ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಂಟಿ ಜಮೀನು ಹರಾಜಿಗೆ ತಡೆ

Last Updated 3 ಸೆಪ್ಟೆಂಬರ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂಸ್ತಾನ್‌ ಮೆಷಿನ್‌ ಟೂಲ್ಸ್‌ (ಎಚ್ಎಂಟಿ) ಲಿಮಿಟೆಡ್‌ ಕಂಪೆನಿಗೆ ಸೇರಿದ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿರುವ ಯಶವಂತಪುರ ವ್ಯಾಪ್ತಿಯ ಮಾಯಕಲ್ಲು ಚನ್ನೇನ ಹಳ್ಳಿಯಲ್ಲಿರುವ 5 ಎಕರೆ 9 ಗುಂಟೆ ಜಮೀನನ್ನು ಹರಾಜು ಹಾಕುವ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಎಚ್‌ಎಂಟಿ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು. ‘ನಿವೃತ್ತಿ ವೇತನದಲ್ಲಿ ನಮಗೆ ನ್ಯಾಯಯುತವಾಗಿ ಬರಬೇಕಾದ ಗ್ರಾಚ್ಯುಟಿ ಮೇಲಿನ ಬಡ್ಡಿಯನ್ನು ಕಂಪೆನಿ ನೀಡಿಲ್ಲ. ಆದ್ದರಿಂದ ಈ ಹಣವನ್ನು ಕೊಡಿಸಿಕೊಡಿ’ ಎಂದು ನೌಕರರು  ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಇದರನ್ವಯ  ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಅವರಿಗೆ 2015ರ ಜೂನ್‌ 20ರಂದು ಪತ್ರ ಬರೆದಿದ್ದರು. ಈ ಕಾರಣಕ್ಕಾಗಿ ತಹಶೀಲ್ದಾರ್‌ ಅವರು, 2015ರ ಆಗಸ್ಟ್‌ 3ರಂದು ಎಚ್‌ಎಂಟಿಗೆ ಪತ್ರ ಬರೆದು, ಗ್ರಾಚ್ಯುಟಿ ಮೇಲಿನ ಬಡ್ಡಿದರ ₹ 38,18,868  ನಿವೃತ್ತ ನೌಕರರಿಗೆ ನೀಡಬೇಕು.  ಇಲ್ಲದಿದ್ದರೆ ಸೆಪ್ಟೆಂಬರ್‌ 5ರಂದು ಬೆಳಗ್ಗೆ 11 ಗಂಟೆಗೆ ಕಂಪೆನಿ ಒಡೆತನದಲ್ಲಿರುವ ಸ್ಥಿರಾಸ್ತಿಯನ್ನು ಹರಾಜು ಹಾಕುವ ಮೂಲಕ ಪಡೆದುಕೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ವಿವರಿಸಿದ್ದರು.

ಈ ನೋಟಿಸ್‌ ಪ್ರಶ್ನಿಸಿ ಎಚ್‌ಎಂಟಿ   ಹೈಕೋರ್ಟ್‌ ಮೆಟ್ಟಿಲೇರಿತ್ತು. ಕಂಪೆನಿ ಪರ ಹಾಜರಾಗಿದ್ದ ವಕೀಲ ಟಿ.ರಾಜಾರಾಂ ಅವರು, ‘ಕಂಪೆನಿ ಈಗಾಗಲೇ ರೋಗಗ್ರಸ್ತವಾಗಿದೆ. ಈ ವಿಷಯ ಕೈಗಾರಿಕಾ ಹಣಕಾಸು ಪುನರ್‌ರಚನಾ ಮಂಡಳಿಯ (ಬಿಐಎಫ್‌ಆರ್‌) ಮುಂದಿದೆ. ಆದ್ದರಿಂದ ಇಂತಹ ಸಂಗತಿಗಳೆಲ್ಲಾ ಬಿಐಎಫ್‌ಆರ್‌ ಅವಗಾಹನೆಗೆ ಒಳಪಟ್ಟ ವಿಚಾರಗಳಾಗಿರುತ್ತವೆ. ಆದ್ದರಿಂದ ತಹಶೀಲ್ದಾರ್‌ ಅವರು ಹೊರಡಿಸಿರುವ ನೋಟಿಸ್‌ ಕಾನೂನು ಬಾಹಿರವಾಗಿದ್ದು ಇದನ್ನು ವಜಾಗೊಳಿಸಬೇಕು’ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಸದ್ಯ ಗ್ರಾಚ್ಯುಟಿ ಮೇಲಿನ ಬಡ್ಡಿ ಅರ್ಧದಷ್ಟು ಹಣವನ್ನು ಠೇವಣಿ ರೂಪದಲ್ಲಿ ಇರಿಸಿ’ ಎಂದು ಸೂಚಿಸಿ ಹರಾಜು ಪ್ರಕ್ರಿಯೆಗೆ ತಡೆ ನೀಡಿ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT