ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವತ್ತು ತುಂಬಿದ ‘ತಬ್ಬಲಿಗಳು’

Last Updated 9 ಜನವರಿ 2016, 19:35 IST
ಅಕ್ಷರ ಗಾತ್ರ

ವರ್ತಮಾನದ ಹಲವು ಚರ್ಚೆಗಳ ಹಿನ್ನೆಲೆಯಲ್ಲಿ ಎಂದೂ ಮಾಸದ ಕಥೆಯಂತೆ ಕಾಣಿಸುವ ರಾಘವೇಂದ್ರ ಖಾಸನೀಸರ ‘ತಬ್ಬಲಿಗಳು’ ಕಥೆಯ ಸುವರ್ಣ ಮಹೋತ್ಸವ ಸಂದರ್ಭ ಇದು. ಈ ಜಗತ್ತಿನಲ್ಲಿ ಯಾರೂ ಅಪರಾಧಿಗಳಿರುವುದಿಲ್ಲ, ಬಲಿಪಶುಗಳೂ ಇರುವುದಿಲ್ಲ, ಕೇವಲ ತಬ್ಬಲಿಗಳು ಇರುತ್ತಾರೆ ಎನ್ನುವುದನ್ನು ಸೂಚಿಸುವ ಈ ಕಥೆ– ನಾವೆಲ್ಲ ಯಾರ ಮುಂದೆ ತಬ್ಬಲಿಗಳು? ಮನುಷ್ಯ ಸ್ವಭಾವದ ಮುಂದೆಯೇ? ವಿಶ್ವನಿಯಾಮಕನ ಮುಂದೆಯೇ? ಅನಂತ ಕಾಲದ ಎದುರೇ? ಎನ್ನುವ ಪ್ರಶ್ನೆಗಳನ್ನು ಎತ್ತುತ್ತದೆ.

ಕನ್ನಡ ಸಾಹಿತ್ಯ ಲೋಕವು 50 ವರ್ಷ ತುಂಬಿದ ಕೃತಿಗಳೆಂದು ‘ಸಂಸ್ಕಾರ’ ಮತ್ತು ‘ವಂಶವೃಕ್ಷ’ ಕಾದಂಬರಿಗಳನ್ನು ಕಳೆದ ವರ್ಷ ವಿಶೇಷವಾಗಿ ಗಮನಿಸಿತು. ನಾಡಿನ ಗಣ್ಯ ವಿಮರ್ಶಕರು, ಸಂಸ್ಕೃತಿಪಟುಗಳು ಈ ಕೃತಿಗಳನ್ನು ಕುರಿತು ಲೇಖನಗಳನ್ನು ಬರೆದರು. 1964-65ರ ಸಾಲಿನಲ್ಲಿ ಪ್ರಕಟವಾದ ರಾಘವೇಂದ್ರ ಖಾಸನೀಸರ ‘ತಬ್ಬಲಿಗಳು’ ಎಂಬ ವಿಶಿಷ್ಟ ಕಥೆಗೂ ಈಗ ಸುವರ್ಣ ಮಹೋತ್ಸವದ ಸಂದರ್ಭ (ಈ ಕಥೆಯು ಬೇರೆ ಬೇರೆ ಕಾಲಘಟ್ಟದಲ್ಲಿ ಹಲವು ಮನೋಧರ್ಮಗಳ ವಿಮರ್ಶಕರು ಸಂಪಾದಿಸಿರುವ ಎಲ್ಲ ಪ್ರಾತಿನಿಧಿಕ ಸಂಪುಟಗಳಲ್ಲೂ ಸೇರಿದೆ).

‘ವಂಶವೃಕ್ಷ’ – ‘ಸಂಸ್ಕಾರ’ ಕಾದಂಬರಿಗಳಂತೆಯೇ ಈ ವಿಶಿಷ್ಟ ಕಥೆ ಕೂಡ ಧರ್ಮ, ಸಾಮಾಜಿಕತೆ, ನಂಬಿಕೆ, ಆಚರಣೆ, ವೈಯುಕ್ತಿಕ ಸಾಕ್ಷಾತ್ಕಾರ– ಈ ಪರಿಕಲ್ಪನೆಗಳಿಗೂ ಮನುಷ್ಯನ ಬದುಕಿಗೂ ಇರುವ, ಇರಬೇಕಾದ ಸಂಬಂಧದ ಸ್ವರೂಪ ಕುರಿತಂತೆ ಮುಖ್ಯ ಪ್ರಶ್ನೆಗಳನ್ನು ಮನಕಲಕುವ ರೀತಿಯಲ್ಲಿ, ಬೇರೆ ಬೇರೆ ತಲೆಮಾರುಗಳ, ಬೇರೆ ಬೇರೆ ಓದುಗರ ಮುಂದೆ ಇಡುತ್ತಲೇ ಬಂದಿದೆ. ನಮ್ಮ ಕಾಲಕ್ಕೆ ಮಾತ್ರವಲ್ಲ, ಎಲ್ಲ ಕಾಲಕ್ಕೂ ಎಲ್ಲ ಸಮಾಜಗಳಿಗೂ ಪ್ರಸ್ತುತವಾದಂತಹ ಪ್ರಶ್ನೆಗಳನ್ನು ಕೂಡ ಈ ಮಹತ್ವದ ಕಥೆ ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ. ಧರ್ಮ, ನಂಬಿಕೆ, ಸಹಜೀವನ ಕುರಿತಂತೆ ಪ್ರಸ್ತುತ ನಡೆಯುತ್ತಿರುವ ಚರ್ಚೆಗೆ ಈ ಕಥೆಯ ಓದು ಹೊಸ ಹೊಳಹುಗಳನ್ನು ಸೇರಿಸಬಲ್ಲದು.

ಪ್ರೀತಿಯ ಕೊರತೆ, ದುರದೃಷ್ಟ, ಸಾವಿನ ಕರಿನೆರಳಿನ ಪ್ರಭಾವ, ಪರಸ್ಪರ ವಿಮುಖತೆಯಿಂದೆಲ್ಲ ಕಂಗಾಲಾಗಿರುವ ಒಂದು ಕುಟುಂಬ ಭಾವನಾತ್ಮಕ ಆಸರೆ, ನೆಮ್ಮದಿ, ಬಿಡುಗಡೆಯನ್ನು ಬಯಸಿ ಪುಣ್ಯಕ್ಷೇತ್ರವೊಂದಕ್ಕೆ ಬಂದಾಗ ಕೆಲವೇ ಗಂಟೆಗಳಲ್ಲಿ ಬಿಚ್ಚಿಕೊಳ್ಳುವ ಪಾತ್ರಗಳ ಮನೋಲೋಕ, ಪುಣ್ಯಕ್ಷೇತ್ರದ ವಿವರಗಳು/ಆಚರಣೆಗಳು– ಇದು ಕಥೆಯ ಚೌಕಟ್ಟು. ಈ ಹಿನ್ನೆಲೆಯಲ್ಲಿ ಮನುಷ್ಯನ ಮೂಲಭೂತ ತಬ್ಬಲಿತನದ ಸ್ವರೂಪವನ್ನು ಶೋಧಿಸುವುದು ಕಥೆಯ ಆಶಯ.

ಮನುಷ್ಯನ ಅಂತರಂಗದ ಮತ್ತು ಸಾಮಾಜಿಕ ಬದುಕಿನಲ್ಲಿ ದುಃಸ್ವಪ್ನದ ಒಂದು ಗಾಢವಾದ ಎಳೆ ಎಲ್ಲ ಕಾಲದಲ್ಲೂ ಇದ್ದೇ ಇರುತ್ತದೆ. ಇದು ವಸ್ತುಸ್ಥಿತಿಯೂ ಹೌದು. ತಾತ್ವಿಕ ಸ್ಥಿತಿಯೂ ಹೌದು. ಮೊದಲನೆಯದಾಗಿ ಈ ಸ್ಥಿತಿಯನ್ನು ಮನುಷ್ಯ ತನ್ನದೆಂದು ಒಪ್ಪಿಕೊಳ್ಳುವುದೇ ಕಷ್ಟ. ಯಾವುದಾದರೂ ದುರಂತ, ಸಾವು, ಅಸಹಾಯಕತೆ ನಮ್ಮನ್ನು ಬದುಕಿನ ಪ್ರಪಾತದ ತುದಿಗೆ ತಂದು ನಿಲ್ಲಿಸದಿದ್ದರೆ.

ಈ ತಾತ್ವಿಕ ಪ್ರೇರಣೆಯನ್ನು ಕಾಫ್ಕಾನಿಂದ ಕಥೆಗಾರರು ಪಡೆದಿರಬಹುದು ಎಂದೆನಿಸಿದರೂ ಈ ನೋಟವನ್ನೇ ಒಂದು ಸಾಧಾರಣ ಕುಟುಂಬದ ಅದೃಷ್ಟ–ದುರದೃಷ್ಟ, ಬವಣೆ–ಹೆಣಗಾಟಗಳ ಭಿತ್ತಿಯಲ್ಲಿ ಒಂದಿನಿತೂ ಸುಳ್ಳೆನಿಸದಂತೆ, ಒಂದಿನಿತೂ ಭಾವುಕವಾಗದೇ ಕಠೋರ ನಿಷ್ಠುರತೆಯಲ್ಲಿ ಈ ಕಥೆ ನಮಗೆ ದರ್ಶನ ಮಾಡಿಸುತ್ತದೆ. ಈ ಸ್ಥಿತಿಯಿಂದ ಮನುಷ್ಯನಿಗೆ ಬಿಡುಗಡೆಯೇ ಇಲ್ಲ ಎಂಬುದು ಕಾಫ್ಕಾನಲ್ಲಿ ಒಂದು ರೀತಿಯ ಸ್ಥಾಯಿ ಭಾವವಾದರೆ, ನಮ್ಮೆಲ್ಲರ ಪರಸ್ಪರ ಸಂಬಂಧಗಳು ನಿಜವಾಗಲೂ ನಿರ್ಮಮವಾಗಿದ್ದರೆ,

ನಾವೆಲ್ಲರೂ ಪರಸ್ಪರ ಪ್ರೀತಿಯಿಂದ ಕೊಟ್ಟು ಪಡೆದು ಬದುಕು ಸಾಗಿಸಿದ್ದರೆ, ಈ ಸ್ಥಿತಿಯಿಂದ ಈ ಭುವಿಯಲ್ಲೇ ನಮಗೆ ಬಿಡುಗಡೆಯಿದೆಯೆಂಬ ಆಶಾಭಾವನೆಯನ್ನು ಕೂಡ ‘ತಬ್ಬಲಿಗಳು’ ಕಥೆ ತನ್ನ ವಿವರಗಳಲ್ಲಿ, ಸದಾ ತಾರಕದಲ್ಲಿರುವ ಗಾಢ ಆಕ್ರಂದನದಲ್ಲಿ ನಮಗೆ ದಾಟಿಸುತ್ತಾ ಕಾಫ್ಕಾನಿಗಿಂತ ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಕಥೆಯ ವಸ್ತು–ಸಂದರ್ಭ ಸಾಧಾರಣವಾದದ್ದು, ಸಾಧಾರಣ ಕುಟುಂಬದ್ದು.

ಹಾಗಾಗಿಯೇ ನಮ್ಮ ನಿಮ್ಮೆಲ್ಲರದು. ಎಂದೂ ಪರಸ್ಪರ ಪ್ರೀತಿಸಲಾಗದ, ಸಂಬಂಧ ಕಟ್ಟಿಕೊಳ್ಳಲಾಗದ ದುರದೃಷ್ಟದ ಕರಿ ನೆರಳಲ್ಲೇ ಬದುಕುವ ಒಂದು ಕುಟುಂಬ ಧಾರ್ಮಿಕ ಯಾತ್ರೆಗೆಂದು ಪುಣ್ಯಕ್ಷೇತ್ರಕ್ಕೆ ಬರುತ್ತದೆ. ಪುಣ್ಯಕ್ಷೇತ್ರದಲ್ಲಿ ಪಾವಿತ್ರ್ಯವಿದೆ, ಗರ್ಭಗುಡಿಯಿದೆ, ನದಿಯಿದೆ, ಬೃಂದಾವನವಿದೆ, ಗುರುಗಳು, ಮಂಗಳಾರತಿ, ಜಾಗಟೆ, ಅಗ್ನಿ, ತೀರ್ಥ, ಪೂಜೆ – ಪುನಸ್ಕಾರ – ಪ್ರಸಾದ – ಸಂತರ್ಪಣೆ ಎಲ್ಲವೂ ಇದೆ. ಇದೆಲ್ಲವೂ ಮನುಷ್ಯನಿಗೆ ಏನು ಕೊಡುತ್ತದೆ, ಏನು ಕೊಡುವುದಿಲ್ಲ ಎನ್ನುವುದಕ್ಕಿಂತ ಮುಖ್ಯವಾಗಿ, ಇದೆಲ್ಲ ಪರಿಕರಗಳಿಗೂ ಮನುಷ್ಯನಿಗೂ ಇರುವ ನಿಜವಾದ ಸಂಬಂಧದ ಸ್ವರೂಪ ಎಂತಹುದು ಎಂಬ ಆಧ್ಯಾತ್ಮಿಕ ಪ್ರಶ್ನೆಯನ್ನು ಲೌಕಿಕ – ಕೌಟುಂಬಿಕ ಪರಿಭಾಷೆಯಲ್ಲಿ ಕಥೆ ನಮ್ಮ ಮುಂದಿಡುತ್ತದೆ.

ಸಾಂಸ್ಥಿಕ ಧರ್ಮವನ್ನು, ವಿಧ್ಯುಕ್ತ ಆಚರಣೆಗಳನ್ನು, ಪುಣ್ಯಕ್ಷೇತ್ರದ ಪಾವಿತ್ರ್ಯವನ್ನು ಕಟುವಾಗಿ, ವಸ್ತುನಿಷ್ಠವಾಗಿ ಶೋಧಿಸುತ್ತಲೇ ನಿಜವಾದ ಆಧ್ಯಾತ್ಮಿಕ–ಧಾರ್ಮಿಕ ಪ್ರಶ್ನೆಯನ್ನು ನಾವು ಎದುರಿಸುವಂತೆ ಮಾಡುವುದು ಈ ಕಥೆಯ ಹೆಗ್ಗಳಿಕೆಯಾಗಿದೆ. ಪ್ರಸ್ತುತ ನಮ್ಮ ನಡುವೆ ನಡೆಯುತ್ತಿರುವ ತೆಳುವಾದ ಆಧ್ಯಾತ್ಮಿಕ–ಧಾರ್ಮಿಕ ಚರ್ಚೆ ಇಂತಹ ಭಿತ್ತಿಯೊಂದನ್ನು ನಮಗಾಗಿ ನಿರ್ಮಿಸಲಾರದು ಎಂಬ ಅಂಶ ಕೂಡ ಈ ಕಥೆಯ ಹೊಸ ಓದಿಗೆ ನಮ್ಮನ್ನು ಪ್ರೇರೇಪಿಸುತ್ತದೆ. ಈ ಕಥೆಯ ಪಾತ್ರಗಳಿಗೆ ಹೆಸರಿಲ್ಲ. ಕಥೆ ನಡೆಯುವ ಊರಿನ ಪ್ರಸ್ತಾಪವಿದ್ದರೂ ಕಥೆ ಯಾವ ಊರಿನಲ್ಲಿ, (ಸಿಂಗರ್‌ನ ಕಥೆಗಳಲ್ಲಾಗುವಂತೆ) ಯಾವ ಕಾಲದಲ್ಲಿ ಬೇಕಾದರೂ ನಡೆಯಬಹುದಾಗಿದೆ. ಒಂದು ಕುಟುಂಬದ ಕಥೆ – ಬದುಕು ಸಫಲವಾಗಿ ಅರಳಬೇಕಾದದ್ದು ಮನೆಯಲ್ಲಿ.

ಹಾಗೆ ಮನೆಯೊಳಗಡೆ ಅರಳದೆ ಹೋದ ಕಥೆಯನ್ನು, ಸಂಬಂಧಗಳನ್ನು ಯಾವ ಪುಣ್ಯಕ್ಷೇತ್ರದಲ್ಲೂ, ಯಾರ ಸನ್ನಿಧಾನದಲ್ಲೂ ಮತ್ತೆ ಕಟ್ಟಿಕೊಳ್ಳಲಾಗುವುದಿಲ್ಲ. ಬದಲಿಗೆ ಕಥೆಯಲ್ಲಿ ನಡೆಯುವ ಘಟನೆಗಳು, ಪುಣ್ಯಕ್ಷೇತ್ರದ ವಿವರಗಳು, ಆಚರಣೆಗಳು ಕುಟುಂಬದ ಎಲ್ಲ ಸದಸ್ಯರನ್ನು ಮತ್ತಷ್ಟು ಮತ್ತಷ್ಟು ಪ್ರಪಾತದ ಆಳಕ್ಕೆ ತಳ್ಳುತ್ತಾ ಬದುಕಿನ ಮತ್ತು ಅವರವರ ನಿಜಸ್ವರೂಪವನ್ನು ದರ್ಶನ ಮಾಡಿಸುತ್ತದೆ. ಸತ್ಯ ದರ್ಶನವಾದಾಗ ನಾವೆಲ್ಲ ಕಂಗಾಲಾಗುವಂತೆ ಈ ಕಥೆಯ ಪಾತ್ರಗಳು ಕೂಡ ಕಥೆಯ ಕೊನೆಯಲ್ಲಿ ಕಂಗಾಲಾಗುತ್ತವೆ. 

ನಮ್ಮಂತರಂಗದಲ್ಲಿ ಗಾಢವಾದ ನಂಬಿಕೆಗಳಿಲ್ಲದಿದ್ದರೂ, ನಮ್ಮನ್ನು ನಾವೇ ನಂಬಿಸಲು ನಾವೆಲ್ಲರೂ ತೊಡಗಿಕೊಳ್ಳುವ ನಾನಾ ರೀತಿಯ ಆಚರಣೆಗಳ ಆಧುನಿಕ ಕಾಲದ ವಿಸಂಗತಿಯೊಂದಿಗೇ ಕಥೆ ಪ್ರಾರಂಭವಾಗುತ್ತದೆ. ಪುಣ್ಯಕ್ಷೇತ್ರವನ್ನು ತಲುಪುವ ಬಸ್ಸಿನ ಪಯಣವೇ ದುಸ್ತರವಾಗಿದೆ, ಕೆಟ್ಟ ಕನಸಿನಂತಿದೆ. ಪುಣ್ಯಕ್ಷೇತ್ರದ ಸಮುಚ್ಛಯದ ಭೌತಿಕ ವಿವರಗಳು ಮತ್ತು ಕ್ಷೇತ್ರದ ಪ್ರಾಕೃತಿಕ ವಿವರಗಳು, ಕುಟುಂಬದ ಬೇರೆ ಬೇರೆ ಸದಸ್ಯರಲ್ಲಿ ಬಡಿದೆಬ್ಬಿಸುವ ವೈವಿಧ್ಯಮಯ ಭಾವನೆಗಳ – ವಿಚಾರಗಳ ತಾಕಲಾಟ ಅವರೆಲ್ಲರ ಅಂತರಂಗದ ಕ್ಷೋಭೆಯನ್ನು ಮಾತ್ರವಲ್ಲ, ಪ್ರೀತಿ – ಒತ್ತಾಸೆಯ ಕೊರತೆಯಲ್ಲಿ ಬದುಕುತ್ತಿರುವ ನಮ್ಮ ಕಾಲದ ಸಾಮಾಜಿಕ ಕ್ಷೋಭೆಯನ್ನು, ಕ್ಲೈಬ್ಯವನ್ನೂ ಕೂಡ ಸೂಚಿಸುತ್ತದೆ.

ಕ್ಷೇತ್ರದ ಪಾವಿತ್ರ್ಯ ಮಹಿಮೆಯನ್ನು ಸೂಚಿಸುವಂತಹ ಮಠದ ಸಂತರ್ಪಣೆಯ ಸಂಭ್ರಮದ ಮತ್ತು ಪವಾಡದ ವಿವರಗಳು ಕ್ಷೇತ್ರದಲ್ಲಿ ಇನ್ನೂ ಮಹತ್ವವಾದದ್ದರ ಗೈರು ಹಾಜರಿಯನ್ನು ಧ್ವನಿಸುತ್ತದೆ. ಪವಿತ್ರ ಮಂಗಳಾರತಿಯ ಬೆಳಕಿನ ಝಳದಿಂದ ತಮ್ಮನ ಮೈ ಬೆವರುತ್ತದೆ. ಮಂಗಳಾರತಿಯ ಝಳವು ಹೆಂಡತಿಯ ಚಿತೆಯ ಹತ್ತಿರ ನಿಂತಾಗ ಗಾಳಿಯ ಸೆಳಕಿನಲ್ಲಿ ತೂರಿ ಮೈಮೇಲೆ ಬಂದ ಝಳದ ಹಾಗೇ ಇದೆ.

ಮಂಗಳಾರತಿಯ ಬತ್ತಿಗಳೆಲ್ಲ ಸುಟ್ಟು ಕರಕಲಾದ ವಾಸನೆ ಬರುತ್ತದೆ. ಜಾಗಟೆಗಳ ಸಪ್ಪಳವೂ ಕರ್ಕಶವಾಗಿದೆ. ತಂಗಿಗೋ ಇಡೀ ರಥಕ್ಕೆ ಬೆಂಕಿ ಬಿದ್ದಂತೆ ಕಾಣುತ್ತದೆ. ಮತ್ತು ಆಕೆಗೂ ಕೂಡ ತನಗೇ ಬೆಂಕಿ ಅಖಂಡವಾಗಿ ಹತ್ತಿ ಉರಿಯುತ್ತಿರುವಂತೆ ವೇದನೆಯಾಗುತ್ತದೆ. ಕಥೆಯುದ್ದಕ್ಕೂ ಹೀಗೆ ಏನೇನೋ ಸೂಚಿಸಬೇಕಾದ ವಿವರಗಳು, ಪದಾರ್ಥಗಳು, ಮತ್ತೇನನ್ನೋ ಸೂಚಿಸುವ ವಿಷಾದವಿದೆ, ಅಸಾಂಗತ್ಯವಿದೆ. ಇಲ್ಲಿ ಎಲ್ಲರೂ ತಬ್ಬಲಿಗಳು. ಆದರೆ ಇದೆಲ್ಲ ಏಕೆ ಆಗುತ್ತಿದೆ? ಇದಕ್ಕೆ ಕಾರಣಗಳೇನು?

ಮನೆಯಲ್ಲಿ ಒಟ್ಟಿಗೆ ಬಾಳಲಾಗದ ಕುಟುಂಬದ ಸದಸ್ಯರು (ತಂದೆ-ತಾಯಿ-ತಂಗಿ ಹಾಗೂ ತಮ್ಮ ಇವರಲ್ಲಿ ಯಾರಿಗೂ ಪರಸ್ಪರ ಸಂಬಂಧವೇ ಇಲ್ಲ) ಪುಣ್ಯಕ್ಷೇತ್ರದಲ್ಲಿ ನೆಮ್ಮದಿಯನ್ನು ಹುಡುಕಿಕೊಂಡು ಹೊರಡುವುದರಲ್ಲೇ ಒಂದು ವಿಸಂಗತಿಯಿದೆ. (‘ತಂದೆಗೆ ತಾವೆಲ್ಲರೂ ಹೊರಟ ರೀತಿ ಹೊಸದೆನಿಸಿತು. ತುಸು ಸಂಕೋಚವೂ ಹುಟ್ಟಿತು. ಇಷ್ಟು ಸನಿಹದಿಂದ ಒಬ್ಬರೊಬ್ಬರಿಗೆ ಮೈ ಹಚ್ಚಿಕೊಂಡು ಇಡೀ ಸಂಸಾರದೊಂದಿಗೆ ತಾವು ಹಾಗೆ ಹೊರಗೆ ಹೋದದ್ದು ಬಹಳ ಅಪರೂಪ. ಒಂದು ಕ್ಷಣ ತಂದೆಗೆ ಅಭಿಮಾನವೆನಿಸಿತು. ತೃಪ್ತಿಯಾಯಿತು.

ನಾವೆಲ್ಲರೂ ಬದುಕಿನಲ್ಲಿ ಹೀಗೆ ಕೂಡಿದ್ದರೆ ನಮ್ಮೆಲ್ಲರ ಬಾಳು ಹೇಗಾಗಬಹುದಿತ್ತು ಎಂಬುದರ ಕನಸು ಕಾಣುತ್ತಾ ಅವರು ಮುಂದೆ ನಡೆದರು’). ಪುಣ್ಯಕ್ಷೇತ್ರವು ಅವರಿಗೆ ಮತ್ತಷ್ಟು ಪರಸ್ಪರ ಕಳೆದುಹೋಗಲು, ಇನ್ನಷ್ಟು ತಬ್ಬಲಿಯಾಗಲು ನೆರವಾಗುವಂತಿದೆ. ತಂದೆ – ತಮ್ಮ ಒಬ್ಬರಿಂದ ಒಬ್ಬರು ಬಿಡಿಸಿಕೊಳ್ಳುವುದೇ (ತಪ್ಪಿಸಿಕೊಳ್ಳುವುದೇ) ಭಕ್ತರ ಗುಂಪಿನಲ್ಲಿ. ಹೀಗೆ ತಪ್ಪಿಸಿಕೊಂಡು ಹೋದ ತಮ್ಮ ಮತ್ತೆಂದೂ ತನ್ನನ್ನು ಹುಡುಕಿಕೊಂಡು ಬರುವುದಿಲ್ಲ ಎಂಬುದು ತಂದೆಯ ಅಂತರಂಗಕ್ಕೆ ತಿಳಿಯುತ್ತದೆ. ತಮ್ಮನ ಭಕ್ತಿಯಲ್ಲೇ ನೈಜತೆಯಿಲ್ಲ.

ಭಕ್ತರ ಮೈ ಬೆವರಿನ ವಾಸನೆ ಅವನಿಗೆ ಹೇಸಿಗೆ ತರಿಸಿತ್ತು. ಭಕ್ತಿ, ಪರವಶತೆಯನ್ನು ಅನುಭವಿಸುವ ಬದಲಿಗೆ ಆತ ತನ್ನ ಪಾಡಿಗೆ ತಾನು ಇದನ್ನೆಲ್ಲ ಬಿಟ್ಟು ಹೊರಗೆ ಹೋಗಬೇಕೆಂಬ ಉತ್ಕಟೇಚ್ಛೆಯನ್ನು ಅನಭವಿಸುತ್ತಾನೆ. ಮಾನಸಿಕವಾಗಿ ತಾವೆಲ್ಲ ಸ್ವಸ್ಥ(?)ವಾಗಿದ್ದೇವೆಂದು ತಿಳಿದು ಒಂದು ರೀತಿಯ ವಿಸ್ಮೃತಿಯನ್ನು ಅನುಭವಿಸುತ್ತಿರುವ ತಂಗಿಯನ್ನು ಪುಣ್ಯಕ್ಷೇತ್ರಕ್ಕೆ ಕರೆದುಕೊಂಡು ಬಂದಿರುವ ತಮ್ಮನಿಗೇ ಹೀಗಾಗಬೇಕಾದರೆ, ತಂಗಿ ಪುಣ್ಯಕ್ಷೇತ್ರದಲ್ಲಿ ಮತ್ತೆ ಮತ್ತೆ ಕಳೆದುಹೋಗುವುದು ಮಾತ್ರವಲ್ಲ, ಮಾನಸಿಕವಾಗಿ ಕೂಡ ಇವರು ಯಾರೂ ಪ್ರವೇಶಿಸಲಾಗದಂತಹ ಜಗತ್ತಿನಲ್ಲಿ ತಾನೇ ತಾನಾಗಿ ವಿಲಾಪಿಸುತ್ತಾ ಕೊನೆಯಿಲ್ಲದ ದುರಂತವನ್ನು ಅನುಭವಿಸುತ್ತಾ, ಇತರರನ್ನು ಕೂಡ ಪ್ರಪಾತಕ್ಕೆ ಎಳೆಯುತ್ತಾಳೆ. 

ಮನುಷ್ಯರು ಏಕೆ ಪರಸ್ಪರ ಒಬ್ಬರನ್ನೊಬ್ಬರು ಹಿಂಸಿಸುತ್ತಾರೆ? ಈ ಪ್ರಶ್ನೆಗೆ ರಾಜಕೀಯ ಉತ್ತರವೂ ಇಲ್ಲ, ಧಾರ್ಮಿಕ ಉತ್ತರವೂ ಇಲ್ಲ. (‘ಯಾವ ಪ್ರಶ್ನೆಗೂ ಉತ್ತರವಿರಲಿಲ್ಲ. ಆದರೆ ಎಲ್ಲವೂ ನಡೆದು ಹೋಗಿತ್ತು’). ಕಥೆಗೆ ಕಾರಣವಾಗಿರುವ ಕುಟುಂಬಕ್ಕೆ ಸೊಸೆಯಾಗಿ ಬರುವ ಹೆಂಗಸು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ತಪ್ಪನ್ನಾಗಲೀ, ಪಾಪವನ್ನಾಗಲೀ ಮಾಡಿಲ್ಲ. ಆಕೆ ಬಯಸಿದ್ದು ಕೂಡ ಜೀವನದ ಸಣ್ಣ ಪುಟ್ಟ ಸಂತೋಷವನ್ನು, ಒಂದಿಷ್ಟು ಪ್ರೀತಿಯನ್ನು. ಆತ್ಮಹತ್ಯೆಯ ಮೂಲಕ ಅವಳು ತನ್ನನ್ನು ಮಾತ್ರ ಹಿಂಸೆಗೆ ಒಳಪಡಿಸಿಕೊಳ್ಳವುದಿಲ್ಲ.

ಹಿಂಸೆ ಮತ್ತು ಆತಂಕಕ್ಕೆ ಇಡೀ ಕುಟುಂಬವನ್ನು ನಿರಂತರವಾಗಿ ದೂಡಿಬಿಡುತ್ತಾಳೆ. (ಸಾವು ಹಾಸ್ಯಾಸ್ಪದವಾದ ಸರಕಾಗಿತ್ತು). ಈಕೆ ಮಾತ್ರವಲ್ಲ, ಈ ಕಥೆಯ ಇನ್ನಿಬ್ಬರು ಹೆಂಗಸರು (ತಾಯಿ–ತಂಗಿ) ಕೂಡ ತಮ್ಮ ತಮ್ಮ ವಿಕ್ಷಿಪ್ತತೆ–ವಿಸ್ಮೃತಿಗಳಿಂದ ತಮ್ಮನ್ನು ತಾವೇ ಹಿಂಸಿಸಿಕೊಳ್ಳುತ್ತಾ ಇತರರನ್ನು ಕೂಡ ಹಿಂಸಿಸುತ್ತಿದ್ದಾರೆ. ಈ ಕಥೆಯಲ್ಲಿ, ಇನ್ನೂ ನೇರವಾಗಿ ಹೇಳಬೇಕೆಂದರೆ ಈ ಜಗತ್ತಿನಲ್ಲಿ ಯಾರೂ ಅಪರಾಧಿಗಳಿರುವುದಿಲ್ಲ, ಬಲಿಪಶುಗಳೂ ಇರುವುದಿಲ್ಲ. ಕೇವಲ ತಬ್ಬಲಿಗಳಾಗಿರುತ್ತಾರೆ. ನಾವೆಲ್ಲ ಯಾರಮುಂದೆ ತಬ್ಬಲಿಗಳು ಎಂಬುದೇ ಪ್ರಶ್ನೆ.

ಮನುಷ್ಯ ಸ್ವಭಾವದ ಮುಂದೆಯೇ? ವಿಶ್ವನಿಯಾಮಕನ ಮುಂದೆ? ದೈವದ ಮುಂದೆ? ಅನಂತ ಕಾಲದ ಮುಂದೆ? ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಈ ಕಥೆ ಇಂತಹ ಪ್ರಶ್ನೆಗಳನ್ನು ಎಲ್ಲ ಪಾತ್ರಗಳ ಮನೋಲೋಕ ಮತ್ತು ಪುಣ್ಯಕ್ಷೇತ್ರದ ವಿವರಗಳು–ಆಚರಣೆಗಳ ಮೂಲಕ ಮತ್ತೆ ನಮಗೆ ಕಟ್ಟಿಕೊಡುತ್ತದೆಯೇ ಹೊರತು ಉತ್ತರಿಸಲು ಹೋಗುವುದಿಲ್ಲ. ತಂದೆಗೆ ಕುಟುಂಬದ ನಾಯಕನ ಸ್ಥಾನ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಡೀ ಕಥೆಯಲ್ಲಿ ಅವನು ವೀಕ್ಷಕನಂತೆ ಭಾಗವಹಿಸುತ್ತಾನೆ. ತಮ್ಮನನ್ನು ಗುಂಪಿನಲ್ಲಿ ಕಳೆದುಕೊಳ್ಳುವುದು ಒಂದು ರೀತಿಯಲ್ಲಿ ಪೂರ್ವ ನಿರ್ಧರಿತ. ಆತನ ಅಸಹಾಯಕತೆ ನೆನಪುಗಳಲ್ಲೂ ವ್ಯಕ್ತವಾಗುತ್ತದೆ. ವರ್ತಮಾನದಲ್ಲೂ ವ್ಯಕ್ತವಾಗುತ್ತದೆ.

ಕುಟುಂಬದ ಎಲ್ಲ ಸದಸ್ಯರ ಬಗ್ಗೆಯೂ ಆತನಿಗೆ ಅನುಕಂಪವಿದೆ. ಆದರೆ ಆ ಅನುಕಂಪ ಯಾರನ್ನೂ ದಡ ಮುಟ್ಟಿಸಲಾರದು, ಸ್ವತಃ ಆತನನ್ನು ಕೂಡ. ಆತನ ಕೊನೆ ಕುರಿತಂತೆ ಕಥೆ ನೀಡುವ ವಿವರಗಳನ್ನು ನೋಡಬಹುದು. ‘ತಂದೆಯು ಆವಾರದ ಗೋಡೆಯನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದರು. ಭವ್ಯವಾದ ಗೋಡೆ ಎತ್ತರವಾಗುತ್ತ ಚೂಪಾಗುತ್ತಾ ನಡೆದು ಆಕಾಶದಲ್ಲಿ ಇರಿದು ಚುಚ್ಚಿಟ್ಟಂತೆ ಕಾಣಿಸುತ್ತದೆ. ಗೋಡೆಗುಂಟ ಕೆಳಗಿಳಿಯುವ ಮಳೆಯ ನೀರಿನಲ್ಲಿ ಗೋಡೆಯ ಹುರಿಮಂಜು ಬೆರೆತು ಕೆಂಪಾಗಿ ರಕ್ತದಂತೆ ಹನಿಹನಿಯಾಗಿ ಒಸರುತ್ತಿದೆ. ಗೋಡೆಯೆಲ್ಲ ತಪತಪ ತೊಯ್ದು ಹಸಿಮಣ್ಣಿನ ವಾಸನೆ ಬರುತ್ತದೆ. ತಂದೆಯು ಪುನಃ ಪುನಃ ನಾಲಿಗೆಯಿಂದ ಗೋಡೆಯನ್ನು ನೆಕ್ಕತೊಡಗಿದರು.

ತಂದೆಗೆ ಆಯಾಸದಿಂದಲೋ ಬೇಸರದಿಂದಲೋ ಕಣ್ಣರೆಪ್ಪೆಗಳು ಮೆಲ್ಲನೆ ಮುಚ್ಚತೊಡಗಿದವು. ಸಾವಕಾಶವಾಗಿ ಅನಿಸಿ ನಿಂತ ಗೋಡೆಗುಂಟ ಜರೆದು ಅವರು ಕೆಳಗೆ ಕುಸಿದು ಬಿದ್ದರು’. ತಂಗಿಯಾದರೂ ಇರುವುದು ಯಾವ ಲೋಕದಲ್ಲಿ? ಏಕಕಾಲಕ್ಕೆ ಅವಳು ಹಲವು ಮನೋಲೋಕದೊಳಗಿದ್ದಾಳೆ. ಆದರೆ ಅವಳ ದುರದೃಷ್ಟವೆಂದರೆ ಎಲ್ಲ ಲೋಕಗಳಲ್ಲೂ ಅವಳು ತಬ್ಬಲಿಯೇ. ಕುಟುಂಬದಲ್ಲಿ, ನದೀ ತೀರದಲ್ಲಿ, ರಥೋತ್ಸವದಲ್ಲಿ, ಮಠದ ಪ್ರಾಂಗಣದಲ್ಲಿ, ತನ್ನ ಮನಸ್ಸಿನ ಎಲ್ಲ ಸ್ತರಗಳಲ್ಲೂ ಕೂಡ. ‘ಒಂದೇ ವೇಳೆಗೆ ಎರಡು ಜಗತ್ತಿನಲ್ಲಿದ್ದು ವ್ಯವಹರಿಸುತ್ತಿದ್ದಂತೆ ಅವಳಿಗನಿಸುತ್ತದೆ.

ಈ ಜಗತ್ತಿನಲ್ಲಿದ್ದೂ ಇನ್ನೊಂದು ಜಗತ್ತಿಗೆ ತಾನು ತೇಲಿ ಹೋಗಿ ತುಟ್ಟತುದಿಯಲ್ಲಿ ಅಂತರಾಳದಲ್ಲಿ ಲಟಪಟ ವದ್ದಾಡುತ್ತಿದ್ದಂತೆ ಭಯಾನಕ ಕಲ್ಪನೆ ಬರುತ್ತಿತ್ತು. ಹಾಗೆ ಒಮ್ಮೆಲೇ ಎಂದಿನಿಂದ ಆಯಿತು, ಯಾಕೆ ಆಯಿತು ಎನ್ನುವುದು ಅವಳಿಗೆ ಗೊತ್ತಿಲ್ಲ’. ಯಾರ ಕೈಗೂ ಸಿಗದ ಅವಳ ಅಂತ್ಯ – ಈ ಲೋಕದ ನಮ್ಮೆಲ್ಲರ ಬಗ್ಗೆ ಒಂದು ಕಟು ವಿಮರ್ಶೆ. ತಂಗಿಯದು ವಿಕ್ಷಿಪ್ತ ಮನೋಸ್ಥಿತಿ, ವಿಸ್ಮೃತಿಗೊಳಗಾದವಳು ಎನ್ನುವುದು ತಪ್ಪು ಓದಾಗುತ್ತದೆ. ಆಕೆ ನಮಗೆ ಹಾಗೆ ಕಾಣುವಂತೆ, ಆಕೆ ಇಂತಹ ಸ್ಥಿತಿಯನ್ನು ತಲುಪುವಂತೆ ನಾವೆಲ್ಲರೂ ಇರುವ ಲೋಕ ನಮ್ಮ ದೃಷ್ಟಿಕೋನವನ್ನು ರೂಪಿಸಿದೆಯೆಂಬುದು ಗೊತ್ತಾದರೆ ಆಕೆಯ ತಬ್ಬಲಿತನವೂ ಓದುಗನ ತಬ್ಬಲಿತನವೂ ಒಟ್ಟಿಗೇ ಅರ್ಥವಾಗುತ್ತದೆ.

 ತಾಯಿ ಶಾಪಗ್ರಸ್ತೆಯೂ ಹೌದು, ಶಾಪ ಕೊಡುವವಳೂ ಹೌದು. ಮಗಳ ಜೊತೆ ಅವಳಿಗಿರುವ ಸಂಬಂಧ, ಕಾಳಜಿ ಕರುಣಾಜನಕವಾದದ್ದು. ಆದರೆ ಪ್ರೀತಿಯಿಲ್ಲದ್ದು. ಯಾರನ್ನೂ ಪ್ರೀತಿಸಲಾಗದ ಅವಳು ಮಗಳನ್ನು ಪೊರೆಯುವ ರೀತಿ, ಅದಕ್ಕಾಗಿ ಒದ್ದಾಡುವ ರೀತಿ ಮನ ಕರಗಿಸುತ್ತದೆ. ಆದರೆ ಆಕೆಯೂ ಸೇರಿದಂತೆ ಇಡೀ ಕುಟುಂಬವೇ ಈ ಸ್ಥಿತಿ ತಲುಪಲು ಅವಳ ವಿಕ್ಷಿಪ್ತ ಸ್ವಭಾವವೇ ಕಾರಣ. ತಂದೆ ಸಾಯುತ್ತಾನೆ. ತಮ್ಮ ಕಳೆದುಹೋಗುತ್ತಾನೆ. ತಂಗಿ ನದೀ ಪಾಲಾಗುತ್ತಾಳೆ. ಆದರೆ ಇವರೆಲ್ಲರಿಗಿಂತ ಮುಂಚೆ ತಾಯಿಗೆ ಸಾವೆಂಬುದು ದಿನಬಳಕೆಯ ಮಾತಾಗಿಬಿಟ್ಟಿದೆ. ಪ್ರತಿದಿನ ಸಿಟ್ಟು ಬಂದಾಗಲೂ ಆಕೆ ಸಾಯಲು ಹೊರಡುತ್ತಾಳೆ.
***
ಕಥೆಯನ್ನು ಪರಿಣಾಮಕಾರಿಯನ್ನಾಗಿ ಮಾಡಲು ಇಂತಹದೊಂದು ವಿಪರೀತ ಸ್ವಭಾವದ ವಿಕ್ಷಿಪ್ತ ಕುಟುಂಬವನ್ನು ಕಟ್ಟಲಾಗಿದೆಯೆ? ಪುಣ್ಯಕ್ಷೇತ್ರದ ವಿವರಗಳು, ಆಚರಣೆಯ ಅರ್ಥಹೀನತೆ, ಯಾಂತ್ರಿಕತೆ ಇವುಗಳ ಹಿನ್ನೆಲೆಯಲ್ಲಿ ನೋಡಿದರೆ ಕುಟುಂಬದ ದುರದೃಷ್ಟದ ಸಾಕ್ಷಾತ್ಕಾರ ಸಹಜವೆನಿಸುತ್ತದೆ. ಹಾಗೆ ನೋಡಿದರೆ ಇದೇನು ಕರ್ಮಠ ಕುಟುಂಬವಲ್ಲ. ಹಾಗೆಂದು ತಿಳಿದಿದ್ದೇ – ಅದೂ ಯಾಂತ್ರಿಕವಾಗಿ – ಕುಟುಂಬದ ದುರಂತಕ್ಕೆ ಒಂದು ಕಾರಣವಿರಬೇಕು. ಪುಣ್ಯಕ್ಷೇತ್ರದಲ್ಲಿ ಇಡೀ ಕಥೆ ನಡೆಯುತ್ತಿದೆ ಎಂಬುದನ್ನು ಒಂದು ಕ್ಷಣ ಬದಿಗಿಟ್ಟು ನೋಡಿದರೂ ಕುಟುಂಬದ ಸ್ವರೂಪದಲ್ಲೇ ಇರುವ ಹಿಂಸಾರತಿಯ ಸ್ವರೂಪ ಕಣ್ಣಿಗೆ ಕುಕ್ಕುತ್ತದೆ.

ಕೌಟುಂಬಿಕ ಹಿಂಸೆ ಮತ್ತು ಕ್ರೌರ್ಯವನ್ನು ಈ ಧಾಟಿಯಲ್ಲಿ ಹಿಡಿಯುವ ಉದಾಹರಣೆಗಳಾಗಿ ಮಾಸ್ತಿಯವರ ‘ಮೇಲೂರಿನ ಲಕ್ಷಮ್ಮ’, ಕಾರಂತರ ‘ಧರ್ಮರಾಯನ ಸಂಸಾರ’ದಂತಹ ಕೃತಿಗಳನ್ನು ಗಮನಿಸಬಹುದು. ಹಿಂಸೆ, ಯುದ್ಧ, ಶೋಷಣೆಗಳನ್ನು ಒಂದು ರೀತಿಯ ಚಾರಿತ್ರಿಕ–ಕೌಟುಂಬಿಕ ಸಂದರ್ಭದಲ್ಲಿ ನಡೆಯುವಂತಹದು ಎಂದು ನೋಡಬೇಕೋ? ಇಲ್ಲ, ಯಾವ ಕಾಲದಲ್ಲೂ ಬದಲಾಗದ ಸತ್ಯವೆಂದು ನೋಡಬೇಕೋ! ಎರಡನೆಯ ದೃಷ್ಟಿಕೋನವನ್ನು ಒಪ್ಪಿಬಿಟ್ಟರೆ ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ಬಯಸುವಂತಾಗುವುದಿಲ್ಲ.

ಆದರೆ ಹಿಂಸೆ, ಶೋಷಣೆಯ ಒಂದಂಶ ಮಾತ್ರ ಬೇರೆ ಬೇರೆ ರೂಪದಲ್ಲಿ ಎಲ್ಲ ಕಾಲದಲ್ಲೂ ಉಳಿದುಬಿಡುತ್ತದೇನೋ. ಈ ಕಥೆಯ ತಂದೆ ಹನ್ನೆರಡು ವರ್ಷಗಳ ಹಿಂದೆ ಕೂಡ ಪುಣ್ಯಕ್ಷೇತ್ರಕ್ಕೆ ಬಂದಿದ್ದವನು. ಆಗೊಬ್ಬ ಹೆಂಗಸನ್ನು ನೋಡಿದ್ದ. ಡೂಗಾಗಿ ಬಿಲ್ಲಿನಂತೆ ಬಾಗಿ ನಡೆಯುತ್ತಿದ್ದವಳು. ಈಗಲೂ ಹಾಗೇ ಇದ್ದಾಳೆ. ಅವಳ ಕೈಯಲ್ಲಿ ತಂಬಿಗೆಯಿದೆ. ನೆಗ್ಗಿ ಸವಕಳಿಯಾದದ್ದು. ಬಹುಶಃ ಅದೇ ತಂಬಿಗೆಯಿರಬೇಕು. ಹನ್ನೆರಡು ವರ್ಷಗಳ ಹಿಂದಿನದು. ಕಾಲದ ಸ್ವರೂಪದಲ್ಲೇ ಇರುವ ಕ್ರೌರ್ಯ ಮತ್ತು ಅಸಹಾಯಕತೆಯ ಒಂದು ಆಯಾಮ ಈ ಕಥೆಯಲ್ಲಿನ ಸ್ಥಾಯೀಭಾವವಾಗಿದೆ.

ವೈಯುಕ್ತಿಕ – ಕೌಟುಂಬಿಕ ಸ್ತರದಲ್ಲೇ ನಾವೆಲ್ಲರೂ ನಮ್ಮ ನಮ್ಮ ಮಿತಿಯೊಳಗೇ ನೈತಿಕತೆ, ಪ್ರೀತಿಯ ಸೆಲೆಗಳನ್ನು ರೂಢಿಸಿಕೊಳ್ಳಬಹುದೆ? ಯಾವುದೇ ರೀತಿಯ ಸಾಂಸ್ಥಿಕ ಧರ್ಮ, ಸಾಂಸ್ಕೃತಿಕ–ಸಾಂಪ್ರದಾಯಿಕ ಆಚರಣೆಗಳ ನೆರವಿಲ್ಲದೆ? ಈ ಕಥೆಯ ಕುಟುಂಬವನ್ನು ನೋಡಿದರೆ ಸಾಂಸ್ಥಿಕ ಧರ್ಮ–ಆಚರಣೆಗಳಿಂದಾಚೆಗಿನ ಒಂದು ಪ್ರೀತಿಯ–ನೈತಿಕತೆಯ ಸೆಲೆ ಮಾತ್ರ ಈ ಕಥೆಗೂ ಕುಟುಂಬಕ್ಕೂ ಒಂದು ಬಿಡುಗಡೆಯ ಧ್ವನಿ ಮತ್ತು ಸಾಧ್ಯತೆಯನ್ನು ಕೊಡುತ್ತಿತ್ತೇನೋ ಎಂಬ ಭಾವನೆ ಬರುತ್ತದೆ. ಕಥೆಯ ಭಾಷೆ, ಶಿಲ್ಪದ ಬಗ್ಗೆ ಈಗಾಗಲೇ ಹೇಳಿರುವ ವಿಮರ್ಶೆಯ ಮಾತುಗಳಿಗಿಂತ ಹೊಸ ಮಾತುಗಳನ್ನು ಹೇಳುವುದು ಕಷ್ಟ. ಒಂದು ಕಥೆ, ಒಂದು ಸಂದರ್ಭ ಮಾನವೀಯವಾಗಿ ನಮಗೆ ಕಾಣಬೇಕಾದರೆ ಎಷ್ಟು ಕಠೋರ ನಿಷ್ಠುರತೆಯಿಂದ ಬರೆಯಬಹುದೆನ್ನುವುದಕ್ಕೆ ಪಠ್ಯವಾಗಿ ಈ ಕಥೆಯನ್ನು ಮತ್ತೆ ಮತ್ತೆ ಓದಬಹುದು. 

ಕಥೆಯ ಎಷ್ಟೋ ಭಾಗಗಳಲ್ಲಿ ನಮ್ಮ ಕೊರಳ ಸೆರೆ ಉಬ್ಬುವಂತಹ ವಿವರಗಳು ಇದ್ದರೂ ನಾವು ಎಲ್ಲೂ ಭಾವುಕರಾಗುವುದಿಲ್ಲ. ಇನ್ನೊಂದು ಸಂಗತಿ. ಧರ್ಮ ಮತ್ತು ಸಾಮಾಜಿಕತೆಯನ್ನು ಕುರಿತು ಬರೆದ ಕಥೆ, ಕಾದಂಬರಿಗಳನ್ನು– ‘ಸಂಸ್ಕಾರ’, ‘ವಂಶವೃಕ್ಷ’ವೂ ಸೇರಿದಂತೆ–  ಓದುವಾಗ ನಮ್ಮ ಓದು, ಗ್ರಹಿಕೆಯ ವಿಧಾನ ಎರಡೂ ಹೆಚ್ಚು ಹೆಚ್ಚು ಸಾಮಾಜಿಕವಾಗಿರುತ್ತದೆ. ಇಲ್ಲ ಸಮಾಜಶಾಸ್ತ್ರೀಯವಾಗಿಬಿಡುತ್ತದೆ. ‘ತಬ್ಬಲಿಗಳು’ ಕಥೆಯ ಓದು ಮತ್ತು ಮರು ಓದು ನಮ್ಮನ್ನು ಈವತ್ತು ಜನಪ್ರಿಯವಾಗಿರುವ ಹಾಗೂ Politically Correct ಆಗಿರುವ ಸಮಾಜಶಾಸ್ತ್ರೀಯ ಮತ್ತು ವಿಶ್ಲೇಷಣಾತ್ಮಕ ಸ್ತರಗಳಿಗಿಂತಲೂ ಮುಂದಕ್ಕೆ ಮತ್ತು ಎತ್ತರಕ್ಕೆ ಕರೆದೊಯ್ಯುತ್ತದೆ.

(ಆವರಣದಲ್ಲಿರುವ ವಾಕ್ಯಗಳನ್ನು ಕಥೆಯಿಂದ ಉಲ್ಲೇಖಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT