ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಗೆ ಬೀಳದ ಮಾತು!

ಸಂವಹನ ಶೂನ್ಯ ಸ್ಥಿತಿ ಈ ಕಾಲದ ಲಕ್ಷಣವೇ?
Last Updated 14 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮಹಾಭಾರತದಲ್ಲಿ ವ್ಯಾಸರ ಪ್ರಸಿದ್ಧವಾದ ಮಾತೊಂದಿದೆ. ಅವರು ತಮ್ಮ ಎರಡೂ ತೋಳುಗಳನ್ನೆತ್ತಿ, ‘‘ನಾನು ಧರ್ಮದ ವಿಚಾರವನ್ನು ಹೇಳುತ್ತಿದ್ದೇನೆ; ಸತ್ಯದ ವಿಚಾರವನ್ನು ಸಾರುತ್ತಿದ್ದೇನೆ; ಯಾರೂ ಕೇಳಿಸಿಕೊಳ್ಳುತ್ತಲೇ ಇಲ್ಲವಲ್ಲ...’’ ಎಂದು ಅತ್ಯಂತ ವಿಷಾದದಲ್ಲಿ ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ವ್ಯಾಸರ ಮಾತನ್ನು ಎಲ್ಲರೂ ಕೇಳುತ್ತಿದ್ದರು. ಅವರ ಕಾಲದಲ್ಲಿ ಅವರ ವ್ಯಕ್ತಿತ್ವಕ್ಕೆ, ಅವರ ಮಾತಿಗೆ ಬಹಳ ಬೆಲೆ ಇತ್ತು. ಮಹಾಭಾರತದ ಕೆಲವು ಸಂದರ್ಭಗಳಲ್ಲಿ ಅವರು ಸ್ವತಃ  ಪ್ರವೇಶಿಸುತ್ತಾರೆ. ಕೆಲವು ಸಮಸ್ಯೆಗಳನ್ನು ಬಿಕ್ಕಟ್ಟುಗಳನ್ನ ನಿವಾರಿಸಿ, ಮುಂದಾಗಬೇಕಿರುವುದನ್ನು ಸೂಚಿಸಿ ಹೋಗುತ್ತಾರೆ. ಇದನ್ನೊಂದು ಕತೆಗಾರನ ತಂತ್ರವನ್ನಾಗಿ ಮಾತ್ರ ನೋಡುವುದು ಬೇರೆ ಮಾತು. ವಿಪರ್ಯಾಸವೆಂದರೆ– ಪಾಂಡವರು, ಯಾದವರು, ಕೌರವರು, ಭೀಷ್ಮಾದಿಗಳೆಲ್ಲರೂ ವ್ಯಾಸರನ್ನು ಗೌರವಿಸುತ್ತಿದ್ದಾಗಲೂ, ಅವರಿಗೆ ಸಿಗಬೇಕಾದ ಎಲ್ಲ ಸ್ಥಾನಮಾನಗಳು, ಆದರ ಆತಿಥ್ಯಗಳು ಸಿಕ್ಕಾಗಲೂ, ಅವರು ‘ನನ್ನ ಮಾತನ್ನು ಒಬ್ಬನೂ ಕೇಳಲಿಲ್ಲ’ ಎಂದು ಉದ್ಘರಿಸುತ್ತಾರೆ.

‘ನನ್ನ ಮಾತನ್ನು ಕೇಳಿಸಿಕೊಳ್ಳಲಿಲ್ಲ’ ಅನ್ನುವುದರ ಭಾವ, ಮನುಷ್ಯ ‘ತನ್ನ ಮಾತನ್ನು ತಾನೇ ಕೇಳಿಸಿಕೊಳ್ಳುತ್ತಿಲ್ಲ’ ಅನ್ನುವುದೂ ಆಗಿದೆ. ನಾವು ಆಡುತ್ತಿರುವ ಮಾತು ಸುಳ್ಳೆನ್ನುವುದು ನಮಗೇ ತಿಳಿದಿರುತ್ತದೆ. ನಮ್ಮ ಒಳತೋಟಿ, ನಮ್ಮೊಳಗಿನ ಘರ್ಷಣೆ, ನಮ್ಮ ಸಣ್ಣತನ, ಸಿಟ್ಟು, ಈರ್ಷ್ಯೆ, ನಮ್ಮ ತಪ್ಪುಗಳೆಲ್ಲ ನಮಗೆ ತಿಳಿಯದ ರಹಸ್ಯಗಳೇನಲ್ಲ. ತಪ್ಪಿನೆಡೆಗಿನ ಎಚ್ಚರ ನಮ್ಮೊಳಗೆ ಧ್ವನಿಸುತ್ತಲೇ ಇದೆ. ಸತ್ಯವು ಪ್ರತಿಯೊಬ್ಬನಲ್ಲೂ ಹೂಂಕರಿಸುತ್ತಲೇ ಇದೆ, ಚಿಮ್ಮುತ್ತಲೇ ಇದೆ. ಆದರೂ ಯಾರೂ ತಮ್ಮದೇ ಮಾತನ್ನು ತಾವು ಕೇಳಿಸಿಕೊಳ್ಳುತ್ತಿಲ್ಲ ಅಥವಾ ಕೇಳಿಸಿಕೊಳ್ಳಲು ಬಯಸುತ್ತಿಲ್ಲ. ಯಾರಿಗೂ ಅದರ ಬಗ್ಗೆ ಕಾಳಜಿಯಿಲ್ಲ. ಅದನ್ನು ತೇಲಿಸಲಾಗುತ್ತದೆ. ಹಗುರಾಗಿ, ನಿರಾಳವಾಗಿ ಪ್ರಲೋಭನೆಗಳ ತೆಕ್ಕೆಗೆ ಜಾರಿ ಜಾಣರಾಗುತ್ತೇವೆ.

ಪುರಾಣದಲ್ಲಿನ ಇದೇ ರೀತಿಯ ಇನ್ನೊಂದು ಮಾತನ್ನು ಮಧ್ವರು ತಮ್ಮ ‘ಕೃಷ್ಣಾಮೃತ ಮಹಾರ್ಣವ’ದಲ್ಲಿ ಉಲ್ಲೇಖಿಸುತ್ತಾರೆ. ‘‘ಶಬ್ದವು ಎಲ್ಲ ಕಡೆಯಲ್ಲು, ಎಲ್ಲರಿಗೂ ಲಭ್ಯವಿದೆ. ಎಲ್ಲರ ಬಳಿಯೂ ನಾಲಗೆಯಿದೆ. ಆದರೂ ಎಲ್ಲರೂ ಮೂಕರಾಗಿದ್ದಾರೆ. ಇದೆಂಥ ಆಶ್ಚರ್ಯದ ಸಂಗತಿ!’’ ಎನ್ನುತ್ತಾರೆ. ಅಂದರೆ, ತಾನು ಆಡಲೇಬೇಕಾದ ತನ್ನದೇ ಸತ್ಯವನ್ನು ತಾನು ಆಡುತ್ತಿಲ್ಲ. ತನ್ನ ಮಾತನ್ನು ತಾನು ಕೇಳಿಸಿಕೊಳ್ಳುತ್ತಿಲ್ಲ; ತನ್ನ ಮಾತನ್ನು ತಾನು ಆಡುತ್ತಿಲ್ಲ. ಇದೊಂದು ವಿಡಂಬನೆ. ಕಾಲದ ಸಂವಹನ ಶೂನ್ಯ ಸ್ಥಿತಿಯ ಸೂಚನೆ.

ಸಾಹಿತ್ಯವೆಂದರೆ ಮೂಲತಃ ಸಂವಹನ. ಸಂವೇದನಾಶೀಲ ಪ್ರಕ್ರಿಯೆಗೆ ಅಕ್ಷರ, ನಾದ, ಭಾವ, ಲಯ– ಇವೆಲ್ಲವೂ ಸೇರಿ ಉಂಟಾಗುವ ಸಂಚಲನ. ವ್ಯಾಸರು ಹೇಳಿದ ‘ಕೇಳಿಸಿಕೊಳ್ಳುವಿಕೆ’ ಸಂವೇದನಾತ್ಮಕ ರೂಪದ್ದಾಗಿದ್ದರೆ, ಮಧ್ವರು ಹೇಳಿದ ‘ಮಾತು’ ಸಂವಹನದ ರೂಪದ್ದು. ಇಂಥ ಸಂವೇದನೆ ಹಾಗೂ ಸಂವಹನ ಎರಡನ್ನೂ ಕಳೆದುಕೊಂಡಂಥ ಕಾಲದ ಸಂವಹನ ಶೂನ್ಯ ಸ್ಥಿತಿ ವ್ಯಾಸರಕಾಲದಲ್ಲೂ ಇತ್ತು.
ಅವರು ಆ ಮಾತನ್ನು ಹೇಳಿದ್ದಾರೆ ಅಂದರೆ, ಅವರ ಕಾಲದಲ್ಲೂ ಆ ಸ್ಥಿತಿಯಿತ್ತು ಎಂದೇ ಅರ್ಥ. ಮತ್ತಿದು ಎಲ್ಲ ಕಾಲದ ಸ್ಥಿತಿಯೂ ಹೌದು. ಆದರೆ, ಇಂದು ಪ್ರಕಟಗೊಳ್ಳುತ್ತಿರುವ ಪುಸ್ತಕಗಳ ಸಂಖ್ಯೆ ಹೆಚ್ಚಾಗಿದೆ. ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಬರೆಯುತ್ತಿದ್ದಾರೆ.

ಹಾಗೆಂದ ಕೂಡಲೇ ಓದುವವರು ಕಮ್ಮಿಯಾಗಿದ್ದಾರೆ ಅನ್ನುವ ಧ್ವನಿಯೂ ಬರುತ್ತದೆ. ಆದರೆ, ಕೆಲವು ಲೇಖಕರ ಪುಸ್ತಕಗಳು ಪ್ರಕಟವಾದ ಒಂದೇ ವಾರಕ್ಕೆ ಸಾವಿರಾರು ಪ್ರತಿಗಳು ಖರ್ಚಾಗುತ್ತಿರುವ ಕಾರಣಕ್ಕೆ, ಓದುಗರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವುದನ್ನು ಸದ್ಯಕ್ಕೆ ಒಪ್ಪಿಕೊಳ್ಳೋಣ. ಮತ್ತು, ಮಾತನಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲರೂ ಮಾತಾಡುವವರೇ. ಸಂವಹನ ಶೂನ್ಯ ಸ್ಥಿತಿ ಎಲ್ಲ ಕಾಲದ ಸ್ಥಿತಿಯೂ ಹೌದು ಅನ್ನುವುದಾದರೆ, ಅದಕ್ಕೆ ವ್ಯತಿರಿಕ್ತವಾದ ಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಹಾಗಿದ್ದರೆ ನಮ್ಮ ಇಂದಿನ ಸಂವಹನ ಶೂನ್ಯ ಸ್ಥಿತಿಯ ಸ್ವರೂಪ ಎಂಥದ್ದು? ಅದರ ಕುರುಹುಗಳೇನು?

ಇದನ್ನೊಂದು ದೃಷ್ಟಾಂತದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಚಾಲ್ತಿಯಲ್ಲಿರುವ, ಚರ್ಚೆಯಲ್ಲಿರುವ ವಿಷಯ– ಬಿಗ್‌ಡಾಟಾ. ಪ್ರಸ್ತುತ ಪ್ರಪಂಚವು ಉತ್ಪಾದಿಸುತ್ತಿರುವ ಅಪಾರ ಪ್ರಮಾಣದ ಡಾಟಾವನ್ನು (ಮಾಹಿತಿಯನ್ನು) ಹೇಗೆ ನಿರ್ವಹಿಸಬೇಕು ಅನ್ನುವುದರ ಕುರಿತಾದ ತಂತ್ರಜ್ಞಾನ ವಿವೇಚನೆಯೇ ‘ಬಿಗ್‌ಡಾಟಾ’. ಉದಾಹರಣೆಗೆ, ಬಾಹ್ಯಾಕಾಶಕ್ಕೆ ಉಡ್ಡಯನಗೊಂಡ ಉಪಗ್ರಹವು ಒಂದು ನಿಮಿಷಕ್ಕೆ ಸಾವಿರಾರು ಫೋಟೋಗಳನ್ನು ಭೂಮಿಗೆ ರವಾನಿಸುತ್ತದೆ. ಸೋಶಿಯಲ್ ಮೀಡಿಯಾ, ಅಂತರ್ಜಾಲ ತಾಣಗಳು,  ಬ್ಲಾಗ್‌ಗಳಲ್ಲಿ ಕ್ಷಣಕ್ಷಣಕ್ಕೂ ಲಕ್ಷಾಂತರ ಅಪ್‌ಡೇಟ್ಸ್‌ಗಳು ದಾಖಲಾಗುತ್ತವೆ. ಜನರು ತಮ್ಮ ಇಷ್ಟಾನಿಷ್ಟಗಳು, ತಾವು ಭೇಟಿಯಿತ್ತ ಸ್ಥಳಗಳು, ರಾಜಕೀಯ ಪಕ್ಷಗಳ ಬಗೆಗಿನ ಪ್ರತ್ಯಕ್ಷ ಪರೋಕ್ಷ ಸಮರ್ಥನೆಗಳು, ಸಿದ್ಧಾಂತದ ಒಲವು ತೊಡಕುಗಳು, ಇತ್ಯಾದಿ ನಾನಾ ನಮೂನೆಯ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಾರೆ. ಇದ್ಯಾವುದೂ ವ್ಯವಸ್ಥಿತ ರೂಪದಲ್ಲಿ ಇರುವುದಿಲ್ಲ.

ಸಾಕಷ್ಟು ಅನಗತ್ಯ ವಿಷಯಗಳಿರುತ್ತವೆ. ಇಂಥ ಮಾಹಿತಿಗಳನ್ನೆಲ್ಲ ಕ್ರೋಡೀಕರಿಸಿ, ಸೋಸಿ, ಅದನ್ನು ಉಪಯುಕ್ತ ಮಾಹಿತಿಯನ್ನಾಗಿ ಪರಿವರ್ತಿಸುವುದೇ ‘ಬಿಗ್‌ಡಾಟಾ’ ಹಿಂದಿರುವ ಉದ್ದೇಶ ಮತ್ತು ಸವಾಲು. ಮಾರ್ಕೆಟಿಂಗ್‌ ಟ್ರೆಂಡ್ ಅಳೆಯುವುದಕ್ಕೆ, ರಾಜಕೀಯ ಹವಾಮಾನವನ್ನು ಅರಿಯುವುದಕ್ಕೂ ಇದು ಆವಶ್ಯಕ. ನಾನಾ ಮೂಲಗಳಿಂದ ಮಾಹಿತಿಗಳನ್ನು ಶೇಖರಿಸುವುದಕ್ಕಾಗಿ ಸಾಕಷ್ಟು ಸಾಫ್ಟ್‌ವೇರ್‌ಗಳು ಮತ್ತು ಮಾಹಿತಿಯ ವಿಶ್ಲೇಷಣೆಗೆ ಅನುಕೂಲವಾಗುಂಥ ಅನೇಕ ಪ್ರೋಗ್ರಾಮಿಂಗ್ ಭಾಷೆಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ.

ಅದೇ ರೀತಿ ಕಳೆದ ಒಂದು ದಶಕದಲ್ಲಿ ನಗರವಾಸಿಗಳ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಿದೆ. ಹೆಚ್ಚುತ್ತಲೇ ಇದೆ. ಹಳ್ಳಿಗಳು ನಗರಗಳಾಗಿ, ನಗರಗಳು ಮಹಾ ನಗರ, ಮೆಟ್ರೋ ನಗರ, ಕಾಸ್ಮೋಪೋಲಿಟನ್ ನಗರ, ಸ್ಮಾರ್ಟ್ ನಗರಗಳಾಗಿ ರೂಪಾಂತರಗೊಳ್ಳುವ ಸನ್ನಾಹದಲ್ಲಿವೆ. ಇದರಿಂದ ಉಂಟಾಗುತ್ತಿರುವ ಹಲವಾರು ಸಮಸ್ಯೆಗಳನ್ನು ನಿರ್ವಹಿಸುವ ಸವಾಲುಗಳೆದ್ದಿವೆ.

ವಿಪರ್ಯಾಸ ಮತ್ತು ವಿಚಿತ್ರವೆಂದರೆ ಇಂದಿನ ಬೆಳೆಯುತ್ತಿರುವ ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿವೆ; ವಿದ್ಯೆ ಕ್ಷೀಣಿಸುತ್ತಿದೆ. ಆಸ್ಪತ್ರೆಗಳು ಹೆಚ್ಚುತ್ತಿವೆ; ಆಯಸ್ಸು ಕ್ಷೀಣಿಸುತ್ತಿದೆ. ಮನೆಗಳು, ಅಪಾರ್ಟ್‌ಮೆಂಟುಗಳು ಹೆಚ್ಚುತ್ತಿವೆ; ವಾಸವಿರುವ ಆವರಣ (ಸ್ಪೇಸ್) ಕಿರಿದಾಗುತ್ತಿದೆ. ಫೋಟೊಗಳ ಸಂಖ್ಯೆ ಜಾಸ್ತಿಯಾಗುತ್ತ ನೆನಪುಗಳು ಕಮ್ಮಿಯಾಗುತ್ತಿದೆ. ಸೋಶಿಯಲ್ ಮೀಡಿಯಾಗಳ ಮೂಲಕ ಸ್ನೇಹಿತರು (friends list) ಹೆಚ್ಚುತ್ತ ಪರಿಚಿತರು ಕಮ್ಮಿಯಾಗುತ್ತಿದ್ದಾರೆ. ಸಿನಿಮಾಗಳು, ಐಟಮ್ ಡ್ಯಾನ್ಸುಗಳು, ಎಕ್ಸೋಪೋಸಿಂಗ್ ಹೆಚ್ಚುತ್ತ ನಿಜವಾಗಿ ಹೆಚ್ಚಬೇಕಾದ ರಸಿಕತೆ ಕಳೆದುಹೋಗುತ್ತಿದೆ. ರಸ್ತೆಗಳು ವಾಹನಗಳು ಹೆಚ್ಚಾದಂತೆ ಸಂಚಾರೀ ಭಾವವೇ ಕಡಿಮೆಯಾಗುತ್ತಿದೆ.

ಟ್ರಾಫಿಕ್ಕಿನ ಕಾರಣದಿಂದಾಗಿ ಹುಟ್ಟಿರುವ ನಿಜವಾದ ಸಮಸ್ಯೆ ‘ಪ್ರಯಾಣ ವೈರಾಗ್ಯ’. ಸ್ನೇಹಿತರನ್ನು–ಬಂಧುಗಳನ್ನು ಸಂಧಿಸುವ ಸ್ಫೂರ್ತಿಯನ್ನೇ ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ತಮಾಷೆಯೆಂದರೆ ನಾಗರಿಕತೆ ಹೆಚ್ಚಾದಂತೆ ಕಸವೂ ಹೆಚ್ಚಾಗುತ್ತಿದೆ. ಹಿಂದೆಂದೂ ಇಷ್ಟೊಂದು ಗಂಭೀರವಾಗಿ ಇರದ ಕಸದ ನಿರ್ವಹಣೆಯ ಸಮಸ್ಯೆ ಈ ಹೊತ್ತು ಉದ್ಭವಿಸಿದೆ. ಟೆಕ್ನಾಲಜಿ, ಸಿನಿಮಾ, ನಗರದ ಸಮಸ್ಯೆಗಳು, ಹೇಗೆ ಈ ಎಲ್ಲವೂ ಏಕಕಾಲಕ್ಕೆ ಉಂಟಾಗುತ್ತ, ಹೇಗೆ ಒಂದನ್ನೊಂದು ಪ್ರತಿಫಲಿಸುತ್ತಿವೆ, ಮತ್ತು ಸಾಹಿತ್ಯಕ್ಕೂ ಹೇಗೆ ಅನ್ವಯಿಸುತ್ತಿದೆ ಎನ್ನುವುದೇ ಕುತೂಹಲದ ಸಂಗತಿ. ಎಲ್ಲವೂ ಒಂದೇ ಸಮಸ್ಯೆಯ ಬೇರೆ ಬೇರೆ ಸ್ವರೂಪದ ಹಾಗೆ ಕಾಣುತ್ತಿವೆ. ಬೇರೆ ಬೇರೆಯೂ ಅಲ್ಲ. ಎಲ್ಲದರಲ್ಲಿರುವುದು ಒಂದೇ ಸಮಾನ ಅಂಶ. ಅದು– Abundance. ಇದು ಅಪರಿಮಿತದ ಕಾಲ. ವಿಫುಲತೆಯ ಕಾಲ. ಎಲ್ಲವೂ ಹೇರಳವಾಗಿ ಲಭ್ಯವಿದೆ. ಆದರೆ, ಒಂದು ಅಪಾರವಾದ ಸಂಗತಿಯನ್ನು ಹೇಗೆ ಸ್ವೀಕರಿಸಬೇಕು, ಹೇಗೆ ನಿರ್ವಹಿಸಬೇಕು ಎನ್ನುವುದೇ ಈ ಕಾಲದ ಸಮಸ್ಯೆ.

ನಮ್ಮ ಈಗಿನ ಸಾಹಿತ್ಯದ ಸಮಸ್ಯೆಯೂ ಅದೇ. ಸಾಕಷ್ಟು ಪ್ರಮಾಣದಲ್ಲಿ ಹುಟ್ಟಿಕೊಳ್ಳುತ್ತಿರುವ ಸಾಹಿತ್ಯ ಕೃತಿಗಳನ್ನು ಹೇಗೆ ಸ್ವೀಕರಿಸಬೇಕು? ಇವುಗಳ ನಡುವೆ ನಿಜವಾದ ಸಂವೇದನೆ–ಸಂವಹನಗಳನ್ನು ಸೋಸಿ ಗುರ್ತಿಸುವುದೇ ಈಗಿನ ಸವಾಲು. ಈ ವಿಪುಲತೆ ಮತ್ತು ಸಮಸ್ತ ಸಂವಹನವೇ ಈಗಿನ ಕಾಲದ ಸಂವಹನ ಶೂನ್ಯ ಸ್ಥಿತಿಯ ಸ್ವರೂಪ. Abundance is scarcity. ಎಲ್ಲರೂ ಮಾತನಾಡುತ್ತಿದ್ದಾರೆ ಎನ್ನುವಾಗ ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎನ್ನುವುದರ ಜೊತೆಗೆ, ಯಾರೂ ಮಾತನಾಡುತ್ತಿಲ್ಲ ಎನ್ನುವ ಧ್ವನಿಯೂ ಇದೆ. ‘ಫೇಸ್‌ಬುಕ್‌’ನಲ್ಲಿ ಎರಡು ಸಾವಿರ ಸ್ನೇಹಿತರಿದ್ದಾರೆ ಎಂದಾಗ, ಅವರ್‍್ಯಾರೂ ಸ್ನೇಹಿತರಲ್ಲ ಅಂತಲೇ ಅರ್ಥ.

ಇಂಥ ಸಂವಹನ ಶೂನ್ಯ ಸ್ಥಿತಿಗೆ ‘ಫೇಸ್‌ಬುಕ್‌’ನಂಥ ಸೋಶಿಯಲ್ ಮೀಡಿಯಾಗಳು ಕಾರಣವಲ್ಲ. ಬ್ಲಾಗ್, ಫೇಸ್‌ಬುಕ್‌, ಟ್ವಿಟರ್ ಮುಂತಾದ ಸೋಶಿಯಲ್ ಮೀಡಿಯಾಗಳು ಬಹಳ ಪ್ರಜಾಸತ್ತಾತ್ಮಕವಾದ ಆದ ವಾತಾವರಣವನ್ನು ನಿರ್ಮಿಸಿವೆ. ಎಲ್ಲರಿಗೂ ಒಂದು ಸಮಾನವಾದ ವೇದಿಕೆಯನ್ನು ಒದಗಿಸಿ ಕೊಟ್ಟಿವೆ ಎನ್ನುವುದು ನಿಜವೇ. ಅದರ ಜೊತೆಗೇ ನಮ್ಮೊಳಗಿದ್ದ ಎಚ್ಚರಗೇಡಿತನವನ್ನೂ ಬೇಜವಾಬ್ದಾರಿತನವನ್ನೂ ಅವು ಹೊರಹಾಕಿವೆ. ನಮ್ಮ ಮಾತನ್ನು ನಾವು ಕೇಳಿಸಿಕೊಳ್ಳದಂತೆ, ನಾವು ಆಡಲೇಬೇಕಾದ ಮಾತನ್ನು ಆಡದಂತೆ, ನಮ್ಮ ಉದ್ರೇಕ ಮತ್ತು ಶೀಘ್ರ ಸ್ಪಂದನಕ್ಕೆ ಅಂತರ್ಜಾಲ ಮಾಧ್ಯಮವು ಮುಕ್ತ ಅವಕಾಶವನ್ನೊದಗಿಸಿತು. ಫೇಸ್‌ಬುಕ್ ಬರುವುದಕ್ಕೆ ಮುಂಚೆಯೂ ಈ ಸ್ಥಿತಿ ಇತ್ತು. ಫೇಸ್‌ಬುಕ್‌ ಇರದಿದ್ದರೂ ಈ ಸ್ಥಿತಿ ಇರುತ್ತಿತ್ತು. ಫೇಸ್‌ಬುಕ್‌ ಅದನ್ನು ಹೊರಗೆಡವಿತು ಅಷ್ಟೇ.

ಯಾರು ಹೇಳುತ್ತಿದ್ದಾನೆ ಅಥವಾ ಕರ್ತೃವಿನ ದೃಷ್ಟಿಯಿಂದ ತಂತ್ರಜ್ಞಾನ ಮತ್ತು ಅದು ತಂದೊಡ್ಡಿದ ವಿಪುಲತೆಯಿಂದಾಗಿ ಉಂಟಾಗಿರುವ ಶೂನ್ಯತೆಯು ಒಂದು ಬಗೆಯದ್ದಾದರೆ, ಸಂವಹನದ ಮತ್ತೊಂದು ತುದಿಯಾದ– ಯಾರನ್ನು ತಲುಪಬೇಕು ಅಥವ ಶ್ರೋತೃವಿನ ದೃಷ್ಟಿಯಿಂದ ಉಂಟಾಗಿರುವ ಶೂನ್ಯತೆಯು ಮತ್ತೊಂದು ಬಗೆಯದು. ತಂತ್ರಜ್ಞಾನವು ಸಂವಹನದ ಸಾಧ್ಯತೆಯನ್ನು ಹೆಚ್ಚಿಸುತ್ತಲೇ ಸಂವಹನಶೀಲತೆಯ ಸರಿಯಾದ ತಿಳಿವಳಿಕೆಯಿಂದ ನಮ್ಮನ್ನು ವಿಮುಖಗೊಳಿಸಿದೆ.

ಸಂವಹನ ಅಂದಕೂಡಲೇ ಅಲ್ಲಿ ಮತ್ತೊಬ್ಬನ ಅವಶ್ಯಕತೆ ಬಂದುಬಿಡುತ್ತದೆ. The other should exist. ಕೇಳುವವರೇ ಇಲ್ಲದಿದ್ದರೆ ಯಾರಿಗಾಗಿ ಹಾಡುವುದು? ಓದುವವರೇ ಇಲ್ಲದಿದ್ದರೆ ಯಾರಿಗಾಗಿ ಬರೆಯಬೇಕು? ಕೇಳುವವರೇ ಇಲ್ಲದಿದ್ದರೆ ಯಾರಿಗೋಸ್ಕರ ಮಾತಾಡಬೇಕು? ಈ ಪ್ರಶ್ನೆಗಳೆಲ್ಲ ಹುಟ್ಟಿಕೊಳ್ಳುತ್ತವೆ. ಆಗ ಈ ಮತ್ತೊಬ್ಬ ಅನ್ನುವವ ಮುಖ್ಯವಾಗುತ್ತಾನೆ. ಆಗ ಸಂವಹನದ ತಿಳಿವಳಿಕೆ ಮತ್ತು ಅದರ ಪರಿಕಲ್ಪನೆಗಳು ಬದಲಾಗುತ್ತದೆ.

ಈ ದಿಸೆಯಲ್ಲಿ ಮುಖ್ಯವಾಗಿ ಎರಡು ಮಾರ್ಗಗಳನ್ನು ಗುರ್ತಿಸಬಹುದು. ಒಂದು, ‘ನನ್ನನ್ನು ಲಕ್ಷಾಂತರ ಮಂದಿ ಓದುತ್ತಿದ್ದಾರೆ’ ಅನ್ನುವ ಬಾಹುಳ್ಯದ ಮಾದರಿ. ಮತ್ತೊಂದು, ‘ಒಬ್ಬನೇ ಒಬ್ಬ ಓದುಗ ಸಾಕು’ ಅನ್ನುವ ಪು.ತಿ.ನರಸಿಂಹಾಚಾರ್ ಅವರ ಮಾದರಿ. ಮೊದಲನೆಯದು ಹೊರಮುಖದ ಆಡಂಬರವಾದರೆ, ಎರಡನೆಯದು ಅಂತರಂಗದ ವಿಜ್ಞಾಪನೆ.

ಈ ಎರಡರ ನಡುವೆ ಇರುವುದು ಲೋಲುಪತೆಗೂ ಹಂಬಲಕ್ಕೂ ಇರುವ ವ್ಯತ್ಯಾಸ. ಒಬ್ಬ ಓದುಗ ಸಾಕು– ಇದು ಸ್ಫೂರ್ತಿ, ಸಂತೃಪ್ತಿ. ಮತ್ತೊಂದಲ್ಲಿರುವುದು ಬಾಕತನ. ಧಾರ್ಷ್ಟ್ಯವು ಎರಡರಲ್ಲೂ ಕಾಣಿಸಿದರೂ ಅವುಗಳ ನೆಲೆ ಬೇರೆ. ಒಬ್ಬನೇ ಒಬ್ಬ ಓದುಗ ಸಾಕು ಎನ್ನುವುದರಲ್ಲಿ ಸಮರ್ಪಣೆ, ಹುರುಪು, ವಿನಯ, ಎಲ್ಲವೂ ಇದೆ. ಹಾಗಿದ್ದರೆ ಆ ಒಬ್ಬ ಓದುಗ ಯಾರು? ನಿಜವಾಗಿ ನಾವು ಯಾರನ್ನು ತಲುಪಬೇಕು? ಆ ಮತ್ತೊಬ್ಬ ಯಾರು?

ಸಂಗೀತಗಾರರಲ್ಲಿ ಕೆಲವರಾದರು ಕೆಲವು ಸಂದರ್ಭಗಳಲ್ಲಿಯಾದರೂ ಕೇವಲ ತಮ್ಮ ಪಾಡಿಗೆ ತಾವು ಹಾಡಿಕೊಳ್ಳುತ್ತಿರುತ್ತಾರೆ. ಇಂಥದ್ದೊಂದು ಸಾಧ್ಯತೆಯೂ ಇದೆ. ಹಾಗಿದ್ದರೆ ಅಲ್ಲಿ ಕೇಳುಗ ಯಾರು? ಈ ಪ್ರಶ್ನೆ ಮುಖ್ಯ. ಹಾಡುವವನ ಒಳಗೆ ಒಬ್ಬ ದೊಡ್ಡ ಕೇಳುಗ ಇರದೇ ಹೋದರೆ ಅವನಿಗೆ ಸ್ವರಸಿದ್ಧಿ ಸಾಧ್ಯವೇ ಇಲ್ಲ. ಮತ್ತು, ಹಾಡುವುದು ಹಾಗೂ ಕೇಳುವುದು– ಹಾಡುವವನಲ್ಲಿ ಈ ಎರಡೂ ಒಟ್ಟಿಗೆ ಆಗುತ್ತಿರುತ್ತದೆ. ಹಾಡು, ಹಾಡುವವ, ಕೇಳುಗ– ಈ ಮೂರೂ ಒಂದೇ ಆದಾಗ ಸಂಗೀತದ ರಸಸಿದ್ಧಿ ಸಾಧ್ಯ. ಅದೇ ರೀತಿ ಒಬ್ಬ ಬರಹಗಾರ ಬರೆಯುವಾಗ ತಾನೊಬ್ಬ ಓದುಗನೂ ಆಗಿರುತ್ತಾನೆ. I read as I write. ಎರಡೂ ಕ್ರಿಯೆ ಜೊತೆಜೊತೆಗೇ ನಡೆಯುತ್ತಿರುತ್ತದೆ. ಆದ್ದರಿಂದ ಒಬ್ಬ ದೊಡ್ಡ ಓದುಗನ ಪರಿಕಲ್ಪನೆ ಅದರ ಸಂಸ್ಕಾರ ಇಲ್ಲದೇ ಹೋದರೆ– ಅಂದರೆ ಎಲ್ಲರನ್ನೂ ಎಲ್ಲವನ್ನೂ ಓದಿಕೊಂದಿರಬೇಕು ಅಂತಲ್ಲ, ಅದರದ್ದೊಂದು ಸಂಸ್ಕಾರ ಇರದೇ ಹೋದರೆ–  ಒಳ್ಳೆಯ ರೀತಿಯಲ್ಲಿ ಬರೆಯುವುದಕ್ಕೇ ಸಾಧ್ಯವಾಗುವುದಿಲ್ಲ.

ನಾಟಕ ಮಾಡಿಸುವವ ಅದನ್ನು ನೋಡುತ್ತಲೂ ಇರುತ್ತಾನೆ. ಅವನೊಳಗೊಬ್ಬ ಪ್ರೇಕ್ಷಕ ಇರುತ್ತಾನೆ. ಪ್ರೇಕ್ಷಕರ ದೃಷ್ಟಿಕೋನ, ಅಂದರೆ ಇದನ್ನುಜನ ಹೇಗೆ ಸ್ವೀಕರಿಸಬಹುದು ಎನ್ನುವ ಕಮರ್ಷಿಯಲ್ ಸಿನಿಮಾದ ವ್ಯಾವಹಾರಿಕ ಆಲೋಚನೆಯಂಥಲ್ಲ. ನಾಟಕ ಮಾಡಿಸುವ ಕ್ರಿಯೆಯಲ್ಲೇ ನೋಡುವ ಕ್ರಿಯೆ ಒಂದಾಗಿರುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಚಿತ್ರಕಲಾವಿದ ಪೈಂಟಿಂಗ್ ಮಾಡುತ್ತಿದ್ದಾನೆ ಅಂದರೆ, ಅದೇ ಸಮಯಕ್ಕೆ ಅದಾಗಲೇ ಅವನ ಅಂತರಂಗದ ಭಿತ್ತಿಯಲ್ಲಿ ಅವನದನ್ನು ಕಂಡಿರುತ್ತಾನೆ. ಈ ಎರಡೂ ಅವಿಚ್ಛಿನ್ನ. ತತ್ಪರನಾದ ಇಂಥ ಕೇಳುಗ, ನೋಡುಗ, ಓದುಗ ನಮ್ಮೊಳಗೇ ಇರುವಂಥವನು. ಇದನ್ನು ಬಿಟ್ಟು ಕೇವಲ ಜನರನ್ನು ಸೆಳೆಯಲಿಕ್ಕಾಗಿ ಮೆಚ್ಚಿಸಲಿಕ್ಕಾಗಿ ಮಾರ್ಕೆಟಿಂಗ್ ಗಿಮಿಕ್ಕಿನ ಹಾಗೆ ಬರೆಯಲು ತೊಡಗಿದಾಗ ಬರವಣಿಗೆ ಮನರಂಜನೆ (ಎಂಟರ್‌ಟೈನ್‌ಮೆಂಟ್‌) ಆಗುತ್ತದೆ. ಎಷ್ಟು ಸಾವಿರ, ಲಕ್ಷ ಪ್ರತಿಗಳು ಖರ್ಚಾಯಿತು ಎನ್ನುವುದೇ ಮುಖ್ಯವಾಗುತ್ತದೆ. ಬಾಲಿವುಡ್ ಸಿನಿಮಾಗಳ ನೂರು ಕೋಟಿ ಕ್ಲಬ್ಬಿನ ಹಾಗೆ.

ಈ ನೂರು ಕೋಟಿ ಕ್ಲಬ್ಬಿನ ಟ್ರೆಂಡ್ ಶುರುವಾದ ಮೇಲೆ ಖ್ಯಾತ ನಟನ, ನಿರ್ದೇಶಕನ ಎಂಥ ಕೆಟ್ಟ ಸಿನಿಮಾ ಕೂಡ ಸೋಲದಂಥ ಪರಿಸ್ಥಿತಿ ಬಂದಿದೆ. ನೂರು ಕೋಟಿ ದಾಟಿದ ಗಳಿಕೆಯೊಂದೇ ಸಿನಿಮಾಗಳ ಯಶಸ್ಸಿನ ಮಾನದಂಡವೂ ವಿಮರ್ಶೆಯೂ ಜನಾಭಿಪ್ರಾಯವೂ ಆಗಿಹೋಗಿದೆ. ಸಂವಾದಕ್ಕೆ ಎಡೆಯಿಲ್ಲದಂತೆ ಟೀಕಾಕಾರರ ಬಾಯಿ ಮುಚ್ಚಿಸುವ ಅಸ್ತ್ರವಾಗಿದೆ. ಹೀಗೆ ಮತ್ತೆ ಈ ವಿಫುಲತೆಯು (Abundance), ಯಾರಿಗೆ ತಲುಪಿದೆ ಅನ್ನುವುದಕ್ಕಿಂತಲೂ ಹೆಚ್ಚಾಗಿ ಎಷ್ಟು ಜನರನ್ನು ತಲುಪಿದೆ ಅನ್ನುವುದೇ ಮುಖ್ಯವಾಗಿ, ಸಂವಹನದ ಮತ್ತೊಂದು ತುದಿಯ (ಶ್ರೋತೃವಿನ ನೆಲೆಯಿಂದ) ಸಾರ್ಥಕತೆಯನ್ನು ಅಳೆಯುವ ಸಾಧನವಾಗಿಬಿಟ್ಟಿದೆ. ಸಂತೆಯಲ್ಲಿ ಕೇಳುವ ಸಂಗೀತದಂತೆ ಅಥವ ಮಾಲ್‌ಗಳಲ್ಲಿನ ಸ್ಪೀಕರ್‌ಗಳಿಂದ ಹೊಮ್ಮಿ ಸಾವಿರಾರು ಜನರ ಕಿವಿಯ ಮೇಲೆ ಹಾದುಹೋಗುವ ನಿರರ್ಥಕ ಹಾಡಿನಂತೆ ಇಂದು ವಿಫುಲತೆಯೇ ಎಲ್ಲ ರೀತಿಯಿಂದಲೂ ಸಂವಹನ ಶೂನ್ಯ ಸ್ಥಿತಿಯ ಸ್ವರೂಪವಾಗಿದೆ.

ಈ ಸಂವಹನಶೂನ್ಯ ಸ್ಥಿತಿಯನ್ನು ಗುರ್ತಿಸಿ ನೀಗಿಸಿಕೊಳ್ಳುವುದಕ್ಕೆ ಸಾಧ್ಯವಾದರೆ, ಮುಕ್ತ ವೇದಿಕೆಗಳಲ್ಲಿ ಇನ್ನಷ್ಟು ಸಹ್ಯವೆನಿಸುವ ಸಂವೇದನೆಗಳು ಹೊರಹೊಮ್ಮುವುದಕ್ಕೆ ಸಾಧ್ಯವಿದೆ. ಆದ್ದರಿಂದ ಸಂವಹನದ ಎರಡು ಮಾದರಿಗಳ ವ್ಯತ್ಯಾಸದಲ್ಲಿ ನಮ್ಮ ಇಂದಿನ ಸಾಹಿತ್ಯದ, ಸಂವಾದದ, ಇಡಿಯ ವಾತಾವರಣದ ಮತ್ತು ನಮ್ಮನಮ್ಮದೇ ವೈಯಕ್ತಿಕ ಪರಿಸರವನ್ನು ರೂಪಿಸಿಕೊಳ್ಳಬೇಕಿದೆ. ತನ್ನೊಳಗಿನ ನಿಜವಾದ ಮಾತನ್ನು ಕೇಳಿಸಿಕೊಂಡು ತಾನು ಆಡಲೇಬೇಕಾದುದನ್ನು ಮಾತ್ರ ಆಡಬೇಕಿದೆ. ಆಗ ಮತ್ತೊಬ್ಬರ ಮಾತನ್ನಾಡುವುದು, ಮತ್ತೊಬ್ಬರಿಗಾಗಿ ಆಡುವುದು, ಆಡಬಾರದ ಮಾತುಗಳನ್ನಾಡುವುದು ತಗ್ಗುವುದು. ಸಮಾಜದ ಶಬ್ದಸ್ವಾಸ್ಥ್ಯವು ಹದಗೆಡುತ್ತಿರುವ ಈ ಸಂದರ್ಭದಲ್ಲಿ ಇದು ಅತ್ಯಂತ ಅವಶ್ಯಕವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT