ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ವಾಹನ ದಟ್ಟಣೆ, ನೀರಿನ ಸಮಸ್ಯೆ ತೀವ್ರ

ಕ್ಷೇತ್ರ ಪರಿಚಯ:ಕೆ.ಆರ್‌.ಪುರ
Last Updated 3 ಆಗಸ್ಟ್ 2015, 20:22 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ದಟ್ಟಣೆಗೆ ನಲುಗುವ ರಸ್ತೆಗಳು, ಬಯಲು ಶೌಚಾಲಯವಾದ ಬಸ್‌ ನಿಲ್ದಾಣ, ಬಾಯಿ ತೆರೆದು ಬಲಿಗಾಗಿ ಕಾಯುವ ಚರಂಡಿಗಳು, ವ್ಯಾಪಾರಿಗಳಿಂದಲೇ ತುಂಬಿ ತುಳುಕುವ ಪಾದಚಾರಿ ಮಾರ್ಗಗಳು, ಭೂಗಳ್ಳರ ದಾಳಿಗೆ ಕಿರಿದಾಗುತ್ತಿರುವ ಕೆರೆಗಳು...

ರಾಷ್ಟ್ರೀಯ ಹೆದ್ದಾರಿ–4ಕ್ಕೆ ಹೊಂದಿಕೊಂಡಂತೆ, ಹಳೆಯ ಮದ್ರಾಸ್ ರಸ್ತೆಯ ಬಾಗಿಲಿನ ಹಾಗಿರುವ ಕೃಷ್ಣರಾಜಪುರ (ಕೆ.ಆರ್‌.ಪುರ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಚುನಾವಣೆ ಪೂರ್ವದಲ್ಲಿ ಅವಲೋಕಿಸಿದಾಗ ಕಂಡುಬರುವ ಸಮಸ್ಯೆಗಳಿವು.  ಒಟ್ಟು ಒಂಬತ್ತು ಬಿಬಿಎಂಪಿ ವಾರ್ಡ್‌ಗಳನ್ನು ಹೊಂದಿರುವ ಈ ಕ್ಷೇತ್ರವು  ನೂರೆಂಟು ಸಮಸ್ಯೆಗಳ ಆಗರವಾಗಿದೆ.

ತಾಲ್ಲೂಕು ಪಂಚಾಯಿತಿ ಕಚೇರಿ, ಹಾಗೂ ತಹಶೀಲ್ದಾರ್ ಕಚೇರಿ, ಬ್ಯಾಂಕ್, ಸಾರ್ವಜನಿಕ ಆಸ್ಪತ್ರೆ, ಪಾಸ್ ವಿತರಣೆ ಕೇಂದ್ರ, ಪೊಲೀಸ್ ಠಾಣೆ ಸೇರಿದಂತೆ ಅನೇಕ ಕಚೇರಿಗಳು ಇಲ್ಲಿ ಹೆದ್ದಾರಿಗೆ ಹೊಂದಿಕೊಂಡಂತಿವೆ. ಇವುಗಳಿಗೆ ಹೋಗಲು ಜನರು ಹೆದ್ದಾರಿಯಲ್ಲಿ ವೇಗದಿಂದ ಓಡುವ ವಾಹನಗಳ ನಡುವೆಯೇ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ನಿತ್ಯದ ಹರ ಸಾಹಸ ಇಲ್ಲಿ ಕಾಣುತ್ತದೆ.

‘ಇಲ್ಲಿ ಸ್ಕೈವಾಕ್‌ ಅಥವಾ ಮೇಲ್ಸೇತುವೆ ನಿರ್ಮಿಸಬೇಕು. ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮತ ಪಡೆದವರು ದೊಡ್ಡವರಾಗುತ್ತಿದ್ದಾರೆ ವಿನಾ ಅಭಿವೃದ್ಧಿ ಕಾರ್ಯಗಳು ಮಾತ್ರ ನಡೆಯುತ್ತಿಲ್ಲ’ ಎಂದರು ಕೆ.ಆರ್.ಪುರ ನಿವಾಸಿಯಾದ ಕಾನೂನು ಸಲಹೆಗಾರ ಮೋಹನ್‌ ನಾರಾಯಣ್‌ ಮೆನನ್‌.

ನಿತ್ಯ 300 ಟ್ರಿಪ್‌ಗಿಂತ ಅಧಿಕ ಬಸ್‌ಗಳ ಓಡಾಟವಿರುವ ಇಲ್ಲಿನ ಬಸ್‌ ನಿಲ್ದಾಣ ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಪ್ರಯಾಣಿಕರಿಗೆ ತಂಗಲು ಸೂರಿಲ್ಲ. ಕುಡಿಯುವ ನೀರಿಲ್ಲ. ವ್ಯಾಜ್ಯದಿಂದ ಅಪೂರ್ಣಗೊಂಡಿರುವ ಶೌಚಾಲಯವಂತೂ ಕಣ್ಣೆತ್ತಿ ಕೂಡ ನೋಡುವಂತಿಲ್ಲ.
‘ವೃದ್ಧರು, ಕಾಯಿಲೆ ಪೀಡಿತರು, ವಿಶೇಷವಾಗಿ ಮಹಿಳೆಯರು ಮೂತ್ರದ ತುರ್ತಿನ ಸಂದರ್ಭದಲ್ಲಿ ತುಂಬ ತೊಂದರೆ ಅನುಭವಿಸುತ್ತಾರೆ. ನಿರ್ವಾಹಕಿಯರು ಸಾರ್ವಜನಿಕ ಆಸ್ಪತ್ರೆಯ ಶೌಚಾಲಯದ ಮೊರೆ ಹೋಗುವ ಸ್ಥಿತಿಯಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು.

ರಾಮಮೂರ್ತಿ ನಗರ ವಾರ್ಡ್‌ನ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ವಿ.ಶಾಮರಾವ್‌ ಅವರು ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದು ಹೀಗೆ... ‘ರಾಮಮೂರ್ತಿ ನಗರದ ಮೇಲ್ಸೇತುವೆ ವಿಸ್ತರಣೆ ಜರೂರಾಗಿ ಮಾಡಬೇಕು.  ರಸ್ತೆ ಕಾಮಗಾರಿ ಕಳಪೆಯಾಗಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಮುಖ್ಯರಸ್ತೆಯಲ್ಲಿ ಅಪೂರ್ಣಗೊಂಡಿರುವ ರಾಜಕಾಲುವೆ ಕಾಮಗಾರಿ ಈವರೆಗೆ ಮುಗಿಸಿಲ್ಲ’.

ಸಂಘದ ಕಾರ್ಯದರ್ಶಿ ಎನ್‌.ಎಸ್‌.ಆಂಜನಪ್ಪ, ‘ಒಳಚರಂಡಿಗೆ ಶೌಚಾಲಯ ನೀರು ಮಾತ್ರ ಹರಿಯುತ್ತಿದೆ. ಸ್ನಾನ ಮತ್ತು ಅಡುಗೆ ಮನೆಯ ತ್ಯಾಜ್ಯ ನೀರನ್ನು ಅನೇಕ ಕಡೆಗಳಲ್ಲಿ ಮೋರಿಗೆ ಬಿಡಲಾಗುತ್ತಿದೆ. ಇದರಿಂದ ಸಮಸ್ಯೆಗಳು ಉದ್ಭವಿಸುತ್ತಿವೆ. ಜಲಮಂಡಳಿಗೆ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

‘ಪೈ ಲೇಔಟ್‌ನಲ್ಲಿ ಕುಡಿಯುವ ನೀರು, ಕಸದ ಸಮಸ್ಯೆಗಳಿವೆ. ಕಳಪೆ ಡಾಂಬರೀಕರಣದಿಂದ ಮುಖ್ಯರಸ್ತೆಗಳು  ಹದಗೆಟ್ಟು ಹೋಗಿವೆ.  ಹಳೆ ಮದ್ರಾಸ್‌ ರಸ್ತೆ ಮತ್ತು ವೈಟ್‌ಫೀಲ್ಡ್‌ ಸಂಪರ್ಕಿಸುವ ಸೇತುವೆ ಮಾರ್ಗ ನಿರ್ಮಾಣ ಕಾಮಗಾರಿ ತುಂಬಾ ವಿಳಂಬವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಅಶೋಕ್‌ ದೂರುಗಳ ಪಟ್ಟಿ ನೀಡಿದರು.

ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ವಿಜ್ಞಾನ ನಗರದಲ್ಲಿ ರಸ್ತೆಗಳು ಬಹಳ ಕಿರಿದಾಗಿವೆ. ಐಟಿ ಉದ್ಯೋಗಿಗಳು ವಾಸಿಸುವ ಅಪಾರ್ಟ್‌ಮೆಂಟ್‌ಗಳೇ ಅಧಿಕವಾಗಿರುವ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಖ್ಯವಾಗಿದೆ. ಹೊರಮಾವು ವಾರ್ಡ್‌ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.  ಸಮೀಪದ ಇಸ್ಲಾಂಪುರದಲ್ಲಿ ಸ್ಥಳೀಯ ಜನರಲ್ಲಿ ಸಾಮರಸ್ಯವಿಲ್ಲದ ಕಾರಣ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದೊಂದು ರೀತಿಯಲ್ಲಿ ನಿರ್ಲಕ್ಷಿತ ಗ್ರಾಮವಾಗಿದೆ.

ತಲಕಾವೇರಿ ಬಡಾವಣೆಯಿಂದ ರಾಜಕಾಲುವೆ ಮೂಲಕ ಬರುವ ನೀರು ಮುಂದೆ ಹರಿಯಲು ಜಾಗವಿಲ್ಲದೆ ಬಸವನಗರ ಬಸ್‌ ನಿಲ್ದಾಣದ ಬಳಿ ನಿಂತು ಕೊಳಚೆ ವಾತಾವರಣ ನಿರ್ಮಾಣ ಮಾಡಿದೆ.

ಸ್ಥಳೀಯರು ಏನೆಂತಾರೆ...
ಪೈ ಲೇಔಟ್‌ನಲ್ಲಿ ಒಳಚರಂಡಿ ಕಾಮಗಾರಿ ಸರಿಯಾಗಿ ಮಾಡಿಲ್ಲ. ರಾಜ ಕಾಲುವೆ ಅವ್ಯವಸ್ಥೆಯಿಂದಾಗಿ ಮಳೆ ನೀರು ಬಚ್ಚಲು ಮನೆ  ಮೂಲಕ ಮನೆಗಳ ಒಳಗೆ ತುಂಬಿಕೊಳ್ಳುತ್ತದೆ
-ಎಂ.ಎಲ್‌.ಅನುಪಮಾ ರೆಡ್ಡಿ, ಎ.ನಾರಾಯಣಪುರ ವಾರ್ಡ್‌ನ ಸಾಮಾಜಿಕ ಕಾರ್ಯಕರ್ತೆ

ಬಡಾವಣೆಗೊಂದು ವಾಚನಾಲಯ, ಶೌಚಾಲಯ ಮತ್ತು ಪ್ರಾಥಮಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು ಎಂದು 20 ವರ್ಷಗಳಿಂದ ಆಗ್ರಹಿಸುತ್ತ ಬಂದಿದ್ದೇವೆ. ಅದು ಇಂದಿಗೂ ನನಸಾಗಿಲ್ಲ
-ಎ.ವಿ.ಶಾಮರಾವ್‌, ರಾಮಮೂರ್ತಿ ನಗರ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT