

`ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಿಂದ ವರ್ಷಕ್ಕೆ 100 ಕೋಟಿ ರೂಪಾಯಿ ರಾಜಧನ ಸಂಗ್ರಹಿಸುವ ಸಾಧ್ಯತೆ ಇದ್ದರೂ ಅಕ್ರಮ ಮರಳುಗಾರಿಕೆಯಿಂದ ಕೇವಲ 10 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುವುದನ್ನು ನಿರ್ಬಂಧಿಸಿಲ್ಲ. ಈ ಕಾರ್ಯಕ್ಕೆ ಟಾಸ್ಕ್ ಪೋರ್ಸ್ ಮುಂದಾದರೆ ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಬಾರದು' ಎಂಬ ಮೌಖಿಕ ಒತ್ತಡ ಜನಪ್ರತಿನಿಧಿಗಳಿಂದ ಬರುತ್ತದೆ' ಎನ್ನುತ್ತಾರೆ.

ಸ್ಥಳೀಯರು ಮನೆ, ದೇವಸ್ಥಾನ, ಕೆರೆಕಟ್ಟೆ ನಿರ್ಮಾಣಕ್ಕೆ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸಲು ಅವಕಾಶ ನೀಡಬೇಕು ಎಂಬ ಸಬೂಬು ನೀಡಿ ಮುಕ್ತಗೊಳಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ದಿನವೊಂದಕ್ಕೆ ಸುಮಾರು 1,000 ಟ್ರ್ಯಾಕ್ಟರ್ ಲೋಡ್ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಜಿಲ್ಲೆಯಿಂದ ಹೊರಗಡೆ ಅಕ್ರಮವಾಗಿ ಮರಳು ಸಾಗಾಟವಾಗುವುದನ್ನು ನಿಯಂತ್ರಿಸಲು 40 ಚೆಕ್ ಪೋಸ್ಟ್‌ಗಳಲ್ಲಿ  ಕಳೆದ ಜನವರಿಯಲ್ಲಿ ನಿಯೋಜಿಸಿದ್ದ ಗೃಹರಕ್ಷಕ ದಳದ 175 ಸಿಬ್ಬಂದಿ ಅಕ್ರಮ ತಡೆಯುವ ಬದಲು ತಾವೇ ಮಾಮೂಲು ವಸೂಲಿಗೆ ನಿಂತದ್ದನ್ನು ಕಂಡು ಟಾಸ್ಕ್ ಪೋರ್ಸ್ ಅಧಿಕಾರಿಗಳು ಅವರನ್ನು ಮೇ 31 ರಿಂದ  ಕರ್ತವ್ಯದಿಂದ ತೆಗೆದು ಹಾಕಿದ್ದಾರೆ.

ಎಲ್ಲೆಲ್ಲಿ ಅಕ್ರಮ: ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯಿಂದ ಬಿದರಿ, ಜನವಾಡ, ಕೌಟಗಿವರೆಗೆ ಸುಮಾರು 40 ಕಿ.ಮೀ. ಉದ್ದದ ಕೃಷ್ಣಾ ನದಿ ಹರಿವಿನಲ್ಲಿ ಮರಳನ್ನು ಸಂಪೂರ್ಣ ಗುಡಿಸಿ ತೆಗೆಯಲಾಗಿದೆ. ನದಿಯಿಂದ ಅಕ್ರಮವಾಗಿ ತೆಗೆದ ಮರಳನ್ನು ಹೊಲಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಕಾಗವಾಡದ ಮೂಲಕ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ ಮತ್ತು ಜತ್ತ ಮತ್ತಿತರ ಕಡೆ ಸಾಗಿಸಲಾಗುತ್ತದೆ.

ಮುಧೋಳ ತಾಲ್ಲೂಕಿನ ಅಕ್ಕಿಮರಡಿ, ನಂದಗಾಂವ, ಮಿರ್ಜಿ, ಒಂಟುಗೋಡಿ, ನಾಗರಾಳ, ಮಳಲಿ, ಇಂಗಳಗಿ, ಮಾಚಕನೂರು, ತಿಮ್ಮಾಪುರ, ಕೆ.ಡಿ.ಜಂಬಗಿ, ಢವಳೇಶ್ವರದಿಂದ ನೂರಾರು ಟ್ರಕ್‌ಗಳಲ್ಲಿ ಮರಳನ್ನು ಸಂಗ್ರಹಿಸಿ ಬೆಳಗಾವಿ, ನಿಪ್ಪಾಣಿ ಮೂಲಕ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.

ಬಾಗಲಕೋಟೆ ತಾಲ್ಲೂಕಿನ ಕಲಾದಗಿ, ಚಿಕ್ಕಸಂಶಿ, ಛಬ್ಬಿ, ಶಾರದಾಳ, ಯಡಹಳ್ಳಿ, ಆನದಿನ್ನಿ  ಹಾಗೂ ಬೀಳಗಿ ತಾಲ್ಲೂಕಿನ ಕುವಳ್ಳಿ, ಬಾವಲತ್ತಿ, ಕಾತರಕಿ, ಕೊಪ್ಪ ವ್ಯಾಪ್ತಿಯಲ್ಲಿ ಘಟಪ್ರಭಾ ನದಿಯಿಂದ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ, ಖ್ಯಾಡ, ಜಾಲಿಹಾಳ, ಚೊಳಚಗುಡ್ಡ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ ಮತ್ತು ಹಾಗೂ ಹುನಗುಂದ ತಾಲ್ಲೂಕಿನ ಹೂವನೂರು, ನಂದನೂರು, ಗಂಜಿಹಾಳ, ಚಿಕ್ಕಮಲಗಾವಿ, ಹಿರೇ ಮಳಗಾವಿಯಲ್ಲಿ ಮಲಪ್ರಭಾ ನದಿಯಲ್ಲಿ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಸಂಗ್ರಹಿಸಿದ ಮರಳನ್ನು ರಾಯಚೂರು, ಗುಲ್ಬರ್ಗ, ಕೊಪ್ಪಳ, ವಿಜಾಪುರ, ಹುಬ್ಬಳ್ಳಿ ನಗರಗಳಿಗೆ ಸಾಗಿಸಲಾಗುತ್ತಿದೆ.

ಬಾದಾಮಿ ತಾಲ್ಲೂಕಿನ ಜಾಲಿಹಾಳ ಗ್ರಾಮದ ಸಾಸ್ವೆಹಳ್ಳದಲ್ಲಿ ಅಂದಾಜು 10 ಕೋಟಿ ರೂಪಾಯಿ ಮೌಲ್ಯದ ಎರಡು ಲಕ್ಷ ಕ್ಯೂಬಿಕ್ ಮೀಟರ್ ಮರಳು ಸಂಗ್ರಹವಿದ್ದರೂ ಜಿಲ್ಲಾಡಳಿತ ಈ ಮರಳನ್ನು ಹರಾಜು ಮಾಡಲು ರಾಜಕೀಯ ಧುರೀಣರು ಬಿಡುತ್ತಿಲ್ಲ. ಸ್ಥಳೀಯರೇ ಅಕ್ರಮವಾಗಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.

32 ಲಕ್ಷ ದಂಡ ವಸೂಲಿ: `ಹೊಸ ಮರಳು ನೀತಿ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಇದುವರೆಗೆ 2,93,726 ಕ್ಯೂಬಿಕ್ ಮೀಟರ್ ಮರಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗಿದ್ದು, 11.74 ಕೋಟಿ ರೂಪಾಯಿ ರಾಜಧನ ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿ 32 ಲಕ್ಷ ದಂಡ ವಸೂಲಿ ಮಾಡಲಾಗಿದೆ' ಎಂದು ಲೋಕೋಪಯೋಗಿ ಇಲಾಖೆ  ಎಂಜಿನಿಯರ್ ಮನೋಹರ ವಡ್ಡರ `ಪ್ರಜಾವಾಣಿ'ಗೆ ತಿಳಿಸಿದರು.

`ಕಾರ್ಯಪಡೆಯಲ್ಲಿ ಸಮನ್ವಯದ ಕೊರತೆ'
`ಮರಳು ಗಣಿಗಾರಿಕೆ ಉಸ್ತುವಾರಿಯನ್ನು ಮೊದಲಿನಿಂದಲೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಡಿಕೊಳ್ಳುತ್ತಿತ್ತು. ಹೊಸ ಮರಳು ನೀತಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸೇರಿಸಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ (ಟಾಸ್ಕ್ ಪೋರ್ಸ್) ರಚಿಸಲಾಗಿದೆ. ಪ್ರತಿ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ದಾಳಿ ಸಂದರ್ಭದಲ್ಲಿ ಈ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧ್ಯವಾಗುತ್ತಿಲ್ಲ' ಎಂದು ಅಧಿಕಾರಿಗಳು ವಿಷಾದಿಸುತ್ತಾರೆ.

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಒಂದು ಇಲಾಖೆ ಮುಂದಾದರೆ ಮತ್ತೆ ಕೆಲವು ಇಲಾಖೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಾರೆ. ಇನ್ನು ಕೆಲವರು ದಾಳಿ ನಡೆಸುವ ಮುನ್ನವೇ ಅಕ್ರಮ ದಂಧೆಕೋರರಿಗೆ ಮಾಹಿತಿ ರವಾನಿಸುತ್ತಾರೆ. ಇದರಿಂದ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂಬುದು ಅವರ ಆಪಾದನೆ. `ಮರಳು ಗಣಿಗಾರಿಕೆ ನಿರ್ವಹಣೆಯನ್ನು ಯಾವುದಾದರೊಂದು ಇಲಾಖೆಗೆ ಸಂಪೂರ್ಣವಾಗಿ ವಹಿಸುವುದು ಉತ್ತಮ. ಆಗ ಮಾತ್ರ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬಹುದು' ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT